Author: ಮನೋರಮಾ. ಬಿ.ಎನ್
ಕಿವುಡಿ ನರ್ತಕಿಯು ಕುಣಿಯೆ, ಬಾರಿಸುವ
ಕುರುಡು ಹಾಡುಗಾರ
ಅಂಗ-ಭಂಗಿ-ಲಾವಣ್ಯ ಬಣ್ಣಿಸುವ
ಮೂಕ ಚಿತ್ರಗಾರ
ಸಂತೆ ಮಂದಿ ಹಿಮ್ಮೇಳದಲ್ಲಿ ಗೊಂ-
ದಳದ ಕುಣಿತ ನಡೆಯೆ
ಬೀಸು ಗಾಳಿಯಲಿ ಬನವೆ ಒಲೆದ ಒಲು
ಅಂದ ಚೆಂದ ಪಡೆಯೆ
-ದ.ರಾ.ಬೇಂದ್ರೆ (ಅರಳು-ಮರುಳು ಕವನ ಸಂಕಲನ)
ನರ್ತನದ ಹರಹು ತುಂಬಾ ವಿಶಾಲ. ಅದು ಶಾಸ್ತ್ರೀಯ, ಜನಪದ, ಫ್ಯೂಷನ್..ಹೀಗೆ ಜನಜೀವನವನ್ನು ಎಲ್ಲಾ ಬಗೆಯಲ್ಲೂ ಆವರಿಸಿದೆ, ಹಾಸುಹೊಕ್ಕಾಗಿ ಬೆಳೆದಿದೆ, ಜೀವನೋಪಾಯದ, ಜೀವೋತ್ಸಾಹದ, ಜೀವನ ವೈವಿಧ್ಯದ ಅಂಗವಾಗಿದೆ. ಹಾಗಾಗಿ ಈ ಸಂಚಿಕೆಯ ಲಲಿತ ಲಹರಿಯಲ್ಲಿ ಸುಮಿತ್ರಾನಂದನ ಪಂತ ಅವರ ’ಚಿದಂಬರಾ ಸಂಚಯನ’ ಎಂಬ ಕವನ ಸಂಕಲನದಿಂದ ಆರಿಸಲಾದ ’ಅಗಸರ ನೃತ್ಯ’ ವೆಂಬ ಕವನ…
ಅಕ್ಕೊ ಝಣ ಝಣ ಝಣ
ಝಣ ಝಣನ ಝಣ ಝಣ
ಝಣನೆ ಕುಣಿದು ಗೆಲ್ಲುವಳು ಗೊಲ್ಲತಿ ಮನವ ಚಣ ಚಣ
ಗಲುಕು ಗೆಜ್ಜೆನಾದ ಅವಳ ಕಾಲಲಿ
ಡೊಂಬನ ಟೊಂಕದಲಿ ಘಂಟೆಗಳ ಉಲಿ
ಬುಗುರಿಯಂತೆ ತಿರುಗುವಳು ಚಳಕದಲಿ
ನೂರಾರು ನುಲಿತ ಡೊಂಬನ ಟೊಂಕದಲಿ
ಅಕ್ಕೊ ಝಣ ಝಣ ಝಣ
ಝಣ ಝಣನ ಝಣ ಝಣ
ಝಣನೆ ಕುಣಿದು ಗೆಲ್ಲುವಳು ಗೊಲ್ಲತಿ ಮನವ ಚಣ ಚಣ
ಉಲಿಯುತಿದೆ ಡೋಲು ದಾಥಿನ ದಾಥಿನ ದಾಥಿನ
ಹಲುಬಿ ಸಿಡುಕುತಿದೆ ಡಮ ಡಮ ಡಮ
ತಾಳ ನುಡಿಯುತಿದೆ ಟಿಂಮಾ ಟಿಂಮಾ
ಸೊಕ್ಕೇರಿದಗಸ ಇದುವೆ ಹಬ್ಬ ಕಾಮನ !
ಅಕ್ಕೊ ಝಣ ಝಣ ಝಣ
ಝಣ ಝಣನ ಝಣ ಝಣ
ಝಣನೆ ಕುಣಿದು ಗೆಲ್ಲುವಳು ಗೊಲ್ಲತಿ ಮನವ ಚಣ ಚಣ !
ಎದೆಯ ಅತೃಪ್ತ ಬಯಕೆ ಕೆರಳಿ
ಈ ಡೋಲು ತಾಳದ ದನಿಯಲಿ ಹೊರಳಿ
ಕುಣಿವುತಿದೆ ಕೆದರಿ ರೆಕ್ಕೆಯ ಮರಳಿ ಮರಳಿ
ಪ್ರಿಯ ಜನಗಣಕೆ ಉತ್ಸವವಿದರಲಿ
ಅಕ್ಕೊ ಝಣ ಝಣ ಝಣ
ಝಣ ಝಣನ ಝಣ ಝಣ
ಝಣನೆ ಕುಣಿದು ಗೆಲ್ಲುವಳು ಗೊಲ್ಲತಿ ಮನವ ಚಣ ಚಣ