Author: ಗೀತಾ ಕೊಂಕೋಡಿ, ಸಾಹಿತಿ, ಮಂಗಳೂರು
ಇಂದು ಜನಮಾನಸದಲ್ಲಿ ಹುಚ್ಚೆಬ್ಬಿಸಿ; ತನ್ನ ಕಬಂಧ ಬಾಹುಗಳೊಳಗೆ ಸೆಳೆದುಕೊಳ್ಳುತ್ತಿರುವ ಥಳುಕು ಬಳುಕಿನ; ಕuನ ಕೋರೈಸುವ, ಅದ್ಧೂರಿ ಸೆಟ್ಟಿಂಗ್‌ಗಳ ರಿಯಾಲಿಟಿ ಶೋಗಳ ಭರಾಟೆಯಲ್ಲಿ; ಸಂಗೀತವೆಂದರೆ ಮೈಕೈ ಕುಲುಕಾಡಿಸುತ್ತಾ ಕಿರುಚುವ ಫಿಲ್ಮೀ ಗೀತೆಗಳು ಎಂಬ ಸಾಮ್ರಾಜ್ಯದಲ್ಲಿ, ಕನ್ನಡದ ಕವಿಗಳ ಭಾವಪೂರ್ಣ ಭಾವಗೀತೆಗಳು ಅದೆಲ್ಲಿಯೋ ಕ್ಷೀಣವಾಗುತ್ತಿದೆಯೇನೋ.., ಎನಿಸಿ ಗಾಬರಿಯಾಗುತ್ತಿದೆ, ಆತಂಕ ಕಾಡುತ್ತದೆ.
ಇಂತಹ ಪ್ರವಾಹದ ವಿರುದ್ಧ ಈಜುವಿಕೆಯೆಂಬಂತೆ ದಕ್ಷಿಣ ಕನ್ನಡದ ಪುತ್ತೂರಿನ ಸಾಂಸ್ಕೃತಿಕ ಕಲಾಕೇಂದ್ರ- ಬೊಳುವಾರು ಸಂಘವು ಕೇವಲ ಕನ್ನಡ ಕವಿಗಳ ಭಾವಗೀತೆಗಳನ್ನೇ ಹಾಡುವುದರಿಂದಾಗಿ ಅಭೂತಪೂರ್ವವಾದ ಜನಮನ್ನಣೆ, ವಿಶ್ವಾಸ ಗಳಿಸಿಕೊಂಡಿದೆ; ಅದು ಕೂಡಾ ಸುಮಾರು ೮-೧೬ ವರ್ಷ ವಯಸ್ಸಿನ ಮಕ್ಕಳ ’ಬಾರಿಸು ಕನ್ನಡ ಡಿಂಡಿಮವಾ’ ಎಂಬ ಈ ಕಾರ್ಯಕ್ರಮವು ಅದ್ಭುತ ಯಶಸ್ಸಿನೊಂದಿಗೆ ದಾಪುಗಾಲು ಹಾಕುತ್ತಿದೆ.
ಹಿನ್ನಲೆ ವಾದ್ಯಗಳ ಸಹಿತ ಹಾಡುವ ಮಕ್ಕಳ ಈ ಕಾರ್ಯಕ್ರಮದಲ್ಲಿ ಇನ್ನೂ ಅನೇಕ ವಿಶೇಷತೆಗಳಿವೆ. ಮುಖ್ಯವಾಗಿ ಇದೊಂದು ಸ್ಪರ್ಧೆಯಲ್ಲ; ಮುಕ್ತವಾದ ವೇದಿಕೆ. ಇಲ್ಲಿ ಯಾವುದೇ ಹಣ ಸಂದಾಯ; ಫೀಸಿನ ಕಂಡೀಷನ್ ಇಲ್ಲ. ಏನಿದ್ದರೂ ಮಕ್ಕಳಿಗೇ ಸಲುವಳಿಯಾಗುತ್ತದೆ. ಅದರಲ್ಲೂ ಇದರಲ್ಲಿ ಭಾಗವಹಿಸುವ ಅಂದಾಜು ೩೦ ರಷ್ಟು ಮಕ್ಕಳೆಲ್ಲರೂ ಅತ್ಯಂತ ಗ್ರಾಮೀಣ ಪ್ರದೇಶದ; ಎಲೆ ಮರೆಯ ಕಾಯಿಗಳಂತಿರುವ ಪ್ರತಿಭೆಗಳು. ಅವಕಾಶಕ್ಕನುಗುಣವಾಗಿ ಹಾಡುಗಳನ್ನು ನಿರ್ಭಿಡೆಯಾಗಿ ಹಾಡುವ ಮಕ್ಕಳು ಅತ್ಯಂತ ಉತ್ಸಾಹ -ಲವಲವಿಕೆಯ ಬುಗ್ಗೆಯಾಗಿರುತ್ತಾರೆ.; ಸ್ಪರ್ಧೆ-ಬಹುಮಾನ-ಪ್ರಶಸ್ತಿಗಳ ಒತ್ತಡ, ಆತಂಕ, ಗೊಂದಲ, ಭಯಗಳ ಪೂರ್ವಾಗ್ರಹವಿಲ್ಲದೆ ತಮ್ಮ ಮುದ್ದು ಮುಗ್ಧ ಹಾವಭಾವಗಳಿಂದ ನಾವೆಂದೋ ಕೇಳಿ ತಣಿದ, ಮರೆಯುತ್ತಿರುವ, ಮರೆಯಾಗುವ ಹಾಡುಗಳನ್ನು ಹಾಡಿ ನಮ್ಮ ಕಣ್ಣು ಮನಸ್ಸುಗಳಿಗೆ ಸೊಂಪು-ಕಂಪಿನ ರಸದೌತಣ ನೀಡುತ್ತಾರೆ ! ಈ ಬಳಗದ ವಿಶೇಷ ಅಭಿನಂದನಾ ಸಮಾರಂಭವು ಪುತ್ತೂರಿನ ಪುರಭವನದಲ್ಲಿ ನವೆಂಬರ್ ೩೦ ರಂದು ಹಮ್ಮಿಕೊಳ್ಳಲಾಗಿದೆ.
ಈ ಹೊಚ್ಚ ಹೊಸ ವಿಶಿಷ್ಟ ಕಾರ್ಯಕ್ರಮದ ಹಿಂದೆ ದುಡಿಯುತ್ತಿರುವ, ತಮ್ಮನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿರುವವವರು ಚಿದಾನಂದ ಕಾಮತ್, ಕಾಸರಗೋಡು. ಇಂತಹ ಇನ್ನೂ ಹೆಚ್ಚಿನ ಪ್ರಯತ್ನಗಳು ನಡೆಯಬೇಕು, (ಎರಡು ತಿಂಗಳ ಹಿಂದೆ ಕಲಾವಿದ ಕೆ.ವಿ.ರಮಣ್ ಅವರ ಸಾರಥ್ಯದಲ್ಲಿ ಶಾಲಾ ಮಕ್ಕಳಿಂದ ಮಂಗಳೂರಿನಾದ್ಯಂತ ಒಂದು ದಿನದ ಪ್ರಥಮ ಸುಗಮ ಸಂಗೀತ ತಿರುಗಾಟ ಮತ್ತು ಜನಸಾಮಾನ್ಯರಿಗೆ ಸುಗಮಸಂಗೀತದ ಅರಿವನ್ನು ಕೊಡುವ ಕಾರ್ಯಕ್ರಮ ಆಯೋಜನೆಗೊಂಡಿತ್ತು.) ಸರಕಾರ- ಸಂಘ-ಸಂಸ್ಥೆಗಳು ಈ ರೀತಿಯ ಮುಕ್ತ ಸುಂದರ ವೇದಿಕೆ; ವಾತಾವರಣವನ್ನು ಮಕ್ಕಳಿಗೆ ಒದಗಿಸಿಕೊಡುವ ಮೂಲಕ ಇನ್ನೂ ಅದೆಷ್ಟೋ ಎಳೆಯ ಪ್ರತಿಭೆಗಳನ್ನು ಬೆಳಕಿಗೆ ತರಬಹುದು.
-ಗೀತಾ ಕೊಂಕೋಡಿ, ಬಂಟ್ವಾಳ
(ಬಂಟ್ವಾಳದ ಇಡ್ಕಿದು ಗ್ರಾಮದ ಶ್ರೀಮತಿ ಗೀತಾ ಕೊಂಕೋಡಿ ಕವಯತ್ರಿ, ಕಥೆಗಾರ್ತಿ, ಪ್ರಗತಿಪರ ಮಹಿಳಾ ಲೇಖಕಿ.)