Author: ಮನೋರಮಾ. ಬಿ.ಎನ್
ಲಕ್ಷಣ: ಒಂದು ಮೃಗಶೀರ್ಷ ಹಸ್ತದ ಮೇಲೆ ಇನ್ನೊಂದು ಮೃಗಶೀರ್ಷವನ್ನಿಟ್ಟು ಹೆಬ್ಬೆರಳುಗಳು ಮತ್ತು ಕಿರುಬೆರಳನ್ನು ಸೇರಿಸಿದರೆ ವರಾಹ ಹಸ್ತ.
ವಿನಿಯೋಗ : ಹಂದಿ, ವಿಷ್ಣುವಿನ ವರಾಹವತಾರ. ನಿತ್ಯಜೀವನದಲ್ಲಿ ಗುಂಡಿ ಎನ್ನಲು, ಆಳ, ಭೂಮಿಗೆ ಕೊರೆಯುವುದು ಎಂದು ಸೂಚಿಸಲು ಬಳಸುತ್ತಾರೆ.
ಈ ಹಸ್ತವು ವರಾಹಾವತಾರ ಹಸ್ತವೆಂದೇ ದಶಾವತಾರ ಹಸ್ತಗಳಲ್ಲಿ ಪ್ರಮುಖವೆನಿಸಿದ್ದು ನಂದಿಕೇಶ್ವರನ ಅಭಿನಯದರ್ಪಣದಿಂದ ತಿಳಿದುಬರುತ್ತದೆ. ಈ ಲಕ್ಷಣಗ್ರಂಥದ ಪ್ರಕಾರ ವರಾಹ ಹಸ್ತವನ್ನು ಮೂಗಿನ ಎದುರು ಹಿಡಿಯುವುದು ಲಕ್ಷಣ. ಆದರೆ ನಂದಿಕೇಶ್ವರನೇ ಬರೆದನೆನ್ನಲಾದ ಭರತಾರ್ಣವದಲ್ಲಿ ವರಾಹಾವತಾರವನ್ನು ಪ್ರದರ್ಶಿಸಲು ಬಾಯಿಯ ಬಳಿ ಅಂಜಲಿ ಹಸ್ತಗಳನ್ನು ಹಿಡಿಯುವ ಕ್ರಮ ತೋರಿಬಂದಿದೆ. ಈ ವಿಷಯಕ್ಕೆ ಪೂರಕವೆಂಬಂತೆ ಪೂಜಾಮುದ್ರೆಗಳಲ್ಲಿ ಬಳಕೆಯಾಗುವ ವರಾಹ ಮುದ್ರೆಯು ನಮಸ್ಕಾರ ಮುದ್ರೆಯನ್ನು ಎದೆಯ ಮುಂದಕ್ಕೆ ಚಾಚುವುದು ಅಂದರೆ ಅಂಜಲಿ ಹಸ್ತವನ್ನೇ ಸೂಚಿಸಿದೆ.
ಕ್ರೋಢಾಸ್ಯ ಎಂಬ ಒಂದು ಉಪಹಸ್ತವು ವರಾಹ, ಕೋರೆದಾಡೆ ಎಂಬ ಸೂಚನೆಗೆ ನೃತ್ಯಪರಂಪರೆಯಲ್ಲಿ ಬಳಕೆಯಲ್ಲಿದ್ದು ನರ್ತನ ನಿರ್ಣಯವೆಂಬ ಲಕ್ಷಣಗ್ರಂಥದಲ್ಲಿ ಉಲ್ಲೇಖಿತವಾಗಿದೆ. ಅದರ ಲಕ್ಷಣ ಮುಷ್ಟಿಯಲ್ಲಿ ಕಿರುಬೆರಳು ಚಾಚುವುದು.
ಗಾಯತ್ರೀನ್ಯಾಸಮಂತ್ರದಲ್ಲಿ ‘ನಃ’ ಎಂಬ ಅಕ್ಷರಕ್ಕೆ ಸೂಚನೆಯಾಗಿ ವರಾಹಕಮುದ್ರೆ ಎಂಬ ಮುದ್ರೆಯ ¨ಳಕೆಯಿದ್ದರೂ ಅದರ ಲಕ್ಷಣ ವರಾಹ ಹಸ್ತದಂತಿಲ್ಲ. ಗಾಯತ್ರೀಮಂತ್ರದ ವಿನಿಯೋಗದಂತೆ ವರಾಹಕ ಮುದ್ರೆ ಎಂದರೆ ಎಡಗೈ ಹೆಬ್ಬೆರಳು, ತೋರುಬೆರಳುಗಳ ತುದಿಯನ್ನು ಸ್ಪರ್ಶಿಸಿ ಉಂಗುರದಂತೆ ಮಾಡಿ, ಉಂಗುರ ಮತ್ತು ಕಿರುಬೆರಳುಗಳನ್ನು ಒಳಕ್ಕೆ ಮಡಿಸಿಕೊಳ್ಳುವುದು. ಬಲಗೈ ತೋರು, ಮಧ್ಯ, ಉಂಗುರ ಮತ್ತು ಕಿರುಬೆರಳುಗಳನ್ನು ಜೋಡಿಸಿಕೊಂಡು ಎಡಗೈ ವಿನ್ಯಾಸದೊಳಗೆ ಹೊಗಿಸಿ ಎಡ ತೋರುಬೆರಳನ್ನು ಮೃದುವಾಗಿ ಅಮುಕಿ ಹಿಡಿಯುವುದು.