Author: ಮನೋರಮಾ. ಬಿ.ಎನ್
ನೀತಿಪ್ರಪಂಚದ ಸಾರ್ವಭೌಮನಾದ ಪಂಚತಂತ್ರವನ್ನು ರಂಗದಲ್ಲಿ ನಾಟಕಗಳಷ್ಟು ನೃತ್ಯಮಾಧ್ಯಮ ದುಡಿಸಿಕೊಂಡಿಲ್ಲವೆನ್ನುವುದು ಸಖೇದಾಶ್ಚರ್ಯದ ವಿಚಾರ. ಅದು ಕಲಾವಿದರ ಅಧೈರ್ಯ, ಪ್ರತಿಭಾಶೂನ್ಯತೆಗಿಂತಲೂ ಮಿಗಿಲಾಗಿ ಭರತನಾಟ್ಯದಂತಹ ನೃತ್ಯಮಾಧ್ಯಮದಲ್ಲಿರುವ ಆಂಗಿಕಾಭಿನಯದ ಬಾಲಪಾಠವನ್ನು ಯಥಾವತ್ತಾಗಿ ಒಪ್ಪಿಕೊಂಡ ಮಿತಿಯ ಫಲ ಎಂಬುದನ್ನು ಹೇಳಲೇಬೇಕು. ಪಂಚತಂತ್ರವನ್ನಾಧರಿಸಿ ಅಲ್ಲೊಂದು ಇಲ್ಲೊಂದು ಎಂಬಂತೆ ನಡೆದಿರಬಹುದಾದ ಒಂದಷ್ಟು ಪ್ರಯತ್ನಗಳು ಕೂಡಾ ಏಕಕಾಲಕ್ಕೆ ಕಥಾಮಾಧ್ಯವನ್ನು, ನಾಟ್ಯಸೌಂದರ್ಯವನ್ನು ಸಹಜವಾಗಿ ಮಿಳಿತಗೊಳಿಸಿಕೊಳ್ಳದೆ ನ್ಯಾಯ ಸಲ್ಲಿಸಲು ಒದ್ದಾಡಿರುವುದು ಹಿಂದಿನ ಹಲವು ನೃತ್ಯಪ್ರಯೋಗ-ವಿಶ್ಲೇಷಣೆಗಳಿಂದ ತಿಳಿದುಬರುತ್ತದೆ.
ಅದರಿಂದಾಗಿ ಪಂಚತಂತ್ರದಂತಹ ಕತೆಗಳನ್ನು ನೃತ್ಯಮಾಧ್ಯಮಕ್ಕೆ ಬಳಸಿಕೊಳ್ಳುವುದು ‘ಬಾಲಿಶ’ ಎಂಬಷ್ಟರಮಟ್ಟಿಗೆ ಅಭಿಪ್ರಾಯಗಳು ಮೂಡಿದ್ದು; ಒಂದು ವೇಳೆ ಬಳಸಿಕೊಳ್ಳುವುದೇ ಆದಲ್ಲಿ ‘ಮಕ್ಕಳ ಡ್ಯಾನ್ಸ್’ ಆಗಿಬಿಡುತ್ತವೆ ಎಂಬ ಕಪೋಲಕಲ್ಪಿತ ಭಾವನೆ ಹರಿದಾಡುತ್ತಾ ಯೋಚನೆ-ಯೋಜನೆಯ ಸಾಧ್ಯತೆಗಳನ್ನೂ ಕಡಿಮೆಗೊಳಿಸಿದೆ.
ಬಹುಷಃ ಜೈನ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ನೃತ್ಯ ವಿಭಾಗದ ವಿದ್ಯಾರ್ಥಿಗಳೂ ಈ ಸವಾಲನ್ನು ಎದುರಿಸಿದವರೇ. ಆದರೆ ಸವಾಲಿಗೆ ಸೂಕ್ತ ಜವಾಬನ್ನು ಅಷ್ಟೇ ಚೆಂದವಾಗಿ ಎಲ್ಲರೂ ದಂಗುಬಡಿವಂತೆ ಸಾಧಿಸಿ ತೋರಿಸಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚತಂತ್ರಕಥೆ ಆಯ್ಕೆಯ ಸುಂದರ ಕಾರಣ ಮತ್ತು ದೃಶ್ಯಮಾಧ್ಯಮಕ್ಕೆ ಅವರು ಒಗ್ಗಿಸಿಕೊಂಡಿರುವ ಹಿಂದಿನ ಶ್ರಮ, ಪ್ರತಿಭೆಗೆ ಸಲಾಮು ಸಲ್ಲಲೇಬೇಕು. ಇದಕ್ಕೆ ಅವರು ಋಣಿಯಾದದ್ದು, ಆಗಬೇಕಾದದ್ದು ನಾಟ್ಯಶಾಸ್ತ್ರಕ್ಕೆ, ಅದರ ಅಂಗೋಪಾಂಗ ಸಮನ್ವಯಕ್ಕೆ ಮತ್ತು ಅದನ್ನು ಕಲಿಸಿಕೊಟ್ಟು ಈ ನೃತ್ಯಪ್ರಯೋಗಕ್ಕೆ ಮುಖ್ಯಸ್ಥೆಯಾಗಿ ದುಡಿದ ಭರತನೃತ್ಯ ವಿದುಷಿ ಡಾ. ಶೋಭಾ ಶಶಿಕುಮಾರ್ರಿಗೆ.
ಮಾರ್ದನಿ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕೃತಿಯ ಕೂಗು ಮತ್ತು ಮನುಷ್ಯನ ಅಂತರ್ ಸಂಬಂಧದ ಸ್ವಾರಸ್ಯವನ್ನು ದರ್ಶಿಸುವ ಕೆಲಸ ಜೈನ್ ವಿಶ್ವವಿದ್ಯಾನಿಲಯದ ಅಂತಿಮ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಗಮನಾರ್ಹವಾಗಿ ಅಭಿವ್ಯಕ್ತಗೊಂಡಿದೆ. ಇತ್ತೀಚೆಗೆ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ವಿದುಷಿ ರಾಧಾಶ್ರೀಧರ್ ಅವರ ನೃತ್ಯಶಾಲೆಯ ವತಿಯಿಂದ ನಡೆದ ನೃತ್ಯೋತ್ಸವದ ಕಾರ್ಯಕ್ರಮದಲ್ಲಿ ನೀತಿಯ ಕಹಿಗುಳಿಗೆಯನ್ನು ಕಥಾಪ್ರಪಂಚದ ಸಿಹಿಲೇಪನದಲ್ಲಿ ಕೊಡುತ್ತಾ ಹೋಗುವ ಪಂಚತಂತ್ರದ ಎಳೆಗಳು ಸಾದರವಾಗಿ ಬಿತ್ತರವಾಯಿತು.
ಪ್ರಧಾನವಾಗಿ ಮೂರು ನೀತಿಕತೆಗಳನ್ನು ಅಳವಡಿಸಿಕೊಂಡಿರುವ ತಂಡ ಮೊದಲ ಮತ್ತು ಕೊನೆಯ ಕತೆಗಳನ್ನು ಪಂಚತಂತ್ರದಿಂದಾಯ್ದಿದ್ದು; ನಡುವಿನ ‘ತನ್ನ ಕೋಳಿಯಿಂದಲೇ ಬೆಳಗಾಗುವ ಅಜ್ಜಿಯ’ ಲೋಕಾನುಭವದ ಕತೆಗೆ ಈಸೋಫ ಮತ್ತು ಜಾತಕದ ಕತೆಗೆ ಮೊರೆಹೋಗಿದೆ. ಮಹಾವಿಕ್ರಮನೆಂಬ ಸಿಂಹವನ್ನು ಚತುರಕನೆಂಬ ಮೊಲ ಉಪಾಯವಾಗಿ ಸೋಲಿಸಿ ಸಾಯಿಸುವ ಮೊದಲಿನ ಕತೆಯಲ್ಲಿ ಸಿಂಹನಾಗಿ ಅರುಣ್ ಶ್ರೀನಿವಾಸನ್ ಮತ್ತು ಮೊಲವಾಗಿ ಗೌರೀ ಸಾಗರ್ ಅವರದ್ದು ಪ್ರಾಣಿಗುಣ ಅನುರೂಪವಾದ ಆಂಗಿಕ ಮತ್ತು ಸಾತ್ತ್ವಿಕ ಸಾಂಗತ್ಯದ ನೃತ್ಯಾಭಿವ್ಯಕ್ತಿ. ಅಂತೆಯೇ ನಿಶಾಚರಿಯೆಂಬ ಗೂಬೆಯ ನಾಯಕತ್ವಕ್ಕೆ ಅಸೂಯೆಪಡುವ ವಿಹಿತ್ಕ್ರಾಂತಿಯೆಂಬ ಕಾಗೆಯ ಕತೆಯಲ್ಲಿ ಅದಿತಿ ಸದಾಶಿವ, ಅಪರ್ಣಾ ಶಾಸ್ತ್ರಿ ನಾಟ್ಯಾನುಭವವನ್ನು ವಿದ್ವದ್ರಸಿಕರಿಗೆ ಮಾತ್ರವಲ್ಲದೆ ಎಳೆಯ ಮಕ್ಕಳಿಗೂ ಇಷ್ಟವಾಗುವಂತೆ ಅಭಿವ್ಯಕ್ತಿಸಿದ್ದಾರೆ. ಎರಡನೆಯ ಲೋಕರೂಢಿಯ ಕತೆಯಲ್ಲಿ ಚಂಪಜ್ಜಿಯಾಗಿ ಚೈತ್ರಾ ರಮೇಶ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದರೆ, ಕೋಳಿ ಚಿತ್ರಕಂಠಿಯಾಗಿ ಪೃಥ್ವಿಶರ್ಮ ಅವರದ್ದು ಕೋಳಿಯೂ ನಾಚುವಂತಾ ಅಭಿನಯ !
ಮೂವರು ರಾಜಕುಮಾರರಾಗಿ ಪುಟಾಣಿಗಳಾದ ಮಧುಮಿತಾ, ಶ್ರಾವಣಿ, ನಿತ್ಯಾ ಮಕ್ಕಳಂತೆ ಮುದ್ದುಮುದ್ದೆನಿಸುವಂತೆಯೂ ಪಾತ್ರಕ್ಕೆ ಅನುಸಾರವಾಗಿ ಪ್ರೌಢವಾಗಿಯೂ ಅಭಿನಯಿಸಿದ್ದಾರೆ. ಸ್ನೇಹಾ ಹರೀಶ್, ಸ್ನೇಹಾ ನಾರಾಯಣ್, ದೇವರಾಜ್, ಅನುಷಾ ಅವರದ್ದು ಪೋಷಕವಾದ ಪಾತ್ರಗಳಲ್ಲಿಯೂ ಮೇಲ್ಮಟ್ಟದ ಅಭಿನಯ ಚಾಕಚಕ್ಯತೆ. ಗುರು ವಿಷ್ಣುಶರ್ಮನ ಪಾತ್ರ ಮಾಡಿರುವ ರೂಪಾಸುರೇಶ್ ಅವರು ಅಭಿನಯದಲ್ಲಿ ಒಂದಷ್ಟು ಪಳಗಬೇಕು. ಒಟ್ಟಿನಲ್ಲಿ ಪ್ರಧಾನ, ಪೋಷಕ ಪಾತ್ರಗಳು ಯಾವ್ಯಾವುದು ಎಂಬ ಭೇಧವೇ ಮೇಲ್ನೋಟಕ್ಕೆ ಕಾಣಬರದಂತೆ ಸಮಾನವಾದ ಆರೋಗ್ಯಕರವೆನಿಸುವ ಸ್ಪರ್ಧಾತ್ಮಕ ಅಭಿವ್ಯಕ್ತಿ ಎಲ್ಲರದ್ದು.
ಪಂಚತಂತ್ರದಂತಹ ಕಥೆಗಳನ್ನು ಆಯ್ದುಕೊಂಡಾಗ ಕಲಾವಿದರಿಗೆ ಪ್ರಾಣಿಸಹಜವಾದ ನಡವಳಿಕೆಗಳನ್ನು ನಾಟ್ಯಾವರಣಕ್ಕೆ ಹೊಂದಿಸಿಕೊಂಡು ಸಮನ್ವಯಿಸುವ ಸವಾಲು ಪ್ರಥಮತಃ ಎಡತಾಕುತ್ತದೆ. ಇದನ್ನು ಸರಿತೂಗಿಸಿಕೊಂಡು ಮೈಮನವನ್ನು ಆಯಾಯ ಪ್ರಾಣಿಗಳ ಭಾವ-ವಿಭಾಗಗಳಿಗೆ ಬಗ್ಗಿಸಿ ಬಾಗಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಎಷ್ಟೋ ಬಾರಿ ನೋಟಕ್ಕೆ ಸಿಗುವ ಸಂಗತಿ ಆಂಗಿಕಕ್ಕೂ, ಕಥಾವಿನ್ಯಾಸಕ್ಕೂ, ಪ್ರಾಯೋಗಿಕ ಔಚಿತ್ಯಕ್ಕೂ ದಕ್ಕುವುದೇ ಇಲ್ಲ. ಅದರಲ್ಲೂ ಸಮೂಹದ ಅಭಿವ್ಯಕ್ತಿಯಲ್ಲಿ ಒಬ್ಬೊಬ್ಬರ ಪ್ರತಿಭೆ-ದೇಹವಿನ್ಯಾಸ-ಅಭಿವ್ಯಕ್ತಿಸಾಧ್ಯತೆಗಳು ಭಿನ್ನವಾಗಿದ್ದಾಗ ಸಮನ್ವಯರೂಪದಿಂದ ಕಥೆಗಳನ್ನು ದುಡಿಸಿಕೊಳ್ಳುವುದೆಂದರೆ ಆಳವಾದ ರಂಗಕ್ರಮ ಅಧ್ಯಯನ ನಿರೀಕ್ಷಿತ.
ಇದರೊಂದಿಗೆ ಆಂಗಿಕ-ಸಾತ್ತ್ವಿಕದ ಒನಪಾದ ಸಾಂಗತ್ಯವನ್ನು ಹರಡಿಸಿಕೊಂಡು ರಸದಾಳದ ರಸಾತಲಕ್ಕ್ಕೆ ಇಳಿಯುತ್ತಾ ವಾಚಿಕದ ಅಗತ್ಯವೂ ಇಲ್ಲದ ಮಟ್ಟಕ್ಕೆ ನೃತ್ಯವನ್ನು ಆಪ್ಯಾಯಮನವಾಗಿ, ಸೋದಾಹರಣವಾಗಿ ನಿರೂಪಿಸುವುದೆಂದರೆ ಅದು ಕಲಾವಿದನ ಪ್ರಬುದ್ಧತೆಯ ಲಕ್ಷಣವೇ ಸರಿ. ಇಂತಹ ಜಾಣತನಕ್ಕೆ ನೋಡಿಸಿಕೊಂಡು ಹೋಗುವ ಗುಣವೂ ಜೊತೆಯಾದಲ್ಲಿ ಗುಣಗ್ರಾಹಿಯೆನಿಸುವ ಮಾರ್ದನಿಯಂತಹ ರೂಪಕಗಳು ಜನ್ಮ ತಾಳುತ್ತವೆ.
ಇಷ್ತೇ ಅಲ್ಲ, ಮಾರ್ದನಿಯ ತಾಂತ್ರಿಕವಾದ ರಂಗವಿನ್ಯಾಸಗಳೂ, ನೆರಳು-ಬೆಳಕಿನ ಹೊಂದಾಣಿಕೆ ಬಹು ಅಚ್ಚುಕಟ್ಟು. ಆರಂಭದಲ್ಲಿ ಆಖ್ಯಾನ ನಿರೂಪಣೆಗೆ ಸರಿಯಾಗಿ ಹೊಂದಿಕೊಂಡ ಪ್ರಾಣಿಪಪ್ರಂಚದ ಆಕರ್ಷಕ ಉಪೋದ್ಘಾತದ ಆಯಾಮ, ಕಾಡಿನ ಪರಿಸರದ ಬೆಳಕಿನ ವಿನ್ಯಾಸ, ಅಜ್ಜಿ-ಕೋಳಿ ಕತೆಯಲ್ಲಿ ಕಾಡು ಮತ್ತು ನಾಡನ್ನು ಪ್ರತ್ಯೇಕಿಸುವಂತಹ ಆಯಕಟ್ಟಿನ ರಂಗನಡೆಗಳು, ಸೂರ್ಯನಮಸ್ಕಾರದಂತಹ ವಿಧಿಗಳನ್ನು ಗುರು-ಶಿಷ್ಯರ ನಡುವಿನ ಬಾಂಧವ್ಯ ಮತ್ತು ರಾಜಕುವರರ ಕಲಿಕೆಯ ಮೇಲ್ಮಟ್ಟಕ್ಕೆ ಹೊಂದಿಕೊಳ್ಳುವಂತೆ ಅಳವಡಿಸಿರುವ ಜಾಣ್ಮೆ, ಸಿಂಹದ ಪ್ರತಿಬಿಂಬ ಬಾವಿಯಲ್ಲಿ ಕಾಣಿಸುವಂತೆ ಮಾಡಿರುವ ಮತ್ತೊಂದು ಪುರುಷ ನರ್ತಕನ ಸಾದೃಶ್ಯ ಅಭಿನಯ… ಹೀಗೆ ಒಂದೇ ಎರಡೇ ನಾಟ್ಯಶಾಸ್ತ್ರದ ಸೌಂದರ್ಯವನ್ನು ಬಗೆಗಾಣಿಸುವಲ್ಲಿ ವಿದ್ಯಾರ್ಥಿಗಳ ಅಧ್ಯಯನ, ಕರಣಾದಿ ನಡೆಗಳ ನಾಟ್ಯಪ್ರೀತಿ, ಅವಿಶ್ರಾಂತ ಶ್ರಮ ಅಭಿವಂದನೀಯ. ಆದರೆ ಮುಕ್ತಾಯಕ್ಕೆ ಮನುಷ್ಯಜೀವನದ ಗೊಂದಲಗಳನ್ನು ಪರಿಚಯಿಸುವಂತೆ ಮಾಡಿದ ಭರತನಾಟ್ಯದ ಅಡವುಗಳ ಉದ್ಧತರೂಪದ ಹೆಣೆಯುವಿಕೆ ನಾಟ್ಯವಿನ್ಯಾಸಕ್ಕೆ ಒಗ್ಗದೆ ಗೊಂದಲದ ಗೂಡಾಗುತ್ತದೆ; ಮಾತ್ರವಲ್ಲ ಅನಿವಾರ್ಯತೆಗೆ ಅಂಟಿಸಿಕೊಂಡದ್ದು ಅಂದವಾಗಿರಬೇಕೆಂದಿಲ್ಲ ಎಂಬ ಸಾಪೇಕ್ಷಸತ್ಯವನ್ನು ಹೊರಗೆಡಹುತ್ತದೆ.
ಹಾಗೆಂದು ಪ್ರಯೋಗದಲ್ಲಿ ಕುಂದುಕೊರತೆಗಳು ಇಲ್ಲವೆಂತಲ್ಲ. ಆದರೆ ವಿದ್ಯಾರ್ಥಿದೆಸೆಯಲ್ಲೇ ತಮಗಿರುವ ಮಿತಿಗಳಡಿಯಲ್ಲಿ ಪರೀಕ್ಷಾರ್ಥವಾಗಿಯೂ ಅಂಕಗಳ ಬೆನ್ನತ್ತುವ ಸವಾಲಿಗೆ ದಿಟ್ಟೆದೆಯಿಂದ ಇಂಥ ಕ್ಲಿಷ್ಟ ವಿನ್ಯಾಸಗಳನ್ನು ಎಲ್ಲರೂ ಒಪ್ಪುವಂತೆ ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಧೈರ್ಯಸ್ಥರು ಮಾತ್ರವಲ್ಲ ಪದವಿಪೂರ್ಣತೆಯ ಆಂಶಿಕವಾದ ಅಗತ್ಯಗಳನ್ನಷ್ಟೇ ಪೂರೈಸುವಲ್ಲಿ ಉದ್ಯುಕ್ತರಾಗದೆ, ತಪ್ಪುಒಪ್ಪುಗಳನ್ನು ಪ್ರಾಯೋಗಿಕವಾಗಿ ಕಂಡುಕೊಳ್ಳುತ್ತಾ ಎಂಥ ವೃತ್ತಿಪರ ಕಲಾವಿದರೂ ನಾಚುವಂತೆ ಮಾಡಿರುವ ಪ್ರಯತ್ನ ಭವಿಷ್ಯದ ಭರವಸೆಯ ಕಲಾವಿದರು ಎಂಬುದನ್ನು ದೃಢಮಾಡಿದೆ.
ಮಾರ್ದನಿಯ ಯಶಸ್ಸಿನಲ್ಲಿ ಪ್ರಸಾದನ ಮತ್ತು ವಸ್ತ್ರವಿನ್ಯಾಸಕ್ಕೆ ಹಿರಿಯ ಪಾಲಿದೆ. ನಾಟ್ಯದ ಅನುಭವ ಕೊಡುವ ಇಂತಹ ನೃತ್ಯದೃಶ್ಯಾವಹಕ್ಕೆ ಔಚಿತ್ಯಪೂರ್ಣವಾಗಿ ಸರಳವಾಗಿ ವಸ್ತ್ರವಿನ್ಯಾಸವನ್ನು ಮಾಡುವುದರೊಂದಿಗೆ ಆಹಾರ್ಯಾಭಿನಯದ ದಿಗ್ಧರ್ಶನವನ್ನು ಇತ್ತಿದ್ದಾರೆ ಸ್ವತಃ ಈ ವಿದ್ಯಾರ್ಥಿಗಳು. ಜೊತೆಗೆ ಪ್ರಸಾದನವನ್ನು ಭರತನಾಟ್ಯದ ಮಾಧ್ಯಮಕ್ಕೆ ಹದವಾಗಿ ಒಗ್ಗಿಸಿಕೊಂಡ ಮೇಕಪ್ ಕಲಾವಿದ ವಿಜಯ್ ಕುಮಾರ್ ಮತ್ತು ಗೋಪಿಯವರಿಗೆ ಅಭಿನಂದನೆ ಸಲ್ಲಲೇಬೇಕು. ಇದರೊಂದಿಗೆ ಮಾರ್ದನಿಯ ಸಾಹಿತ್ಯವನ್ನು ಜನಸಂವಾಹ್ಯವಾಗಿ ನೀಡುವುದರೊಂದಿಗೆ ಕರ್ನಾಟಕ ಮತ್ತು ಜಾನಪದ ಸಂಗೀತದ ಎಳೆಗಳನ್ನು ಗಾಯನದಲ್ಲಿ ಅನುರೂಪವಾಗಿ ಅಭಿವ್ಯಕ್ತಿಸಿದ ವಿದ್ವಾನ್ ಡಿ.ಎಸ್.ಶ್ರೀವತ್ಸ ಅವರಿಗೂ ಶಹಬ್ಭಾಸ್ ಗಿಟ್ಟಿಸಿಕೊಳ್ಳುತ್ತಾರೆ. ನಟುವಾಂಗ/ಖಂಜಿರ/ರಿದಂಪ್ಯಾಡ್ ಎಂಬ ‘ಹಲವು ವಾದ್ಯಗಳ ವಲ್ಲಭ’ ವಿದ್ವಾನ್ ಡಿ.ವಿ. ಪ್ರಸನ್ನಕುಮಾರ್, ತರಹೇವಾರಿ ಪ್ರಾಣಿಪಕ್ಷಿಗಳ ಧ್ವನಿಸಾಕ್ಷಾತ್ಕರವನ್ನು ಪಿಟೀಲಿನಲ್ಲೇ ಕೊಟ್ಟ ವಿದ್ವಾನ್ ಹೇಮಂತ್ ಕುಮಾರ್ ಅಭಿನಂದನೆಯ ಸಿಂಹಪಾಲನ್ನೂ ಬಾಚಿಕೊಳ್ಳುತ್ತಾರೆ. ಕೊಳಲಿನಲ್ಲಿ ವಿವೇಕ್ ಕೃಷ್ಣ, ಸಹಗಾಯನದಲ್ಲಿ ರಮ್ಯಾ ಸುರೇಶ್ರದ್ದು ಸಂವೇದನೀಯ ಅಭಿವ್ಯಕ್ತಿ.
ಈ ಎಲ್ಲಾ ‘ಗುಂಪುಗಾರಿಕೆ’ಯ ಶ್ರಮದಿಂದಾಗಿ ಬಾಲಿಶವೆನಿಸಬಹುದಾದ ಚೌಕಟ್ಟಿನ ಮಿತಿಗಳಿಂದ ಪರಿಪೂರ್ಣ ರಂಗಾನುಭವವನ್ನು ನೃತ್ಯಸೌಂದರ್ಯದ ಜೊತೆಗೆ ಸಾಕ್ಷೀಕರಿಸಿಕೊಂಡ ಜಿಗಿದು ಸಾಧ್ಯತೆಗಳ ಅವಕಾಶವನ್ನು ಮಾರ್ದನಿ ಇತ್ತಿದೆ. ಇದು ಪಂಚಂತಂತ್ರದ ಪರಿಚಯಕ್ಕಷ್ಟೇ ಸೀಮಿತಗೊಳ್ಳದೆ ಅನ್ಯಾದೃಶ್ಯ ನೃತ್ಯಕಾವ್ಯಕ್ಕೆ ಕತೆಗಳು ಇತ್ತಿರುವ ಕ್ಷಿತಿಜವನ್ನು ತೋರಿದೆ. ಸಮಗ್ರವಾಗಿ ಹೇಳುವುದಾದರೆ ಹಿರಿ-ಕಿರಿಯ, ವಿದ್ವತ್-ಸಾಮಾನ್ಯ ರಸಿಕರೆಂಬ ಬೇಧವಿಲ್ಲದೆ ಸಕಲರನ್ನೂ ಒಳಗೊಳ್ಳುವ ಮರೆಯದೆ ಮತ್ತೆ ಮತ್ತೆ ನೋಡಲೆಣಿಸುವಂತೆ ಮಾಡುವ ಚೇತೋಹಾರಿಯಾದ ನೃತ್ಯಾವತಾರ- ಮಾರ್ದನಿ.