ಅಂಕಣಗಳು

Subscribe


 

ಆಸ್ಥಾನ ನೃತ್ಯಪದ್ಧತಿಯ ಪೂರ್ವಾಪರ ನೆಲೆಗಳು

Posted On: Wednesday, January 29th, 2014
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಆಂಧ್ರ, ತಮಿಳ್ನಾಡು, ಕೇರಳ, ಓಡಿಶಾ ರಾಜ್ಯಗಳಿಗಿರುವಂತೆಯೇ ಕರ್ನಾಟಕದ ನೃತ್ಯಪರಂಪರೆಗೂ ದೀರ್ಘವಾದ ಇರ್ತಿಹಾಸ, ಆಕರ, ಶೈಲಿ, ವೈಶಿಷ್ಟ್ಯವಿದೆ. ಅಷ್ಟಕ್ಕೂ ಶಾಸ್ತ್ರೀಯನೃತ್ಯಕಲೆಗಳೆಂದು ಗುರುತಿಸಿಕೊಂಡ ದೇಶೀಶೈಲಿಗಳು ತನ್ನ ಚಲನೆಗಳಿಗೆ ಕಾಲಕ್ಕನುಗುಣವಾಗಿ ಬೇರೆ ಬೇರೆ ಲಕ್ಷಣಗ್ರಂಥಗಳನ್ನನುಸರಿಸಿದರೂ; ಗಾಯನಕ್ಕೆ ಅವಲಂಬಿಸಿದ್ದು ಕರ್ಣಾಟಕ ಸಂಗೀತಪದ್ಧತಿಯನ್ನೇ ! ವಿದ್ಯಾರಣ್ಯರು ಸಂಘಟಿಸಿದ್ದ, ಪುರಂದರದಾಸರು ಕ್ರಮವತ್ತಾಗಿ ವಿಂಗಡಿಸಿದ್ದ ಕರ್ಣಾಟಕ ಸಂಗೀತದ ನಿರ್ಣಿತ ಪದ್ಧತಿ ಮತ್ತು ಸಂಗೀತದ ತ್ರಿಕಾಲ ಗತಿಗಳ ನಿರ್ವಹಣೆಯೇ ನಟ್ಟುವ ಮೇಳ/ ಸದಿರ್ ನೃತ್ಯಕ್ಕೆ ಆಧಾರಪ್ರಾಯವಾಗಿರುವುದು ಸ್ಪಷ್ಟವಾಗುತ್ತದೆ.

ಆದರೆ ಈ ಹೆಚ್ಚುಗಾರಿಕೆ ಕರ್ನಾಟಕ ರಾಜ್ಯದ ಕೊಡುಗೆ ಎಂಬಂತೆ ಮುಂದುವರಿಯಲೇ ಇಲ್ಲ. ಅದರಲ್ಲೂ ಸದಿರ್‍ನೃತ್ಯವು 20ನೇ ಶತಮಾನದ ಪೂರ್ವಾರ್ಧದಲ್ಲಿ ಭರತನಾಟ್ಯವೆಂಬ ಅಭಿದಾನದಿಂದ ಪ್ರಸಿದ್ಧಿಯಾಗಲು ಕಾರಣವಾದ ತಮಿಳ್ನಾಡಿನ ಕ್ರಾಂತಿಕಾರಿ ಸುಧಾರಕರ ಹೆಜ್ಜೆಗಳ ಫಲವಾಗಿ ಭರತನಾಟ್ಯವೆಂದರೆ ಅದು ತಮಿಳ್ನಾಡಿನದ್ದೇ ಆದ ಶೈಲಿ ಎಂಬ ತಪ್ಪು ಕಲ್ಪನೆಯನ್ನು ಎಲ್ಲೆಡೆ ಬೇರೂರಿಸಿವೆ.

ವಿಜಯನಗರ ಪತನದ ವೇಳೆಗೆ ಆಂಧ್ರದಿಂದ ವಲಸಿಗರಾಗಿ ಬಂದ ಅನೇಕ ಕಲಾವಿದರು ಬೆಂಗಳೂರು, ಕೋಲಾರ, ನೆಲಮಂಗಲದಲ್ಲಿ ನೆಲೆಸಿದ್ದರು ಎಂಬುದನ್ನು ದಾಖಲೆಗಳು ತಿಳಿಸುತ್ತವೆ. ಜೊತೆಗೆ ಮೈಸೂರು ರಾಜಾಶ್ರಯ ಕಲಾವಿದರಿಗೆ ಒದಗಿದ ಬಳಿಕ ತಂಜಾವೂರು, ಉತ್ತರಭಾರತಗಳಿಂದ ನರ್ತಕಿಯರು, ತಾಫೆಮೇಳಗಳು ಮತ್ತು ನಟ್ಟುವನ್ನಾರ್ ಗುರುಗಳೂ ಸಹ ಮೈಸೂರಿಗೆ ಸುಮಾರು 160ವರ್ಷಗಳುದ್ದಕ್ಕೂ ಕಾಲ ಬರಲಾರಂಭಿಸಿ ಮಹಾರಾಜರ ಎದುರಿಗೆ ತಮ್ಮ ಕಲಾ ಪ್ರದರ್ಶನವನ್ನಿತ್ತು ಬಹುಮಾನಗಳನ್ನು ಪಡೆದು ಹಿಂತಿರುಗಿದ ಮತ್ತು ಕರ್ನಾಟಕದಲ್ಲೇ ನೆಲೆ ನಿಂತು ತಮ್ಮ ಶೈಲಿಗಳನ್ನು ಪಸರಿಸಿದ ಉದಾಹರಣೆಗಳು ಹಲವು ಸಿಗುತ್ತವೆ. ದುರದೃಷ್ಟವೆಂದರೆ ಮೈಸೂರಿನ ಸರಸ್ವತೀ ಮಹಲ್ ಗ್ರಂಥಾಲಯ ಬೆಂಕಿ ಆಕಸ್ಮಿಕದಲ್ಲಿ ಭಸ್ಮಾವಶೇಷವಾದ ನಂತರ ಹೆಚ್ಚಿನ ವಿವರಗಳು ಲಭ್ಯವಾಗುವುದಿಲ್ಲ.

ತಮಿಳುನಾಡಿನ ರುಕ್ಮಿಣಿದೇವಿ ಅರುಂಡೇಲ್, ಕೃಷ್ಣ ಅಯ್ಯರ್ ಮುಂತಾದ ಸುಧಾರಕರಿಂದ ನೃತ್ಯಕಲೆಯು ಪುನರುಜ್ಜೀವನಗೊಂಡಾಗ ನಾನಾ ಊರುಗಳಲ್ಲಿದ್ದ ನಟ್ಟುವನ್ನಾರ್ ಗುರು, ಕಲಾವಿದರಿಗೆ ಹೊಸ ಜೀವ ಬಂದಿತೇನೋ ನಿಜ. ಆದರೆ ತಮಿಳ್ನಾಡಿನ ಗುರು-ಕಲಾವಿದರು-ನಟುವಕಾರರ ಪ್ರಭಾವ ಮತ್ತು ಕರ್ನಾಟಕದ ಅದೆಷ್ಟೋ ನೃತ್ಯಾಪೇಕ್ಷಿಗಳು ಮದರಾಸಿಗೆ ಹೋಗಿ ಕಲಿತುಬಂದದ್ದರಿಂದ ನರ್ತನರಂಗದ ನೈಜ ಶೈಲಿಗಳು ಕಣ್ಮರೆಯಾಗುತ್ತಾ, ತಂಜಾವೂರು ನಿರ್ಣಿತಪದ್ಧತಿಯ ಪ್ರಭಾವವೇ ಹೆಚ್ಚುತ್ತಾ ಹೋಯಿತು.

ಜೊತೆಗೆ, ಬೆಂಗಳೂರಿಗೆ ತಮಿಳ್ನಾಡಿನಿಂದ ಬಂದು ನೆಲೆಸಿದ ತಂಜಾವೂರು ಸಹೋದರರ ತಲೆಮಾರು, ಮೀನಾಕ್ಷಿ ಸುಂದರಂ ಪಿಳ್ಳೈ ಎಂಬ ತಮಿಳು ನಾಟ್ಯಾಚಾರ್ಯರ ವಂಶಜರು ಅಗಾಧವಾಗಿ ತಮ್ಮ ನೃತ್ಯ ಪರಂಪರೆಯನ್ನು ಕರ್ನಾಟಕದುದ್ದಕ್ಕೂ ಹರಡಿಸಿದರು. ದಕ್ಷಿಣಕನ್ನಡವು ತಮಿಳ್ನಾಡು ಮತ್ತು ಕೇರಳದ ಪ್ರಭಾವಕ್ಕೆ ಸಿಲುಕಿದ್ದರಿಂದ (ಮದ್ರಾಸ್ ಪ್ರೆಸಿಡೆನ್ಸಿ) ಹಲವು ಮಂದಿ ನರ್ತಕರು ಅಲ್ಲಿನ ಶೈಲಿಯನ್ನು ರೂಢಿಸಿಕೊಂಡವರಾದರು. ಇದರೊಂದಿಗೆ ತಮಿಳ್ನಾಡಿನ ಕಲಾಕ್ಷೇತ್ರ, ಕೇರಳದ ಕಲಾಮಂಡಲಂ ಮಾದರಿಯ ಸಾಂಸ್ಥಿಕವಾದ ಕಲಿಕಾ ವಿಧಿಯ ಪ್ರಯತ್ನಗಳು, ಅಲ್ಲಿ ಮೂಡಿಬಂದ ಸುಧಾರಕರು ಕರ್ನಾಟಕದಲ್ಲಿ ಹುಟ್ಟಲೇ ಇಲ್ಲವೆಂಬಷ್ಟು ವಿರಳ.

ಹೀಗಾಗಿ ಮರಾಠೀ ದೊರೆಗಳಿಂದ ಹೆಸರಿಗೆ ಬಂದ ಸದಿರ್ ನೃತ್ಯವು ಭರತನಾಟ್ಯವೆಂದು 1930ರ ದಶಕದಲ್ಲಿ ನಾಮಾಂಕಿತಗೊಂಡು ಕ್ರಮೇಣ ತಮಿಳ್ನಾಡು ನೃತ್ಯಜಗತ್ತಿಗೆ ನೀಡಿದ ಸಾಂಸ್ಕೃತಿಕ ಬಳುವಳಿ- ಭರತನಾಟ್ಯ ಎಂಬ ಅಭಿಪ್ರಾಯ ಬಲವಾಗಿ ಕೂರಲು ಕಾರಣವಾಯಿತು.

ತಂಜಾವೂರು ಸಹೋದರರು ನಿರ್ಣಯಿಸಿದ ಕಛೇರಿ ಪದ್ಧತಿ ಇಂದಿಗೆ ಭರತನಾಟ್ಯಕ್ಕೆ ಮುದ್ರಾಣಿಕವಾದರೂ; ಅದು ತಮಿಳ್ನಾಡಿನಲ್ಲಿದ್ದುದಕ್ಕೂ, ಕರ್ಣಾಟಕದಲ್ಲಿ ಭರತನಾಟ್ಯ ಬೆಳೆದು ಬಂದ ರೀತಿಗೂ ಸಾಕಷ್ಟು ವ್ಯತ್ಯಾಸವಿದೆ. ಮೊದಲನೆಯದಾಗಿ ತಾಫೆ, ದೇವದಾಸೀಕುಣಿತವೆಂದು ಹೆಸರಾಗಿ ಇಲ್ಲಿನ ನೃತ್ಯಪದ್ಧತಿ ಪಡೆದುಕೊಂಡ ನೆಲೆ-ಬೆಲೆ. ನಂತರದಲ್ಲಿ ಗಮನಿಸಿದರೆ ತಮಿಳುನಾಡಿನಲ್ಲಿ ಕಂಡುಬಂದ ದೇವದಾಸಿ ಕಳಂಕಿತ ರೀತಿನೀತಿಗಳು ಮೈಸೂರು ರಾಜ್ಯದಲ್ಲಿ ಅಷ್ಟಾಗಿ ಭಾಸವಾಗಲೇ ಇದ್ದದ್ದೂ ಕೂಡ ಕನ್ನಡ ಪರಿಸರದ ಮುಕ್ತತೆಯನ್ನು ಪ್ರತಿಪಾದಿಸುತ್ತದೆ. ಅಂತೆಯೇ ನರ್ತನಾಂಗ ಮತ್ತು ಕಲಿಕಾಕ್ರಮವನ್ನು ಗಮನಿಸಿದರೆ ತಮಿಳ್ನಾಡಿನ ಸಂಪ್ರದಾಯಕ್ಕೂ, ಮೈಸೂರು ರಾಜ್ಯದ ಪದ್ಧತಿಗೂ ಹಲವು ವ್ಯತ್ಯಾಸವಿದೆ.

ಅವುಗಳ ಪೈಕಿ ತಮಿಳುನಾಡಿನಲ್ಲಿ ನೃತ್ತದ ಬಳಕೆ ಜಾಸ್ತಿಯಾದರೆ ; ಮೈಸೂರು ನೃತ್ತಕ್ಕಿಂತಲೂ ಅಭಿನಯವನ್ನೇ ಆಶ್ರಯಿಸಿತ್ತು. ಅದಕ್ಕನುಗುಣವಾಗಿ ನಟುವಾಂಗದ ಪಟ್ಟುಗಳೂ ಕೂಡಾ ಸಾಕಷ್ಟು ವ್ಯತ್ಯಾಸಗಳನ್ನು ಹೊಂದಿತ್ತು. ತಮಿಳ್ನಾಡಿನಲ್ಲಿ ಅಭ್ಯಾಸಕ್ಕಾಗಿ ತಟ್ಟುಮಣೆ ಚಾಲ್ತಿಯಲ್ಲಿದ್ದರೆ; ಮೈಸೂರು ರಾಜ್ಯದಲ್ಲಿ ತಾಳಗಳ ಬಳಕೆಯೇ ಹೆಚ್ಚು. ಅಲರಿಪುವಿನಂತಹ ಆರಂಭಿಕ ನೃತ್ತಬಂಧಗಳು ಮೈಸೂರು ರಾಜ್ಯದಲ್ಲಿ ವ್ಯಾಪಕವಾಗಿರಲಿಲ್ಲ. ಘನವಿದ್ವಾಂಸರ, ಪಂಡಿತರ ಸಮೂಹವೇ ನೆರೆಯುತ್ತಿದ್ದುದರಿಂದ ಸಂಸ್ಕೃತ, ತೆಲುಗು, ಕನ್ನಡದ ಕೃತಿಗಳಿಗೆ ಹೆಚ್ಚಿನ ಆದ್ಯತೆಯಿರುತ್ತಿತ್ತು.

ಈಗ್ಗೆ 2-3 ಶತಮಾನಗಳ ಹಿಂದಕ್ಕೆ ಗಮನಿಸಿದರೂ ಸಾಕು; ನೃತ್ಯಮೇಳದವರು ಬರದೆ ಯಾವುದೇ ಮಂಗಳಕಾರ್ಯಗಳೂ ನಡೆಯುತ್ತಿರಲಿಲ್ಲವೆಂದರೆ ಒಮ್ಮೆ ಊಹಿಸಿ! ಅದರಲ್ಲೂ ದೇವಾಲಯಗಳಲ್ಲಿ ನರ್ತಿಸುತ್ತಿದ್ದ ದೇವದಾಸಿಯರ ಮೇಳ; ಆಸ್ಥಾನ ನರ್ತಕರದ್ದೇ ಆದ ಭೋಗಮೇಳ; ಎರಡು ವೃಂದದವರು ಒಂದೇ ಬಾರಿಗೆ ಪ್ರದರ್ಶಿಸುವ ಜೋಡಿಮೇಳ; ಅರಮನೆಯೊಳಗೆ ನಡೆಯುತ್ತಿದ್ದ ಕಟ್ಟಳೆ ಪೂಜೆ; ಮೂರು ಪೇಟೆಯ ಯಜಮಾನರು, ವಿದ್ವಾಂಸರು, ಶ್ರೇಷ್ಠಿಗಳು ಸೇರುವ ಮದುವೆ, ವಿಶೇಷ ಸಭೆ, ಸತ್ಕಾರಸಮಾರಂಭ, ರಾಮನವಮಿ, ನವರಾತ್ರಿ ಉತ್ಸವಗಳಲ್ಲಿ ನರ್ತಿಸುತ್ತಿದ್ದ ತಾಫೆಮೇಳಗಳಲ್ಲಿ ಅಭಿನಯ ವಿಸ್ತಾರ ವಿಶೇಷವಾಗಿ ತೋರಲ್ಪಡುತ್ತಿದ್ದವು.

ಭವ್ಯವಾದ ಸಾಮ್ರಾಜ್ಯಗಳ ಆಳ್ವಿಕೆಯ ಕಾಲಕ್ಕೆ ಕರ್ನಾಟಕದಲ್ಲಿ ಎಷ್ಟೋ ದೇವದಾಸಿಯರು ಆಲಯದಲ್ಲಿ ನರ್ತಿಸುತ್ತಿದ್ದುದ್ದನ್ನು ಬಿಟ್ಟರೆ ಬೇರೆಲ್ಲಿಯೂ ನೃತ್ಯ ಪ್ರದರ್ಶನಗಳನ್ನು ನೀಡುತ್ತಿರಲಿಲ್ಲ. ಹೀಗಾಗಿ ರಾಜನಾದರೂ ಸಹ ಇಂತಹವರ ನೃತ್ಯ ನೋಡಲು ದೇವಸ್ಥಾನಗಳಿಗೇ ಬರಬೇಕಿತ್ತು. ದೇವರ ಎದುರಿಗೆ ಮರ್ಯಾದೆ ಸಲ್ಲಿಸುವ ಸಲುವಾಗಿ ಮೇಳವು ನಿಂತು ನುಡಿಸುವ, ನರ್ತಿಸುವ ಕ್ರಮವಿತ್ತು. ಹಿಮ್ಮೇಳವೂ ಕೂಡ ಜರಿಪೇಟ, ನಿಲುವಂಗಿ, ಕಚ್ಚೆಪಂಚೆ, ಶಾಲು, ಉತ್ತರೀಯ, ತಿಲಕಾದಿ ಸುವಸ್ತುಗಳಿಂದ ಭೂಷಿತರಾಗಬೇಕಿದ್ದದ್ದು ಅಂದಿನ ಕ್ರಮ.

ದೇವರ ಎದುರಿಗೇ ನೃತ್ಯವನ್ನು ಮಾಡುತ್ತಿದ್ದುದ್ದರಿಂದ ಇಂದಿನವರಂತೆ ಪ್ರತ್ಯೇಕವಾಗಿ ನಟರಾಜನನ್ನು ಬದಿಯಲ್ಲಿ ಇಡುವ ಪರಂಪರೆಯಿರಲಿಲ್ಲ. ಅಷ್ಟಾಗಿಯೂ ಕರ್ನಾಟಕದ ಯಾವ್ಯಾವ ದೇವಸ್ಥಾನಗಳಲ್ಲಿ ಯಾವ್ಯಾವ ಬಗೆಯಲ್ಲಿ ನೃತ್ಯನೇಮಗಳು ನಡೆಯುತ್ತಿತ್ತು ಎಂಬುದನ್ನು ತಿಳಿಸಲು ಸಾಕಷ್ಟು ಪುರಾವೆಗಳು ಲಭ್ಯವಿಲ್ಲ. ಆದರೆ ಮೈಸೂರು ಅರಸರ ಆಳ್ತನದ ಆಲಯಗಳಲ್ಲಿ ನರ್ತಕರಿಂದ ಅಷ್ಟದಿಕ್ಪಾಲಕರ ಆರಾಧನೆ ಅಥವಾ ನವಸಂಧಿ ಕೌತ್ವ, ಠಾಯ, ಅಷ್ಟಪದಿ, ಉಗಾಭೋಗ, ದಾಸರಪದಗಳು, ಸೂಳಾದಿ ಪ್ರಬಂಧ, ಶ್ಲೋಕಗಳ ನೃತ್ಯಗಳು ಜರುಗುತ್ತಿದ್ದವು.

ಭೋಗಮೇಳವೆಂದು ಕರೆಸಿಕೊಳ್ಳುತ್ತಿದ್ದ ಆಸ್ಥಾನ ನರ್ತಕರು ಚೂರ್ಣಿಕೆಗಳು, ಪ್ರಬಂಧಗಳು, ಸ್ವರಜತಿಗಳು, ಸ್ವರ ಪ್ರಬಂಧ, ಜತಿಸ್ವರ, ಸಪ್ತ ತಾಳೇಶ್ವರಿ ವರ್ಣ, ಕನ್ನಡ ಶೃಂಗಾರ ಜಾವಳಿಗಳು, ಪದಗಳು, ಚಂಪಕ ವೃತ್ತ, ಸೀಸ ಪದ್ಯಗಳು, ಶ್ಲೋಕಗಳು, ಅಷ್ಟಪದಿಗಳು, ಅಂಬಾ ಕೀರ್ತನೆ, ಚಾಂದ್‍ಖಾನ್ ಸಾಹೇಬರ ರಚನೆಯ ಠುಮ್ರಿ ಗಜಲ್‍ಗಳನ್ನು ನರ್ತಿಸುತ್ತಿದ್ದರು. ರಾಜರ ಗೌರವಾರ್ಥವಾಗಿ ಮೇಳದವರೆಲ್ಲರೂ ಸೂಕ್ತ ವಸ್ತ್ರಾಭರಣಭೂಷಿತರಾಗಿ ನಿಂತು ನುಡಿಸುವುದು, ನರ್ತಿಸುವುದು ಇಲ್ಲಿನ ಕ್ರಮ. ಸಾಮಾನ್ಯವಾಗಿ ಎಲ್ಲ ಮೇಳಗಳಲ್ಲೂ ವಾದ್ಯವೃಂದವು ಪರಂಪರಾನುಗತವಾಗಿ ಬಂದ ಹಿಮ್ಮೇಳದ ಪರಿಕಲ್ಪನೆಗಳಿಗನುಗುಣವಾಗಿ ನರ್ತಕಿಯ ಹಿಂದೆ ನಿಂತು ನೃತ್ಯಪೋಷಕವಾದ ಅಭಿವ್ಯಕ್ತಿಯನ್ನು ಕೊಡುತ್ತಿದ್ದ ಕ್ರಮವಿತ್ತೇ ಹೊರತು ‘ಪಕ್ಕ’ವಾದ್ಯದ ಪರಿಕಲ್ಪನೆ ಒದಗಿರಲಿಲ್ಲ. ಅಂತೆಯೇ ರುಕ್ಮಿಣೀದೇವಿ ರೂಢಿಸಿಕೊಂಡು ಬಂದ ರಂಗದಲ್ಲಿ ನಟರಾಜನನ್ನು ಬದಿಗೆ ಇರಿಸಿ ನಮಿಸುವ ಪರಿಕಲ್ಪನೆಯೂ ಇಲ್ಲಿ ಕಂಡುಬರಲಿಲ್ಲ.

ಹೊಳೆನರಸೀಪುರ ಜಯಮ್ಮ, ಚಂದ್ರವದನಮ್ಮ, ಆಕೆಯ ಮಗಳು ಜಯಮ್ಮ, ಲಕ್ಷ್ಮಮ್ಮ, ವ್ಯಾಸಮ್ಮರ ನೇತೃತ್ವದಲ್ಲಿ ಮೈಸೂರು ಅರಮನೆಯ 5 ನೃತ್ಯತಂಡಗಳಿದ್ದವು. ಕರ್ನಾಟಕ ಮೇಳ ಮತ್ತು ಹಿಂದೂಸ್ಥಾನಿ ಮೇಳಗಳೆಂಬ ಎರಡು ಬಗೆಯ ಮೇಳಗಳಿದ್ದು; ವ್ಯಾಸಮ್ಮ ಹಿಂದೂಸ್ಥಾನಿ ಮೇಳ ನಡೆಸುತ್ತಿದ್ದನ್ನು ಗಮನಿಸಿದರೆ ಮೇಳಗಳ ವ್ಯಾಪ್ತಿ ವಿಶಾಲವಾಗಿತ್ತೆನ್ನುವುದೂ ಅರಿವಾಗುತ್ತದೆ. ಸರದಿಯ ಪ್ರಕಾರ ಅರಮನೆಯ ಅಧಿಕಾರಿ ವರ್ಗದವರಿಂದ ಇವರ ನೃತ್ಯಗಳು ಏರ್ಪಾಡಾಗುತ್ತಿದ್ದವು. ವಿಶೇಷವಾದ ಹಬ್ಬದ ದಿನಗಳಂದು ನಡೆಯುವ ಕಟ್ಟಳೆಪೂಜೆಯಲ್ಲಿ ಸಲಾಮು(ಮುಜುರೆ) ಮಾಡಿ ಭಕ್ತಿಭಾವಪ್ರಧಾನವಾದ ನೃತ್ಯವನ್ನು ಮಾಡಿ ಅರ್ಚಕರು ಬೆಳಗಿದ ಮಂಗಳಾರತಿಯನ್ನು ನರ್ತಕಿಯರೂ ಮತ್ತೊಮ್ಮೆ ಬೆಳಗಿ ಮುಜುರೆ ಮಾಡಬೇಕಿತ್ತು. ಈ ಸಂದರ್ಭಗಳಲ್ಲಿ ನರ್ತಕಿ ಮತ್ತು ವೃಂದದವರು ರಾಣಿಯವರ ಆಗಮನಕ್ಕಿಂತ ಮುಂಚೆ ಬರುವುದು ಮತ್ತು ಅವರ ನಿರ್ಗಮನದ ನಂತರ ಹಿಂತಿರುಗುವುದು ಕ್ರಮ.

ಇದರ ಹೊರತಾಗಿಯೂ ವಿಶೇಷ ದರ್ಬಾರ್ ನಡೆಯುವ ದಿನಗಳಂದು ನಿರ್ದಿಷ್ಟವಾದ ಉಡುಪುಗಳನ್ನು ಧರಿಸಿ, ತಮಗೆಂದೇ ಕಾದಿರಿಸಿದ ನಿರ್ದಿಷ್ಟ ಜಾಗಗಳಲ್ಲಿ ಎಲ್ಲರಿಗೂ ಮುಂಚೆ ಸಜ್ಜಾಗಿ ಹೋಗಿ ನಿಂತು ಮುಜುರೆ ಮಾಡಿ ಬಹಳ ಶಿಸ್ತು, ಕ್ರಮಗಳಲ್ಲಿ (ಬೆನ್ನು ಹಾಕದೆ ನೃತ್ಯಮಾಡುವುದು ಇತ್ಯಾದಿ) ನರ್ತಿಸುವುದು ಶಕ್ಯವಾಗಿತ್ತು. ರಾಜರ ಅನುಮತಿಯ ತರುವಾಯ ನೃತ್ಯಾರಂಭ ಮಾಡಿ ಅವರ ಕಣ್ಸನ್ನೆಯನ್ನು ಅರಿತು ಕೊಟ್ಟ ಸೂಚನೆಯನುಸಾರ ನೃತ್ಯವನ್ನು ಕೊನೆಗೊಳಿಸಬೇಕಿತ್ತು. ದೀಪಾವಳಿಯ ಬಲಿಚಕ್ರವರ್ತಿ ದರ್ಬಾರು, ನವರಾತ್ರಿ ದರ್ಬಾರುಗಳು, ಗಣೇಶೋತ್ಸವ, ಗೌರಿಪೂಜೆ, ಕೃಷ್ಣಾಷ್ಟಮಿ, ಭೀಮನಮವಾಸ್ಯೆ, ರಾಜರ ವರ್ಧಂತಿಗಳು, ಚಾಮುಂಡಿಬೆಟ್ಟ, ಅರಸು ಮನೆತನದ ಮದುವೆ, ಸೀಮಂತ, ತೊಟ್ಟಿಲುಶಾಸ್ತ್ರ, ನಾಮಕರಣ ಉತ್ಸವಗಳು, ಅತಿಥಿಗಳ ಆಗಮನ ನರ್ತಕರಿಗೆ ವಿಶೇಷವಾದ ಕಾರ್ಯಕ್ರಮಗಳಾಗಿರುತ್ತಿದ್ದವು.

ಒಂದೊಂದು ಕಾರ್ಯಕ್ರಮಕ್ಕೂ ಅದರದೇ ಆದ ರೀತಿ-ರಿವಾಜುಗಳಿರುತ್ತಿದ್ದವು. ಉದಾ: ಈರ್ವರು ನರ್ತಕಿಯರು ಸ್ಪರ್ಧೆಯೋಪಾದಿಯಲ್ಲಿ ನರ್ತಿಸುವ ಜೋಡಿಮೇಳದ ಕಲ್ಪನೆಯೂ ವಿಶಿಷ್ಟ. ಒಂದೇ ರೀತಿಯಾಗಿ ಕಾಣುವ ಬೇರೆ ಬೇರೆ ಮೇಳಗಳ ಇಬ್ಬರು ಕಲಾವಿದೆಯರನ್ನು ಆರಿಸಿ ವಿಶೇಷವಾದ ದಿನಗಳಂದು ಇಲ್ಲವೇ ಅತಿಥಿಗಳ ಸಮ್ಮುಖ ದ್ವಂದ್ವವಾಗಿ ನರ್ತಿಸಲು ಅನುವು ಮಾಡಿಕೊಟ್ಟು ಆಸ್ವಾದಿಸಲಾಗುತ್ತಿತ್ತು. ಅಂತೆಯೇ ನೃತ್ಯಸ್ಪರ್ಧೆಯನ್ನು ಏರ್ಪಡಿಸಿದಾಗ ಅಭಿನಯ ಸಂಗೀತ ವಿಶಾರದರೂ, ಸಂಸ್ಕೃತಪಂಡಿತರೂ ತೀರ್ಪುಗಾರರಾಗಿರುತ್ತಿದ್ದರು. ಅವರ ಪೈಕಿ ಚಿಕ್ಕರಾಮರಾಯರು, ವಾಸುದೇವಾಚಾರ್ಯರು, ವೀಣೆ ವೆಂಕಟಗಿರಿಯಪ್ಪ ಹೆಸರುವಾಸಿ.

ನವರಾತ್ರಿ ದರ್ಬಾರುಗಳಲ್ಲಿ ಆಸ್ಥಾನ ಕಲಾವಿದರಷ್ಟೇ ಅಲ್ಲದೆ ಹೊರಗಿನ ಕಲಾವಿದರೂ, ವಿದ್ವಾಂಸರು ಭಾಗವಹಿಸಬಹುದಾದ್ದರಿಂದ ವೀಣೆ ಶೇಷಣ್ಣ, ಭಕ್ಷಿ ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ ಮುಂತಾದ ವರಿಷ್ಠರು ಕಲಾವಿದರನ್ನು ಮೋತಿಖಾನೆಯಲ್ಲಿ ಮೊದಲೇ ಪರೀಕ್ಷೆಗೆ ಒಳಪಡಿಸಿ ಆಯ್ಕೆ ಮಾಡುತ್ತಿದ್ದ ಕ್ರಮವಿತ್ತು. ಹೀಗೆ ಅಲ್ಲಿ ದೊರಕುವ ಆಸ್ಥಾನದ ಹೊರಗಿನ ಇತರ ತಾಫೆಯವರ ಹೆಸರುಗಳಲ್ಲಿ ರಮಾಮಣಿ, ಜಯಲಕ್ಷ್ಮಾಸಾನಿ, ಭವಾನಿಸಾನಿ, ವ್ಯಾಸಾಸಾನಿ, ಪುಟ್ಟದೇವಸಾನಿ, ಬಳ್ಳಾಪುರದ ಪುಟ್ಟಸಾನಿ, ಆದಿಲಕ್ಷ್ಮ್ಯಾಸಾನಿ, ನಟ್ಟುವನ್ನಾರ್ ಸುಬ್ರಹ್ಮಣ್ಯ ಅವರುಗಳ ಹೆಸರು ಕೇಳಿಬರುತ್ತದೆ.

ಸದಿರ್ ನೃತ್ಯಪ್ರದ್ಧತಿಯು ಕರ್ನಾಟಕದಲ್ಲಿ ಕಂಡುಬಂದಷ್ಟು ವೈವಿಧ್ಯಮಯ ಮುಖಗಳನ್ನು ಬೇರೆಲ್ಲಿಯೂ ಕಂಡಿಲ್ಲ. ಕರ್ನಾಟಕದ್ದೇ ಆದ ಭರತನಾಟ್ಯದ ಶೈಲಿಗಳೆಂದು ನಾಲ್ಕು ಊರುಗಳಲ್ಲಿ ನೆಲೆನಿಂತವರ ಶೈಲಿಗಳ ಮೇಲೆ ನೃತ್ಯವಿಶೇಷಗಳು ಬೆಳೆದು ತನ್ನದೇ ಆದ ತಲೆಮಾರುಗಳನ್ನು, ಸಂಪ್ರದಾಯವನ್ನೂ ಕಂಡಿವೆ. ವಿಪರ್ಯಾಸವೆಂದರೆ ಅವುಗಳೊಳಗೂ ಪರವೂರಿನ ಕಲಾವಿದರು ಬೀರಿರುವ ಪ್ರಭಾವ ಗಾಢವಾಗಿದ್ದು ಅವುಗಳ ಮೂಲದ ವಿವೇಚನೆ ಚರ್ಚಾಸ್ಪದವಾಗಿದೆ.

ಇವೆಲ್ಲವೂ ಮತ್ತೊಮ್ಮೆ ನೆನಪಿಗೆ ಬಂದದ್ದು ಮೈಸೂರಿನ ಮಹಾರಾಜರ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ದೈವಾಧೀನರಾದ ಕ್ಷಣದಲ್ಲಿ. ಶ್ರೀಕಂಠದತ್ತರ ತಂದೆಯ ಕಾಲಕ್ಕೇ ಈ ವೈಭವಗಳು ಕರಗಿ ಇಂದಿನ ತಲೆಮಾರಿನ ಕಲ್ಪನೆಗೂ ಸಿಲುಕದಂತೆ ಮರೆಯಾಯಿತೇನೋ ನಿಜ! ಆದರೆ ಈ ಕಾಲದ ಹೊತ್ತಿಗೆ ಮತ್ತದೆಷ್ಟು ಸ್ಥಿತ್ಯಂತರಗಳು ನಮ್ಮನ್ನು ಎದುರು ನೋಡುತ್ತಿರುತ್ತವೆ ಎಂಬುದನ್ನು ನೆನೆದಾಗಲೆಲ್ಲಾ ಇತಿಹಾಸ-ಭವಿಷ್ಯದ ನಡುವಿನ ವರ್ತಮಾನವನ್ನು ಶ್ರೀಮಂತಗೊಳಿಸಿಕೊಳ್ಳಬೇಕಾದ ಅನಿವಾರ್ಯತೆಗಳು ಕಾಡುತ್ತಿರುವುದಂತೂ ನಿಜ.

ಪ್ರೀತಿಯಿಂದ
ಸಂಪಾದಕರು

Leave a Reply

*

code