ಸಾರ್ಥಕವಾದ ‘ನಾಟ್ಯಚಿಂತನ’ವೆಂಬ ನಾಟ್ಯಶಾಸ್ತ್ರ ಕಥಾ-ಕೊರಿಯೋಗ್ರಫಿ ಕಾರ್ಯಾಗಾರ

Posted On: Wednesday, May 28th, 2014
1 Star2 Stars3 Stars4 Stars5 Stars (No Ratings Yet)
Loading...

Author: -ವಿಪ್ರಭ, ಪುತ್ತೂರು

ಭರತನ ನಾಟ್ಯಶಾಸ್ತ್ರ- ಎಲ್ಲ ಕಲೆಗಳ ತಾಯಿಬೇರು. ಆದರೆ ಭರತನ ನಾಟ್ಯಶಾಸ್ತ್ರದ ಅರಿವನ್ನು ಹೆಚ್ಚಿಸುವ ತರಗತಿಗಳು, ಕಾರ್ಯಾಗಾರಗಳ ಸಂಖ್ಯೆ ಇಂದಿಗೆ ನೃತ್ಯಕ್ಷೇತ್ರದಲ್ಲಿ ಬಹಳಷ್ಟು ವಿರಳ. ಭರತನಾಟ್ಯಾದಿ ನೃತ್ಯತರಗತಿಗಳಲ್ಲೂ ನಾಟ್ಯಶಾಸ್ತ್ರದ ಪರಿಚಯ ಅಷ್ಟಾಗಿ ಇರುವುದಿಲ್ಲ. ಕಾರಣ ಇಂದು ನಾವು ಕಾಣುತ್ತಿರುವ ಶಾಸ್ತ್ರೀಯನೃತ್ಯಗಳೆನಿಸಿಕೊಂಡ ದೇಶೀಸಾಂಪ್ರದಾಯಿಕನೃತ್ಯಗಳು (ಭರತನಾಟ್ಯ, ಕೂಚಿಪುಡಿ ಇತ್ಯಾದಿ) ಮೂಲತಃ ನಾಟ್ಯಶಾಸ್ತ್ರದ ಮೂಲಾಂಶಗಳತ್ತ ಯೋಚಿಸದೆ ಬೇರೆ ಬೇರೆ ಶಾಸ್ತ್ರಗ್ರಂಥಗಳ ಆಧಾರದಲ್ಲಿ ನೆಲೆ ಕಂಡುಕೊಂಡಿವೆ. ಹೀಗಿರುವಾಗ ನಾಟ್ಯಶಾಸ್ತ್ರದಲ್ಲಿ ಹೇಳಲಾದ ಅಂಶಗಳ ಥಿಯರಿಯನ್ನೂ ಕಲಿತು ಪ್ರಾಯೋಗಿಕವಾಗಿ ಅದನ್ನು ನರ್ತನಕ್ಕೆ ಬಳಸಿಕೊಳ್ಳುವ ದೃಷ್ಟಿಯುಳ್ಳ ಪ್ರದರ್ಶನ/ಕಾರ್ಯಾಗಾರಗಳು ನೃತ್ಯಕ್ಷೇತ್ರದಲ್ಲಿ ನಡೆಯುವುದು ಎಲ್ಲಿಂದ? ಅದೂ ಚಿಣ್ಣರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಏಕಕಾಲಕ್ಕೇ ಹೊಂದುವಂತೆ ಉಪಯೋಗವಾಗುವ ಅನುಕೂಲವಿರುವಂತದ್ದು ಎಲ್ಲಿದೆ?- ಈ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ಕಂಡುಕೊಂಡದ್ದು ಪುತ್ತೂರಿನಲ್ಲಿ ಎಪ್ರಿಲ್ 20ರಿಂದ 26 ರವರೆಗೆ ನಡೆದ ‘ನಾಟ್ಯಚಿಂತನ’ ಎಂಬ ಕಾರ್ಯಾಗಾರ. ಇದನ್ನು ನೂಪುರ ಭ್ರಮರಿ ಟ್ರಸ್ಟ್ ಹಾಗೂ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು – ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು.

Natya chintana photo 1 Natyachintana photo 5 releasing of Noopura Bhramari special Journal

ಪುತ್ತೂರಿನ ಮುಳಿಯ ಸಭಾಂಗಣದಲ್ಲಿ ನಡೆದ “ನಾಟ್ಯ-ಚಿಂತನ” ಎಂಬ ಕಾರ್ಯಾಗಾರವನ್ನು ಪುತ್ತೂರು ಜೇಸಿರೆಟ್ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಉದ್ಘಾಟಿಸಿದ್ದರು. ಇದೇ ಸಂದರ್ಭ ಭಾರತದಲ್ಲೇ ಏಕೈಕ ವiತ್ತು ಪ್ರಪ್ರಥಮ ಸಂಶೋಧನಾ ಸಂಚಿಕೆಯೆಂಬ ಮನ್ನಣೆ ಗಳಿಸಿರುವ ನೂಪುರ ಭ್ರಮರಿಯ ವಾರ್ಷಿಕ ವಿಶೇಷಾಂಕ-ಸಂಶೋಧನ ಸಂಚಿಕೆಯನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.

Natyachintana photo 6 krishna naryayana speaking

ನಾಟ್ಯಚಿಂತನ- ಕಾರ್ಯಾಗಾರದ ಆಯೋಜನೆಯೂ ಕರಾವಳಿಯ ನೃತ್ಯಕ್ಷೇತ್ರದ ಪಾಲಿಗೆ ಪ್ರಪ್ರಥಮವೆನಿಸುವಷ್ಟು ಹೊಸದು, ಅಷ್ಟೇ ಅಲ್ಲ, ಕಾರ್ಯಾಗಾರದ ಫಲಶ್ರುತಿ, ಅದರಿಂದ ಒಡಮೂಡಿದ ಕಲ್ಪನೆಗಳೂ ಕೂಡಾ ಕಲಾಕ್ಷೇತ್ರದ ಪಾಲಿಗೆ ಹೊಚ್ಚಹೊಸತು. ಇಲ್ಲಿ ನಾಟ್ಯದ ಕುರಿತಾಗಿ ಅರಿವು ಮೂಡಿಸುವ ಹೆಜ್ಜೆಗಳಲ್ಲೆದರಲ್ಲೂ ನಾವೀನ್ಯವಿತ್ತು, ನಾಟ್ಯಶಾಸ್ತ್ರವನ್ನಾಧರಿಸಿ ಹೊಸತೊಂದು ಸಾಹಿತ್ಯ-ಕಾವ್ಯವೇ ನಿರ್ಮಾಣವಾಗಿತ್ತು.

ನೃತ್ಯನಿರ್ದೇಶನದ ಸಂವಿಧಾನದಲ್ಲಿ ಕ್ರಾಂತಿಯಿದ್ದಿತ್ತು. ಅದನ್ನು ಸಮರ್ಥವಾಗಿ ಭವಿಷ್ಯದ ಪೀಳಿಗೆಗೆ ಕೊಡುವಲ್ಲಿ ಕ್ರಮಬದ್ಧವಾದ ಕಾರ್ಯಕ್ರಮ-ನಿರ್ದೇಶನದ ಯೋಜನೆಯಿದ್ದಿತ್ತು. ಈ ನಿಟ್ಟಿನಲ್ಲಿ ನೂಪುರ ಭ್ರಮರಿಯ ನಿರ್ದೇಶಕಿ ಮನೋರಮಾ ಬಿ.ಎನ್ ಮತ್ತು ಶ್ರೀಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ಮತ್ತು ಬಳಗ ಸದಾ ಅಭಿನಂದನಾರ್ಹರು.
ಸಾಮಾನ್ಯವಾಗಿ ನೃತ್ಯಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ನೃತ್ಯವನ್ನೋ/ನೃತ್ಯಬಂಧಗಳನ್ನೋ ಪಾಠ ಮಾಡಿ ತಾವು ಕಲಿತ/ನಿರ್ದೇಶಿಸಿದ ವಿಷಯಗಳನ್ನೇ ಅಭ್ಯರ್ಥಿಗಳಿಂದ ಮಾಡಿಸುತ್ತಾರೆ.

Natyachintana photo 7 Natyachintana photo 8

ಆದರೆ ಈ ಕಾರ್ಯಾಗಾರದ ಸ್ವರೂಪವೇ ಹೊಸತು. ಇಲ್ಲಿ ನಿತ್ಯವೂ ನಾಟ್ಯಶಾಸ್ತ್ರವನ್ನಾಧರಿಸಿ ಒಂದೂವರೆ ಗಂಟೆಯ ಕಥಾನಿರೂಪಣೆ/ಉಪನ್ಯಾಸ ತರಗತಿಯ ನಂತರ ಸ್ವತಃ ಅಭ್ಯರ್ಥಿ/ವಿದ್ಯಾರ್ಥಿಗಳಿಂದಲೇ ಕೊರಿಯೋಗ್ರಫಿ ಮಾಡಿಸಲಾಗಿದೆ. ಈ ಸಂಬಂಧವಾಗಿ ಅಭ್ಯರ್ಥಿಗಳಿಗೆ ನಿತ್ಯವೂ ಬೇರೆ ಬೇರೆ ಬಗೆಯ ಕೊರಿಯೋಗ್ರಫಿ ವಿಧಾನಗಳ ಬಗ್ಗೆ, ಅದಕ್ಕೆ ಪೂರಕವಾದ ಕಥೆ ಇತ್ಯಾದಿ ಅಂಶಗಳ ಬಗ್ಗೆ ನಿರ್ದೇಶನ ನೀಡಲಾಗಿದೆ. ಅಭ್ಯರ್ಥಿಗಳನ್ನು ವಯೋಮಾನ, ಕಾರ್ಯಕ್ಷಮತೆ, ಆಸಕ್ತಿಯ ಮತ್ತು ಕಲಿಕೆಯ ಮಟ್ಟದ ಆಧಾರದ ಮೇಲೆ ವಿಭಾಗ ಮಾಡಿ ಹೊಸ ಹೊಸ ಅಂಶಗಳತ್ತ ಅವರಿಂದಲೇ ನೃತ್ಯ/ನೃತ್ತವನ್ನು ಸಂಯೋಜಿಸಲಾಗಿದೆ.

Natyachintana photo 2 dance recital by studetns of workshop  Natyachintana photo 4

ಇದಕ್ಕೆ ಪೂರಕವಾಗುವ ಸಾಹಿತ್ಯವನ್ನು ಬರೆದ ಮನೋರಮಾ ಬಿ.ಎನ್‍ರವರ ಕಥನಕಾವ್ಯಕಲ್ಪನೆ ಕಾರ್ಯಾಗಾರದ ಮಟ್ಟಿಗಷ್ಟೇ ಸೀಮಿತವಾಗಿಲ್ಲ; ಬದಲಾಗಿ ನಾಟ್ಯಶಾಸ್ತ್ರದ ಕಥಾವಾಙ್ಮಯವನ್ನು ಸರಳವಾಗಿ ಕನ್ನಡಭಾಷೆಯಲ್ಲಿ ಕಲಾವಿದರಿಗೆ ಕೊಡುವಲ್ಲಿ ಮಹತ್ತ್ವದ ಹೆಜ್ಜೆಯನ್ನಿಟ್ಟಿದೆ. ಆ ಮೂಲಕವಾಗಿ ಇದುವರೆಗೆ ಕಲಾಕ್ಷೇತ್ರದಲ್ಲಿ ಅಲಭ್ಯವಿದ್ದ ನಾಟ್ಯಶಾಸ್ತ್ರವನ್ನಾಧರಿಸಿದ ಕನ್ನಡ ಕಾವ್ಯದ ಕೊರತೆಯನ್ನು ನೀಗಿಸಿ ಅಭಿನಯಕ್ಕೆ ಒಗ್ಗುವ ಸಾಹಿತ್ಯವನ್ನು ಕೊಟ್ಟ ಕಿರ್ತಿ ಅವರದ್ದು. ಅಂತೆಯೇ ಅದಕ್ಕೆ ಸೂಕ್ತವಾದ ಜತಿ/ನಡೆಯನ್ನು ವಿದ್ವಾನ್ ದೀಪಕ್ ಕುಮಾರ್, ಸಂಗೀತ-ಸ್ವರಕಲ್ಪನೆಯನ್ನು ವಿದುಷಿ ಪ್ರೀತಿಕಲಾ ದೀಪಕ್ ಕುಮಾರ್ ಅವರು ಅಭ್ಯರ್ಥಿಗಳ ಆಯ್ಕೆಗನುಸಾರವಾಗಿ ಆಶುವಾಗಿ ನೀಡಿದ್ದಾರೆ. ಇದು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಎರಡೂ ಸಂಸ್ಥೆಯ ಕಲಾವಿದರ ಪ್ರತಿಭೆಗೆ ನಿದರ್ಶನ.

Natyachintana photo 3 dance recital by studetns of workshop1

ನಾಟ್ಯಶಾಸ್ತ್ರದ ಆಂಗಿಕ ವಿನ್ಯಾಸಗಳ ಉಪನ್ಯಾಸ/ಪ್ರಾತ್ಯಕ್ಷಿಕೆ
ಈ ಒಂದು ವಾರದ ಕಾರ್ಯಕ್ರಮಕ್ಕೆ ಮುನ್ನುಡಿಯಾಗಿ ಬೆಂಗಳೂರಿನ ಹೆಸರಾಂತ ಕಲಾವಿದೆ, ಕರಣಾಂಗಹರವನ್ನು ಕಲಿತು ಭರತನಾಟ್ಯದ ಆಂಗಿಕ-ಸಾತ್ತ್ವಿಕ ಸಮನ್ವಯತೆಯ ಮೇಲೆ ಡಾಕ್ಟರೇಟ್ ಪಡೆದ ಕರ್ನಾಟಕದ ಮೊದಲ ಸಂಶೋಧಕಿ, ಗುರು, ಬೆಂಗಳೂರು ಜೈನ್ ಯುನಿವರ್ಸಿಟಿ ಕಾಲೇಜಿನ ಡಾ.ಶೋಭಾ ಶಶಿಕುಮಾರ್ ಅವರ ನೇತೃತ್ವದಲ್ಲಿ ಉಪನ್ಯಾಸ ಕಾರ್ಯಾಗಾರ ಮತ್ತು ವಿಶೇಷವಾದ ಭರತನೃತ್ಯ ಕಾರ್ಯಕ್ರಮವು ಉದ್ಘಾಟನಾದಿನದಂದು ಜರುಗಿತ್ತು.

ನಾಟ್ಯಶಾಸ್ತ್ರ ನೃತ್ತಹಸ್ತಪ್ರಕಾರಗಳನ್ನು ಸ್ವತಃ ಅಭಿನಯಿಸಿ ತೋರಿಸುವುದರೊಂದಿಗೆ ತಮ್ಮ ಶಿಷ್ಯಂದಿರಾದ ಕು.ಆರತಿ ಹಾಗೂ ಶ್ರೀಮತಿ ಮೇಘಾಕೃಷ್ಣರವರ ಜೊತೆಗೆ ನಾಟ್ಯಶಾಸ್ತ್ರದ ಚಾರಿ, ಅಂಗವಿನ್ಯಾಸ, ಕರಣ ಮುಂತಾದ ಆಂಗಿಕ ವಿನ್ಯಾಸವನ್ನು ನೃತ್ತ-ನೃತ್ಯಬಂಧಗಳ ಮೂಲಕವೂ ಕಾಣಿಸಿಕೊಟ್ಟರು. ಇದು ಕಾರ್ಯಾಗಾರದ ಯಾತ್ರೆಗೆ ದಿಕ್ಸೂಚಿಯಾಗಿಯೂ, ಮಕ್ಕಳಿಗೆ ಅರಿವಿನ ಕಿರಣವಾಗಿಯೂ ತೋರಿಬಂದಿತ್ತು.
ಈ ಸಂದರ್ಭ ಡಾ.ಶೋಭಾ ಅವರು ನೀಡಿದ ಉಪನ್ಯಾಸವನ್ನು ಸಂದರ್ಶನ ರೂಪದಲ್ಲಿ ತುಣುಕುಗಳನ್ನಾಗಿ ಮಾಡಿದ್ದು ಅದು ಹೀಗಿದೆ…

• ಭರತನಾಟ್ಯಕ್ಕೂ ಭರತನ ನಾಟ್ಯಶಾಸ್ತ್ರಕ್ಕೂ ಸಂಬಂಧ ಇದೆಯೇ? ಎರಡೂ ಒಂದೇಯೇ?
ಖಂಡಿತಾ ಇವೆರಡೂ ಒಂದೇ ಅಲ್ಲ. ಭರತನ ನಾಟ್ಯಶಾಸ್ತ್ರದ ಹಾದಿಯನ್ನು ನಾವು ಮಾರ್ಗ ಎನ್ನುತ್ತೇವೆ. ಭರತನಾಟ್ಯದ ಹಾದಿ ದೇಶೀ. ಸದಿರ್ ಎನ್ನುವ ನೃತ್ಯಪರಂಪರೆ ಅವನತಿಯ ಸ್ಥಾನದಲ್ಲಿದ್ದಾಗ ರುಕ್ಮಿಣೀ ದೇವಿ ಅರುಂಡೇಲ್, ಕೃಷ್ಣ ಅಯ್ಯರ್ ನಂತಹ ಮಹಾನುಭಾವರು ಅದಕ್ಕೆ ಪುನರುತ್ಥಾನ ನೀಡಲು ಕೊಟ್ಟ ಹೆಸರು ಭರತನಾಟ್ಯ. ಆದರೆ ನಾಟ್ಯಶಾಸ್ತ್ರದ ವಿಚಾರಕ್ಕೂ, ಭರತನಾಟ್ಯ ಅಳವಡಿಸಿಕೊಂಡ ಹಾದಿಗೂ ಸಾಕಷ್ಟು ವ್ಯತ್ಯಾಸವಿದೆ. ಆದರೆ ಎಲ್ಲರಲ್ಲೂ ಅವೆರಡೂ ಒಂದೇ ಎಂದು ಭ್ರಮೆ, ತಪ್ಪು ಕಲ್ಪನೆ ಮುಡಿದೆ.

ಆದರೊಂದು ವಿಷಯ- ಭರತನಾಟ್ಯದ ಎಷ್ಟೋ ಹೆಜ್ಜೆಗಾರಿಕೆ ಅಂದರೆ ಅಡವುಗಳಿಗೆ ನಾಟ್ಯಶಾಸ್ತ್ರ ಸ್ಫೂರ್ತಿ ಕೊಟ್ಟಿದೆ. ಹೀಗಿರುವಾಗ ಶಾಸ್ತ್ರ ನೀಡಿರುವ ವಿಜ್ಞಾನವನ್ನು ಮರೆಯದೆ ಅಳವಡಿಸಿಕೊಂಡರೆ ನೃತ್ಯದ ದಾರಿ ಸೊಗಸಾಗುತ್ತದೆ. ಭರತನ ನಾಟ್ಯಶಾಸ್ತ್ರದ ಅರಿಯುವಿಕೆಯಿಂದ ಆಂಗಿಕ ಅಭಿನಯದ ವಿಸ್ತಾರವನ್ನು ಹೆಚ್ಚು ಅರಗಿಸಿಕೊಳ್ಳಲು ಸಾಧ್ಯ, ನೃತ್ಯಕ್ಕೆ ಬೇಕಾಗುವ ಹೆಚ್ಚಿನ ಎಲ್ಲಾ ವೈವಿಧ್ಯವೂ ನಾಟ್ಯಶಾಸ್ತ್ರದಲ್ಲಿದೆ.

• ಸಾಮಾನ್ಯವಾಗಿ ನೃತ್ಯಕಲಿಯುವವರಿಗೆ ರಂಗದ ಮೇಲಿನ ಮೋಹ ಸಹಜ. ಆದರೆ ನೃತ್ಯಸೌಂದರ್ಯವನ್ನು ಮಕ್ಕಳು/ಕಲಾವಿದರು ಕಂಡುಕೊಳ್ಳುವ ಬಗೆ ಹೇಗೆ? ನಾಟ್ಯಶಾಸ್ತ್ರ ಎಷ್ಟರಮಟ್ಟಿಗೆ ಸಹಕಾರ ನೀಡುತ್ತದೆ?
‘ಪ್ರತಿಯೊಬ್ಬ ವಿದ್ಯಾರ್ಥಿಯೂ ನೃತ್ಯತರಗತಿಗೆ ಯಾಕೆ ಹೋಗುತ್ತಿದ್ದೇವೆ, ಇಷ್ಟವಾಗುವುದಾದರೆ ಹೇಗೆ ಎಂದು ಅರ್ಥ ಮಾಡಿಕೊಂಡರೆ ನೃತ್ಯದ ಎಲ್ಲಾ ಸೌಂದರ್ಯದ ಪರಿಭಾಷೆಯೂ ಅರ್ಥವಾಗುತ್ತಾ ಹೋಗುತ್ತದೆ. ಅಭಿನಯವೆಂಬುದು ಮುಖಕ್ಕೆ ಮಾತ್ರ ಸೀಮಿತವಲ್ಲ, ದೇಹಭಾಷೆಗೆ ಅದು ಪೂರಕವಾಗಿರಬೇಕು.

ಭಗವಂತನನ್ನು ಪುರಂದರದಾಸರಂತೆ ಕರೆದ ತಕ್ಷಣ ಕಾಣಲಾಗುವುದಿಲ್ಲ. ಆದರೆ ಕಲೆಯ ಮೂಲಕ, ನೃತ್ಯಸಾಹಿತ್ಯದ ಮೂಲಕ ನಿತ್ಯವೂ ಅನುಭವದಿಂದ ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ. ಆದರೆ ಭಗವಂತನನ್ನು ನಾವು ಆಂಗಿಕಾಭಿನಯದಲ್ಲಿ ಹಿಡಿತದಲ್ಲಿಟ್ಟುಕೊಂಡು ಆತ ನಮ್ಮೊಳಗೆ ಇಳಿಯುವುದನ್ನು ತಡೆಯುತ್ತೇವೆ. ದೇಹವನ್ನು ಬಿಗಿ ಮಾಡಿಕೊಳ್ಳುತ್ತೇವೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಏನೆಂದರೆ, ದೇಹವನ್ನು ನಾವೆಷ್ಟು ಬಗ್ಗಿಸಿಕೊಳ್ಳುತ್ತೇವೆಯೋ, ಮೃದುವಾಗಿಸುತ್ತೇವೆಯೋ, ಸರಳವಾಗಿಸುತ್ತೇವೆಯೋ ಅಲ್ಲಿ ಸಹಜವಾಗಿ ಸೌಂದರ್ಯ ತೋರಿಬರುತ್ತದೆ.

ಇದಕ್ಕೆ ನಾಟ್ಯಶಾಸ್ತ್ರದ ಆಂಗಿಕಾದಿ ಅಭಿನಯ ಉತ್ತಮ ಅನುಕೂಲ ದೊರಕಿಸಿಕೊಡುತ್ತದೆ. ಔಚಿತ್ಯಪೂರ್ಣವಾಗಿ ಅಡವುಗಳನ್ನು ಹಾಕಿಕೊಂಡರೆ ಒಳ್ಳೆಯ ವಿಶ್ರಾಂತಿಯೂ ಸಿಗುತ್ತದೆ. ಅಂತೆಯೇ ನಾಟ್ಯಶಾಸ್ತ್ರದ ಚಾರಿಗಳನ್ನು ಅಡವುಗಳೊಂದಿಗೆ ಹೊಂದಿಸಿಕೊಂಡರೆ ಹದ ಬರುತ್ತದೆ, ದೇಹ ತನ್ನಿಂತಾನೇ ಮೃದುವಾಗುತ್ತದೆ, ಭಾರ ಕಳೆದು ಸುಂದರವಾಗುತ್ತದೆ. ಆದರೆ ಬದಲಾದ ಕಾಲಘಟ್ಟಕ್ಕೆ ನಾವು ತಪ್ಪುಹಾದಿ ತುಳಿದಿದ್ದೇವೆ. ಫಲವಾಗಿ ನೃತ್ಯಮಾಡುವವರಿಗೂ, ನೋಡುವವರಿಗೂ ಕಷ್ಟವಾಗುತ್ತದೆ, ಹಿಂಸೆಯಾಗುತ್ತದೆ, ಭಾರವಾಗುತ್ತದೆ.

• ಅಭಿನಯ ಮುಖಕ್ಕೆ ಸೀಮಿತವಲ್ಲಎಂದಿರಿ. ಹಾಗಾದರೆ ಅಭಿನಯದ ಅಭ್ಯಾಸ ಹೇಗಿರಬೇಕು?
ಎಲ್ಲದಕ್ಕೂ ಅದರದ್ದೇ ಅದ ಸೊಗಸಿದೆ. ಆದರೆ ವಿನಿಯೋಗದಲ್ಲಿ ಮಾತ್ರ ಔಚಿತ್ಯ ಬೇಕು. ಅಂಗಶುದ್ಧಿಯ ರೇಖೆಗಳು, ಗಣಿತೀಯ ವಿನ್ಯಾಸಗಳು ಒಳ್ಳೆಯವೆ. ಅವುಗಳೆಲ್ಲಾ ಅಕ್ಷರಗಳಿದ್ದಂತೆ. ಆದರೆ ಅದು ವಾಕ್ಯವಾಗುವಾಗ ಅದರಲ್ಲಿ ಒಂದು ಹದ ಬೇಕಾಗುತ್ತದೆ. ನಮ್ಮ  ಪ್ರಜ್ಞೆಯನ್ನು ಬೆಳೆಸಿಕೊಂಡಾಗ ವಿಶೇಷವಾದ ಚೆಲುವು ಸಿಗುತ್ತದೆ. ಅದನ್ನು ಬಿಟ್ಟು ಅಕ್ಷರಾಕ್ಷರಕ್ಕೂ ದೋಷಗಳನ್ನು ಕಂಡುಹಿಡಿಯುವುದಾದರೆ ಅದು ನಮ್ಮ ದೋಷ.

Natyachintana photo 10

ಯಾವುದೇ ಕೃತಿಯಲ್ಲಿ ಬರುವ ಅಮೂರ್ತಶಕ್ತಿ ಅಥವಾ ದೇವರು ಪೂರ್ಣವಾಗಿ ನಮ್ಮ ದೇಹದೊಳಗೆ ಇಳೀಯಬೇಕೆಂದರೆ ಕಟ್ಟುಪಾಡುಗಳನ್ನು ಬಿಟ್ಟು ಕಲಾವಿದರು ದೇಹವನ್ನು ತಮ್ಮದೇ ಹಿಡಿತದಲ್ಲಿಟ್ಟುಕೊಳ್ಳಬೇಕು. ದೇಹ ನಮ್ಮ ದಾಸನಾಗಬೇಕು. ನಾವು ನುಡಿಸಿದಂತೆ ಅದು ನುಡಿಯಬೇಕು. ನಮ್ಮ ಆಂಗಿಕವು ಪಾತ್ರದ ತತ್ತ್ವಕ್ಕೆ, ಭಾವನೆಗೆ ಶರಣಾಗಬೇಕು. ದೇವರನ್ನು ನೃತ್ಯದ ಸಾಹಿತ್ಯದಲ್ಲಿ ಕರೆದು ಪಾತ್ರವಾಗಿ ಶರಣಾಗದೇ ಹೋದರೆ ಭಗವಂತ ನಮ್ಮೊಳಗೆ ಇಳಿಯಲಾರ. ಆದರೆ ಇದಕ್ಕೆ ಸಾಧನೆ, ಗಮನ, ಮುಖ್ಯ.

ಕೈಕೈಹಿಡಿದು ಕುಣಿದ ಮಾತ್ರಕ್ಕೆ ಅದು ನೃತ್ಯವಾಗುವುದಿಲ್ಲ. ಬದಲಾಗಿ ಪಾತ್ರದ ಆಂತರ್ಯಕ್ಕೆ ಇಳಿಯಬೇಕು. ಆದರೆ ಅಲ್ಲಿಗೇ ಅಭಿನಯವನ್ನು ಮಿತಿಗೊಳಿಸಿಕೊಳ್ಳಬಾರದು. ಮಿತಿಗೊಳಿಸಿದರೆ ನೃತ್ಯ ಅಪೂರ್ಣವಾಗುತ್ತದೆ. ರಾಧೆಯ ಅಂಗಶುದ್ಧಿಯ ವ್ಯಾಖ್ಯಾನಕ್ಕೂ, ಕೃಷ್ಣನ ಅಂಗಶುದ್ಧಿಗೂ ವ್ಯತ್ಯಾಸವಿದೆ. ರಾಧೆಯ ಮೃದುಭಾವಕ್ಕೂ, ಕೃಷ್ಣನ ಭಾವಕ್ಕೂ ವ್ಯತ್ಯಾಸವಿದೆ. ಆದ್ದರಿಂದ ಪ್ರತೀ ಪಾತ್ರಕ್ಕೂ ದೇಹವನ್ನು ಹೇಗೆ ಒಗ್ಗಿಸಿಕೊಳ್ಳಬೇಕು, ಆಂಗಿಕವನ್ನು ಹೊಂದಿಸಿಕೊಳ್ಳಬೇಕು ಎನ್ನುವುದೇ ಅಂಗಶುದ್ಧಿ.

ಇದು ಪಾತ್ರದ ಆಳಕ್ಕೆ ಹೋಗಿ ಆವಾಹನೆ ಮಾಡಿಕೊಂಡಾಗ ಅರ್ಥವಾಗುತ್ತದೆ. ಆದರೆ ಇದಕ್ಕೆ ವಿದ್ಯಾರ್ಥಿಗಳು ಮೊದಲು ದೇಹದ ಪ್ರಾಥಮಿಕ ಚಲನೆಗಳನ್ನು, ಚಾಚುವುದನ್ನು, ಶ್ರದ್ಧೆಯಿಂದ ನಿರ್ದಾಕ್ಷಿಣ್ಯವಾಗಿ ಕಲಿಯಬೇಕು, ಸಾಧನೆ ಮಾಡಬೇಕು. ನಂತರ ನೃತ್ಯಾಭ್ಯಾಸ ಮಾಡುತ್ತಿರುವವರ ಸಾಮಥ್ರ್ಯಕ್ಕೆ ಅನುಗುಣವಾಗಿ ಕಲೆ ಅರಳುತ್ತದೆ, ಕಲೆ ಹೇಳಿಕೊಟ್ಟು ಬರುವಂತದ್ದಲ್ಲ, ಅದೊಂದು ಸ್ವಾನುಭವದಿಂದ ಉಂಟಾಗುವ ಪ್ರಕ್ರಿಯೆ.

• ಆದರೆ ಭರತನಾಟ್ಯದಂತಹ ನೃತ್ಯದಲ್ಲಿ ಅರ್ಥವಾಗದ ಹೆಜ್ಜೆಗಾರಿಕೆಯ ಸರಣಿಗಳು ಇರುತ್ತದಲ್ಲ್ಲ ! ಅದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
ಹೆಜ್ಜೆಗಾರಿಕೆಯ ಸರಣಿಗಳು ಎಂದರೆ ನೃತ್ತವನ್ನೇ ತಾನೇ ನೀವು ಹೇಳುವುದು? ನೋಡಿ.., ನೃತ್ತವೆನ್ನುವುದು ಎಂದಿಗೂ ಭಾವಾಭಿನಯವಿಹೀನವಲ್ಲ; ಸಾಹಿತ್ಯರಹಿತ ಮಾತ್ರ -ಎನ್ನುವುದನ್ನು ಅರ್ಥಮಾಡಿಕೊಂಡರೆ ನೃತ್ತವು ಯಾವತ್ತಿಗೂ ಒಣ ಆಂಗಿಕದ ಜಾಳಾಗುವುದಿಲ್ಲ ಮತ್ತು ಖುಷಿ, ಆನಂದವನ್ನು ಕೊಡುವ ಆಸ್ವಾದ್ಯರಮಣೀಯವಾಗಿರುತ್ತದೆ. ಯಾವ ಸಾಹಿತ್ಯವಿಲ್ಲದಿದ್ದರೂ ಇಷ್ಟಪಟ್ಟು ಸಂಭ್ರಮದಿಂದ, ಖುಷಿಯಿಂದ, ಭಾವದಿಂದ ಜೊತೆಗೂಡಿ ಮಾಡಿದರೆ ನೋಡುವವರಿಗೂ ಆನಂದವಾಗುತ್ತದೆ.

ಸಾತ್ತ್ವಿಕಾಭಿನಯ ಎನುವುದು ಪಾತ್ರೆ. ಆಂಗಿಕ ಅದರೊಳಗಿನ ನೀರು. ಪಾತ್ರೆಯ ಸ್ವರೂಪದಲ್ಲಿ ನೀರಿನ ರೂಪ ಬದಲಾವಣೆ ಪಡೆದುಕೊಳ್ಳುತ್ತದೆ. ರೂಪವನ್ನು ಸ್ವರೂಪಕ್ಕೆ ಒಗ್ಗಿಸಿಕೊಳ್ಳಬೇಕು. ರೂಪಕ್ಕೆ ನಿರ್ದಿಷ್ಟ ಅರ್ಥವೆನ್ನುವುದಿಲ್ಲ. ಅದು ಸ್ವರೂಪದ ನೆಲೆಯಲ್ಲಿ ನಿರ್ಧಾರವಾಗುತ್ತದೆ. ಕಲಾವಿದನ ಸ್ವಂತಿಕೆಯಲ್ಲಿ ಬೆಲೆ ಪಡೆಯುತ್ತದೆ. ಅಂತೆಯೇ ಪ್ರತಿಯೊಂದು ದೇಹದ ಅಂಗಗಳಿಗೂ ಅದರದ್ದೇ ಆದ ವ್ಯಕ್ತಿತ್ವವಿದೆ. ಅದನ್ನು ಒಟ್ಟಾಗಿ ಕಂಡುಕೊಳ್ಳುವುದು ಭಾವಕ್ಕೆ ಅನುಗುಣವಾಗಿ ಬಿಡಿಸಿಕೊಳ್ಳುವುದು, ಕೂಡಿಸಿಕೊಳ್ಳುವುದು ಗೊತ್ತಿರಬೇಕು. ಅದು ಕಲಾವಿದನ ಪ್ರತಿಭೆ. ಆಗಷ್ಟೇ ಕಲಿಯುವವರಿಗಾದರೆ ಅದು ವ್ಯಾಯಾಮದ ಸಾಧನೆಯಿಂದ ತಿಳಿಯುತ್ತದೆ.

ಸಾಯಂ ಸಂಧ್ಯೆಯ ನಾಟ್ಯಾವತರಣದಲ್ಲಿ ಡಾ.ಶೋಭಾ
ಸಂಜೆ 2ಗಂಟೆಗಳ ಕಾಲ ನಡೆದ ಡಾ.ಶೋಭಾ ಶಶಿಕುಮಾರ್ ಅವರ ನೃತ್ಯಪ್ರದರ್ಶನ ನೆರೆದವರನ್ನು ಹೊಸ ಲೋಕಕ್ಕೆ ಕರೆದೊಯ್ದು ಮೂಕವಿಸ್ಮಿತರನ್ನಾಗಿಸಿದ್ದು ಸುಳ್ಳಲ್ಲ. ಕರಾವಳಿಯ ನೃತ್ಯಕ್ಷೇತ್ರಕ್ಕೆ ಅಪರೂಪವಾಗಿರುವ ನಾಟ್ಯಶಾಸ್ತ್ರದ ಅಂಗೋಪಾಂಗಸಮನ್ವಯವನ್ನೂ, ಕರಣಾಂಗಹಾರ ಸಾಂಗತ್ಯವನ್ನೂ ಅಲಂಕಾರಶಾಸ್ತ್ರದ ಆಧಾರದಲ್ಲಿ ನೃತ್ಯದಲ್ಲಿ ಹೆಣೆದ ಡಾ.ಶೋಭಾ ಹತ್ತು ಬಗೆಯ ನೃತ್ಯಸಂದರ್ಭಗಳನ್ನು ಪ್ರೇಕ್ಷಕರು ಆನಂದತುಂದಿಲರಾಗಿ ಅಶ್ರು ತುಳುಕಿಸುವಂತೆ ತೆರೆದಿಟ್ಟರು. ಇವುಗಳ ಪೈಕಿ 7 ರಚನೆಗಳೂ ಕನ್ನಡ ಕಾವ್ಯಪರಂಪರೆಯವೇ ಆಗಿದ್ದು; ಪುರಂದರದಾಸ, ಡಿವಿಜಿ, ಕುವೆಂಪು, ಶತಾವಧಾನಿ ಗಣೇಶ್‍ರ ಕಾವ್ಯಗಳೇ ನೃತ್ಯಾಲಂಕಾರಕ್ಕೆ ಶೋಭಾಯಮಾನವಾಗಿ ರೂಪ ಪಡೆದಿದ್ದವು.

Natyachintana photo 9 shobha 1  shobha's performance  natyachintana photo11 shobha2

ನೃತ್ಯನಿರ್ಮಾಣಕ್ಕೆ ಸವಾಲೆನಿಸುವ ‘ಮಧುರಾಷ್ಟಕ’ವನ್ನು ಎಲ್ಲಿಯೂ ಕೊಂಡಿ ತಪ್ಪದಂತೆ ಜತಿ, ಸ್ವರಕಂಬಗಳ ಸಹಿತ ಲೀಲಾಜಾಲವಾಗಿ ನಿಭಾಯಿಸಿದ ಡಾ.ಶೋಭಾ, ಕೃಷ್ಣನ ಸಕಲಗುಣ-ಸೌಂದರ್ಯವನ್ನು ನಾಜೂಕಾಗಿ ಮೂರ್ತೀಕರಿಸಿದರು. ‘ರಾಮನ ಪರಿವಾರ’ದ ಗುಣವಿಶೇಷವನ್ನು ಹೇಳುವ ಶತಾವಧಾನಿ ಗಣೇಶರ ರಚನೆಗೆ ಇಂದಿನ ಲೋಕದ ಪರಿವಾರದ್ವಂದ್ವಗಳನ್ನು ಸಮನ್ವಯಿಸುತ್ತಾ ರಾಮಾಯಣದ ಪಾತ್ರಗಳೇ ಆಗಿಹೋಗಿದ್ದರು ಶೋಭಾ. ವಾಲ್ಮೀಕಿ ರಾಮಾಯಣದ ಕಾವ್ಯಕಲ್ಪಕ್ಕೆ ಅನುಗುಣವಾಗಿದ್ದ ಅಭಿನಯವು ಡಾ.ಶೋಭಾ ಅವರ ಕಲ್ಪನೆಯಿಂದ ಮತ್ತೂ ವಿಸ್ತಾರಗೊಂಡಿತು. ಸಾತ್ತ್ವಿಕದ ಪರಮೋತ್ಕಟಸ್ಥಿತಿಯಲ್ಲಿ ಭರತನಾಗಿ, ಸೀತೆಯಗಿ, ಹನುಮಂತನಾಗಿ ರಸೋಜ್ವಲತೆಯನ್ನು ಬೆಳಗಿಸಿದ ಡಾ.ಶೋಭಾ ಅವರ ಅಭಿನಯಕ್ಕೆ ಅಂತಃಪುರ ಗೀತೆಯ ‘ಆಭರಣ ನಿನಗೇತಕೆ’ ಎಂಬ ನೃತ್ಯವೂ ಅನ್ವರ್ಥವಾಗಿತ್ತು.

ಡಿವಿಜಿ ಅವರ ಸಾಹಿತ್ಯದ ನೃತ್ಯಾವತರಣಿಕೆಯಲ್ಲಿ ಬೇಲೂರಿನ ಶಿಲಾಬಾಲಿಕೆಯನ್ನೂ ಕಲ್ಪನೆಯಲ್ಲಿ ಮೂರ್ತೀಕರಿಸಿಕೊಂಡ ಯಾತ್ರಿಕನ ಪಿಸುಮಾತು ಕೂಡಾ ಸ್ಪಷ್ಟವಾಗಿತ್ತು. ಉತ್ತಮ ನೃತ್ಯಕಲಾವಿದೆಗೆ ಸಾಹಿತ್ಯವನ್ನು ಔಚಿತ್ಯಪೂರ್ಣವಾಗಿ ಸಮನ್ವಯಿಸಿಕೊಳ್ಳುವ ಕಲೆ ತಿಳಿದಿರುತ್ತದೆ ಎಂಬುದಕ್ಕೆ ಕುವೆಂಪು, ಡಿವಿಜಿ ಅವರ ಕಾವ್ಯಸಮಾಗಮವೇ ಕಾರಣವಾಯಿತು. ಜತಿ, ಸ್ವರಕಲ್ಪನೆಗಳನ್ನು ಸಾಹಿತ್ಯದ ಔಚಿತ್ಯಕ್ಕೆ, ನೃತ್ಯಸೌಂದರ್ಯಕ್ಕೆ ಪೂರಕವಾಗಿ ದುಡಿಸಿಕೊಂಡು ಆಯಾಯ ನೃತ್ಯಬಂಧಗಳ ಸಮಗ್ರತೆಯನ್ನು ಕಣ್ಣೆವೆಗೆ ತಂದ ಡಾ. ಶೋಭಾ, ನೃತ್ಯಾವರಣಕ್ಕೆ ಹೊಸ ಸಂವಿಧಾನವನ್ನೇ ಬರೆದರು ಎಂದರೆ ಖಂಡಿತಾ ಅದು ಅತಿಶಯವಲ್ಲ.

ಇವಿಷ್ಟು ಹೆಚ್ಚಾಗಿ ಇಂದಿನಕಾಲಕ್ಕೆ ನೃತ್ಯರೂಪಕ್ಕೆ ಕಲಾವಿದರಿಂದ ಒದಗಿಬರದ ಸಾಹಿತ್ಯದ ಪುನರ್‍ಸೃಷ್ಟಿಗೆ ಸಾಕ್ಷಿಯಾದರೆ, ಪ್ರಸಿದ್ಧವಾದ ‘ಗುಮ್ಮನ ಕರೆಯದಿರೆ’ ಕೃತಿಗೆ ಕೃಷ್ಣನ ಬಾಲ್ಯಕ್ಕೆ ಜಿಗಿದು ಮುಗ್ಧಮುರಾರಿಯ ಆಂತರ್ಯದ ಒಳಸುಳಿಗಳನ್ನು, ಯಶೋದೆಯ ಹುಸಿಮುನಿಸಿನ ಪ್ರೀತಿಯನ್ನು ಉಣಬಡಿಸಿದರು. ‘ಬೆಟ್ಟದ ಮೇಲೊಂದು ಮನೆಯ ಮಾಡಿ’- ಎಂಬ ಅಕ್ಕಮಹಾದೇವಿ ಅವರ ವಚನದ ಅನುಭಾವಕ್ಕೆ ಅನುಭವದ, ಲೋಕಧರ್ಮಿಯ ಆಯಾಮವನ್ನು ನಾಟ್ಯಕ್ಕೆ ಎಷ್ಟರಮಟ್ಟಿಗೆ ಒಗ್ಗಿಸಿದರೆಂದರೆ ನೆರೆದ ಮಕ್ಕಳ ಮುಖದಲ್ಲೂ ಸಂತೋಷ, ನೃತ್ಯವನ್ನು ಅರ್ಥ ಮಾಡಿಕೊಂಡ ಖುಷಿ ಇಂಚಿಂಚೂ ಹರಿಯುತ್ತಿತ್ತು. ಬೆಟ್ಟದ ಕಾಡಿನ ನಡುವಿನ ಪ್ರಾಣಿಗಳ ಆಂಗಿಕವನ್ನೂ, ಸಂತೆಯ ಬಿಕ್ಕಟ್ಟು, ಚೌಕಾಸಿಗಳನ್ನು ನೇರಾನೇರಾ ರಂಗದ ಆಯಾಮಕ್ಕೆ ಒಗ್ಗಿಸಿದ ಡಾ.ಶೋಭಾ ಸಮುದ್ರದಂಚಿನ ತೆರೆಗಳ ಬಡಿತಕ್ಕೆ ಬೆದರದ ಕರಾವಳಿಯ ಜನಸಮೂಹದ ನಡೆನುಡಿಗಳಿಗೆ ಪರೋಕ್ಷವಾಗಿ ಇಂಬಾದರು.

ವಚನದ ಅಂತ್ಯಕ್ಕೆ ನರನರಗಳಲ್ಲಿ ಶಾಂತರಸವನ್ನು ಆಸ್ವಾದಿಸಿದ ಡಾ.ಶೋಭಾ ಅವರ ರಂಗಕ್ರಿಯೆಯಲ್ಲಿ ಪ್ರೇಕ್ಷಕವರ್ಗವೂ ಶಾಂತರಸದ ಚಿನ್ಮಯ ಸ್ವರೂಪವನ್ನು ಆನಂದಿಸಿತು. ಅವರ ಶಿಷ್ಯೆಯರಾದ ಮೇಘಾ ಮತ್ತು ಆರತಿಯವರ ನೃತ್ಯದಲ್ಲಿ ಮೂಡಿಬಂದ ‘ಶಿವಂಶಂಕರಂಶಂಭುಮೀಶಾನಮೀಳೆ’-ಶಿವಸ್ತುತಿ, ಆಡಿದನೋ ರಂಗ, ‘ಗೀತಧುನಿಕ್ ತಕ’- ಧನಶ್ರೀ ತಿಲ್ಲಾನ, ಕೌತ್ವ, ಜತಿಸ್ವರಗಳಂತಹ ಎಂದಿನ ಮಾದರಿಯ ನೃತ್ಯಸಾಹಿತ್ಯವೂ ಹೊಸರೂಪದಲ್ಲಿ ಉದ್ಧತ, ಸುಕುಮಾರದ ಸೂಕ್ಷ್ಮವೆನಿಸುವ ನೃತ್ಯದ ಚೆಲುವನ್ನು ಕಾಣುವಲ್ಲಿ ಅನುಕೂಲವಾದವು.
ಈ ಸಂದರ್ಭ ಉಪಸ್ಥಿತರಿದ್ದ ಹೆಸರಾಂತ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಕಲಾವಿದರನ್ನು ಗೌರವಿಸಿ, ‘ಡಾ.ಶೋಭಾ ಅವರ ನೃತ್ಯಕಾರ್ಯಕ್ರಮ ಕಲಾಭಿವ್ಯಕ್ತಿಯ ಅತ್ಯುನ್ನತ ಗುರಿಯಾದ ಶಾಂತರಸವನ್ನು ತಲುಪಿದೆ, ಆ ಮೂಲಕ ಪ್ರೇಕ್ಷಕರಮಣೀಯವಾಗಿ ಆನಂದಕರವಾಗಿ ಮೂಡಿಬಂದಿದೆ. ನೋಡದೇ ಹೋಗಿದ್ದರೆ ಒಂದು ಅತ್ಯುತ್ತಮ ಕಲಾಭಿವ್ಯಕ್ತಿಯ ಗ್ರಹಣವನ್ನು ಕಳೆದುಕೊಳ್ಳುತ್ತಿದ್ದೆ’ ಎಂದು ಸುಂದರಸಂಜೆಯನ್ನು ಕಣ್ತುಂಬಿಕೊಂಡರೆ; ಮೂಕವಿಸ್ಮಿತರಾಗಿ ಆನಂದಕ್ಕೆ ಒದ್ದೆಯಾದ ಕಣ್ಣಂಚನ್ನು ಒರೆಸಿಕೊಂಡವರು ಹಲವು ಮಂದಿ.

ಸಮಾರೋಪ ಸಂಭ್ರಮ
ಕಾರ್ಯಾಗಾರದಲ್ಲಿ ದಿನಕ್ಕೊಂದು ನಾಟ್ಯಶಾಸ್ತ್ರದ ಕಥಾಮಾಲಿಕೆಯ ಉಪನ್ಯಾಸ, ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ, ಸಂವಾದ, ಪ್ರಶ್ನೋತ್ತರಗಳು ಮುಕ್ತವಾಗಿ ನಡೆದವು. ಶಿಬಿರದಲ್ಲಿ ಭಾಗವಹಿಸಿದ ಅಭ್ಯರ್ಥಿ/ವಿದ್ಯಾರ್ಥಿಗಳ ಕಲ್ಪನೆ, ಶ್ರಮ, ಆಸಕ್ತಿಯೂ ಅಭಿನಂದನೀಯ. ಅದು ಏಳನೇ ದಿನದ ಸಮಾರೋಪಸಂಜೆಯಲ್ಲಿ ವಿದ್ಯುಕ್ತವಾಗಿ ತೋರಿಬಂದಿತ್ತು.

ಭಾಗವಹಿಸಿದ 26 ವಿದ್ಯಾರ್ಥಿಗಳಿಂದ 16 ವಿವಿಧ ಬಗೆಯ ನೃತ್ಯಸಂದರ್ಭಗಳು ನಿರ್ದೇಶಿತವಾಗಿದ್ದವು. ಅವುಗಳಲ್ಲಿ ಕೆಲವು ನೃತ್ಯನಿರ್ದೇಶನಗಳನ್ನು ಆಯ್ದು ಸಮಾರೋಪಸಂಜೆಯಲ್ಲಿ ಸೊಗಸಾದ ನೃತ್ಯಕಾರ್ಯಕ್ರಮವೂ ನಡೆದು ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು. ಮಕ್ಕಳೇ ಸಮೂಹವಾಗಿ ನಿರ್ದೇಶನ ನೀಡಿ ರೂಪಿಸಿದ ನೃತ್ಯಗುಚ್ಛ ಅದೆಷ್ಟು ಸೊಗಸಾಗಿತ್ತೆಂದರೆ ವೃತ್ತಿಪರ ಕಲಾವಿದರೂ ನಾಚುವಷ್ಟು, ನೋಡಿ ಅನುಸರಿಸುವಷ್ಟು.

ಯಾವೊಂದು ಅಂಶವೂ ನಿರ್ಭಾವುಕವಾಗಿರಲಿಲ್ಲ. ಯಾವೊಂದು ನೃತ್ಯದ ಭಾಗವೂ ಅರ್ಥವಾಗದೇ ಉಳಿಯಲಿಲ್ಲ. ಬದಲಾಗಿ ಪ್ರದರ್ಶಿಸಲಾದ ಕಥೆಯ ಒಳಸುಳಿಗಳು ಪ್ರೇಕ್ಷಕರಿಗೆ ಅರ್ಥವಾಗಿ ತಲೆದೂಗುವಷ್ಟು ನಯನ ಮನೋಹರವಾಗಿತ್ತು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳೇ ತಮ್ಮ ವೇಷಭೂಷಣದ ಹೊಂದಾಣಿಕೆಯನ್ನು ಸ್ವತಃ ತಮ್ಮ ಕಲ್ಪನೆಗನುಗುಣವಾಗಿ ಮಾಡಿಕೊಂಡಿದ್ದರು ಎಂಬುದು ಮತ್ತೊಂದು ಗಮನಿಸಬೇಕಾದ ಅಂಶ !

ಕಾರ್ಯಾಗಾರದಲ್ಲಿ 8 ವರುಷದ ಮಕ್ಕಳಿಂದ 25 ವರ್ಷದ ಯುವಕರೂ ಪಾಲ್ಗೊಂಡಿದ್ದರು. ಆಗತಾನೇ ನೃತ್ಯಾಭ್ಯಾಸಕ್ಕೆ ಹೆಜ್ಜೆಯಿಟ್ಟವರಿದ್ದರು. ಕೆಲವರು ಅದಾಗಲೇ ವಿದ್ವತ್ತು ಪದವಿಯನ್ನು ಪೂರೈಸಿಕೊಂಡವರಿದ್ದರು. ಬೇರೆ ಬೇರೆ ನೃತ್ಯಶಾಲೆಗಳ ಭಿನ್ನ ಭಿನ್ನ ನೃತ್ಯಕ್ರಮದವರಿದ್ದರು. ಆದರೆ ಈ ವಯೋಮಾನ, ಕಲಿಕೆಯ ಭೇಧಗಳಿಂದಾಚೆಗೆ ಎಲ್ಲರಿಗೂ ಈ ಶಿಬಿರ ಆಪ್ತವಾಗಿದೆಯೆಂದರೆ ಅದರ ಒಟ್ಟು ಯೋಜನೆಯ ಹಿಂದಿನ ಸಮಗ್ರತೆಯ ಯೋಚನೆ-ಪರಿಕಲ್ಪನೆಯನ್ನು ಒಮ್ಮೆ ಊಹಿಸಿ ! ಸಮಾರೋಪದಲ್ಲಿ ನೃತ್ಯಕ್ರಮದ ಭಿನ್ನತೆ ಕಾಣದೆ ಸೌಂದರ್ಯವೇ ಎಲ್ಲರಿಗೂ ಆಪ್ಯಾಯಮಾನವಾಗಿತ್ತೆಂದರೆ ಇದಕ್ಕಾಗಿ ಆಯೋಜಕರು ಮಾಡಿಕೊಂಡಿರುವ ಹೋಂವರ್ಕ್‍ನ್ನು ಒಮ್ಮೆ ಆಲೋಚಿಸಿ ! ಎಷ್ಟೊಂದು ಅಧ್ಯಯನಶೀಲವೆಂದರೆ ಕಾರ್ಯಾಗಾರದಿಂದಾಚೆಗೂ ಮಕ್ಕಳ ಸರ್ವತೋಮುಖ ನೃತ್ಯದ ಬೆಳವಣಿಗೆಯನ್ನು, ಪ್ರತಿಭೆಯನ್ನು ಅಂದಾಜಿಸಿ, ಒರೆಗೆ ಹೆಚ್ಚಿಸಿ ಬೆಳೆಸುವ ರೀತಿ ! ಇದಕ್ಕೆ ಅಲ್ಲಿಗೆ ಬಂದ ಎಲ್ಲ ಅಭ್ಯರ್ಥಿಗಳಷ್ಟೇ ಅಲ್ಲದೆ, ಪೋಷಕರೂ, ಪ್ರೇಕ್ಷಕರೂ ಒಕ್ಕೊರಲಿನಿಂದ ಆಗಾಗ್ಗೆ ಇಂತಹ ಶಿಬಿರಗಳು ನಡೆಯಲೇಬೇಕು ಎಂದು ಒತ್ತಾಯಿಸಿದ್ದರಲ್ಲೇ ಅದರ ಹೆಚ್ಚುಗಾರಿಕೆ ತಿಳಿಯುತ್ತದೆ.

ಕೆಲವರಂತೂ ಶಿಬಿರ ಮುಗಿದದ್ದಕ್ಕೆ ಕಣ್ಣಂಚಿನಲ್ಲಿ ನೀರು ತುಳುಕಿಸಿದ್ದೂ ಕಾಣುವಂತಿತ್ತು. ‘ಮತ್ತೆ ಯವಾಗ ನಡೆಸುತ್ತೀರಿ?’, ‘ಆರು ತಿಂಗಳಿಗೊಮ್ಮೆಯಾದರೂ ನಡೆಸಲೇಬೇಕು ಎಂದು ಆಗ್ರಹದಿಂದ ದುಂಬಾಲು ಬೀಳುವುದೂ ಕೇಳಿಬರುತ್ತಿತ್ತು.

ಕಾರ್ಯಾಗಾರದ ಸಮಾರೋಪದಂದು ಉಪಸ್ಥಿತರಿದ್ದು ‘ಅಭಿನಯ’ದ ಕುರಿತಾಗಿ ಸಾಭಿನಯಸಹಿತ ಪ್ರಾತ್ಯಕ್ಷಿಕೆ, ಉಪನ್ಯಾಸ ನೀಡಿದ ವಿದ್ವಾಂಸ, ರಂಗಕರ್ಮಿ, ಕವಿ, ಯಕ್ಷಗಾನ ರಚನೆಕಾರ, ‘ರಾಮಕಥಾ’ ರೂಪಕ ನಿರ್ದೇಶಕ, ನಟ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಮಾತುಗಳು ಉಲ್ಲೇಖನೀಯ. “ಅಭಿನಯದಲ್ಲಿ ಕಲಾವಿದನ ಕಣ್ಣು ಕಿಟಕಿ ಇದ್ದ ಹಾಗೆ. ಅದರ ಮೂಲಕ ದೇಹವು ಬೆಳಕನ್ನು ಕಾಣುತ್ತದೆ.

ಅಭಿನಯ ಮುಖಕ್ಕೆ ಮಾತ್ರ ಸೀಮಿತವಲ್ಲ. ಆದರೆ ಮುಖವನ್ನು ಅಭಿನಯದಲ್ಲಿ ಬೆಳಗಿಸುವುದರಿಂದ ಜನರಿಗೆ ನಮ್ಮ ಅನುಭವವನ್ನು ತಿಳಿಸಬಹುದು. ಅನುಭವದಿಂದ ಅಭಿನಯ ಹೆಚ್ಚು ಮಾಗುತ್ತದೆ. ಅನುಭವವೇ ಅಭಿನಯಕ್ಕೆ ಪೋಷಣೆ ಕೊಡುತ್ತದೆ. ಹಾಗೆಂದು ಅಭಿನಯ ಮಾಡುವುದಕ್ಕೆ ಬರುತ್ತದೆಯೆಂದುಕೊಂಡು ಎಲ್ಲವನ್ನೂ ಎಲ್ಲಾ ಸಮಯದಲ್ಲೂ ಮಾಡಲಾಗುವುದಿಲ್ಲ. ಕಲಾವಿದನಿಗೆ ಈ ಸಂದರ್ಭ ಬೇಕಾದದ್ದು ಔಚಿತ್ಯಪ್ರಜ್ಞೆ. ಕನ್ನಡಿಯ ಮುಂದೆ ನಿಂತು ಅಭ್ಯಾಸ ಮಾಡುತ್ತಾ ಅಭಿನಯವನ್ನು ಗಮನಿಸಿದರೆ ಹೆಚ್ಚು ಪಕ್ವತೆ ಬರುತ್ತದೆ.’

ಈ ಸಂದರ್ಭ ಅಭ್ಯರ್ಥಿಗಳಾದ ಸುಮಂಗಲಾ, ಸೌಂದರ್ಯ, ಆದ್ಯಸುಲೋಚನಾ, ವಿಸ್ಮಯ ಮತ್ತು ಭೂಮಿಕಾ ಶಿಬಿರದ ಕುರಿತ ಅನುಭವಗಳನ್ನು ಹಂಚಿಕೊಂಡರು. ನಂತರ ಪಾಲ್ಗೊಂಡ ಎಲ್ಲ ಅಭ್ಯರ್ಥಿಗಳಿಗೆ ಗಣ್ಯರಿಂದ ಪ್ರಮಾಣಪತ್ರವನ್ನು ವಿತರಿಸಲಾಯಿತು. ಕಥಾನಿರೂಪಣೆ/ಸಾಹಿತ್ಯರಚನೆಯಲ್ಲಿ ಸಂಶೋಧಕಿ/ಕಲಾವಿದೆ ಮನೋರಮಾ ಬಿ.ಎನ್; ಗಾಯನದಲ್ಲಿ ವಿದುಷಿ ಪ್ರೀತಿಕಲಾ ದೀಪಕ್ ಕುಮಾರ್ ಮತ್ತು ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದ್ವಾನ್ ಗಿರೀಶ್ ಕುಮಾರ್, ಆಯೋಜನೆಯಲ್ಲಿ ವಿಷ್ಣುಪ್ರಸಾದ್ ನಿಡ್ಡಾಜೆ, ಭವಾನಿಶಂಕರ ಆಚಾರ್ಯ ಸಹಕರಿಸಿದರು. ಕಾರ್ಯಾಗಾರಕ್ಕೆ ಮಂಗಳೂರು, ವಿಟ್ಲ, ನೆಲ್ಯಾಡಿ, ಕೊಕ್ಕಡ, ಸುಬ್ರಹ್ಮಣ್ಯ, ಸುಳ್ಯ, ಪುತ್ತೂರಿನಿಂದ ಚಿಣ್ಣರು, ಹಿರಿಯ ನೃತ್ಯವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಶಿಬಿರ ಮಕ್ಕಳಿಗೆ ಹೆಚ್ಚು ಆಪ್ತವಾಗಲು ಕಾರಣ- ಇಂದಿನ ಕಾಲಕ್ಕೆ ಅಪರೂಪವಾಗುತ್ತಿರುವ ಕಥೆಗಳನ್ನು ಹೇಳುವ ಕೊರತೆಯನ್ನು ತುಂಬಿದ್ದರ ಮೂಲಕ. ಕಥೆಗಳ ಕಲ್ಪನೆಯಲ್ಲಿ ಮಿಂದೆದ್ದ ಮಕ್ಕಳು ಎಷ್ಟೊಂದು ಕ್ರಿಯಾಶೀಲರಾಗಿದ್ದರೆಂದರೆ ಮೌಕಿಕ ತರಗತಿ ಮುಗಿಯುವ ವೇಳೆಗಾಗಲೇ ತಮ್ಮ ತಂಡಗಳಲ್ಲಿ ತಾವು ಯಾವ ಕಥೆಯನ್ನು ಎಷ್ಟರಮಟ್ಟಿಗೆ ಬೆಳೆಸಿಕೊಳ್ಳಬೇಕು, ಅದರ ವಿನ್ಯಾಸ ಹೇಗಿರಬೇಕು, ಎಷ್ಟು ಸಾಹಿತ್ಯವನ್ನು ಎಲ್ಲಿ ಬಳಸಬೇಕು, ಜತಿ/ನಡೆ/ಸ್ವರ ಕಲ್ಪನೆಗಳು ಎಲ್ಲಿ ಮೂಡಿಬರಬೇಕು ಎಂಬುದರಲ್ಲೆಲ್ಲಾ ಕರಾರುವಕ್ಕಾಗಿ ನಿರ್ಣಯ ಕೊಡುತ್ತಿದ್ದರು.

ಯಾವ ಬಗೆಯ ಆಂಗಿಕ-ವಾಚಿಕ-ಸಾತ್ತ್ವಿಕ ಅಭಿನಯವಿರಬೇಕೆಂದೆಲ್ಲಾ ನಿಷ್ಕರ್ಷೆ ಮಾಡಿಕೊಳ್ಳುತ್ತಿದ್ದರು. ಕೊನೆಯಲ್ಲಿ ನೃತ್ಯಕ್ಷೇತ್ರದ ಪ್ರಯೋಗಕ್ಕೆ ತೀರಾ ಅಪರೂಪದ ಕಥೆಗಳಾದ ನಾಟ್ಯೋತ್ಪತ್ತಿ, ಅಪ್ಸರಸೃಷ್ಟಿ, ಪ್ರಥಮನಾಟ್ಯಪ್ರಯೋಗ, ಜರ್ಜರ, ಸಮವಕಾರ, ಡಿಮ, ಅವನದ್ಧ ವಾದ್ಯನಿರ್ಮಾಣ, ವೃತ್ತಿವಿಕಲ್ಪದ ಕಥೆಗಳನ್ನು ನೃತ್ಯವಾಗಿ ಪ್ರದರ್ಶಿಸಿದರು. ಒಟ್ಟಿನಲ್ಲಿ ಮಕ್ಕಳ ಪೋಷಕರೂ ಕೇಳಿ ತಲೆದೂಗಿ ಅನುಕರಿಸುವ ಮಟ್ಟಿಗೆ ಕಾರ್ಯಾಗಾರ ಫಲಪ್ರದವಾಗಿತ್ತು.

ನಾಟ್ಯಚಿಂತನದಲ್ಲಿ ಮಕ್ಕಳು ಏನೆಲ್ಲಾ ಕಲಿತರು ಎಂಬುದನ್ನು ಅಕ್ಷರರೂಪದಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ. ನಾಟ್ಯಶಾಸ್ತ್ರ, ಅದರ ರಸಸ್ವರೂಪ, ಅದನ್ನು ಅಳವಡಿಸಿಕೊಳ್ಳಲು ಮಾಡಬೇಕಾದ ತಯಾರಿ, ನೃತ್ಯದ ಸೌಂದರ್ಯಕ್ಕೆ ದುಡಿಯಬೇಕಾದ ಕ್ರಮ ಹೇಗಿರಬೇಕು? ಕಥೆಯ ಪೋಷಣೆಯನ್ನು ಮಾಡುವ ದಿಕ್ಕು ಯಾವುದು? ಎಂಬುದರಿಂದೆಲ್ಲಾ ಮೊದಲ್ಗೊಂಡು ನೃತ್ಯದ ಮೂಲಕ ಬದುಕಿನ ಸಾರ್ಥಕತೆಯನ್ನು ಪಡೆಯುವ ಎಲ್ಲಾ ಬಗೆಯ ಜೀವನಮೌಲ್ಯ ಸಂಗತಿಗಳೂ ವಿದ್ಯಾರ್ಥಿಗಳಿಗೆ ಪ್ರಾಪ್ತವಾದವು.

ಭರತನ ನಾಟ್ಯಶಾಸ್ತ್ರದಂತಹ ಬೃಹತ್ ಗ್ರಂಥವನ್ನೂ ಎಷ್ಟು ಸುಲಭವಾಗಿ ಮಕ್ಕಳಿಗೆ ಮುಟ್ಟಿಸಬಹುದು ಎಂಬುದಕ್ಕೆ ಕಾರ್ಯಾಗಾರ ಚೊಕ್ಕದಾದ ರೀತಿಯಲ್ಲಿ ಆಯೋಜನೆಗೊಂಡು ಉತ್ತಮ ಮದರಿಯನ್ನಿತ್ತಿದೆ. ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ, ಹೆಚ್ಚಿನ ಗೌಜಿ ಗದ್ದಲಗಳಿಲ್ಲದೆ, ಔಪಚಾರಿಕತೆಯ ಬಿಕ್ಕಟ್ಟುಗಳಿಲ್ಲದೆ ನಡೆದ ‘ನಾಟ್ಯಚಿಂತನ’ವು ಹೊಸ ಚಿಂತನೆಯ ಅಲೆಯನ್ನೂ, ಭವಿಷ್ಯದ ನೃತ್ಯಕಾರ್ಯಕ್ರಮಗಳಿಗೆ ದಿಕ್ಸೂಚಿಯನ್ನೂ ನೀಡಿದೆ. ಇಂತಹ ಕಾರ್ಯಾಗಾರಗಳ ಸಂಖ್ಯೆ ಗುಣಾತ್ಮಕವಾಗಿ ಹೆಚ್ಚಲಿ ಮತ್ತು ಆಸಕ್ತ ಅಭ್ಯರ್ಥಿಗಳೂ ಭೇದ-ಪೂರ್ವಾಗ್ರಹಗಳನ್ನು ಬದಿಗಿಟ್ಟು ಭವಿಷ್ಯದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮುಕ್ತವಾಗಿ ತೊಡಗಿಸಿಕೊಂಡರೆ ನೃತ್ಯಕ್ಷೇತ್ರ ಬೆಳಗುವುದರಲ್ಲಿ ಸಂಶಯವಿಲ್ಲ.
‘ಒಂದುವಾರ ಹೇಗೆ ಕಳೆಯಿತು ಅಂತ ಗೊತ್ತಾಗ್ತಾ ಇಲ್ಲ’
‘ಪುರಾಣ ಕಥೆಯನ್ನು ನೃತ್ಯಕ್ಕೆ ಹೊಂದಿಸಿಕೊಳ್ಳಲು ಬೇಕಾಗುವ ಅರ್ಥ, ಸ್ವಾರಸ್ಯ, ಅಭಿನಯದ ಪ್ರಮಾಣ, ಅದು ಜೀವನಕ್ಕೆ ಒಪ್ಪುವ ರೀತಿಯನ್ನು ಹೇಳಿಕೊಟ್ಟಿದ್ದಾರೆ. ನಾವು ಈವರೆಗೂ ಕಂಡು ಕೇಳಿರದ ಕಥೆಯ ಎಲ್ಲಾ ಬಗೆಯ ಮಜಲುಗಳನ್ನು ಹೇಳುವುದನ್ನು ಕೇಳಿ ನಂತರ ಅದನ್ನು ನಾವೇ ಕೊರಿಯೋಗ್ರಫಿ ಮಾಡುವುದು ಮತ್ತೂ ಸಂತೋಷದ, ಸವಾಲಿನ ಸಂಗತಿ. ಅದೂ ಯವುದೇ ಕಟ್ಟುಪಾಡು, ನಿರ್ಬಂಧಗಳಿಲ್ಲದೆ ಆಟವಾಡಿದಂತೆ ಖುಷಿಖುಷಿಯಾಗಿ ನಲಿಯುತ್ತಾ ಡ್ಯಾನ್ಸ್ ಮಾಡುವುದು ನಮಗಿಷ್ಟವಾಯಿತು. ಒಂದು ವಾರ ಹೇಗೆ ಕಳೆಯಿತು ಎಂಬುದೇ ಗೊತ್ತಾಗಲಿಲ್ಲ. ದೂರದೂರಿನಿಂದ ಬಂದು ತಲುಪುವ ತನಕವೂ ನಮಗಿದ್ದದ್ದು ಒಂದೇ ಟೆನ್ಶನ್- ಕಲಿಯುವ ವಿಷಯಗಳಲ್ಲಿ ಯಾವುದೂ ತಪ್ಪಿಹೋಗಬಾರದು ಎಂಬುದು ಒಂದೇ. ’ – ಶಿಬಿರಾರ್ಥಿಗಳ ಒಕ್ಕೊರಲ ಮಾತು.

‘ಅಭಿನಯದ ವಿಷಯದಲ್ಲಿ ಮಕ್ಕಳೇ ಮೊದಲಿಗರು, ಸರಳರು’
‘ಮಗುವಿನ ಹಾಗೆ ಶಿಬಿರಕ್ಕೆ ಬಂದೆ. ಕಲಿಯುವುದು ಸಾಕಷ್ಟಿದೆ ಎಂಬುದು ಅರ್ಥವಾಗಿದೆ. ತೃಪ್ತಿ ಖಂಡಿತಾ ಇದೆ. ಮಕ್ಕಳಿಂದಲೂ ಕಲಿಯುವ ಸೌಭಾಗ್ಯ ! ನಾಟ್ಯದ, ಅಭಿನಯದ ವಿಷಯದಲ್ಲಿ ಪುಟ್ಟವiಕ್ಕಳಿಂದಲೂ ಕಲಿಯುವುದು ಸಾಕಷ್ಟಿದೆ. ನಮ್ಮಂಥ ದೊಡ್ಡವರೂ ಮಕ್ಕಳಿಂದ ಯಾವ ವಟ್ಟಿಗೆ ಜ್ಞಾನ ಹೆಚ್ಚಿಸಿಕೊಂಡರೆಂದರೆ ಮಕ್ಕಳು ದೊಡ್ಡವರಾದರು; ದೊಡ್ಡವರೆನಿಸಿಕೊಳ್ಳುವಂತ ನಮ್ಮಂತವರು ಮಕ್ಕಳಾದರು. ಅಭಿನಯದ ವಿಷಯದಲ್ಲಿ ಮಕ್ಕಳೇ ಮೊದಲಿಗರು, ಸರಳರು ಎಂದರ್ಥವಾಯಿತು.

ದಿನದಿಂದ ದಿನಕ್ಕೆ ಸವಾಲುಗಳು ಏರುತ್ತಾ ಹೋಗುವ ಅದಕ್ಕೆ ತಕ್ಕಂತೆ ನಮ್ಮ ವರ್ತನೆಗಳನ್ನು, ನೃತ್ಯವನ್ನು ರೂಪಿಸಿಕೊಳ್ಳುವ ಎಲ್ಲಾ ಚಿಂತನ ಮಂಥನ ನಡೆದಿದೆ. ನಮ್ಮಿಂದ ಎಷ್ಟರಮಟ್ಟಿಗೆ ಇದರ ಔಟ್ಪುಟ್ ಹೊರಜಗತ್ತಿಗೆ ನೀಡಲ್ಪಡುತ್ತದೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಈ ಕಾರ್ಯಾಗಾರವು ಕಲೆಯ ಕುರಿತ, ಬದುಕನ್ನು ನೋಡುವ ಕುರಿತ ಜವಾಬ್ದಾರಿಯನ್ನು ಹೆಚ್ಚಿಸಿದೆ.’- ಶ್ರೀಮತಿ ಸುಮಂಗಲಾ, ಶಿಬಿರಾರ್ಥಿ, ಉಪನ್ಯಾಸಕಿ, ಕುಕ್ಕೆಸುಬ್ರಹ್ಮಣ್ಯ.

‘ಸಹಜ ಕಲಿಕೆಗೆ ಅವಕಾಶ ಕೊಟ್ಟದ್ದಕ್ಕೆ ನೂರ್ಮಡಿ ಧನ್ಯತೆ ದೊರಕಿದೆ’
‘ಮಕ್ಕಳಿಗೆ ನೃತ್ಯಶಾಲೆಗಳಲ್ಲಿ ಗುರುಗಳು ಪಾಠ ಮಾಡುವುದು, ಹೇಳಿಕೊಟ್ಟದ್ದನ್ನಷ್ಟೇ ಕಲಿಯುವುದು ರೂಢಿ. ಆದರೆ ಮಕ್ಕಳಿಂದಲೂ ಸಾಕಷ್ಟು ಅಂಶಗಳನ್ನು ಕಲಿಯುವುದಿರುತ್ತದೆ ಎನ್ನುವುದು ಗೊತ್ತಾಗುವುದು ಇಂತಹ ವಿಶಿಷ್ಟ ಕಲ್ಪನೆಗಳನ್ನು ಜಾರಿಗೊಳಿಸಿದಾಗಲೇ ! ಸಂಯೋಜಕರಾಗಿ ನಾವು ಕಲಿಸಿಕೊಟ್ಟದ್ದಷ್ಟೇ ಅಲ್ಲ; ಕಲಿತ, ನಿಭಾಯಿಸಿದ ಅಂಶವೂ ಸಾಕಷ್ಟಿದೆ. ಅವರ ಕ್ರಿಯಾಶಕ್ತಿ, ಯೋಚನೆಗಳ ಮಟ್ಟ ಅಚ್ಚರಿ ತರಿಸುವಂತದ್ದು. ಅವರಿಗೆ ಎಲ್ಲಿಯೂ ಏಕತಾನತೆ ಅನ್ನಿಸದಂತೆ ಪಾಠ ಮಾಡುವುದು ನಮಗೂ ಒಂದು ಸವಾಲು. ನನಗಂತೂ ಪೂರ್ಣ ವಿಶ್ವಾಸವಿತ್ತು; ಮಕ್ಕಳೂ ಅವರವರ ನೃತ್ಯಗಳನ್ನು ತಾವು ತಾವೇ ಸಂಯೋಜನೆ ಮಾಡುವ ಮಟ್ಟದಲ್ಲಿರುತ್ತಾರೆ ಎಂಬುದು.

ಎಷ್ಟೊಂದು ಆತ್ಮವಿಶ್ವಾಸ ಮಕ್ಕಳಲ್ಲಿ ಮನೆಮಾಡಿರುತ್ತದೆ ಎಂದರೆ ಅದನ್ನು ಬಂಧಿಸದೆ ಮುಕ್ತವಾಗಿ ಹೊರಬಿಟ್ಟಾಗ ಅವರಿಂದ ಹೊಮ್ಮುವ ನೃತ್ಯಗಳನ್ನು ನೋಡಲೆರಡು ಕಣ್ಣು ಸಾಲದು. ಜೊತೆಗೆ ಯಾವುದೇ ಭರತನಾಟ್ಯವನ್ನೇ ಮಾಡಬೇಕೆಂದು ಕಡ್ಡಾಯ ಮಾಡಿರಲಿಲ್ಲ. ಕರಾಟೆಯೋ, ಜಾನಪದವೋ, ಫ್ರೀಸ್ಟೈಲೋ ತಮಗಿಷ್ಟವಾಗುವುದುದನ್ನು ಔಚಿತ್ಯಪೂರ್ಣವಾಗಿ ಹೊಂದಿಸಲು ಅನುಕೂಲವಾಗುವಂತೆ ವಾತಾವರಣ ಕೊಟ್ಟಿದ್ದೆವು. ನಾಟ್ಯಶಾಸ್ತ್ರದ ಅಂಶಗಳನ್ನು ಹೇಳುತ್ತಾ ಸಹಜವಾಗಿರುವಂತೆ ಸೂಚಿಸಿದ್ದೆವು.

ಅವರು ಬೇಕೆಂದಾಗಲೆಲ್ಲಾ ಜತಿ, ನಡೆ, ಸ್ವರಗಳನ್ನು ಸಂದರ್ಭಕ್ಕೆ ಸರಿಯಾಗಿ ಒದಗಿಸುತ್ತಿದ್ದೆವು. ಈ ಕಾರ್ಯಾಗಾರದಿಂದಾಗಿ ಮಕ್ಕಳಲ್ಲಿ ಪುರಾಣದ ಬಗ್ಗೆ ಆಸ್ಥೆ, ವರ್ತನೆಯ ಮೇಲೆ ಎಚ್ಚರಿಕೆ, ಅಧ್ಯಯನದ ಮೇಲೆ ಪ್ರೀತಿ, ವೈಯಕ್ತಿಕ ನಡತೆಯಲ್ಲಿ ಸುಧಾರಣೆ, ಮೌಲ್ಯಗಳ ಮೇಲೆ ಕಾಳಜಿ, ನೃತ್ಯವನ್ನು ಮಾಡುವುದಷ್ಟೇ ಅಲ್ಲ ನೋಡುವ ಕ್ರಮವೂ ಖಂಡಿತಾ ಮೂಡಿದೆ ಎಂದು ಹೇಳಬಲ್ಲೆ. ಚಿಣ್ಣರ ಪೋಷಕರು ಕೂಡಾ ನಾಟ್ಯಚಿಂತನ ಶಿಬಿರ ಮುಗಿದ ನಂತರದಲ್ಲಿ ತಮ್ಮ ಮಕ್ಕಳ ಮಾನಸಿಕ ಬೆಳವಣಿಗೆ, ಚುರುಕುತನ, ಧನ್ಯತೆ, ನೃತ್ಯಾಭ್ಯಾಸದ ಓದಿನತ್ತ ಆಸಕ್ತಿಯ ಬಗ್ಗೆ ಆಗಾಗ್ಗೆ ಹಂಚಿಕೊಳ್ಳುತ್ತಿದ್ದ ಸಂಭ್ರಮ ಮತ್ತಷ್ಟು ಕೃತಜ್ಞರಾಗುವಂತೆ ಮಾಡಿದೆ.’ – ಮನೋರಮಾ ಬಿ.ಎನ್, ಕಾರ್ಯಾಗಾರದ ಸಂಯೋಜಕರು ಮತ್ತು ನೂಪುರ ಭ್ರಮರಿಯ ಅಧ್ಯಕ್ಷೆ, ಸಂಪಾದಕರು

 

ನಾಟ್ಯಶಿಬಿರವು ಈ ನೆಲದಲ್ಲಿ ಬೆಳೆದ ಎಳನೀರಿನ ಹಾಗೆ
‘ನಾಟ್ಯಶಿಬಿರವೆನ್ನುವುದು ಉಳಿದೆಲ್ಲಾ ಮಿಕ್ಸ್ಡ್ ಸಲಾಡ್‍ನಂತಿರುವ ಶಿಬಿರದ ಕಲ್ಪನೆಗಳಿಗಿಂತ ವಿಶೇಷವಾದುದು. ಇದು ಈ ನೆಲದಲ್ಲಿ ಬೆಳೆದ ಎಳನೀರಿನ ಹಾಗೆ. ಬೇರೆ ರೀತಿಯ ಶಿಬಿರಗಳು ಪೆಪ್ಸಿ, ಕೋಕಾಕೋಲಾ ಇದ್ದಹಾಗೆ. ಆರೋಗ್ಯಕ್ಕೆ ಅನುಕೂಲ ಎಳನೀರು. ಆದರೆ ಪೆಪ್ಸಿ, ಕೋಕಾಕೋಲಾ ಕುಡಿಯುವುದರಿಂದ ಕರುಳು ಕರಗುತ್ತದೆ ಎನ್ನುತ್ತಾರೆ ಪ್ರಾಜ್ಞರು. ಆದರೆ ಇಂದಿನ ಕಾಲಕ್ಕೆ ಬೇಕಿರುವುದು ಹೃದಯ ಕರಗುವಂತಹ ವಿಚಾರದ ಶಿಬಿರಗಳು. ಇಂತಹ ಶಿಬಿರಗಳಲ್ಲಿ ಮಕ್ಕಳಿಗೆ ಕಥೆ ಹೇಳುವ ಮತ್ತು ಕೇಳುವ ಪ್ರವೃತ್ತಿ ಬೆಳೆಯಬೇಕು. ಇಂತಹ ನಮ್ಮ ಸನಾತನ ಧರ್ಮದ ಕತೆಗಳನ್ನು ಮಕ್ಕಳಿಗೆ ಹೇಳಿ ಅವರಲ್ಲಿ ನೀತಿ ನಿಯಮಗಳ ಜಾಗೃತಿಯನ್ನೂ, ಅದಕ್ಕೆ ನರ್ತಿಸುವ ಸೃಷ್ಟಿಶೀಲತೆಯನ್ನೂ ಶಿಬಿರವು ಸಮರ್ಥವಾಗಿ ಮಾಡಿದೆ.

ಮಾತ್ರವಲ್ಲದೆ ಈ ಶಿಬಿರದ ಮೂಲಕವಾಗಿ ನಾಟ್ಯಶಾಸ್ತ್ರದ ಕತೆಗಳನ್ನು ನರ್ತಿಸುವ ಸಾಹಿತ್ಯ,ಸಂಗೀತ, ಸ್ವರಕಲ್ಪನೆ ವಿನೂತನವಾಗಿ ಸೃಷ್ಟಿಯಾಗಿದೆ. ಇಂತಹ ಶಿಬಿರಗಳ ಕಲ್ಪನೆ, ಸಾಧ್ಯತೆ ನಾವು ಸಣ್ಣವರಾಗಿದ್ದಾಗ ಇರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಶಿಬಿರಗಳನ್ನು ಮತ್ತಷ್ಟು ಆಯೋಜಿಸುವುದು ಸಾರ್ಥಕ ಪ್ರಯತ್ನ ಮತ್ತು ಅದನ್ನು ಸದುಪಯೋಗಿಸಿಕೊಳ್ಳುವುದು ಸಾರ್ವಜನಿಕರ ಕರ್ತವ್ಯ ವಿದ್ಯಾರ್ಥಿಗಳು ನೋಡಿ ಕಲಿ-ಮಾಡಿ ತಿಳಿ ಎಂಬ ನೀತಿಯನ್ನು ಅಳವಡಿಸಿಕೊಂಡಾಗ ಕಲೆಯ ಬಗೆ ಆಸಕ್ತಿ ಅರಳಲು ಸಾಧ್ಯ”.– ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಶಿಬಿರದ ಸಂಪನ್ಮೂಲವ್ಯಕ್ತಿ, ವಿಮರ್ಶಕ, ಕವಿ, ನಾಟಕಕಾರ, ರಂಗಕರ್ಮಿ, ರಾಮಕಥಾ ರೂಪಕ ನಿರ್ದೇಶಕ.

ಬೇಸಿಗೆ ಶಿಬಿರಗಳ ಸಾಲಿಗೆ ಹೊಸ ಕಲ್ಪನೆಯಿದು’
ಬೇಸಿಗೆ ಶಿಬಿರಗಳಲ್ಲಿ ನಾಟ್ಯದ ಕುರಿತಾದ ಚಿಂತನೆಗಳನ್ನು ತಿಳಿಸುವ ಕಾರ್ಯಾಗಾರಗಳ ಸಂಖ್ಯೆ ಬಹಳ ವಿರಳ. ಆದರೆ ಇಂತಹ ಅತ್ಯಪೂರ್ವ ಕಾರ್ಯವನ್ನು ನೂಪುರ ಭ್ರಮರಿ ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಮಸ್ತರೂ ಕೈಗೆತ್ತಿಕೊಂಡು ಜವಾಬ್ದಾರಿಯುತವಾಗಿ ನಡೆಸಿಕೊಟ್ಟು ಅರಿವನ್ನು ಮೂಡಿಸಿದ್ದಾರೆ. ದೇಶೀಯ ನಾಟ್ಯವಿಶೇಷಗಳನ್ನು ಅರ್ಥಮಾಡಿಸುವ ಇಂತಹ ಹೊಸ ಕಲ್ಪನೆಗಳಿಂದ ಮಕ್ಕಳು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ, ಮತ್ತು ಇದು ನಾಟ್ಯದ ವಿಕಾಸಕ್ಕೆ ಕಾರಣವಾಗಲಿ – ಕೃಷ್ಣನಾರಾಯಣ ಮುಳಿಯ, ಜೇಸೀ ಪುತ್ತೂರು ಅಧ್ಯಕ್ಷ, ಮುಳಿಯ ಜ್ಯುವೆಲ್ಸ್‍ನ ವ್ಯವಸ್ಥಾಪಕ ನಿರ್ದೇಶಕ

teaching studetns through Naatyashastra tales valedictory

‘ಮಕ್ಕಳಿಗೆ ಶಿಬಿರ ಬಿಟ್ಟು ಹೋಗಲು ಮನಸ್ಸಿಲ್ಲದೆ ಕಣ್ಣುಂಬಿಕೊಂಡರು’
‘ಈ ಮಾದರಿಯ ಶಿಬಿರದ ಕಲ್ಪನೆ ಮತ್ತು ಸಂಯೋಜನೆಯೇ ನೃತ್ಯಕ್ಷೇತ್ರಕ್ಕೆ ಹೊಸತು. ಇದಕ್ಕಾಗಿ ಮನೋರಮಾರಿಂದ ಮೊದಲ್ಗೊಂಡು ನಾವೆಲ್ಲರೂ ಸಾಕಷ್ಟು ಚಿಂತನೆ ನಡೆಸಿದ್ದೇವೆ. ಮೊದಮೊದಲಿಗೆ ಇದರ ಸಫಲತೆಯ ಬಗ್ಗೆ ಸಂದೇಹಗಳಿದ್ದದ್ದು ನಿಜ. ಆದರೆ ಈಗ ನಾಟ್ಯದ ಶಿಬಿರವೊಂದು ಕೇವಲ ನೃತ್ಯಗಳನ್ನು ಹೇಳಿಕೊಡಲು ಮಾತ್ರ ಇರುವುದಿಲ್ಲ; ಬದಲಾಗಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗುವಂತೆ ಅವರಿಂದಲೇ ವಿನ್ಯಾಸಗೊಳ್ಳುತ್ತದೆ ಎಂಬುದು ಕಲಾವಿದರೆಲ್ಲರಿಗೂ ಗೊತ್ತಾಗಿದೆ. ಚಿಕ್ಕಮಕ್ಕಳೂ ಕೂಡಾ ಮಧ್ಯಾಹ್ನ ಶಿಬಿರ ಮುಗಿಸಿ ಮನೆಗೆ ಹೋದಾಗ ಇಡೀ ದಿನ ಶಿಬಿರ ಇಲ್ಲವಲ್ಲ ಎಂದು ಅಮ್ಮಂದಿರಲ್ಲಿ ಅಳುತ್ತಿದ್ದರೆಂದು ಪೊಷಕರೇ ಹೇಳುತ್ತಿದ್ದರು.

ಇನ್ನೂ ಕೆಲವು ಮಕ್ಕಳಂತೂ ವಾರದ ಶಿಬಿರದ ಪ್ರಯೋಜನ ಪಡೆದು ಹೊರಡುವಾಗ ಕಣ್ಣೀರು ಹಾಕಿ ಹಟ ಮಾಡಿದ ಉದಾಹರಣೆಯೂ ಇದೆ. ಈ ನಿಟ್ಟಿನಲ್ಲಿ ನಮ್ಮಿಂದ ಆರಂಭಗೊಂಡ ವಿನೂತನ ಹೆಜ್ಜೆ ಮುಂದೆ ಕ್ಷೇತ್ರಕ್ಕೇ ಮಾದರಿಯಾಗಿ ನಿಲ್ಲಲಿದೆ ಎಂಬ ಸಾರ್ಥಕತೆ ಮೂಡಿದೆ. ಇದಕ್ಕೆ ಗುರುಗಳು, ಕಲಾವಿದರು ತಮ್ಮ ಮನಸ್ಸಿನ ದ್ವಂದ್ವಗಳನ್ನು ಬದಿಗಿಟ್ಟು ಮುಕ್ತ ಮನಸ್ಸಿನಿಂದ ಸಹಕಾರ ನೀಡಿದರೆ ಮುಂದಿನ ವರುಷಗಳಲ್ಲಿ ಮತ್ತಷ್ಟು ಭರವಸೆಯ ನೃತ್ಯಸಂಯೋಜಕರು ನಿರ್ಮಾಣಗೊಳ್ಳುತ್ತಾರೆ. ಒಟ್ಟಿನಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೂ ಈ ‘ನಾಟ್ಯಚಿಂತನ’ ಸಾಕಷ್ಟು ಕೊಡುಗೆ ನೀಡಿದೆ ಎಂಬ ಭರವಸೆಯಿದೆ.’– ವಿದ್ವಾನ್ ದೀಪಕ್ ಕುಮಾರ್, ಕಾರ್ಯಾಗಾರದ ಸಂಯೋಜಕರು ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕರು

Leave a Reply

*

code