ಅಂಕಣಗಳು

Subscribe


 

ಪ್ರಾಚೀನಭಾರತದಲ್ಲಿ ಕಲಾವೈವಿಧ್ಯ ಮತ್ತು ವಾತ್ಸ್ಯಾಯನರ ಕಾಮಸೂತ್ರ : ಪ್ರಸ್ತುತತೆ ಮತ್ತು ಪ್ರಾಯೋಗಿಕತೆ

Posted On: Friday, November 28th, 2014
1 Star2 Stars3 Stars4 Stars5 Stars (No Ratings Yet)
Loading...

Author: - ಪ್ರೊ. ಇ. ಮಹಾಬಲ ಭಟ್ಟ, ಉಜಿರೆ.

ವಿದ್ಯೆ-ಮಹತ್ತ್ವ, ಕಲಿಕಾಪದ್ಧತಿ ಮತ್ತು ಉಪಯೋಗ

ವಿದ್ಯಾವಿಹೀನಃ ಪಶುಃ – ವಿದ್ಯೆ ಕಲಿಯದ ಮನುಷ್ಯನು ಪಶು (ಪ್ರಾಣಿ) ಎಂದಿರುವ ಭರ್ತೃಹರಿಯ ಮಾತು ಎಲ್ಲಾ ಕಾಲಗಳಿಗೆ ಅನ್ವಯಿಸುತ್ತದೆ. ಆಹಾರ, ನಿದ್ರೆ, ಭಯ, ಕಾಮ ಹೀಗೆ ಈ ನಾಲ್ಕು ವಿಷಯಗಳಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಯಾವ ವ್ಯತ್ಯಾಸವಿಲ್ಲ. ಆದರೆ ಒಳ್ಳೆಯ ಮತ್ತು ಕೆಟ್ಟ ವಿಚಾರಗಳನ್ನು ತಿಳಿದುಕೊಳ್ಳುವ ವಿವೇಕ ಎಂಬ ಶಕ್ತಿಯಿರುವುದು ಮನುಷ್ಯರಿಗೆ ಮಾತ್ರ. ವಿವೇಕ ಇರುವುದರಿಂದ ಮನುಷ್ಯನಿಗೆ ಮಹತ್ವವಿದೆ. ವಿವೇಕವನ್ನು ಮತ್ತಷ್ಟು ಬಲಪಡಿಸುವಂತಹುದು ವಿದ್ಯೆ. ವಿದ್ಯೆ ಮತ್ತು ವಿವೇಕ ಎರಡೂ ಒಟ್ಟಾದರೆ ಹೊಳೆಯುವ ಬಂಗಾರದಂತೆ ಸಮಾಜದಲ್ಲಿ ಶೋಭಿಸುತ್ತಾನೆ. ಮನುಷ್ಯನ ವಿವೇಕವನ್ನು ವಿಕಸನಗೊಳಿಸುವಂತಹುದು ವಿದ್ಯೆ.

ಸಂಸ್ಕೃತದ “ವಿದ್ -“ ಎಂಬ ಧಾತು (ಶಬ್ದದ ಮೂಲ ರೂಪ) ವಿದ್ಯೆಯ ಮೂಲ. ಇದರಿಂದ ವಿದ್ಯೆ ಎಂಬ ಶಬ್ದ ಹುಟ್ಟಿದುದಾಗಿದೆ. ಈ ವಿದ್ಯೆಯು ಶಿಕ್ಷಣದಿಂದ ದೊರೆಯುತ್ತದೆ. ಶಿಕ್ಷಣ ಎಂದರೆ, ವಿದ್ಯೆಯನ್ನು ನೀಡುವಂತಹುದು. ಇದರ ಮೂಲ ರೂಪ –‘ಶಿಕ್ಷ ’ – ವಿದ್ಯೆಯನ್ನು ನೀಡುತ್ತದೆ. ಈ ಶಿಕ್ಷಣ ಮನುಷ್ಯನ ಬಾಲ್ಯದಿಂದ ಪ್ರಾರಂಭವಾಗುತ್ತದೆಯಾಗಿ; ಓರ್ವ ಕನ್ನಡದ ಅಜ್ಞಾತ ಕವಿ -‘ ಚಿಕ್ಕಂದಿನಾ ವಿದ್ಯೆ ಪೆರೆಗು ಚೂಡಾರತ್ನಾ’ ಎಂದು ಹಾಡಿ ಹೊಗಳುತ್ತಾನೆ.

  ಬಾಲ್ಯದಿಂದಲೇ ಕಲಿಯಬೇಕಾದ ವಿದ್ಯೆ ಯಾವುದು? ಎಂಬ ಪ್ರಶ್ನೆಗೆ ಪಂಡಿತರು ಕೊಡುವ ಉತ್ತರ – ಬದುಕು ಕೊಡುವ ವಿದ್ಯೆ (ಸಾರ್ಥಕವಾದ ವಿದ್ಯೆ). ಈ ರೀತಿಯ ವಿದ್ಯೆಯನ್ನು ಪಡೆಯುವಾಗ ಮನುಷ್ಯನಲ್ಲಿ ವಿನಯವು ಹುಟ್ಟುತ್ತದೆ. ವಿನಯದಿಂದ ಬೇಕಾದ ಅರ್ಹತೆಯ ಸಂಪಾದನೆ ಆಗುತ್ತದೆ. ಅರ್ಹತೆಯಿಂದ ಒಳ್ಳೆಯ ಸಂಪತ್ತು ಕ್ರೋಢೀಕರಣವಾಗುತ್ತದೆ. ಸಂಪತ್ತಿನಿಂದ ಧರ್ಮ. ಧರ್ಮದಿಂದ ಸುಖ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ವಿದ್ಯೆಯನ್ನು ಪಡೆಯಲು ಹವಣಿಸುವುದೂ; ತಂದೆ-ತಾಯಿಗಳು ಮಕ್ಕಳಿಗೆ ವಿದ್ಯೆಯನ್ನು ಕೊಡಿಸುವುದೂ ನಡೆಯುತ್ತಲೇ ಬಂದಿದೆ.

ಪ್ರತಿಯೊಬ್ಬ ಮನುಷ್ಯನು ವಿದ್ಯೆಯಿಂದ ಧರ್ಮ, ಅರ್ಥ, ಕಾಮ ಮೋಕ್ಷ ಎಂಬ ಪ್ರಯೋಜನವನ್ನು ಪಡೆಯುತ್ತಾನೆ. ಇದನ್ನು ‘ಪುರುಷಾರ್ಥ ಎನ್ನುತ್ತೇವೆ. ಈ ಪುರುಷಾರ್ಥಗಳಲ್ಲಿ ಸುಖವನ್ನೇ ಪ್ರಧಾನವಾಗಿ ಹೊದಿರುವ ಮೋಕ್ಷ ಪ್ರಮುಖವಾದುದು. ಸುಖವು ಮೋಕ್ಷದ ಪ್ರಯೋಜನ. ಈ ಸುಖ ಮನುಷ್ಯನು ಜೀವದಲ್ಲಿರುವಾಗಲೂ ಬೇಕು; ಮರಣಾನಂತರದಲ್ಲೂ ಬೇಕು. ಮನುಷ್ಯನು ಪಡೆಯಬಹುದಾದ ಸುಖಗಳಲ್ಲಿ ನಿರಂತರ ಸಂಪತ್ತಿನ ಸಂಗ್ರಹ, ಆರೋಗ್ಯ, ಪ್ರಿಯವಾದ ಮಾತುಗಳನ್ನು ಆಡುವ ಮತ್ತು ಪ್ರಿಯಳಾದ ಹೆಂಡತಿ, ವಿಧೇಯನಾಗಿರುವ ಮಗ, ಸಂಪತ್ತನ್ನು ನೀಡುವ ವಿದ್ಯೆ ಮುಖ್ಯವಾದುವುಗಳೆಂದು ಶಾಸ್ತ್ರಗಳು ತಿಳಿಸಿವೆ.

ಸುಖ ಎಂಬುದು ಸಂಪತ್ತಿನ ಪ್ರಯೋಜನ. ಈ ಸಂಪತ್ತು ವಿದ್ಯೆಯಿಂದ ಬರುತ್ತದೆ. ಆದ್ದರಿಂದ ಬದುಕುಕೊಡುವ ವಿದ್ಯೆ ಕಲಿತಾಗ ಅದು ಸಾರ್ಥಕ ವಿದ್ಯೆ ಎನಿಸಿಕೊಳ್ಳುತ್ತದೆ. ಈ ವಿದ್ಯೆ ಯಾವುದು? ಈ ವಿದ್ಯೆಯನ್ನು ಪಡೆದುಕೊಳ್ಳುವುದು ಹೇಗೆ? ಎಂಬ ವಿಷಯ ಅನ್ವೇಷಣೆಯೇ ಈ ಲೇಖನದ ಪ್ರಮುಖ ಗುರಿ.

ವಿದ್ಯೆಯನ್ನು ಪಡೆಯುವುದು ಸುಲಭದ ಕೆಲಸವಲ್ಲ. ವಿದ್ಯೆಯನ್ನು ಪಡೆಯಲು ಶಿಕ್ಷಣದ ಅಗತ್ಯವಿದೆ. ಶಿಕ್ಷಣಕ್ಕೆ ಅಗತ್ಯವಾದುದು ಶ್ರದ್ಧೆ. ಭಗವದ್ಗೀತೆಯಂತೂ ಜ್ಞಾನವನ್ನು ಪಡೆಯಲು ಮುಖ್ಯವಾದ ಅಂಗ ಶ್ರದ್ಧೆ, ಶ್ರದ್ಧೆಯುಳ್ಳವನಷ್ಟೇ ವಿದ್ಯೆಯನ್ನು ಪಡೆಯಲು ಸಾಧ್ಯ ಎನ್ನುತ್ತದೆ. ಆದರೆ ಶ್ರದ್ಧೆಯುಳ್ಳವನಾದರೂ ಕೂಡಾ ತನ್ನಿಂದ ತಾನಾಗಿ ವಿದ್ಯೆಯನ್ನು ಪಡೆಯಲಾರನು. ವಿದ್ಯೆಯನ್ನು ಪಡೆಯದೆ ಹಸನಾದ ಬಾಳನ್ನು ಹೊಂದಲಾರನು.

ಇದಕ್ಕೆ ಹಿಂದಿನಿಂದಲೇ ಮಾನವನ ಉಗಮದೊಂದಿಗೇ ವಿದ್ಯೆಯನ್ನು ಕಲಿಸುವ, ಕಲಿಯುವ ಪರಂಪರೆ ಹುಟ್ಟಿದೆ. ಗುರು-ಶಿಷ್ಯ ಪರಂಪರೆ – ಗುರುಕುಲ ಪದ್ಧತಿ (ಇಂದಿನ ಹಾಸ್ಟೆಲ್ ಪದ್ಧತಿ) ಇವೆಲ್ಲ ಅವಿರತವಾಗಿ ಬಂದಿವೆ. ವಿದ್ಯೆಯನ್ನು ಕಲಿಸಲು, ಕಲಿಯಲು ಬೇಕಾದ ವಿಚಾರಸರಣಿಯನ್ನು ನಿರ್ದಿಷ್ಟವಾಗಿ ರಚಿಸಿ, ‘ಶಾಸ್ತ್ರ’ ಎಂಬ ಮಾತಿನಲ್ಲಿ ಪ್ರಾಚೀನರು ಹೇಳಿದ್ದಾರೆ. ಆಧುನಿಕ ನೆಲೆಯಲ್ಲಿ ಶಿಕ್ಷಣತಜ್ಞರು ‘ಶಿಕ್ಷಣನೀತಿ’ ಎಂಬ ಹೆಸರಿನಡಿಯಲ್ಲಿ ನಿರೂಪಣೆ ಮಾಡಿದ್ದಾರೆ. ಪ್ರಾಚೀನ- ಅರ್ವಾಚೀನ ಕಲ್ಪನೆಗಳು ಶಿಕ್ಷಣ-ವಿದ್ಯೆ ಎಂಬುವುದನ್ನು ಪ್ರತಿಯೊಬ್ಬರು ಹೊಂದಿರಬೇಕು ಎಂಬ ಪರಿಕಲ್ಪನೆಯಲ್ಲಿ ಹೊರಟಿದೆ.

ವಿದ್ಯೆಯನ್ನು ಶಿಷ್ಯನಾದವನು ಗುರುಶುಶ್ರೂಷೆಯಿಂದ ಕಲಿಯಬಹುದು. ಹೇರಳವಾದ ಸಂಪತ್ತಿನ ದಾನದಿಂದ ಪಡೆಯಬಹುದು. ಪರಸ್ಪರ ವಿದ್ಯೆಯ ಕೊಡುಕೊಳ್ಳುವಿಕೆಯ ವಿಧಾನದಿಂದ ಪಡೆಯಬಹುದು. – ಈ ಮೂರು ಮಾರ್ಗಗಳು ವಿದ್ಯೆಯ ಸಂಪಾದನೆಗೆಂದೇ ಹೇಳಲಾಗಿದೆ. ನಾಲ್ಕನೆಯದಾದ ಇತರ ಯಾವುದೇ ಮಾರ್ಗವಿಲ್ಲ ಎಂಬುದು ಬುದ್ಧಿವಂತರೊಂದಿಗೇ ದಡ್ಡರೂ ಕೂಡಾ ಕಂಡುಕೊಂಡಂತಹ ವಿಷಯ . ಅದರಲ್ಲೂ ಭಾರತದ ಸಾರಸ್ವತ ಪರಂಪರೆಯಲ್ಲಿ ಹೆಚ್ಚು ಮಾನ್ಯತೆ ಗುರುಗಳಿಂದ ಕಲಿತಂತಹ ವಿದ್ಯೆಗೆ ಇರುವುದು.

ಅದಕ್ಕೆ ಹಣಕೊಟ್ಟು ಪಡೆಯುವ ವಿದ್ಯೆಯಲ್ಲಿಯೂ ಕೆಲವು ದಿನ ಗುರುಗಳಿಂದ ಕೇಳಬೇಕೆಂಬ (ಕೇಳಲೇಬೇಕೆಂಬ) ವಿಶೇಷ ವ್ಯವಸ್ಥೆ ಏರ್ಪಾಡಾಗಿರುತ್ತದೆ. ಇದನ್ನು ತಪ್ಪಿಸಿದವರಿಗೆ ಮುಂದಿನ ಅವಕಾಶಗಳು ನಿರಾಕರಿಸಲ್ಪಡುತ್ತದೆ. ಈ ರೀತಿ ಪಡೆದ ವಿದ್ಯೆ ಲೋಕದಲ್ಲಿರುವ ಎಲ್ಲಾ ಸಂಪತ್ತಿಗಿಂತಲೂ ಹಿರಿದಾದದ್ದು, ಪರಮೋಚ್ಚವಾದದ್ದು. ಈ ವಿದ್ಯಾ ಸಂಪತ್ತು ತನ್ನ ದೇಶದಲ್ಲಿ ವ್ಯಕ್ತಿಯನ್ನು ವಿಶೇಷವಾದ ಸ್ಥಾನಕ್ಕೆ ಕರೆದೊಯ್ಯುತ್ತದೆ. ವಿದೇಶದಲ್ಲೂ ವಿದ್ಯಾವಂತನಾದ ವ್ಯಕ್ತಿಗೆ ಬಹಳ ಮಾನ್ಯತೆ ದೊರೆಯುತ್ತದೆ ಎಂಬುದನ್ನು ನಾವೀಗಾಗಲೇ ಕಂಡುಕೊಂಡಿದ್ದೇವೆ.

ಇನ್ನು ಈ ವಿದ್ಯೆಯನ್ನು ಪಡೆಯಲು ಸಂಪತ್ತನ್ನು ದಾನ ಮಾಡಬಹುದು. ಆದರೆ ಅದು ವಿಶೇಷ ಫಲಕಾರಿಯಾದ ವ್ಯವಸ್ಥೆ ಆಗಿರುವುದಿಲ್ಲ. ಇನ್ನೊಂದು ‘ಕೊಡು-ಕೊಳ್ಳುವಿಕೆ’ ಎಂಬ ವಿಧಾನದಿಂದ ವಿದ್ಯೆಯನ್ನು ಪಡೆಯುವ ಕ್ರಮ. ಈ ಮೂರಕ್ಕಿಂತ ಹೊರತಾಗಿ ಯಾವ ರೀತಿಯಲ್ಲೂ ವಿದ್ಯೆಯನ್ನು ಪಡೆಯಲು ಸಾಧ್ಯವಿಲ್ಲ.

ಆಧುನಿಕಕಾಲ ಸ್ಪರ್ಧಾಯುಗವಾಗಿ ಬದಲಾಗಿದೆ. ದಿನದಿಂದ ದಿನಕ್ಕೆ ಬೆಳೆಯುವ ತಂತ್ರಜ್ಞಾನ, ಕೌಶಲ, ಸಂಶೋಧನೆ ಇವುಗಳು ಭಾರತವನ್ನು ಆವರಿಸುವ ಆವೇಗ. ಇದರೊಂದಿಗೇ ಕುಸಿಯುತ್ತಿರುವ ನೈತಿಕ ಜೀವನ, ರೋಗಗಳ ವ್ಯಾಪಕತೆ, ಅವಿವೇಕಯುಕ್ತವಾದ ಜೀವನ, ಅಸಾರಭೂತವಾದ ವಿದ್ಯೆ, ಆರ್ಥಿಕ ಪ್ರಗತಿಯ ಸಂದೇಶ- ಇವುಗಳಿಗೆಲ್ಲ ನೆಲೆಯಾಗುತ್ತಿದೆ ಭಾರತದೇಶ. ಇದರೊಂದಿಗೆ ನಾಶವಾಗುತ್ತಿರುವ ಭಾವನಾತ್ಮಕತೆ, ತನ್ಮಯತೆ, ಪ್ರತಿಭಾಶಕ್ತಿ, ತೃಪ್ತಿ, ಶಾಂತಿ – ಇವುಗಳಿಗೆಲ್ಲ ಮೂಲಾಧಾರವಾಗಿದೆ ಇಂದಿನ ಆಧುನಿಕ ವಿದ್ಯೆ.

ವಿದ್ಯೆಯಿಂದ ಬದುಕುವ ಮನುಷ್ಯ, ಸಂಘಸಂಸ್ಥೆಗಳು, ವಿದ್ಯೆಗಾಗಿ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುವ ತಂದೆ-ತಾಯಿಗಳು, ಇವೆಲ್ಲ ಆಧುನಿಕ ವಿದ್ಯೆಯ ವಿದ್ಯಾಕ್ಷೇತ್ರಗಳ ದಂತಕಥೆಗಳಾಗುತ್ತಿವೆ. ಹಿಂದೊಮ್ಮೆ ದೇಶ-ವಿದೇಶಕ್ಕೆ, ಇಡೀ ಭವ್ಯ ಜನಾಂಗಕ್ಕೆ ಭದ್ರ ಬುನಾದಿಯನ್ನು ಕಲ್ಪಿಸಿದಂತಹ ಭಾರತದ ಸಾರಸ್ವತ ಪರಂಪರೆಯು ಮರೀಚಿಕೆಯಾಗುತ್ತಿರುವಾಗ ಹಿಂದೆ ಈ ಪರಂಪರೆ ಪೂರ್ಣನಷ್ಟಪ್ರಾಯವಾಗುವ ಮುನ್ನ ಈ ಪರಂಪರೆಯನ್ನು ಮಗದೊಮ್ಮೆ ಶೋಧಿಸುವುದು ಪ್ರಕೃತ ಉದ್ದೇಶ.

ಚತುಃಷಷ್ಟಿ ಕಲೆಗಳು ಮತ್ತು ಅವುಗಳ ಮಹತ್ತ್ವ

ಭಾರತದ ಸಾರಸ್ವತ ಪರಂಪರೆಯ ಮೂಲ- ವೇದಗಳು. “ತಿಳಿಸುವಂತಹುದು” ಎಂಬ ಅರ್ಥದಲ್ಲೇ, ವ್ಯಾಪಕತೆಯನ್ನು ಕಂಡಿದ್ದ ವೇದಗಳು ಬಹುಮಂದಿಯ ಅಧ್ಯಯನ ವಸ್ತುವಾಗಿತ್ತು ಮತ್ತು ಇದನ್ನೇ ಕಲಿಯಬೇಕಾಗಿತ್ತು. ಅಧ್ಯಯನ ಮಾಡದೇ ಉಳಿದವರು ಕೊಡು-ಕೊಳ್ಳುವಿಕೆಯ ನೀತಿಯಿಂದ ಸಾರವನ್ನು ಅರಿಯಬಹುದಾಗಿತ್ತು. ಇದರೊಂದಿಗೆ ಕಲಿಯಲೇಬೇಕಾದ ವಿದ್ಯೆ ‘ಚತುಃಷಷ್ಟಿ ಕಲೆಗಳು’, “ಚೌಷಷ್ಟಿ ಕಲೆ” ಎಂದು ಕರೆಯಲ್ಪಡುತಿದ್ದವು. ಇವೇ 64 ವಿದ್ಯೆಗಳು. ಈ ವಿದ್ಯೆಗಳಿಗೆ ವೇದಗಳೇ ಮುಖ್ಯವಾಗಿದ್ದರೂ ಕೂಡಾ ಅವೊಂದೇ ಕಲಿಕೆಯ ಹಿಂದಿನ ಕಾರಣಗಳಾಗಿರಲಿಲ್ಲ. ಜೊತೆಗೆ ಸಮಾಜದಲ್ಲಿದ್ದ ವೇದ ಅನಾಭ್ಯಾಸಿಗಳಿಗೆ ಕಲಿಯಲು ಇವು ಬಹಳ ಅನುಕೂಲವಾಗಿದ್ದವು.

ಚತುಃಷಷ್ಟಿ ಕಲೆಗಳು ಆಗಿನ ಕಾಲಕ್ಕೆ ಆಧುನಿಕ ವಿದ್ಯೆಗಳು ಎಂದೇ ಕರೆಯಲ್ಪಡುತ್ತಿದ್ದರೂ ಶಾಸ್ತ್ರಗಳೇ ಆಧಾರವಾಗಿತ್ತು. ಭಾರತದಲ್ಲಿ ಪ್ರಾಚೀನದಲ್ಲಿ ಶಾಸ್ತ್ರಗಳು ಜನ-ಜೀವನವನ್ನು ನಿಯಂತ್ರಣ ಮಾಡುತ್ತಿದ್ದವು. ಈ ಶಾಸ್ತ್ರಗಳು ಕಾರ್ಯಾಕಾರ್ಯ ಎರಡನ್ನೂ ತಿಳಿಸಿಕೊಡುತ್ತಿದ್ದವು. ಯಾವುದೇ ಕೆಲಸ-ಕಾರ್ಯಗಳನ್ನು ನಿರ್ವಹಿಸುವಲ್ಲಿ ನಿರ್ವಹಿಸದೇ ಇರುವಲ್ಲಿ ಇವುಗಳೇ ಆಧಾರಸ್ತಂಭಗಳಾಗಿದ್ದವು. ಇವುಗಳ ಪೈಕಿ ವೇದ, ವೇದಾಂಗವೇ ಮೊದಲಾದ ದೈವಿಕ, ಪಾರತ್ರಿಕ ಚಿಂತನೆಯಿಂದ ಪ್ರಾರಂಭಿಸಿ ಲೌಕಿಕ ಜೀವನವನ್ನು ಬೋಧಿಸುವ ಚಾರ್ವಾಕ, ಕಾಮಶಾಸ್ತ್ರದಂತಹ ಶಾಸ್ತ್ರಶಾಖೆಗಳೂ ಇದ್ದವು. ಇವುಗಳೆಲ್ಲವು ಮೂಲ ಉದ್ದೇಶ ಮನುಕುಲದ ಉದ್ಧಾರವೇ ಆಗಿತ್ತು.

ಭಾರತೀಯ ಶಾಸ್ತ್ರ ಸಾರಸ್ವತ ಪರಂಪರೆಯಲ್ಲಿ ಬಂದ 64 ವಿದ್ಯೆಗಳು ಪ್ರಾಚೀನದಿಂದಲೂ ಪ್ರಸಿದ್ಧ. ಇವುಗಳು –

1. ಸಂಗೀತ/ಹಾಡು – ಇದು ಸ್ವರ, ಪದ, ಲಯ, ಹೇಗೂ ಮನಸ್ಸಿಗೆ ಸುಸ್ಥಿತಿಯುಂಟುಮಾಡುವಂಥಾದ್ದು ಎಂದು ನಾಲ್ಕು ಬಗೆ.
2. ನೃತ್ಯ – ನರ್ತಿಸುವುದು
3. ವಾದ್ಯ – ವಿವಿಧ ಸಂಗೀತವಾದ್ಯಗಳನ್ನು ನುಡಿಸುವಿಕೆ
4. ಆಲೇಖ್ಯ – ಚಿತ್ರಕಲೆ
5. ವಿಶೇಷಕಚ್ಛೇದ್ಯ – ತಿಲಕದ ಆಕೃತಿಯಂತೆ ಭೂರ್ಜಪತ್ರವನ್ನು ಕತ್ತರಿಸುವುದು/ ಬೇರೆ ಬೇರೆ ಆಕಾರದಲ್ಲಿ ತಿಲಕವನ್ನಿಡುವುದು
6. ತಂಡುನಕುಸುಮಾವಲಿವಿಕಾರ – ತುಂಡಾಗದ ಇಡೀ ಅಕ್ಕಿಯ ಕಾಳುಗಳು ಮತ್ತು ಹಣ್ಣುಗಳಿಂದ ದೇವರ ಸನ್ನಿಧಿಯಲ್ಲಿ ವಿವಿಧ ಆಕೃತಿಗಳನ್ನು ರಚಿಸುವುದು
7. ಪುಷ್ಪಾಸ್ತರಣ – ನಾನಾ ಬಣ್ಣದ ಹೂಗಳಿಂದ ಬೇರೆ ಬೇರೆ ಆಕೃತಿಗಳಿಗೆ ತಕ್ಕಂತೆ ವಿವಿಧರಚನೆಗಳನ್ನು ಮಾಡುವುದು
8. ದಶನವಸನಾಂಗರಾಗ – ಹಲ್ಲುಗಳು, ವಸ್ತುಗಳು ಹಾಗೂ ಅಂಗಾಂಗಗಳನ್ನು ಕುಂಕುಮ ಮೊದಲಾದುವುಗಳಿಂದ ಅಲಂಕರಿಸುವುದು
9. ಮಣಿಭೂಮಿಕಾಕರ್ಮ – ಅತ್ಯುತ್ತಮ ಮಣಿಗಳನ್ನು ಬಳಸಿ ನೆಲದ ರಚನೆಯನ್ನು ಮಾಡುವುದು
10. ಶಯನರಚನ – ವಿವಿಧ ರೀತಿಗಳಿಂದ ಹಾಸಿಗೆ ಹಾಸುವುದು
11. ಉದಕವಾದ್ಯ – ಜಲತರಂಗ ಮುಂತಾದ ನೀರಿನ ವಾದ್ಯ ಸಂಗೀತ
12. ಉದಕಾಘಾತ – ಜಲಕ್ರೀಡೆಯಂತೆ ನೀರಿನಿಂದ ಪರಸ್ಪರ ಹೊಡೆಯುವುದು
13. ಚಿತ್ರಯೋಗ – ದೌರ್ಭಾಗ್ಯವನ್ನುಂಟುಮಾಡುವಂತಹ ಕೆಟ್ಟ ಕಾರ್ಯಗಳು ಉದಾಹರಣೆಗೆ ಅಕಾಲಿಕವಾಗಿ ತಲೆಗೂದಲನ್ನು ಹಣ್ಣಾಗಿಸುವಿಕೆ ಮುಂತಾದವು
14. ಮಾಲ್ಯಗ್ರಂಥನ ವಿಕಲ್ಪ – ವಿವಿಧ ರೀತಿಗಳಿಂದ ಹೂಮಾಲೆಗಳನ್ನು ಕಟ್ಟುವಿಕೆ
15. ಶೇಖರಕಾಪೀಡಯೋಜನ – ತಲೆಯ ಜುಟ್ಟಿಗೆ ಸಿಕ್ಕಿಸುವ ಮಾಲೆಗಳ ರಚನೆ
16. ನೇಪಥ್ಯಪ್ರಯೋಗ – ಆಯಾ ದೇಶ, ಕಾಲಗಳಿಗೆ ತಕ್ಕಂತೆ ಉಡುಪುಗಳನ್ನು ರಚಿಸುವುದು
17. ಕರ್ಣಪತ್ರಭಂಗ – ಆನೆಯ ದಂತ ಹಾಗೂ ಶಂಖ, ಚಿಪ್ಪುಗಳಿಂದ ಕಿವಿಗೆ ಹಾಕುವ ಆಭರಣಗಳನ್ನು ರಚಿಸುವುದು
18. ಗಂಧಯುಕ್ತಿ – ಪರಿಮಳಭರಿತ ಗಂಧವನ್ನು ತಯಾರಿಸಿ ಲೇಪಿಸುವುದು
19. ಭೂಷಣಯೋಜನ – ಬೇರೆ ಬೇರೆ ರೀತಿಯ ಆಭರಣಗಳನ್ನು ಮಾಡಿ ಜೋಡಣೆ ಮಾಡುವುದು
20. ಐಂದ್ರಜಾಲ – ಬಗೆಬಗೆಯ ಐಂದ್ರಜಾಲಗಳನ್ನು ಮಾಡುವುದು
21. ಕೌಚುಮಾರಯೋಗ – ಬಗೆಬಗೆಯಾಗಿ ದೇಹದ ಸೌಂದರ್ಯವನ್ನು ಹೆಚ್ಚು ಮಾಡುವುದು
22. ಹಸ್ತಲಾಘವ – ಅತ್ಯಂತ ಚುರುಕಾಗಿ ಕೈಗಳಿಂದ ಕೆಲಸವನ್ನು ಮಾಡುವುದು
23. ವಿಚಿತ್ರಶಾಕಯೂಷಭಕ್ಷವಿಕಾರಕ್ರಿಯೆ – ವಿಚಿತ್ರ ರೀತಿಯ ತರಕಾರಿ ತಿನಿಸುಗಳು, ಮಾಂಸದ ತಿಂಡಿಗಳನ್ನು, ಮಾಂಸದ ಸಾರನ್ನು ತಯಾರಿಸುವ ವಿಧಾನ
24. ಪಾನಕರಸರಾಗಾಸವಯೋಜನವಿಧಿ – ವಿವಿಧ ಪಾನೀಯ, ಲೇಹ, ಆಸವಗಳನ್ನು ತಯಾರಿಸುವುದು
25. ಸೂಚೀವಾನಕರ್ಮ- ಸೂಜಿಯನ್ನು ಉಪಯೋಗಿಸಿ ಮಾಡುವಂತಹ ಕೆಲಸಗಳು
26. ಸೂತ್ರ ಕ್ರೀಡೆ – ದಾರಗಳನ್ನು ಮಧ್ಯದಲ್ಲಿ ತುಂಡುಮಾಡಿ ಪುನಃ ಇಡಿಯಾಗಿರುವಂತೆ ತೋರಿಸುವುದು
27. ವೀಣಾಡಮರುಕವಾದ್ಯ – ವೀಣೆ, ಡಮರು ಮುಂತಾದವುಗಳನ್ನು ನುಡಿಸುವುದು
28. ಪ್ರಹೇಲಿಕಾ – ಒಗಟುಗಳನ್ನು ಹೇಳುವುದು ಹಾಗೂ ಬಿಡಿಸುವುದು
29. ಪ್ರತಿಮಾಲಾ – ಅಂತ್ಯಾಕ್ಷರಿಯಂತೆ ಸ್ಪರ್ಧೆಯಲ್ಲಿ ಶ್ಲೋಕಗಳ ರಚನೆ
30. ದುರ್ವಾಚಕಯೋಗ – ಶಬ್ದಗಳನ್ನು ಉಚ್ಚರಿಸಲು ಅತ್ಯಂತ ಕಷ್ಟವಾಗುವ ಮತ್ತು ಅವುಗಳ ಅರ್ಥಗಳನ್ನು ತಿಳಿಯಲು ಇನ್ನಷ್ಟು ಕಷ್ಟವಾಗುವ ಶ್ಲೋಕಗಳನ್ನು ಹೇಳುವುದು
31. ಪುಸ್ತಕವಾಚನ – ಕಾವ್ಯಗಳನ್ನು ಆಯಾ ರಸಗಳಿಗೆ ತಕ್ಕಂತೆ ವಾಚನ ಮಾಡುವುದು (ಗಮಕ)
32. ನಾಟಕ- ಆಖ್ಯಾಯಿಕೆಗಳನ್ನು ರಂಗಸ್ಥಳದ ಮೇಲೆ ಅಭಿವಯಪೂರ್ವಕವಾಗಿ ತೀರಿಸುವುದು
33. ಕಾವ್ಯ ಸಮಸ್ಯಾಪೂರಣ – ಕಾವ್ಯದಲ್ಲಿ ಪದ್ಯವೊಂದರಲ್ಲಿರುವ ಒಂದು ಸಾಲನ್ನು ಬೇರೆ ಅರ್ಥ ಬರುವಂತೆ ಹೇಳಿ ಪೂರ್ಣವಾಗಿ ಭರ್ತಿಮಾಡುವಂತೆ ಕೇಳುವುದು
34. ಪಟ್ಟಿಕಾವೇತ್ರವಾನವಿಕಲ್ಪ – ಚೂರಿಯಿಂದ ಬೆತ್ತವನ್ನು ಕೆರೆದು ಸೀಳಿ ಬುಟ್ಟಿ, ಮಂಚ ಮುಂತಾದವುಗಳನ್ನು ಮಾಡುವುದು
35. ತಕ್ಷಕರ್ಮ- ಬಡಗಿಯು ಮಾಡುವ ಒಂದಷ್ಟು ಕೆಲಸಗಳು
36. ತಕ್ಷಣ- ಒಳ್ಳೆಯ ಮಂಚ ಮುಂತಾದುವುಗಳನ್ನು ತಯಾರಿಸುವುದು
37. ವಾಸ್ತುವಿದ್ಯೆ – ಮನೆಕಟ್ಟುವ ವಿದ್ಯೆ
38. ರೂಪ್ಯರತ್ನಪರೀಕ್ಷೆ: ನಾಣ್ಯಗಳನ್ನು ಮತ್ತು ರತ್ನಗಳನ್ನು ಪರೀಕ್ಷಿಸುವುದು
39. ಧಾತುವಾದ – ಮಣ್ಣು, ಕಲ್ಲು, ರತ್ನ ಮುಂತಾದ ಧಾತುಗಳನ್ನು ಬೀಳಿಸಿ ಅಂತಹ ಜಾಗಗಳ ಮಹತ್ವವನ್ನು ತಿಳಿಸುವುದು
40. ಮಣಿರಾಗಕರ ಜ್ಞಾನ – ಸ್ಫಟಿಕವೇ ಮುಂತಾದ ಮಣಿಗಳ ಬಣ್ಣ ಹಾಗೂ ಅವುಗಳು ಲಭಿಸುವ ಗಣಿಗಳ ಜ್ಞಾನ
41. ವೃಕ್ಷಾಯುರ್ವೇದಯೋಗ – ಮರಗಳನ್ನು ಅಂದರೆ ಗಿಡಗಳನ್ನು ನೆಡನು ಬೇಕಾದ ಮಣ್ಣಿನ ಪರೀಕ್ಷೆ ನಡೆಸಿ ಅಲ್ಲಿ ಗಿಡಗಳನ್ನು ನೆಟ್ಟು ಮರವಾಗಿಸುವ ಜ್ಞಾನ
42. ಮೇಷಕುಕ್ಕುಟಲಾವಕಯುದ್ಧವಿಧಿ – ಟಗರು, ಕೋಳಿ ಮತ್ತು ಲಾವಕ ಹಕ್ಕಿಗಳ ಹೊಡೆದಾಟವನ್ನು ಏರ್ಪಡಿಸುವುದು
43. ಶುಕಸಾರಿಕಾಪ್ರಲಾಪನ- ಗಂಡು ಹೆಣ್ಣು ಗಿಳಿಗಳು ಮಾನವ ಭಾಷೆಯಿಂದ ಮಾತನಾಡುವಂತೆ ಮಾಡುವುದು
44. ಉತ್ಸಾದನ, ಸಂವಾಹನ, ಕೇಶವರ್ಧನ ಕೌಶಲ – ಕಾಲಿನಿಂದ ಒತ್ತುವುದು ಉತ್ಸಾದನ. ಅದೇ ರೀತಿ ತಲೆಗೆ ಎಣ್ಣೆ ಹಾಕಿ ಕೂದಲು ಬೆಳೆಯಲು ಸಹಕಾರಿಯಾಗುವಂತೆ ಮಾಡುವುದು ಕೇಶವರ್ಧನ. ಉಳಿದ ಎಲ್ಲ ಅಂಗಗಳನ್ನು ನೀವುವುದು ಅಂಗಮರ್ದನ- ಇವುಗಳಲ್ಲಿ ಕುಶಲತೆ
45. ಅಕ್ಷರಮುಷ್ಠಿಕಾಕಥನ – ಮುಷ್ಠಿಯೊಳಗೆ ಅಕ್ಷರಗಳನ್ನು ಮುಚ್ಚಿ ಇಟ್ಟಿದ್ದರೂ ಅದರೊಳಗಿರುವ ಸಂಗತಿಯನ್ನು ಸರಿಯಾಗಿ ಹೇಳುವುದು
46. ಮ್ಲೇಚ್ಛಿತವಿಕಲ್ಪ – ಸರಿಯಾದ ಶಬ್ದವನ್ನೇ ಪ್ರಯೋಗಿಸಿದ್ದರೂ ಅದನ್ನು ಯಾವುದೋ ಒಂದು ಗುಪ್ತ ವಿಷಯವನ್ನು ತಿಳಿಸುವುದಕ್ಕಾಗಿ ಅಸ್ಪಷ್ಟವಾಗಿ ಹೇಳುವುದು
47. ದೇಶಭಾಷಾವಿಜ್ಞಾನ – ಗೊತ್ತಾಗದ ವಿಷಯವನ್ನು ತಿಳಿದುಕೊಳ್ಳುವ ಸಲುವಾಗಿ ಆಯಾ ದೇಶಭಾಷೆಗಳನ್ನು ಶೀಘ್ರವಾಗಿ ಕಲಿಯುವುದು
48. ಪುಷ್ಪಶಕಟಿಕಾ – ಹೂವುಗಳನ್ನು ಮಕ್ಕಳ ಆಟಿಕೆಯ ರೂಪದಿಂದ ಜೋಡಿಸುವುದು
49. ನಿಮಿತ್ತ ಜ್ಞಾನ – ಶುಭ ಮತ್ತು ಅಶುಭಫನಗಳನ್ನು ಅರಿತು ಹೇಳುವ ನಿಮಿತ್ತವಿದ್ಯೆ
50. ಯಂತ್ರಮಾತೃಕಾ – ಹಾಳಾಗಿರುವ ಮತ್ತು ಸರಿಯಾಗಿರುವ ಯಂತ್ರಗಳನ್ನು ದುರಸ್ತಿಮಾಡಿ ಯುದ್ಧಕ್ಕೆ ಸಜ್ಜುಗೊಳಿಸುವುದು
51. ಧಾರಣಮಾತೃಕಾ – ಅಧ್ಯಯನ ಮಾಡಿರುವ ಗ್ರಂಥವನ್ನು ಬುದ್ಧಿಯಲ್ಲಿ ನೆಲೆನಿಲ್ಲಿಸುವುದು
52. ಸಂಪಾಠ್ಯ: ಒಬ್ಬನು ಮೊದಲೇ ನಿರ್ಧರಿಸಲ್ಪಟ್ಟಿರುವ ಗ್ರಂಥವೊಂದನ್ನು ಓದುತ್ತಿರುವಾಗ ಎರಡನೆಯವನು ಆ ಗ್ರಂಥವನ್ನು ಓದದಿದ್ದರೂ ತಪ್ಪಿಲ್ಲದಂತೆ ದನಿಗೂಡಿಸುವುದು
53. ಮಾನಸೀ ಕಾವ್ಯಕ್ರಿಯೆ – ಒಬ್ಬನು ಬರೆದುದನ್ನು ಮನಸ್ಸಿನಲ್ಲೇ ಪರಿಭಾವಿಸಿ ಪೂರ್ವತಯಾರಿಯಿಲ್ಲದೆ ಓದುವುದು ಹಾಗೂ ಸ್ವತಂತ್ರವಾಗಿ ಕಾವ್ಯಗಳನ್ನು ರಚಿಸುವುದು
54. ಅಭಿದಾನಕೋಶ – ಬೇರೆ ಬೇರೆ ಕೋಶÀಗಳಲ್ಲಿ ಶಬ್ದಗಳಿಗೆ ಯಾವ ಯಾವ ಅರ್ಥಗಳನ್ನು ಹೇಳಿದ್ದಾರೆ ಎಂದು ಕೂಡಲೇ ತಿಳಿಯುವುದು
55. ಛಂದೋಜ್ಞಾನ – ವೃತ್ತಗಳು, ಗಣಗಳು ಮೊದಲಾದ ವಿವಿಧ ಪದ್ಯ ರಚನಾ ಛಂದಸ್ಸುಗಳ ತಿಳಿವಳಿಕೆ
56. ಕ್ರಿಯಾಕಲ್ಪ – ಕಾವ್ಯವನ್ನು ರಚಿಸುವ ಕಲೆ
57. ಛಲಿತಕಯೋಗ – ಇನ್ನೊಬ್ಬರನ್ನು ಭ್ರಮೆಗೊಳ್ಳುವಂತೆ ಮಾಡುವ ಸಮ್ಮೋಹಿನಿ ವಿದ್ಯೆ
58. ವಸ್ತ್ರಗೋಪನೀ – ಹರಿದ ಬಟ್ಟೆಯನ್ನು ಅದು ಹರಿಯದಿರುವ ಬಟ್ಟೆಯೋ ಎಂಬ ರೀತಿಯಲ್ಲಿ ಉಡುವುದು
59. ದ್ಯೂತವಿಶೇಷ – ವಿಶೇಷ ರೀತಿಯಿಂದ ಜೂಜು ಅಥವಾ ಪಗಡೆಯಾಡುವುದು
60. ಆಕರ್ಷಕ್ರೀಡಾ – ಹಗ್ಗದಿಂದ ಎಳೆಯುವ ಆಟ
61. ಬಾಲಕ್ರೀಡನಕ – ಮಕ್ಕಳಿಗಾಗಿ ಆಟಗಳು – ಚೆಂಡು, ಬೊಂಬೆ ಮುಂತಾದ ಆಟಿಕೆಗಳೊಂದಿಗೆ ಆಡುವುದು
62. ವೈನಯಿಕೀ – ಆನೆ, ಕುದುರೆ ಮುಂತಾದ ಪ್ರಾಣಿಗಳನ್ನು ಪಳಗಿಸುವುದು
63. ವೈಜಯಿಕೀ – ವಿಜಯವನ್ನು ಹೊಂದುವುದಕ್ಕಾಗಿ ಮಾಡುವ ಯುದ್ಧ ಮುಂತಾದ ಉಪಾಯಗಳು.
64. ವ್ಯಾಯಾಮಿಕೀ – ಮೈಗೆ ವ್ಯಾಯಾಮವನ್ನೊದಗಿಸುವಂತಹ ಬೇಟೆ, ವ್ಯಾಯಾಮ ಮುಂತಾದುವುಗಳು.

ಎರಡನೇ ಮುಖ್ಯ ಕಲೆಯಾಗಿ ನೃತ್ಯ

ಶುಕ್ರನೀತಿಕಾರ, ಮಹರ್ಷಿ ವಾತ್ಸ್ಯಾಯನ ಮೊದಲಾದವರು ನೃತ್ಯವನ್ನು ಚತುಃಷಷ್ಟಿ ಕಲೆಯನ್ನಾಗಿ ಪರಿಗಣಿಸಿದವರಲ್ಲಿ ಪ್ರಥಮರು. ನೃತ್ಯವಿದ್ಯೆಯನ್ನು ಕಲಿಯುವಾಗ, ಪ್ರಯೋಗಿಸುವಾಗ ಗಮನಿಸಬೇಕಾದ ಮುಖ್ಯವಾದ ಆರು ಅಂಶಗಳನ್ನು ತಿಳಿಸುತ್ತಾನೆ ಮಹರ್ಷಿ ವಾತ್ಸ್ಯಾಯನ.- ‘ಕರಣಾನ್ಯಂಗಹಾರಾಶ್ಚ ವಿಭಾವೋ ಭಾವ ಏವ ಚ | ಅನುಭಾವೋ ರಸಾಶ್ಚೇತಿ ಸಂಕ್ಷೇಪಾನ್ನೃತ್ಯಸಂಗ್ರಹಃ || ಇವುಗಳಲ್ಲಿ ಕರಣಾಂಗಹಾರಗಳು ಮೂರ್ತಸ್ವರೂಪದ್ದಾದರೆ; ಭಾವ-ವಿಭಾವ-ಅನುಭಾವ-ರಸಗಳು ಅಮೂರ್ತಸ್ವರೂಪದ್ದಾಗಿದೆ. ಅಂದರೆ ಭಾವ, ವಿಭಾವ, ಅನುಭಾವ ಮತ್ತು ರಸವೆಲ್ಲವೂ ಮನಸ್ಸು, ಮುಖ, ದೇಹಭಾಷೆಗಳ ಸೂಕ್ಷ್ಮವನ್ನು ಅವಲಂಬಿಸಿರುವಂತದ್ದು.

ಮೇಲ್ಕಂಡ ಈ ಮುಖ್ಯ ಆರು ಅಂಶಗಳು ನರ್ತಕರಲ್ಲಿರುವ ಸಾಧ್ಯಾಸಾಧ್ಯತೆಗಳನ್ನು ಗಮನಿಸಿ ನೃತ್ಯವಿದ್ಯೆಯನ್ನು ನಾಟ್ಯ ಮತ್ತು ಅನಾಟ್ಯವೆಂದು ವಿಭಾಗಿಸುತ್ತಾನೆ ವಾತ್ಸ್ಯಾಯನನ ಗ್ರಂಥಕ್ಕೆ ವ್ಯಾಖ್ಯಾನ ಬರೆದ ಜಯಮಂಗಲಾ ವ್ಯಾಖ್ಯಾನಕಾರನಾದ ಯಶೋಧರ ಇಂದ್ರಪಾದ. ಯಾಕೆಂದರೆ ‘ಸ್ವರ್ಗೇವ ಮತ್ರ್ಯಲೋಕೇ ವಾ ಪಾತಾಲೇ ವಾ ನಿವಾಸಿನಾಮ್ | ಕೃತಾನುಕರಣಂ ನಾಟ್ಯಮನಾಟ್ಯಂ ನರ್ತಕಾಶ್ರಿತಮ್|| -ಎಂದರೆ ನಾಟ್ಯ, ಅನಾಟ್ಯಗಳು ನರ್ತಕನನ್ನೇ ಆಶ್ರಯಿಸಿರುತ್ತವೆ.

ಇನ್ನೂ ವಿವರವಾಗಿ ಹೇಳುವುದಾದರೆ; ಶೃಂಗಾರಸ, ರತಿಭಾವ, ಆನಂದದ ಅನುಭಾವ, ವಸಂತಕಾಲದ ವಿಭಾವದ ಸನ್ನಿವೇಶದಲ್ಲಿ ಅಂಗಾಂಗಳ ಬಿರುಸಿನ ಚಲನೆ, ಯುದ್ಧ, ಆಯುಧಪ್ರದರ್ಶನದಂತಹ ಆಂಗಿಕವನ್ನು ಮಾಡುತ್ತಿದ್ದರೆ ನರ್ತಕನಿಗೆ ನೃತ್ಯವಿದ್ಯೆಯ ಸೂಕ್ಷ್ಮವೇ ತಿಳಿದಿಲ್ಲವೆಂದು ಅರ್ಥ. ಈ ನಿಟ್ಟಿನಲ್ಲಿ ಅಂಗಾಹಾರಗಳ ಕಲ್ಪನೆ ಬಹಳ ಮುಖ್ಯ.

ನೃತ್ಯ-ಎಂಬ ಪದವು ‘ನೃತೀ ಗಾತ್ರ ವಿಕ್ಷೇಪೇ’ ಎಂಬ ಧಾತುವಿನಿಂದ ಹುಟ್ಟಿದೆ. ಸಾಮಾನ್ಯಾರ್ಥದಲ್ಲಿ ದೇಹವನ್ನು ಕುಣಿಸುವುದು ಎಂದರ್ಥ. ಆದರೆ ಗಾತ್ರವಿಕ್ಷೇಪವು ತಾಲಲಯಾಶ್ರಿತವಾಗಿರಬೇಕು. ‘ತಾಳಗತಿಃ ಕಪರ್ದೀ’ ಎಂದು ಭಾಗವತಪುರಾಣವೇ ತಿಳಿಸುವಂತೆ ಶ್ರೀಕೃಷ್ಣನು ಕಾಳಿಂಗದ ಮೇಲೆ ನರ್ತನ ಮಾಡುವಾಗ ತಾಳವನ್ನು ನುಡಿಸಿದವನು ಶಿವ. ಅದರಲ್ಲೂ ಕರಣಾಂಗಹಾರಗಳಿಗೆ ಅಂದರೆ ನೃತ್ತಕ್ಕೆ ಗುರು ಶಿವನೇ ಆಗಿದ್ದಾನೆ; ಶಿವನ ತಾಂಡವನೃತ್ತವೇ ಮೊತ್ತಮೊದಲ ನೃತ್ಯವೂ ಆಗಿದೆ. ‘ತ್ರಿಯಂಬಕೋ ಮಹಾದೇವೋ ನೃತ್ಯತೇ ಯಸ್ಯ ಸನ್ನಿಧೌ’ ಎನ್ನುತ್ತದೆ ವಾಮನಪುರಾಣ. ಸ್ವತಃ ನಾಟ್ಯಕಾರನೂ, ಗುರುವೂ ಶಿವನೇ ಹೌದು. ಈತನ ನಾಟ್ಯಭಂಗಿಯೇ ನೃತ್ಯಾಭ್ಯಾಸಿಗಳಿಗೆ ಆರಾಧ್ಯ ಪ್ರತಿಮೆ.

ಕಲೆಗಳು ಮತ್ತು ಸ್ತ್ರೀಯರ ವಿದ್ಯಾಭ್ಯಾಸ

ಸ್ತ್ರೀಯು ಶಿಕ್ಷಣದ ಮೂಲಕ ವಿದ್ಯಾವಂತೆಯಾಗಬೇಕು ಎಂಬುದನ್ನು ಮೊತ್ತಮೊದಲು ಪ್ರತಿಪಾದಿಸಿದವನು ಮಹರ್ಷಿ ವಾತ್ಸ್ಯಾಯನ. ‘ಯೋಷಿತಾಂ ಶಾಸ್ತ್ರಗ್ರಹಣಸ್ಯ ಅಭಾವಾತ್ ಆನರ್ಥಕಮ್ ಇಹಶಾಸ್ತ್ರೇ ಸ್ತ್ರೀಶಾಸನಮ್ ಇತಿ ಆಚಾರ್ಯಃ’ ಎಂಬುದಾಗಿ -ಸ್ತ್ರೀಯರಿಗೆ ವಿದ್ಯೆ ಇಲ್ಲದೇ ಹೋದರೆ ಸಮಾಜಕ್ಕೆ ಕುಟುಂಬಕ್ಕೆ ದುಃಖಪರಂಪರೆಯೇ ಉಂಟಾಗುತ್ತದೆ. ಆದ್ದರಿಂದ ಸಮಾಜ ಮತ್ತು ಕುಟುಂಬ ಸುಖ ಸ್ವಾಸ್ಥ್ಯವನ್ನು ಕಾಣಬೇಕಾದರೆ ಸ್ತ್ರೀಯರು ವಿದ್ಯಾವಂತೆಯಾಗಿರಲೇಬೇಕು ಎಂದು ಶಾಸನಮಾಡುತ್ತಾನೆ.

ಸಾಮಾನ್ಯ ಸ್ತ್ರೀಯರು ರಾಜ ಮನೆತನದ ಸ್ತ್ರೀಯರು ಕ್ಷತ್ರಿಯ ಕನ್ಯೆಯರು –64 ಕಲೆಗಳನ್ನು ವಿಶೇಷವಾಗಿ ಅಧ್ಯಯನ ಮಾಡುತ್ತಿದ್ದರು. ಅದೇ ರೀತಿ ರಾಜಮನೆತನದವರು, ಸೇವಕರು, ಪ್ರಜಾವರ್ಗದವರು ಈ ಕಲೆಗಳ ಅಧ್ಯಯನ ಮಾಡುತ್ತಿದ್ದರು.

ಕಾಳಿದಾಸ ‘ನಾಸ್ತಿ ಸ್ತ್ರೀಣಾಂ ಪೃಥಗ್ ಯಜ್ಞೋ’ ಎಂದು ಸ್ತ್ರೀಯರಿಗೆ ಪ್ರತ್ಯೇಕ ಶಿಕ್ಷಣವನ್ನು ವಿಧಿಸಿಲ್ಲ. ಕಾರಣ ಸ್ತ್ರೀಯಾದವಳಿಗೆ ತಂದೆ ಅಥವಾ ಗಂಡ -ಇವರೇ ಅಧ್ಯಾಪಕರು ಎಂದು ಕೆಲವು ಸೂಕ್ತಿಗಳು ನುಡಿಯುತ್ತವೆ. ಆದರೆ ಇದನ್ನು ಮೀರಿ ಸ್ತ್ರೀಯಾದವಳು ವಿದ್ಯಾವಂತೆಯಾಗಬೇಕೆಂದು ಶಾಸನ ಮಾಡಿದವನು ಮಹರ್ಷಿ ವಾತ್ಸ್ಯಾಯನ. ಆದರೆ ಸ್ವಚ್ಛಂದವಾಗಿ ಕಲಿಯುವುದಕ್ಕಿಂತ ತಂದೆ ಅಥವಾ ಗಂಡನ ಅನುಮತಿಯೊಂದಿಗೆ ಕಲಿಯುವುದು ಉತ್ತಮ ಎನ್ನುತ್ತಾನೆ.

ಜೊತೆಗೆ ಸ್ತ್ರೀಯಾದವಳು ನೃತ್ಯಾದಿ ವಿದ್ಯೆಯನ್ನು ಕಲಿಯುವ ಕಾಲವನ್ನು ‘ಪ್ರಾಗ್ ಯೌವನಾತ್ ಸ್ತ್ರೀ’- ಬಾಲ್ಯದಲ್ಲೇ ಸ್ತ್ರೀಯಾದವಳು ವಿದ್ಯೆಯನ್ನು ಕಲಿತು ಮುಗಿಸಬೇಕು. ಯೌವನದಲ್ಲಿ ತನ್ನ ಮಕ್ಕಳಿಗೆ ಕಲಿಸಬೇಕಾದ ಕಾಲವೊದಗುವ ಕಾರಣ ಮೊದಲೇ ಕಲಿತುಕೊಳ್ಳ್ಳುವುದು ಒಳ್ಳೆಯದು ಎನ್ನುತ್ತಾನೆ. ಇದು ಸ್ತ್ರೀಯರಿಗೆ ಮಾತ್ರವಲ್ಲ ಎಲ್ಲರಿಗೂ ಅನ್ವಯವಾಗುತ್ತಿತ್ತು. ಪ್ರತಿಯೊಬ್ಬ ಮನುಷ್ಯನ ಪೂರ್ಣಯುಷ್ಯ ನೂರುವರ್ಷಗಳು . ಈ ನೂರು ವರ್ಷದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳೆನ್ನೆಲ್ಲವೂ ಸಾಧಿಸಬೇಕಾಗಿತ್ತು.

ಹಾಗಂದು ಪುರುಷಾರ್ಥಗಳ ಪೈಕಿ ಯಾವುದೊಂದನ್ನೂ ಅತಿಯಾಗಿ ಸೇವಿಸಬಾರದು, ಅಂತೆಯೇ ಸೇವಿಸದೆಯೂ ಇರಬಾರದು. ಹೀಗೆ ಸಮನ್ವಯತೆಯಿಂದ ಸಾಧಿಸಿದಾಗ ಪ್ರತಿವ್ಯಕ್ತಿ ಸಂಸಾರದಿಂದ ಬಿಡುಗಡೆಗೊಳ್ಳಲು ಅರ್ಹನಾಗುತ್ತಾನೆ ಎಂಬುವುದು ಸಾರಸ್ವತ ಪರಂಪರೆಯ ಶಾಸ್ತ್ರಕ್ರಮ. ಅದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯ ವಯಸ್ಸನ್ನು ಬಾಲ್ಯ, ಕೌಮಾರ, ಯೌವ್ವನ, ವಾರ್ಧಕ್ಯ ಎಂಬ ನಾಲ್ಕು ಅವಸ್ಥೆಗಳನ್ನಾಗಿ ವಿಭಾಗಿಸಲಾಗಿದೆ. ಇದರಲ್ಲಿ ಬಾಲ್ಯ, ಕೌಮಾರದಲ್ಲಿ ವಿದ್ಯಾಭ್ಯಾಸವನ್ನು ಮಾಡಬೇಕು, ಯೌವ್ವನದಲ್ಲಿ ವಿಷಯವನ್ನು ಅನುಭವಿಸಬೇಕು, ವಾರ್ಧಕ್ಯದಲ್ಲಿ ಅಧ್ಯಾತ್ಮಿಕ ಚಿಂತಕನಾಗಬೇಕು – ಈ ಎಲ್ಲಾ ಚಿಂತನೆಗಳು ಭಾರತೀಯ ಪ್ರಾಚೀನ ಸಾರಸ್ವತ ಪರಂಪರೆಯ ಕೊಡುಗೆಗಳು.

ವಿದ್ಯೆಯನ್ನು ಕಲಿಯುವ ಕ್ರಮಾದಿಗಳನ್ನೂ ಮಹರ್ಷಿ ವಾತ್ಸ್ಯಾಯನರು ತಿಳಿಸಿದ್ದಾರೆ. ‘ತಸ್ಮಾದ್ ವೈಶ್ವಸಿಕಾದ್ ಜನಾತ್ ರಹಸಿ ಪ್ರಯೋಗಾನ್ ಶಾಸ್ತ್ರಮೇಕದೇಶಂ ವಾ ಸ್ತ್ರೀಗೃಹ್ಣೀಯಾದ್’ –ಅಂದರೆ ಸ್ತ್ರೀಯಾದವಳು ವಿಶ್ವಾಸಪಾತ್ರ ಗುರುಗಳಿಂದ ಕಲಿಯಬೇಕು. ವಿಶ್ವಾಸಪಾತ್ರರಲ್ಲದ ಜನರಲ್ಲಿ ಕಲಿಯದೇ ಹೋದರೆ ಅದರಿಂದ ಬಹಳ ಆರ್ಥಿಕ, ಸಾರೀರಿಕ, ವೈಯಕ್ತಿಕ ತೊಂದರೆಗಳನ್ನು ಹೊಂದಬಹುದು. ಕ್ರಮಬದ್ಧವಲ್ಲದ ವಿದ್ಯೆಯಿಂದ ಮತ್ತು ಅದರಿಂದೊದಗುವ ದಂಡನೆಯಿಂದ ದೇಹದಲ್ಲಿ ಅಂಗಾಂಗ ವೈಫಲ್ಯ, ವೈಕಲ್ಯ, ಕೃಶತೆ, ನೋವು ಉಂಟಾಗಬಹುದು.

ಅದರಲ್ಲೂ ‘ರಹಸ್ಯವಾಗಿ ಕಲಿಯಬೇಕು’ ಎಂದೂ ಹೇಳಲಾಗಿದ್ದು; ಕಲಿಯುವ ವಿದ್ಯೆ ಇನ್ನೊಬ್ಬರಿಗೆ ಗೊತ್ತಾಗದಂತೆ ಕಲಿತು ರಹಸ್ಯದಲ್ಲೇ ಪ್ರಯೋಗಕೌಶಲ್ಯವನ್ನೂ ಹೊಂದಬೇಕು ಎಂದು ಹೇಳಿದ್ದಾನೆ. ಜೊತೆಗೆ ಯಾವುದೇ ವಿದ್ಯೆಯನ್ನು ಪೂರ್ತಿಯಾಗಿ ಕಲಿಯಲಾಗದಿದ್ದರೂ ಸ್ವಲ್ಪವಾದರೂ ಕಲಿತುಕೊಳ್ಳಬೇಕು ಎಂದು ತಿಳಿಸಿದ್ದಾನೆ. ‘ಅಭ್ಯಾಸಾನುಸಾರಿಣೀ ವಿದ್ಯಾ’- ಅಭ್ಯಾಸಕ್ಕನುಸಾರವಾಗಿ ವಿದ್ಯೆ ಸಿದ್ಧಿಸುವುದು. ವಿದ್ಯೆಯನ್ನು ಸಮರ್ಥವಾಗಿ ಪ್ರಯೋಗಿಸಲು ಸತತ ಅಭ್ಯಾಸ ಮಾಡಬೇಕು. ‘ಅಭ್ಯಾಸಪ್ರಯೋಜ್ಯಾಶ್ಚ ಚಾತುಃಷಷ್ಟಿಕಾನ್ ಯೋಗಾನ್ ಕನ್ಯಾ ರಹಸ್ಯೇಕಾಕಿನೀ ಅಭ್ಯಸೇತ್’ – ಎಂಬಲ್ಲಿಗೆ ಸ್ತ್ರೀಯರು ಚತುಃಷಷ್ಟಿವಿದ್ಯೆಗಳನ್ನು ಕಲಿತು ಅದನ್ನು ಯುಕ್ತಪ್ರಯೋಜನಕ್ಕಾಗಿ ಬಳಸಿಕೊಳ್ಳಬೇಕು ಎನ್ನುತ್ತಾನೆ.

ಹೀಗೆ ವಿದ್ಯೆ ಅಭ್ಯಾಸಮಾಡುವಾಗ ಗುಂಪು ಅಂದರೆ ಅನೇಕ ಜನರ ಸಹಯೋಗದೊಂದಿಗೆ ಇರಬಾರದು. ವಿದ್ಯೆಯು ಸಿದ್ಧಿಯಾಗುವಂತೆ ಮಾಡಲು ರಹಸ್ಯದಲ್ಲಿ ಕಲಿತುಕೊಳ್ಳಬೇಕು ಎಂದಿದ್ದಾನೆ ವಾತ್ಸ್ಯಾಯನ. ಸ್ತ್ರೀಗೆ ವಿದ್ಯಾಭ್ಯಾಸ ನೀಡಲು ಪಾತ್ರಾಪಾತ್ರ ಗುರುಗಳ/ಜನಗಳ ಬಗ್ಗೆ ಪ್ರಸ್ತಾಪಿಸುತ್ತಾನೆ ವಾತ್ಸ್ಯಾಯನ- ‘ಆಚಾರ್ಯಸ್ತು ಕನ್ಯಾನಾಂ ಪ್ರವೃತ್ತಪುರುಷಸಂಪ್ರಯೋಗಾ ಸಹಸಂಪ್ರವೃದ್ಧಾ ಧಾತ್ರೇಯಿಕಾ, ತಥಾಭೂತ ವಾ ನಿರತ್ಯಯ ಸಂಭಾಷಣಸಖೀ, ಸವಯಾಶ್ಚ ಮಾತೃಷ್ಟಸಾ, ವಿಸ್ರಬ್ಧಾ ತತ್‍ಸ್ಥಾನೀಯ ವೃದ್ಧದಾಸೀ, ಪೂರ್ವಸಂಸ್ಕೃಷ್ಟವಾ ಭಿಕ್ಷುಕೀ, ಸ್ವಸಾ ಚ ವಿಶ್ವಾಸಪ್ರಯೋಗಾತ್’- ಎಂದರೆ ವಿದ್ಯೆ ಕಲಿಸುವವರು ಮುಖ್ಯವಾಗಿ ಮದುವೆಯಾಗಿರುವವರಾಗಬೇಕು. ಅದೇ ರೀತಿ ಮದುವೆಯಾಗಿ ಅನ್ನಾಹಾರಾದಿಗಳನ್ನು ಮಾಡಿಕೊಟ್ಟು ರಕ್ಷಿಸುವವಳು, ಆಕೆಯ ಮಗಳು, ಮದುವೆಯಾದ ಗೆಳತಿ, ಗೆಳತಿಯಂತಹ ತಾಯಿಯ ಅಕ್ಕತಂಗಿಯಂದಿರು, ವೃದ್ಧದಾಸಿ, ವಿಧವೆಯಾಗಿರುವ ಭಿಕ್ಷಿಕಿ, ಮದುವೆಯಾಗಿರುವ ಅಕ್ಕ- ಇವರೆಲ್ಲ ವಿಶ್ವಾಸಪಾತ್ರರಾಗಿದ್ದು ಗುರುಗಳಾಗಲು ಅರ್ಹರು ಎನ್ನುತ್ತಾನೆ.

ಉಪಸಂಹಾರ:

‘ಕಲಾನಾಂ ಗ್ರಹಣಾದೇವ ಸೌಭಾಗ್ಯಮುಪಜಾಯತೇ | ದೇಶಕಾಲೌ ತ್ವಪೇಕ್ಷ್ಯಾಸಾಂ ಪ್ರಯೋಗಃ ಸಂಭವೇನ್ನವಾ’ –ಕಲೆಯನ್ನು ಕಲಿಯುವುದರ ಮುಖ್ಯಫಲವೇ ಸೌಭಾಗ್ಯ. ಈ ಸೌಭಾಗ್ಯವೊಂದಿದ್ದರೆ ಉಳಿದೆಲ್ಲವೂ ಸಿದ್ಧಿಯಾಗುವುದು. ಕಲಿತವಿದ್ಯೆಯನ್ನು ಪ್ರಯೋಗ ಮಾಡಲು ಅವಕಾಶಗಳು ಸಿಗಲಿ, ಸಿಗದೇ ಇರಲಿ ಅದು ಸೌಭಾಗ್ಯವನ್ನಂತೂ ಕೊಡುತ್ತದೆ. ಭರತನೂ ತನ್ನ ನಾಟ್ಯಶಾಸ್ತ್ರದಲ್ಲಿ ಇದೇ ಬಗೆಯ ಮಾತುಗಳನ್ನು ಹೇಳಿದ್ದು; ಲೋಕದಲ್ಲಿ ಶುಭವು ಉಂಟಾಗಲು ನಾಟ್ಯವು ಕಾರಣವಾಗಿದೆ, ನಾಟ್ಯದ ಪ್ರದರ್ಶನದಿಂದ ದೇವತೆಗಳು ಸಂತೋಷಗೊಳ್ಳುತ್ತಾರೆ, ಮಂಗಲವನ್ನು ಉಂಟುಮಾಡುವುದೇ ನೃತ್ತ, ಅಶುಭ, ಅಮಂಗಲತ್ವವು ತೊಲಗಿ ಆನಂದ ಪಡೆಯಲು ನೃತ್ತವನ್ನು ಮಾಡಬೇಕು ಎಂದಿದ್ದಾನೆ.

64 ವಿದ್ಯೆಗಳು ಮನುಷ್ಯನ ವಿವೇಕವನ್ನು ಬಲಪಡಿಸುವುದರೊಂದಿಗೆ ಹಣ ಜೀವನ, ಸುಖಗಳನ್ನು ಧಾರೆಯೆರೆಯುತ್ತವೆ. ಕೇವಲ ಲೌಕಿಕ ವಿದ್ಯೆಯಾಗಿ ಕಂಡರೂ ಕೂಡಾ ಅಲೌಕಿಕದ ಸಾಧನೆಗೂ ಕಾರಣವಾಗಿವೆ. ಆದ್ದರಿಂದ ಇವು ಸ್ತ್ರೀ-ಪುರುಷ, ಜಾತಿ-ಮತ-ಧರ್ಮದ ಗಡಿರೇಖೆಗಳಿಲ್ಲದೆ ಪ್ರಾಚೀನ ಭಾರತದಲ್ಲಿ ಕಲಿಯಲ್ಪಡುತ್ತಿತ್ತು.

ಪ್ರಾಚೀನ ಋಷಿಗಳಿಂದ ಶೋಧಿಸಲ್ಪಟ್ಟು ಇಂದಿನವರೆಗೆ ಬೆಳೆದು ಬಂದಿರುವ ವಿದ್ಯೆಗಳು ಸಾರ್ವಕಾಲಿಕ ಅವಶ್ಯಕ. ಇವು ಹಿಂದೊಮ್ಮೆ ಜನರ ಜೀವನದಲ್ಲಿ ಪ್ರಧಾನ ಪಾತ್ರವನ್ನು ವಹಿಸಿತ್ತು. ಅದೇ ಇಂದಿನ ಆಧುನಿಕ ವಿದ್ಯೆಯನ್ನು ಪ್ರಾಚೀನ ಸಾರಸ್ವತ ಪರಂಪರೆಯೊಂದಿಗೆ ಜೊತೆಗೂಡಿಸಿದರೆ ಅನಘ್ರ್ಯಫಲವನ್ನು ಪಡೆಯಬಹುದು. ‘ಹಿತ್ತಲಗಿಡ ಮದ್ದಲ್ಲ’ ಎಂಬ ಭಾವನೆಯಿಂದ ಈ ವಿದ್ಯೆಗಳನ್ನು ನಾಶಗೊಳಿಸದೆ, ಆಧುನಿಕ ವಿದ್ಯೆ, ಜೀವಿತದೊಂದಿಗೆ ಸೇರಿಸಿಗೊಂಡಾಗ ಪುಟಕ್ಕಿಟ್ಟ ಚಿನ್ನದಂತೆ ನಮ್ಮ ಜೀವನ ಇನ್ನಷ್ಟು ಸಹಾಯವನ್ನು ಸುಖಮಯವಾದೀತು.

ಸಾಂಸ್ಕೃತಿಕವಾಗಿ ದೇಶ ಬೆಳೆದರೆ ದೇಶದಲ್ಲಿ ಶಾಂತಿ ಉಂಟಾಗುತ್ತದೆ. ಶಾಂತಿಯುಕ್ತ ಜೀವನ ದೇಶದ ಭದ್ರತೆಗೆ, ಏಕತೆಗೆ ಕಾರಣವಾಗುವುದರಲ್ಲಿ ಸಂದೇಹವೇ ಇಲ್ಲ. ಹೀಗೆ ವೈಜ್ಞಾನಿಕವಾದ ಫಲವನ್ನು ನೃತ್ಯಾದಿ ವಿದ್ಯೆಗಳಿಂದ ಪಡೆದರೆ ಜನರು ರೋಗಮುಕ್ತರಾಗಿ ಆನಂದದಿಂದ ಜೀವಿಸಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಡ್ಡಾಯ ಶಿಕ್ಷಣವ್ಯವಸ್ಥೆಯೊಂದಿಗೆ ನೃತ್ಯಾದಿಕಲೆಗಳ ಕಲಿಕೆಯೂ ನಿರಂತರವಾಗಿ ಮುನ್ನಡೆಯಲಿ ಎಂಬುದೇ ಇಲ್ಲಿನ ಆಶಯ.

ಇತರ ಪರಾಮರ್ಶನ ಗ್ರಂಥ

1) 64 ವಿದ್ಯೆಗಳು– ಮ. ಶ್ರೀಧರಮೂರ್ತಿ- ಬೆಂಗಳೂರು ವಿಶ್ವವಿದ್ಯಾನಿಲಯ ಬೆಂಗಳೂರು-1974
2) ಚತುಷಷ್ಟಿ ಕಲೆಗಳು– ಪ್ರೋ.ಟಿ.ಎಸ್. ಸತ್ಯವತಿ– ಯುವಜನರಿಗಾಗಿ ಸಂಸೃತ ವಾಙ್ಮಯ ಭವನದ ಗಾಂಧೀಕೇಂದ್ರ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಅಧ್ಯಯನ ಪೀಠ, ರೇಸ್ ಕೋರ್ಸ್ ರಸ್ತೆ ಬೆಂಗಳೂರು 2002
3) ಕೌಟಿಲ್ಯನ ಅರ್ಥಶಾಸ್ತ್ರ– (ಕೌಟಿಲೀಯಮ್ ಅರ್ಥಶಾಸ್ತ್ರಮ್) ಡಾ| ರಘುನಾಥಸಿಂಹ ಚೌಖಂಬಾಕೃಷ್ಣದಾಸ ಅಕಾಡೆಮಿ ವಾರಾಣಾಸಿ -2009
4) ನಾಟ್ಯಶಾಸ್ತ್ರ ಆಫ್ ಭರತಮುನಿ ಸಂಪುಟ1 – ಡಾ.ಆರ್.ಎಸ್.ನಗರ್(ಸಂಪಾದಕ). ಪರಿಮಳ ಪಬ್ಲಿಕೇಶನ್-ದೆಹಲಿ. 1994
1) ಕಾಮಸೂತ್ರ ಆಫ್ ವಾತ್ಸ್ಯಾಯನ. ರಾಧಾವಲ್ಲಭ ತ್ರಿಪಾಠಿ. ಪ್ರತಿಭಾ ಪ್ರಕಾಶನ-ದೆಹಲಿ. 2005

(ಶ್ರೀಯುತರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಪ್ರಾಧ್ಯಾಪಕರು, ಚಿಂತಕರು.)
(ಪ್ರಸ್ತುತ ಲೇಖನದಲ್ಲಿ ಹೇಳಲಾಗಿರುವ 64 ವಿದ್ಯೆಗಳ ಕುರಿತ ವಿವರಣೆಯಲ್ಲಿ ಕೆಲವು ವ್ಯತ್ಯಾಸಗಳಿವೆ. ಬೇರೆ ಬೇರೆ ಗ್ರಂಥಗಳಿಗೆ ಅನುಸಾರವಾಗಿ ವಿವರಣೆಗಳನ್ನು ಪರಿಶೀಲಿಸಿ-ಸಂ )

1.ವಿದ್ಯಾನಾಮ ನರಸ್ಯ ರೂಪಮಧಿಕಂ ಪ್ರಚ್ಛನ್ನಗುಪ್ತಂ ಧನಮ್
ವಿದ್ಯಾಭೋಗಕರೀ ಯಶಃಸುಖಕರೀ ವಿದ್ಯಾಗುರೂಣಾಂ ಗುರುಃ
ವಿದ್ಯಾ ಬುಧಜನೋ ವಿದೇಶಗಮನೇ ವಿದ್ಯಾಪರಂ ದೈವತಮ್
ವಿದ್ಯಾ ರಾಜಸು ಪೂಜ್ಯತೇ ನ ಹಿ ಧನಂ ವಿದ್ಯಾವಿಹೀನಃ ಪಶುಃ- ವೇ ಮಾಗಡಿ ಕೃಷ್ಣಶಾಸ್ತ್ರಿ, – ಭತೃಹರಿಯ ನೀತಿಶತಕ 1 – 16 ಪ್ರಕಟಣೆ – 1924 – ಪುಟಸಂಖ್ಯೆ – 16
2.ಆಹಾರನಿದ್ರಾ ಭಯ ಮೈಥುನಾನಿ ಸಾಮಾನ್ಯಮೇತದ್ ಪಶುಭಿನರ್ರಾಣಾಮ್|
ಏಕೋ ವಿವೇಕೋ ಹ್ಯಧಿಕೋ ಮನುಷ್ಯೇ ತೇನೈರ್ವಿಹೀನಃ ಪಶುಭಿಃ ಸಮಾನಃ||- (ಸುಭಾಷಿತ ರತ್ನಭಾಂಡಾಗಾರ
3.ವಿದ್ಯಜ್ಞಾನೇ (ಸಂಸ್ಕೃತ ವೈಯಾಕರಣ ಸಿದ್ಧಾಂತ) – ಶ್ರೀಶಂಕರ ಅದ್ವೈತ ಶೋಧಕೇಂದ್ರ. ಶ್ರೀಜಗದ್ಗುರು ಮಹಾಸಂಸ್ಥಾಪನಮ್, ದಕ್ಷಿಣಾಮ್ನಾಯ ಶ್ರೀಶಾರದಾಪೀಠ ಶೃಂಗೇರಿ- 2005
4.ಶಿಕ್ಷ- ಉಪಾದಾನೇ – ಅದೇ – ಪುಟಸಂಖ್ಯೆ 531
5.ಅರ್ಥಕರೀ ಚ ವಿದ್ಯಾ- ಮಹಾಭಾರತ – ಉದ್ಯೋಗಪರ್ವ ಅಧ್ಯಾಯ 33 ಶ್ಲೋಕ 82 ; ಗೀತಾಪ್ರೆಸ್ ಗೋರಖಪುರ, 1956 ಪುಟ ಸಂಖ್ಯೆ – 123
6.ವಿದ್ಯಾದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಮ್|
ಪಾತ್ರತ್ತ್ವಾದ್ಥನಮಾಪೆÇ್ನೀತಿ ಧನಾದ್ಧರ್ಮಂ ತತಃ ಸುಖಮ್ || – ಸುಭಾಷಿತ ಭಾಂಡಾಗಾರ
7.ಧರ್ಮಾರ್ಥಕಾಮಮೋಕ್ಷಾಶ್ಚ ಪುರುಷಾರ್ಥ ಉದಾಹೃತಃ || – (ಅಗ್ನಿ ಪುರಾಣ) ಪರಾ ಸಂಸ್ಕೃತ – ಕನ್ನಡ ಶಬ್ಧಾರ್ಥಕೋಶಃ
8.ಮೋಕ್ಷೋಪವರ್ಗೇ ಮೃತ್ಯೌಚ ಮೋಚನೇ ಮುಷ್ಕಕದ್ರುಮೇ ( ನಾನಾರ್ಥರತ್ನಕೋಶ)
9.ಅರ್ಥಾಗಮೋ ನಿತ್ಯಮರೋಗಿತಾ ಚ|
ಪ್ರಿಯಾ ಚ ಭಾರ್ಯಾ ಪ್ರಿಯವಾದಿನೀ ಚ ||
ವಶ್ಯಶ್ಚ ಪುತ್ರೋs ರ್ಥಕರೀ ಚ ವಿದ್ಯಾ
ಷಟ್ ಜೀವಲೋಕಸ್ಯ ಸುಖಾನಿ ರಾಜನ್ || (ಮಹಾಭಾರತ – ಉದ್ಯೋಗಪರ್ವ, ಅಧ್ಯಾಯ 33/ ಶ್ಲೋಕ 82) ಗೀತಾಪ್ರೆಸ್ ಗೋರಖಪುರ, 1956 ಪುಟ ಸಂಖ್ಯೆ – 123
10.ಶ್ರದ್ಧಾವಾನ್ ಲಭತೇ ಜ್ಞಾನಮ್ (ಭಗವದ್ಗೀತೆ) ಜ್ಞಾನಕರ್ಮಸಂನ್ಯಾಸ ಯೋಗ- 8 ಅಧ್ಯಾಯ, ಶ್ಲೋಕ ಸಂಖ್ಯೆ 39, ಗೀತಾಪ್ರೆಸ್ ಗೋರಖಪುರ, 1956 ಪುಟ ಸಂಖ್ಯೆ – 123
11.ಗುರು ಶುಶ್ರೂಷಯಾ ವಿದ್ಯಾ ಪುಷ್ಕಲೇನ ಧನೇನ ವಾ|
ಅಥವಾ ವಿದ್ಯಾಯಾ ವಿದ್ಯಾ ಚತುರ್ಥೀ ನೋಪಲಭ್ಯತೇ || (ಅಜ್ಞಾತ ಕರ್ತೃಕ ಸುಭಾಷಿತ)
12.ಗೀತಂ – ವ್ಯಾಯಾಮಿಕೀನಾಂ, ಚ ವಿದ್ಯಾನಾಂ ಜ್ಞಾನಂ ಇತಿ ಚತುಃಷಷ್ಟಿಃ ಅಂಗವಿದ್ಯಾಃ| ಕಾಮಸೂತ್ರಸ್ಯ ಅವಯವಿನ್ಯಃ|| ಅದೇ ಪುಟ ಸಂಖ್ಯೆ -87 ರಿಂದ 120 (19 ರಿಂದ 82ರ ವರೆಗೆ)
13.ಯೋಷಿತಾಂ ಶಾಸ್ತ್ರಗ್ರಹಣಸ್ಯಾಭಾವಾದನರ್ಥಕಮಿಹ ಶಾಸ್ತ್ರಮಿತ್ಯಾಚಾರ್ಯಾ|| ಕಾ.ಸೂ. 1/3/3-1 ಮಹರ್ಷಿ ವಾತ್ಸ್ಯಾಯನಮುನಿ ಪ್ರಣೀತಂ ಕಾಮಸೂತ್ರಮ್, 1/3/3 ಚೌಖಂಬಾ ಸಂಸ್ಕೃತ ಪ್ರತಿಷ್ಠಾನ ನ್ಯೂಡೆಲ್ಲಿ– 7, 1999.
14.ಸಂತ್ಯಪಿ ಖಲು ಶಾಸ್ತ್ರ ಪ್ರಹತ ಬುದ್ಧಯೋ ಗಣಿಕಾ ರಾಜಪುತ್ರ್ಯೋ ಮಹಾಮಾತಿರ್ದುಹಿತರಶ್ಚ || 1/3/11 – ಅದೇ ಪುಟ ಸಂಖ್ಯೆ – 81
15.ಶತಾಯುರ್ವೈ ಪುರುಷೋ ವಿಭಜ್ಯ ಕಾನ್ಮನ್ಯೋನ್ಯಾನುಬದ್ಧಂ ಪರಸ್ಪರಾನುಪಘಾತಕಂ ತ್ರಿವರ್ಗಂ ಸೇವೇತ || ಕಾ.ಸೂ. 1/2/1 -ಅದೇ ಪುಟ ಸಂಖ್ಯೆ -27
16.ಪರಸ್ಪರಾನುಪಘಾತಕಂ ತ್ರಿವರ್ಗಂ ಸೇವೇತ 1/2/1 – ಅದೇ – ಪುಟ ಸಂಖ್ಯೆ -27
17.ಬಾಲ್ಯೇ ವಿದ್ಯಾಗ್ರಹಣಾದೀನರ್ಥಾನ್ 1/2/2 –ಅದೇ- ಪುಟ ಸಂಖ್ಯೆ -31
18.ಕಾಮಂ ಚ ಯೌವ್ವನೇ 1/2/3 ಅದೇ ಪುಟ ಸಂಖ್ಯೆ -33
19.ಸ್ಥವಿರೇ ಧರ್ಮಂ ಮೋಕ್ಷಂ ಚ 1/2/4 ಅದೇ ಪುಟ ಸಂಖ್ಯೆ -33
20.ಕಲಾನಾಂ ಗ್ರಹಣಾದೇವ ಸೌಭಾಗ್ಯಮುಪಜಾಯತೇ ಕಾ 1/3/22 ಅದೇ ಪುಟ ಸಂಖ್ಯೆ -123
21.ಅಜ್ಞಾತಕರ್ತೃಕ ಪ್ರಸಿದ್ಧ ಕನ್ನಡ ಗಾದೆ ಮಾತು.

Leave a Reply

*

code