Author: - ಕಾವ್ಯ/ಸಾಹಿತ್ಯ-ಸಂಯೋಜನೆ : ಮನೋರಮಾ ಬಿ.ಎನ್ ಸಂಸ್ಕೃತ ಶ್ಲೋಕಗಳು : ನಾಟ್ಯಶಾಸ್ತ್ರ (ಭರತಮುನಿ)
ಭರತಮುನಿ- ಸಮಗ್ರವಿಶ್ವಕಾವ್ಯಮೀಮಾಂಸೆಗೆ ಚೂಡಾಮಣಿಯಂತಿರುವ ನಾಟ್ಯಶಾಸ್ತ್ರದ ರಚನಕಾರ. ಅಲಂಕಾರಶಾಸ್ತ್ರದ ಐತಿಹಾಸಿಕ ವಿಕಾಸಕ್ಕೆ ತಾಯಿಬೇರಾದ ಪುಣ್ಯಪುರುಷ. ಸೌಂದರ್ಯಮೀಮಾಂಸೆಗಳಿಗೆ ಆರ್ಷಮೂಲದ ಜೀವಸ್ರೋತಸ್ಸು. ಭಾರತೀಯ ಸೌಂದರ್ಯಶಾಸ್ತ್ರಸೌಧದ ಸ್ವರ್ಣಶಿಖರದಂತಿರುವ ರಸತತ್ತ್ವವನ್ನು ಧಾರೆಯೆರೆದ ಕಾರಣಪುರುಷ. ನಾಟ್ಯಮಂಡಪದ ಆದ್ಯ ಪ್ರವರ್ತಕ. ಭಾರತದೇಶವಷ್ಟೇ ಅಲ್ಲ, ಅಖಂಡ ಭೂಮಂಡಲದ ಸಾಂಸ್ಕೃತಿಕ, ಸಾಹಿತ್ಯಜೀವಿಗಳ ಪಿತಾಮಹ. ಬೇರೆ ಬೇರೆ ಕಾಲ, ದೇಶಕ್ಕೆ ತಕ್ಕಂತೆ ಸಾರ್ವಕಾಲಿಕವಾಗಿ ಕಲೆಯ ವಿಶಿಷ್ಟ ಮಾದರಿಗಳನ್ನು, ಸಾಧ್ಯತೆಗಳನ್ನು ಕಟ್ಟಿಕೊಟ್ಟ ಭರತರ್ಷಿ ಯತಾರ್ಥದಲ್ಲಿಯೂ ಕಲಾಸರಸ್ವತಿಯ ರಾಯಭಾರಿ. ಆತನ ವ್ಯಕ್ತಿತ್ವ, ಸೂತ್ರ, ಕರ್ತೃತ್ವ ಎಲ್ಲವೂ ಬಗೆದದ್ದು ತಾರೆ ಉಳಿದದ್ದು ಆಕಾಶ ಎಂಬ ಮಾತಿಗೆ ಅನ್ವರ್ಥ.
ಆದ್ದರಿಂದಲೇ ಭರತಮುನಿಯಿಂದ ಬರೆಯಲ್ಪಟ್ಟ ನಾಟ್ಯಶಾಸ್ತ್ರ ಭರತಸೂತ್ರವೆಂಬುದಾಗಿಯೂ ಪ್ರಚಲಿತ. ಕಲಾವಿಶ್ವಕೋಶ, ಸಂಸ್ಕೃತಿಸರ್ವಸ್ವಸಂಗ್ರಹವಾಗಿ, ಎಲ್ಲ ಕಾಲಕ್ಕೂ ಸಲ್ಲುವ ತತ್ವ-ಪ್ರಯೋಗನಿಧಿಯಾಗಿ, ಸಮಗ್ರ ದರ್ಶನಸಿದ್ಧಾಂತದ ಪ್ರತಿರೂಪವಾಗಿ ನಾಟ್ಯಶಾಸ್ತ್ರವು ಸರ್ವಕಾಲಕ್ಕೂ ಆದರಣೀಯ. ಭಾರತೀಯ ಸಂಸ್ಕೃತಿಯ ಸಮಗ್ರತೆಗೆ ಸಂಬಂಧಿಸಿದಂತೆ ನಾಟ್ಯಶಾಸ್ತ್ರದ ಮೌಲ್ಯ ಮಹೋನ್ನತವಾದದ್ದು. ನಾಟ್ಯದ ಉತ್ಪತ್ತಿ, ಪ್ರಯೋಗ, ಅಂಗಗಳು ಮೊದಲಾದವನ್ನು ಕುರಿತು ಹೇಳದೇ ಉಳಿದ ವಿಷಯವೆಂಬುದು ಯಾವುದೂ ಅದರಲ್ಲಿಲ್ಲ. ನಾಟ್ಯಪ್ರಪಂಚವಷ್ಟೇ ಅಲ್ಲ, ಕಾವ್ಯಮೀಮಾಂಸೆ, ಅಲಂಕಾರಶಾಸ್ತ್ರದ ಪ್ರಥಮ ಕುಸುಮಗಳು ಕುಡಿಯೊಡೆದದ್ದು ಭರತನ ಬೊಗಸೆಯಲ್ಲಿ. ಹಾಗಾಗಿ ಕಾವ್ಯಲಕ್ಷಣಕಾರರಿಗೆಲ್ಲಾ ಭರತನೇ ಪ್ರಥಮಗುರುವಾಗಿ ವಂದ್ಯನಾಗಿದ್ದಾನೆ.
ಪ್ರಸ್ತುತ ಈ ನಾಟ್ಯಶಾಸ್ತ್ರಕಥನಮಾಲಿಕೆಯು 36 ಅಧ್ಯಾಯದ ಪರ್ಯಂತ ಹಬ್ಬಿರುವ ನಾಟ್ಯಶಾಸ್ತ್ರದೊಳಗೆ ಬರುವಂತಹ ಭಾರತೀಯ ಸಂಸ್ಕೃತಿಯ, ನಾಟ್ಯಕಲೆಯ ಕುರಿತಾದ ಆಕರ್ಷಕ ಕಥೆಗಳನ್ನು ಪ್ರತೀ ಸಂಚಿಕೆಗೆ ನಿಮ್ಮ ಮುಂದೆ ಅನಾವರಣಗೊಳಿಸುತ್ತಾ ಸಾಗಲಿದೆ. ಅದಕ್ಕೆ ಪೂರಕವಾಗಿ ಪುತ್ತೂರಿನಲ್ಲಿ ನಡೆದ ‘ನಾಟ್ಯಚಿಂತನ’ ಕಾರ್ಯಾಗಾರದ ಸಮಯದಲ್ಲಿ ಬರೆಯಲಾದ ನಾಟ್ಯಶಾಸ್ತ್ರಕಥೆಗಳ ಕಾವ್ಯಮಾಲಿಕೆ ಮತ್ತು ಕಥೆಯ ಅಧ್ಯಾಯದ ಸಂಕ್ಷಿಪ್ತ ವಿವರವನ್ನು ‘ಮಹಾಮುನಿ ಭರತ’ ಎಂಬ ಕೃತಿಯಿಂದ ಆಯ್ದು ಪ್ರಕಟಿಸಲಾಗುತ್ತದೆ. ಇದು ಆಸಕ್ತ ಕಲಾವಿದರಿಗೆ, ನೃತ್ಯಸಂಯೋಜನೆಯ ಪ್ರತಿಭೆಯನ್ನಿಟ್ಟುಕೊಂಡು ಸಾಹಿತ್ಯಕ್ಕಾಗಿ ಅರಸುತ್ತಿರುವ ಗುರು-ಶಿಕ್ಷಕರಿಗೆ, ವಿದ್ಯಾರ್ಥಿಮಿತ್ರರಿಗೆ, ಚಿಣ್ಣರ ಕುತೂಹಲದ ಕಥಾಪ್ರಪಂಚಕ್ಕೆ, ಕಲಾಪ್ರೇಮಿಗಳಾದ ಸಹೃದಯ ಓದುಗರಿಗೆ ಒಳ್ಳೆಯ ರಸಾಹಾರವನ್ನು ಕೊಡಲಿದೆ ಎಂಬುದು ನಮ್ಮ ಅಭೀಪ್ಸೆ. ನಮ್ಮ ಆಶಯಕ್ಕೆ ತಾವೂ ಇಂಬುಕೊಡುತ್ತೀರಲ್ವಾ? -ಸಂ.
ಪ್ರಥಮ ಅಧ್ಯಾಯ- ನಾಟ್ಯಶಾಸ್ತ್ರೋತ್ಪತ್ತಿ
ನಾಟ್ಯಕ್ಕೇ ಪಿತಾಮಹನಾದ ಮಹೇಶ್ವರರಿಗೆ ವಂದಿಸುತ್ತಾ ಬ್ರಹ್ಮಕೃತವಾದ/ ಬ್ರಹ್ಮನಿಂದ ಕೊಡಲ್ಪಟ್ಟ ನಾಟ್ಯಶಾಸ್ತ್ರವನ್ನು ಹೇಳತೊಡಗುತ್ತೇನೆ – ಎಂಬಲ್ಲಿಗೆ ಮೊದಲ ಪುಟ ತೆರೆಯುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನಾಟ್ಯಶಾಸ್ತ್ರವನ್ನು ಪ್ರಥಮತಃ ಬರೆದವನು ಸದಾಶಿವನೆಂದೂ, ಆನಂತರ ಬ್ರಹ್ಮನೆಂದೂ, ಆ ಬಳಿಕ ಭರತನೆಂದೂ ನಾಟ್ಯಶಾಸ್ತ್ರಕ್ಕೆ ವ್ಯಾಖ್ಯಾನ ಬರೆದ ಅಭಿನವಗುಪ್ತಪಾದಾಚಾರ್ಯ ಹೇಳಿದ್ದಾನೆ. ಆದ್ದರಿಂದ ನಾಂದಿಶ್ಲೋಕದಲ್ಲಿ ಭರತನೇ ಅಭಿವಂದಿಸಿ ಸ್ಮರಿಸಿಕೊಂಡಿರುವ ಮಹೇಶ್ವರ, ಬ್ರಹ್ಮರು ನಾಟ್ಯಕ್ಕೆ ಕಾರಣಪುರುಷರು ಎಂಬುದನ್ನು ಮುಖ್ಯವಾಗಿ ಕಂಡುಕೊಳ್ಳಬಹುದು.
ನಾಂದಿಶ್ಲೋಕದ ಬಳಿಕ, ಆತ್ರೇಯ ಮೊದಲಾದ ಋಷಿಗಳು ಭರತನಲ್ಲಿಗೆ ಬಂದು ಜಿಜ್ಞಾಸಾರ್ಥವಾಗಿ ನಾಟ್ಯವೇದದ ಉತ್ಪತ್ತಿ, ಅಂಗ, ಪ್ರಯೋಗ, ಲಕ್ಷಣದ ಕುರಿತಾಗಿ ಪ್ರಶ್ನೆ ಕೇಳುವುದರಿಂದ ನಾಟ್ಯಸಾಸ್ತ್ರದ ಮೊದಲನೇ ಅಧ್ಯಾಯ- ‘ನಾಟ್ಯಶಾಸ್ತ್ರೋತ್ಪತ್ತಿ’ ಆರಂಭವಾಗುತ್ತದೆ.
ಪೂರ್ವಂ ಕೃತಯುಗೇ ವಿಪ್ರಾಃ ವೃತ್ತೇ ಸ್ವಾಯಂಭುವೇsಂತರೇ
ತ್ರೇತಾಯುಗೇsಥ ಸಂಪ್ರಾಪ್ತೇ ಮನೋವೈವಸ್ವತಸ್ಯ ಚ…
ಪೂರ್ವದಲ್ಲಿ ಸ್ವಾಯಂಭುವ ಮನ್ವಂತರದಲ್ಲಿ ಕೃತಯುಗ ಮುಗಿದು ವೈವಸ್ವತ ಮನ್ವಂತರದ ತ್ರೇತಾಯುಗ ಪ್ರಾರಂಭವಾಗುವ ಮಧ್ಯಂತರದಲ್ಲಿ… ಲೋಕದಲ್ಲಿ ಗ್ರಾಮ್ಯದಾರುಣರೀತಿಗಳು (ಕೆಟ್ಟಪ್ರವೃತ್ತಿಗಳು) ತಲೆದೋರಿ, ವೆದಾದಿಗಳನ್ನೂ ಅಧ್ಯಯನ ಮಾಡುವ ಅನುಕೂಲ ಎಲ್ಲರಿಗೂ ದೊರಕದೆಹೋದಾಗ ಇಂದ್ರನನ್ನು ಮುಂದಿರಿಸಿ ಲೋಕದ ಸಮಸ್ತರೂ ಬ್ರಹ್ಮನಲ್ಲಿ ಹೋಗಿ ಐದನೇಯ ವೇದ ನಿರ್ಮಾಣಕ್ಕೆ ನಿವೇದನೆಯನ್ನು ಇಡುತ್ತಾರೆ. ಎಲ್ಲ ವರ್ಗದವರಿಗೂ ತಲುಪುವಂತೆ ಕ್ರೀಡನೀಯಕಮಿಚ್ಛಾಮೋ ದೃಶ್ಯಂ ಶ್ರವ್ಯಂ ಚ ಯದ್ಭವೇತ್ –ಕ್ರೀಡೆಯಂದದಿ ಶ್ರವ್ಯ,ದೃಶ್ಯಗಳಿಂದೊಡಗೂಡಿ ವಿನೋದ/ರಂಜನೆಯನ್ನು ಕೊಡುವ ಐದನೇಯ ವೇದ ರಚಿಸಬೇಕು ಎಂಬುದು ಇಂದ್ರಾದಿ ದೇವ, ದಾನವ, ಋಷಿಜಜರ ಪ್ರಾರ್ಥನೆ.
ಅದಕ್ಕೆ ಬ್ರಹ್ಮನು ಯೋಗಸ್ಥನಾಗಿ ನಾಲ್ಕುವೇದಗಳನ್ನು ನೆನೆದು ಋಗ್ವೇದದಿಂದ ಪಠ್ಯವನ್ನೂ, ಯಜುರ್ವೇದದಿಂದ ಅಭಿನಯವನ್ನೂ, ಸಾಮವೇದದಿಂದ ಗೀತವನ್ನೂ, ಅಥರ್ವವೇದದಿಂದ ರಸವನ್ನೂ ಆರಿಸಿ, ಉಪವೇದಗಳ ಸಹಿತ ನಾಟ್ಯವೇದದ ಉತ್ಪತ್ತಿಯನ್ನು ಮಾಡುತ್ತಾನೆ. ಈ ಸಂದರ್ಭದಲ್ಲಿ ಬ್ರಹ್ಮನ ಮಾತುಗಳು ಗಮನಾರ್ಹವಾಗಿವೆ.
ಧಮ್ರ್ಯಮತ್ರ್ಯ ಯಶಸ್ಯಂಚ ಸೋಪದೇಶಂ ಸಸಂಗ್ರಹಮ್
ಭವಿಷ್ಯತಶ್ಚ ಲೋಕಸ್ಯ ಸರ್ವಕರ್ಮಾನುದರ್ಶಕಮ್
ಸರ್ವಶಾಸ್ತ್ರಾರ್ಥಸಂಪನ್ನಂ ಸರ್ವಶಿಲ್ಪಪ್ರದರ್ಶಕಮ್
ನಾಟ್ಯಾಖ್ಯಂ ಪಂಚಮಂ ವೇದಂ ಸೇತಿಹಾಸಂ ಕರೋಮ್ಯಹಮ್
ಧರ್ಮ-ಅರ್ಥ-ಯಶಸ್ಸುಗಳಿಗೆ ಸಹಾಯಕವಾಗಲ್ಲ, ಉಪದೇಶವನ್ನು ಒಳಗೊಂಡ, ಭವಿಷ್ಯದ ಆಗುಹೋಗುಗಳನ್ನು ಲೋಕಕ್ಕೆ ಸೂಚಿಸಬಲ್ಲ, ಸರ್ವಕರ್ಮಗಳನ್ನು ಪ್ರತಿನಿಧಿಸುವ, ಎಲ್ಲ ಶಾಸ್ತ್ರಾರ್ಥಗಳನ್ನು ಒಳಗೊಂಡ, ಎಲ್ಲ ಶಿಲ್ಪಗಳಿಂದಲೂ ಪೋಷಿತವಾಗುವಂತಹ ನಾಟ್ಯವೆಂಬ ಐದನೇಯ ವೇದವನ್ನು ಇತಿಹಾಸ(ವಿವರ)ಸಹಿತವಾಗಿ ರಚಿಸುವೆ.
ಹೀಗೆ ಕ್ರೀಡನೀಯಕವಾಗಿ ಮನೋವಿನೋದ ಸಾಧನವೇ ನಾಟ್ಯ. ಇದು ದೃಶ್ಯವೇ ಆಗಿರಲಿ, ಶ್ರವ್ಯವೇ ಆಗಿರಲಿ, ಕಾವ್ಯ, ನಾಟಕ, ನೃತ್ಯ, ಗೀತಗಳಷ್ಟೇ ಅಲ್ಲದೆ ಇಂದಿನ ಕಾಲದ ಚಲನÀಚಿತ್ರ ಮುಂತಾದ ಲಲಿತಕಲೆಗಳೇ ಆಗಿರಲಿ; ಒಟ್ಟಿನಲ್ಲಿ ನಾಟ್ಯವೆಂಬ ಸಮಗ್ರ ಅರ್ಥದ ನೆಲೆಯ ರಂಗಭೂಮಿಯು ಮಾನವನ ನಡೆನುಡಿಗಳನ್ನು ತನ್ನ ಕಾಂತಾಸಮ್ಮಿತ ವಿಧಾನದಿಂದ ತಿದ್ದಿ ತೀಡಿ ಅರಿಷಡ್ವರ್ಗಗಳಿಗೆ ಸಾಂತ್ವನ ಹೇಳಿ, ಭವಿಷ್ಯದ ಆಗುಹೋಗುಗಳನ್ನು ಲೋಕಕ್ಕೆ ಸೂಚಿಸಿ, ಪುರುಷಾರ್ಥದಾಯಕವಾಗಿ ಮಾನವನ ಜೀವನವನ್ನು ಆನಂದ-ದರ್ಶನದ ಕಡೆಗೆ ಒಯ್ದು ಸತ್ತ್ವಶಾಲಿಯಾಗಿಸುವ ನಿಟ್ಟಿನಲ್ಲಿ ಉದ್ಯುಕ್ತವಾಗಿದೆ. ಎಲ್ಲ ಶಾಸ್ತ್ರಾರ್ಥಗಳನ್ನೂ ಒಳಗೊಂಡು ಎಲ್ಲ ಶಿಲ್ಪಗಳಿಂದಲೂ ಪೋಷಿತವಾಗುವಂತಹ ನಾಟ್ಯವೇದವು ಮಾನವಜೀವನದ ಸರ್ವಾಂಗೀಣ ಅಭಿವೃದ್ಧಿಯ ಕಲ್ಪನೆಯನ್ನು ಸಾಕಾರಗೊಳಿಸಿದೆ.
ಭರತನು ಹೇಳಿದ ನಾಟ್ಯವೇದದ ಹುಟ್ಟಿನ ಕತೆಯ ಕಾಲಮಾನವು ಇಂದಿನ ಶತಮಾನಗಳ ಇತಿಹಾಸತಜ್ಞರು ಕೊಡುವ ಆಧುನಿಕ ಕ್ಯಾಲೆಂಡರ್‍ನ ಸಮಯಕ್ಕೆ ತಾಳೆಯಾಗುವುದಿಲ್ಲ. ಇಲ್ಲಿಯೇ ಇಂದಿನ ನಾಟ್ಯಶಾಸ್ತ್ರದ ಸ್ವರೂಪವೂ ಅಂದಿನ ನಾಟ್ಯವೇದವೂ ಒಂದೆಯೇ ಎಂಬ ಜಿಜ್ಞಾಸೆ ಆರಂಭಗೊಂಡು ಭರತಯಾರು, ಎಲ್ಲಿಯವನು, ಯಾವ ಕಾಲದವನು ಎಂಬಿತ್ಯಾದಿ ಸರಣಿ ಪ್ರಶ್ನೆಗಳನ್ನು ಆಹ್ವಾನಿಸುತ್ತಾ ಸಾಕಷ್ಟು ವರುಷಗಳಿಂದ ತರ್ಕ, ವಾದಗಳನ್ನು ಬೆಳೆಸುತ್ತಲೇ ಇದೆ.
ಬ್ರಹ್ಮನು ನಾಟ್ಯವೇದವನ್ನು ಸೃಷ್ಟಿಸಿದ ತರುವಾಯ ಅದನ್ನು ಕುಶಲರಾದ, ಜಾಣರಾದ, ಚಾಣಾಕ್ಷರೂ, ಪರಿಶ್ರಮ ವಹಿಸಬಲ್ಲ ದೇವತೆಗಳನ್ನು ಆರಿಸಿ ಅವರಿಂದ ನಾಟ್ಯಪ್ರಯೋಗಿಸಬೇಕು ಎಂದು ಆಜ್ಞೆ ಮಾಡಿದ ಹಂತದಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಯಾವುದೇ ಜ್ಞಾನರಾಶಿಯಾದರೂ ಅದರೊಳಗಿನ ವಿಷಯ-ವಿಚಾರ-ಪ್ರಮೇಯಗಳು ಪ್ರಯೋಗಿಸಲ್ಪಟ್ಟಾಗಲೇ ಅದಕ್ಕೆ ಸೂಕ್ತ ಸ್ಥಾನಮಾನ. ಅದರಲ್ಲೂ ನಾಟ್ಯವು ಮೂಲತಃ ಪ್ರಯೋಗಶೀಲವಾಗಿರುವುದರಿಂದ ಯಾವುದೇ ಶೋಧನೆ, ಅಧ್ಯಯನಗಳು ಪ್ರಯೋಗಕ್ಕೆ ನೇರವಾಗಿ ಅಥವಾ ಆಂಶಿಕವಾಗಿ ಸಂಬಂಧಪಡದ ಹೊರತು ಅಂತಹ ವಿಚಾರಗಳು ಅಲ್ಪಾಯುಷಿಗಳಾಗಿ ಜಡತ್ತ್ವವನ್ನು ಪಡೆಯುತ್ತವೆ.
ಬ್ರಹ್ಮನ ಆಜ್ಞೆಗೆ ಇಂದ್ರನಾಡುವ ಮಾತು ಕೂಡಾ ಬಹಳ ಅರ್ಥಪೂರ್ಣವಾಗಿದೆ- ‘ಈ ವೇದವನ್ನು ಓದಿ ಅರಗಿಸಿಕೊಳ್ಳಲು, ಅರಿತುಕೊಂಡು ಪ್ರಯೋಗಿಸಲು, ಒಟ್ಟಾರೆ ನಾಟ್ಯವನ್ನು ನಡೆಸಲು ದೇವತೆಗಳು ಅಸಮರ್ಥರಾಗಿದ್ದಾರೆ. ಆದುದರಿಂದ ವೇದಗಳ ರಹಸ್ಯವನ್ನು ಅರಿತ, ತೀಕ್ಷ್ಣ ವ್ರತ ನಿಯಮಗಳಲ್ಲಿ ನಿರತರಾದ ಮುನಿಗಳಿಗೆ ಹೇಳಬೇಕು. ಅವರು ಇದನ್ನು ಅರಿತುಕೊಂಡು ಪ್ರಯೋಗಿಸಲು ಸಮರ್ಥರು’. –ಅಂದರೆ ಮುನಿಗಳು ಸಂಸಾರಿಗಳಾಗಿರಲಿ, ಸನ್ಯಾಸಿಗಳಾಗಿರಲಿ ವಿದ್ಯೆಯನ್ನು ಲೋಕೋಪಕಾರಕ್ಕಾಗಿ ಬಳಸುವ ಶ್ರಮ, ಶಕ್ತಿಯುಳ್ಳವರು. ದೀಕ್ಷಾಬದ್ಧರಾಗಿ ಸರ್ವಲೋಕಹಿತ, ಸರ್ವಜನಸುಖದ ಧ್ಯೇಯದೃಷ್ಟಿಯಲ್ಲಿ ನಡೆಯುಳ್ಳವರು. ಅವರಿಂದ ದತ್ತವಾಗುವ ಉಪಕ್ರಮ, ವ್ಯವಸ್ಥೆಗೆ ಹೆಚ್ಚು ಬೆಲೆ, ಪಾವಿತ್ರ್ಯವಿದ್ದು ಪಾಲಿಸಲಾಗುತ್ತದೆ.
ಭಾರತೀಯರ ಜನನ-ಮರಣಗಳ ಪರಿಕ್ರಮ-ಪರಂಪರೆಗಳುದ್ದಕ್ಕೂ ಇರುವ ಗೋತ್ರಪರಂಪರೆ ಮುನಿಮಹೋತ್ತಮರದ್ದೇ ಆಗಿದೆ ಎಂಬಲ್ಲಿಗೆ ನಮ್ಮ ಪ್ರಾಚೀನರು ಯಾರು ಎಂಬುದೂ ವೇದ್ಯ. ಜೀವನದ ಎಲ್ಲ ಅನುಭವ, ಅನುಭಾವಗಳನ್ನು ಅರಿತು, ಅನುಭವಿಸಿ ಸಂಯಮಿಗಳಾಗಿ ವಿದ್ಯೆ ಅಥವಾ ವ್ಯವಸ್ಥೆಗೆ ಸ್ಪಷ್ಟಶಿಸ್ತಿನ ರೂಪನ್ನು ಕೊಟ್ಟು ಮುನ್ನಡೆಸಲು ಬೇಕಾದ ಎಲ್ಲ ಅರ್ಹತೆಗಳೂ ಅವರಲ್ಲಿದ್ದವು ಎಂಬುದಕ್ಕೆ ಭಾರತೀಯ ಸನಾತನ ಪರಂಪರೆಯಲ್ಲಿ ಆಗಿಹೋದ ಮುನಿಮಹೋತ್ತಮರ ಜೀವನಗಾಥೆಗಳೇ ನಿದರ್ಶನ.
ಅಷ್ಟಕ್ಕೂ ಮುನಿಗಳೆಂದ ಮಾತ್ರಕ್ಕೆ ಸರ್ವಸಂಗಪರಿತ್ಯಾಗಿಗಳಂತೆಯೋ, ಬೈರಾಗಿಗಳಂತೆಯೋ ಬದುಕಬೇಕೆಂದೇನೂ ಇಲ್ಲ. ಇಂದಿನ ಕಾಲಕ್ಕೆ ರೂಢಿಗತವಾದ ಹಿಮಾಲಯವಾಸಿಗಳು, ಸಮಾಜನಿಸ್ಸಂಗತ್ತ್ವರು, ಜಟಾಧರಿಗಳಾಗಿ ಗಡ್ಡ ಬಿಟ್ಟು ಮೂಗು ಮುಚ್ಚಿ ಕುಳಿತುಕೊಳ್ಳುವವರು ಎಂಬ ಪರಿಕಲ್ಪನೆಯಲ್ಲೇ ಅವರನ್ನು ಕಾಣಬೇಕಾದ ಅಗತ್ಯವೇನೂ ಇಲ್ಲ. ಲೋಕದೊಳಗಿದ್ದೂ ಲೋಕದ ಜಡತೆಯಿಂದ ಹೊರಗುಳಿದು ಲೋಕದ ಅಗುಹೋಗುಗಳ ಬಗ್ಗೆ ಸದಾ ಕ್ರಿಯಾಶೀಲರಾಗಿ ಅರಿತು ಬೆರೆತು, ಸ್ವಂದಿಸುತ್ತಾ, ಲೋಕೋಪಕಾರಕ್ಕೆ ಕಠಿಣ ವ್ರತನಿಯಮಗಳಲ್ಲಿ ತೇಯ್ದುಕೊಂಡು ತನಗಾಗಿ ಎಂಬಂತೆ ಬಗೆಯದೆ ಚಿರಂತನ ವೇದಾಂತದೆಡೆಗೆ ಉನ್ಮುಖರಾಗಿ ನಡೆಯುವವರು ಋಷಿಗಳು, ಋಷಿಸ್ವರೂಪರು. ಅವರ ತ್ಯಾಗ, ಶಿಸ್ತು, ನಿಸ್ವಾರ್ಥ ಭಾವ ಬದುಕಿನ ಪ್ರತಿಫಲವೇ ನಮ್ಮ ಇಂದಿನ ಹಸನು ಬದುಕು. ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಭರತನೆಂಬ ನಾಟ್ಯಶಾಸ್ತ್ರದ ಪ್ರವರ್ತಕ ಮುನಿ/ಋಷಿಯಾಗಿದ್ದನು ಎಂಬುದರಲ್ಲಿ ಒಂದಿನಿತೂ ಅತಿಶಯವಿಲ್ಲ, ಮೂಲೆಗೊತ್ತಬೇಕಾದ ಮಡಿವಂತಿಕೆಯೂ ಇಲ್ಲ.
ವೇದ ಎಂದರೆ ಜ್ಞಾನ. ಶಾಸ್ತ್ರವೆಂದರೆ ಆ ಜ್ಞಾನವನ್ನು ಒಂದು ಆವರಣಕ್ಕೊಪ್ಪಿಸುವ ವ್ಯವಸ್ಥೆ ಅಥವಾ ಕ್ರಮ. ವೇದ ಸಮಗ್ರವಾಙ್ಮಯವಾದರೆ, ಶಾಸ್ತ್ರವೆನ್ನುವುದು ನಿಯಮ ನೇಮಗಳನ್ನು ಶಿಷ್ಠವಾಗಿ ಹೇಳುವ ಅದರ ವಿಶೇಷ ಶಾಖೆ. ಶಾಸ್ತ್ರವಿರುವುದೇ ನಿಯಮಬದ್ಧವಾದ ವ್ಯವಸ್ಥೆಯನ್ನು ಹೊಂದುವ ಪೂರ್ವಪಾಠವಾಗಿ. ಈ ಹಿನ್ನೆಲೆಯಲ್ಲಿ ನಾಟ್ಯವೇದದಂತಹ ಶ್ರುತಿಸಂಹಿತೆಯನ್ನು ಬ್ರಹ್ಮನಿಂದ ಪಡೆದು ಸ್ಮೃತಿಪೂರ್ವಕ ಲಕ್ಷಣೀಕರಿಸಿದವನು ಋಷಿ/ಮುನಿಯಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದಲೇ ನಂತರದಲ್ಲಿ ಕಂಡುಬರುವ ಹಲವು ಲಾಕ್ಷಣಿಕರಿಗೆ, ಅಲಂಕಾರಿಕರಿಗೆ ಭರತನೇ ನಾಟ್ಯಶಾಸ್ತ್ರಾಚಾರ್ಯರೂಪದಿಂದ ಸ್ತುತನಾಗಿದ್ದಾನೆ.
(‘ಮಹಾಮುನಿ ಭರತ’ ಕೃತಿಯ ಆಯ್ದಭಾಗಗಳು)
ಪ್ರಸ್ತುತ ಕಾವ್ಯಭಾಗದಲ್ಲಿ ಮುನಿಗಳ ಪ್ರಶ್ನೆ, ಶುಚಿಸಮೇತ ಬಂದ ಋಷಿಗಳಿಗೆ ಭರತ ಕತೆ ಹೇಳಲು ಆರಂಭಿಸುವುದು, ಆ ಪೈಕಿ ಇಂದ್ರಾದಿಗಳ ಬಿನ್ನಹ, ನಾಟ್ಯವೇದದ ಸೃಷ್ಟಿ ಮತ್ತು ಭರತನಿಗೆ ನಾಟ್ಯವೇದವನ್ನಿತ್ತು ಪ್ರಯೋಗದ ಜವಾಬ್ದಾರಿಯನ್ನು ಹೊರಿಸಿದ ತರುವಾಯ, ಭರತನು ತನ್ನ ನೂರುಮಂದಿ ಮಕ್ಕಳಿಗೆ ನಾಟ್ಯವೇದವನು ಕಲಿಸುತ್ತಾನೆ- ಎಂಬಲ್ಲಿಗೆ ಪ್ರಥಮ ಅಧ್ಯಾಯದ ಮೊದಲ ಕಥಾಭಾಗವು ‘ನಾಟ್ಯೋತ್ಪತ್ತಿ’ ಎಂಬ ಹೆಸರಿನಲ್ಲಿ ಸಶೇಷವಾಗಿದೆ.
** ಆವರಣಚಿಹ್ನೆಯೊಳಗೆ ( ) ಬರೆಯಲಾದ ಸಂಗತಿಗಳು ಗತಿ, ತಾಳ, ಪಾಟಾಕ್ಷರ/ಸ್ವರ-ಶಬ್ದಕಲ್ಪನೆ/ಆಲಾಪನೆ/ವಾದ್ಯಸಾಂಗತ್ಯದ ನಿರ್ದೇಶನಕ್ಕೆ ಇರುವ ಸ್ಥಾನ, ಪಾತ್ರೌಚಿತ್ಯ, ನಿರೂಪಣಾ ನೆಲೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಸಲುವಾಗಿ ಹೇಳಲಾಗಿದೆ. ಇದು ಕಲಾವಿದರಿಗೆ ನೃತ್ಯರೂಪಕದ ಸಂಯೋಜನೆಗೆ ಅಳವಡಿಸಿಕೊಳ್ಳುವುದಾದರೆ ಅನುಕೂಲವಾಗಲಿದೆ. ಇನ್ನು ಭಾವಾಭಿವ್ಯಕ್ತಿಗೆ ಹೊಂದುವ ರಾಗದ ಆಯ್ಕೆ, ಕಲಾವಿದರ ಸಂಖ್ಯೆ ಮತ್ತು ಆಂಗಿಕಾದಿ ಅಭಿನಯಗಳಲ್ಲಿ ಸ್ವಾತಂತ್ರ್ಯವನ್ನು ಕಲಾವಿದರಿಗೇ ಬಿಟ್ಟುಕೊಟ್ಟಿದೆ.
ನಾಟ್ಯೋತ್ಪತ್ತಿ
(ನಾಂದಿಶ್ಲೋಕ)
ಪ್ರಣಮ್ಯ ಶಿರಸಾದೇವೌ ಪಿತಾಮಹಮಹೇಶ್ವರೌ
ನಾಟ್ಯಶಾಸ್ತ್ರಂ ಪ್ರವಕ್ಷ್ಯಾಮಿ ಬ್ರಹ್ಮಣಾ ಯದುದಾಹ್ಯತಂ
(ನಾಟ್ಯದ ಮಹತ್ತ್ವ ಹೇಳುವುದಕ್ಕಾಗಿ ಸ್ವರಕಲ್ಪನೆ ಬಳಸುವುದು)
(ಖಂಡಛಾಪು) ನಾಟ್ಯವಿದು ಪಂಚಮವೇದವಿದು ಯಜ್ಞವಿದು ನಯನಾಭಿರಮ್ಯವಿದು
ನಟನಾತ್ಮಕೋಶವಿದು ನಟನದ್ವಿವೇಕವಿದು ಪುರುಷಾರ್ಥದಾಯಕವು ಆನಂದದಲೆಯು
(ಸೂತ್ರಧಾರ ನಿರೂಪಣೆಯಲ್ಲಿ)
ಒಂದು ಅನಧ್ಯಾಯದ ದಿನವು…ಆತ್ರೇಯಾದಿ ಮುನಿಪರಿವಾರವು…
ಭರತನ ಬಳಿಗೆ.. ನಾಟ್ಯದ ಕಡೆಗೆ… ಬಂದರೋ.. ಬಂದರು…
(ಸಾಕಿ/ಖಂಡಗತಿ) (ಮುನಿಗಳು ಭರತನಲ್ಲಿ ಪ್ರಾರ್ಥಿಸುತ್ತಾ)
ಪೇಳಲೈ ಆಚಾರ್ಯ ವೇದ ರಚಿಸಿದ ಮರ್ಮ
ಅಂಗಪ್ರಮಾಣ ಪ್ರಯೋಗಕಿಹ ಧರ್ಮ
ಕೃಪೆಯ ಮಾಡೈ ಭರತ, ಭಾಷ್ಯ ಬೆಳೆಸಿದ ಕರ್ಮ
ಈ ಸನಾತನಸಂಹಿತೆಯು ತಳೆದ ನರ್ಮ
(ಚತುರಶ್ರ) (ಭರತನ ಮಾತು) ಶುಚಿಯೊಡಗೂಡಿರಿ ನಾಟ್ಯಕಥನಕೆ
ಹ್ಲಾದಮೋದ ನಡೆ ಬೋಧದ ಪಥಕೆ
(ಸ್ವರಕಲ್ಪನೆ)
(ಸೂತ್ರಧಾರ ನಿರೂಪಣೆಯಲ್ಲಿ)
ಸಹೃದಯರೆ…ನಾಟ್ಯವಿಸ್ಮಯದ ಹುಟ್ಟಿನ ಕಥೆಯ… ಆಲಿಸುವಿರಾ..?
ಒಂದಾನೊಂದು ಕಾಲದಲ್ಲಿ..ಜಂಬೂದ್ವೀಪದಲ್ಲಿ…
(ಖಂಡ) ಸ್ವಾಯಂಭವದು ಕಳೆದು ವೈವಸ್ವತವು ಬರಲು
ಗ್ರಾಮ್ಯದಾರುಣರೀತಿ ಕ್ರೋಧ ಕಾಮದ ಭೀತಿ
(ಸ್ವರಕಲ್ಪನೆ)
(ಬ್ರಹ್ಮನಲ್ಲಿ ಇಂದ್ರಾದಿಗಳೆಲ್ಲರ ಪ್ರಾರ್ಥನೆ)
ಪಾಹಿಮಾಂ…ಪಾಹಿಮಾಂ… ಪಾಹಿಮಾಂ…ಪಾಹಿ…
ಕ್ರೀಡನೀಯಕ ವೇದವನು ನೀಡು ನಾಲ್ಮೊಗನೆ
ಸುರನರೋರಗ ಯಕ್ಷ ಮನುಜಾದಿಗಳಿಗೆ
(ಚತುರಶ್ರ) (ಬ್ರಹ್ಮನ ನುಡಿ)
ಸಂಕಲ್ಪದ ಫಲ ಭವಿತವ್ಯದ ನೆಲ
ಶಾಸ್ತ್ರಾದಿಯ ಬಲ ನಾಟ್ಯದ ಒಲವು
ಶಿಲ್ಪರಸಾಯನ ಅಭಿನಯ ಜೀವನ
ಪಠ್ಯ-ಗೀತ-ರಸ ಅರಿತರೆ ಜಸವು
(ನಾಟ್ಯವೇದಸೃಷ್ಟಿ) ನಾಟ್ಯದ ಪಾಠ್ಯಕೆ ಋಗ್ವೇದದ ಬಲ… (ಪಾಟಾಕ್ಷರ ಕಲ್ಪನೆ ಬಳಸಬಹುದು)
ಅಭಿನಯಕಂತೆ ಯಜುರ್ವೇದ (ಆಲಾಪನೆ)
ಸಾಮವೇದ ಸಂಗೀತಕೆ ಬೆಂಬಲ (ಸ್ವರಕಲ್ಪನೆ)
ರಸನಿಧಿ ಆಥರ್ವಣವೇದ (ವಾದ್ಯದಲ್ಲಿ ಗತಿವಿನ್ಯಾಸ)
(ಇಂದ್ರಸಹಿತ ಎಲ್ಲರೂ ಕೂಡಿಕೊಂಡು)
ವೇದಹೃದಯ ಕಂಡರಿಸಿದ ಋಷಿಗಳೆ
ಯೋಗ್ಯರು ನಾಟ್ಯಪ್ರಯೋಗಕ್ಕೆ
ನಾಟ್ಯಯೋಗದ ನಿತ್ಯನೇಮಕೆ
ಭಾವಯಾನವು ಬೇಕು ಕಾಯಕೆ
(ಸ್ವರಕಲ್ಪನೆ ಅಥವಾ ಆಲಾಪನೆ)
(ಖಂಡ) (ಬ್ರಹ್ಮ ಭರತನಿಗೆ ಹೇಳುವುದು)
ಹೇ.. ಭರತ ಪಡೆ ನಾಟ್ಯಯಜ್ಞದೀಕ್ಷೆಯನು
ಸುಪ್ರಯೋಗದಿ ಶಾಸ್ತ್ರಗಂಧ ಕಾಣಿಪುದು
ನೂರುಮಕ್ಕಳ ತಂದೆ ವ್ರತನೇಮದಿಂ ಮುಂದೆ
ಕಲಿತು ಕಲಿಸುತ ಕಲೆಯ ನೆಲೆಯ ಬೆಳೆಸುವುದು
(ಭರತನು ಮಕ್ಕಳಿಗೆ ಕಲಿಸುವುದನ್ನು ಪ್ರದರ್ಶಿಸುವುದಿದ್ದಲ್ಲಿ ಸ್ವರಕಲ್ಪನೆ, ಆಲಾಪನೆ ಅಥವಾ ಪಾಟಾಕ್ಷರ ಸಮೂಹಗಳನ್ನು ರಚಿಸಿ ಈ ಕಾವ್ಯಮಾಲೆಯನ್ನು ಪ್ರಯೋಗಕ್ಕಾಗಿ ಬೆಳೆಸಬಹುದು)
(ಮುಂದಿನ ಮಾಲಿಕೆಯಲ್ಲಿ ಅಪ್ಸರಸೃಷ್ಟಿ…ನಿರೀಕ್ಷಿಸಿ)