Author: ಮನೋರಮಾ. ಬಿ.ಎನ್
ಲಕ್ಷಣ: ಚಕ್ರ ಹಸ್ತದ ಹೆಬ್ಬೆರಳು ಮತ್ತು ಕಿರುಬೆರಳನ್ನು ಬಿಟ್ಟು ಉಳಿದ ಬೆರಳುಗಳನ್ನು ಮಡಿಸಿದರೆ ಕೂರ್ಮ ಹಸ್ತ. ಅಂದರೆ ಅಂಗೈಯನ್ನು ಪರಸ್ಪರ ಲಂಬವಾಗಿಯೂ ಅಡ್ಡವಾಗಿಯೂ ಸೇರಿಸಿ ಮುಚ್ಚಿ ಹೆಬ್ಬೆರಳು ಮತ್ತು ಕಿರುಬೆರಳನ್ನು ಬಿಟ್ಟು ಉಳಿದ ಬೆರಳುಗಳನ್ನು ಮಡಿಸಬೇಕು.
ವಿನಿಯೋಗ : ಆಮೆ, ವಿಷ್ಣುವಿನ ಕೂರ್ವೂವತಾರ.
ನಂದಿಕೇಶ್ವರನ ಅಭಿನಯದರ್ಪಣದ ಪ್ರಕಾರ ಇದನ್ನು ನೃತ್ತ ಹಸ್ತ ಎಂದು ಹೆಸರಿಸಲಾಗಿದೆಯಾದರೂ ಯಾವ ರೀತಿಯಲ್ಲಿ ಇದನ್ನು ನೃತ್ತಾದಿ ಸಂದರ್ಭಗಳಲ್ಲಿ ಬಳಸುವ ಹಸ್ತವಾಗಿಸಬಹುದು ಎಂಬುದಕ್ಕೆ ಪೂರಕವಾದ ಮಾಹಿತಿಗಳು ಲಭ್ಯವಿಲ್ಲ. ದಶಾವತಾರ ಹಸ್ತಗಳಲ್ಲಿ ಒಂದಾದ ಕೂರ್ಮಾವತಾರ ಹಸ್ತಕ್ಕೆ ಇದೇ ಲಕ್ಷಣವನ್ನು ಹೇಳಲಾಗಿದ್ದು; ಕೂರ್ಮಹಸ್ತವನ್ನು ಮುಖದ ಮುಂದೆ ಹಿಡಿದು, ಅನಂತರ ಭುಜದ ಬಳಿ ತ್ರಿಪತಾಕ ಹಸ್ತಗಳನ್ನು ಹಿಡಿಯಬೇಕೆನ್ನುತ್ತದೆ ಅಭಿನಯದರ್ಪಣ.
ಇನ್ನು ಗಾಯತ್ರಿ ನ್ಯಾಸ ಮುದ್ರೆಗಳ ಪೈಕಿ ಕೂರ್ಮ ಮುದ್ರೆ ಮತ್ತು ಪೂಜಾ ಮುದ್ರೆಗಳಲ್ಲಿ ಕೂರ್ಮಕಾಲಾಗ್ನಿ ಮುದ್ರೆಯೆಂಬ ಪ್ರಕಾರಗಳಿದ್ದರೂ ಅದಕ್ಕೂ ಈ ಹಸ್ತಕ್ಕೂ ಹೆಸರಿನ ಸಾಮ್ಯತೆಯನ್ನುಳಿದು ಬೇರಾವ ಸಂಬಂಧವೂ ಕಂಡುಬಂದಿಲ್ಲ.
ಹಸ್ತ ಮುಕ್ತಾವಳಿಯಂತಹ ಗ್ರಂಥಗಳಲ್ಲಿ ಅಂಜಲಿಹಸ್ತವನ್ನು ಅಳ್ಳಕ ಮಾಡಿ ಹಿಡಿಯುವಂತಹ ಕಪೋತಹಸ್ತವನ್ನು ಕೂರ್ಮಹಸ್ತವೆಂದೂ ಕರೆಯಲಾಗಿದೆ. ಈ ಹಸ್ತವನ್ನು ಸಂಗೀತ ರತ್ನಾಕರದಲ್ಲಿ ಹಸ್ತ ಕೂರ್ಮಕವೆಂಬ ಹೆಸರಿನಿಂದ ಕರೆಯಲಾಗಿದೆ.