ಅಂಕಣಗಳು

Subscribe


 

ಕೂಡಿಯಾಟ್ಟಂ ಮತ್ತು ಭಾಗವತ ಮೇಳ: ಪರಿಷ್ಕಾರ ಅಗತ್ಯ

Posted On: Tuesday, May 26th, 2015
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಶಂಭುಹೆಗಡೆಯವರ ಹೆಸರಿನಲ್ಲಿ ನಡೆಯುವ ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವ ವರ್ಷವರ್ಷವೂ ತನ್ನ ಅಸ್ತಿತ್ತ್ವವನ್ನು ಸಹೃದಯರ ವಲಯದಲ್ಲಿ ಗಟ್ಟಿಗೊಳಿಸಿಕೊಳ್ಳುತ್ತಲಿದ್ದು; ಹಲವು ವಿಶ್ಲೇಷಣೆಗಳನ್ನು ಹುಟ್ಟುಹಾಕುತ್ತಾ ಕಲಾಭಿಮುಖವಾಗಿಯೇ ಮೈಮೂಡುತ್ತಲಿವೆ ಎಂಬುದು ನಿಜಕ್ಕೂ ಅಭಿನಂದನೀಯ ವಿಚಾರ. ಇಂತಹ ಒಂದು ವಿಮರ್ಶೆಗೆ ಒಪ್ಪಿದ ಮೂರು ವಿಚಾರಗಳು ಪ್ರಸಕ್ತ ದಿನಗಳ ಆಸ್ವಾದನೆಯ ನೆಲೆಯಲ್ಲಿ ಪ್ರಸ್ತುತ ಮತ್ತು ನೃತ್ಯ-ನಾಟ್ಯಾದಿಗಳ ನೆಲೆಬೆಲೆಯನ್ನು ಅರ್ಥೈಸಿಕೊಳ್ಳಲು ಉತ್ತಮ ಸಲಕರಣೆಗಳಾಗಿದ್ದಾವೆ ಎಂಬ ಕಾರಣದಿಂದ ಅವುಗಳನ್ನು ಪ್ರಸ್ತುತ ಸಂಪಾದಕೀಯದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಕೂಡಿಯಾಟ್ಟಂ-ಕೇರಳ ಮೂಲದ ಪ್ರಪಂಚದಲ್ಲೇ ಎಲ್ಲದಕ್ಕಿಂತಲೂ ಹಳೆಯ, ಹಿರಿಯ, ಬಹುಪ್ರಾಚೀನ ಕಲೆಯೆಂದು ಹೆಸರಾದ ಈ ಪ್ರದರ್ಶಕ ಕಲಾಪ್ರಕಾರದ ಕುರಿತು ಸಾಕಷ್ಟು ಕೇಳಿ, ಯೂಟ್ಯೂಬ್‍ಗಳಲ್ಲಿ ನೋಡಿ ಬಲ್ಲೆವಷ್ಟೇ. ಕೂಡಿಯಾಟ್ಟಂ ಕಲಾವಿದರೇ ಹೇಳುವಂತೆ ಸುಮಾರು 2000 ವರುಷಗಳ ಪ್ರಾಚೀನ ಪರಂಪರೆಯಿದೆಯಂತೆ ! ಅಂದರೆ ಭರತನ ನಾಟ್ಯಶಾಸ್ತ್ರಕ್ಕಿಂತಲೂ ಹಳೆಯ ಪರಂಪರೆಯುಳ್ಳದ್ದು ಮತ್ತು ಇಂದಿನ ಕಾಲಕ್ಕೆ ನಾಟ್ಯಶಾಸ್ತ್ರ ಕಾಲದ ಹಲವು ಆಂಗಿಕಾದಿ ವಿಶೇಷಗಳನ್ನು ಉಳಿಸಿಕೊಂಡು ಬಂದ ಕಲೆಯೆಂದು ಮುದ್ರೆಯೊತ್ತಿಸಿಕೊಂಡಿದೆ ಈ ಕೂಡಿಯಾಟ್ಟಂ ! ಕರ್ನಾಟಕದ ನೃತ್ಯಸನ್ನಿವೇಶಗಳಲ್ಲಿ ತೆರೆದುಕೊಳ್ಳುವುದು ಕಡಿಮೆಯೇ ಆದರೂ ಅದಾಗಲೇ ನೋಡಿದವರು ನೋಡುವವರಿಗೆ ಹೇಳಬಲ್ಲ ಕಿವಿಮಾತೆಂದರೆ ಅಸಾಮಾನ್ಯ ತಾಳ್ಮೆ, ನೂತನ ಕಲೆಯೊಂದನ್ನು ತಮ್ಮ ಪ್ರೇಕ್ಷಕತ್ವಕ್ಕೆ ದಕ್ಕಿಸಿಕೊಳ್ಳಲೇಬೇಕೆಂಬ ಹಟವಿದ್ದರಷ್ಟೇ ಸ್ವಲ್ಪ ಮಟ್ಟಿಗೆ ಸಹನೀಯವಾದೀತು ಅಷ್ಟೇ. ಅಷ್ಟಕ್ಕೂ ನಾಟ್ಯಶಾಸ್ತ್ರಕ್ಕೂ ಹಿಂದಿನದು ಎಂದು ಹೇಳಿಕೊಳ್ಳುವ ಹೆಚ್ಚುಗಾರಿಕೆಯೇನೂ ಹೊಂದಿಲ್ಲವೆಂದೇ ಅನಿಸಿದರೆ ತಪ್ಪಿಲ್ಲ.

ಕಾರಣ, ಆಂಗಿಕಾದಿ ಚಲನೆಗಳಲ್ಲಿ ಕಾಣದ ವಿಸ್ತಾರಪ್ರಜ್ಞೆ, ಒಂದೊಂದು ಕಥಾಸನ್ನಿವೇಶದ ಪದ-ಪದರವನ್ನೂ ಬಿಡಿಸಿಡುವಂತೆ ಎಳೆದೆಳೆದು ಅಭಿನಯವನ್ನೂ ವಿಳಂಬಗತಿಯಲ್ಲೇ ಕಾಣಿಸುವ ಹಟ, ಹಿಮ್ಮೇಳದಲ್ಲಿ ಕಿವಿಯ ತಮಟೆಗೇ ನೇರ ನಿಂತು ನುಡಿಸುವಂತಿರುವ ಬಡಿತದ ಸದ್ದೊಂದಲ್ಲದ ಅಭಿವ್ಯಕ್ತಿ, ಕೆಲವೊಂದು ಮಾತು ಮತ್ತು ಮುಖ-ಕಣ್ಣಿನ ಸೀಮಿತ ಅಭಿನಯ ಹೊರತುಪಡಿಸಿದರೆ ಕಥಾಸನ್ನಿವೇಶವನ್ನು ಕಣ್ಣಿಗಿಂಪಾಗುವಂತೆ ಕೊಂಡುಹೋಗದ ರಸವಿಹೀನ ಸನ್ನಿವೇಶಗಳ ಅಧಿಕತೆ, ಆಹಾರ್ಯದಲ್ಲಿ ಅಯಾಚಿತವಾಗಿ ಕಣ್ಣಿಗೆಟುಕುವ ತೊಂದರೆಗಳು, ಬರಿಯ ಕೆಲವೊಂದು ಹಸ್ತ-ಮುದ್ರೆಗಳಲ್ಲೇ ಕಥಾಭಾಗವನ್ನು ಸಂವಹಿಸುತ್ತೇವೆಂಬ ಪರಂಪರಾನಿಷ್ಠೆ…ಒಟ್ಟಿನಲ್ಲಿ ನಾಟ್ಯಶಾಸ್ತ್ರದ ಸಮಕಾಲೀನ ಎಂಬುದರ ಸುಳಿವೇ ಇಲ್ಲದಂತಿರುವ ಕೂಡಿಯಾಟ್ಟಂಗೆ ಸಾಕಷ್ಟು ಕಾಯಕಲ್ಪ ಬೇಕು ಎಂದು ಪ್ರೇಕ್ಷಕ ಸಹೃದಯನಿಗೆ ಅನ್ನಿಸಿದರೆ ಖಂಡಿತಾ ತಪ್ಪಿಲ್ಲ.

‘ಕಾಂಬ ಕಣ್ಣಲ್ಲಡಗಿದೆ ಸೌಂದರ್ಯ’ ಎಂಬ ನುಡಿಗಟ್ಟನ್ನೇ ಆತು ನಿಂತರೂ ಬಹಳ ಕಾಲ ನೋಡಿಸಿಕೊಂಡು ಹೋಗುವ ಸ್ವಭಾವಸಹಜ ತಾಕತ್ತು ಇಲ್ಲದಂತೆಯೇ ತೋರುತ್ತದೆ. ಆದಾಗ್ಯೂ ಇಷ್ಟೊಂದು ಶತಮಾನಗಳ ಕಾಲ ಈ ಕಲೆ ಬಾಳಿ ಬಂದುದಾದರೂ ಹೇಗೆ ಎಂಬುದೇ ಬಹು ದೊಡ್ಡ ಅಚ್ಚರಿ ! ಕಾರಣ, ಸ್ಥಾಯಿಭಾವ ಪೋಷಣೆಯಾಗಲೀ, ರಸಾದ್ಭುತ ಪರಿಕಲ್ಪನೆಯಾಗಲೀ ಅಷ್ಟಾಗಿ ತೋರದೆ ಆನಂದಕ್ಕೆ ಆಸ್ಪದವನ್ನು ಕನಿಷ್ಠಮಟ್ಟದಲ್ಲಿ ನೀಡುವ ಪ್ರೇಕ್ಷಕರ ತಾಳ್ಮೆ ಪರಿಕಿಸುವ ಕಲೆಗೆ ಹೆಚ್ಚಿನ ಆಯುಷ್ಯವಿಲ್ಲ ಮಾತ್ರವಲ್ಲ ಸಹೃದಯ ಜನರಂಜನಿಯಲ್ಲ ಎಂಬುದನ್ನು ಎಷ್ಟೇ ಬಾರಿಗೆ ಹೇಳಿಕೊಂಡರೂ ಇದೊಂದು ಕಲೆ ಮಾತ್ರ ವಿಶೇಷವಾಗಿಯೇ ಕಾಣುತ್ತದೆ.

ಇದು ಪರಂಪರೆಯ ನಿಷ್ಠೆಯಲ್ಲಿ ಕಲೆಗೆ ಅಗತ್ಯವಾದ ಆಸ್ವಾದನೆಯ ಪ್ರಜ್ಞೆಯನ್ನು ಕಡಿಮೆಗೊಳಿಸಿಕೊಳ್ಳುತ್ತಿರುವುದಕ್ಕೆ ಉದಾಹರಣೆಯಾದರೆ ಮತ್ತೊಂದು ಕಲಾರಂಜನೆಗಾಗಿ ತಮ್ಮ ಮೂಲವನ್ನೇ ಮರೆತುಬಿಟ್ಟು ಕಾಲದ ಓಟದಲ್ಲಿ ಜನಪ್ರಿಯವಾದ ಸೋದರಕಲೆಯ ಮೂಲಾಂಶಗಳನ್ನು ತನ್ನೊಳಗೆ ಸೇರಿಸಿಕೊಂಡು ತನ್ನ ನೈಜ ಅಸಿತ್ತ್ವವನ್ನೇ ಕಳೆದುಕೊಳ್ಳುತ್ತಿದೆ. ಅದುವೇ ಮೇಲತ್ತೂರು ಭಾಗವತ ಮೇಳ.

‘ಅತಿಯಾದರೆ ಅಮೃತವೂ ವಿಷ’ ಎಂಬುದನ್ನು ಕಲೆಗೆ ಅನ್ವಯಿಸಿ ಹೇಳುವುದಾದಲ್ಲಿ ಇವೆರಡೂ ಉದಾಹರಣೆಗಳು ಸೂಕ್ತವಾಗಿ ಹೊಂದಿಕೊಂಡಾವು. ಆಂಧ್ರದಿಂದ ವಲಸೆ ಬಂದು ತಮಿಳುನಾಡಿನಲ್ಲಿ ನೆಲೆಯಾದ ಭಾಗವತಮೇಳವು ಹೆಸರಿಗಷ್ಟೇ ತೆಲುಗುದೇಶದಲ್ಲಿ ಒಡಮೂಡಿದ್ದು ಎಂಬ ಬೋರ್ಡ್ ಅಂಟಿಸಿಕೊಂಡು ತಿರುಗಾಡುತ್ತಿದೆಯೆಂದು ಕಂಡರೆ ಖಂಡಿತಾ ಅತಿಶಯವಲ್ಲ. ಪ್ರಸ್ತುತ ದಿನಗಳಲ್ಲಂತೂ ತನ್ನ ಆಂಗಿಕಾದಿ ಅಭಿನಯಗಳಲ್ಲಿ ಭರತನಾಟ್ಯವನ್ನೇ ಇಂಚಿಂಚೂ ಹೋಲುವ ಈ ಭಾಗವತಮೇಳದಲ್ಲಿ ಸ್ವತಃ ತೆಲುಗು ಬಲ್ಲವರು ಕಡಿಮೆ ಎಂದರೆ ತಮ್ಮ ಕಲಾಮೂಲದ ಪ್ರಜ್ಞೆ ಇನ್ನೆಷ್ಟು ಮಸುಳಿಸಿದ್ದಿರಬೇಕು ಯೋಚಿಸೋಣ.

ಭರತನಾಟ್ಯಕ್ಕೆ ಕೆಲವು ತಲೆ, ಕಾಲು, ಬಾಲ ಸೇರಿಸಿದರೆ ಅದು ಭಾಗವತ ಮೇಳವೇ ಎಂಬಷ್ಟರ ಮಟ್ಟಿಗೆ ಕಾಣುವ ಈ ಕಲೆ ಭರತನಾಟ್ಯ ನೃತ್ಯರೂಪಕದಿಂದಾಚೆಗಿನ ವಿಶೇಷ ಅಭಿವ್ಯಕ್ತಿಯನ್ನೇನೂ ನೀಡುವುದಿಲ್ಲ ಎಂಬುದು ನಿಜಕ್ಕೂ ದುಃಖದ ವಿಷಯ. ಒಂದರ್ಥದಲ್ಲಿ ಭರತನಾಟ್ಯ ಎಲ್ಲಾ ಕಲೆಗಳಿಗಿಂತ ಶ್ರೇಷ್ಠ ಎಂಬ ಯಜಮಾನ್ಯ ಪ್ರವೃತ್ತಿಯ ಧೋರಣೆಯೂ, ತಮಿಳುನಾಡಿನಲ್ಲಿ ಅಪಾರವಾಗಿ ಹಬ್ಬಿರುವ ಭರತನಾಟ್ಯಪ್ರೇಮ ಇಂತಹ ಒಂದು ದುಃಸ್ಥಿತಿಗೆ ಕಾರಣವೂ ಹೌದು. ಕಾಲಕ್ಕೆ ತಕ್ಕಂತೆ ಭಾಗವತಮೇಳದ ಕಲಾವಿದರು ಭರತನಾಟ್ಯವನ್ನು ಕಲಿಯುವುದೇನೋ ಸರಿ.

ಆದರೆ ಅದನ್ನೇ ಅನ್ವಯಿಸಿ ಅಭಿನಯ ಮಾಡುತ್ತಾರೆಂಬುದು ಎಷ್ಟು ನಿಜವೋ; ಭರತನಾಟ್ಯವೂ ಭಾಗವತಮೇಳದ ನೃತ್ಯವಿಶೇಷಗಳನ್ನು ತನ್ನೊಳಗೆ ಆಪೋಷನ ತೆಗೆದುಕೊಳ್ಳುತ್ತಾ ತನ್ನ ನೃತ್ಯಬಂಧಗಳಲ್ಲಿಯೂ ಅವುಗಳನ್ನು ಅತ್ಯಾಕರ್ಷಕವಾಗಿ ಮೆರೆದು ನುಂಗಿ ನೊಣೆಯುತ್ತಿದೆ ಎಂಬುದೂ ಸತ್ಯ. ಇದಕ್ಕೆ ಭಾಗವತಮೇಳದ ತೋಡಯಮಂಗಲ, ಜತಿಕ್ರಮ, ಧರು, ತಿಲ್ಲಾನ, ಜತಿಸ್ವರ ಎಲ್ಲವೂ ನಿದರ್ಶನವಾಗಿ ತೋರುತ್ತದೆ. ಸದ್ಯ, ಯಕ್ಷಗಾನ ಅಷ್ಟರಮಟ್ಟಿಗೆ ಪರತಂತ್ರ ಇನ್ನೂ ಹೊಂದಿಲ್ಲವೆಂಬುದು ಕೊಂಚ ಸಮಾಧಾನವೇ ಆದರೂ ಪ್ರಸ್ತುತ ದಿನಗಳ ಬೆಳವಣಿಗೆಗಳು ಆ ದಿನಗಳೂ ದೂರವಿಲ್ಲ ಎಂದು ವಾಸ್ತವತೆಯ ಕಹಿಯನ್ನೂ ಎದುರಿಗಿರಿಸುತ್ತವೆ.

ಕಲೆಯ ನಡುವಿನ ಕೊಡು-ಕೊಳ್ಳುವಿಕೆಗಳು ಸ್ವಾಗತಾರ್ಹವೇ ಆದರೂ ಯಾವ ಬಗೆಯ ಅಧ್ವಾನಗಳನ್ನು ಸೃಷ್ಟಿಸುತ್ತವೆ ಎಂಬ ಒಂದು ಮುಖ ಭಾಗವತಮೇಳದ ನೆಲೆ-ಹಿನ್ನೆಲೆಯಲ್ಲಿ ಬಿಚ್ಚಿಕೊಂಡಿತಷ್ಟೇ. ಅದಕ್ಕೆ ಹೊಸತೆನಿಸುವ ಸೇರ್ಪಡೆ ಕೂಚಿಪುಡಿ-ಭರತನಾಟ್ಯದ ಯುಗಳ ಸಂಯೋಜನೆಯ ಅಸಂಬದ್ಧ ಫ್ಯೂಷನ್. ನೃತ್ಯನಾಟಕ, ನೃತ್ಯರೂಪಕದಲ್ಲಿ ಪರಸ್ಪರ ಕಲೆಗಳ ಸಂಯೋಜನೆ ವಸ್ತು-ಕಥೆಯ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಾಣುವುದೇನೋ ಸಹಜ.

ಆದರೆ ಸೋದರಕಲೆಗಳು ಎಂಬ ನಾಮವಿಶೇಷದಿಂದಾಗಿಯೇ ಪರಸ್ಪರ ಎರಡು ಕಲೆಗಳು ಯಾವುದೇ ಅಗತ್ಯ-ಅನುಕೂಲ-ಸಾಮರಸ್ಯವಿಲ್ಲದೆಯೇ ಕಲಾವಿದರ ಅಶಿಸ್ತು, ಎಡವಟ್ಟಿನೊಳಗೆ ರಂಗದಲ್ಲಿ ಒಟ್ಟಿಗೇ ಹಾಸ್ಯಾಸ್ಪದಕ್ಕೊಳಗಾಗುವುದು ನಿಜಕ್ಕೂ ಒಳಿತಿನ ಸೂಚನೆಯಲ್ಲ.
ಇದು ಒಬ್ಬಿಬ್ಬರು ಕಲಾವಿದರಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಬದಲಾಗಿ ಹಲವು ದಿಕ್ಕಿನಲ್ಲಿ ಆವರಿಸಿ ಕಲಕುತ್ತಿದೆ. ಹಲವು ಬಗೆಯ ನೃತ್ಯಪರಂಪರೆಗಳನ್ನು ಏಕಕಾಲಕ್ಕೇ ಪ್ರೇಕ್ಷಕನೆದುರಿಗೆ ತೆರೆದಿಡುವ ಶೂರತ್ವ ಶ್ಲಾಘನೀಯವೇ ಆದರೂ ಫ್ಯಾಶನ್ ಕಲಿತ ಮಾತ್ರಕ್ಕೆ ಕಲಾಂತರಂಗ ಶೂನ್ಯವಾಗುತ್ತದೆ.

ಭಿನ್ನ-ಭಿನ್ನ ಕಲಾಪ್ರಪಂಚವನ್ನು ಒಂದೇ ಗುಕ್ಕಿಗೆ ಬಗೆದಿಡುವ ಯತ್ನ ಸಾಂಗತ್ಯವಾಗದಿದ್ದರೆ ಪ್ರೇಕ್ಷಕನ ಚಪ್ಪಾಳೆ ಕೈಗೆ ಮಾತ್ರ ಸೀಮಿತವಾಗುತ್ತದೆ, ಪ್ರಶಂಸೆ ನಾಲಗೆಯ ತುದಿಯಲ್ಲಷ್ಟೇ ನಿಲ್ಲುತ್ತದೆ. ನೋಡುಗನ ಕಣ್ಣು ತೇವವಾಗಿಸುವ, ಮನಸ್ಸು ಆದ್ರ್ರ ಮಾಡಿಸುವ ಸಾತ್ತ್ವಿಕಾಭಿವ್ಯಕ್ತಿ ಇಲ್ಲದೆ ಹೋದರಂತೂ ನರ್ತನವು ಅಸಹನೀಯವೆನಿಸಿ ಸಾಕಷ್ಟು ತ್ರಾಸ ನೀಡುತ್ತವೆ. ‘ಪ್ರೇಕ್ಷಕರು ಇಷ್ಟಪಡುತ್ತಾರೆ’ ಎಂಬ ನೆವವನ್ನೇ ಮುಂದುಮಾಡಿ ಕಲೆಗೆ ಹೊಸರೂಪವನ್ನು ಕೊಡಲು ಹೊರಟರೆ ಸೃಷ್ಟಿಯ ಬದಲಾಗಿ ಶ್ರಾದ್ಧವೇ ಆದೀತು ! ಅಂತೆಯೇ ಪರಂಪರೆಯ ಹೆಸರಿನಲ್ಲಿ ಕಲೆಯ ಪ್ರಾಣಪ್ರತಿಷ್ಠೆ ಮಾಡದೇ ಹೋದರೆ ಬರಬರುತ್ತ ಕಲೆ ಅಸುನೀಗುವ ಸಂಭವಗಳೇ ಹೆಚ್ಚು. ಈ ಎಲ್ಲ ನೆಲೆಯಲ್ಲಿ ಇಂದಿನ ಯಕ್ಷಗಾನಾದಿ ಕಲೆಗಳೂ ಕೊಂಚ ಯೋಚಿಸುವುದು ಒಳಿತು.

Leave a Reply

*

code