Author: Editor
ಕರ್ನಾಟಕದಲ್ಲಿ ಭರತನ ನಾಟ್ಯಶಾಸ್ತ್ರದ ಕುರಿತ ಶಾಸ್ತ್ರಾಧ್ಯಯನ ತರಗತಿಗಳು ನಡೆಯುವುದೇ ವಿರಳ. ಭಾರತೀಯ ಕಲೆಗಳೆಲ್ಲದಕ್ಕೂ ತಾಯಿಬೇರಾಗಿರುವ ಭರತನ ನಾಟ್ಯಶಾಸ್ತ್ರದ ಕಬ್ಬಿಣದ ಕಡಲೆಯಂತಿರುವ ಬೃಹತ್ ಸಂಪುಟಗಳನ್ನು ಓದಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳುವುದೆಂದರೆ ಅಷ್ಟು ಸುಲಭವೂ ಅಲ್ಲ. ಇದರಿಂದಾಗಿ ನೃತ್ಯಾಸಕ್ತರಿಗೆ, ಅಧ್ಯಯನದ ಅಪೇಕ್ಷೆ ಉಳ್ಳವರಿಗೆ ಸಾಕಷ್ಟು ಹಿನ್ನಡೆಯೂ ಆಗುತ್ತಲಿದೆ. ಜೊತೆಗೆ ನಾಟ್ಯಶಾಸ್ತ್ರದ ಬಗ್ಗೆ ಅಲ್ಲಲ್ಲಿ ಮಿಂಚಿ ಮರೆಯಾಗುವ ಉಪನ್ಯಾಸಗಳು ಸರ್ವರಿಗೂ ಸಕಾಲಕ್ಕೆ ದೊರೆಯುವುದೂ ಇಲ್ಲ.
ಇದನ್ನು ಗಮನಿಸಿದ ನೃತ್ಯ ಸಂಶೋಧನೆ, ಅಧ್ಯಯನ, ದಾಖಲೀಕರಣಕ್ಕೆ ಸಂಬಂಧಿಸಿದಂತೆ ದುಡಿಯುತ್ತಿರುವ ಹಲವು ಪ್ರಥಮಗಳ ರೂವಾರಿ ನೂಪುರ ಭ್ರಮರಿ ಸಂಸ್ಥೆಯು ಭರತನ ನಾಟ್ಯಶಾಸ್ತ್ರದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ (ಥಿಯರಿ+ ಪ್ರಾಕ್ಟಿಕಲ್) ಸರ್ಟಿಫಿಕೇಟ್ ಕೋರ್ಸ್ ತರಗತಿಗಳನ್ನು ಕೆಲವು ತಿಂಗಳಿನ ಹಿಂದೆ ಆರಂಭಿಸಿದೆ.
ಇದು ಶಾಸ್ತ್ರೀಯ-ಜಾನಪದವೆಂಬ ಬೇಧವಿಲ್ಲದೆ ವಿವಿಧ ಕಲಾವಿಭಾಗದ ಅಭ್ಯರ್ಥಿಗಳಿಗೆ ಅಂದರೆ ಸಬ್ ಜೂನಿಯರ್ ಹಂತದಿಂದ ಜೂನಿಯರ್, ಸೀನಿಯರ್, ವಿದ್ವತ್, ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕಲಾವಿದರಿಗಾಗಿ ಇದು ಹಲವು ಹಂತಗಳಲ್ಲಿ ವಿಭಾಗೀಕರಿಸಲ್ಪಟ್ಟಿದ್ದು ನಾಟ್ಯಶಾಸ್ತ್ರದ ಸಂಪೂರ್ಣ ಅಧ್ಯಯನ, ಕರಣ/ಚಾರಿಗಳ ಕಲಿಕೆಯನ್ನು ಒಳಗೊಂಡಿದೆ.
ಭರತನಾಟ್ಯವಷ್ಟೇ ಅಲ್ಲದೆ, ಯಕ್ಷಗಾನ, ಜಾನಪದ ಕ್ಷೇತ್ರಗಳ ಸಹಿತ ವಿವಿಧ ಬಗೆಯ ನೃತ್ಯ, ನಾಟ್ಯ, ಸಂಗೀತ, ವಾದ್ಯಸಂಗೀತದ ಆಸಕ್ತರು ಪರಿಶೀಲಿಸಿ ಪಡೆಯಬಹುದಾದ ಪ್ರಬುದ್ಧಮಟ್ಟದ ತರಗತಿಗಳು ಇದಾಗಿವೆ ಎಂಬುದು ಇಲ್ಲಿನ ಹೆಚ್ಚುಗಾರಿಕೆ.
ಅಂತೆಯೇ ಭರತನಾಟ್ಯದ ನಟ್ಟುವಾಂಗ (ತಾಳ ನುಡಿಸಾಣಿಕೆ) ಸರ್ಟಿಫಿಕೇಟ್ ಕೋರ್ಸ್‍ಗಳನ್ನೂ ತೆರೆಯಲಾಗಿದ್ದು; ಇದೂ ಕೂಡಾ ನೃತ್ಯಪರಂಪರೆಯ ಆಳ ಕಲಿಕೆಗೆ ವಿನೂತನವಾದ ಪ್ರಯತ್ನ. ಬಹುತೇಕ ನೃತ್ಯಶಾಲಾ-ಕಾಲೇಜುಗಳ ಸಂದರ್ಭಗಳಲ್ಲಿ, ನಟುವಾಂಗ ಕಲಿಯಲು ಸೂಕ್ತ ಕ್ರಮಗಳಾಗಲೀ, ಪಠ್ಯವಿಧಾನಗಳಾಗಲೀ ಇಲ್ಲದೆ ತಾಳ, ಲಯದ ಪರಿಚಯವೇ ಕಳೆಗುಂದುತ್ತಿರುವ ಹೊತ್ತಿಗೆ ಇದೊಂದು ಅಪೂರ್ವ ಅವಕಾಶವಾಗಿದೆ. ಇದರೊಂದಿಗೆ
ಪ್ರದರ್ಶನ ಕಲೆಗಳ ಸಂಶೋಧನಾಸಕ್ತರಿಗಾಗಿ ಸಂಶೋಧನಾ ತರಗತಿ,
ವಿವಿಧ ಶಾಸ್ತ್ರಗ್ರಂಥಗಳ ಅಧ್ಯಯನ ತರಗತಿ,
ಪುರಾಣ ಕಥೆಗಳ ತರಗತಿ,
ಸಾಂಸ್ಕೃತಿಕ ಪತ್ರಿಕೋದ್ಯಮ (ಕಲೆಯ ಬರೆವಣಿಗೆ, ವಿಮರ್ಶೆ, ಲೇಖನ, ಸಂದರ್ಶನ)
ನೃತ್ಯದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಹಂತದ ತರಬೇತಿಯಲ್ಲಿ ಮಸುಕಾಗುತ್ತಿರುವ ಶಾಸ್ತ್ರವಿಭಾಗಕ್ಕೆಂದೇ ಪ್ರತ್ಯೇಕ ಕಲಿಕಾ ತರಗತಿಗಳನ್ನೂ ನಡೆಸಲಾಗುತ್ತಿದೆ.
ಈ ತರಗತಿಗಳೆಲ್ಲವೂ ಅಭ್ಯರ್ಥಿಗಳ ಆಯ್ಕೆಯ ಮೇರೆಗೆ ಒಂದೋ ಮುಖಾಮುಖಿ ಅಥವಾ ಆನ್‍ಲೈನ್‍ನಲ್ಲಿ ಹಮ್ಮಿಕೊಳ್ಳುವಂತದ್ದಾಗಿದ್ದು ; ಈಗಾಗಲೇ ಕರ್ನಾಟಕ, ಹೊರರಾಜ್ಯ ಮತ್ತು ವಿದೇಶಗಳಿಂದಲೂ ಆಸಕ್ತರು ಈ ವಿಶೇಷ ಕೋರ್ಸ್‍ಗಳನ್ನು ಕಲಿಯಲು ಬರುತ್ತಿದ್ದಾರೆ. ಅಂತೆಯೇ ಕಾರ್ಯಾಗಾರಗಳನ್ನೂ ನಡೆಸುವಂತೆ ಈ ತರಗತಿಗಳನ್ನು ವಿನ್ಯಾಸ ಮಾಡಲಾಗಿರುವುದು ವಿಶೇಷ.
ತರಗತಿಗಳನ್ನು ಕೋರ್ಸಿನ ಕ್ರಮದಲ್ಲಿ ವಿನ್ಯಾಸ ಮಾಡಲಾಗಿದ್ದು, ಇವು ಕರ್ನಾಟಕದ ನೃತ್ಯಕ್ಷೇತ್ರದಲ್ಲೇ ವಿನೂತನವಾದ ಬಹುಬೇಡಿಕೆಯವಾಗಿವೆ. ಸದ್ಯ ಪುತ್ತೂರು, ಬೆಂಗಳೂರಿನಲ್ಲಿ ಮುಖಾಮುಖಿ ತರಗತಿಗಳನ್ನು ನಡೆಸಲಾಗುತ್ತಿದ್ದು; ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಭಾಗಗಳಿಗೂ ವಿಸ್ತರಿಸಲಾಗುವುದು. ಕೇವಲ ನೃತ್ಯವಿದ್ಯಾರ್ಥಿಗಳಷ್ಟೇ ಅಲ್ಲದೆ, ಯಾವುದೇ ಕಲೆಯ ಯಾವುದೇ ವಿಭಾಗದ ಆಸಕ್ತರೂ ಅಥವಾ ಸಾರ್ವಜನಿಕ ಪ್ರೇಕ್ಷಕರೂ, ಪೋಷಕರೂ ಈ ತರಗತಿಗಳನ್ನು ತೆಗೆದುಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.
ಹಾಗಾಗಿ ಸಂಶೋಧನಾ ವಿದ್ಯಾರ್ಥಿಗಳಿಂದ ಮೊದಲ್ಗೊಂಡು ಸಬ್‍ಜೂನಿಯರ್ ಹಂತದ ವರೆಗೂ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಅಭ್ಯರ್ಥಿಗಳ ವಯೋಮಾನ, ಬೌದ್ಧಿಕಮಟ್ಟ, ಮಾನಸಿಕ ಪ್ರಬುದ್ಧತೆ, ತಿಳಿವಳಿಕೆಗಳಿಗನುಗುಣವಾಗಿ ಸ್ವತಃ ಅಭ್ಯರ್ಥಿಗಳೇ ಸ್ವಯಂ ಆಸಕ್ತಿಯಿಂದ ತೊಡಗಿಸಿಕೊಳ್ಳುವಂತೆ ಪಾಠ-ಪ್ರಯೋಗಗಳು ನಡೆಯುವುದು ಇಲ್ಲಿನ ಮುಖ್ಯ ಲಕ್ಷಣ. ಅದರಲ್ಲೂ ಮಕ್ಕಳ ಪ್ರಪಂಚದಲ್ಲಿ ಅಪರೂಪವಾಗುತ್ತಿರುವ ಭಾರತೀಯ ಪರಂಪರೆಯ ಸೂಕ್ಷ್ಮಗಳನ್ನೂ, ಕಥೆಗಳನ್ನೂ ಗುರುಕುಲಸಂಪ್ರದಾಯದಂತೆ ಜೊತೆಜೊತೆಗೆ ತಿಳಿಸುತ್ತಾ ಸಂಸ್ಕಾರ ಉದ್ದೀಪನಗೊಳಿಸುವತ್ತ ಕೆಲಸ ಪ್ರಧಾನವಾಗಿ ಸಾಗುತ್ತಲಿದೆ.
ಚಿಕ್ಕಮಕ್ಕಳಿಗೂ ಸ್ವಯಂ ಕೊರಿಯೋಗ್ರಫಿ ಮಾಡಿಕೊಳ್ಳುವಂತೆ ಮನೋಧರ್ಮದ ನಾಟ್ಯಶಾಸ್ತ್ರದ ಇನ್ನು ಕೆಲವೇ ಪ್ರವೇಶ ದಾಖಲಾತಿಗಳಿಗೆ ಅನುಕೂಲ ಇದರಲ್ಲಿದೆ. ಇದರಿಂದ ಎಷ್ಟೋ ಮಕ್ಕಳು ತರಗತಿಯ ಬಳಿಕವೂ ಎಷ್ಟು ಉತ್ಸಾಹಿತರಾಗಿರುತ್ತಾರೆಂದರೆ ಮತ್ತದೇ ತರಗತಿಯ ಗುಂಗಿನಲ್ಲಿ ಕುಳಿತು ಮಾರ್ಗದರ್ಶಕರಲ್ಲಿ ಸಂವಾದ ನಡೆಸುತ್ತಾರೆ. ಮುಂದೆ ನಾಟ್ಯಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ತೋರಿದರೆಂದಾದರೆ 108 ಕರಣಾಭ್ಯಾಸದ ಪ್ರಾಯೋಗಿಕ ತರಗತಿಗಳನ್ನು ಕಲಿಸಲು ವ್ಯವಸ್ಥೆ ಮಾಡಲಾಗುತ್ತದೆ. ಅಂತಿಮವಾಗಿ ಕೆಲವು ಪರೀಕ್ಷೆಗಳನ್ನು ನಡೆಸಿ ಅವರ ಭವಿಷ್ಯಕ್ಕೆ ಉಪಯೋಗವಾಗುವಂತೆ ಅರ್ಹತಾ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
ಈ ಕೋರ್ಸ್‍ಗೆ ಸೇರಿದ ಕೆಲವೇ ಕೆಲವು ತರಗತಿಗಳಲ್ಲಿ ವಿದ್ಯಾರ್ಥಿಗಳಲ್ಲಿ ಗಮನಾರ್ಹ ಬದಲಾವಣೆ ಗೋಚರಿಸುತ್ತಿದೆ. ಅವರ ನೃತ್ಯಕಲಿಕೆ, ಗ್ರಹಿಕೆ ಮತ್ತು ಪ್ರದರ್ಶನದಲ್ಲಿ ಮನೋಧರ್ಮದ ಬೆಳವಣಿಗೆಯಾಗಿದೆ. ನಾಟ್ಯಶಾಸ್ತ್ರದ ತರಗತಿಯನ್ನು ಒಂದರೆಕ್ಷಣವೂ ತಪ್ಪಿಸಿಕೊಳ್ಳದಷ್ಟು ಉತ್ಸಾಹ ಕಂಡುಬರುತ್ತಿದೆ. ಸ್ವತಃ ತಮ್ಮ ನೃತ್ಯಗಳನ್ನು ತಾವೇ ವಿನ್ಯಾಸ ಮಾಡುವಷ್ಟು ಪ್ರಬುದ್ಧತೆ ತೋರುತ್ತಿದ್ದಾರೆ. ಅಷ್ಟೇ ಅಲ್ಲ, ವಿದ್ಯಾರ್ಥಿಗಳ ಪೋಷಕರೂ ಕೂಡಾ ಮಕ್ಕಳ ವರ್ತನೆ ಮತ್ತು ವ್ಯಕ್ತಿತ್ವದಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಗ್ರಹಿಸಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಮನೆಯಲ್ಲಿಯೂ ಉತ್ಸಾಹದಿಂದ ತಮ್ಮ ಪಾಠಗಳನ್ನು ಓದುತ್ತಾರೆ; ಇದು ಶಾಲಾ-ಕಾಲೇಜಿನ ಕಲಿಕೆ ಹಾಗೂ ಸ್ಪರ್ಧಾದಿಗಳಿಗೂ ಉಪಯುಕ್ತವಾಗುತ್ತಿದೆ ಎಂಬ ಪ್ರತಿಕ್ರಿಯೆಗಳೂ ದೊರಕುತ್ತಿರುವುದು ಮತ್ತೊಂದು ಸಂತೋಷದ ವಿಷಯ’ ಎಂದು ಕೋರ್ಸ್‍ಗಳನ್ನು ಸ್ವಾಗತಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಬಿ.ದೀಪಕ್ ಕುಮಾರ್.