ಅಂಕಣಗಳು

Subscribe


 

ಸಂಗೀತ-ನೃತ್ಯ ಪರೀಕ್ಷೆಗಳ ಅಧ್ವಾನ

Posted On: Sunday, April 26th, 2015
1 Star2 Stars3 Stars4 Stars5 Stars (No Ratings Yet)
Loading...

Author: Editor

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸಂಗೀತ-ನೃತ್ಯ ಪರೀಕ್ಷೆಗಳು ಜನರಿಗೆ ಹೊಸದೇನಲ್ಲ. ಆದರೆ ಹೊಸಸಂಗತಿಗಳೆಂದರೆ ಪರೀಕ್ಷೆಗೆ ಎದುರಾಗುತ್ತಿರುವ ಇತ್ತೀಚಿನ ಸವಾಲುಗಳು..ಈಗಾಗಲೇ ಎಸ್‍ಎಸ್‍ಎಲ್‍ಸಿ ಬೋರ್ಡ್‍ನಿಂದ ಪರೀಕ್ಷೆಗಳನ್ನು ನೇರವಾಗಿ ಮೈಸೂರಿನಲ್ಲಿ ಇನ್ನೂ ಸರಿಯಾಗಿ ತನ್ನದೇ ಆದ ಕಟ್ಟಡವಾಗಲೀ, ಉಪನ್ಯಾಸಕರನ್ನಾಗಲೀ ಹೊಂದದ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯಕ್ಕೆ ಸರ್ಕಾರ ವರ್ಗಾಯಿಸಿದೆ. ಹೀಗೆ ವಿಶ್ವವಿದ್ಯಾನಿಲಯದ ಅಸ್ತಿತ್ತ್ವವೇ ಪ್ರಶ್ನಾರ್ಹವಾಗಿರುವಾಗ ನೃತ್ಯಸಂಗೀತ ಪರೀಕ್ಷೆಗಳ ಗತಿ ಏನು? ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಜೂನಿಯರ್, ಸೀನಿಯರ್‍ನಂತಹ ಪದವಿ ಶಿಕ್ಷಣಕ್ಕೂ ಸಮನಾಗದ ಪರೀಕ್ಷೆಗಳು ಒಪ್ಪಿಯಾವೇ? ಪಠ್ಯಗಳು ಹೊಸತಾಗಿ ರಚನೆಯಾಗುವುದು ಯಾವಾಗ? ಕಲಿಕಾಕ್ರಮ ಪ್ರಾರಂಭಿಸುವುದು ಯಾವಾಗ ? – ಒಟ್ಟಿನಲ್ಲಿ ಕಳೆದೈದು ವರುಷಗಳಿಂದ ಅತ್ತಿಂದಿತ್ತ ಹೇಗೋ ತಳ್ಳಿಕೊಂಡು ಬರುತ್ತಿರುವ ಪರೀಕ್ಷೆಗಳ ನೆಲೆ-ಬೆಲೆಗಳ ಪ್ರಶ್ನೆಗೆ ಇಂದಿನವರೆಗೂ ಉತ್ತರ ದೊರಕದೆ ಈ ವರುಷವಂತೂ ಪೂರ್ತಿ ಬೇಗುದಿಗೆ ಬೀಳುವ ಸಂಭವಗಳೇ ತೋರುತ್ತಿವೆ.

ಜೊತೆಗೆ ಈ ವರುಷ ಪರೀಕ್ಷೆಗಳು ಎಂದಿನಂತೆ ನಡೆಯುವುದು ಸಂದೇಹವೇ ಸರಿ. ಮೇ ತಿಂಗಳಲ್ಲಷ್ಟೇ ಕಳೆದ ಬಾರಿಯ ಪರೀಕ್ಷೆಗಳ ಅಂಕಪಟ್ಟಿ ಬಂದಿದ್ದು ಕೂಡಲೇ ತಿಂಗಳೊಳಗೆ ಈ ವರುಷದ ಪರೀಕ್ಷೆಗಳನ್ನು ಮಾಡುವುದು ದುಃಸ್ಸಾಧ್ಯ ಎಂಬುದು ಇಲಾಖಾಧಿಕಾರಿಗಳ ಮಾತು. ಇನ್ನು ಅಕ್ಟೋಬರ್ ಸಾಲಿನಲ್ಲೇ ನಡೆಸೋಣವೆಂದರೆ ಶಾಲಾ ದಿನಚರಿ, ನವರಾತ್ರಾದಿ ಹಬ್ಬಗಳ ತರಾತುರಿಯ ದಿನಗಳೊಳಗೆ ಪರೀಕ್ಷೆಗಳೆಂದರೆ ನುಂಗಲಾರದ ತುತ್ತಾಗುವುದು ಖಂಡಿತ. ಹಾಗಾಗಿ ಈ ವರುಷ ಪರೀಕ್ಷೆಗಳು ಜರುಗುವುದೇ ? ಸಂದೇಹಾಸ್ಪದ.

ಇಷ್ಟೆಲ್ಲಾ ಅಧ್ವಾನಗಳ ನಡುವೆ ಯಕ್ಷಗಾನಕ್ಕೆ ಸಮಾನರೂಪದ ಸಮನ್ವಯ ಶಿಕ್ಷಣದ ಹಂತಕ್ಕಾಗಿ ಹಾತೊರೆಯುತ್ತಾ ಇದೇ ಪರೀಕ್ಷೆಗಳ ಬೆನ್ನೇರಿ ಹೊರಟಿದ್ದಾರೆ ಹಲವು ಉತ್ಸಾಹಿಗಳು. ಯಕ್ಷಗಾನಕ್ಕೆಂದೇ ಪರೀಕ್ಷೆಗಳನ್ನು ಪ್ರಾರಂಭಿಸುವುದರಿಂದ ಯಕ್ಷಗಾನ ಎಷ್ಟು ಉದ್ಧಾರ ಆಗುತ್ತದೆ ಎಂಬುದು ಒಂದು ಜಿಜ್ಞಾಸೆ. ಆದರೆ ಪರೀಕ್ಷಾಹಾದಿ ಕಲ್ಪಿಸುವುದರಿಂದ ಯಕ್ಷಗಾನಕ್ಕೂ ಉಳಿದೆಲ್ಲಾ ಕಲೆಗಳಂತೆ ಸಾಮಾಜಿಕ ಪ್ರತಿಷ್ಟೆ – ಪ್ರಮಾಣ ಒದಗಿ ಶಾಸ್ತ್ರೀಯ ಮನ್ನಣೆ, ರೂಪುರೇಷೆಗೆ ದಾಖಲಾರ್ಹ ಬೆಳವಣಿಗೆಯಾಗಬಹುದು ಎಂಬುದು ತಜ್ಞರ ಅನಿಸಿಕೆ.

ಆದರೆ ಅವರಿಗೂ ಸವಾಲುಗಳು ಸಾಕಷ್ಟಿವೆ. ಪಠ್ಯರಚನೆ ಪೂರ್ಣಗೊಂಡು ಸರ್ಕಾರದಿಂದ ಅನುಮತಿಯೇನೋ ದೊರೆತಿದೆ. ಆದರೆ ದಶಕಗಳ ಹಿಂದಿನ ನೃತ್ಯಸಂಗೀತ ಪರೀಕ್ಷೆಗಳ ಭವಿಷ್ಯವೇ ಡೋಲಾಯಮಾನವಾಗಿರುವಾಗ ಯಕ್ಷಗಾನಕ್ಕೆ ಇನ್ನೀಗ ಶಿಕ್ಷಣ ಇಲಾಖೆಯೊಳಗೆ ಇದೇ ಪಾಠಪಟ್ಟಿಯನ್ನು ತುರುಕಿಸುವುದು ಸಾಧ್ಯವೇ ಎಂಬುದು ಇಲ್ಲಿನ ಪ್ರಶ್ನೆ.

ಇಂತಹ ಸಾಕಷ್ಟು ಉಪದ್ವಾಪ್ಯಗಳ ನಡುವೆ ನೃತ್ಯಸಂಗೀತಾದಿ ಪರೀಕ್ಷೆಗಳ ಅವಶ್ಯಕತೆ ಇದೆಯೇ? –ಎಂಬ ಪ್ರಶ್ನೆಗೆ ‘ಇದೆ’ ಎಂಬುದೇ ಉತ್ತರ. ಒಂದೊಮ್ಮೆ ಸಾಕಷ್ಟು ತಗಾದೆಗಳ ಕೇಂದ್ರಬಿಂದುವಾಗಿರುವ ಈ ಪರೀಕ್ಷೆಗಳನ್ನೇ ನಿಷೇಧಿಸಬೇಕು ಎಂದು ಅನಿಸಿದರೂ ಅದಕ್ಕೆ ಅದೊಂದೇ ಪರಿಹಾರವಲ್ಲ. ಕಾರಣ ಇಂದಿನ ಶೈಕ್ಷಣಿಕ ಅಗತ್ಯ- ಅವಕಾಶಗಳಿಗೆ ಕಲಾಮಾಧ್ಯಮದಲ್ಲಿ ನಿಗದಿತ ಅರ್ಹತೆಯ ಅನಿವಾರ್ಯತೆಯಿದೆ. ಹಾಗೆಂದು ಕಲೆಗೆ ಸಂಬಂಧಿಸಿದ ಪದವಿ, ಸ್ನಾತಕೋತ್ತರ ಪದವಿಗಳು ಇವೆಯಾದರೂ ಅಲ್ಲಿಯವರೆಗಿನ ಶಿಕ್ಷಣದ ಪಯಣಕ್ಕೆ ನಿರಂತರ ಪ್ರೋತ್ಸಾಹ ಪರೀಕ್ಷೆಯ ರೂಪದಲ್ಲಿ ಆಸಕ್ತ ಮಕ್ಕಳಿಗೆ ಬೇಕಾಗುತ್ತದೆ.

‘ಇಷ್ಟೆಲ್ಲಾ ತೊಂದರೆಗಳಿದ್ದರೂ ಕಲಾವಿದರು, ಕಲಾಶಿಕ್ಷಕರು ನಮ್ಮೊಂದಿಗೆ ಹೋರಾಟ ಮಾಡುವುದಕ್ಕಾಗಲೀ ಅಥವಾ ಕನಿಷ್ಠ ಮಟ್ಟದ ಸಭೆ, ಅಹವಾಲು ಸಲ್ಲಿಕೆಗಾಗಲೀ ಒಗ್ಗೂಡಿ ಮುಂದೆ ಬರುತ್ತಿಲ್ಲ. ಪ್ರತಿವರುಷದಂತೆ ಈ ವರುಷವೂ ಹೇಗೋ ಪರೀಕ್ಷೆಗಳು ನಡೆಯಬಹುದು ಎಂಬ ಹುಂಬತನ ಬೇರೆ. ಆದರೆ ಪರೀಕ್ಷೆಗಳ ಕ್ರಮ ತಪ್ಪಿದರೆ ಅದು ಪುನರಾರಂಭಕ್ಕೆ ಎಷ್ಟು ವರುಷಗಳೂ ಹಿಡಿಯಬಹುದೋ ದೇವರೇ ಬಲ್ಲ. ಅದರಿಂದ ಮಕ್ಕಳ ಕಲಿಯುವಿಕೆಗೆ ಪೆಟ್ಟು ಬೀಳುವ ಸಾಧ್ಯತೆಗಳೇ ಹೆಚ್ಚು.

ವಿಶ್ವವಿದ್ಯಾನಿಲಯಕ್ಕೆ ಪರೀಕ್ಷೆಗಳನ್ನು ವರ್ಗಾವಣೆ ಮಾಡಿರುವುದು ಸ್ತುತ್ಯರ್ಹವಾದರೂ ಮೂಲಭೂತ ಸೌಲಭ್ಯಗಳಿಲ್ಲದೆ ತೊಳಲಾಡುತ್ತಿರುವ ವಿಶ್ವವಿದ್ಯಾನಿಲಯಕ್ಕೆ ಪರೀಕ್ಷೆಗಳನ್ನು ನಡೆಸುವುದು ಸದ್ಯದ ಮಟ್ಟಿಗಂತೂ ಕನಸಿನ ಮಾತು. ಇನ್ನು ಪಠ್ಯರಚನೆ, ಶಿಕ್ಷಕ-ಉಪನ್ಯಾಸಕರ ನೇಮಕ, ಪರೀಕ್ಷಾ ನಿಯಮಾವಳಿ ಮತ್ತು ವಿಶ್ವವಿದ್ಯಾನಿಲಯವಾಗಿ ಎಳೆಯರಿಗೆ ಪದವಿಗಳ ಸಮನಾಗಿ ಮಾನ್ಯತೆಯನ್ನು ನೀಡಬೇಕಾದ ಗೋಜಲು…ಹೀಗೆ ಅವರ ಮುಂದೆಯೂ ಸಾಕಷ್ಟು ಸವಾಲು-ಸಮಸ್ಯೆಗಳಿವೆ. ಇತ್ತ ಎಸ್‍ಎಸ್‍ಎಲ್‍ಸಿ ಬೋರ್ಡ್ ಕೂಡಾ ಹಿಂತೆಗೆಯುವ ಲಕ್ಷಣಗಳೇ ಹೆಚ್ಚು. ಹಾಗಾಗಿ ನಮ್ಮ ಸಲಹೆಯೆಂದರೆ ಜೂನಿಯರ್ ಮತ್ತು ಸೀನಿಯರ್‍ನ್ನು ಶಿಕ್ಷಣ ಮಂಡಳಿಯೇ ಮತ್ತಷ್ಟು ಶಿಸ್ತುಬದ್ಧವಾಗಿ ಮುಂದುವರೆಸಿ ವಿದ್ವತ್ ಹಂತವನ್ನು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿದರೆ ಒಂದು ಹಂತದ ಎಲ್ಲಾ ಗೊಂದಲಗಳು ಶಮನವಾಗುತ್ತದೆ. ವಿದ್ವತ್ ಶ್ರೇಣಿಯನ್ನು ಸ್ನಾತಕೋತ್ತರ ಹಂತಕ್ಕೆ ಏರಿಸಿದಂತಾಗಿ ಮಾನ್ಯತೆಯೂ ಒದಗುತ್ತದೆ.

ಪರೀಕ್ಷೆಗಳಿಂದ ಸರ್ಕಾರಕ್ಕೆ ಆದಾಯವೂ ಇರುವಾಗ ಅದಕ್ಕೆ ತಕ್ಕ ಅನುಕೂಲ ಮಾಡಿಕೊಡುವುದು ಒಳಿತಲ್ಲವೇ?’- ಎಂದು ಸೂಚಿಸುತ್ತಾರೆ ಕರಾವಳಿ ನೃತ್ಯಕಲಾಪರಿಷತ್‍ನ ಅಧ್ಯಕ್ಷರೂ, ಪರೀಕ್ಷೆಗಳ ಉಳಿಸುವಿಕೆಗೆ ಸಾಕಷ್ಟು ಶ್ರಮ ಪಡುತ್ತಿರುವ ಭರತನಾಟ್ಯ ಶಿಕ್ಷಕರಾದ ವಿದ್ವಾನ್ ಕಮಲಾಕ್ಷ ಆಚಾರ್.

ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಡೆಮಿಯ ರಿಜಿಸ್ಟ್ರಾರ್ ಟಿ. ಜಿ. ನರಸಿಂಹಮೂರ್ತಿ ಅವರು ಇದೇ ಬಗೆಯ ಅಭಿಪ್ರಾಯ ಧ್ವನಿಸುತ್ತಾ ‘ಅಕಾಡೆಮಿಯಿಂದ ಈ ಪರೀಕ್ಷೆಗಳನ್ನು ಕೈತೆಗೆದುಕೊಂಡು ನಡೆಸುವುದೇ ಎಂದು ಸಾಕಷ್ಟು ಸಲ ಚಿಂತಿಸಿದ್ದೇವೆ. ಆದರೆ ವರುಷಕ್ಕೆ 50 ಸಾವಿರಕ್ಕೂ ಮಿಗಿಲು ಅಭ್ಯರ್ಥಿಗಳು ಪರೀಕ್ಷೆಗಳನ್ನು ತೆಗೆದುಕೊಳ್ಳುವಾಗ ಅದಕ್ಕೆ ಬೇಕಾದ ಸಂಪನ್ಮೂಲ ಕ್ರೋಢೀಕರಣ, ನಿಯೋಜನೆ ಅಷ್ಟೊಂದು ಸುಲಭವಲ್ಲ. ಹಾಗಾಗಿ ಅಕಾಡೆಮಿ ವತಿಯಿಂದ ಸರ್ಕಾರಕ್ಕೆ ಈ ಪರೀಕ್ಷೆಗಳನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರೇ ಕೈಗೆತ್ತಿಕೊಳ್ಳಬೇಕು ಎಂಬ ಲಿಖಿತಸಲಹೆಯನ್ನು ನೀಡುತ್ತಿದ್ದೇವೆ’ ಎಂದಿದ್ದಾರೆ.

ಅತ್ತ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಮೋಹನ್ ಆಳ್ವ ಅವರು ಈ ಪರೀಕ್ಷೆಗಳನ್ನು ನಡೆಸಲು ಮುಂದೆ ಬಂದಿದ್ದಾರಾದರೂ ಅದು ಅಷ್ಟು ಸುಲಭಕ್ಕೆ ನೆರೆವೇರುವಂತಿಲ್ಲ. ಕಾರಣ, ಕಲೆಯ ಕುರಿತಾಗಿ ಖಾಸಗಿ ಶಿಕ್ಷಣಸಂಸ್ಥೆಯೊಂದು ನೀಡಬಹುದಾದ ಪದವಿ, ಪ್ರಮಾಣಪತ್ರಗಳ ಸ್ಥಾನಮಾನ ಮತ್ತು ಭವಿಷ್ಯದ ಬಗ್ಗೆ ಸಾಕಷ್ಟು ತಗಾದೆಗಳಿವೆ.
ಇದರ ನಡುವೆ ಮೀರಜ್‍ನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದಿಂದ ನಡೆಸಲ್ಪಡುವ 12 ಹಂತದ ನೃತ್ಯಪರೀಕ್ಷೆಗಳು ಆಶಾಕಿರಣವನ್ನು ಹರಿಸಿವೆ. 1932ರಲ್ಲಿ ಪ್ರಾರಂಭವಾದ ಈ ವಿದ್ಯಾಲಯವು ಈವರೆಗೆ 1300ಕ್ಕಿಂತಲೂ ಮಿಗಿಲಾದ ಶಾಖೆಗಳನ್ನು, 800 ಪರೀಕ್ಷಾಕೇಂದ್ರಗಳನ್ನು ಭಾರತದೆಲ್ಲೆಡೆ ಹೊಂದಿದೆ. ಶಿಸ್ತುಬದ್ಧ ಆಡಳಿತ, ಕ್ರಮವತ್ತಾದ ಪಠ್ಯ, ಅರ್ಹತೆಯ ಅಳತೆಗೋಲಿಗೆ ಅನುವಾಗುವ ನಿಯಮಾವಳಿಗಳಿಂದ ಉತ್ತರಭಾರತ ಮತ್ತು ವಿದೇಶಗಳಲ್ಲಿಯೂ ಬಹಳಷ್ಟು ಮನ್ನಣೆ ಪಡೆದಿದೆ.

ಹಾಗಾಗಿಯೇ 2007ರ ಸಾಲಿನಲ್ಲಿ ಇಲ್ಲಿನ ಮೊದಲಹಂತದ ಪರೀಕ್ಷೆಗೆ ಹಾಜರಾದವರ ಸಂಖ್ಯೆ ಬರೋಬ್ಬರಿ 1 ಲಕ್ಷ. ಕರ್ನಾಟಕದಲ್ಲಿಯೂ ಹಲವು ಕೇಂದ್ರಗಳಿದ್ದು; ಹೊಸ ಪರೀಕ್ಷಾಕೇಂದ್ರಗಳನ್ನು ತೆರೆಯುವವರಿಗೆ ಅವಕಾಶವೂ ಉಂಟು. ಆದರೆ ಮತ್ತದೇ ಅಡೆತಡೆಯೆಂದರೆ ಅದರ ಪದವಿಗಳಿಗೆ ಯುಜಿಸಿ ಅಥವಾ ಸರ್ಕಾರ ನಿರ್ದೇಶಿಸುವ ವಿಶ್ವವಿದ್ಯಾನಿಲಯ ನಿಯಮಾವಳಿಗಳ ಸಮನಾದ ಸ್ಥಾನವಿಲ್ಲ !

ಕಲೆಗೆ, ಕಲಾವಿದನಿಗೆ ಶೈಕ್ಷಣಿಕ ಅರ್ಹತೆಗಿಂತಲೂ ಪ್ರತಿಭೆ, ಸಿದ್ಧಿಯೇ ಮಾನದಂಡ ಎಂಬುದು ಒಪ್ಪುವ ಮತ್ತು ಕಲೆಯ ಪಾಲಿಗೆ ನಿಜಾರ್ಥದಲ್ಲಿಯೂ ಸಲ್ಲುವ ಮಾತು. ಪರೀಕ್ಷೆಗಳು ಆ ಸಿದ್ಧಿಯ ಹಾದಿಗೆ ಏರುವ ಒಂದೊಂದು ಮೆಟ್ಟಿಲುಗಳಾಗಬಹುದಷ್ಟೇ ವಿನಾ, ಪರೀಕ್ಷೆಗಳಿಂದಲೇ ಕಲಾಪ್ರಗತಿ ಸಾಧ್ಯ ಎನ್ನುವುದು ಖಂಡಿತಾ ಕನಸಿನ ಮಾತು. ಆದಾಗ್ಯೂ ಕರ್ನಾಟಕದ ಕಲಾಜೀವನಕ್ಕೆ ಪರೀಕ್ಷೆಗಳ ಅನುಕೂಲ ಕ್ರಮಬದ್ಧವಾಗಿ ಇದ್ದರೆ ಅದು ಆಸಕ್ತರ ಆಯ್ಕೆಗೆ ಹೆಚ್ಚಿನ ಅನುಕೂಲ ಕೊಡಬಹುದು. ಹಾಗೆಂದು ಇದ್ದಂತೆಯೇ ಯಥಾವತ್ ಕೊಳಚೆ ನೀರಿನಲ್ಲಿಯೇ ನಡೆಯಲೂ ಆಗುವುದಿಲ್ಲ.

ಒಂದೆರಡು ದಿನಗಳಲ್ಲಿ ರೂಢಿಗೊಂಡು ಬಂದ ಅಭ್ಯಾಸಗಳನ್ನು, ಮನೋವೃತ್ತಿಗಳನ್ನು ಬದಲಾಯಿಸುವುದು ಅಷ್ಟು ಸುಲಭಸಾಧ್ಯವಲ್ಲ. ಹಾಗಂತ ಅಲ್ಲಿಯವರೆಗೆ ಕಾಯುವ, ದುಡಿಯುವ ತಾಳ್ಮೆ, ಪ್ರೀತಿ ಎಲ್ಲರಲ್ಲೂ ಇದೆಯೇ?
ಗುಣಮಟ್ಟದ ಕಾಯಕಲ್ಪಕ್ಕೆ ಸೂಕ್ತ ನಿರ್ಧಾರ, ಸಾಂಘಿಕ ಪ್ರಾಮಾಣಿಕ ಪ್ರಯತ್ನ ಖಂಡಿತಾ ಬೇಕು. ಒಟ್ಟಿನಲ್ಲಿ ನಿರಂತರ ಶ್ರಮ, ಔಚಿತ್ಯ, ಶಿಸ್ತು.. ಹೀಗೆ ಎಲ್ಲಾ ಹರಹಿನೆಡೆಯಿಂದಲೂ ಒಗ್ಗೂಡಿದಾಗಲಷ್ಟೇ ಒಣಗಿಹೋಗುತ್ತಿರುವ ನೃತ್ಯ ಪರೀಕ್ಷೆಗಳ ಸಸಿಗೆ ಮೇಘರಾಜನ ವರ್ಷಧಾರೆಯಾದೀತು. ಹಾಗಾದಾಗಲಷ್ಟೇ ಪದವಿ, ಸ್ನಾತಕೋತ್ತರ ಸಾಲಿನ ಪರೀಕ್ಷೆಗಳಗೆ ಸಮನಾಗಿ ಈ ಪರೀಕ್ಷೆಗಳೂ ‘ಸೈ’ ಎನಿಸಿಕೊಂಡೀತು. ಇದು ನಮ್ಮ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಮಾಡಿಕೊಳ್ಳಲೇಬೇಕಾದ ಅತ್ಯಗತ್ಯ ಜಲಮರುಪೂರಣ.

ಪ್ರೀತಿಯಿಂದ
ಸಂಪಾದಕರು

Leave a Reply

*

code