Author: ವಿದ್ವಾನ್ ಮಹೇಶ ಭಟ್ ಹಾರ್ಯಾಡಿ, ಉಡುಪಿ
ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಯುವ ಕವಿ, ಅಷ್ಟಾವಧಾನಿ, ಸಹೃದಯಿ, ವಿದ್ವಾನ್ ಮಹೇಶ ಭಟ್ ಹಾರ್ಯಾಡಿ ಅವರ ರಚನೆಗಳ ಅಂಕಣ ಈ ಸಂಚಿಕೆಯಿಂದ ಸರಸ್ವತೀಸ್ತುತಿಯ ಮೂಲಕ ಪ್ರಾರಂಭವಾಗುತ್ತಿದೆ. ತಮ್ಮ ಗಮನಕ್ಕೆ ಬಂದಂತೆ ಲಲಿತ ಲಹರಿ ಅಂಕಣವು ಸಂಗೀತ ಮತ್ತು ನರ್ತನ ವ್ಯವಸಾಯಿಗಳಿಗೆ ಅನುಕೂಲಕರವಾದ ಕಾವ್ಯ/ಸಾಹಿತ್ಯವನ್ನು ಪ್ರಕಟಿಸುವ ಉದ್ದೇಶ ಹೊಂದಿದೆ. ಇವುಗಳನ್ನು ಕಲಾವಿದರು ಅರ್ಥ-ಭಾವ ಅರಿತು ಪ್ರದರ್ಶಿಸಿದರೆ ಕವಿಗಳಿಗೂ, ಪ್ರಕಾಶಕರಿಗೂ ಅದೇ ಧನ್ಯತೆ.
ಪ್ರಸ್ತುತ ಕಾವ್ಯಭಾಗದಲ್ಲಿ ಎರಡನೆಯ ಚರಣದ ಆರಂಭದಲ್ಲಿ ರಾಗಮುದ್ರೆಯಿದೆ (ವರ”ಚಾರುಕೇಶಿ”/ ಜನನಿ “ಸರಸ್ವತಿ”). ಸರಸ್ವತೀರಾಗದಲ್ಲಿ ಹಾಡುವಾಗ “ವರಚಾರುಕೇಶಿ” ಎಂದಿರುವಲ್ಲಿ “ಜನನಿ ಸರಸ್ವತಿ” ಎಂದು ಹಾಡಿಕೊಂಡರೆ ಸೂಕ್ತವಾಗುತ್ತದೆ. “ವಾಣೀವತ್ಸಲ” ಎನ್ನುವುದು ಅಂಕಿತ. ಹಾಡುವವರ ಅನುಕೂಲಕ್ಕಾಗಿ ಪ್ರತಿಯೊಂದು ಸಾಲಿನ ಪದವಿಭಾಗವನ್ನು ಆವರಣದಲ್ಲಿ ಹಾಕಲಾಗಿದೆ.
ಚಾರುಕೇಶೀ / ಸರಸ್ವತೀರಾಗ
ವಿಧಿಜಾಯೇ ನಿರಪಾಯೇ ಸದಯೇ
(ವಿಧಿ-ಜಾಯೇ ನಿರಪಾಯೇ ಸದಯೇ)
ಮಾಮವ ಚಂಪಕಭಾಸುರಕಾಯೇ ||ಪ||
(ಮಾಮ್ ಅವ ಚಂಪಕ-ಭಾಸುರ-ಕಾಯೇ)
ಶರಣಾಗತಮುನಿಜನನತಚರಣೇ
(ಶರಣ-ಆಗತ-ಮುನಿಜನ-ನತ-ಚರಣೇ)
ಶಶಧರಸುಂದರಮುಕ್ತಾಭರಣೇ
(ಶಶಧರ-ಸುಂದರ-ಮುಕ್ತಾ-ಆಭರಣೇ)
ದಯಯಾ ವಸ ಮೇ ಹೃದಯಾವರಣೇ
(ದಯಯಾ ವಸ ಮೇ ಹೃದಯ-ಆವರಣೇ)
ವಿಧೇಹಿ ಕರುಣಾಂ ತನಯೋದ್ಧರಣೇ ||
(ವಿಧೇಹಿ ಕರುಣಾಂ ತನಯ-ಉದ್ಧರಣೇ)
ವರಚಾರುಕೇಶಿ ನಿರುಪಮಶೀಲೇ
(ವರ-ಚಾರುಕೇಶಿ ನಿರುಪಮ-ಶೀಲೇ)
[ಜನನಿ ಸರಸ್ವತಿ ನಿರುಪಮಶೀಲೇ]
ಕರಧೃತವೀಣಾವಾದನಲೋಲೇ
(ಕರ-ಧೃತ-ವೀಣಾ-ವಾದನ-ಲೋಲೇ)
ಪರಮಾನಂದಾಂಭೋನಿಧಿವೇಲೇ
(ಪರಮ-ಆನಂದ-ಅಂಭೋನಿಧಿ-ವೇಲೇ)
ಕುರು ಸದ್ಬುದ್ಧಿಂ ಸಕಲೇ ಕಾಲೇ ||
ವಿಕಸಿತಮಲ್ಲೀಸಮಸಿತಹಸಿತೇ
(ವಿಕಸಿತ-ಮಲ್ಲೀ-ಸಮ-ಸಿತ-ಹಸಿತೇ)
ವೇದಜ್ಞಾಪಕನೂಪುರರಸಿತೇ
(ವೇದ-ಜ್ಞಾಪಕ-ನೂಪುರ-ರಸಿತೇ)
ವಾಣೀವತ್ಸಲಸಂನುತಚರಿತೇ
(ವಾಣೀ-ವತ್ಸಲ-ಸಂನುತ-ಚರಿತೇ)
ಸಾಧಕನಿರ್ಮಲಚಿತ್ತಸ್ಫುರಿತೇ ||
(ಸಾಧಕ-ನಿರ್ಮಲ-ಚಿತ್ತ-ಸ್ಫುರಿತೇ)
ಪ್ರತಿಪದಾರ್ಥ– ವಿಧಿಜಾಯೇ – ಬ್ರಹ್ಮನ ಸತಿಯೇ ; ನಿರಪಾಯೇ – ಅಪಾಯವಿಲ್ಲದವಳೇ ; ಸದಯೇ – ಕರುಣಾಪೂರ್ಣೆಯೇ ; ಮಾಮ್ – ನನ್ನನ್ನು ; ಅವ – ಕಾಪಾಡು ; ಚಂಪಕಭಾಸುರಕಾಯೇ – ಸಂಪಗೆಯಂತೆ ಹೊಳೆಯುವ ದೇಹವನ್ನುಳ್ಳವಳೇ ;ಶರಣಾಗತಮುನಿಜನನತಚರಣೇ – ಶರಣು ಬಂದಿರುವ ಋಷಿಗಳಿಂದ ನಮಸ್ಕರಿಸಲ್ಪಟ್ಟ ಪಾದಗಳನ್ನುಳ್ಳವಳೇ ; ಶಶಧರಸುಂದರಮುಕ್ತಾಭರಣೇ – ಚಂದ್ರನಂತೆ ರಮಣೀಯವಾದ ಮುತ್ತಿನ ಆಭರಣಗಳನ್ನುಳ್ಳವಳೇ ; ದಯಯಾ – ಕರುಣೆಯಿಂದ ; ವಸ – ವಾಸಮಾಡು ; ಮೇ – ನನ್ನ ; ಹೃದಯಾವರಣೇ – ಮನಸ್ಸೆಂಬ ಆವರಣದಲ್ಲಿ (ದೇವಿಯು ನವಾವರಣದಲ್ಲಿ ನೆಲೆಯಾಗಿರುವುದು ಪ್ರಸಿದ್ಧ. ಆದರೆ ಇಲ್ಲಿ ಭಕ್ತನು ಆ ನವಾವರಣವನ್ನು ಬಿಟ್ಟು ನನ್ನ ಮನಸ್ಸೆಂಬ ನವಾವರಣದಲ್ಲಿ ಎಂದರೆ ಹೊಸ ಆವರಣದಲ್ಲಿ ನೆಲೆಸೆಂದು ಪ್ರಾರ್ಥಿಸುತ್ತಿದ್ದಾನೆ) ವಿಧೇಹಿ – ತೋರಿಸು ; ಕರುಣಾಂ – ಕರುಣೆಯನ್ನು ; ತನಯೋದ್ಧರಣೇ – ಮಗನನ್ನು ಉದ್ಧರಿಸುವ ವಿಷಯದಲ್ಲಿ ; ವರಚಾರುಕೇಶಿ – ಉತ್ಕೃಷ್ಟವಾದ ಸುಂದರವಾದ ಕೇಶಪಾಶಗಳನ್ನುಳ್ಳವಳೇ ; ನಿರುಪಮಶೀಲೇ – ಹೋಲಿಕೆಯಿಲ್ಲದ ಚಾರಿತ್ರ್ಯವನ್ನುಳ್ಳವಳೇ ; ಕರಧೃತವೀಣಾವಾದನಲೋಲೇ – ಕೈಯಲ್ಲಿ ಹಿಡಿದ ವೀಣೆಯನ್ನು ನುಡಿಸುವುದರಲ್ಲಿ ಮಗ್ನಳಾದವಳೇ; ಪರಮಾನಂದಾಂಭೋನಿಧಿವೇಲೇ – (ಪರಮಾನಂದವೆಂದರೆ ಬ್ರಹ್ಮಾನಂದ) ಬ್ರಹ್ಮಾನಂದವೆಂಬ ಸಾಗರದ ತೀರವಾಗಿರುವವಳೇ ; ಕುರು – ಉಂಟುಮಾಡು ; ಸದ್ಬುದ್ಧಿಂ – ಒಳ್ಳೆಯ ಬುದ್ಧಿಯನ್ನು ; ಸಕಲೇ – ಎಲ್ಲ ; ಕಾಲೇ – ಕಾಲದಲ್ಲಿ ; ವಿಕಸಿತಮಲ್ಲೀಸಮಸಿತಹಸಿತೇ – ಅರಳಿರುವ ಮಲ್ಲಿಗೆಯನ್ನು ಹೋಲುವ ಬೆಳ್ಳನೆಯ ನಗುವನ್ನುಳ್ಳವಳೇ ; ವೇದಜ್ಞಾಪಕನೂಪುರರಸಿತೇ – ವೇದಗಳನ್ನು ನೆನಪಿಸುವ ಗೆಜ್ಜೆಗಳ ನಾದವನ್ನುಳ್ಳವಳೇ ; ವಾಣೀವತ್ಸಲಸಂನುತಚರಿತೇ – ವಾಣೀವತ್ಸಲನಿಂದ ಕೊಂಡಾಡಲ್ಪಟ್ಟ ಚಾರಿತ್ರ್ಯವನ್ನುಳ್ಳವಳೇ ; ಸಾಧಕನಿರ್ಮಲಚಿತ್ತಸ್ಫುರಿತೇ – ಸಾಧಕರ ವಿಮಲವಾದ ಮನಸ್ಸಿನಲ್ಲಿ ಮೂಡುವವಳೇ
**************************