ಅಂಕಣಗಳು

Subscribe


 

ಸಿನಿಮಾ ನೃತ್ಯ ಮತ್ತು ಶಾಸ್ತ್ರೀಯತೆ

Posted On: Saturday, June 15th, 2013
1 Star2 Stars3 Stars4 Stars5 Stars (No Ratings Yet)
Loading...

Author: Editor

ಸಾಂಸ್ಕೃತಿಕ ರಂಗಕ್ಕೂ ಸಮೂಹ ಮಾಧ್ಯಮಕ್ಕೂ ಇರುವ ಅವಿನಾಭಾವ ಸಂಬಂಧ ಇಂದು ನಿನ್ನೆಯದಲ್ಲ. ವ್ಯವಸ್ಥೆಯನ್ನು ಅರಿಯುವಲ್ಲಿ, ಪರಿಚಯಿಸುವಲ್ಲಿ, ಅದರ ಒಳನೋಟಗಳನ್ನು-ಕಾಣ್ಕೆಗಳನ್ನು ಮನಗಾಣುವಲ್ಲಿ, ಪರಿಹಾರ ಕಂಡುಕೊಳ್ಳುವಲ್ಲಿ, ಹೊಂದಾಣಿಕೆಗಳನ್ನು ಅಳವಡಿಸಿಕೊಳ್ಳುವುದರಲ್ಲಿ, ಭೂತ-ವರ್ತಮಾನ-ಭವಿಷ್ಯತ್ತಿನ ವಾಸ್ತವ ಪ್ರಜ್ಞೆಗಳನ್ನು ಅರಿತು ಬದುಕಿನ ಹಲವು ಸಾಧ್ಯತೆಗಳೆಡೆಗೆ ದೃಷ್ಟಿ ಹರಿಸುವಲ್ಲಿ ಇವೆರಡರ ಪಾತ್ರ ಅವರ್ಣನೀಯ. ಅದರಲ್ಲೂ ಇವೆರಡರ ಸಾಂಗತ್ಯವೆಂಬಂತೆ ಒಂದೇ ಮೂಸೆಯಲ್ಲಿ ಎಲ್ಲವನ್ನೂ ಹಿಡಿದಿಡುತ್ತಾ ತನ್ನದೇ ಆದ ಸ್ವತಂತ್ರ, ಸಮಗ್ರ ಮಾದರಿಯನ್ನು ಪ್ರಭಾವಯುತವಾಗಿ ಕೊಡುವ; ಸೂಕ್ಷ್ಮ ಮತ್ತು ಸ್ಥೂಲ ದೃಷ್ಟಿಯೆರಡರಲ್ಲೂ ಬೌದ್ಧಿಕವಾಗಿ, ಮಾನಸಿಕವಾಗಿ ಸಮಾಜಕ್ಕೆ ಹೆಚ್ಚು ಮತ್ತು ಕ್ಷಿಪ್ರವಾಗಿ ಮುಟ್ಟುವ, ತಟ್ಟುವ, ಆಪ್ತವೆನಿಸುವ, ಸಾರ್ವಕಾಲಿಕವೆನಿಸುವ, ಆಕರ್ಷಕ, ಜನಪ್ರಿಯವಾದ ವೈಶಿಷ್ಟಪೂರ್ಣ ಅಭಿವ್ಯಕ್ತಿಯೇ- ಸಿನೆಮಾ.

ಸಿನೆಮಾ ೧೯ನೇ ಶತಮಾನದ ಕೊನೆಯ ಘಟ್ಟಗಳ ವೈಜ್ಞಾನಿಕ ಆವಿಷ್ಕಾರವೆನಿಸಿದರೂ ಅದು ಹೆಚ್ಚು ಪ್ರಚಲಿತವಾದದ್ದು ೨೦ನೇ ಶತಮಾನದ ಪ್ರಮುಖ ಸಾಂಸ್ಕೃತಿಕ ಸಂಗತಿಯಾಗಿ. ಅದರಲ್ಲೂ ಅನಾದಿ ಕಾಲದಿಂದ ಜನಜೀವನದ ನಾಗರೀಕತೆಯ ಪ್ರಗತಿಗೆ ಸಾಕ್ಷಿಗಳಾದ ಸಂಗೀತ, ನೃತ್ಯ, ಸಂಕಲನ, ಗಾಯನ, ನಟನೆ, ಕಲೆ, ವಿನ್ಯಾಸ, ಚಿತ್ರಕಲೆ, ಶಿಲ್ಪ, ವಾಚಿಕ ಸಾಮರ್ಥ್ಯ, ವಸ್ತ್ರವಿನ್ಯಾಸ, ಆಭರಣ ಅಭಿರುಚಿ, ಛಾಯಾಗ್ರಹಣ ಹೀಗೆ ಹತ್ತು ಹಲವು ವಿವಿಧ ಕಲೆಗಳನ್ನು ತನ್ನೊಳಗೆ ಆವಾಹಿಸಿಕೊಂಡು ಎಲ್ಲಾ ಕಲೆಗಳನ್ನೂ ಏಕಕಾಲಕ್ಕೆ ಒಂದೇ ಮಾಧ್ಯಮದಲ್ಲಿ ಅಭಿವ್ಯಕ್ತಿಸುವ ಸಾಮರ್ಥ್ಯವಿರುವ ಅಸಾಮಾನ್ಯ ಸಾಧ್ಯತೆಗಳ ಒಂದು ಸಮಗ್ರ ಕಲೆ. ಸಿನೆಮಾದ ಮೂಲೋದ್ದೇಶ ಮನರಂಜನೆ ಎಂಬುದು ಸಾಮಾನ್ಯ ಗ್ರಹಿಕೆಯಾದರೂ ಅದು ಕಾಲಕ್ರಮೇಣ ಮನರಂಜನೆಯ ಮೂಲಕ ಮಾಹಿತಿ, ಶಿಕ್ಷಣ ಪ್ರಸಾರದಲ್ಲೂ ದಟ್ಟವಾದ ಛಾಪು ಬೀರಿ ಬೌದ್ಧಿಕ ಜಾಗೃತಿಗೆ, ಸಾಂಸ್ಕೃತಿಕ ಸ್ವೋಪಜ್ಞತೆಗೆ ಸಾಕಷ್ಟು ದುಡಿದಿದೆ. ಸಂಸ್ಕೃತಿ ಮತ್ತದರ ಚಲನೆಯಲ್ಲಿನ ವೈಶಿಷ್ಟ್ಯಗಳು, ವ್ಯತ್ಯಾಸಗಳನ್ನು ಗಮನಿಸುತ್ತಾ, ದಾಖಲಿಸುತ್ತ ಅದರ ಹಲವು ಅಂಶಗಳ ಮುನ್ನಡೆಯಲ್ಲಿ ಸಿನೆಮಾವು ಕಾಣ್ಕೆ ಇತ್ತಿದ್ದು ಕಡಿಮೆಯೇನಲ್ಲ. ಆದ್ದರಿಂದ ಸಿನೆಮಾ ಮಾಧ್ಯಮಕ್ಕೆ ಪೂರಕವಾಗಿ ಮತ್ತು ಅದರೊಳಗಿನದ್ದಾಗಿ ನಿಲ್ಲುವ ಪ್ರತಿಯೊಂದು ಸಂಗತಿಗಳೂ ವಿಶ್ಲೇಷಣೆ, ಸಂಶೋಧನೆ ಮತ್ತು ತಿಳಿವಳಿಕೆಗೆ ಅನುಕೂಲಕರವಾದ ಅವಕಾಶವನ್ನು ಒದಗಿಸುತ್ತವೆ.

ಭಾರತದಲ್ಲಿ ಚಲನಚಿತ್ರಗಳ ಯುಗ ಪ್ರಾರಂಭವಾದಾಗಿನಿಂದಲೂ ಸಿನೆಮಾ ತನ್ನ ಕಥೆಯ ಆಶಯಗಳಿಗಾಗಿ ಭಾರತದ ಸಾಂಸ್ಕೃತಿಕ ಬದುಕಿನ ಬಹುಮುಖ್ಯ ಅಂಗವಾದ ನೃತ್ಯವನ್ನು ತನ್ನೊಳಗೆ ಆವಾಹಿಸಿಕೊಂಡಿತು. ಇಲ್ಲಿನ ಸಮಾಜದ ಮನೋಸ್ಥಿತಿಗಳಿಗನುಗುಣವಾಗಿ ನಾಟಕಗಳಲ್ಲಿದ್ದಂತೆ ಜನರನ್ನು ಆಕರ್ಷಿಸಲು ಸಿನಿಮಾದಲ್ಲೂ ಹಾಡು, ನೃತ್ಯಗಳು ಅವಿಭಾಜ್ಯ ಅಂಗಗಳೆನಿಸಿದವು. ಅದರಲ್ಲೂ ಯುಗಳ ಗೀತೆ-ನೃತ್ಯಗಳು, ಶೃಂಗಾರ-ಪ್ರಣಯ ಸನ್ನಿವೇಶಗಳು ಪ್ರತೀ ಕಥಾವಸ್ತುವಿಗೆ ಅನಿವಾರ್ಯವೆನ್ನುವಂತೆ ಬೆಸೆದುಕೊಂಡೇ ಬಂದವು. ಹೀಗಾಗಿ ಭಾರತೀಯ ಸಿನೆಮಾ ರಂಗವೆಂದರೆ ಜಗತ್ತಿನ ಇನ್ಯಾವುದೇ ಸಿನೆಮಾ ಪ್ರಪಂಚಕ್ಕಿಂತಲೂ ವಿಭಿನ್ನವಾಗಿ ತೆರೆದುಕೊಂಡ; ಕಲ್ಪನೆಯ ಮಿತಿಯನ್ನು ಸಂಗೀತ ನೃತ್ಯಗಳ ಹೂರಣದಲ್ಲಿ ಹಿಗ್ಗಿಸುವ ಆವರಣವನ್ನು ಹೊಂದಿದೆ.

ಮೊದಮೊದಲು ಭಾರತೀಯ ಚಲನಚಿತ್ರಗಳಲ್ಲಿ ನಟಿಸುವವರ ಪೈಕಿ ಬಹಳಷ್ಟು ಮಂದಿ ವೃತ್ತಿ ರಂಗಭೂಮಿ ಕಲಾವಿದರೇ ಆಗಿದ್ದುದ್ದರಿಂದ ಲಯಬದ್ಧವಾಗಿ ಹೆಜ್ಜೆ ಹಾಕುವುದಷ್ಟೇ ನೃತ್ಯವೆನಿಸಿಕೊಳ್ಳುತ್ತಿತ್ತು. ಸಂಗೀತ, ಅಭಿನಯದ ಅಭ್ಯಾಸದ ಮಟ್ಟಕ್ಕೆ ಸರಿಸಮನಾಗಿ ನೃತ್ಯದ ನಿಯಮಬದ್ಧವಾದ ಕಲಿಕೆಯಿರಲಿಲ್ಲ. ಆದರೆ ಕ್ರಮೇಣ ಶಾಸ್ತ್ರೀಯವಾಗಿ ನೃತ್ಯ ಕಲಿತು ನರ್ತಿಸುವವರ ಸಂಖ್ಯೆ ಅಧಿಕವಾಗತೊಡಗಿತು. ಇತರ ಭಾಷಾ ಚಿತ್ರಗಳೊಂದಿಗೆ ಪೈಪೋಟಿಗೆ ನಿಲ್ಲಬೇಕಾಗಿ ಬಂದಾಗ ನೃತ್ಯದ ಆಕರ್ಷಣೆ ಅಗತ್ಯವೆಂದು ತೋರಿತು.

ಸಿನಿಮಾದಲ್ಲಿ ನೃತ್ಯದ ಸ್ಥಾನ ಹಾಗು ಅಗತ್ಯವೇ ಬೇರೆ. ಸಾರ್ವಜನಿಕವಾಗಿ ಕಛೇರಿಗಳಲ್ಲಿ ನಡೆಯುವಂತಹ ನೃತ್ಯದ ಮಾದರಿ ಸಿನಿಮಾದ್ದಲ್ಲ. ಸಮಯಮಿತಿಯೂ ಸಿನಿಮಾದಲ್ಲಿ ಹೆಚ್ಚು. ಚಲನಚಿತ್ರಗಳ ಪ್ರಾರಂಭ ಕಾಲದಲ್ಲಿಯಂತೂ ಸುಂದರ ಸ್ತ್ರೀಯರು ಮನಸೆಳೆಯುವ ವೇಷಭೂಷಣದಲ್ಲಿ ಅಂಗಾಗಗಳನ್ನು ಚಲಿಸಿ ಮನರಂಜನೆ ಮಾಡುವುದೇ ಆ ನೃತ್ಯಗಳ ಮೂಲ ಉದ್ದೇಶವಾಗಿತ್ತು. ಎಷ್ಟೋ ಸಲ ಅಂತಹ ನೃತ್ಯಗಳಿಗೆ ವಿಶಿಷ್ಟವಾದ ಅರ್ಥಗಳೇನೂ ಇರುತ್ತಿರಲಿಲ್ಲವಾದರೂ ಅವು ಎಷ್ಟೋ ಸಲ ನಾಟ್ಯಶಾಸ್ತ್ರವು ಪ್ರತಿಪಾದಿಸುವ ಅಂಶಗಳಿಗೆ ಹತ್ತಿರವಾಗೇ ಇರುತ್ತಿದ್ದವು; ಮತ್ತು ಒಟ್ಟು ಕಥೆಗೆ ಸ್ಪಂದಿಸುತ್ತಿದ್ದವು; ಅರ್ಥವತ್ತಾಗಿದ್ದವು. ನಂತರದಲ್ಲಿ ಕಥಾಸರಣಿಗೆ ಹೊಂದಿಕೆಯಾಗುವ ರೀತಿಯಲ್ಲಿ ನೃತ್ಯಗಳನ್ನು ಸೇರಿಸುವ ಉಪಕ್ರಮವು ಆರಂಭವಾಯಿತು. ಆಗೆಲ್ಲಾ ನೃತ್ಯ ನಿರ್ದೇಶಕನು ತನಗೆ ಕೊಟ್ಟ ಕೆಲವು ನಿಮಿಷಗಳಲ್ಲಿಯೇ ಪರಿಣಾಮಕಾರಿಯಾದ ನೃತ್ಯಗಳನ್ನು ಹೊಂದಿಸಬೇಕಾದ್ದರಿಂದ ತನಗೆ ಸರಿಯೆಂದು ತೋರಿದ ಕೆಲವು ಹಾವಭಾವಗಳನ್ನು, ಒಮ್ಮೆಲೇ ಮನಕ್ಕೆ ಹಿಡಿಯುವಂತಹ ಅಂಗವಿನ್ಯಾಸಗಳನ್ನು ಸೇರಿಸಿ ನೃತ್ಯದ ನಿರ್ಮಾಣವನ್ನು ಮಾಡುತ್ತಲಿದ್ದ. ಆಗಲೂ ಕೂಡಾ ಶಾಸ್ತ್ರೀಯವೆನಿಸಿಕೊಂಡ ಹಲವು ಭಾವ-ಚಲನೆಗಳು ನೃತ್ಯದ ವಾತಾವರಣವನ್ನು, ಪ್ರೇಕ್ಷಕರ ಮನಸ್ಸನ್ನು ಸುಂದರವಾಗೇ ಪೋಷಿಸಿದವು. ಆದರೆ ಸಿನಿಮಾ ನೃತ್ಯಪ್ರಕಾರವೆಂಬ ಪ್ರತ್ಯೇಕ ಅಭಿಧಾನದಿಂದ ಯಾವಾಗ ನೃತ್ಯಸ್ವರೂಪವೊಂದು ಯಾವ ಶಾಸ್ತ್ರದ ಹಿಡಿತಕ್ಕೂ ಸಿಕ್ಕದಂತೆ ಪ್ರಸಿದ್ಧವಾಗಲು ಪ್ರಾರಂಭವಾಯಿತೋ ಅದೇ ಆದರ್ಶವೂ ಆಗತೊಡಗಿತು. ಪರಿಣಾಮ ಎಷ್ಟೋ ದೇಶೀನೃತ್ಯಗಳು ಸಿನೆಮಾದ ವಸ್ತುವಿಗೆ ತಕ್ಕಂತೆ ಬದಲಾಗುತ್ತಾ, ಫ್ಯೂಷನ್‌ಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಾ ; ತನ್ನ ನೆಲೆ, ಗತಿಯಲ್ಲೂ ಸಿನೆಮಾಗಳಿಂದ ಸಾಕಷ್ಟು ಪ್ರಭಾವಿತಗೊಂಡವು.

ಈ ಸಿನಿಮಾನೃತ್ಯ ಪ್ರಕಾರದ ಬೆಳವಣಿಗೆಯಲ್ಲಿ ಎಷ್ಟೋ ದೇಶೀ ಪಾರಂಪರಿಕ ನೃತ್ಯಗಳ ಪಾಲು ಸಾಕಷ್ಟಿದೆ. ಆದರೆ ಭಾರತೀಯ ಸಿನಿಮಾರಂಗದ ಬೆಳವಣಿಗೆಯ ಸಿಂಹಾವಲೋಕನ ಮಾಡುತ್ತಾ ಬಂದರೆ, ಬರಬರುತ್ತಾ ಸ್ವತಂತ್ರ ಅಸ್ತಿತ್ವವನ್ನು ಪಡೆದುಕೊಂಡ ಸಿನಿಮಾ ನೃತ್ಯಗಳೆಂಬ ಮಾಧ್ಯಮದಿಂದಾಗಿ ಆವರೆಗೆ ಸಿನೆಮಾಗಳಲ್ಲಿದ್ದ ಪಾರಂಪರಿಕ ನೃತ್ಯಗಳ ಮಹತ್ತ್ವ ಮೂಲೆಗೆ ಸರಿಯುತ್ತ ಬಂದಿರುವುದು ಅರಿವಿಗೆ ಬರುತ್ತದೆ. ಈಗ ಏನಿದ್ದರೂ ಕಣ್ಣಿಗೆ, ಮನಸಿಗೂ ತಂಪೆನಿಸುವ ನೃತ್ಯದ ಸೊಗಡು ಕಾಣಬೇಕಿದ್ದರೆ ಕಪ್ಪು ಬಿಳುಪು ಅಥವಾ ಪೌರಾಣಿಕ ಚಲನಚಿತ್ರಗಳನ್ನೇ ಪರಾಂಬರಿಸಬೇಕು ಎನ್ನುವ ಸ್ಥಿತಿ ತಲುಪಿದೆ. ಭಾರತದ ಪಾರಂಪರಿಕ ನೃತ್ಯಗಳ ಬಳಕೆ ಗಮನಾರ್ಹವಾಗಿ ಕುಂಠಿತಗೊಂಡು ಕ್ರಮೇಣ ರಾಕ್ ಅಂಡ್ ರೋಲ್, ಟ್ವಿಸ್ಟ್, ಷೇಕ್, ಕ್ಯಾಬರೆ, ಹಿಪ್‌ಹಾಪ್, ಬೆಲ್ಲಿ ಇತ್ಯಾದಿಯಾಗಿ ವಿದೇಶದ ವಿವಿಧ ನೃತ್ಯ ಪ್ರಕಾರಗಳೇ ನವ್ಮು ನೃತ್ಯಗಳು ಎಂಬ ಬಲವಾಗಿ ಜನಮಾನಸದಲ್ಲಿ ಕೂರುತ್ತಿದೆ. ಅದರಲ್ಲೂ ಮಕ್ಕಳಿಂದ ಮೊದಲ್ಗೊಂಡು ಅಜ್ಜ-ಅಜ್ಜಿಯವರೆಗೂ ನೃತ್ಯದ ಸೌಂದರ್ಯಾನುಭೂತಿಗಿಂತ ಹೆಚ್ಚಾಗಿ, ಕಸರತ್ತು ಮಾಡಿ ದೇಹ ದಂಡಿಸುವುದೇ ನೃತ್ಯವೆಂದುಕೊಳ್ಳುವಂತಗಿದ್ದು; ಸಿನೆಮಾ ಮತ್ತು ಮನರಂಜನಾ ಟಿವಿ ವಾಹಿನಿಗಳ ನೃತ್ಯಚಹರೆಗಳು ಇದಕ್ಕೆ ಕಾರಣೀಭೂತವಾಗುತ್ತಿವೆ. ಅಪಾಯಕಾರಿ ಸ್ಟಂಟ್‌ಗಳಿಗೆ ಒಡ್ಡಿಕೊಂಡ ಕೊರಿಯೋಗ್ರಫಿಗಳೋ, ನೆರೆದವರ ಮನಸ್ಸಿನಲ್ಲಿ ಪ್ರಕ್ಷುಬ್ಧ ಮನಸ್ಥಿತಿ ನಿರ್ಮಾಣ ಮಾಡುವ ನೆಗೆತ, ಜಿಗಿತಗಳೋ ಆದರ್ಶವಗುತ್ತಿವೆ. ಅಸಂಬದ್ಧ ಸಾಹಿತ್ಯಗಳಿಗೆ ಮನಬಂದಂತೆ ಕುಣಿಯುವುದೂ ಕೂಡಾ ಕೇಕೆ, ಉಲ್ಲಾಸಗಳಿಗಿಂತ ಹೆಚ್ಚಾಗಿ ವಿಕೃತಿಯೆನಿಸಿಕೊಳ್ಳುತ್ತಿದೆ. ಎಲ್ಲದಕ್ಕಿಂತ ಮುಖ್ಯವಗಿ ಎಲ್ಲಾ ನೃತ್ಯಗಳ ಅಂತಿಮ ಬಿಂದು ಸಿನೆಮಾ ನೃತ್ಯದೊಡನೆ ಸೇರಿಹೋಗುವಲ್ಲಿ ಸಾರ್ಥಕ ಎಂಬ ಅಪಾಯದ ಆಲೋಚನೆ ಸ್ಥಿರವಾಗುತ್ತಲಿದೆ.

ಸಿನಿಮಾ ನೃತ್ಯವೆನ್ನುವುದು ಜನಪ್ರಿಯವಾದ ಎಲ್ಲಾ ನೃತ್ಯಗಳ ಹಲವಾರು ಚಲನೆಗಳನ್ನು ತನ್ನ ಒಡಲಲ್ಲಿ ಮೂಡಿಸಿಕೊಂಡಿದೆ- ಮತ್ತು ಅವೆಲ್ಲವಕ್ಕೂ ಅದರದ್ದೇ ಆದ ಸ್ವಾದವಿದೆ; ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬ ಮಾತೆಲ್ಲವೂ ಸತ್ಯ. ಆದರೂ ಆವಾಹಿಸಿಕೊಂಡ ನೃತ್ಯದ ಚಲನೆಗಳನ್ನು ಗಮನಿಸಿದರೆ ಮೋಡಿ ಮಾಡುವ ಚಲನೆಗಳೇ ಕ್ರಮೇಣ ಏಕತಾನತೆಯನ್ನೂ ತರುತ್ತವೆ ಎಂಬುದನ್ನೇಕೋ ಮರೆತಂತಿದೆ. ನಾವು ನಮ್ಮ ಬೇರುಗಳನ್ನು ಗುರುತಿಸಿಕೊಳ್ಳುವಲ್ಲಿ ವಿಫಲರಾಗಿ ಯಾವುದೋ ಮಾಯಾಜಾಲದ ಮೃಗಜಲದ ಅರಸುವಿಕೆಯಲ್ಲಿ ಕಳೆದುಹೋಗುತ್ತಿದ್ದೇವೆ ಎಂದೆನಿಸುತ್ತದೆ. ದೈಹಿಕ ಕಸರತ್ತುಗಳನ್ನು ಆವಾಹಿಸಿಕೊಳ್ಳುವ ಭರದಲ್ಲಿ ಭಾರತೀಯ ಸಿನಿಮಾದ ನೃತ್ಯದಲ್ಲಿದ ಸೌಂದರ್ಯವನ್ನೂ, ಆನಂದದ ರಸದೃಷ್ಟಿಯನ್ನು ಕಳೆದುಕೊಳ್ಳುತ್ತಿದೆಯೆಂಬುದು ತೀವ್ರವಾಗಿ ಭಸವಾಗುತ್ತದೆ. ಆಂಗಿಕಕ್ಕೂ, ಸಾತ್ವಿಕಕ್ಕೂ ಇರಬೇಕಾದ ನಂಟು, ಮೈಲಿಗಲ್ಲುಗಳನ್ನೂ ಮೀರಿ ದಿನದಿಂದ ದಿನಕ್ಕೆ ಪರಸ್ಪರ ವಿಚ್ಛೇದಗೊಳ್ಳುತ್ತಿರುವುದು, ಹೀಗೆಯೇ ಮುಂದುವರಿದರೆ ಎತ್ತಣಿಂದೆತ್ತ ಸಂಬಂಧವಯ್ಯ ಎಂದಾಗದೆ ಇರದು.

ಇಂತಹ ಒಂದು ಆಲೋಚನೆ ಮನಸ್ಸಿನಲ್ಲಿ ಮತ್ತಷ್ಟು ಗಾಢವಾಗಿ ಸುಳಿದುಹೋಗುತ್ತಿರುವುದು ಇಂದಿನ ಎಷ್ಟೋ ಸಿನಿಮಾ ಚಲನೆಗಳ ಜೊತೆಗೆ ಇತ್ತೀಚೆಗೆ ತೆರೆಕಂಡ ಪ್ರಭುದೇವ ಅಭಿನಯiದ ಎಬಿಸಿಡಿ ಚಲನಚಿತ್ರ ಮತ್ತು ಸ್ಟಾರ್ ಪ್ಲಸ್, ಝೀ ಇತ್ಯಾದಿ ವಾಹಿನಿಗಳಲ್ಲಿ ಪ್ರಚಲಿತದಲ್ಲಿರುವ ನೃತ್ಯಸ್ಪರ್ಧೆಗಳನ್ನು ಕಾಣುತ್ತಿರುವಾಗ !

Leave a Reply

*

code