Author: ಸಂಪಾದಕಿ
ರೂಪಕ, ನೃತ್ಯ, ನಾಟ್ಯ, ನೃತ್ತ, ನಾಟಕ ಮುಂತಾದ ಅದೆಷ್ಟೋ ಪಾರಿಭಾಷಿಕ ಶಬ್ದಗಳಿಂದ ಮೊದಲ್ಗೊಂಡು ಅನೇಕ ವ್ಯಾಖ್ಯಾನಗಳು ಪ್ರಸ್ತುತ ದಶಕಗಳಲ್ಲಿ ಅಪಭ್ರಂಶಕ್ಕೊಳಗಾಗಿ ತಮ್ಮ್ಮ ಅರ್ಥವ್ಯಾಪ್ತಿ-ವಿಸ್ತಾರವನ್ನು ಕಳೆದುಕೊಳ್ಳುತ್ತಿವೆ. ಈ ಸನ್ನಿವೇಶದಲ್ಲಿ ಭರತನ ನಾಟ್ಯಶಾಸ್ತ್ರದ ಅಧ್ಯಯನ ನಮ್ಮ ಪರಂಪರೆ ಮತ್ತು ಸಂಸ್ಕೃತಿಗಳನ್ನು ಅಧ್ಯಯನ ಮಾಡುವುದರಿಂದ ನೃತ್ಯದ ಜಾಡುಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಲು ಹೆಚ್ಚು ಅನುಕೂಲವಾಗುತ್ತದೆ ಎಂದು ಸಂಶೋಧಕಿ, ಸಂಪಾದಕಿ ಮತ್ತು ನೃತ್ಯ ಸಂಶೋಧಕರ ಚಾವಡಿಯ ಆಡಳಿತ ವಿಭಾಗ ಮುಖ್ಯಸ್ಥೆ ಮನೋರಮಾ ಬಿ.ಎನ್. ಹೇಳಿದರು.
ಅವರು ಪುತ್ತೂರಿನಲ್ಲಿ ನಿನ್ನೆ ನೂಪುರ ಭ್ರಮರಿ ಪ್ರತಿಷ್ಠಾನ ಮತ್ತು ಪುತ್ತೂರಿನ ‘ಕಲಾಶ್ರಯ’ದ ಸಹಯೋಗದಲ್ಲಿ ಉದ್ಘಾಟನೆಗೊಂಡ ನಾಟ್ಯಶಾಸ್ತ್ರ ಅಧ್ಯಯನ ಮತ್ತು ನೃತ್ಯಮೀಮಾಂಸೆಗಳ ಗಮನಿಸುವಿಕೆಯ ಸಂಬಂಧದ ಉಪನ್ಯಾಸ ಸರಣಿಯಲ್ಲಿ ಮಾತನಾಡಿದರು. ಭರತನ ನಾಟ್ಯಶಾಸ್ತ್ರ ಮತ್ತು ಭರತನಾಟ್ಯ ಇವೆರಡೂ ಒಂದೇ ಅಲ್ಲ. ಇಂದಿನ ಶಿಕ್ಷಣಕ್ರಮ ಮತ್ತು ಪರೀಕ್ಷಾಪದ್ಧತಿಗಳು ಇಂತಹ ಅದೆಷ್ಟೋ ಮೂಲ ವಿಚಾರಗಳನ್ನು ಕಲಿಸುವಲ್ಲಿ ಹಿಂದೆ ಬೀಳುತ್ತಿದೆ. ಫಲವಾಗಿ ಭರತನಾಟ್ಯವೇ ನಾಟ್ಯಶಾಸ್ತ್ರದ ಅಧಿಕೃತ ಪ್ರತಿನಿಧಿ ಎಂದು ಹೇಳುತ್ತಿದ್ದೇವೆ. ಇದು ನಿಜಕ್ಕೂ ಪರಂಪರೆಯನ್ನು ಅವಮಾನ ಮಾಡಿದಂತೆ. ಭರತಖಂಡದ ಅದೆಷ್ಟೋ ಕಲೆಗಳಿಗೆ ಮೂಲ ಮಾತೃಕೆಯಾದ ನಾಟ್ಯಶಾಸ್ತ್ರವನ್ನು ಹೀಗೆ ಸೀಮಿತ ಮಾಡಿಕೊಳ್ಳುವುದರಿಂದ ಕಲೆಯನ್ನು ಕಲಿಯುವ ಮನಸ್ಸುಗಳು ಭ್ರಷ್ಗೊಂಡು ಬಾವಿಯೊಳಗಿನ ಕಪ್ಪೆಯಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮೂಕಾಂಬಿಕಾ ನೃತ್ಯಕಲಾಶಾಲೆಯ ನಿರ್ದೇಶಕ ದೀಪಕ್ ಕುಮಾರ್, ಫೆಡರಲ್ ಬ್ಯಾಂಕ್ ಪುತ್ತೂರು ವಲಯದ ಪ್ರಬಂಧಕ ವಿಷ್ಣುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಈ ಉಪನ್ಯಾಸ ಸರಣಿಯಲ್ಲಿ ಎಲ್ಲಾ ಬಗೆಯ ಯಾವುದೇ ವರ್ಗದ ಆಸಕ್ತ ವಿದ್ಯಾರ್ಥಿ-ಪೋಷಕ-ಸಹೃದಯ ಪ್ರೇಕ್ಷಕರು ಭಾಗವಹಿಸಬಹುದಾಗಿದ್ದು ; ಉಪನ್ಯಾಸ ಸರಣಿಯು ಉಚಿತ ಪ್ರವೇಶದ್ದಾಗಿರುತ್ತದೆ. ಈ ಸರಣಿಯಲ್ಲಿ ನಾಟ್ಯ/ನೃತ್ಯಸಂಬಂಧದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಇತಿಹಾಸ-ಅರಿವನ್ನು ಪಡೆದುಕೊಳ್ಳಬಹುದಾಗಿದ್ದು; ತಿಂಗಳಿನ ಪ್ರತೀ ೨ನೇ ಮತ್ತು ನಾಲ್ಕನೇ ಶನಿವಾರಗಳಂದು ನಡೆಯಲಿದೆ. ಮುಕ್ತ ಸಂವಾದ ಕ್ರಮದಲ್ಲಿ ಉಪನ್ಯಾಸ ಸರಣಿಗಳಿದ್ದು; ಉಪನ್ಯಾಸವನ್ನು ನೂಪುರ ಭ್ರಮರಿಯ ಸಂಪಾದಕಿ, ನೃತ್ಯ ಸಂಶೋಧಕಿ, ಬರೆಹಗಾರ್ತಿ ಮನೋರಮಾ ಬಿ.ಎನ್ ನಡೆಸಿಕೊಡಲಿರುವರು. ಸಮಯ : ೫ರಿಂದ ೬ ಗಂಟೆ ಸಂಜೆಯಾಗಿದ್ದು ; ಕಾರ್ಯಕ್ರಮದ ಪ್ರಯೋಜನವನ್ನು ಆಸಕ್ತರು ಪಡೆದುಕೊಳ್ಳಲು ಕೋರಲಾಗಿದೆ.