ಅಂಕಣಗಳು

Subscribe


 

ನೃತ್ಯದಿನಕ್ಕಾದರೂ ಅವಲೋಕನ ಮಾಡಿಕೊಳ್ಳೋಣವೇ?

Posted On: Monday, April 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಸಂಪಾದಕಿ

ಎಂದಿನಂತೆ ಮತ್ತೊಂದು ವರುಷದ ನೃತ್ಯದಿನ (ಏಪ್ರಿಲ್ ೨೯) ಸಂದುಹೋಗಿದೆ. ಪರಸ್ಪರ ಶುಭ ಹಾರೈಸಿಕೊಂಡಿರುತ್ತೇವೆ. ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ. ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುತ್ತೇವೆ. ನೃತ್ಯಸಂಜೆ/ರಾತ್ರಿಗಳನ್ನು ಆಚರಿಸಿಕೊಂಡು ಸಂಭ್ರಮಿಸಿರುತ್ತೇವೆ. ಒಟ್ಟಿನಲ್ಲಿ ಅಂತರ್ರಾಷ್ಟ್ರೀಯ ನೃತ್ಯದಿನವೆಂಬ ದಿನದೊಳಗೆ ನಮ್ಮನ್ನು ನಾವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದಾದ ಸಾಧ್ಯತೆಗಳೆಲ್ಲವನ್ನೂ ಪರಿಶೀಲಿಸಿರುತ್ತೇವೆ. ಆದರೆ ಎಂದಾದರೂ ಒಂದಷ್ಟು ಮೂಲಭೂತ ಪ್ರಶ್ನೆಗಳಿಗೆ ನಾವು ಉತ್ತರವಾಗಿದ್ದೇವೆಯೇ?

ನೃತ್ಯದಿನವೆಂದರೆ ಏನು? ಎಷ್ಟು ಮಂದಿ ಕಲಾವಿದರಿಗೆ ಇದರ ಅರಿವಿದೆ?

ಭಾರತೀಯ ಪರಂಪರೆಗೆ ಈ ನೃತ್ಯದಿನದ ಪ್ರಸ್ತುತತೆ ಎಷ್ಟು?

ನೃತ್ಯದಿನವೊಂದು ಸಾರ್ಥಕಗೊಳ್ಳುವ ದಾರಿ ಯಾವುದು?

ನೃತ್ಯವು ನಿಜಕ್ಕೂ ಶಿಕ್ಷಣವಾಗಿದೆಯೇ?

ನಾವು ಮಾಡುತ್ತಿರುವ ನೃತ್ಯ ನಿಜಕ್ಕೂ ನಮಗೆ ಆತ್ಮತೃಪ್ತಿ ತಂದಿದೆಯೇ?

ನೃತ್ಯದಿನದ ಹೆಸರಿನಲ್ಲಿ ನಾವು ಕೈಗೊಂಡ ತೀರ್ಮಾನಗಳು, ಮಾಡಿದ ಕಾರ್ಯಗಳು ನಿಜಕೂ ನೃತ್ಯದ ವಾತಾವರಣಕ್ಕೆ ಅವಶ್ಯಕವೇ?

ನೃತ್ಯ ನಮ್ಮ ಪಾಲಿಗೆ ಏನು? – ತುತ್ತಿನ ಕೂಳೇ? ಕಲಾರಾಧನೆಯೇ? ಪ್ರತಿಷ್ಠೆಯ ಮಾರ್ಗವೇ? ಸ್ಥಾನಮಾನದ ಆಸೆಯೇ?

ಸಹೃದಯನನ್ನು ದೂರುವ ನಮಗೆ ನಿಜವಾಗಿಯೂ ಏನು ಗೊತ್ತು?

ಎಷ್ಟು ಬಡಕಲಾವಿದರ ಕಣ್ಣೀರೊರೆಸುವ ಕೆಲಸ ಮಾಡಿದ್ದೇವೆ?

ಭರತನಾಟ್ಯ, ಕೂಚಿಪುಡಿ ಎಂದೆಲ್ಲಾ ಶಾಸ್ತ್ರೀಯ ನೃತ್ಯಗಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ನಮಗೆ ಎಷ್ಟು ದೇಶೀ ನೃತ್ಯಗಳ ಪರಿಚಯವಿದೆ?

ಯಾವ ಜಾನಪದ ಸಂಪತ್ತನ್ನು ಗುರುತಿಸುವ ಕೆಲಸ ಮಾಡಿದ್ದೇವೆ? ನಮ್ಮ ನಾಡಿನ ನೃತ್ಯಗಳ ಪರಿಚಯ ನಮಗೆಷ್ಟು ಗೊತ್ತು?

ನೃತ್ಯದ ಹೆಸರಿನಲ್ಲಿ ಮಾಡುತ್ತಿರುವ ರಾಜಕೀಯಗಳೆಷ್ಟು?

ನೃತ್ಯಸಮಾರಂಭಗಳ ಅರ್ಥವೆಷ್ಟರಮಟ್ಟಿನದು?

ಹೊಸತು ಹುಟ್ಟುಹಾಕುವ ರಭಸ, ಪರಂಪರೆ ಕಾಪಾಡಿಕೊಳ್ಳುವ ನಿಷ್ಠೆಯ ಹಿಂದಿನ ಮರ್ಮವೇನು?

ಕಲಾವಿದರಾಗಿರುವ ನಮ್ಮ ಕರ್ತವ್ಯ ಏನು?

ನಮ್ಮೊಳಗಿನ ಹುಳುಕುಗಳನ್ನು ಅರಿತಿದ್ದೇವೆಯೇ?

ನಿಜವಾದ ಅಧ್ಯಯನದ ಹರಿವು ನಮ್ಮೊಳಗೆ ಹೇಗೆ ಸಾಗುತ್ತಿದೆ?

ರಸ, ಭಾವ, ಆನಂದದ ವೇದಾಂತ ಹೇಳುವ ನಾವು ಎಷ್ಟು ಮಂದಿ ನಿಜಕ್ಕೂ ಅದನ್ನು ತಲುಪಿದ್ದೇವೆ? ನi ಎಷ್ಟು ಪ್ರಯತ್ನಗಳು ರಸನಿಷ್ಠವಾಗಿವೆ?

ನೃತ್ಯಕ್ಷೇತ್ರ ಬೇಡುವ ಜರೂರತ್ತುಗಳೇನು? ನಮ್ಮ ಇತಿಮಿತಿಯಲ್ಲಿ ಸಲ್ಲಿಬಹುದಾದ ಕಾಣ್ಕೆಯೇನು?

ದಾಖಲೀಕರಣದ ಹಂತದಲ್ಲಿ ನಮ್ಮ ಪಾತ್ರ ಏನು?

ಎಂದಾದರೂ ಸಾಮಾನ್ಯ ಪ್ರೇಕ್ಷಕರ ನಿಜವಾದ ಅಭಿಪ್ರಾಯ ಕೇಳಿದ್ದೇವಾ? ವಸ್ತುನಿಷ್ಠ ವಿಮರ್ಶೆಗಳಿಗೆ ದಾರಿ ಮಾಡಿಕೊಟ್ಟಿದ್ದೇವೆಯೇ?

ಮಾಧ್ಯಮ ಪ್ರಚಾರ, ವ್ಯಾಪಾರೀಕರಣದ ನಡುವೆ ನೃತ್ಯದ ನಿಜವಾದ ಅವಸ್ಥೆಯ ಬಗ್ಗೆ ವಿಚಾರ ಮಾಡಿದ್ದೇವೆಯೇ?

..ಒಂದೇ ಎರಡೇ…ಹೀಗೆ ಕೇಳಿಕೊಂಡಷ್ಟೂ ಪ್ರಶ್ನೆಗಳು ಸುರುಳಿ ಸುತ್ತಿ ಹಿಂಬಾಲಿಸುತ್ತವೆ. ಆದರೆ ಅರಿತುಕೊಳ್ಳುವ ತಾಳ್ಮೆ, ಅಳವಡಿಸಿಕೊಳ್ಳವ ನಿಯತ್ತು ಎಷ್ಟರಮಟ್ಟಿಗಿದೆ ಎಂಬ ಪ್ರಾಥಮಿಕ ಪ್ರಶ್ನೆ ನಮ್ಮೊಳಗೆ ಕುಡಿಯೊಡೆದಿರಬೇಕಷ್ಟೇ ! ಅಷ್ಟಕ್ಕೂ ಆತ್ಮಾವಲೋಕನ ಮಾಡಿಕೊಳ್ಳಲು ನೃತ್ಯದಿನವೆಂಬ ದಿನದ ಜರೂರತ್ತೇನೂ ಇಲ್ಲ. ಆದರೆ ನಮ್ಮದು ಎಂದು ಹೇಳಿಕೊಳ್ಳುವ ದಿನದಂದಾದರೂ ರವಷ್ಟು ಕುತೂಹಲಕ್ಕಾದರೂ ನಮ್ಮೊಳಗೆ ನಾವು ಇಣುಕಿನೋಡಿದ್ದೇವೆಯೇ? ನೋಡಿದರೂ ಧನಾತ್ಮಕವಾದ ಪ್ರತಿಕ್ರಿಯೆಗಳು ಇದ್ದಾವೆಯೇ? ಅಥವಾ ಆತ್ಮವಿಮರ್ಶೆ ಮಾಡಿಕೊಳ್ಳಲು ಇನ್ನೂ ಸುಯೋಗ ಕೂಡಿಬರಲಿಲ್ಲವೆಂದೇ?

ಕಲೆಯ ಸುಧಾರಣೆ ಎಂಬುದೇ ಒಂದು ಅನಂತ, ನಿರಂತರ ಪ್ರಕ್ರಿಯೆ. ಕಾಲಕಾಲಕ್ಕೆ ತೋರಿಬರುವ ಸುಧಾರಣಾ ಸಂಕಲ್ಪದ ಪ್ರಯತ್ನಗಳೂ ಕೂಡಾ ಆ ಕ್ಷಣದ ವಾತಾಯನವನ್ನು ತುಂಬಲು ಮಾತ್ರ ಅನುವಾಗಬಹುದಷ್ಟೇ. ಹೀಗಿರುವಾಗ ಕಲೆಯ ಚೈತನ್ಯssಸ್ವರೂಪವನ್ನು, ಅದಕ್ಕೆ ಅವಶ್ಯವಾದ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಆವಾಹಿಸಿಕೊಳ್ಳದಿದ್ದರೆ ಅದರಿಂದ ನಷ್ಟ ಕಲಾವಿದನಿಗೇ ಹೊರತು ಕಲೆಗೋ, ಪ್ರೇಕ್ಷಕನಿಗೋ ಖಂಡಿತಾ ಅಲ್ಲ. ಮತ್ತು ಯಾವುದೇ ವಿಷಯವನ್ನು ನಿಜಾರ್ಥದಲ್ಲಿ ಗುರುತಿಸುವ ಕೆಲಸಗಳು ತಳಮಟ್ಟದಿಂದ ಮೂಡಿಬರದಿದ್ದರೆ ಯಾವ ವಿಶೇಷ ದಿನವಾದರೂ ಅದರ ಹೆಗ್ಗಳಿಕೆಯ ಸಂಭ್ರಮದಲ್ಲಿ ಎಳ್ಳಷ್ಟೂ ಹುರುಳಿರುವುದಿಲ್ಲ. ಕಲಾವಿದರ ಯಾವ್ಯಾವುದೋ ಸೋಗು ಯಾವ ದಿನವನ್ನೂ ಮಹತ್ತಾಗಿಸುವುದಿಲ್ಲ. ಕಲೆಯನ್ನೂ ಕೂಡಾ !

ಕಲೆಯ ಪಾಲಿಗೆ ನಾವು ನೀಡುವ ಅತ್ಯಂತ ದೊಡ್ಡ ಕೊಡುಗೆಯೆಂದರೆ ಪ್ರಾಮಾಣಿಕತೆ. ಕಲಾರಾಧನೆಯೆಂಬ ಹೆಸರಿನಲ್ಲಿ ಕಲೆಗೆ ನಾವೇನೋ ಕೊಡುಗೆ ನೀಡುತ್ತಿದ್ದೇವೆ ಎಂಬ ಭ್ರಮೆಯಲ್ಲೇ ಬದುಕುವ ಕಲಾವಿದರಿಗೆ ಅದು ಅವರವರ ಜೀವನದ ತೆವಲುಎಂಬುದನ್ನು ಒಪ್ಪಿಕೊಳ್ಳುವ ಧೈರ್ಯಸ್ಥಿಕೆ ಇದ್ದಾಗಲಷ್ಟೇ ಕಲೆಯ ಸಾಧ್ಯತೆಗಳು ಸುಸ್ಪಷ್ಟವಾಗುತ್ತವೆ. ಜೀವನದ ಪ್ರಾಕ್ಟಿಕಾಲಿಟಿಯ ಸಬೂಬಿನಲ್ಲಿ ಪಲಾಯನ ಮಾಡುತ್ತಾ ಇಲ್ಲಸಲ್ಲದ ಬಡಾಯಿ ಬಿಡುವ ಜೀವ ವಿವೇಚನೆಗೆ ಹೊರಡುತ್ತದೆ. ನಮ್ಮ ಆನಂದಕ್ಕೆ, ನಮ್ಮ ಇಚ್ಛೆಗೆ, ನಮ್ಮ ಕರ್ತವ್ಯಕ್ಕೆ  ಎಂದು ಒಪ್ಪಿಕೊಳ್ಳುವ ಕಲಾವಿದರಿದ್ದಷ್ಟೂ ಎಲ್ಲಾ ಆಚರಣೆಗಳಿಗೂ ಒಂದು ಬೆಲೆ ಬರುತ್ತದೆ. ಇಲ್ಲದಿದ್ದರೆ ಕಲೆಯ ಆತ್ಮವನ್ನು ನಿತ್ಯವೂ ಬೇಯಿಸುತ್ತಾ ಅದರ ಶರೀರವನ್ನು ವಿಕ್ರಯಿಸುತ್ತಲೇ ಹೋಗುತ್ತೇವೆ !

 

Leave a Reply

*

code