Author: ಮನೋರಮಾ. ಬಿ.ಎನ್
ಇದು ಬ್ರಾಹ್ಮಣ ಕುಲದ ಹೆಣ್ಣು ಮಗಳ ನಿರ್ಧಾರ ಮತ್ತು ದಿಟ್ಟ ನಿಲುವಿನ ಕಥೆ. ನೃತ್ಯಕ್ಕಾಗಿ ಸಮಾಜ, ತನ್ನವರನ್ನು ಎದುರುಹಾಕಿಕೊಂಡು ಇಡೀ ನೃತ್ಯ ಕ್ಷೇತ್ರಕ್ಕಿದ್ದ ಕಳಂಕವನ್ನು ತೊಡೆದು ಕಲೆಯನ್ನು ಪುನರುಜ್ಜೀವನಗೊಳಿಸಿದ ಯಶೋಗಾಥೆ.
ಅದು ಸ್ವಾತಂತ್ರಪೂರ್ವ ಕಾಲಘಟ್ಟ. ಒಂದೆಡೆ ಬ್ರಿಟೀಷರ ದಬ್ಬಾಳಿಕೆಗೆ ನಲುಗುತ್ತಿರುವ ಭಾರತೀಯರು. ಇನ್ನೊಂದೆಡೆ ಸೊರಗುತ್ತಿರುವ ಭಾರತೀಂiiತೆ. ಇವೆರಡರ ನಡುವೆ ಉಳಿದು ಬಂದ ಕಂದಾಚಾರ, ಮೂಢ ನಂಬಿಕೆಗಳು. ಸ್ತ್ರೀಯರ ಬಗೆಗಿದ್ದ ಕರ್ಮಟ ಆಚರಣೆಗಳು. ಸಾಂಸ್ಕೃತಿಕ ಸಂಘರ್ಷಗಳು. ಕಲೆಯೊಂದು ಅಸ್ತಿತ್ವವನ್ನು ಕಳೆದುಕೊಳ್ಳಲು ಇದಕ್ಕಿಂತ ಇನ್ನೇನು ಬೇಕು? ದೇವದಾಸಿ ಪದ್ಧತಿಯೊಂದಿಗೆ ಅಂಟಿಕೊಂಡ ಕಳಂಕದಿಂದಾಗಿ ನೃತ್ಯ ಶೈಲಿಯೊಂದು ನಲುಗುತ್ತಿದ್ದ ಕಾಲ. ಕಲೆಯ ಪುನರುಜ್ಜೀವನ ಕನಸಿನ ಮಾತಾಗಿದ್ದ ಸಂಧಿಗ್ಧ, ಸಂಕಟ ! ದಾರಿ ಯಾವುದಯ್ಯಾ?
ಅವರೇ ರುಕ್ಮಿಣೀ ದೇವಿ ಅರುಂಡೇಲ್. ನೃತ್ಯ ಸಂಸ್ಕೃತಿಗೆ ಅವರಿತ್ತುಹೋದ ಉತ್ತರ ನೃತ್ಯ ಸಂಸ್ಕೃತಿಯ ಪುನರುದ್ಧಾರದ ಪ್ರಥಮ ಮೈಲಿಗಲ್ಲು. ಜನನ ೨೯ ಫೆಬ್ರವರಿ ೧೯೦೪, ಸಂಸ್ಕೃತ ಕಲಿಕಾಭಾಸಿಗಳಿಗೆ ಮುಖ್ಯ ಕೇಂದ್ರವಾಗಿದ್ದ ತಿರುವಿಸೈ ನಲ್ಲೂರಿನಲ್ಲಿದ್ದ ಸಂಸ್ಕೃತ ವಿದ್ವಾನ್ ಎ. ನೀಲಕಂಠ ಶಾಸ್ತಿ ರುಕ್ಮಿಣಿಯ ತಂದೆ. ಸಂಗೀತ ಕಲಿಕೆಯ ಮುಖ್ಯ ಕ್ಷೇತ್ರವಾದ ತಿರುವೈಯಾರುವಿನವರಾದ ಶೇಷಮ್ಮಾಳ್
ತಾಯಿ. ಅಚ್ಚುಕಟ್ಟು ಬ್ರಾಹ್ಮಣ ಮನೆತನದ ಕುಟುಂಬ. ಆದರೆ ಸುಶಿಕ್ಷಿತ ತಂದೆ ತಾಯಿಯರಿಂದಾಗಿ ತನ್ನ ಏಳನೇ ವಯಸ್ಸಿಗೇ ತಂದೆಯೊಂದಿಗೆ ಆನಿಬೆಸೆಂಟ್ರ ಥಿಯೋಸೋಫಿಕಲ್ ಸೊಸ್ಶೆಟಿಯ ಸಂಪರ್ಕಕ್ಕೆ ಬಂದ ರುಕ್ಮಿಣೀಗೆ ವಿವಾಹವಾದದ್ದು ೧೬ ರ ಹರೆಯದಲ್ಲಿ ! ೧೯೨೦ನೇ ಇಸವಿಯ ಕಾಲ. ಮದುವೆಯಾದ ಬೆನ್ನಿಗೇ ಸಮಾಜದ ಪ್ರತಿಭಟನೆ, ಮೂದಲಿಕೆ.. ಕಾರಣ,! ಮದುವೆಯಾದದ್ದಾದರೂ ಯಾರನ್ನು? ತನಗಿಂತಲೂ ಬಹಳಷ್ಟು ಹಿರಿಯ, ವಿದೇಶಿ ಶಿಕ್ಷಣತಜ್ಞ, ವಾರಣಾಸಿ ಸೆಂಟ್ರಲ್ ಹಿಂದೂ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ. ಈ. ಎಸ್. ಅರುಂಡೇಲ್. ಆದರೇನು ? ವ್ಯಂಗ್ಯ-ಮೂದಲಿಕೆ, ಕರ್ಮಟ ಆಚಾರಗಳನ್ನು ಮೆಟ್ಟಿ ನಿಂತರು ಈ ಹುಟ್ಟು ಹೋರಾಟಗಾರ್ತಿ !
ನಂತರದ ಹೋರಾಟ…! ಮನಸ್ಸು ಸಿದ್ಧಗೊಂಡಿತ್ತು. ದಶಕವೊಂದರ ಕಾಲ ಮನಸ್ಸು ಚಿಂತನೆಯಲ್ಲಿ ತೊಡಗಿತ್ತು.
ಜನ, ವೇಷ, ಭಾಷೆ, ಜೀವನ ಶೈಲಿಯನ್ನು ಅರಿಯುವ, ಅರಿತು ಬೆರೆಯುವ ಆಸೆ ರುಕ್ಮಿಣಿಗೆ. ಸೊಸ್ಶೆಟಿಯ ಕೆಲಸದಲ್ಲಿ ಮತ್ತಷ್ಟು ಕ್ರಿಯಾಶೀಲರಾಗಿ ದುಡಿಯುತ್ತಾ ಪ್ರವಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಪ್ರವಾಸದುದ್ದಕ್ಕೂ ಜನಜೀವನದ ಸಂಸ್ಕೃತಿ ಮತ್ತು ಸಂಗೀತ ನೃತ್ಯದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ. ಏಕೆಂದರೆ ಅವರನ್ನು ಬಹುವಾಗಿ ಸೆಳೆದದ್ದೇ ಸಂಗೀತ ಮತ್ತು ನೃತ್ಯ.
ಇಂತಹ ಒಂದು ಸಂದರ್ಭದಲ್ಲಿ ಪರಿಚಯವಾದವರೇ ಖ್ಯಾತ ಬ್ಯಾಲೆ ನೃತ್ಯಗಾರ್ತಿ ಅನ್ನಾ ಪಾವಲೋವಾ !
ಆಗ ರುಕ್ಮಿಣಿದೇವಿಗೆ ೨೪ ರ ಹರೆಯ.
ಅದೊಂದು ಬಾರಿ ಅನ್ನಾ ಪಾವಲೋವ ಮುಂಬೈಗೆ ಬಂದರು ! ! ! ! (ಸಶೇಷ)