ಅಂಕಣಗಳು

Subscribe


 

ಪ್ರತಿರಾಗ ರಸೋದಯದ ‘ಶತಮಾನದ ಸಂಗೀತ’

Posted On: Friday, February 1st, 2013
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ವಿದ್ವಾಂಸರು, ಕವಿಗಳು, ಅವಧಾನ ಪೃಚ್ಛಕರು, ಬೆಂಗಳೂರು

12-12-12 ಶತಮಾನದ ಸ್ಮರಣೀಯ ದಿನ. ವಿಶ್ವದ ಎಲ್ಲೆಡೆ ವಿಲಾಸದಿಂದಲೋ, ವಿಹಾರದಿಂದಲೋ, ವಿವೇಕದಿಂದಲೋ, ಈ ದಿನವನ್ನು ಸಮಾಚರಿಸಲಾಗಿದೆ. 12-12-12ರ ಅಂಕವೈಶಿಷ್ಟ್ಯವೂ ಗಮನಾರ್ಹ. ಮೂರು ಹನ್ನೆರಡನ್ನು ಕೂಡಿಸಿದರೂ, ಗುಣಿಸಿದರೂ, ಫಲಿತಾಂಕದ ಒಟ್ಟು ಮೊತ್ತ ಒಂಬತ್ತೇ. ಅದು ನವ. ಆ ನವವನ್ನೂ ನವೆಯಾಗಿಸದೆ ನವೋನವಗೊಳಿಸುವ ಸುಸಂಸ್ಕೃತ ಭಾರತೀಯ ವಿಧಾನದ ಮಕುಟಮಣಿಯಾಗಿ ಮೂಡಿದ್ದು ದ್ವಾದಶಸ್ವರಸಂಭ್ರಮಶೋಭಿಲ್ಲು ಸಪ್ತಸ್ವರ’ ಎಂದು ತ್ಯಾಗರಾಜರು ಸಂಸ್ತುತಿಸಿದ್ದು ಸಂಗೀತಸಪ್ತಕಸಾಮ್ರಾಜ್ಯದ ಮಹಾದ್ವಾರದ ದಿವ್ಯದೇಹಲಿಯಲ್ಲಿ(ಹೊಸ್ತಿಲು). ಅಲ್ಲಿಂದ ಒಳಹೊಕ್ಕರೆ ಕಿವಿಗೆ ಕಾಣುವುದೇ ದ್ವಾದಶಸ್ವರಸಂಭ್ರಮ. ಯಥಾರ್ಥಕ್ಕೂ ಅದು ಸಂ-ಭ್ರಮವೇ. ಕಲೆಯ ಮೂಲಲಕ್ಷಣವೇ ಭ್ರಮಾವರಣ ಪರಿನಿರ್ಮಾಣದ ಮೂಲಕ ರಸಾನಂದದ ಅಮೃತವರ್ಷಣ.

Dwadasha Swara Sambhrama at 12-12-12 at Chowdaiyya hall, Bengaluru

ಈ ವಿಶಿಷ್ಟ ಕಾರ್ಯಕ್ರಮದ ಕಲ್ಪನೆ, ರೂಪಣೆ, ಯೋಜನೆ, ಸಂಘಟನೆಗಳ ಮತಿಮಾತೃಕೆ ಡಾ| ರವೀಂದ್ರ ಕಾಟೋಟಿ. ಹಾರ್ಮೋನಿಯಂ ಅಥವಾ ಸಂವಾದಿನೀವಾದನದಲ್ಲಿ ತನ್ನನ್ನು ಏಕೀಕರಿಸಿಕೊಂಡು ತಮ್ಮ ಗುರು ವಾದನವಿರಿಂಚಿ ಪಂಡಿತ್ ರಾಮಭಾವು ಬಿಜಾಪುರೆಯವರ ಶ್ರದ್ಧಾಸ್ಮೃತಿಯಲ್ಲಿ ನಿರಂತರ ಸಂಗೀತದ ರಸಾನ್ನವನ್ನು ರಸಿಕರಿಗೆ ಉಣಬಡಿಸುವ ರವೀಂದ್ರ ಕಾಟೋಟಿ 12-12-12ನ್ನು ಶತಮಾನದ ಕ್ಷಣವಾಗಿ ಹಿಡಿದಿಡಬೇಕೆಂದು ಸಂಕಲ್ಪಿಸಿದ್ದರ ಫಲಿತವೇ ದ್ವಾದಶ ಸ್ವರ ಸಂಭ್ರಮ.

ಡಿಸೆಂಬರ್ ೧೨ ಪ್ರಲಯದ ಕಾಲ. ಜೋಯಿಸರ ಕವಣೆಗಾಣ್ಕೆಯ ಪ್ರಕಾರ. ಪ್ರಪಂಚದ ಯಾವುದೋ ಮೂಲೆಯಲ್ಲಿ ಪ್ರಲಯ ಆಗುತ್ತದೋ ಇಲ್ಲವೋ, ಆದರೆ ಚೌಡಯ್ಯ ಸಭಾಗೃಹದಲ್ಲಿ ಭವಿಷ್ಯವಾದಿಗಳ ಹಾರುಮಾತು ನೂರಕ್ಕೆ ನೂರು ಸತ್ಯವಾಗಿ ಪರಿಣಮಿಸಿದ್ದು ಇದೀಗ ಇತಿಹಾಸ. ಸಾವಿರಕ್ಕೂ ಮಿಕ್ಕಿ ಇಡಿಕಿರಿದ ಕೇಳುಗರ ಪಾಲಿಗೆ ಅಲ್ಲಿ ಕಾಲ ಲಯವಾಗಿತ್ತು; ದೇಶ ಲಯವಾಗಿತ್ತು, ಮನಸ್ಸೂ ಲಯವಾಗಿತ್ತು. ಸಂಗೀತವೆಂಬ ಕಾಲಮೇಘ ರಾಗವೆಂಬ ಆಲಿಗಲ್ಲುಗಳನ್ನು ಸ್ವರವೆಂಬ ಹೆಬ್ಬನಿಗಳನ್ನು ತಡೆಯಿಲ್ಲದೆ ಭೋರೆಂದು ಸುರಿಸಿ ಅಕ್ಷರಶಃ ಪ್ರಲಯವನ್ನೇ ಸೃಷ್ಟಿಸಿತ್ತು. ಲೀಯತೇ ಇತಿ ಲಯಃ  ಇದು ಲಯಶಬ್ದದ ಅಸಲೀ ಅರ್ಥ; ಅಂದರೆ ಕರಗುವಿಕೆ. ಕರಗುವುದರಲ್ಲಿ ಅಹಂಕಾರಕ್ಕೆ ತಾವಿಲ್ಲ, ಠಾವಿಲ್ಲ. ಕರಗುವುದರಲ್ಲಿ ಸಂತೋಷದ್ದೊಂದೇ ಸನ್ನಿಧಾನ. ಆನಂದದ್ದೊಂದೇ ಆಯತನ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಮಿಡಿವ ಮಧುರಾನುಭೂತಿಗೆ ಕಾರಣೀಭೂತವಾದುದು ದ್ವಾದಶಸ್ವರಸಂಭ್ರಮ ಎಂಬ ಅನ್ಯಾದೃಶ್ಯವಾದ ಸಾಂಗೀತಿಕ ಕಾರ್ಯಕ್ರಮ, ಮೆ| ಕಾಮತ್ ಅಂಡ್ ಕಾಮತ್ ಸಹಯೋಗದಲ್ಲಿ ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್ ಪ್ರಸ್ತುತಪಡಿಸಿದ ಪರಿಣಾಮರಮಣೀಯವಾದ ಸ್ವರರಾಗಸುಧಾರಸಧಾರೆ.

ಸಂಗೀತ ಕಾರ್ಯಕ್ರಮವೆಂದರೆ ಒಂದಷ್ಟು ನುಡಿತ, ಬಡಿತ, ಹಾಡು ಜಾಡೆಂಬ ಜಾಳು ಹಾದಿ ಹಿಡಿಯದೇ, ಎಲ್ಲ ದೃಷ್ಟಿಯಿಂದಲೂ ಶತಮಾನದ ದಾಖಲೆಯನಾಗಿಸಿದ್ದು ದ್ವಾದಶದ ಹಿರಿಮೆ ಗರಿಮೆ. ಕಾರ್ಯಕ್ರಮದ ನಿರೂಪಕರಾದ ಶತಾವಧಾನಿ ಡಾ. ಆರ್. ಗಣೇಶ ಉಲ್ಲೇಖಿಸಿದಂತೆ, ಕೋಗಿಲೆಯು ಪಂಚಮಸ್ವರವನ್ನು ಸಾಧಿಸುವುದಕ್ಕೆ ಎಷ್ಟು ಶತಮಾನಗಳ ಕಾಲ ರೆಕ್ಕೆಗಳನ್ನು ಕಳಕೊಂಡಿದೆಯೋ (ಪುತಿನ ಅವರ ಪದ್ಯ) ! ಒಂದೊಂದು ಸ್ವರವನ್ನೂ ಹಿಡಿದು ನಿಲ್ಲಿಸಲು, ಕಟೆಯಲು ಎಷ್ಟು ಸಾಧಕರ ಶಾರೀರ ಚಾಣದ ಪೆಟ್ಟಿಗೆ ಜರ್ಜರಿತವಾಗಿದೆಯೋ ! ಭಾರತೀಯ ಸಂಗೀತವಂತೂ ನಿರಂತರ ತಪಃಪ್ರವಾಹ. ಪ್ರವಾಹದಲ್ಲಿ ಲೀನವಾದ ತಲ್ಲೀನವಾದ ಚೇತನಕ್ಕೆ ಸ್ವಂತ ವ್ಯಕ್ತಿತ್ವವಿಲ್ಲ. ಅಂತಹ ಸಹಸ್ರಾವಧಿ ತಪಶ್ಚೇತನದ ಪ್ರತಿಭಾಪಹಲವನ್ನು ನಾವೀಗ ಯಾವುದೇ ಈತಿಬಾಧೆಗಳಿಲ್ಲದೆ ಬಿಂದಾಸಾಗಿ ಬಳಸಿಕೊಳ್ಳುತ್ತಿದ್ದೇವೆ, ಬಜಾಯಿಸಿಕೊಳ್ಳುತ್ತಿದ್ದೇವೆ, ಬೀಗುತ್ತಿದ್ದೇವೆ, ಕೆನೆಯುತ್ತಿದ್ದೇವೆ, ಕಮಾಯಿಸುತ್ತಿದ್ದೇವೆ. ಆದರೆ ಆ ಸಂಗೀತಾರ್ಷಪರಂಪರೆಯ ದಧೀಚಿಗಳ ಋಣಸಂದಾಯದ ದಾರಿ ಯಾವುದು? ಕೃತಜ್ಞತೆ ಎಂಬುದು ಭಾರತೀಯ ಸಂಸ್ಕೃತಿಯ ಮೌಲ್ಯ, ಮುಖ್ಯ ಲಕ್ಷಣ. ಅಂತರ್ಬಹಿಶ್ಚ ಕೃತಜ್ಞರಾಗಿರಬೇಕಾದ್ದು ಮನುಷ್ಯ ಕನಿಷ್ಠ ಕರ್ತವ್ಯ. ಅದನ್ನು ನೆನಪಿಟ್ಟು ಸಲ್ಲಿಸುವುದರಲ್ಲಿ ಕಾಟೋಟಿ ಕೈಂಕರ್ಯಕ್ಕೆ ಕೈಹಚ್ಚಿದ್ದಾರೆ ದ್ವಾದಶದಲ್ಲಿ. ಹನ್ನೆರಡು ಸ್ವರಗಳನ್ನು ಪ್ರತಿನಿಧಿಸಿದ ಹನ್ನೆರಡು ರಾಗಗಳನ್ನು ಆಯಾ ರಾಗನಿರ್ವಹಣದಲ್ಲಿ ನೀಲಕಂಠ(ಈಶ್ವರ)ರೆನಿಸಿಕೊಂಡ ರಾಗರ್ಷಿಗಳಿಗೆ ಅರ್ಪಿಸಿ ಪರಂಪರೆಯನ್ನು ಧನ್ಯವಾಗಿಸಿದ್ದಾರೆ.

ರವೀಂದ್ರ ಕಾಟೋಟಿಯವರು ದ್ವಾದಶದಲ್ಲಿ ಗಾಳಿಯಲ್ಲಿ ಕೈಯಾಡಿಸಿ ಗುಂಬಳವನ್ನು ಸೃಷ್ಟಿಸಿದ್ದೂ ಅಲ್ಲ; ತೋರಿಸಿದ್ದೂ ಅಲ್ಲ. ಸಂಗೀತಕಲಾಭೂಮಿಯಲ್ಲಿ ಹೊಸತಳಿಯನ್ನು ತಯಾರಿಸಲು ತೆರಪಿಲ್ಲದಷ್ಟು ಹಿಂದಿನ ಹಿರಿಯರು ಮಾಡಿದ ಕೃಷಿಸಂತಾನವೇ ಗೋದಾಮಿನಲ್ಲಿ ಜಮಾಯಿಸಿದ್ದೇ ಇದೆಯಲ್ಲ ! ಅದರ ವಿನಿಯೋಗ ಅಷ್ಟಿಷ್ಟು ಆದರೆ ಅದೇ ಭಾಗ್ಯ. ಹಿಡಿಯಲ್ಲಿರುವುದನ್ನು ಒಪ್ಪವಾಗಿ ಓರಣಗೊಳಿಸಿದ್ದು ಕಾಟೋಟಿ ಕಾಯಕ. ಅದೊಂದು ಕುಸುರಿಕೆಲಸ. ಅದನ್ನು ಅಂದಗೊಳಿಸಿ ಅಂದಣವೇರಿಸಲು ಕುಶಲ ಕಲೆಗಾರರನ್ನು ಕಲೆಹಾಕಿ ಚೌಕಟ್ಟಿಗೊಳಪಡಿಸಿ ಕಣ್ಣಾಪಿನಲ್ಲಿ ಕೈವಾರಿಸಿದ್ದು ಕಾಟೋಟಿ.

ದ್ವಾದಶ ಸ್ವರ ಸಂಭ್ರಮದ ಕಲ್ಪನೆ ಕಮನೀಯವಾದುದು ಸ,ಪ-ಪ್ರಕೃತಿಸ್ವರದ ಜೊತೆಗೆ ಕೋಮಲ ಶುದ್ಧರೂಪದ ರಿಗಮಧನಿಯ ಐದು ವಿಕೃತಿ ಸ್ವರಗಳು. ಒಟ್ಟು ಹನ್ನೆರಡು ಸ್ವರ ಪ್ರತಿಯೊಂದು ರಾಗಕ್ಕೂ ಜೀವಸ್ವರವಾಗಿ ಇದ್ದೇ ಇರುತ್ತದೆಯಷ್ಟೇ ! ಅದನ್ನೇ ಜೀವಾಳವಾಗಿ ಮಾಡಿಕೊಂಡು ಹನ್ನೆರಡೂ ಸ್ವರಗಳ ಜೀವರಾಗವನ್ನು ಹೆಕ್ಕಿ ದ್ವಾದಶವನ್ನು ನೇಯಲಾಗಿತ್ತು. ಪ್ರತಿಯೊಂದು ರಾಗವನ್ನೂ ಪ್ರಾತಃಸ್ಮರಣೀಯರಾದ ಸಾಧಕಮನೀಷಿಗಳಿಗೆ ಅರ್ಪಿಸಲಾಗಿತ್ತು. ರಾಗನಿರ್ವಹಣೆಯನ್ನು ಗಾಯನ ಹಾಗು ವಾದನ ಎರಡರಲ್ಲೂ ಒಂಟಿಯಾಗಿಯೂ, ಜಂಟಿಯಾಗಿಯೂ ಯೋಜಿಸಲಾಗಿತ್ತು. ಇದರಿಂದ ಆಯಾ ಕಲಾವಿದರಿಗೆ ಸ್ವತಂತ್ರಕೌಶಲಕ್ಕೂ ಮುಕ್ತ ಅವಕಾಶ ಲಭಿಸಿ ರಸಿಕರ ಆಸ್ವಾದದ ಮಿರುಪು ಹುರುಪು ಹೆಚ್ಚಿತು.

ಸ್ವರ-ರಾಗ-ಅರ್ಪಣದ ಅನುಕ್ರಮ ಹೀಗಿತ್ತು.

೧.    ಕೋಮಲ ರಿಷಭ- ಮಾರ್ವಶ್ರೀರಾಗ- ಭೀಮಸೇನ ಜೋಷಿ

೨.    ಶುದ್ಧ ರಿಷಭ- ದೇಶ್ ರಾಗ- ರಾಮಭಾವು ಬಿಜಾಪುರೆ

೩.    ಕೋಮಲಗಾಂಧಾರ- ಪೀಲು- ಬಡೇ ಗುಲಾಂ ಅಲಿಖಾನ್

೪.    ಶುದ್ಧ ಗಾಂಧಾರ- ಕಲಾವತಿ – ರಾಮರಾವ್ ನಾಯಕ್

೫.    ಪಂಚಮ- ಕೀರವಾಣಿ- ರವಿಶಂಕರ್

೬.    ಕೋಮಲದೈವತ- ಮಾಲ್‌ಕೌಂಸ್- ಬಿಸ್ಮಿಲ್ಲಾಖಾನ್

೭.    ಶುದ್ಧದೈವತ- ಸೋಹನಿ- ಕುಮಾರಗಂಧರ್ವ

೮.    ಕೋಮಲ ನಿಷಾದ- ಮಧುಕಂಸ್- ಮಲ್ಲಿಕಾರ್ಜುನ ಮನ್ಸೂರ್

೯.    ಶುದ್ಧನಿಷಾದ- ಶಂಕರ- ಗಂಗೂಬಾಯಿ ಹಾನಗಲ್

೧೦.    ಷಡ್ಜ- ಭೈರವಿ- ಅಬ್ದುಲ್ ಕರೀಂಖಾನ್

ಗಾಯನದಲ್ಲಿ ಪೂರ್ಣಿಮಾಭಟ್ ಕುಲಕರ್ಣಿ, ಸಂಗೀತಾಕಟ್ಟಿ ಕುಲಕರ್ಣಿ, ಕೃಷ್ಣೇಂದ್ರ ವಾಡೇಕರ್, ಹಾರ್ಮೋನಿಯಂನಲ್ಲಿ ರವೀಂದ್ರ ಕಾಟೋಟಿ, ಕೊಳಲು ಪ್ರವೀಣ್ ಗೋಡ್ಕಿಂಡಿ, ಗಿಟಾರ್ ಪ್ರಕಾಶ್ ಸೊಂಟಕ್ಕಿ, ತಬಲಾ ಉದಯರಾಜ್ ಕರ್ಪೂರ್, ಪಕ್ವಾಜ್ ಗುರುಮೂರ್ತಿ ವೈದ್ಯ, ರಿದಂಪ್ಯಾಡ್ ಮಧುಸೂದನ್, ಕೀಬೋರ್ಡ್ ಸಂಗೀತ ಥಾಮಸ್ ಪಾಲುಗೊಂಡಿದ್ದರು. ಪಾಲುಗೊಂಡಿದ್ದರು ಎಂಬುದು ಬರೇ ವಾಕ್ಯಪೂರಣದ ಕ್ರಿಯಾಪದವಲ್ಲ. ಸಂಗೀತದ ಸಕ್ಕರೆಸವಿಗೆ ಹಾಲು(ಪಾಲು) ಮೈಯೊಡ್ಡುವಂತೆ ತೊಡಗಿಸಿಕೊಂಡಿದ್ದರು. ಪ್ರತಿಯೊಂದು ರಾಗದ ಕ್ರಿಯಾಕಲಾಪ ಮುಗಿಯುತ್ತಿದ್ದಂತೆ ಚಿತ್ರಕಲವಿದ ಗುರುದಾಸ ಶೆಣೈ ಆಯಾರಾಗದ ಭಾವವರ್ಣವನ್ನು ವರ್ಣಭಾವದಲ್ಲಿ ಭಿತ್ತಿಯಲ್ಲಿ ಮೂಡಿಸುತ್ತಿದ್ದರು.

ಒಂದೇ ಪದಾರ್ಥವನ್ನು ಮಾಡಿ ಇಡೀ ಊಟ ಮುಗಿಸುವ ಕಾಷ್ಠವ್ರತ ಈಗಿನ ದಿನಮಾನಕ್ಕೆ ಒಗ್ಗುವಂತಹದ್ದಲ್ಲ. ಐಟಮ್ಮು- ವೆರೈಟಿ ಎಂದು ತಿನಿಸಿನಿಂದ ಮುನಿಸಿನವರೆಗೂ ಆಕ್ರಮಿಸಿರುವ ಕಾಲ ಇದು. ಹೋಟೆಲಿಗೆ ಹೋದ ತಕ್ಷಣವೇ ನಿರೀಕ್ಷಿಸುವುದೇ ಮೆನುಕಾರ್ಡನ್ನು. ಅದರಲ್ಲಿ ವೈವಿಧ್ಯ ಇರಬೇಕು; ಅದನ್ನು ಆಸ್ವಾದಿಸಲೂಬೇಕು. ಆಗ ಪರಿಮಾಣದ ಜೊತೆಗೆ ಗುಣವೂ, ಗಮನಾರ್ಹವೂ, ಗ್ರಾಹ್ಯವೂ ಇರಬೇಕಾಗುವುದು ಅನಿವಾರ್ಯ. ಇದೇ ನ್ಯಾಯ ದ್ವಾದಶಕ್ಕೂ ಅನ್ವೇಯ. ಇರುವ ಮೂರು ತಾಸು ಅವಧಿಯಲ್ಲಿ ಹನ್ನೆರಡು ರಾಗದ ಜಾತಕಫಲಭಾಗವನ್ನು ಪ್ರೇಕ್ಷಕರಿಗೆ ಹಿತವಾಗುವಂತೆ ಒಪ್ಪಿಸಬೇಕೆಂದರೆ ಅದು ಸುಲಭಸಾಧ್ಯವಾದ ಸಾಹಸವಲ್ಲ. ಕನ್ನಡಿಯಲ್ಲಿ ಪಟ್ಟದಾನೆ ತೋರಿಸುವ ಜಾಣು ಇದು. ಆಚಾರವೂ ಕೆಡಬಾರದು; ಆಕಾರವೂ ಕೆಡಬಾರದು, ಶಾಸ್ತ್ರವೂ ಉಳಿಯಬೇಕು, ಪ್ರಯೋಗವೂ ಬೆಳೆಯಬೇಕು; ಈ ರೀತಿಯ ವಿನಯವಂತ ಆಶಯದಿಂದ ದ್ವಾದಶ ರೂಪುಗೊಂಡದ್ದರಿಂದ ಸರಿಸುಮಾರು ಹದಿನೈದು ನಿಮಿಷಗಳ ಜೀವಿಕೆ ಒಂದೊಂದು ರಾಗಕ್ಕೂ ಸಂದಿದೆ. ಆ ಕಾಲಮಿತಿಯೊಳಗೆ ಬೆಡಗು ಬಿನ್ನಾಣ ಬಿಬ್ಬೋಕ ಬೆರಗು ಎಲ್ಲವನ್ನೂ ಬಂದೀಶ್‌ಗಳೊಂದಿಗೆ ವಾರೆವ್ಹಾ ಎನ್ನುವಂತೆ ಅಷ್ಟೂ ರಾಗಗಳನ್ನು ಕಾಣಿಸಿದ್ದು, ಉತ್ತರಾದಿಪದ್ಧತಿಯ ವಿಲಂಬಮಾನಕ್ಕೆ ಹೋಲಿಸಿದರೆ ಸರ್ವಥಾ ಪ್ರಶಂಸಾರ್ಹ.

ದ್ವಾದಶ ಸ್ವರ ಸಂಭ್ರಮ 12-12-12

ದ್ರುತಗತಿಯ ರಾಗಗಳ ಓಟ ಪ್ರೇಕ್ಷಕರಿಗೂ ಪ್ರಿಯವಾಗುತ್ತಿತ್ತು. ಅದರಲ್ಲೂ ಗಾಯನ ಹಾಗು ವಾದನಗಳ ಚಾಣಾಕ್ಷ ಅನುಕ್ರಮಣಿಕೆ ಸಭಾಸದಸರಿಗೆ ಏಕತಾನತೆಯನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಎಲ್ಲ ಕಲಾವಿದರ ರಾಗ-ಕೃತಿಯ ಪ್ರಸ್ತುತಿ ಒಬ್ಬರಿಗಿಂತ ಒಬ್ಬರದು ಒಂದು ಕೈಮೇಲೆಂದು ಅನಿಸುವಂತೆ ಒಟ್ಟು ಕಚೇರಿ ಕಲಾಕೋಶವೇ ಆಗಿತ್ತು. ಪರಸ್ಪರ ತುಲನೆಗೆ ಅವಕಾಶ ಕೊಡದಷ್ಟೂ ಬಿಗಿಯಾಗಿ ರಾಗಯಾನ ಸಾಗಿತ್ತು. ಗಮನೀಯ ಅಂಶವೆಂದರೆ ಆಯಾ ವಾದನದ ಜಾಯಮಾನಕ್ಕೆ ಅನುಗುಣವಾಗಿ ಇರುವ ಕ್ಷಿಪ್ರ ಅವಧಿಯಲ್ಲಿ ರಾಗಗಳನ್ನು ತಾನಾದಿ ಕಲಾಕ್ರಿಯೆಗಳ ಮೂಲಕ ಕಲಾವಿದರು ರೂಪಿಸುತ್ತಿದ್ದರು. ಹಾಗಾಗಿ ಸಂಗೀತದ ಹೃದಯವೆನಿಸುವ ಮಾಧುರ್ಯಕ್ಕೆ ಎಲ್ಲೂ ಮುಕ್ಕು ಮುರುಕಲೇ ಇಲ್ಲ. ಅದು ವಿಲಂಬದಲ್ಲಿರಲಿ, ಮಧ್ಯಮದ್ರುತದಲ್ಲಿರಲಿ, ಅತಿದ್ರುತದಲ್ಲಿರಲಿ ಶ್ರಾವಣಮಧುರತೆ ನಿರಂತರವಾಹಿನಿಯಾಗಿದ್ದುದು ಆಯೋಜನಕುಶಲತೆ ಸದ್ಯಃಸಾಕ್ಷಿಯಾಗಿತ್ತು. ಗಾಯನ-ವಾದನದ ಸಮಾಕಲನದಲ್ಲೂ ಈ ಸಮರಸತೆಯ ರುಚಿಗೆಡಲಿಲ್ಲ. ಓ ಇದೊಂದು ಇರೋದು ಬೇಡಿತ್ತುಅನ್ನುವ ಯಾವ ಕ್ಷಣವೂ ಮೂರೂ ಗಂಟೆಯಲ್ಲಿ ಇಣುಕಲಿಲ್ಲ.

ಇಡೀ ದ್ವಾದಶಸ್ವರಸಂಭಮದ ಕಲಾಭಿತ್ತಿಗೆ ಅನಿರೀಕ್ಷಿತ ಎಂಬಂತೆ ಸಾಹಿತ್ಯಗಾಂಭೀರ್ಯದ ವಾಚಿಕನಿರೂಪಣೆಯ ಚೌಕಟ್ಟು ಸೇರಿ ಒಟ್ಟು ರಂಗದ ರಂಗೇ ಉಜ್ವಲವಾಗಿ ಕಂಗೊಳಿಸಲಿಕ್ಕೆ ಕಾರಣರಾದವರು ಶತಾವಧಾನಿ ಡಾ. ಆರ್. ಗಣೇಶ್. ಸಾಹಿತ್ಯಭಾಗವನ್ನು ಹೆಚ್ಚು ತಾಳಿಕೊಳ್ಳದ ಗುಣದ ಸಂಗೀತಕ್ಕೆ ಇಷ್ಟಾದರೂ ಮಾತಿನ ಮಾಲೆ ಇದ್ದರೆ ಚೆನ್ನಕ್ಕೂ ಚೆನ್ನ ಎನ್ನುವಂತೆ ಗಣೇಶರು ಆದ್ಯಂತ ಮಾತಿನ ಸೋನೆಮಳೆ ಹನಿಸಿ ಸಹೃದಯಹೃದಯಾಹ್ಲಾದನಕ್ಕೆ ಇಂಬುಗೊಟ್ಟರು. ಒಂದು ನಿಮೇಷಕಾಲವನ್ನೂ ವ್ಯರ್ಥ ಮಾಡದೇ- ಶ್ರೂಯತೇ ಇತಿಶ್ರುತಿಃಸ್ವತೋ ರಾಜಂತೇ ಇತಿ ಸ್ವರಾಃ -ರಂಜನಾತ್ ರಾಗಃ- ಷಟ್ ಜಾಯಂತೇ ಇತಿ ಷಡ್ಜಃ -ಹೀಗೆ ಶಾಸ್ತ್ರೀಯವಾಗಿ ಶಬ್ದನಿರ್ವಚನದೊಂದಿಗೆ ಸಂಗೀತಶಾಸ್ತ್ರವನ್ನು ಪರಿಚಯಿಸುತ್ತ, ಭಾರತೀಯ ಸೃಷ್ಟಿ-ದೃಷ್ಟಿಯನ್ನು ಪುಷ್ಟೀಕರಿಸುತ್ತ ನಮ್ಮ ಪರಂಪರೆಯ ಬಗ್ಗೆ ಅಲ್ಲಲ್ಲೇ ಹೆಮ್ಮೆಪಡುವಂತೆ ಸೋದಾಹರಣವಾಗಿ ವಿವರಿಸುತ್ತ, ಭಾರತೀಯ ಸಂಗೀತದ ಮೂಲಕ ಅರಳಿದ ಸಂಸ್ಕೃತಿಯ ಹೆಜ್ಜೆಗುರುತನ್ನು ತೋರಿಸುತ್ತ, ಸಂಗೀತಶಾಸ್ತ್ರಗ್ರಂಥಗಳ ಉಲ್ಲೇಖಗಳ ಮೂಲಕ ಭಾರತದಲ್ಲಿ ನಡೆದ ಸಂಗೀತವಿಷಯಕವಾದ ಗಂಭೀರಶೋಧ ಚರ್ಚೆಗಳನ್ನು ಮಂಡಿಸುತ್ತ ಇಷ್ಟಕ್ಕೂ ರಾಗಾಸ್ವಾದಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಅರಿವನ್ನು ಹರಹುತ್ತ, ಸಂಗೀತಶ್ರವಣದಷ್ಟೇ ಕುತೂಹಲವನ್ನು ತಮ್ಮ ನಿರೂಪಣದಲ್ಲಿ ಪ್ರೇಕ್ಷಕರು ನಿರೀಕ್ಷಿಸುವಂತೆ ಉದ್ಬೋಧಕವಾಗಿ ವಾಣೀವಿಭವವನ್ನು ಗಣೇಶರು ತೆರೆದಿಟ್ಟದ್ದು ಕಾರ್ಯಕ್ರಮಕ್ಕೊಂದು ಹೊನ್ನಗರಿ.

೧೨-೧೨-೧೨ರ ನೆವದಲ್ಲಿ ದ್ವಾದಶ ಪರಿಕಲ್ಪನೆಯಲ್ಲಿ ನಾದಗಂಗಾನಿರ್ಝರಣಿಯನ್ನು ಸಾಕ್ಷಾತ್ಕರಿಸಿದ ರವೀಂದ್ರಕಾಟೋಟಿಯ ಭಾಗೀರಥಪ್ರಯತ್ನ ಇತ್ಯೋಪತಿಶಯವಾಗಿ ಸಂಗೀತರಸಪಾನವನ್ನು ಸಹೃದಯಲೋಕಕ್ಕೆ ಮಾಡಿಸುತ್ತಲೇ ಇರಲಿ ಎಂಬುದು ರಸಿಕಜಗತ್ತಿನ ನಿರೀಕ್ಷೆ ಹಾರೈಕೆ.

8 Responses to ಪ್ರತಿರಾಗ ರಸೋದಯದ ‘ಶತಮಾನದ ಸಂಗೀತ’

  1. Shyam

    ದ್ವಾದಶಸ್ವರಸಂಭ್ರಮ ಅಧ್ಭುತವಾಗಿತ್ತು..!!

  2. sumangala rathnakar rao

    Vagdeviya sampurna krupege paathraraagiruva korgiyavara vimarshe athyutthma pada punjagala hooranada holigeye sari.karyakramada prathyksha saakshigalu dhanyaru.dr.ganesh ranthaha thapasvivigala maathella sangrahayogya rathnagale aagirutthave.

  3. ಮನೋರಮಾ.ಬಿ.ಎನ್

    so called ವಿಮರ್ಶಕರು ಒಮ್ಮೆಯಾದರೂ ಇದನ್ನು ಓದಿ ಬರೆಯುವ ರೀತಿ/ನೀತಿಯನ್ನು ರೂಢಿಸಿಕೊಳ್ಳಬೇಕು ಎನ್ನುವಂತಿದೆ… ವಿಮರ್ಶೆ ಅಂದರೆ ಹೀಗಿರಬೇಕು ಅನ್ನಿಸುವ ಮಟ್ಟಿಗೆ ಕಾವ್ಯಗುಣ ವಿಶೇಷತೆಯಿಂದ ತುಂಬಿ ಮತ್ತೊಮ್ಮೆ ಮಗದೊಮ್ಮೆ ಓದಬೇಕೆನಿಸುತ್ತದೆ. ’ತುಂಟ’ರೆನಿಸಿಕೊಂಡ ಕೊರ್ಗಿಯವರ ವಿಮರ್ಶೆಗೆ Hats-off..

  4. ರವೀಂದ್ರ ಕಾಟೋಟಿ

    Team dwadasha is honoured with this beautiful write up. won’t like to bracket it into critique. it has its own independent personality.

  5. Aditi Deshpande

    Article tumba chennagide .. karyakrama attend madalagalilla.. wish I could…:)

  6. ನಂದ ಕಿಶೋರ ಬೀರಂತಡ್ಕ

    ಬಹಳ ಚೆನ್ನಾದ ಬರಹ 🙂

  7. Shankar Kulakarni

    It was an awesome programme and a great write up. Katoti Sir, you have raised our expectations on you. Looking forward to some great things in future.

  8. Manjunatha. GS

    In the list of ragas, two (madyama swara) are missing, otherwise the article is ( if it is called as critic/review) correct to our experience on live through Internet. Nice work by Shree Korgi Shankaranaryana Upadhyaya.

Leave a Reply

*

code