Author: ಮನೋರಮಾ. ಬಿ.ಎನ್
ನಾವು ಸಂಗೀತದವರು, ಹಾಡುವ ಪ್ರತೀ ಕೃತಿಗೂ ಮನೋಧರ್ಮಕ್ಕನುಗುಣವಾಗಿ ಸ್ವಂತ ಸ್ವರ-ಪ್ರಸ್ತಾರ, ತನಿ-ಆವರ್ತನಗಳನ್ನು ಹೊಸೆದು ಹಾಡಬಲ್ಲೆವು; ನುಡಿಸಬಲ್ಲೆವು. ಆದರೆ ಇದೇ ಸಾಧ್ಯತೆ ಭರತನಾಟ್ಯದಂತಹ ನೃತ್ಯಕ್ರಮದಲ್ಲೇಕಿಲ್ಲ? ಸ್ವ ಅಭ್ಯಾಸ ಮಾಡಿಕೊಳ್ಳುವುದಾದರೆ ಪರವಾಗಿಲ್ಲ. ಆದರೆ ಮಗ್ಗಿ ಉರುಹೊಡೆದಂತೆ ರಿಹರ್ಸಲ್‌ಗಳು ಮಾಡಿ, ‘ಫರ್ಪೆಕ್ಟ್’ ಆಗಿಯೇ ರಂಗಕ್ಕೇರಬೇಕೆಂದರೆ ಅದರ ಆಯುಷ್ಯ ಎಷ್ಟು? ನೃತ್ಯಕ್ರಮಕ್ಕೆ ಪಕ್ಕವಾದ್ಯದವರ ಸಾಂಗತ್ಯದ ಹಿನ್ನೆಲೆಯಲ್ಲಿ ಒಂದಷ್ಟು ಪೂರ್ವ ತಯಾರಿಗಳಿರಬೇಕೇನೋ ನಿಜ. ಸಂಗೀತದವರಾಗಿ ನಾವೂ ಮಾಡುತ್ತೇವೆ. ಆದರೆ ಕಚೇರಿಯ ಹಂತಹಂತಕ್ಕೂ ಒಂದಿಷ್ಟು ಬದಲಾವಣೆಯಿಲ್ಲದೆ ಕಂಠಪಾಠ ಮಾಡಿಕೊಂಡು ಒಂದೇ ನೃತ್ಯವನ್ನು ಜೀವನದುದ್ದಕ್ಕೂ ಪ್ರಾಕ್ಟೀಸ್, ರಿಹರ್ಸಲ್ ಮಾಡುವುದಾದರೆ ಏನಿದೆ ಸ್ವಾರಸ್ಯ? ‘ಮಕ್ಕಳಿಗೆ ಸುಲಭವಾಗಬೇಕು’ ಎಂಬ ಕಾರಣ ಕೊಡುವುದಾದರೆ ಯಾಕೆ ಪೂರ್ಣ ಕಲಿಯುವ ಮುಂಚೆಯೇ ರಂಗಕ್ಕೆ ಹತ್ತಿಸಬೇಕು? ಗ್ರೂಪ್‌ನಲ್ಲಿ ಮಾಡುವುದಾದರೆ ಏನೋ ಪರವಾಗಿಲ್ಲವೆನ್ನಬಹುದು. ಆದರೆ ಏಕವ್ಯಕ್ತಿಯ ನೃತ್ಯ ಪ್ರದರ್ಶನಕ್ಕೂ ಇದೇ ಜಾಯಮಾನವೆಂದರೆ ಹ್ಯಾಗೆ? ಅದಿರಲಿ, ಕಲಿಯುವಾಗ ಅಥವಾ ಕಲಿಸುವಾಗಲೂ ಶಿಕ್ಷಕರು, ಗುರುಗಳು ಇದೇ ವರ್ತನೆ ತೋರಿಸುತ್ತಾರಲ್ಲಾ! ಸಿದ್ಧ ಮಾದರಿಯ ಬೊಂಬೆಗಳನ್ನು ಮಾಡಿಡುವುದಾದರೆ ಕಲೆಗೆ ಏನು ಪ್ರಯೋಜನ? ಕೊರಿಯೋಗ್ರಫಿ ಎಂದರೆ ಇದೇನಾ? ಸಹೃದಯ ರಸಿಕನಿಗೆ ಸಿಗುವ ಕಲಾಸ್ವಾದವೇನು? ಸರಿ, ಕಲಾವಿದನಿಗೂ ‘ಬೋರ್’ ಹೊಡೆಯುವುದಿಲ್ಲವೇ? ಅಷ್ಟಕ್ಕೂ ರಂಗದಲ್ಲೇ ಮನೋಧರ್ಮಕ್ಕನುಗುಣವಾದ ಕಲೆ ಸೃಷ್ಟಿ ಮಾಡುವ ಸಾಮರ್ಥ್ಯವಿಲ್ಲದವನು ಕಲಾವಿದ ಹೇಗಾದಾನು? ನೋಡಹೊರಟರೆ ನಮ್ಮದೂ ಶಾಸ್ತ್ರೀಯ; ನಿಮ್ಮದೂ ಶಾಸ್ತ್ರೀಯ; ಹೀಗಿದಾಗ್ಯೂ ಏಕೆ ಈ ಅಂತರ? ’ ಎಂದು ಸ್ನೇಹಿತರ ಮಡದಿ ಪ್ರಶ್ನೆ ಮೇಲೆ ಪ್ರಶ್ನೆ ಮುಂದಿಟ್ಟಾಗ ಎಲ್ಲಿಲ್ಲದ ಕಸಿವಿಸಿ.
ಏನು ಹೇಳೋಣ? ನಮ್ಮ ಕ್ಷೇತ್ರದ ಸತ್ಯಾಸತ್ಯತೆ, ಸಾಧ್ಯಾಸಾಧ್ಯತೆ, ಪ್ರಸ್ತುತ ಕಾಲಘಟ್ಟದ ಅತಿರೇಕ-ಉದಾಸೀನಗಳ ಬಗ್ಗೆ ಅರಿವಿದ್ದೂ ಬಾಯಿ ಮುಚ್ಚಿಕೊಂಡು ಪೆಚ್ಚುಪೆಚ್ಚಾಗಿ ನಗೆ ಬೀರುವ ದುಃಸ್ಥಿತಿ ಎನ್ನಬೇಕಷ್ಟೇ! ಬಾಯಿಬಿಟ್ಟರೆ ಬಣ್ಣಗೇಡು ಎಂಬುದು ಅಂದಿಗೆ ಅಕ್ಷರಶಃ ಅನ್ನಿಸಿತ್ತು. ಎಲ್ಲಿ ನೋಡಿದರಲ್ಲಿ ರಿಹರ್ಸಲ್, ಪ್ರಾಕ್ಟೀಸ್ ಎಂಬ ಕ್ರಮವತ್ತಾದ ಕಲಾಸಂಸ್ಕಾರದಲ್ಲಿ ರಸಯಾತ್ರೆಯ ಶವಸಂಸ್ಕಾರವೂ ಆಗುತ್ತಿದೆ ಎಂಬುದನ್ನು ಬೇರೆ ಹೇಳಬೇಕಿರಲಿಲ್ಲ.
ಅದೇನೇ ಪೊಳ್ಳು ಇತಿಹಾಸಗಳನ್ನು ನೇಯ್ದರೂ; ಕರ್ನಾಟಕ ಸಂಗೀತದಂತಹ ಅವಿಚ್ಛಿನ್ನ ಪರಂಪರೆಯ ಆಧಾರದಲ್ಲೇ ಮೈತಳೆದದ್ದು ಇಂದು ನಾವು ಕಾಣುತ್ತಿರುವ ದೇಸೀ ಸ್ಪರ್ಶದ ಭರತನಾಟ್ಯ ಎಂಬುದು ನಿರ್ವಿವಾದ. ಆದರೆ ಮಾತೃಬೇರಿನ ಮೂಲಾಂಶಗಳನ್ನೇ ಅರಿಯಲು ವಿಫಲವಾಗಿದೆಯೆಂದರೆ ಅಂಧಾನುಕರಣೆ ಎಲ್ಲಿಂದ, ಯಾವ ಕಾಲದಿಂದ, ಎಷ್ಟರಮಟಿಗೆ ವ್ಯಾಪಿಸಿರಬೇಕು ಎಂಬುದೇ ಒಂದು ಸಂಶೋಧನೆಯ ವಸ್ತುವಾಗುತ್ತದೆ. ಸಿದ್ಧಸೂತ್ರಗಳ ಚೌಕಟ್ಟಿನಲ್ಲೇ ಬದುಕುವ ಮಂದಿ ವಿದ್ಯಾರ್ಥಿಗಳಿಂದ ಹಿಡಿದು ಸಹೃದಯರ ವರೆಗೂ ‘ಇದೇ ಸತ್ಯ’ವೆಂಬ ಮುದ್ರೆಯೊತ್ತುತ್ತಿದ್ದಾರೆ. ಫಲವಾಗಿಯೇ ಹುಟ್ಟಿಕೊಂಡದ್ದು ಕೊರಿಯೋಗ್ರಫಿಯ ಮೂಲಾಂಶಗಳನ್ನೇ ಮರೆಸುವ, ವ್ಯುತ್ಪತ್ತಿಯ ಚಿಂತನೆಗಳೇ ಅರಳದ ‘ಡ್ಯಾನ್ಸ್ ಐಟಂ’ ಕಲಿಯುವ ಬಿಜ್‌ನೆಸ್.
ಅಷ್ಟಕ್ಕೂ ಇದು ಭರತನಾಟ್ಯದ್ದೊಂದೇ ಮಾತಾಗಿದ್ದರೆ ಪ್ರಾರಬ್ಧವೆಂದು ಹಳಿದು ಸುಮ್ಮನಿರಬಹುದಿತ್ತು. ದುರಂತವೆಂದರೆ ಒಡಿಸ್ಸಿ, ಕೂಚಿಪುಡಿ, ಕಥಕ್ ಮುಂತಾದ ನೃತ್ಯಪದ್ಧತಿಯಾದ್ಯಂತ ಇದೇ ಮಾದರಿಯ ಬೆಂಬಿಡದೆ ಹಿಂಬಾಲಿಸುತ್ತಿದೆ.
ಒಂದಂತೂ ನಿಜ. ಕಲೆಯ ಚಲನೆಯುದ್ದಕ್ಕೂ ‘ಪರಂಪರೆ, ಸಂಪ್ರದಾಯ’ ಎಂಬೆಲ್ಲಾ ದೊಡ್ಡ ಶಬ್ದಗಳ ಎರವಲು ಪಡೆದು ಪ್ರಾಥಮಿಕ ಹಂತದ ಅಭ್ಯಾಸ ಮಾದರಿಯನ್ನೇ ರಂಗಪ್ರದರ್ಶನಕ್ಕೂ ಹೆಮ್ಮೆಯಿಂದ ಚಾಚೂ ತಪ್ಪದೆ ವಿಸ್ತರಿಸುತ್ತಲೇ ಬಂದಿದ್ದೇವೆ.‘ಇಂದಿನ ಭರಾಟೆಯ ಕಾಲಮಾನಕ್ಕೆ ಪಕ್ಕವಾದ್ಯದವರೊಂದಿಗೆ ಸಾಂಗತ್ಯ ಹೊಂದಬೇಕಾದರೆ ತಕ್ಕಮಟ್ಟಿನ ಪೂರ್ವ ತಯಾರಿ ನಿರೀಕ್ಷಿತ, ಇಲ್ಲವೇ ನೃತ್ಯಕ್ರಮವೇ ಬಿದ್ದುಹೋಗುತ್ತದೆ’ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಗಿಣಿಪಾಠ ಒಪ್ಪಿಸುವುದೇ ಒಂದು ಪ್ರತಿಷ್ಠೆಯ, ಹೆಚ್ಚುಗಾರಿಕೆಯ ವಿಷಯ ಎಂಬ ಸೋಗು ಹಾಕುತ್ತಿದ್ದೇವೆ. ಅಷ್ಟೇ ಏಕೆ? ಸಂಗೀತ ಮತ್ತು ವಾದ್ಯದ ತನಿ ಆವರ್ತನಕ್ಕೆ ನರ್ತಿಸಲ್ಪಡುವ ಆಶುನೃತ್ಯಗಳೆಂಬವೂ ಮಾಡುವುದೂ ಮೂಗಿಗೆತುಪ್ಪ ಹಚ್ಚುವ ಕಾಯಕವನ್ನೇ! ವಂಚನೆ ಎಸಗುತ್ತಿರುವುದು ಯಾರಿಗೆ- ನಮಗೋ? ಕಲೆಗೋ? ಸಹೃದಯರಿಗೋ?
ಕಲೆಯನ್ನೇ ಜೀವನೋಪಾಯವಾಗಿಸಿಕೊಂಡು ಹೊಟ್ಟೆ ಹೊರೆಯುತ್ತಿರುವವರಿಗಾದರೆ ನಾಟ್ಯಸರಸ್ವತಿಯ ಕ್ಷಮೆಯಿರಬಹುದು. ಆದರೆ ಹೆಸರಿನ ಚಪಲಕ್ಕೆ, ಪ್ರತಿಷ್ಟೆಯ ಸೋಗಲಾಡಿತನಕ್ಕೆ ವೇಷ ಹಾಕಿಕೊಂಡು ದಂಧೆಯಾಗಿಸುವವರಿಗೆ…? ಒಟ್ಟಿನಲ್ಲಿ ಶಿಕ್ಷಣದ ತಪ್ಪುಗಳು ಶತಮಾನದುದ್ದಕ್ಕೂ ಅನಾಥಪ್ರೇತಗಳಾಗಿ ತೆವಳುವ ಈ ಕಾಲಕ್ಕೆ ಪ್ರತಿಯೊಬ್ಬರದೂ ಒಂದಲ್ಲ ಒಂದು ಕೊಡುಗೆಯೇ ! ಈ ದಂಧೆಯ ಸಾಲಿಗೆ ‘ರಿಹರ್ಸಲ್’ ಎಂಬ ಪೂರ್ವಾಭ್ಯಾಸದ ‘ಸಮಯ’ ಸಂಪಾದನೆ ಕೂಡಾ ಹೊರತಲ್ಲ.
ರಸಪ್ರಜ್ಞೆ ಇಲ್ಲದಿದ್ದರೆ, ಅದಕ್ಕೆ ಪೂರಕ-ಪೋಷಕವಾದ ಆಂಗಿಕಾದಿ ಅಭಿನಯಗಳಿಲ್ಲದಿದ್ದರೆ ಮನೋಧರ್ಮವೆಂಬುದು ಕನಸು. ಆದರೆ ಸಂಗೀತದ ಮನೋಧರ್ಮ ಪ್ರಜ್ಞೆ ಅಪೇಕ್ಷಿಸುವುದು ಒತ್ತಟ್ಟಿಗಿರಲಿ; ಕನಿಷ್ಠಪಕ್ಷ ಹೆಜ್ಜೆಯ ಹದ ತಪ್ಪಿದರೂ; ತಾಳ ನುಡಿಕಾರಗಳ ವ್ಯತ್ಯಾಸಗಳಾದರೂ ಸಾವರಿಸಿಕೊಂಡು ಮುನ್ನಡೆಯುವ ಪ್ರತಿಭಾ ವ್ಯುತ್ಪತ್ತಿ ಸಾವಿರಕ್ಕೆ ಒಬ್ಬಿಬ್ಬರಿಗಿದ್ದರೆ ಅದೇ ಪುಣ್ಯವೆಂದಾಗಿದೆ. ಪುಸ್ತಕ ನೋಡಿಕೊಂಡು ಅಡುಗೆ ಮಾಡುವವವರ ಸಂಖ್ಯೆಯೇ ಪರಂಪರೆಯಾಗಿ ಮುಂದುವರಿಯುವ ಮತ್ತು ಪ್ರೋತ್ಸಾಹವೂ ಇರುವ ಹೊತ್ತಿನಲ್ಲಿ ‘ಶಾಸ್ತ್ರೀಯ ಬಡತನ’ದ ನಿವಾರಣೆ ಅಷ್ಟು ಸುಲಭವಲ್ಲ ಮತ್ತು ಕ್ರಾಂತಿಕಾರಿಗಳಿಗೆ ಇರುವ ಬೆಲೆಯೂ ಅಷ್ಟಕ್ಕಷ್ಟೇ !
‘ವಿಶೇಷತಃ ರಸಾಭಿನಯದಲ್ಲಿ ಆಶುಸ್ಫೂರ್ತಿಯ ವಿಲಾಸ ಅಪಾರ. ಆಶುವೈಭವದಲ್ಲಿ ಸ್ವಂತಿಕೆಗೆ, ಸ್ವೋಪಜ್ಞತೆಗೆ ಪರಮೋಚ್ಛ ಪ್ರಾಶಸ್ತ್ಯ. ಇಲ್ಲಿ ಚೈತನ್ಯಾತ್ಮಕವಾದ ಕಲಾವಿದನಿಗೆ ಅಥವಾ ಯಾವುದೇ ವ್ಯಕ್ತಿಗೆ ಹೆಚ್ಚಿನ ಬೆಲೆಯಿಲ್ಲದೆ ಇನ್ನಿತರ ಜಡಯಂತ್ರ-ತಂತ್ರಕೋಲಾಹಲಗಳಿಲ್ಲ. ದುರ್ದೈವದಿಂದ ಇಂದು ನಮ್ಮ ಈಗಿನ ಭರತನಾಟ್ಯದಂತಹ ಕಲೆಗಳಲ್ಲಿ ಪೂರ್ವಸಿದ್ಧತೆಯೇ ಮಿಗಿಲಾಗಿ, ಅಭಿನಯವೂ ಶುಕಪಾಠವಾಗುತ್ತಿದೆ. ಆದರೆ ಇಂದಿಗೂ ಯಕ್ಷಗಾನದಂತಹ ಶಾಸ್ತ್ರೀಯರಂಗಪ್ರಕಾರಗಳಲ್ಲಿ ಆಶುರೀತಿಯ ರಸಾಭಿನಯಕ್ಕೂ, ಸಂಭಾಷಣೆಗಳಂತಹ ವಾಚಿಕಾಭಿನಯಕ್ಕೂ ವಿಪುಲಾವಕಾಶವಿದೆ, ಪ್ರಯೋಗವೂ ಉಳಿದಿದೆ. ತಾಳ ಮದ್ದಳೆಗಳಲ್ಲಿಯಂತೂ ಆಶುವೈಭವ ತಾಂಡವವೆನಿಸಿದೆ’ ಎಂದು ಹಿರಿಯ ವಾಗ್ಮಿಗಳು ತಮ್ಮ ಬರೆಹದ ನಡುವೆ ಹೀಗನ್ನುತ್ತಾರೆ.
ಹಾಗಾದರೆ ಆಶು ಸ್ಫೂರ್ತಿಯ ಪರಂಪರೆ ನಮ್ಮದಲ್ಲವೇ? ಎಂಬ ಪ್ರಶ್ನೆಯೆತ್ತಿದರೆ ನಮ್ಮ ಪೂರ್ವಿಕರ ಕಲಾಶ್ರೀಮಂತಿಕೆ ಇಂತಹ ಅಪಸವ್ಯಗಳಿಗೆ ಅಪವಾದವಾಗಿಯೇ ಕಾಣುತ್ತದೆ. ಉದಾಹರಣೆಗೆ ಮೊದಮೊದಲು ಭರತನಾಟ್ಯದ ಮೈಸೂರು ನೃತ್ಯಸಂಪ್ರದಾಯದಲ್ಲಿ ಆಶುಕವಿತ್ವಕ್ಕೆ ನರ್ತಿಸುವ ಪ್ರತಿಭಾಸಂಪನ್ನತೆ, ಪ್ರಯೋಗಶೀಲತೆ ಇತ್ತಾದರೂ; ಬರಬರುತ್ತ್ತಾ ಇದರ ಲಕ್ಷಣಗಳು ಕುಸಿಯತೊಡಗಿತು. ರಾಜರ ಆಸ್ಥಾನದಲ್ಲಿ ನರ್ತಿಸುವ ಮಾನ್ಯತೆ ಪಡೆಯಬೇಕಾದರೆ ಸ್ಥಳದಲ್ಲೇ ಸಾಹಿತ್ಯರಚನೆ, ಸ್ವರ-ಅಭಿನಯ-ನೃತ್ತ ನಿರ್ಮಾಣದ ಸಾಮರ್ಥ್ಯ ಬೇಕಿತ್ತು.
ಆದರೆ ರಸಾಭಿನಯವೆಂದರೇ ಪರಿಚಯವಿಲ್ಲದ ಕಲಾವಿದರಿರುವ ಹೊತ್ತಿಗೆ ಆಶುಸ್ಪೂರ್ತಿಯ ರಸವಿಲಾಸ ಅರ್ಥವಾಗುವುದಾದರೂ ಹೇಗೆ? ನರ್ತಕರಿಗೆ ವ್ಯುತ್ಪತ್ತಿಯೇ ಇಲ್ಲವೆಂದಾದರೆ ಪಕ್ಕವಾದ್ಯದವರಿಗೆ, ಗಾಯಕರಿಗೆ ಅದರ ಅಭ್ಯಾಸ ಬರುವುದು ಎಲ್ಲಿಂದ? ರಸವೆಂದರೆ ನವರಸಾಭಿನಯ ಎಂದು ಯೋಚಿಸವವರ ಮಧ್ಯೆ ರಸಪ್ರಜ್ಞೆಯ ಸಾಕಾರದ ಬಗೆಗಿನ ಸಮಸ್ಯೆಗಳಿಗೆ ಸಾರ್ವಕಾಲಿಕ ಪರಿಹಾರ ಹೇಗೆ? ಎಷ್ಟು ಶತಮಾನಗಳುರುಳಬೇಕು. ಉತ್ತರಗಳಿಗೆ ತಡಕಾಡುತ್ತಲೇ ಇದ್ದೇನೆ!