ಅಂಕಣಗಳು

Subscribe


 

ಕರ್ನಾಟಕ ಕಲಾ ಸಂಶೋಧನೆಗಿದ್ದ ಭರವಸೆ: ಕ.ಸಂ.ನೃ.ಅಕಾಡೆಮಿಯ ಫೆಲೊಶಿಪ್

Posted On: Friday, June 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯು ಮುನ್ನಡೆಸಿಕೊಂಡು ಬರುತ್ತಿರುವ ಹಲವಾರು ಪ್ರಶಸ್ತಿ, ಶಿಷ್ಯವೇತನ, ಸಹಭಾಗಿತ್ವ, ಮಾಸಾಶನ, ಉತ್ಸವ, ಕಾರ್ಯಗಾರ, ಪುಸ್ತಕ ಪ್ರಕಟಣೆ ಇತ್ಯಾದಿಗಳ ಸಾಲಿಗೆ ಹೊಸ ಗರಿ ಸಂಶೋಧನಾ ಫೆಲೋಶಿಪ್. ಶಾಸ್ತ್ರೀಯ ಸಂಗೀತ, ಸುಗಮಸಂಗೀತ, ನೃತ್ಯ, ಕಥಾಕೀರ್ತನ, ಗಮಕ ವಿಭಾಗದ ಅರ್ಹ ಸಂಶೋಧಕರಿಗೆ ಅನುಕೂಲವಾಗುವಂತಹ ಈ ಫೆಲೋಶಿಪ್ ೨೦೧೦ನೇ ಸಾಲಿನಿಂದ ಪ್ರಾರಂಭಗೊಂಡಿದ್ದು ; ಪ್ರತೀವರ್ಷ ಆಯ್ದ ೫ ಅಭ್ಯರ್ಥಿಗಳಿಗೆ ಈ ಫೆಲೋಶಿಪ್‌ನ ಅವಕಾಶ ನೀಡಲಾಗುತ್ತದೆ.

ಇದೇ ಬಗೆಯಲ್ಲಿ ಲಲಿತಕಲೆ, ಕೊಂಕಣಿ, ಸಾಹಿತ್ಯ ಅಕಾಡೆಮಿ ಸೇರಿದಂತೆ ಇನ್ನಿತರ ಅಕಾಡೆಮಿಗಳೂ ಕೂಡಾ ಫೆಲೋಶಿಪ್ ನೀಡುವ ಕುರಿತು ಕಾರ್ಯಪ್ರವೃತ್ತರಾಗಿದ್ದು ಈಗಾಗಲೇ ಹಲವು ಸಂಶೋಧನೆಗಳು ಬೆಳಕಿಗೆ ಬರುತ್ತಿವೆ. ಆದರೆ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಕರ್ತವ್ಯಗಳಲ್ಲಿ ಶಿಕ್ಷಣ, ಸಂಶೋಧನೆ ಪ್ರಮುಖವಾಗಿದ್ದರೂ ; ಸಂಶೋಧನಾಸಂಬಂಧಿತ ನಡೆ ಜಾರಿಗೆ ಬರಲು ಬರೋಬ್ಬರಿ ೩೨ ವರ್ಷಗಳೇ ಬೇಕಾಯಿತು. ನಿಕಟಪೂರ್ವ ಅಧ್ಯಕ್ಷರಾದ ಪ್ರಸಿದ್ಧ ಕ್ಲಾರಿಯೋನೆಟ್ ವಾದಕ ನರಸಿಂಹಲು ವಡವಾಟಿ ಅವರ ವೇಳೆಯಲ್ಲಿ ಜಾರಿಗೆಬಂದ ಈ ಫೆಲೋಶಿಪ್‌ನಿಂದಾಗಿ ಈಗಾಗಲೇ ೧೦ ಮಂದಿ ಸಂಶೋಧನಾಸಕ್ತರು ಈ ಪ್ರಯೋಜನವನ್ನು ಪಡೆದುಕೊಂಡಿದ್ದು; ಭವಿತವ್ಯದಲ್ಲಿ ಉತ್ತಮ ಮಟ್ಟದ ಸಂಶೋಧನೆಗಳಿಗೆ ಅವಕಾಶವಾಗುತ್ತದೆ ಎಂಬ ಅಭೀಪ್ಸೆ ಹೊತ್ತಿದೆ. ನಿಯಮಾವಳಿಗಳು ಕೆಳಕಂಡಂತಿವೆ.

೧. ಫೆಲೋಶಿಪ್‌ನ ಮೊತ್ತ ೧ ಲಕ್ಷ ರೂ.ಗಳಾಗಿದ್ದು ಅಧ್ಯಯನ ಅವಧಿ ೧ ವರ್ಷದ್ದಾಗಿರುತ್ತದೆ.

೨. ಕರ್ನಾಟಕದ ಕಲಾಸಂಸ್ಕೃತಿ ಸಂಬಂಧಿತ ವಿಷಯಗಳಿಗೆ ಪ್ರಾಮುಖ್ಯತೆ ನೀಡಲಾಗುವ ಫೆಲೋಶಿಫ್ ಅಧ್ಯಯನವನ್ನು ಕನ್ನಡಭಾಷೆಯಲ್ಲೇ ಸಲ್ಲಿಸಬೇಕಾಗುತ್ತದೆ.

೩. ಕರ್ನಾಟಕ ಸರ್ಕಾರದ ಬೇರಾವುದೇ ಅಕಾಡೆಮಿಯಲ್ಲಿ ಫೆಲೋಶಿಪ್ ಪಡೆದಿರಬಾರದು.

೪. ಫೆಲೋಶಿಪ್ ಅಧ್ಯಯನಾಸಕ್ತರು ಹಿರಿಯ, ಅನುಭವೀ ಮಾರ್ಗದರ್ಶಕರ (ಗೈಡ್) ನೇತೃತ್ವದಲ್ಲಿ ಸಂಶೋಧನೆಯನ್ನು ಮಾಡತಕ್ಕದ್ದು.

೫. ವರ್ಷದಿಂದ ವರ್ಷಕ್ಕೆ ಬದಲಾವಣೆಯಾಗುವ ತಜ್ಞರ ಆಯ್ಕೆ ಸಮಿತಿಯ ಮುಂದೆ ಸಂದರ್ಶನ, ಚರ್ಚೆಗಳ ತರುವಾಯ ಅಭ್ಯರ್ಥಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತದೆ.

೬. ಫೆಲೋಶಿಪ್ ಪೂರ್ವ ಪ್ರಸ್ತಾವನೆಯೊಂದಿಗೆ ಸ್ವವಿವರವನ್ನು ಹೊಂದಿದ ನಿರ್ದಿಷ್ಟ ಅರ್ಜಿ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ. ಅಧ್ಯಯನಪ್ರಗತಿಯ ದೃಷ್ಟಿಯಿಂದ ತಜ್ಞರ ಸಮ್ಮುಖದಲ್ಲಿ ಸಭೆಯನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಸೂಕ್ತ ವಿಷಯ ವಿಶ್ಲೇಷಣೆ, ಅಧ್ಯಯನ ಪ್ರಗತಿಯ ಕುರಿತಂತೆ ಚರ್ಚೆಯನ್ನು ಅಭ್ಯರ್ಥಿಯು ಮಂಡಿಸಬೇಕಾಗುತ್ತದೆ.

೫. ಈ ಒಂದು ವರ್ಷದ ಅವಧಿಯನ್ನು ಪೂರ್ಣವಾಗಿ ಉಪಯೋಗಿಸಿಕೊಂಡು ಕರ್ತವ್ಯಬದ್ಧರಾಗುವ ಹಿನ್ನೆಲೆಯಲ್ಲಿ ಬೇರಾವುದೇ ಫೆಲೋಶಿಪ್ ಅಧ್ಯಯನವನ್ನು ಇತರ ಸಂಸ್ಥೆಗಳಿಗೆ ನಿರ್ವಹಿಸದಂತೆ ಸ್ಟಾಂಪ್ ಪೇಪರ್‌ನಲ್ಲಿ ಕರಾರುಪತ್ರವನ್ನು ನಿಗದಿತ ನಮೂನೆಯೊಂದಿಗೆ ನೀಡಬೇಕಾಗುತ್ತದೆ.

೬. ೩ ಕಂತುಗಳಲ್ಲಿ ಫೆಲೋಶಿಪ್ ವೇತನವನ್ನು ನೀಡಲಾಗುತ್ತಿದ್ದು; ಸಂಶೋಧನಾ ವಿಧಾನ, ರೂಪುರೇಷೆಯ ಹಿನ್ನೆಲೆಯಲ್ಲಿಯೇ ಅಧ್ಯಯನವನ್ನು ಕೈಗೊಳ್ಳಬೇಕಾಗುತ್ತದೆ.

೬. ಕನಿಷ್ಟಪಕ್ಷ ೧೦೦ ಪುಟಗಳನ್ನಾದರೂ ಫೆಲೋಶಿಪ್ ಪ್ರಬಂಧ ಒಳಗೊಳ್ಳಬೇಕಿದ್ದು; ೩ ತಿಂಗಳಿಗೊಮ್ಮೆ ಅಧ್ಯಯನ ಪ್ರಗತಿ ವರದಿ ನಿಡುವುದು ಕಡ್ಡಾಯ.

೭. ಸೂಕ್ತ ದಾಖಲೆ, ಆಡಿಯೋ-ವೀಡಿಯೋ ಸಂದರ್ಶನಗಳನ್ನು ಸಲ್ಲಿಸುವುದು ಫೆಲೋಶಿಪ್ ಪ್ರಬಂಧದ ನಿರೀಕ್ಷೆಗಳಲ್ಲೊಂದು. ಅಧ್ಯಯನ ಪೂರ್ಣಗೊಂಡ ನಂತರ ಅದನ್ನು ಪುಸ್ತಕ ಮತ್ತು ಸಿಡಿ ರೂಪದಲ್ಲಿ ಅಕಾಡೆಮಿಗೆ ಸಲ್ಲಿಸಬೇಕಿದ್ದು; ಪೂರ್ಣಗೊಂಡ ಸಂಶೋಧಕರ ಸಾಮಗ್ರಿ/ಪ್ರಬಂಧದ ಮೇಲೆ ಅಕಾಡೆಮಿಗೆ ಸಂಪೂರ್ಣ ಸ್ವಾಮ್ಯವಿರುತ್ತದೆ. ಅಲ್ಲದೆ ಪ್ರಕಟಣೆಯ ಹಕ್ಕನ್ನೂ ಹೊಂದಿರುತ್ತದೆ.

೯. ಒಂದುವೇಳೆ ಸಂಶೋಧಕರು ಅಧ್ಯಯನವನ್ನು ಪೂರ್ಣಗೊಳಿಸದಿದ್ದಲ್ಲಿ ಪಡೆದ ಫೆಲೋಶಿಪ್ ಹಣವನ್ನು ಬಡ್ಡಿ ಸಮೇತ ಮರುಪಾವತಿ ಮಾಡಬೇಕಾಗುತ್ತದೆ.

೧೦. ಸಂಶೋಧನೆಗಳು ನೂತನವಾಗಿದ್ದು; ಸ್ವಂತದ್ದಾಗಿರಬೇಕು. ಬೇರೊಬರ ಸಂಶೋಧನೆಯನ್ನು ತಮ್ಮ ಹೆಸರಿನಲ್ಲಿ ಮಂಡಿಸಿದ್ದೇ ಆದಲ್ಲಿ ನಿಯಮಾನುಸಾರ ಕಾನೂನು ಕ್ರಮ ಜರುಗಿಸಬಹುದು.

೧೧. ಅಧ್ಯಯನಗಳು ಪಿ‌ಎಚ್‌ಡಿ ವಿಷಯ/ ಭಾಗಶಃ ಪಿ‌ಎಚ್ ಡಿ ಅಧ್ಯಯನ/ ಇನ್ನಿತರ ಫೆಲೋಶಿಪ್ ಗಳಾಗಿರಬಾರದು. ಸಂಶೋಧನೆಯಲ್ಲಿ ನಿರೀಕ್ಷಿತ ಮಟ್ಟದ ಅರಿವು, ಅನುಭವ ಅಗತ್ಯ.

ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಈ ಫೆಲೋಶಿಪ್ ವಿಶೇಷವೆನ್ನಿಸುವುದು ಅದು ಪುಸ್ತಕವಾಗಿ ಪ್ರಕಟಗೊಂಡು ಸಂಶೋಧನೆಯು ಸಾಮಾನ್ಯ ಜನರಿಗೂ ತಲುವಂತಾಗುವುದರ ಮೂಲಕ. ಈ ಹಂತದಲ್ಲಿ ಸಂಶೋಧನಾಪ್ರಬಂಧಗಳನ್ನು ಪುಸ್ತಕವಾಗಿ ಹೊರತರುವ ಜವಾಬ್ದಾರಿ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯದ್ದಾಗಿದ್ದು; ಸೂಕ್ತ ಕರ್ತವ್ಯಗಳನ್ನು ಅಭ್ಯರ್ಥಿಗಳು ಮಾಡಿಕೊಡಬೇಕಾಗುತ್ತದೆ. ಒಂದು ವೇಳೇ ಅಧ್ಯಯನದ ಎರಡನೇ ಆವೃತ್ತಿ ಪ್ರಕಟವಾಗುವುದಾದಲ್ಲಿ ಲೇಖಕರಿಗೆ ಗೌರವಧನವನ್ನು ನೀಡಲಾಗುತ್ತದೆ. ಪ್ರಸ್ತುತ ಮೊದಲವರ್ಷದ ಫೆಲೋಶಿಪ್ ಪ್ರಬಂಧಗಳನ್ನು ಪ್ರಕಟಿಸುವ ಹಂತದಲ್ಲಿದೆ ಅಕಾಡೆಮಿ.

ಸರ್ಕಾರದ ಈ ಪ್ರೋತ್ಸಾಹವನ್ನು ಸೂಕ್ತವಾಗಿ ಉಪಯೋಗಿಸಿಕೊಂಡು ಸಂಶೋಧನಾ ಗುಣಮಟ್ಟವನ್ನು ಹೆಚ್ಚಿಸಿ ಭವಿಷ್ಯದಲ್ಲಿ ಸಂಶೋಧನೆ ನಡೆಸಲಿಚ್ಚಿಸುವವರಿಗೆ ದಾರಿದೀಪವಾಗಿರುವಂತೆ ನೋಡಿಕೊಳ್ಳಬೇಕಾದದ್ದು ಸಂಶೋಧಕರ ಕರ್ತವ್ಯ. ಹೆಚ್ಚಿನ ಮಾಹಿತಿಗೆ ಸಂಗೀತ-ನೃತ್ಯ ಅಕಾಡೆಮಿಯನ್ನು ಅಥವಾ ಅಕಾಡೆಮಿಯ ಅಂತರ್ಜಾಲತಾಣವನ್ನು ಸಂಪರ್ಕಿಸುವುದು. ಈಗಾಗಲೇ ಅಕಾಡೆಮಿಯಿಂದ ಫೆಲೋಶಿಪ್ ಪಡೆದಿರುವವರ ವಿವರ ಕೆಳಕಂಡಂತಿದೆ.

ಪ್ರಥಮವರ್ಷ : ೨೦೧೦-೧೧

* ಮನೋರಮಾ ಬಿ.ಎನ್, ಬೆಂಗಳೂರು – ಕರ್ನಾಟಕದಲ್ಲಿ ನಟುವಾಂಗ ಪರಂಪರೆ : ಒಂದು ವಿಶ್ಲೇಷಣಾತ್ಮಕ ಅಧ್ಯಯನ (ವಾದ್ಯ ಮತ್ತು ನೃತ್ಯವಾದ್ಯವಾಗಿ ತಾಳಗಳ ಕುರಿತ ಅಧ್ಯಯನ)

* ಡಾ.ಮಾಲಾ ಶಶಿಕಾಂತ್, ಬೆಂಗಳೂರು. – ಕರ್ನಾಟಕ ನೃತ್ಯಪ್ರಕಾರದ ಉನ್ನತೀಕರಣ (ವಿಶೇಷ ನೃತ್ಯಬಂಧಗಳನ್ನು ಅನುಲಕ್ಷಿಸಿ)

* ಡಾ.ಎನ್.ಕೆ. ರಾಮಶೇಷನ್ ಮೈಸೂರು – ವಿಭಿನ್ನ ಶೈಲಿಗಳಲ್ಲಿ ಗಮಕ ಕಲೆಯ ತುಲನಾತ್ಮಕ ಅಧ್ಯಯನ.

* ಶೈಲಜಾ ಬಿ.ಮಂಗಳೂರಕರ, ಉತ್ತರಕನ್ನq. – ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ ಘರಾಣೆಗಳು ಮತ್ತು ಕರ್ನಾಟಕದಲ್ಲಿ ಅದರ ಅಸ್ತಿತ್ತ್ವ.

* ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ಬೆಂಗಳೂರು. – ಅಪ್ರಕಟಿತ ಮತ್ತು ಅಪೂರ್ವ ಜಾವಳಿಗಳು.

ದ್ವಿತೀಯ ವರ್ಷ ೨೦೧೦-೧೧

* ವೇಣುಗೋಪಾಲ್ ಎಸ್– ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಡೋಲಿನ ವಿಶೇಷತೆ.

* ವಿದ್ಯಾಕುಮಾರಿ ಎಸ್.– ಕರ್ನಾಟಕ ನೃತ್ಯಶಿಲ್ಪಗಳಲ್ಲಿ ಕಂಡುಬರುವ ಕರಣಗಳು.

* ವಿದ್ಯಾಲಕ್ಷ್ಮಿ ಎಂ.ಎಸ್ – ಭರತನಾಟ್ಯ ವಿವಿಧ ಶೈಲಿಗಳಲ್ಲಿ ಅಪರೂಪದ ನೃತ್ಯಬಂಧಗಳು.

* ಸಮುದ್ಯತಾ, ಬೆಂಗಳೂರು – ಭರತಾರ್ಣವ ಗ್ರಂಥದಲ್ಲಿ ಪ್ರಸ್ತಾಪಿಸಿರುವ ನವರಸಸಂಬಂಧ ಅಂಗಾಹಾರಗಳು ಮತ್ತು ನೃತ್ಯಪದ್ಧತಿಯಲ್ಲಿ ಅವುಗಳ ಪ್ರಯೋಗ.

* ಸ್ಮಿತಾ ಬೆಳ್ಳೂರು – ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ರಾಗಾಂಗ ರಾಗಗಳು.

Leave a Reply

*

code