ಅಂಕಣಗಳು

Subscribe


 

ಉತ್ತರ ಕನ್ನಡ ಜಿಲ್ಲೆಯ ಸುತ್ತಮುತ್ತ…

Posted On: Friday, June 15th, 2012
1 Star2 Stars3 Stars4 Stars5 Stars (No Ratings Yet)
Loading...

Author: ವಿದುಷಿ ಸಹನಾ ಭಟ್, ’ನಾಟ್ಯಾಂಜಲಿ’, ಹುಬ್ಬಳ್ಳಿ

ನೃತ್ಯ- ಬೆಲೆ ಕಟ್ಟಲಾಗದ, ನಿರ್ದಿಷ್ಟ ನೆಲೆ ಸೃಷ್ಟಿಸಲಾಗದ, ಸಾರ್ವಕಾಲಿಕ ಸೆಲೆ ಹೊಂದಿರುವ ವಿಶೇಷತೆ ಈ ಕಲೆಯದ್ದು. ಕಲೆ ಬಹುಮುಖಿ; ಸರ್ವವ್ಯಾಪಿ; ಆಸಕ್ತರ ಪಾಲಿಗೆ ಆಸ್ತಿ; ಆರಾಧಕರಿಗೆ ಪ್ರಾಪ್ತಿ ; ಸಾರ್ವಜನಿಕರಿಗೆ ಸಂಪ್ರಾಪ್ತಿ. ಅಂತಹ ನೃತ್ಯಕಲೆ ಉತ್ತರ ಕನ್ನಡ ಜಿಲ್ಲೆಯ ಮಣ್ಣಿನೊಂದಿಗೂ ಬೆಳೆದು ಬಂದಿದ್ದು ಬದುಕನ್ನು ಕಲಾತ್ಮಕವಾಗಿ ರೂಪಿಸಿದೆ.ಮಾತು-ಕೃತಿಗಳಲ್ಲಿಯೂ ಕಲೆ ಸಮ್ಮೋಹನ ಮಾಡಿದ್ದು; ಯಕ್ಷಗಾನ, ಸುಗ್ಗಿ ಕುಣಿತ, ಕೋಲಾಟ ಮೊದಲಾದ ಜಾನಪದೀಯ ಸೊಗಡು ಬೆಡಗಿನ ಕಲಾಪ್ರಕಾರಗಳೊಂದಿಗೆ ಭರತನಾಟ್ಯಾದಿ ಸಾಂಪ್ರದಾಯಿಕ ಕಲೆಯೂ ಇಲ್ಲಿ ಮೇಳೈಸಿದೆ.

ಉತ್ತರಕನ್ನಡ ಜಿಲ್ಲೆಯು ಪಾರಂಪರಿಕವಾಗಿ ಕಲಾಶ್ರೀಮಂತಿಕೆಯನ್ನು ಹೊಂದಿರುವ ನಾಡು. ಅಲ್ಲಮಪ್ರಭುವಿನ ಮದ್ದಲೆಯ ಗತಿಗೆ ಗೆಜ್ಜೆಯ ನಾದನಿನಾದದೊಂದಿಗೆ ಹೆಜ್ಜೆಹಾಕಿದ ಮಾಯೆಯ ಸಿರಿ; ನೃತ್ಯಕ್ಕೆ ತಾಣವೆನಿಸಿದ ಮಧುಕೇಶ್ವರ ದೇವಾಲಯದ ನವರಂಗಮಂಟಪ, ಕಲಾರಾಧಕರಿಗೂ, ಕಲಾವಿದರಿಗೂ, ಸಾಹಿತ್ಯಾರಾಧಕರಿಗೂ, ಧರ್ಮ ಸಂಸ್ಥಾಪನಾಚಾರ್ಯರಿಗೂ ಆಶ್ರಯ ಅವಕಾಶ ನೀಡಿದ ಅರಸಪ್ಪನಾಯಕರಂತಹ ಅರಸರು ಆಳಿಬಾಳಿದ ಸುಧಾಪುರಿ-ಸೋಂದಾ ರಾಜ್ಯ.ಹೀಗೆ ಹತ್ತು ಹಲವು ತಾಣಗಳು ಇಲ್ಲಿನ ವಿಶೇಷ. ಯು.ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿಯವರು ಹುಟ್ಟಿದ ತಾಣ. ಗೋಪಾಲಕೃಷ್ಣನಾಯ್ಕರಂತಹ ಹಲವು ಕಲೆಗಳ ಸಂಗಮವುಳ್ಳ ವ್ಯಕ್ತಿಗಳು ಜನಿಸಿದ ಭೂಮಿ. ಕೆರೆಕೈ ಉಮಾಕಾಂತ ಭಟ್‌ರಂತಹ ಹಿರಿಯ ತಾಳಮದ್ದಳೆ ಅರ್ಥಧಾರಿಗಳ ಹುಟ್ಟೂರು. ಯಕ್ಷಗಾನದ ಪ್ರಥಮ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಸ್ಫೂರ್ತಿ ನೀಡಿ ಗೆಜ್ಜೆಕಟ್ಟಿ ನಲಿದಾಡುವಂತೆ ಮಾಡಿದ ಕಲಾರಾಧಕರ ನೆಲ.

ಆದರೆ ೨೦ನೇಶತಮಾನದಲ್ಲಿ ಭರತನಾಟ್ಯದ ಕಲಿಕೆ, ಪ್ರದರ್ಶನಕ್ಕೆ ಮುನ್ನುಡಿಯೆನಿಸಿದ್ದು ೧೯೫೦ರ ಸುಮಾರಿಗೆ; ಈ ಬನವಾಸಿ-ಸೋಂದಾದ ನಡುವಿನ ಶಿರಸಿಯಲ್ಲಿ. ದಾವಣಗೆರೆಯಿಂದ ಶಿರಸಿಗೆ ಬಂದುಹೋಗುತ್ತಾ ಭರತನಾಟ್ಯದ ಅಂಕುರಾರ್ಪಣೆ ಮಾಡಿ ೧೯೭೧ರ ವರೆಗೂ ಮುನ್ನಡೆಸಿದವರು ಶ್ರೀನಿವಾಸ ಕುಲಕರ್ಣಿ ಮತ್ತು ಲಕ್ಷ್ಮೀಬಾಯಿ ಕುಲಕರ್ಣಿಯವರು. ತದನಂತರ ಶಾಲಾಪದ್ಧತಿಯ ಶಿಕ್ಷಣಕ್ಕೆ ನಾಂದಿಹಾಡಿದವರು ಮೂಲತಃ ಉಡುಪಿಯವರಾದ ಟಿ.ಕಣ್ಣನ್. ಇವರು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ, ಶಿರಸಿಯ ಅನೇಕ ಭಾಗಗಳಲ್ಲಿ ಮಾರಿಕಾಂಬಾ ನೃತ್ಯಶಾಲೆ ಎಂಬ ಹೆಸರಿನಲ್ಲಿ ತರಗತಿಗಳನ್ನು ಆರಂಭಿಸಿದರು. ಈ ಶಾಲೆಯ ಮುಖಾಂತರ ಅನೇಕ ವಿದ್ಯಾರ್ಥಿಗಳು ನೃತ್ಯಪರೀಕ್ಷೆಗಳನ್ನು ತೆಗೆದುಕೊಂಡು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿಯೂ ಬಹುಮಾನ ಪಡೆಯಲಾರಂಭಿಸಿದರು. ನಂತರ ಶ್ರೀವಳ್ಳಿ ಅಂಬರೀಶರ ಮಾರ್ಗದರ್ಶನದಲ್ಲಿ ಶಿಷ್ಯರು ಪಳಗಿದರು. ಧಾರವಾಢದ ಹಿರಿಯ ಕಲಾವಿದರಾದ ವೆಂಕಟೇಶ ಉಪಾಧ್ಯಾಯ, ರಾಮಣ್ಣ ಕೆರೆಕೊಪ್ಪ ಆಗಮಿಸಿ ಭಾರತೀ ನೃತ್ಯಶಾಲೆ ಎಂಬ ಹೆಸರಿನಲ್ಲಿ ಭರತನಾಟ್ಯ ಮತ್ತು ಕಥಕ್ ನೃತ್ಯವನ್ನು ಕಲಿಸುತ್ತಿದ್ದರು. ಮೈಸೂರಿನ ಚಂದ್ರೇಗೌಡರು, ಕೇಶವಕುಮಾರ್ ಕೂಡಾ ನೃತ್ಯಗುರುಗಳಾಗಿ ಸೇವೆ ಸಲ್ಲಿಸಿದವರು. ಹೊನ್ನಾವರ ಕುಮಟಾದಲ್ಲಿ ಕಳೆದ ೩೦ ವರ್ಷಗಳಿಂದ ಡಿ.ಡಿ.ನಾಯ್ಕರವರು ನೃತ್ಯ ತರಗತಿ ನಡೆಸಿಕೊಂಡು ಬರುತ್ತಿದ್ದಾರೆ.

ಸುಮಾರು ೧೯೭೩-೭೪ರ ಸಂದರ್ಭ ಹಾರ್ಮೋನಿಯಂನ ಪ್ರಸಿದ್ಧವಾದಕರಾದ ಬಿ.ಆರ್.ಕೊಲ್ಹಾಪುರೆ ಮತ್ತು ಪ್ರಸಾದನ ಕಲಾವಿದ ಪುತ್ತಣ್ಣ (ಸದಾನಂದ ಶ್ಯಾನಭಾಗ್), ಮತ್ತು ಕಲಾಸಕ್ತಿ ಹೊಂದಿದ್ದ ವಿಜಯಾ ಕಾಮತ್, ರಾಜಲಕ್ಷ್ಮೀ ಹೆಗಡೆ, ಶಿಕ್ಷಕ ಹಾಗೂ ಹಿರಿಯ ಸಾಹಿತಿ ಟಿ.ಎಂ. ಸುಬ್ಬರಾಯ, ಯಕ್ಷಗಾನ ಕಲಾವಿದೆ-ಪ್ರಾಧ್ಯಾಪಕಿ ವಿಜಯನಳಿನಿ ರಮೇಶ್ ಮೊದಲಾದ ಮಹನೀಯರನ್ನೊಳಗೊಂಡು ವೈದ್ಯೆ, ಕಲಾಸಕ್ತರಾದ ಡಾ.ಕಲಾಭಟ್ ನೇತೃತ್ವದಲ್ಲಿ ನಾಟ್ಯಾಂಜಲಿ ಕಲಾಶಾಲೆ ಎಂಬ ದೊಡ್ಡ ನೃತ್ಯಸಂಸ್ಥೆ ಕಣ್ಣು ತೆರೆಯಿತು. ಕಣ್ಣನ್ ಅವರ ನಿರ್ದೇಶನದಲ್ಲಿ ಸಾಂಪ್ರದಾಯಿಕ ಕಲಿಕೆ ಆರಂಭಗೊಂಡು ನೃತ್ಯಪ್ರದರ್ಶನಗಳು ನಡೆಯತೊಡಗಿದವು. ಆದರೆ ಕ್ರಮೇಣ ವಯಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ ಕಣ್ಣನ್‌ರ ಬರುವಿಕೆ ಕ್ಷೀಣಿಸಿದಾಗ ಮೋಹನ್‌ರಾವ್ ಗುರುಗಳಾಗಿ ನಿಯುಕ್ತರಾದರು. ಕರ್ನಾಟಕದ ರಾಜ್ಯ ಮಾಧ್ಯಮಿಕ ಶಿಕ್ಷಣ ಇಲಾಖೆ ನಡೆಸುವ ಸಂಗೀತ-ನೃತ್ಯದ ಪ್ರಾಥಮಿಕ, ಮಾಧ್ಯಮಿಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಸಲುವಾಗಿ ದೂರದ ಊರಿಗೆ ಹೋಗಬೇಕಾಗಿದ್ದ ಸಂದರ್ಭದಲ್ಲಿ; ಡಾ.ಕಲಾಭಟ್ ಮತ್ತು ಟಿ.ಎಂ.ಸುಬ್ಬರಾಯರು ಶ್ರಮವಹಿಸಿ ಇಲಾಖೆಯ ಅಧಿಕಾರಿಗಳನ್ನು ಭೇಟಿಮಾಡಿ ಶಿರಸಿಯಲ್ಲಿ ಪರೀಕ್ಷಾಕೇಂದ್ರಕ್ಕೆ ಅನುಮತಿ ಪಡೆಯುವಲ್ಲಿ ಯಶಸ್ವಿಯಾದರು.

ನಂತರ ಶಿರಸಿಯಲ್ಲಿ ನಾಟ್ಯಾಂಜಲಿ ಕಲಾಕೇಂದ್ರವಾಗಿ ೧೯೯೬ರಲ್ಲಿ ಪುನರ್ ಉದ್ಘಾಟನೆಗೊಂಡ ನಂತರ ಸಹನಾ ಭಟ್ ಅವರು ಡಾ.ಕಲಾಭಟ್ ಅವರಿಂದ ಸಂಪೂರ್ಣವಾಗಿ ಸಂಸ್ಥೆಯನ್ನು ವಹಿಸಿಕೊಂಡು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಕಲಾಭಟ್ ಪ್ರಸ್ತುತ ತಮ್ಮ ಸಂಸಾರದೊಂದಿಗೆ ಯುಸ್‌ಎಯಲ್ಲಿ ನೆಲೆಸಿದ್ದಾರೆ. ನಾಟ್ಯಾಂಜಲಿಯಲ್ಲ್ಲಿ ಶಿಕ್ಷಣ ಪಡೆದ, ಪಡೆಯುತ್ತಿರುವ ಅನೇಕ ಶಿಷ್ಯರು ಜಿಲ್ಲೆಯಾದ್ಯಂತವಷ್ಟೇ ಅಲ್ಲದೆ ಹೊರಜಿಲ್ಲೆಗಳಲ್ಲೂ ನಾಟ್ಯಾಂಜಲಿ ಸಂಸ್ಥೆಯ ಶಾಖೆಗಳನ್ನು ವಿಸ್ತರಣೆ ಮಾಡುತ್ತಾ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದ್ದಾರೆ. ಅವರ ಪೈಕಿ ಕುಮಟಾ ಹಾಗೂ ಹೊನ್ನಾವರ ಶಾಖೆಯ ಸೌಮ್ಯಾ ಅರವಿಂದ್, ಕಾರವಾರದಲ್ಲಿ ಉಮಾರಾಣಿ, ದಾಂಡೇಲಿಯಲ್ಲಿ ಉಮಾ ಹೆಬ್ಬಾರ್, ಹಾವೇರಿಯಲ್ಲಿ ವಿನುತಾ ಭಟ್, ಸಿದ್ಧಾಪುರ ಹಾಗೂ ಬನವಾಸಿಯಲ್ಲಿ ಸಂಪದಾ ಮರಾಠೆ ಪ್ರಮುಖರಾಗಿದ್ದು ; ಒಟ್ಟಾರೆ ೧,೦೦೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಬೇತಿ ಪಡೆಯುತ್ತಿದ್ದಾರೆ. ಸ್ವತಃ ಸಹನಾ ಭಟ್ ಅವರು ಶಿರಸಿ, ಯಲ್ಲಾಪುರ, ಹುಬ್ಬಳ್ಳಿ, ಧಾರವಾಢದ ಶಾಖೆಗಳಲ್ಲಿ ಮಾರ್ಗದರ್ಶನ ನೀಡುತ್ತಲಿದ್ದು; ಕೂಚಿಪುಡಿ ತರಗತಿಗಳನ್ನೂ ನಡೆಸುತ್ತಿದ್ದಾರೆ. ಇವರ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಾ; ಹಲವು ರಾಜ್ಯ-ರಾಷ್ಟ್ರಮಟ್ಟದ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಉತ್ತರಕನ್ನಡದ ಮತ್ತೊಂದು ಹಿರಿಯ ನೃತ್ಯ ಸಂಸ್ಥೆ ನಟರಾಜ ನೃತ್ಯಶಾಲಾ. ಈ ಸಂಸ್ಥೆಯ ರೂವಾರಿ ಸೀಮಾ ಭಾಗ್ವತ್. ಸ್ವಲ್ಪಮಟ್ಟಿಗೆ ಕಥಕ್ ಅಭ್ಯಾಸವನ್ನೂ ಮಾಡಿರುವ ಸೀಮಾ ಅವರಲ್ಲಿಯೂ ಸಾವಿರಾರು ಶಿಷ್ಯರು ಪಳಗಿದ್ದು ಜಿಲ್ಲೆಯಾದ್ಯಂತ ಹಲವು ಶಾಖೆಗಳಲ್ಲಿ ಭರತನಾಟ್ಯ ತರಗತಿಗಳನ್ನು ನಡೆಸುತ್ತಿದ್ದಾರೆ. ಅವರ ಪೈಕಿ ಕುಮಟಾದಲ್ಲಿ ನಯನಾ ಕಾಮತ್, ಅಂಕೋಲಾದಲ್ಲಿ ಶ್ವೇತಾ, ನಾದಶ್ರೀ ಪ್ರಮುಖರು. ಸೀಮಾ ಸ್ವತಃ ಶಿರಸಿ ಮತ್ತು ಸಿದ್ಧಾಪುರದಲ್ಲಿ ಕಳೆದ ೨೦ ವರ್ಷಗಳಿಂದ ತರಬೇತಿ ನೀಡುತ್ತಾ ಬಂದಿದ್ದು; ಇವರ ವಿದ್ಯಾರ್ಥಿಗಳು ರಾಜ್ಯ-ರಾಷ್ಟ್ರಮಟ್ಟದ ಪುರಸ್ಕಾರಗಳನ್ನು ಪಡೆದಿದ್ದು; ಕಲಾವಿದೆಯರಾಗಿ ಗುರುತಿಸಿಕೊಂಡಿದ್ದಾರೆ. ಇವರ ನೃತ್ಯಶಾಲೆ ಗಂಧರ್ವ ಮಹಾವಿದ್ಯಾಲಯ, ಮೀರತ್‌ನೊಂದಿಗೆ ಗುರುತಿಸಿಕೊಂಡಿದ್ದು; ೯ ಪರೀಕ್ಷೆಗಳ ಪೈಕಿ ಪ್ರಾರಂಭ, ಪ್ರವೇಶಿಕಾದ ಪರೀಕ್ಷೆಗಳನ್ನೂ ನಡೆಸುತ್ತದೆ.

ಉಳಿದಂತೆ ಇನ್ನೂ ಅನೇಕ ಕಲಾವಿದರು ತಮ್ಮ ತಮ್ಮ ಪಟ್ಟಣಗಳಲ್ಲಿ ತರಗತಿಗಳನ್ನು ನಡೆಸುತ್ತಲಿದ್ದು; ಅವರ ಪೈಕಿ ಜಯಶ್ರೀ ಹೆಗಡೆ, ವಿಜಯಲಕ್ಷ್ಮೀ ಕಂಪ್ಲಿ, ಸುಮಾ ಹೆಗಡೆ, ಅನುರಾಧ ಹೆಗಡೆ, ಶ್ವೇತಾಭಟ್ ಕಾನಸೂರು, ವಿಜೇತಾ ಭಂಡಾರಿ, ಪಲ್ಲವಿ ಜೋಷಿ, ಕಲ್ಪನಾ ರಶ್ಮಿಯ ಕಲಾ ಲೋಕ, ವಿಶ್ವೇಶ್ವರ ಭಟ್ ಪ್ರಮುಖರು. ಇವರಷ್ಟೇ ಅಲ್ಲದೆ ನೃತ್ಯಸಾಹಿತ್ಯವನ್ನು ಒದಗಿಸುತ್ತಾ ಬಂದಿರುವ ಸಾಹಿತಿಗಳು ಹಲವಾರು. ಅವರಲ್ಲಿ ಜಿ.ಎಲ್.ಹೆಗಡೆ ಕುಮಟಾ, ದಿವಾಕರ ಹೆಗಡೆ, ಅತ್ತಿಮುರುಡು ವಿಶ್ವೇಶ್ವರ ಹೆಗಡೆ ಪ್ರಸಿದ್ಧರು. ಅಂತೆಯೇ ಉತ್ತರಕನ್ನಡ ಜಿಲ್ಲೆಯ ಅಷ್ಟೂ ಕಲಾವಿದರಿಗೆ ಅವಕಾಶ ಮಾಡಿಕೊಡುತ್ತಾ ಕಲೆಯ ಹಿರಿಮೆಯನ್ನು ತಿಳಿಸುವಲ್ಲಿ ಪ್ರದರ್ಶನಗಳಿಗೆ ಅನುವು ಮಾಡಿಕೊಡುತ್ತಾ ಬಂದಿರುವುದು ಶಿರಸಿಯ ಮಾರಿಕಾಂಬಾ ದೇವಾಲಯ. ಯಲ್ಲಾಪುರದ ಸಂಕಲ್ಪದ ಅಧ್ಯಕ್ಷ ಪ್ರಮೋದ್ ಹೆಗಡೆಯವರೂ ಕೂಡಾ ಕಳೆದ ೨೫ ವರ್ಷದಿಂದ ಪ್ರತೀವರ್ಷ ಏಳುದಿನದ ಉತ್ಸವವನ್ನು ಏರ್ಪಡಿಸುತ್ತಾ ಜಿಲ್ಲೆಯ ಸಂಗೀತ, ನಾಟಕ, ಯಕ್ಷಗಾನ, ನೃತ್ಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ಕೆಲವು ಕಾಲ ಶಿರಸಿಯ ಎಂ.ಎಂ.ಕಲಾಮಹಾವಿದ್ಯಾಲಯವು ಒಂದು ವರ್ಷದ ಕಥಕ್ ಡಿಪ್ಲೊಮಾ ತರಗತಿಗಳನ್ನು ಹೊಂದಿದ್ದು; ಬೆಂಗಳೂರಿನ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಫಿ ಸಂಸ್ಥೆ ಕೋರ್ಸಿನ ಪಠ್ಯಕ್ರಮವನ್ನು ಸಿದ್ಧಪಡಿಸಿತ್ತು. ಬೆಂಗಳೂರಿನಿಂದ ಬರುತ್ತಿದ್ದ ಜನಾರ್ಧನರಾಜ್ ಅರಸ್ ಅವರ ನೇತೃತ್ವದ ತರಗತಿಗಳಲ್ಲಿ ೫೦ ಮಂದಿ ತರಬೇತಿ ಪಡೆದಿದ್ದಾರೆ. ಆದರೆ ಅಧ್ಯಾಪಕರ ಕೊರತೆಯ ಹಿನ್ನೆಲೆಯಲ್ಲಿ ಈ ಡಿಪ್ಲೋಮಾ ನಿಂತುಹೋಗಿದೆ.

ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಕಲೆಯನ್ನು ಗಳಿಸಿ, ಕಲೆಗೇ ಅರ್ಪಿಸಿ, ಪಸರಿಸುವ ಕಾರ್ಯವನ್ನು ಇಲ್ಲಿನ ಕಲಾವಿದರು ಅನವರತ ಮಾಡುತ್ತಲೇ ಬಂದಿದ್ದಾರೆ. ಪ್ರತೀವರ್ಷ ೨೫೦ ಮಂದಿ ಜೂನಿಯರ್, ೧೦೦-೧೫೦ ಮಂದಿ ಸೀನಿಯರ್ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜೊತೆಗೆ ಸ್ಪರ್ಧೆಗಳಲ್ಲಿ ವಿಜೇತರಾಗುವುದರೊಂದಿಗೆ ಕಲಾವಿದರಿಗೆ ಹಲವು ಸನ್ಮಾನ, ಗೌರವ, ಪುರಸ್ಕಾರ ಪ್ರಾಪ್ತಿಯಾಗುತ್ತಾ ಮನ್ನಣೆ ದೊರೆಯುತ್ತಲಿದ್ದು; ಹಲವು ರಂಗಪ್ರವೇಶಗಳು, ವಾರ್ಷಿಕ ಸಂಭ್ರಮಗಳು, ವಿಶೇಷ ಉತ್ಸವಗಳು, ಕಾರ್ಯಾಗಾರ, ಕಮ್ಮಟಗಳು ನಡೆಯುತ್ತಲಿವೆ. ಪ್ರಕೃತಿಸಿರಿಯ ಮಡಿಲಿನಲ್ಲಿ, ಹಿರಿಯ ಗಿರಿಗಳ ಅಡಿಯಲ್ಲಿ ಉಸಿರು ಪಡೆದಿರುವ ಅನೇಕ ನೃತ್ಯಸಂಸ್ಥೆಗಳ ಮೇಲೆ ಕಲಾದೇವತೆ ನಟರಾಜ ಮತ್ತು ಗ್ರಾಮದೇವತೆ ಮಾರಿಕಾಂಬೆಯ ಕಟಾಕ್ಷ ಸದಾ ಇರುತ್ತದೆ.

(ಲೇಖಕರು ಹೆಸರಾಂತ ಕಲಾವಿದೆ, ನಾಟ್ಯಾಂಜಲಿ ಸಂಸ್ಥೆಯ ನಿರ್ದೇಶಕಿ.)

Leave a Reply

*

code