Author: ಶತಾವಧಾನಿ ಡಾ. ಆರ್. ಗಣೇಶ್, ಬೆಂಗಳೂರು
ಕಳೆದ ಒಂದು ವರುಷದಿಂದ ಅಷ್ಟನಾಯಿಕೆಯ ಚಿತ್ತವೃತ್ತಿಗಳಿಗೆ ಹೊಸದಿಕ್ಕನ್ನು ಒದಗಿಸಿ ಮಾರ್ಗದರ್ಶಿಸಿದವರು ನಮ್ಮ ನಾಡು ಕಾಣುತ್ತಿರುವ ಅತ್ಯದ್ಭುತ ಚಿಂತಕ, ಬಹುಶ್ರುತ ವಿದ್ವಾಂಸ, ಕವಿ, ಶತಾವಧಾನಿ ಡಾ. ಆರ್. ಗಣೇಶ್. ಕನ್ನಡ- ಸಂಸ್ಕೃತವೆಂದಷ್ಟೇ ಅಲ್ಲದೆ ಬಹುಭಾಷೆಗಳಿಗೆ, ಸಾಹಿತ್ಯಿಕ, ರಸಲೋಕಕ್ಕೆ ಅವರು ನೀಡುತ್ತಿರುವ ಕೊಡುಗೆ ವರ್ಣಿಸಲಸದಳ. ಈ ಹಿನ್ನೆಲೆಯಲ್ಲಿ ರಸಸಮುದ್ರದ ರತ್ನಗಳನ್ನು ಪಡೆಯುವಲ್ಲಿ ದಾರಿ ತೋರಿಸುವ ಗುರು ಎಂದರೂ ಅತಿಶಯವಿಲ್ಲ.
ನೃತ್ಯದ ವಿಷಯಕ್ಕೆ ಬಂದರೆ ಶತಾವಧಾನಿ ಡಾ. ಆರ್. ಗಣೇಶರು ತೆಲುಗು-ಸಂಸ್ಕೃತ ಪದಗಳನ್ನೂ ರಚಿಸಿದ್ದು ಅವು ರಂಗಸ್ಥಳದಲ್ಲಿ ಸಫಲತೆಯನ್ನೂ ಕಂಡಿವೆ. ಅವರೀಯುತ್ತಿರುವ ನಾಟ್ಯಶಾಸ್ತ್ರ ಮತ್ತು ಇತರ ಉಪನ್ಯಾಸಗಳು, ತರಗತಿಗಳು ಮಸ್ತಕವನ್ನೂ, ಮನಸ್ಸನ್ನೂ ತುಂಬುತ್ತವೆ. ಈ ಹಂತದಲ್ಲಿ ಅವರಿಂದ ನೃತ್ಯ-ಸಾಹಿತ್ಯ ಲೋಕಕ್ಕೆ ಮತ್ತೊಂದು ಕೊಡುಗೆ ನಾಯಕಪ್ರಬೇಧದ ನಿರೂಪಣೆ.
ಅಷ್ಟನಾಯಿಕೆಯರ ಅವಸ್ಥೆಗಳಿಗೆ ಪ್ರತಿಕ್ರಿಯಾತ್ಮಕವಾಗಿ ಅಷ್ಟನಾಯಕಾವಸ್ಥೆಯನ್ನು ರೂಪಿಸಬಹುದಾಗಿದ್ದರೂ ಯಾವ ಲಾಕ್ಷಣಿಕರೂ ಅಂತಹ ಅಭೂತಪೂರ್ವ ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ ಶತಾವಧಾನಿ ಡಾ. ಆರ್. ಗಣೇಶರು ನಾಯಕರ ಸಾಲಿಗೆ ಹೊಸ ಸಂವಿಧಾನವನ್ನೇ ನೀಡಿದ್ದು ; ನಾಯಕಭಾವಕ್ಕೆ ಸಂಸ್ಕೃತದಲ್ಲಿ ಲಕ್ಷಣಗಳನ್ನೂ, ಲಕ್ಷ್ಯಗೀತಗಳನ್ನೂ ರಾಗ-ತಾಳಬದ್ಧವಾಗಿ ರಚಿಸಿದ್ದಾರೆ. ಈ ಮೂಲಕ ಇದುವರೆವಿಗೂ ಲಕ್ಷಣಬದ್ಧವಾಗದ ಆದರೆ ಲಕ್ಷಣೀಕರಿಸಲು ವಿಫುಲಾವಕಾಶವಿರುವ ಅಂಶಗಳನ್ನು ಕ್ರೋಢೀಕರಿಸಲಾಗಿದ್ದು ; ಈ ನಿಟ್ಟಿನಲ್ಲಿ ನಾಯಕರ ಕುರಿತಾಗಿ ಕಾಡುತ್ತಿರುವ ಸಾಹಿತ್ಯದ ಕೊರತೆಯನ್ನು ತುಂಬಿಕೊಡುವಲ್ಲಿ ಇದು ನಿಜಕ್ಕೂ ಅಸಾಧಾರಣ ಪ್ರಯತ್ನವೇ ಸರಿ. ಈ ಹಿನ್ನೆಲೆಯಲ್ಲಿ ಅವರ ಚಿಂತನೆಯಲ್ಲಿ ಹೊರಬಂದ ವಿಷಯಗಳನ್ನು ಮನನ ಮಾಡಿಕೊಳ್ಳುವ ಸದವಕಾಶ ಮತ್ತೊಮ್ಮೆ ಒದಗಿದೆ. ಇದು ಸಾಂಸ್ಕೃತಿಕ ಪತ್ರಿಕಾಲೋಕದಲ್ಲಿ ಹಿಂದೆಂದೂ ಇಲ್ಲದಂತೆ ನೂಪುರಭ್ರಮರಿಯ ಪಾಲಿಗೆ ವಿಶೇಷವಾಗಿ ಒದಗಿದ್ದು ನಿಜಕ್ಕೂ ಒಂದು ಹೆಮ್ಮೆ ಮತ್ತು ಅಪೂರ್ವ ಅವಕಾಶ. ಆದರೆ ಅದಕ್ಕೂ ಮುನ್ನ; ಲಕ್ಷಣಶ್ಲೋಕ ಮತ್ತು ರಚನೆಗಳನ್ನು ಪ್ರಸ್ತುತಪಡಿಸುವುದಕ್ಕೆ ಮುನ್ನುಡಿಯಾಗಿ ಅವರ ’ಯಕ್ಷರಾತ್ರಿ’ಯಿಂದಾಯ್ದ ನಾಯಕಬೇಧಗಳ ಕುರಿತ ಕೆಲವು ವಿಚಾರಸರಣಿಗಳನ್ನು ಇದೋ ನಿಮಗಾಗಿ ಈ ಸಂಚಿಕೆಯಲ್ಲಿ ನೀಡಲಾಗುತ್ತಿದೆ. ನಮ್ಮ ಪ್ರಯತ್ನ ನಿಮ್ಮಿಂದ ಸದ್ವಿನಿಯೋಗವಾಗಲಿ…
…ಪ್ರಾಣಿ ಪಕ್ಷಿಲೋಕದಲ್ಲಿ ಗಂಡಿಗೇ ಎಲ್ಲ ಬೆಡಗಾದರೆ ಮಾನವಲೋಕದಲ್ಲಿ ತದ್ವಿರುದ್ಧ. ಅಂತೆಯೇ ನಾಯಕರಲ್ಲಿ ವೈವಿಧ್ಯ ಕಡಿಮೆ. ಸಾಮಾನ್ಯವಾಗಿ ನಾಯಕರನ್ನು ಧೀರೋದಾತ್ತ( ಶ್ರೀರಾಮನಂತೆ), ಧೀರೋದ್ಧತ (ಭೀಮನಂತೆ), ಧೀರಲಲಿತ (ಉದಯನಂತೆ), ಧೀರಶಾಂತ (ಮೃಚ್ಛಕಟಿಕ ಪ್ರಕರಣದ ಚಾರುದತ್ತನಂತೆ) ಎಂದು ಸ್ವಭಾವವನ್ನನುಸರಿಸಿ ಎಲ್ಲ ರಸಗಳಿಗೂ ಸಮುಚಿತವಾಗಿ ವರ್ಗೀಕರಿಸುತ್ತಾರೆ. ಇವರುಗಳು ಮುಖ್ಯವಾಗಿ ರೂಪಕಗಳಿಗೆ, ಸರ್ವರಸಾತ್ಮಕವಾಗಿ ನಿರ್ದಿಷ್ಟರಾಗಿದ್ದಾರೆ. ಆದರೆ ಶೃಂಗಾರನಾಯಕರು ಮುಖ್ಯವಾಗಿ ಪತಿ, ಉಪಪತಿ ಮತ್ತು ವೈಶಿಕ (ವೇಶ್ಯಾಲೋಲ) ಎಂದು ತ್ರಿವಿಧ. ಇವರು ಸ್ವೀಯಾ, ಅನ್ಯಾ ಮತ್ತು ಸಾಧಾರಣಾ ಎಂಬ ತ್ರಿವಿಧನಾಯಿಕೆಯರಿಗೆ ಸಂವಾದಿಯಾಗಿದ್ದಾರೆ. ಇವರಲ್ಲಿ ಪತಿಯು ಅನುಕೂಲ, ದಕ್ಷಿಣ (ದಾಕ್ಷಿಣ್ಯವಂತ), ಧೃಷ್ಟ (ಗಡಸುಗಾರ) ಮತ್ತು ಶಠ (ಠಕ್ಕಿನವನು) ಎಂದು ನಾಲ್ಕು ಉಪವಿಭಾಗಗಳಾಗಿ ವಿಭಕ್ತನಾಗಿದ್ದಾನೆ. ಶಠನು ಮಾನಿ (ಸ್ವಾಭಿಮಾನಿ) ಮತ್ತು ಚತುರನೆಂದು ಪುನಃ ವಿಭಕ್ತನಾಗಿದ್ದಾನೆ. ಇವರೆಲ್ಲರೂ ಸ್ಥಾನಮಾನ ಮತ್ತು ಸಂಸ್ಕಾರಸಾಧನಗಳ ಪ್ರಭಾವದಿಂದಾಗಿ ಉತ್ತಮ, ಮಧ್ಯಮ ಮತ್ತು ಅಧಮರೆಂದು ಪುನಃ ವರ್ಗೀಕೃತವಾಗಿದ್ದಾರೆ. (ಇಲ್ಲಿ ಉತ್ತಮತೆ, ಮಧ್ಯಮತೆ ಮತ್ತು ಅಧಮತೆಗಳು ಅವರ ಗಂಭೀರತೆ, ಚೆಲ್ಲುತನ, ಹಾಗೂ ಹಠಮಾರಿತನಗಳನ್ನು ಕುರಿತದ್ದಾಗಿವೆ.) ಇವರೆಲ್ಲರೂ ಅಭಿಜ್ಞರು- ಅಂದರೆ ಶೃಂಗಾರವಿಲಾಸಕೌಶಲವನ್ನು ಬಲ್ಲವರು. ಹೀಗಿಲ್ಲದಿರುವವರೂ ಕೆಲವೊಮ್ಮೆ ನಾಯಕರಾದಾಗ ಅದು ಬಲು ವಿನೋದ. ಅಂಥ ನಾಯಕನೇ ಅನಭಿಜ್ಞ. ಈತನು ಮುಗ್ಧಾನಾಯಿಕೆಯ ಸಂವಾದಿ. ಈ ರೀತಿ ಲೆಕ್ಕಿಸಿದರೆ (ಭಾನುದತ್ತನ ರಸಮಂಜರೀ ಗ್ರಂಥಾನುಸಾರವಾಗಿ) ಒಟ್ಟು ತೊಂಭತ್ತಾರು ಬಗೆಯ ನಾಯಕರಿದ್ದಾರೆ. (ನಾಯಿಕೆಯರ ಸಂಖ್ಯೆ ೫೦,೨೨೦ಕ್ಕೆ ಹೋಲಿಸಿದರೆ ನಿಜಕ್ಕೂ ಕಡಿಮೆಯೇ ಸರಿ) ಈ ಪ್ರಭೇಧಗಳನ್ನೆಲ್ಲವನ್ನೂ ಆಯಾ ನಾಯಕರಿಗೆ ಅರಿತು ಅನ್ವಯಿಸಿ ವರ್ಣಿಸಿ, ಹಾಡಿ, ನಟಿಸಿದಾಗ ಹೃದ್ಯವೆನಿಸುತ್ತದೆ.
ನಾಯಿಕಾನಿರೂಪಣೆಯಲ್ಲಿರುವಂತೆಯೇ ನಾಯಕರನ್ನೂ ಅವರವರ ವಯೋನುಗುಣವಾಗಿ ಜ್ಯೇಷ್ಠ, ಕನಿಷ್ಠ ಎಂದೂ ರೂಪಕನಾಯಕರ ಹಾಗೆ ಧೀರೋದಾತ್ತಾದಿಗಳೆಂದೂ ವರ್ಗೀಕರಿಸಬಹುದು. ಪರಕೀಯ (ಅನ್ಯಾ) ನಾಯಿಕೆಗೆ ಸಂವಾದಿಯಾಗಿ ಉಪಪತಿಯನ್ನು ವಿವಾಹಿತ ಮತ್ತು ಅವಿವಾಹಿತನೆಂದೂ, ಗುಪ್ತ ಮತ್ತು ಪ್ರಕಟನೆಂದೂ ಹಲವು ಬಗೆಗಳಲ್ಲಿ ವರ್ಗೀಕರಿಸಬಹುದು. ಇದನ್ನೇ ವೈಶಿಕನಿಗೂ ಸಮುಚಿತವಾಗಿ ಅನ್ವಯಿಸಬಹುದು. ಇವಾವುದಕ್ಕೂ ತೊಡಕಿಲ್ಲ. ಆದರೆ ಅವಸ್ಥಾಭೇಧದಿಂದ ಪ್ರೋಷಿತಪತಿಕಾ-ವಾಸಕಸಜ್ಜಿಕಾ- ಸ್ವಾಧೀನಪತಿಕಾದಿನಾಯಿಕೆಯರನ್ನು ಅಷ್ಟವಿಧವಾಗಿ ವರ್ಗೀಕರಿಸಿದಂತೆ ನಾಯಕರನ್ನು ವಿಭಜಿಸಲು ಸಾಧ್ಯವೇ ಎಂದು ಭಾನುದತ್ತನು ಪ್ರಶ್ನಿಸಿಕೊಂಡು ಸಾಧ್ಯವಿಲ್ಲವೆಂದು ನಿಶ್ಚಯಿಸುತ್ತಾನೆ. (ಅವಸ್ಥಾಭೇಧೇನ ಯದಿ ಭೇದೋ ನಾಯಕಸ್ಯ ಸ್ಯಾತ್ತದೋತ್ಕವಿಪ್ರಲಬ್ಧಖಂಡಿತಾದಯೋನಾಯಕಾಃ ಸ್ವೀಕರ್ತವ್ಯಾಃ) ಖಂಡಿತಾನಾಯಿಕೆಯು ವೇಶ್ಯಾಲೋಲನೋ ಅಥವಾ ಪರಸ್ತ್ರೀರತನೋ ಆಗಿ ತಾನ್ನೆಡೆಗೆ ಬಂದ ನಾಯಕನನ್ನು ನಿಂದಿಸುವಳಷ್ಟೇ. ಒಂದು ವೇಳೆ ಖಂಡಿತಾನಾಯಕನನ್ನು ಕಲ್ಪಿಸಿದಲ್ಲಿ ಆತನು ಪರಪುರುಷನನ್ನು ಸೇರಿದ ಪತ್ನಿಯನ್ನು ನಿಂದಿಸುವಾಗ ಶೃಂಗಾರರಸವೇ ಕೆಟ್ಟುಹೋಗಿ ಸ್ತ್ರೀಪಾತಿವ್ರತ್ಯವೂ ಹಾಳಾಗಿ ಇಡಿಯ ಅಭಿನಯವೇ ಜುಗುಪ್ಸಿತವಾಗುವುದೆಂದು ಭಾನುದತ್ತನ ಆಶಯ.
ಪುರುಷಪ್ರಧಾನವಾದ ಅಂದಿನ ಸಮಾಜದಲ್ಲಿ ಬಹುಪತ್ನೀತ್ವ, ವೇಶ್ಯಾಗಮನಾದಿಗಳು ಸಂಮತವಾಗಿ ಶೃಂಗಾರಸವನ್ನು ಹದಗೆಡಿಸದಂಥ ಪರಿಸರವನ್ನು ನಿರ್ಮಿಸಿದ್ದವು. ಆದರೆ ಸ್ತ್ರೀಯರ ವಿಚಾರದಲ್ಲಿ ಹಾಗಲ್ಲ. (ಅಂತಾದರೂ ಪರಕೀಯನಾಯಿಕೆಯಲ್ಲಿ ಈ ತೊಡಕು ಇದ್ದೇ ಇರುತ್ತದೆ. ಇದೇಕೋ ಭಾನುದತ್ತನ ಗಮನಕ್ಕೆ ಬರಲಿಲ್ಲ ಅಥವಾ ನಾಯಿಕಾದೃಷ್ಟಿಯಿಂದ ಮಾತ್ರ ಅಲ್ಲಿ ಕಂಡಿರುವುದು ಉದ್ವೇಜಕವಾಗಲಿಲ್ಲವೇನೋ ! ನಾಯಕನ ದೃಷ್ಟಿಯಿಂದ ಅವನ ಪತ್ನಿಯ ಪರಪುರುಷಗಮನವು ಸಹನಾತೀತವೆಂದು ಭಾನುದತ್ತನ ಇಂಗಿತ.) ಇಂದಾದರೋ ಬಹುಪತ್ನೀತ್ವ, ವೈಶಿಕವೃತ್ತಿ ಮೊದಲಾದುವು ಗರ್ಹಣೀಯವಾಗಿವೆ. ಹೀಗಾಗಿ ನಾಯಿಕೆಯಂತೆಯೇ ನಾಯಕನಿಗೂ ಸತೀವ್ರತತ್ವ ಅವಶ್ಯ. ಆದರೆ ಪಾರಂಪರಿಕ ಶಾಸ್ತ್ರೀಯನರ್ತನಕಲಾಂತರ್ಗತವಾದ ಕಾರಣ ಇಂದಿಗೂ ನೃತ್ಯದ ಶೃಂಗಾರನಾಯಿಕಾಭಿನಯದಲ್ಲಿ ನಾಯಕನ ಬಹುಪತ್ನೀತ್ವ, ಪಾರದಾರಿಕ ಮತ್ತು ವೈಶಿಕವೃತ್ತಾಂತಗಳು ಉಳಿದಿವೆ ; ಅಸಭ್ಯವಾಗಿಯೂ ಕಾಣುತ್ತಿಲ್ಲ. ಇಂಥ ಸ್ಥಿತಿಯೇ ನಾಯಿಕೆಯ ಬಹುಪುರುಷಪ್ರಣಯಕ್ಕೆ ಉಳಿಯುವುದೇ ಎಂದು ಪ್ರಶ್ನಿಸಿದರೆ ಪರಕೀಯಾ ಮತ್ತು ಸಾಧಾರಣಾರೂಪದಲ್ಲಿ ಹೌದೆಂಬ ಉತ್ತರ ಸಿದ್ಧವೇ ಇದೆ. ಆದರೆ ಸ್ವೀಯಾನಾಯಿಕೆಯಲ್ಲಿ ಪಾರಕಾಂತಿಕವನ್ನು ಸಂಪ್ರದಾಯವು ಸಹಿಸದೇನೋ. ಇರಲಿ, ಈ ಬಗೆಯ ಪ್ರಶ್ನೆಗಳನ್ನು ಭಾನುದತ್ತನು ಬೆಳೆಸಲು ಕಾರಣ ಆತನು ನಾಯಕರ ಅವಸ್ಥಾನುಸಾರವರ್ಗೀಕರಣದಲ್ಲಿ ಅನುಸರಿಸಬೇಕಾದ ಮಾರ್ಗವನ್ನು ತಪ್ಪಾಗಿ ಕಂಡಿದ್ದರಿಂದಲೇ ಆಗಿದೆ. ಸ್ವೀಯೆಗೆ ಪತಿ, ಪರಕೀಯೆಗೆ ಉಪಪತಿ, ಸಾಧಾರಣೆಗೆ ವೈಶಿಕನೆಂದು ಸಂವಾದಿಯಾಗಿ ಇರುವಂತೆಯೇ ಅಷ್ಟನಾಯಿಕೆಯರಿಗೂ ಸಂವಾದಿಯಾಗಿ ವಿವಿಧಾವಸ್ಥೆಗಳ ನಾಯಕರನ್ನು ಅತಿಸುಲಭವಾಗಿ ಕಲ್ಪಿಸಬಹುದು. ಹೀಗೆ ಮಾಡಿದಲ್ಲಿ ಯಾವುದೇ ‘ಪಾತಿವ್ರತ್ಯಭಂಗ’ದ ತೊಡಕುಬಾರದು.
ಇಂಥ ನಾಯಕಾಭಿನಯವು ಕೈಶಿಕೀವೃತ್ತ್ಯುಚಿತನೃತ್ಯಕ್ಕೆ ಸಕಾರಣವಾಗಿ ಅವಶ್ಯವಾಗಿದ್ದರೂ, ನರ್ತಕರಿಗೂ ನೋಡುಗರಿಗೂ ಬೇಕಾಗಿದ್ದರೂ, ವಿಫುಲಾವಕಾಶ ಪುಷ್ಟವಾಗಿದ್ದರೂ ಅಭಿನೇಯವಾದ ಸಮುಚಿತಸಾಹಿತ್ಯವಿಲ್ಲದೆ ರಂಗಸ್ಥಳಕ್ಕೆ ಬರಲಾರದು. ಇಂಥ ಅಭಿನಯಾಂಶಕ್ಕೆ ದೊರಕುವ ಸಾಹಿತ್ಯವನ್ನು ನಾವು ಗಮನಿಸಿದರೆ ಸಿಗುವ ಸಾಮಗ್ರಿಯು ನಾಯಿಕಾಭಿನಯಕ್ಕೆ ಹೋಲಿಸಿದರೆ ಅತ್ಯಲ್ಪ. ಇದಕ್ಕೆ ಕಾರಣಗಳು ನಾಯಕಾಭಿನಯದ ಪ್ರಾಚುರ್ಯವೈರಲ್ಯದಿಂದಲೇ ಮೊದಲಾಗಿವೆ. ಪದಕವಿತಪಿತಾಮಹನಾದ ಕ್ಷೇತ್ರಯ್ಯನಲ್ಲಿಯೇ ಇಲ್ಲವೆಂಬಷ್ಟು ಕಡಮೆ ನಾಯಕಪದಗಳುಂಟು. ಇನ್ನು ಸಾರಂಗಪಾಣಿಯೂ ಅಷ್ಟೇ. ಇದು ತೆಲುಗಿನ ಮಾತಾಯ್ತು. ತಮಿಳಿನಲ್ಲಿಯೂ ಸ್ಥಿತಿ ಇದಕ್ಕಿಂತ ಪೂರ್ತಿ ಭಿನ್ನವಲ್ಲ. ಕನ್ನಡದಲ್ಲಂತೂ ಸ್ಪ್ರೈಣವಾದ ಜಾವಳಿಗಳಿರುವುದೇ ಹೊರತು ಪದಗಳು ತುಂಬಾ ಕಡಮೆ. ಹೀರಲು ನಾಯಕಾಭಿನಯದ ಪದಗಳಂತೂ ಅತೀವ ಕ್ವಾಚಿತ್ಕ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಇನ್ನು ಅಭಿನಯಕ್ಕಾಗಿ ಅಳವಡಿಸಿಕೊಂಡು ಪ್ರಕೃತದಲ್ಲಿ ಚಲಾವಣೆಯಲ್ಲಿರುವ ರಚನೆಗಳಂತೂ ಮತ್ತೂ ಕಡಮೆ; ಬೆರಳಮೇಲೆಣಿಸಬಹುದಾದಷ್ಟು.
ಈಚೆಗೆ ನೃತ್ಯಕ್ಕಿಂತ ನೃತ್ತಕ್ಕೇ ಪ್ರಾಶಸ್ತ್ಯ ಬಂದಿರಲು ನಾಟ್ಯಾಚಾರ್ಯರಿಗೆ ಬಹುಶ್ರುತತ್ವ ಕ್ಷೀಣಿಸಿದೆ. ರಸಾಭಿನಯದ ಕ್ಲೇಶವನ್ನೊಲದ ಸುಕುಮಾರಮತಿಗಳು ಆಂಗಿಕಾಭಿನಯಕ್ಕೇ ನರ್ತನಕಲೆಯ ಚರಮಸೀಮೆಯನ್ನು ಕಾಣಿಸುತ್ತಿದ್ದಾರೆ. ಅಲ್ಲದೆ ನಾಯಿಕಾಭಿನಯವೇ ಗಟ್ಟಿಯಾಗಿಲ್ಲದಿರುವಾಗ ನಾಯಕರ ಬಗೆಗೆ ಹೇಳಲೇಬೇಕಿಲ್ಲ. ಕೇವಲ ಹಲಕೆಲವು ತರುಣರಿಗಾಗಿ ಪಾಠಹೇಳುವಾಗ ಒಂದೋ ಎರಡೋ ಅಂಶಗಳಾಗಿ ನಾಯಕಾಭಿನಯವು ಕೆಲವರಿಂದ ಶಿಕ್ಷಿತವಾಗಿರಬಹುದಷ್ಟೆ. ಆದರೆ ಸಂಸ್ಕೃತದತ್ತ ಗಮನಹರಿಸಿದರೆ ಈ ಕೊರತೆಯನ್ನು ಸ್ವಲ್ಪಮಟ್ಟಿಗೆ ತುಂಬಿಕೊಳ್ಳಬಹುದಾಗಿದೆ.
ಸಂಸ್ಕೃತದ ನಾಟಕಗಳಲ್ಲಿ ಬರುವ ಅನೇಕರಸವಿಸ್ರವತ್ಪದ್ಯಗಳು ನಾಯಕಾಭಿನಯಕ್ಕೆ ಹೇಳಿಮಾಡಿಸಿದಂತಿವೆ. ಪ್ರಮುಖವಾಗಿ ಹೆಸರಿಸುವುದಾದರೆ ಕಾಳಿದಾಸನ ಶಾಕುಂತಲ, ವಿಕ್ರಮೋರ್ವಶೀಯ ಮತ್ತು ಮಾಲವಿಕಾಗ್ನಿಮಿತ್ರ, ಶೂದ್ರಕನ ಮೃಚ್ಛಕಟಿಕ, ಶ್ರೀಹರ್ಷನ ರತ್ನಾವಲೀ, ಪ್ರಿಯದರ್ಶಿಕಾ ಮತ್ತು ನಾಗಾನಂದ, ಭವಭೂತಿಯ ಮಾಲತೀಮಾಧವ (ಸ್ವಲ್ಪಮಟ್ಟಿಗೆ ಉತ್ತರರಾಮಚರಿತ) ರಾಜಶೇಖರನ ವಿದ್ಧಶಾಲಭಂಜಿಕೆ, ಭಟ್ಟನಾರಾಯಣನ ವೇಣೀ ಸಂಹಾರ (ವೀರರಸಕ್ಕೆ), ಕ್ಷೇಮೀಶ್ವರನ ನೈಷಧಾನಂದ ಮತ್ತಿತರ ಅನೇಕ ಭಾಣಗಳೂ, ನಾಟಿಕೆಗಳೂ ರಾಶಿರಾಶಿಯಾಗಿವೆ. ಇವಲ್ಲದೆ ಹತ್ತು ಹಲವು ಸುಭಾಷಿತಸಂಗ್ರಹಗಳಲ್ಲಿ ಸಹಸ್ರಸಂಖ್ಯೆಯಲ್ಲಿ ಒಳ್ಳೆಯ ಪದ್ಯಗಳು ದೊರೆಯುತ್ತವೆ. ವಿಶೇಷತಃ ಅಮರುಕನ ಶತಕವು ನಾಯಕ-ನಾಯಿಕೆಯರ ರಸಾಭಿನಯಕ್ಕೆ ಬತ್ತದ ಬಂಗಾರದ ಗಣಿ. ಇವುಗಳ ಆಧಾರದಿಂದ ಅನೇಕವಿಧವಾದ ಸಂಚಾರಿಗಳನ್ನು ಅಭಿನಯಾವಸರದಲ್ಲಿ ಅಳವಡಿಸಿಕೊಳ್ಳಬಹುದು. ಗೇಯಪ್ರಬಂಧಗಳಲ್ಲಿ ಗೀತಗೋವಿಂದವಂತೂ ಸುವಿಖ್ಯಾತ. ಇದರ ನೂರಾರು ಅನುಕರಣಗಳಿವೆ. ಇವುಗಳ ಸಾಹಿತ್ಯವು ಮೇಲ್ಮಟ್ಟದಲ್ಲದಿದ್ದರೂ ತಕ್ಕಮಟ್ಟಿಗೆ ಶೃಂಗಾರನಾಯಕನಿರೂಪಣೆಗೆ ಯೋಗ್ಯವೇ ಆಗಿವೆ. ರಾಜಶೇಖರ, ಧನಂಜಯ, ಭೋಜರಾಜ, ಹೇಮಚಂದ್ರ, ಸಿಂಹಭೂಪಾಲ, ಭಾನುದತ್ತ, ಸಾಗರನಂದಿ, ರಾಮಚಂದ್ರ-ಗುಣಚಂದ್ರ ಮೊದಲಾದ ಅನೇಕ ಲಾಕ್ಷಣಿಕರ ಬೃಹದ್ಗ್ರಂಥಗಳಲ್ಲಿ ಉಲ್ಲಿಖೀತವಾದ ಸಾವಿರಾರು ರಸಪೇಶಲಪದ್ಯಗಳನ್ನೂ ಆಧರಿಸಿಕೊಳ್ಳಬಹುದು.
ಇನ್ನು ಆಧುನಿಕದೇಶೀಯಸಾಹಿತ್ಯದತ್ತ ನೋಡಿದರೆ ನವೋದಯಕಾಲದ ಅನೇಕ ಕನ್ನಡದ ಶೃಂಗಾರಭಾವಗೀತಗಳನ್ನು ಬಳಸಿಕೊಳ್ಳಲು ಸಾಧ್ಯವಿದೆ. ಇದನ್ನು ಮಾಡುವಾಗ ಶಾಸ್ತ್ರೀಯವಾದ ಚೌಕಟ್ಟನ್ನು ಗಮನಿಸಿ ಆಯ್ಕೆಯನ್ನೂ, ಅಭಿನಯರೀತಿಯನ್ನೂ ಎಚ್ಚರದಿಂದ ಅನುವಾಗಿಸಬೇಕಾಗುತ್ತದೆ. ತೀ.ನಂ.ಶ್ರೀ ಅವರ ಒಲುಮೆ, ಕೆ.ಎಸ್.ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ, ಐರಾವತ, ದೀಪದ ಮಲ್ಲಿ, ಇರುವಂತಿಗೆ, ಉಂಗುರ, ಕುವೆಂಪು ಅವರ ಪ್ರೇಮಕಾಶ್ಮೀರ, ಜೇನಾಗುವಾ ಇತ್ಯಾದಿ ಕವಿತಾಸಂಕಲನಗಳಿಂದ ನಾಯಕಲಕ್ಷಣಗಳ ವ್ಯಾಪ್ತಿಗೆ ಬರುವ ಹತ್ತು ಹಲವು ಸುಂದರಕವಿತೆಗಳನ್ನು ಮಾರ್ಗಪದ್ಧತಿಯ ನೃತ್ಯಕ್ಕೆ ಅಳವಡಿಸಲು ಸಾಧ್ಯವುಂಟು. ಈ ಬಗೆಯಲ್ಲಿ ನಾಯಕಾಭಿನಯಕ್ಕೆ ಅವಶ್ಯವಾದ ಶೃಂಗಾರಪರಸಾಹಿತ್ಯವನ್ನು ರಾಗ-ತಾಳಗಳಿಗೆ ಹೊಂದಿಸಿಕೊಂಡು ನರ್ತನದಲ್ಲಿ ಅಳವಡಿಸಿಕೊಳ್ಳುವುದು ಅಸಾಧ್ಯವೇನಲ್ಲ. ಸದ್ಯದಲ್ಲಿ ಮೇಲ್ಕಂಡ ಆಕರಗಳನ್ನು ತಡಕಿದಲ್ಲಿ ವಿವಿಧಾವಸ್ಥಾನಿರೂಪಣೆಗೆ ಕೊರತೆಯೂ ಇಲ್ಲ. ಅಮರುಕ, ಕಾಳಿದಾಸ ಮತ್ತು ಶ್ರೀಹರ್ಷ ಈ ಮೂವರೇ ಸಾಕು; ನೂರು ಕಾಲದ ಕೊರತೆಯನ್ನು ತುಂಬಿಕೊಡಬಲ್ಲರು.
ಈ ದಿಶೆಯಲ್ಲಿ ನನ್ನ ನಮ್ರಪ್ರಯತ್ನವೂ ಸಾಗಿದೆ. ಲಕ್ಷಣಬದ್ಧವಾಗದ, ಆದರೆ ಲಕ್ಷಣೀಕರಿಸಲು ವಿಫುಲಾವಕಾಶವಿರುವ ಅಂಶಗಳನ್ನು ಪ್ರಥಮ ಬಾರಿಗೆ ಕ್ರೋಢೀಕರಿಸಿ ನಿರೂಪಿಸಿದ್ದೇನೆ. ಸುಮಾರು ಐವತ್ತು ಶಾಸ್ತ್ರೀಯಪದಗಳನ್ನು ರಾಗ-ತಾಳ ನಿರ್ದೇಶನದೊಡನೆ ನಾಯಕವಿಭಾಗಾದಿಗಳ, ಸಂಚಾರಿಗಳ ಮಾಹಿತಿಯೊಡನೆ ಕನ್ನಡ ಮತ್ತು ಸಂಸ್ಕೃತದಲ್ಲಿ ಸಿದ್ಧಪಡಿಸಲಾಗಿದೆ. ಇವು ಪಲ್ಲವಿ, ಅನುಪಲ್ಲವಿ, ಚರಣ, ಗತಿಭೇಧಾವಕಾಶವಿರುವ ಸಾಹಿತ್ಯವೇ ಮೊದಲಾದ ವಿಶಿಷ್ಟತೆಗಳಿಂದ ಕೂಡಿವೆ. ಇನ್ನುಳಿದಿರುವುದು ಅಭಿನೇತೃಗಳ ಪೂರ್ವಸಿದ್ಧತೆ ಹಾಗೂ ಮೂಲಭೂತಾರ್ಹತೆಗಳೇ !
…ಮುಂದುವರಿಯುವುದು
ಮುಂದಿನ ಸಂಚಿಕೆಯಲ್ಲಿ : ನಾಯಕಭಾವ ನಿರೂಪಣೆ ಹೇಗೆ? …ನಿರೀಕ್ಷಿಸಿ..