Author: ಜ್ಯೋತಿ ಮಹಾದೇವ್, ಮಣಿಪಾಲ
ಭಗವಂತನ ಮಹಿಮೆಯನ್ನು ಕೊಂಡಾಡುವ ಹವ್ಯಾಸವಿರುವ ಭಕ್ತರಿಗೆ ಆ ದೇವದೇವನ ಲೀಲಾವಿಲಾಸವನ್ನು ಯಾವ್ಯಾವ ರೀತಿಯಲ್ಲಿ ಕಂಡುಂಡು ಸಹಭಜಕರಿಗೆ ಬಡಿಸಿದರೂ ತೃಪ್ತಿಯಿಲ್ಲ. ಅದೊಂದು ತಪಸ್ಸು. ಹುಮ್ಮಸ್ಸು ತುಂಬಿಯೂ ಮನಸ್ಸನ್ನು ಮಾಗಿಸುವ ತಪಸ್ಸು. ಅದಕೆಂದೇ ವಾಲ್ಮೀಕಿ, ಹುತ್ತದೊಳಗಿನ ಧ್ಯಾನ ಸಮಾಧಾನವಾಗದೆ, ಮನದೊಳಗೆ ಹುತ್ತಗಟ್ಟಿದ ಭಾವಗಳ ಮರವಾಗಿಸುತ್ತ ತಾನೇ ಕವಿಯಾಗಿ ರಾಮನಾಮದ ರಾಮಾಯಣ ಬರೆದ. ಇನ್ನು, ಲೀಲೆಗಳಿಗೆ ಹೆಸರಾದ ನೀಲವರ್ಣದೇವ ಶ್ರೀಕೃಷ್ಣನ ವಿನೋದಾವಳಿಗಳಿಗೆ ಬೆರಗಾಗಿ ವಶವಾಗದವರುಂಟೆ? ಲೋಕವನ್ನೆಲ್ಲ ವಿಹರಿಸುವ ಆ ಹಿರಿಮೆಯ ಹಾಡುಗಳನ್ನು ತನ್ನ ಪಾಡಾಗಿಸಿಕೊಂಡ ತ್ರಿಲೋಕಸಂಚಾರಿಯೂ ಈ ಪ್ರಭಾವಳಿಯ ಸೆಳೆಗೆ ಸಿಲುಕಿ ರೂಪಾಂತರ ಹೊಂದಬೇಕಾದ ಸಂದರ್ಭವಂತೂ ಬಲು ಮನೋಹರ, ಸ್ವಾರಸ್ಯಕರ. ಅಂತಹ ಸರಸ ಸುಮಧುರ ಕಥಾನಕವೊಂದನ್ನು ಭಕ್ತಾಗ್ರೇಸರರಲ್ಲಿ ಒಬ್ಬರಾದ ಶ್ರೀ ವಾದಿರಾಜ ಯತಿವರ್ಯರು ಪಾಮರರಿಗಾಗಿ ಹೆಣೆದಿರಿಸಿದ್ದಾರೆ. ಯತಿಶ್ರೇಷ್ಠರ ಹಲವಾರು ಕೃತಿಗಳಲ್ಲಿ ಈ ‘ನಾರದ-ಕೊರವಂಜಿ’ಯೆಂಬ ರೂಪಕವೂ ಒಂದು. ಶ್ರೀ ವಾದಿರಾಜರು ತಮ್ಮ ಇನ್ನೊಂದು ಕೃತಿ ‘ಭ್ರಮರ ಗೀತೆ’ಯಲ್ಲಿ, ‘ಗೋವಿಂದನ ಎದುರಲಿ ನಾಟ್ಯವಾಡಿಸುವೆ’ನೆಂದು ವಿನಮ್ರರಾಗಿ ಹೇಳಿಕೊಂಡಿರುವಂತೆ, ಅಪೂರ್ವ ರಂಗ ಸಾಧ್ಯತೆಗಳನ್ನು ಹೊಂದಿರುವ ಈ ‘ನಾರದ ಕೊರವಂಜಿ’ ರೂಪಕದಲ್ಲಿ, ‘ಹರಿಯೇ ಪತಿಯಾಗಬೇಕು’ ಎಂದು ಹಂಬಲಿಸುವ ರುಕ್ಮಿಣೀದೇವಿಯ ಬಳಿಗೆ ಕೊರವಂಜಿಯಾಗಿ ಬಂದು ನಾರದರು, ಶ್ರೀ ಕೃಷ್ಣ ಬಂದೇ ಬರುತ್ತಾನೆನ್ನುವ ಸಂದೇಶ ನೀಡುತ್ತ, ಜಗದ ತಂದೆತಾಯಿಯರ ಭೂ-ಮದುವೆಯ ನಾಟಕಕ್ಕೆ ಒಂದು ಪಾತ್ರಧಾರಿಯಾಗುವ ಸನ್ನಿವೇಶವನ್ನು ಕಾಣುತ್ತೇವೆ. ಇಲ್ಲೆಲ್ಲ ಕೃತಿಕಾರರ ಭಕ್ತಿ ಮೀರಿದ ಒಳನೋಟಗಳನ್ನು ಕಾಣಬಹುದಾಗಿದೆ.
ಸೋದೆ ಶ್ರೀಮಠಾದೀಶ, ಭಾವೀ ಸಮೀರರೆಂದೇ ಹೆಸರಾಂತ ಶ್ರೀ ವಾದಿರಾಜರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ, ಮಾರ್ಚ್ ೧೧ರ ಭಾನುವಾರ ಅಪರಾಹ್ನ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ, ಉಡುಪಿಯ ಸಮೂಹ ಕಲಾವಿದರ ತಂಡ ಈ ನೃತ್ಯಪ್ರಸ್ತುತಿಯನ್ನು ಶ್ರೀದೇವರಿಗರ್ಪಿಸಿತು. ಉದ್ಯಾವರ ಮಾಧವ ಆಚಾರ್ಯರ ನಿರ್ದೇಶನದಲ್ಲಿ, ಶ್ರೀಮತಿ ಭ್ರಮರಿ ಶಿವಪ್ರಕಾಶ್ ಸಂಯೋಜಿಸಿದ ರೂಪಕದ ನಾಟ್ಯಲಹರಿ ನೋಟಕರನ್ನು ದ್ವಾಪರೆಯ ಭೀಷ್ಮಕನರಮನೆಯ ದರ್ಶನ ಮಾಡಿಸಿತೆಂದರೆ ಅತಿಶಯೋಕ್ತಿಯಲ್ಲ. ಸಹನರ್ತಕಿ ಶ್ರೀಮತಿ ವೀಣಾ ಉಪಾಧ್ಯಾಯ ರುಕ್ಮಿಣಿಯಾಗಿಯೂ, ಶ್ರೀಮತಿ ಭ್ರಮರಿ ನಾರದ-ಕೊರವಂಜಿಯಾಗಿಯೂ ಮನೋಹರ ಅಭಿನಯಗೈದರು. ಶ್ರೀ ರಾಘವೇಂದ್ರ ಆಚಾರ್ಯರು ಸಂಗೀತ ಸಂಯೋಜನೆ ಹಾಗೂ ಹಾಡುಗಾರಿಕೆಯಲ್ಲಿ, ಸಖಿ-ಬಾಲಿಕೆಯರು ತಮ್ಮ ಸೂಕ್ತ ಸಹಯೋಗದಲ್ಲಿ, ಹಿಮ್ಮೇಳ ಕಲಾವಿದರೆಲ್ಲರೂ ವಾದ್ಯ ಸಹಕಾರದಲ್ಲಿ ಈ ಪ್ರಸ್ತುತಿಯ ಶ್ರೇಷ್ಠತೆಯ ಪಾಲುದಾರರು.
ನಾಟ್ಯವೆನ್ನುವುದು ರಸಿಕರಿಗೆ ರಸಾನುಭವದ ಔತಣವನ್ನೀಯುವಂತಿರಬೇಕು. ನೃತ್ಯರೂಪಕಗಳಲ್ಲಿ ಅಂತಹ ರಸಾನುಭವದ ಸಾಧ್ಯತೆಗಳಿಗೆ ಸಾಧಕ-ಬಾಧಕಗಳೆರಡೂ ಕಂಡುಬರುತ್ತವೆ. ಇಲ್ಲಿ, ನಟುವಾಂಗ ಸಹಿತ ನಾಟ್ಯಭಾಗವನ್ನೂ, ಸಂಗೀತ-ಸಂಯೋಜನೆಯನ್ನೂ, ಸೂಕ್ತ ಅಭಿನಯವನ್ನೂ ರೂಪಕದ ಒಟ್ಟೂ ಭಾವದೋಘಕ್ಕೆ ಹೊಂದಿಸಿಕೊಳ್ಳುತ್ತಲೂ ಆಯಾಯ ಭಾಗದ ನವಿರು ಪಲುಕುಗಳಿಗೆ ಮಿಂಚಿನ ರೇಕು ಸ್ಪರ್ಶಿಸುವಂತಹ ಚುರುಕುತನ ಸೂಕ್ಷ್ಮಜ್ಞತೆಯೂ ಕಲಾವಿದರಿಗಿರಬೇಕು. ನಾಟ್ಯಶಾಸ್ತ್ರದ ಎಲ್ಲ ಕಟ್ಟುನಿಟ್ಟಿನ ಬಿಗಿ ಬಂಧಗಳ ಪ್ರಯೋಗವನ್ನು ರೂಪಕದ ಚೌಕಟ್ಟಿನಲ್ಲಿ ಸಡಿಲಿಸಿಯೂ ವೇದಿಕೆಯಿಂದ ರಸಿಕಗಮನ ತೇಲಿಹೋಗದಂತೆ, ಸಂವಹನ ಜಾಳಾಗದಂತೆ ಜಾಗ್ರತೆವಹಿಸುವ ಸಮಗ್ರ ನೋಟ ಸಂಯೋಜಕರಿಗಿರಬೇಕು. ಅಂತಹ ಸೂಕ್ಷ್ಮಜ್ಞತೆ ಹಾಗೂ ಸಮಗ್ರತೆಯ ಸಂಗಮವಾಗಿತ್ತು ಉಡುಪಿಯಲ್ಲಿ ಪ್ರಸ್ತುತಗೊಂಡ ‘ನಾರದ ಕೊರವಂಜಿ’ ರೂಪಕ.
ಸುಮಾರು ಐವತ್ತು ನಿಮಿಷಗಳ ಪ್ರದರ್ಶನ ಕಾಲದಲ್ಲಿ ಸಹೃದಯರನ್ನು ಸೆಳೆದಿರಿಸಿದ, ತಟ್ಟಿದ, ಕಲಕಿದ ಕ್ಷಣಗಳು ಹಲವಾರು. ನಾರದನಾಗಿ ರಂಗದ ಮೇಲೆ ಬಂದ ನರ್ತಕಿ ನಾರದನ ಭಕ್ತಿಭಾವಗಳನ್ನು ಸಮರ್ಥವಾಗಿ ನಿರೂಪಿಸುತ್ತಲೇ ಶ್ರೀಲಕ್ಷ್ಮೀದೇವಿಯ ಸೇವೆಗೈಯಲು ಅವಕಾಶವಿದೆಂದು ರುಕ್ಮಿಣೀದೇವಿಯ ಅಂತಃಪುರ ಸೇರಲು ತಾನು ಕೊರವಂಜಿಯಾಗಿ ರೂಪಾಂತರಿಸಿಕೊಳ್ಳುವ ನಿರ್ಧಾರ ಹಾಗೂ ಆ ಬದಲಾವಣೆ- ‘ಧರಣಿಯೊಳಗೆ ನಾರದ ಕೊರವಂಜಿಯಾದ’ನೆಂಬ ಗಾಯನದ ಜೊತೆಗೆ ವೇದಿಕೆಯಲ್ಲೇ ಪುಟ್ಟ ಪರದೆಮರೆಯಲ್ಲಿ ತನ್ನ ಕಾವಿಯನ್ನೂ ತಂಬೂರಿಯನ್ನೂ ಬದಿಗಿರಿಸಿ ಮಣಿಸರ, ಬಳೆಗಳನ್ನು ಧರಿಸಿ ಕೊರವಂಜಿಯಾಗುವ ಸನ್ನಿವೇಶ -ನಾಟಕೀಯವಾದರೂ ಅರ್ಥಪೂರ್ಣ. ಅಂತೆಯೇ ಅದರ ಹಿಂಚಲನೆಯ ಸಂದರ್ಭದಲ್ಲಿ ಮರಳಿ ನಾರದನಾಗಿ ಪರಿವರ್ತಿತನಾಗುವಾಗ, ನೃತ್ಯ ಸಾಧ್ಯತೆಗಳ ಜೊತೆಗೇ ವೇದಿಕೆಯಲ್ಲೇ ಕೊರವಂಜಿ ತನ್ನ ಮಣಿಸರ-ಬಳೆಗಳನ್ನು ತ್ಯಜಿಸಿ, ಕಾವಿ-ತಂಬೂರಿಗಳನ್ನೆತ್ತಿಕೊಂಡು ಕಣ್ಣಿಗೊತ್ತಿಕೊಂಡು ಧರಿಸುವಲ್ಲಿ ಪೂಜ್ಯಭಾವ, ಭಕ್ತಿ, ಸಾರ್ಥಕ್ಯವೆಲ್ಲವೂ ನಿರೂಪಿತವಾಗುತ್ತವೆ.
ಸನ್ನಿವೇಶಗಳಿಗೆ ತಕ್ಕಂಥ ರಾಗಸಂಯೋಜನೆ, ರಂಗಪ್ರದೇಶದ ಉಪಯೋಗ, ವೇದಿಕೆ-ಸಹೃದಯರ ನಡುವಿನ ಭಾವನಾತ್ಮಕ ಸಂವಹನ ಅತ್ಯಂತ ಸಮರ್ಪಕವಾಗಿದ್ದವು. ಕೊರವಂಜಿಯು ತನ್ನ ಕಣಿನುಡಿಯನ್ನು ರುಕ್ಮಿಣಿಯೆದುರು ನುಡಿಯುವ ಮೊದಲು, ತನ್ನ ಸ್ಥಾನ-ಪಾತ್ರಕ್ಕೆ ಸಹಜವಾಗಿಯೇ, ಎಲ್ಲ ದೇವದೇವಿಯರ ನೆನೆದು, ‘ಎನ್ನ ವಾಕ್ಯದೊಳಿದ್ದು ಚೆನ್ನಾಗಿ ಬಂದು ಪೇಳಿರಯ್ಯಾ’ ಎಂದು ಕೇಳಿಕೊಳ್ಳುವ ಸಂದರ್ಭ ಆಕೆ ನಾರದನ ರೂಪಾಂತರವೆನ್ನುವುದು ಮರೆತೇಹೋಗುವಂತಿದೆ. ತನ್ನ ಮಾತಿಗೆ ಮೌನ ತಾಳಿದ ರುಕುಮಿಣಿಯನ್ನು ಛೇಡಿಸುತ್ತಾ ಹೋಗುವೆನೆನ್ನುವ ತುಂಟತನ, ‘ಉಣ್ಣಲಿಕೆ ಅನ್ನ ಉಡಲಿಕ್ಕೆ ಬಣ್ಣ…’ ನೀಡೆಂದು ಬೇಡುವ ಸಹಜತೆ, ‘ಅದೆಕೋ ಅದೆಕೋ ಬರುತಾನೆ, ನಲ್ಲ ಬರುತಾನೆ…’ ಅನ್ನುವ ರಮಿಸುವಿಕೆಯ ಸಖೀಭಾವ, ಕೊರವಂಜಿಯೊಳಗಣ ನಾರದನನ್ನು ಸಂಪೂರ್ಣ ಮರೆಮಾಚುತ್ತವೆ. ಈಯೆಲ್ಲ ಸಂದರ್ಭಗಳಲ್ಲಿ ತಕ್ಕನಾಗಿರುವಂಥ ಲಯ-ವಿನ್ಯಾಸಗಳ ರಾಗ-ತಾಳಗಳ ಸಂಯೋಜನೆಯು ಶುದ್ಧ ಶಾಸ್ತ್ರೀಯ, ಭಾವಗೀತಾತ್ಮಕ ಹಾಗೂ ಜಾನಪದೀಯ ಧಾಟಿಗಳಲ್ಲಿ ಇಡೀ ನಾಟ್ಯಭಾಗವು ಏಕತಾನತೆ ಪಡೆಯದಂತೆ ಅತ್ಯಂತ ಸಹಕಾರಿಯಾಗಿದೆ.
ಒಟ್ಟಂದದಲ್ಲಿ ಸುಂದರ ಮನೋಜ್ಞ ಪ್ರಸ್ತುತಿಯಾದ ಈ ‘ನಾರದ ಕೊರವಂಜಿ’ ನೃತ್ಯರೂಪಕವು ಸಂಗೀತ-ನಾಟ್ಯ ಸಹೃದಯರಿಗೆ ರಸದೌತಣವೇ ಸರಿ.