ಅಂಕಣಗಳು

Subscribe


 

ನಾಟ್ಯಕೌಶಲ್ಯಗಳು : ಸೂಚೀ ನಾಟ್ಯ ಅಥವಾ ಅಳೆನಾಟ್ಯ ( ಪಾತ್ರ ಜಗದಳೆ ಬಾಚಲದೇವಿಯನ್ನು ಅನುಲಕ್ಷಿಸಿ)

Posted On: Saturday, February 25th, 2012
1 Star2 Stars3 Stars4 Stars5 Stars (No Ratings Yet)
Loading...

Author: ಪ್ರೊ.ಎಸ್ ರತ್ನಮ್ಮ, ನಿವೃತ್ತ ಕನ್ನಡ ಉಪನ್ಯಾಸಕರು, ಬೆಂಗಳೂರು

ನಾಟ್ಯ ಪ್ರದರ್ಶನದ ಮಾರ್ಗೀ, ದೇಸೀ ಸಂಪ್ರದಾಯದಲ್ಲಿ ಹಲವು ಕಾಲಗಳಿಂದ ಅನೇಕ ಕೌಶಲ್ಯಗಳನ್ನು ಅನೇಕ ಬಗೆಯಾಗಿ ಪ್ರದರ್ಶಿಸುತ್ತಿದ್ದರು. ಅದರಲ್ಲಿಯೂ ಕನ್ನಡ ನಾಡಿನ ಕದಂಬವಂಶೋದ್ಭವೆ ತಲವನಪುರದ ಅರಸ ಗಂಗಮಾರಸಿಂಹನ ಎರಡನೇ ಹೆಂಡತಿ ಬಾಚಲಾದೇವಿ ಅಳೆನಾಟ್ಯಪ್ರವೀಣೆ. ಅಳೆನಾಟ್ಯವಾಡಿದ ಒಡಿಶಾ ರಾಜ್ಯದ ಪ್ರಖ್ಯಾತ ನಟುವಾಂಗ ಪ್ರವೀಣ ಅಂಬಿ‌ಆಚಾರ್ಯರಿಂದ ವಜ್ರದ ಗೆಜ್ಜೆ ಸರ ಪಡೆದ ಪ್ರಖ್ಯಾತ ನೃತ್ಯಗಾತಿ.

ಶ್ರವಣಬೆಳಗೊಳ ಗೊಮ್ಮಟ ವಿಗ್ರಹ ನಿರ್ಮಾರ್ತೃ ಚಾವುಂಡರಾಯ ಗಂಗಸೇನಾನಿಯ ಬಾಲ್ಯಕಾಲದಲ್ಲಿ ತಲವನಪುರದ ವೈದ್ಯನಾಥ ದೇವಾಲಯದಲ್ಲಿ ವೈದ್ಯನಾಥನ ಸಾನಿಧ್ಯದಲ್ಲಿ ಅಂಬಿ ಮತ್ತು ಬಾಚಲಾದೇವಿಯರ ಸ್ಪರ್ಧೆ ನಡೆಯಿತು. ಅವಳ ತಮ್ಮ ಬಾಹುಬಲಿ ಸೇನಾನಾಯಕ ರಾಜಮಲ್ಲ ಚಾವುಂಡರಾಯನ ಸಹಾಧ್ಯಾಯಿ. ಸ್ಪರ್ಧೆ ಗೆದ್ದ ನಂತರ ಬಾಚಲಾದೇವಿ ಪೊಂಬುರ್ಚದಲ್ಲಿ ಪದ್ಮಾವತಿ ದೇವಿಯ ಜಿನಾಲಯವನ್ನು ಒಂದು ತಿಂಗಳಲ್ಲಿ ಕಟ್ಟಿಸಿ ಅಂಬಿ ಆಚಾರ್ಯನೇ ಹಾಡು ಹಾಡಿ ನಟುವಾಂಗ ನುಡಿಸುತ್ತಿರಲಾಗಿ ಒಂದು ಘಂಟೆ ಅಳೆ ನಾಟ್ಯವಾಡಿ ದೇವಿಗೆ ಸೇವೆ ಸಲ್ಲಿಸಿದಳು. ತಲಕಾಡಿನಲ್ಲಿ ಈ ಕುರಿತಾಗಿದ್ದ ಶಾಸನ ಹಾಳಾದರೂ ; ಹೊಂಬುರ್ಚ(ಹುಂಚ)ದಲ್ಲಿ ಈ ಕುರಿತು ಶಾಸನವಿದೆ. ಶಾಸನವನ್ನು ಯಾರೋ ನಾಶ ಮಾಡಿದರೆಂದು ದೂರುವುದಕ್ಕಿಂತ ಮರಳು ಪ್ರವಾಹದಲ್ಲಿ ಹಾಳಾಗಿ ಹೋಗಿದೆ ಎಂದು ನಿರ್ಧರಿಸಬಹುದು.

ಅಂಗ, ವಂಗ, ಕಳಿಂಗಗಳಲ್ಲಿ ( ಬಂಗಾಳ, ಒಡಿಶಾ) ಸೂಚೀ ನಾಟ್ಯ ಪ್ರದರ್ಶನದ ವ್ಯವಸ್ಥೆ ಇದ್ದಿತ್ತು. ವಂಗ ಸುಂದರಿ- ಅನಂಗಸುಂದರಿ ಈ ನಾಟ್ಯದಲ್ಲಿ ಪ್ರವೀಣೆಯರು. ನಾಟ್ಯ ಪ್ರಾರಂಭದಲ್ಲಿ ನಾಟ್ಯಾಚಾರ್ಯ ರಂಗದ ಮೇಲೆ ಬಂದು ಒಂದು ಪಡಿಯಲ್ಲಿ (ಸೇರಿನಲ್ಲಿ) ಸೂಚೀಗಳನ್ನು( ಮುಳ್ಳುಗಳನ್ನು) ತುಂಬಿಕೊಂಡು ಬಂದು ಜೋರಾಗಿ ಬೀಸಿ ಬೀಸಿ ಮುಳ್ಳುಗಳನ್ನು ರಂಗದ ಮೇಲೆ ಸುರಿಯುತ್ತಾನೆ. ಬಹುದೊಡ್ಡ ಬೀಸಣಿಗೆಗಳಿಂದ ಜೋರಾಗಿ ಬೀಸುತ್ತಾರೆ. ಆಗ ಮುಳ್ಳುಗಳು ರಂಗದ ಮೇಲೆ ತುಂಬಿಕೊಳ್ಳುತ್ತವೆ. ಆದರೆ ಮುಳ್ಳುಗಳ ಮಧ್ಯೆ ಬೆರಳಿಡುವಷ್ಟು ಜಾಗವಿರುತ್ತದೆ.ರಂಗಪ್ರವೇಶಿಸಿದ ನಾಟ್ಯಗಾತಿ ನರ್ತಕಿ ಮುಳ್ಳುಗಳ ಮಧ್ಯೆ ಹೆಜ್ಜೆಯಿಟ್ಟು ಕುಣಿಯುತ್ತಾ ನಾಟ್ಯವಾಡುತ್ತಾಳೆ. ಅವಳ ಕಾಲು ಕೈಗಳಿಗೆ ಮುಳ್ಳು ಚುಚ್ಚಬಾರದು ಎಂಬ ನಿಯಮ. ಸುಮಾರು ಅರ್ಧಗಂಟೆಯಾದರೂ ಅವಳು ಹೀಗೆ ನರ್ತಿಸಬೇಕು.

ಕನ್ನಡದಲ್ಲಿ ಬೆರಳ ತುದಿಗಳಿಗೆ ಮೂರನೇ ಗಿಣ್ಣಿನಿಂದ ಉಗುರು ಇರುವ ಭಾಗಕ್ಕೆ ಅಳೆ ಎಂದು ಹೆಸರು. ಆ ಬೆರಳ ತುದಿಗಳ ಮೇಲೆ ನಿಂತು ಕುಣಿಯಲು ಒಂದು ಕಾಲು ಅಂಗುಲ ಜಾಗ ಸಾಕು. ಆದರೆ ದೇಹದ ಭಾರವನ್ನು ಒಂದು ಬೆರಳಿನ ಮೇಲೆ ನಿಲ್ಲಿಸಿ ನಾಟ್ಯವಾಡಲು ಮರ್ಕಟ ಚಲನ(ಕರಣ), ಮಾರ್ಜಾಲ ಚಲನ ಕಲಿತಿರಬೇಕು. ಮಾರ್ಗೀ ಶೈಲಿಯಲ್ಲಿ ಕೌಶಲ್ಯ ಪ್ರದರ್ಶನವನ್ನು ಮುಖ್ಯವಾಗಿ ಕರಣಗಳ ಮೂಲಕ ತೋರಿಸುತ್ತಾರೆ. ದೇಹನಿಯಂತ್ರಣ ಸಾಧಿಸಲು ಯೋಗಾಭ್ಯಾಸ ನಿತ್ಯಕರ್ಮವಾಗಿರಬೇಕು.

ಮರ್ಕಟ ಕರಣ : ಕಪಿ ಬಾಲದ ಒಂದು ತುದಿಯನ್ನು ಮರದ ಕೊಂಬೆಗೆ ಸುತ್ತಿ ಆ ಭಾಗದ ಮೇಲೆ ದೇಹಭಾರವನ್ನು ನಿಯಂತ್ರಿಸಿ ಲೀಲಾಜಾಲವಾಗಿ ಹಾರಿ ೨೦-೨೫ ಅಡಿ ದೂರವಾದರೂ ಎದುರು ಕೊಂಬೆಗೆ ನೆಗೆಯುತ್ತದೆ. ಈ ರೀತಿ ಕಪಿ ಹಾರುವ ತಂತ್ರ ತಿಳಿದ ನರ್ತಕಿ ಅಳೆಗಳ ಮೇಲೆ ಧಾರಾಲವಾಗಿರಕ್ಷಣಾತ್ಮಕವಾಗಿ ನರ್ತಿಸಬಲ್ಲಳು.

ಮಾರ್ಜಾಲ ಕರಣ : ಬೆಕ್ಕು ತನ್ನ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಅಪಾಯಕರ ಸ್ಥಳಗಳಲ್ಲೂ ಹಾರಿಕೊಂಡು, ಬೆಂಕಿಯನ್ನು ಆರಾಮವಾಗಿ ದಾಟಿ ಸುರಕ್ಷಿತ ಸ್ಥಳಕ್ಕೆ ಸೇರುವ ಚಾಕಚಕ್ಯತೆ ಪಡೆದಿದೆ. ಬಾಣಂತಿಯ ಈ ಸಾಹಸವೇ ಒಂದು ಬೆರಗು. ಬೆಕ್ಕು ತನ್ನ ಹೆಜ್ಜೆ ಊರಲು ಬಹು ಕಡಿಮೆ ಸ್ಥಳ ಸಾಕು. ಈ ದೇಹಭಾರ ನಿಯಂತ್ರಣ ಕಲೆಯೇ ಅಳೆ ನಾಟ್ಯದ ಜೀವಾಳ.

ಕದಂಬ ಕನ್ಯೆ ಬಾಚಲಾದೇವಿ ಸಮಸ್ತ ಉಪಾಂಗಗಳನ್ನು ಅಂತರ್ಗತ ಮಾಡಿಕೊಂಡು ಯೋಗಸಾಧನೆ ಮಾಡಿದ್ದಳು. ದೇಹದ ಭಾರ ನಿಯಂತಣ ಕಲಿತಿದ್ದಳು. ಆಕೆ ಪ್ರತಿನಿತ್ಯ ಮಧ್ಯಾಹ್ನ ಪೂಜಾ ಕಾಲದಲ್ಲಿ ಮಧುಬಣ್ಣದ ಮಹಾಪುರುಷ ಪ್ರಮಾಣದ ಮಧುಕೇಶ್ವರನ ಸನ್ನಿಧಿಯಲ್ಲಿ ನಾಟ್ಯವಾಡಿ ಸೇವೆ ಸಲ್ಲಿಸುತ್ತಿದ್ದಳು. ಈ ಪೂಜಾ ಕಾಲದಲ್ಲಿ ಅವಳೊಂದಿಗೆ ಬೇರೆ ಕಲಾವಿದರು ಸ್ಪರ್ಧೆಗೆ ಬರಬಹುದಾಗಿತ್ತು.

ದೇಹನಿಯಂತ್ರಣ ಸಾಮರ್ಥ್ಯವಿದ್ದುದರಿಂದ ಬಾಚಲಾದೇವಿ ಅಳೆ ನಾಟ್ಯವಾಡಿ ಅಂಬಿಯ ಶಪಥ ಗೆದ್ದಳು. ಮನಮೆಚ್ಚಿ ಹರಸಿದ ಅಂಬಿ ತನ್ನ ಕುಲದೇವತೆ ಪದ್ಮಾವತಿಯ ಪ್ರೀತ್ಯರ್ಥವಾಗಿ ಅಳೆ ನಾಟ್ಯವಾಡಬೇಕೆಂದು ಕೋರಿಕೊಂಡನು. ಅದರಂತೆ ಬಾಚಲಾದೇವಿ ಹೊಂಬುರ್ಚದಲ್ಲಿ ನಾಟ್ಯವಾಡಿ ಪದ್ಮಾವತಿಯ ಕೃಪೆಗೆ, ಅಂಬಿಯ ಪ್ರಶಂಸೆಗೆ ಪಾತ್ರವಾದಳು.

ಅಳೆ ನಾಟ್ಯದಂತೆ ಸ್ಪರ್ಧಾತ್ಮಕವಾದ ಹಲವಾರು ದೇಸೀ ಪದ್ಧತಿಗಳಿವೆ. ಎರಡು ಕೈಗಳಲ್ಲಿ ದೀಪಗಳನ್ನು ಹಿಡಿದು ತಲೆಯ ಮೇಲೆ ಕಳಶ, ಕಾಲ ಕೆಳಗೆ ಕಂಚಿನತಟ್ಟೆಯನ್ನಿಟ್ಟುಕೊಂಡು ಕಾಲಿನಲ್ಲಿ ತಾಳಕ್ಕನುಸಾರವಾಗಿ ನಾಟ್ಯವಾಡುವುದು. ಇಂದು ಈ ನೃತ್ಯ ಕೂಚಿಪುಡಿ ನಾಟ್ಯದ ಒಂದು ಮುಖ್ಯ ಪ್ರದರ್ಶನ. ಕೈಯಲ್ಲಿ ಸಣ್ಣ ಸಣ್ಣ ತಾಳಗಳಿಗೆ ಕಟ್ಟಿರುವ ತೋಳುದ್ದ ದಾರಗಳು; ಹಾಡುತ್ತಾ ಕುಣಿಯುತ್ತಾ ಈ ತಾಳಗಳಲ್ಲಿ ಕೌಶಲ್ಯ ತೋರಿಸುವ ಕಂಸಾಳೆಯಂತಹ ಕಲೆ ಕರ್ನಾಟಕದಲ್ಲಿದೆ. ಅಂತೆಯೇ ತಲೆಯ ಮೇಲೆ ಏಳು ಮಣ್ಣಿನ ಮಡಕೆಗಳನ್ನು ಹೊತ್ತುಕೊಂಡು ರಂಗದ ಮೇಲಿರುವ ಒಂಭತ್ತು ಮಡಕೆಗಳ ಮೇಲೆ ಹಾರಿಹರಿ ಕುಣಿಯುತ್ತಾ ನಾಟ್ಯವಾಡುವುದು ಒಂದು ಕ್ರಮ; ಅಂತೆಯೇ ತಲೆಯ ಮೇಲೆ ತಟ್ಟೆ, ತಟ್ಟೆಯ ಮಧ್ಯೆ ಕಂಚಿನ ತಪಲೆ, ಅದರ ಮೇಲೆತಟ್ಟೆ ಮತ್ತು ಎಣ್ಣೆ ಹಾಕಿ ಹಚ್ಚಿಸಿದ ಬತ್ತಿದೀಪಗಳು ಉರಿಯುತ್ತರಲಾಗಿ ನಾಟ್ಯವಾಡುವ ನೃತ್ಯಗಳು ರಾಜಸ್ಥಾನ ನೃತ್ಯಪದ್ಧತಿಗಳಾಗಿವೆ.

(ಲೇಖಿಕೆ ನಿವೃತ್ತ ಕನ್ನಡ ಪ್ರಾಧ್ಯಾಪಕರು, ಸಂಶೋಧನೆಯ ಹಾದಿಯವರು, ಜೈನಧರ್ಮದ ಮಹಿಳೆಯರ, ನಾಟ್ಯಗಾತಿಯರ ಕುರಿತು ಅಧ್ಯಯನ ನಡೆಸಿದವರು)

Leave a Reply

*

code