Author: ಮನೋರಮಾ. ಬಿ.ಎನ್
ಲಕ್ಷಣ: ಎರಡು ಸರ್ಪಶಿರ ಹಸ್ತಗಳನ್ನು ಅಭಿಮುಖವಾಗಿ ಹಿಡಿದು ಸಂಪುಟದಂತೆ ಜೋಡಿಸುವುದು. ಕಪೋತ ಎಂದರೆ ಪಾರಿವಾಳ ಎಂದರ್ಥವಿದ್ದರೂ ಅದು ಪಾರಿವಾಳ ಜಾತಿಯ ಮತ್ತೊಂದು ಪಕ್ಷಿಯನ್ನು ಸೂಚಿಸುತ್ತದೆ. ಇದನ್ನು ಕೂರ್ಮಹಸ್ತವೆಂದೂ ಕರೆಯಲಾಗಿದೆ. ಹಸ್ತ ಮುಕ್ತಾವಳಿಯಲ್ಲೂ ಉಲ್ಲೇಖಿತ. ಸಂಗೀತ ರತ್ನಾಕರದಲ್ಲಿ ಹಸ್ತ ಕೂರ್ಮಕವೆಂಬ ಹೆಸರೂ ಇದೆ. ಅಧಿದೇವತೆ : ಚಿತ್ರಸೇನ.
ಮಣಿಪುರಿನೃತ್ಯಶೈಲಿಯಲ್ಲಿ ಈ ಹಸ್ತಕ್ಕೆ ರಂಭಾಸುಮವೆಂಬ ಹೆಸರಿದೆ. ಒಡಿಸ್ಸಿಯ ಕರಣಪ್ರಕಾರಗಳಲ್ಲಿ ಒಂದಾದ ನಿಭೇದನದಲ್ಲಿ ಮತ್ತು ಭಂಗಿಗಳ ಪೈಕಿ ಚಿರ ಚಲನೆಯಲ್ಲಿ ಈ ಹಸ್ತದ ಬಳಕೆ ಪ್ರಮುಖವಾಗಿದೆ. ಶಾಸ್ತ್ರೀಯ ಮುದ್ರೆಗಳ ಪೈಕಿ ಕುಂಭ ಮುದ್ರೆಯುಎದೆಯ ಬಳಿ ಮಡಕೆಯಂತೆ ಅಂಗೈಗಳನ್ನು ಹಿಡಿಯುವ ಕಪೋತ ಹಸ್ತವೇ ಆಗಿದೆ. ಚಿಕಿತ್ಸಾ ಮುದ್ರೆಗಳ ಪೈಕಿ ಅಂತರಾತ್ಮ ಮುದ್ರೆ ಅಥವಾ ಸಂಕಲ್ಪ ಮುದ್ರೆಯು ಕಪೋತ ಹಸ್ತವೇ ಆಗಿದ್ದು; ಈ ಮುದ್ರೆಯನ್ನು ಕಣ್ಣಿನೆದುರಿಗೆ ಇಟ್ಟು ಬೆರಳುಗಳ ರಂಧ್ರದಿಂದ ಹೊರಬೆಳಕನ್ನು ರೆಪ್ಪೆ ಮಿಟುಕಿಸದೆ ವೀಕ್ಷಿಸಬೇಕು. ಅದೇ ರೀತಿ ಈ ಮುದ್ರೆಯನ್ನು ಕಂಠದ ಬಳಿ ಹಿಡಿದಲ್ಲಿ ಆತ್ಮಪೂಜನಾ ಮುದ್ರೆಯೆನಿಸಿಕೊಳ್ಳುತ್ತದೆ. ಭಕ್ತಿಯ ಪ್ರತೀಕವಾದ ಮುದ್ರೆಯಿದು. ಆತ್ಮವಿಶ್ವಾಸವೃದ್ಧಿಗೆ ಮನಸ್ಸು ಮತ್ತು ದೇಹದಚೈತನ್ಯಶೀಲತೆಗೆ ಪೂರಕ.
ವಿನಿಯೋಗ : ಪ್ರಮಾಣ ಮಾಡುವುದು, ಗುರುಗಳಲ್ಲಿ ಸಂಭಾಷಣೆ, ವಿನಯವನ್ನು ತೋರುವುದು, ಮರ್ಯಾದೆ.
ಇತರೇ ವಿನಿಯೋಗ : ಕೇದಿಗೆಯ ಮೊಗ್ಗು, ಬಾಳೆ ಹೂ, ಜುಟ್ಟಿರುವ ತೆಂಗಿನಕಾಯಿ, ದೃಷ್ಟಿ ತೆಗೆದು ನಿವಾಳಿಸುವುದು, ಪುಷ್ಪಗಳನ್ನು ಬೊಗಸೆಯಲ್ಲಿಟ್ಟು ಮೂಸಿನೋಡುವುದು, ಚಳಿ, ಭಯ, ವಿನಯದಿಂದ ಅಂಗೀಕಾರ, ಗುರುಪ್ರಣಾಮ, ಶೀತದಿಂದ ಭಾಧಿತನಾಗಿರುವುದು, ಭೀತನಾಗಿರುವುದು, ರೋಗಗ್ರಸ್ಥ, ಹೆದರಿಕೆ, ಖಾಯಿಲೆ, ಮಾಘ ಮಾಸ, ತೆಳು ದೇಹ, ಆಭರಣ ಪೆಟ್ಟಿಗೆ, ಮಾದಿಫಲ, ಪ್ರತಿಬಂಧವಿಲ್ಲದೆ ಒಪ್ಪಿಕೊಳ್ಳುವುದು, ದುಃಖದಿಂದ ಪೀಡಿತವಾದ ಮುಖ, ಮನುಷ್ಯ ಅಥವಾ ಪ್ರಾಣಿಯ ಜನ್ಮ, ಉತ್ತಮತನ, ಹೆಮ್ಮೆ, ವಿಜಯ, ದಾಳ, ಬೆಟ್ಟದ ಮಹೇಶ್ವರ, ಸಾಕ್ಷಿ, ಒಲವು, ಗುರು, ನಿಯಮಗಳನ್ನು ಪಾಲಿಸುವುದು, ಪೂಜೆ ನಂತರದ ಧಾರ್ಮಿಕ ವಿಧಿ-ನಮಸ್ಕಾರ, ‘ದಯಮಾಡಿ ಕ್ಷಮಿಸಿ’ ಎಂಬ ಭಾವ, ಜೋತಾಡಿಸುವುದು, ಅನುನಯ ಇತ್ಯಾದಿ ವಿಷಯ ಸಂವಹನಕ್ಕೆ ಬಳಕೆಯಾಗುತ್ತದೆ.
ಪಕ್ಷಿ ಹಸ್ತಗಳ ಪೈಕಿ ಪಾರಿವಾಳ (ಪಾರಾವತ)ವನ್ನು ಸೂಚಿಸಲು ಕಪೋತ ಹಸ್ತವನ್ನು ಅಗಲವಾಗಿ ಅಲ್ಲಾಡಿಸಬೇಕು. ಕಪೋತ ಪಕ್ಷಿಗೆ ಕಪೋತ ಹಸ್ತವನ್ನು ನಿಧಾನವಾಗಿ ಚಲಿಸಬೇಕು. ನಿತ್ಯಜೀವದಲ್ಲಿ ಗೌಪ್ಯ, ನಮಸ್ಕಾರ, ಚಳಿ, ಹೂಗಳನ್ನು ಒಟ್ಟಾಗಿ ಹಿಡಿಯಲು, ಧಾನ್ಯ ಮುಂತಾದ ಪದಾರ್ಥಗಳನ್ನು ತೆಗೆದುಕೊಳ್ಳುವುದು, ಗುಟ್ಟು ಮುಚ್ಚಿಟ್ಟುಕೊಳ್ಳುವ ಸೂಚನೆಗೆ, ವಿನಯ ಪ್ರಣಾಮಗಳಿಗೆ, ಚಳಿ ಕಾಯಿಸಲು, ಬೆಚ್ಚಗೆ ಮಾಡಲು, ಭಯ ವ್ಯಕ್ತಮಾಡಲು ಬಳಸಲಾಗುತ್ತದೆ.