Author: ಮನೋರಮಾ. ಬಿ.ಎನ್
೧೧ ನವೆಂಬರ್ ಸ್ಥಳ : ಮಲ್ಲೇಶ್ವರಂ ಸೇವಾಸದನ
ಗುರುಪರಂಪರೆಯ ಮಜಲುಗಳ ನಿರಂತರ ಹರಿವನ್ನು ಸಾದರಪಡಿಸುವಲ್ಲಿ ಅನನ್ಯ ಸಂಸ್ಥೆ ಹಮ್ಮಿಕೊಂಡ ‘ನಿರಂತರ’ ನೃತ್ಯಕಾರ್ಯಕ್ರಮ ರಸಸೋಪಾನದ ದೃಷ್ಟಿಯಲ್ಲಿ ಹೆಚ್ಚು ವಿಕಸಿತಗೊಂಡು ಭರತನಾಟ್ಯ(ನೃತ್ಯ) ಪರಂಪರೆಯ ಭವಿಷ್ಯದ ಸಾಧ್ಯತೆಗಳನ್ನು ಪ್ರಕಟಪಡಿಸಿತು. ಈ ಹಿನ್ನಲೆಯಲ್ಲಿ ‘ನಿರಂತರ’ದ ಕೇಂದ್ರಬಿಂದುವಾದವರು ನಿರುಪಮಾ(ರಾಜೇಂದ್ರ). ಅಂತೆಯೇ ಅವರ ಶಿಷ್ಯೆ ಮೃದುಲಾ ಎರಡನೇ ತಲೆಮಾರಿನ ಹಾಗೂ ಹರಿಣಿ ಮೂರನೇ ತಲೆಮಾರಿನ ಕಲಾವಿದರಾಗಿ ತಮ್ಮ ನೃತ್ಯಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಬ್ರಹ್ಮ, ವಿಷ್ಣು, ಶಿವ, ತಂಡು, ಭರತ..ಹೀಗೆ ನಾಟ್ಯದ ಗುರುಪರಂಪರೆಗೆ ಸರಳ, ಸುಲಲಿತ ಅರ್ಪಣೆಗೈವ ಮೂಲಕ ಕಲಾವಿದೆಯರು ಇತ್ತಿದ್ದು ಪ್ರಬುದ್ಧ ಮತ್ತು ಭಕ್ತಿಪೂರ್ವಕ ಆರಂಭ. ನಾಟ್ಯದ ಮಾರ್ಗಪರಂಪರೆಗೆ ಯುಕ್ತವಾಗಿ ಸುಂದರವಾಗಿ ಮೃದುಲಾ ಪುಷ್ಪಗಳ ಅಂಜಲಿಯನ್ನಿತ್ತರೆ; ಕೌತ್ವವನ್ನು ಅಭಿನಯಿಸಿದ ಹರಿಣಿ ಮೃದುಲಾರ ‘ಗುರು’ತ್ವಕ್ಕೆ, ನಟುವಾಂಗಕ್ಕೆ ಕನ್ನಡಿ ಹಿಡಿದರು. ರಸನಿರ್ಮಾಣಕ್ಕೆ ಸಾಹಿತ್ಯವನ್ನು ಮತ್ತಷ್ಟು ಅಂತರ್ಗತ ಮಾಡಿಕೊಂಡು ಮುಖಜಾಭಿನಯವನ್ನು ಮತ್ತಷ್ಟು ಪ್ರಭಾವಶಾಲಿಯಾಗಿ ಹೊಂದಿಸಿಕೊಳ್ಳಬೇಕಾದ ಅನುಭವ ಹರಿಣಿಯಲ್ಲಿ ನಿರೀಕ್ಷಿತ. ನಂತರದಲ್ಲಿ ಮೃದುಲಾ ಅವರಿಂದ ಮೂಡಿಬಂದ ‘ಆಡಿಕೊಂಡಾರ್’ ನರ್ತನವು ಕನಕಸಭೆಯ ಶಿವ, ದೇವಿಯರ ನೃತ್ಯಸ್ಪರ್ಧೆಯ ಪರಿಚಯವನ್ನು ಚೆಂದವಾಗಿ ಮೂಡಿಸಿ ಭಾವಸ್ಪುಟತೆಗೆ ಸಾಕ್ಷಿಯಾಯಿತು.
ನಿರುಪಮಾ ನರ್ತಿಸಿದ ‘ಲಾಸ್ಯರಂಜಿನಿ’ ಅನೌಪಚಾರಿಕವಾಗಿಯೇ ಇಡಿಯ ಕಾರ್ಯಕ್ರಮಕ್ಕೆ ಸುಂದರ ಮುನ್ನುಡಿ ಬರೆದದ್ದಷ್ಟೇ ಅಲ್ಲದೆ; ಕೈಶಿಕೀ ವೃತ್ತಿಯನ್ನನುಸರಿಸಿ ಕರಣ, ಚಾರಿ, ಅಂಗಾಹಾರಗಳನ್ನು ಸೂಕ್ತವಾಗಿ ಹೊಂದಿಸಿಕೊಂಡ ನೃತ್ತವು ಹೇಗೆ ಇಂದಿನ ನೃತ್ತವ್ಯಾಖ್ಯಾನದ ಶುಷ್ಕತೆಯನ್ನು ಕಳಚಿಕೊಂಡು ರಮಣೀಯವಾಗಬಲ್ಲುದು, ಸಂವಹನಶೀಲವೂ ಮನೋಹರವೂ ಆಗಬಲ್ಲುದು ಎಂಬುದಕ್ಕೂ ಬೆನ್ನುಡಿ ಬರೆಯಿತು. ಜೊತೆಗೆ ಭರತಮುನಿಯ ಸಂಪ್ರದಾಯದನ್ವಯ ಕರಣ-ಅಂಗಹಾರಗಳ ಪ್ರಸ್ತುತತೆಯನ್ನು ಅರಿತು ಬಳಸುವ ನಿರುಪಮಾರ ಜಾಣ್ಮೆ ನೃತ್ತನೈಪುಣ್ಯಕ್ಕೆ ಅದ್ಭುತವೆನಿಸುವ ಸಾಕ್ಷಿ. ಪುರಂದರದಾಸ ವಿರಚಿತ ಪದ ‘ಹಿಡಕೋ ಬಿಡಬ್ಯಾಡ’ಕ್ಕೆ ಇತ್ತ ವರ್ಣಬಂಧದ ಸೊಬಗು ನಿರುಪಮಾರ ಅಭಿನಯದಲ್ಲಿ ಮತ್ತಷ್ಟು ಪ್ರಕಾಶಿತವಾಯಿತು. ನಳಕೂಬರ-ಮಣಿಗ್ರೀವರ ಶಾಪವಿಮೋಚನೆಯ ಮರ್ಮದ ಹಿಂದಿನ ಕೃಷ್ಣನ ತುಂಟಾಟವನ್ನು, ಕುಚೇಲನ ಲಜ್ಜೆ, ಅಸಹಾಯಕತೆ, ಬಯಕೆ, ಬಡತನ, ಕೃಷ್ಣನನ್ನು ಕಂಡ ಖುಷಿ, ತೃಪ್ತಭಾವ ; ನರಕಾಸುರನಿಂದ ವಿಮೋಚನೆಗೊಂಡ ಸ್ತ್ರೀಯರನ್ನು ಕೃಷ್ಣನು ಮದುವೆಯಾಗುವ ಇಂಗಿತಕ್ಕೆ ಬಂದಾಗ ಅವರಲ್ಲಾಗುವ ಧನ್ಯತೆ, ಭಗವದ್ಗೀತೆಯನ್ನು ಬೋಧಿಸಿದ ಕೃಷ್ಣನೆಡೆಗೆ ಅರ್ಜುನನ ಅದ್ಭುತ-ಭಕ್ತಿ ಮಿಳಿತ ಭಾವ, ಪಂಡರಾಪುರದ ಪಾಂಡುರಂಗನ ಕಥೆಯ ಹಿನ್ನಲೆ, ಯಮುನಾ ನದಿ ತೀರದ ಕೃಷ್ಣನ ಲೀಲೆಗಳು.. ಇತ್ಯಾದಿಯಾಗಿ ಆಯಾಯ ಕಾಲಘಟ್ಟಗಳಿಗೆ ಕೊಂಡೊಯ್ದು ಸಮೃದ್ಧವಾಗಿ ರಸಪ್ರವಾಹವನ್ನೇ ಹರಿಸಿದರು. ಹಿನ್ನಲೆಗಾಯನದ ಒನಪು, ಲಾಲಿತ್ಯ, ರಾಗವಿಸ್ತಾರ ಮತ್ತಷ್ಟು ನಾಟ್ಯಾನುಸಾರಿಯಾಗಿ ಪ್ರಕಾಶಿತವಾಗಿರುತ್ತಿದ್ದರೆ ಎರಡನೇ ಜತಿ ಹಾಗೂ ಸಾಹಿತ್ಯದ ನಿರೂಪಣೆ ಮತ್ತು ಚಿಟ್ಟೆಸ್ವರದ ನುಣುಪಿನ ಎಳೆಗಳು ಒಂದಷ್ಟು ಹೆಚ್ಚು ವಿಕಸಿತವಾಗುವುದರೊಂದಿಗೆ ಎರಡನೇ ಚರಣಸ್ವರ ಉದ್ಧತಸ್ಪರ್ಶವನ್ನು ಕಾಣುವುದೂ ತಪ್ಪುತ್ತಿತ್ತು.
ಶತಾವಧಾನಿ ಡಾ. ಆರ್. ಗಣೇಶ್‌ರ ಸಾಹಿತ್ಯಕ್ಕೆ ನಿರುಪಮಾರಲ್ಲಿ ಅರಳಿದ ‘ವಾಸಕಸಜ್ಜಿಕಾ’ ನಾಯಿಕೆ ಸ್ಥಾಯಿಭಾವವನ್ನು ಕಾಪಿಟ್ಟುಕೊಂಡೇ ಅಷ್ಟನಾಯಿಕೆಯರ ಎಲ್ಲಾ ಭಾವಗಳನ್ನೂ ಸ್ಪರ್ಶಿಸಿದ್ದು ನಿಜಕ್ಕೂ ಸ್ತುತ್ಯಾರ್ಹ. ಅದರಲ್ಲೂ ವಿಪ್ರಲಂಭ ಶೃಂಗಾರದಿಂದ ಸಂಭೋಗ ಶೃಂಗಾರಕ್ಕೆ ಜಾರುವ ಅಂತ್ಯಸಂದರ್ಭವನ್ನು ರಸಿಕರ ಕಲ್ಪನೆಗಳ ಆರಂಭಕ್ಕೆಂಬಂತೆ ಸಮಯೋಚಿತವಾಗಿ ಬಳಸಿದ ನಿರೂಪಣೆ ಮೆಚ್ಚಬೇಕಾದದ್ದು. ದೀಪವನ್ನಾರಿಸಿದ ನಾಯಿಕೆಯ ನಡವಳಿಕೆಯನ್ನು ರಂಗ ಮತ್ತು ವೇದಿಕೆಯಲ್ಲಿ ಹಠಾತ್ ಕತ್ತಲೆಯನ್ನು ಆರೋಪಿಸಿ ಕಾಣಿಸಿಕೊಡುವ ಮೂಲಕ ನೃತ್ಯಬಂಧವೊಂದರ ಮುಕ್ತಾಯವನ್ನು ಸ್ಥಾಯಿಭಾವದೊಳಗೊಂದಾಗಿಸಿದ್ದು ನಿಜಕ್ಕೂ ಕಲಾವಿದರ ಸೃಷ್ಟಿಶೀಲ ಮತ್ತು ಲೋಕಾನುಭವ ತಿಳಿವಿಗೆ ಕೈಗನ್ನಡಿ. ಅಷ್ಟೇ ಅಲ್ಲದೆ ನೃತ್ಯವು ಹೇಗೆ ಅದರ ಮುಕ್ತಾಯದ ತರುವಾಯವೂ ಪ್ರೇಕ್ಷಕರ ಮನಸ್ಸಿನ ಕಲ್ಪನೆಗಳನ್ನು ಅನಂತವಾಗಿ ಹರಿಸಲು ನೆರವಾಗಬೇಕು ಎಂಬುದಕ್ಕೆ ಸಮರ್ಥ ಉದಾಹರಣೆ. ಈ ಹಿನ್ನಲೆಯಲ್ಲಿ ರಾಜೇಂದ್ರ ಅವರ ರಂಗ-ಬೆಳಕು ಸಂಯೋಜನೆಯು ಶ್ಲಾಘನೀಯ.
ಸಾಹಿತ್ಯವನ್ನೇ ಬಳಸದೆ ಕೇವಲ ಸಂಗೀತದ ಲಯ, ರಾಗದೊಳಗೆ ಬೆಸೆದ ಅಭಿವ್ಯಕ್ತಿ ‘ಚಂದ್ರ’ ಅಂದಿನ ನೃತ್ಯಪ್ರದರ್ಶನದ ಹೈಲೈಟ್. ಹಳ್ಳಿಯ ವಾತಾವರಣದ ಗೋಧೂಳಿಯಿಂದ ಮೇಲೇಳುವ ನೃತ್ಯಸಂದರ್ಭವು ಚಂದ್ರನ ಉಪಸ್ಥಿತಿ ಯಾರ‍್ಯಾರಿಗೆ ಹಿತ, ಅಹಿತವೆನ್ನುವ ಸಾರಾಂಶದಲ್ಲಿ ತೆರೆದುಕೊಂಡಿತು. ಬೆಳದಿಂಗಳೂಟ, ಹಕ್ಕಿಯು ತನ್ನ ಮರಿಗೆ ಗುಟುಕು ನೀಡುವುದು, ನೈದಿಲೆಗಳ ಅರಳುವಿಕೆಯ ಸಂವಾದಿಯಾಗಿ ಚಂದ್ರದರ್ಶನ, ನಕ್ಷತ್ರಗಳಿಗೆ ತನ್ನ ಹಿರಿಮೆ ಹೇಳುವ ಚಂದ್ರನು ತನ್ನ ಕಿರಣಗಳಿಂದ ವಾಸಕಸಜ್ಜಿಕೆ, ಅಭಿಸಾರಿಕೆ, ವಿರಹೋತ್ಕಂಠಿತೆಯರಲ್ಲಾಗುವ ಬದಲಾವಣೆಗಳನ್ನು ಹೇಳುವುದು, ಮಗುವನ್ನು ಬಗೆಬಗೆಯಾಗಿ ಓಲೈಸುವ ತಾಯಿ ಚಂದ್ರನ ಕುರಿತಾಗಿ ನೀಡುವ ಅತಿರಮ್ಯ ವರ್ಣನೆಯನ್ನು ಮಾಡುವಲ್ಲಿಗೆ ವಿನಾಯಕನ ಕಥೆ, ಪಾರ್ವತಿ ಶಾಪ, ಬಡಾಯಿ ಕೊಚ್ಚಿಕೊಳ್ಳುವ ಚಂದ್ರನಿಗಾಗುವ ನಾಚಿಕೆ, ಮಗು ಚಂದ್ರನತ್ತಲೇ ಪದೇ ಪದೇ ಆಕರ್ಷಿತವಾಗುವಾಗ ತಾಯಿಯ ಚಡಪಡಿಕೆ ಇತ್ಯಾದಿಯಾಗಿ ನೂತನವೆನಿಸುವ ವಸ್ತುವಿನ ದುಡಿಮೆ ರಸಾಸ್ವಾದನೆಯ ದೃಷ್ಟಿಯಿಂದ ಪೂರ್ಣ ಫಲವನ್ನಿತ್ತಿತು. ಅದರಲ್ಲೂ ಲೋಕಧರ್ಮಿ ನಡೆ ಮತ್ತುನಡವಳಿಕೆಗಳನ್ನು ನಾಟ್ಯದಲ್ಲಿ ಸಹಜವಾಗಿ ಉಪಯೋಗಿಸಿಕೊಂಡ ನಿರುಪಮಾ ಅವರು ಕಳ್ಳರ ಚರ್ಯೆಗಳು, ಚಂದ್ರನಿಂದ ಅವರಿಗೊದಗುವ ಫಲಾಫಲಗಳನ್ನು ರಂಜನೀಯವಾಗಿಯೂ ದುಡಿಸಿಕೊಂಡರು. ಈ ಹಿನ್ನಲೆಯಲ್ಲಿ ಹಿನ್ನಲೆ ಸಂಗೀತದಲ್ಲಿ ಸಹಕರಿಸಿದ ಅಷ್ಟೂ ಮಂದಿ ಕಲಾವಿದರ ಶ್ರಮ ಸಾರ್ಥಕ.
‘ಚಂದ್ರ’ನ ನಿರೂಪಣೆಯ ಅಂತ್ಯಕ್ಕೆ ಸೂಕ್ತವೆಂಬಂತೆ ನಿರುಪಮಾ ಆಯ್ದುಕೊಂಡದ್ದು ಬುದ್ಧನಾಗುವ ಸಿದ್ಧಾರ್ಥನ ಜೀವನದ ಬೆಳವಣಿಗೆಗಳನ್ನು. ಸಿದ್ಧಾರ್ಥನಲ್ಲಿ ಬಡವನನ್ನು ಕಂಡಾಗ ಬರುವ ಅಮಾಯಕತೆ, ಮುದುಕನಿಂದ ಒದಗುವ ನಿರ್ಲಿಪ್ತತೆ, ಸಾವಿನ ದರ್ಶನದಲ್ಲಿ ಖಿನ್ನತೆ ಆವರಿಸುವ ಹಂತಗಳನ್ನು ವಿಷದವಾಗಿ ಕಾಣಿಸಿಕೊಟ್ಟ ನಿರುಪಮಾ; ಸಾಂಸಾರಿಕ ಬಂಧನದ ವಿಸ್ತಾರವನ್ನು ಸ್ಪಷ್ಟವಾದ ವೈರಾಗ್ಯಭಾವದೊಂದಿಗೆ ಸಾಕ್ಷೀಕರಿಸಿದರು. ಬುದ್ಧನ ‘ಶಾಂತ’ ಭಾವವೂ ರಸಾನಂದದ ಸೋಪಾನಕ್ಕೇರುವಾಗ ಅದ್ಭುತವೆನಿಸುವ ಕಲ್ಪನೆಯನ್ನು ಕೊಟ್ಟೀತು ಎಂಬುದು ಗ್ರಹಿಕೆಗೆ ಬಂದದ್ದು ನಿರುಪಮಾರ ಬುದ್ಧನ ಅಭಿನಯದಲ್ಲೇ ! ಇದು ಕೇವಲ ಹುಣ್ಣಿಮೆಯ ಹಿರಿಮೆಯನ್ನಷ್ಟೇ ತೋರದೆ; ನಾಟ್ಯವೊಂದು ರಸಿಕರಲ್ಲಿ ಅಂತ್ಯಕ್ಕೆ ನಿರೂಪಿಸಬೇಕಾದ ‘ಶಾಂತ’ ಭಾವಕ್ಕೆ ಆ ಸಂದರ್ಭದ ಬುದ್ಧನೂ ಅನ್ವರ್ಥನಾಗಿದ್ದ !