Author: ಮನೋರಮಾ. ಬಿ.ಎನ್
ನವೆಂಬರ್ ೧೨ರಿಂದ ೧೯ ಎಡಿಎ ರಂಗಮಂದಿರ
ನಂದಿನಿ ಮೆಹ್ತಾ ಮತ್ತು ಮುರಳೀ ಮೋಹನ್‌ರ ಸಮರ್ಥ ಆಯೋಜನೆಯಲ್ಲಿ ಒಂದು ವಾರದ ಕಾಲ ಮೂಡಿಬಂದ ಕಲಾನಾದಂ ಉತ್ಸವವು ಭರತನಾಟ್ಯ, ಒಡಿಸ್ಸಿ, ಕೂಚಿಪುಡಿ, ಕಥಕ್, ಮೋಹಿನಿಯಾಟ್ಟಂನಾದಿಯಾಗಿ ಹಲವು ಹಿರಿ-ಕಿರಿಯ ನರ್ತಕರ ನಡೆಗಳಿಗೆ ಸಾಕ್ಷಿಯಾಯಿತು.
ಸಮಾರೋಪದ ದಿನದಂದು ಚೆನ್ನೈನ ನೃತ್ಯ ದಂಪತಿಗಳಾದ ವಿಜನಾ ಮತ್ತು ರಂಜಿತ್ ಬಾಬು ಹಿರಿಯ ಗುರು ಸಿ.ವಿ.ಚಂದ್ರಶೇಖರ್ ಅವರ ಸಮರ್ಥ ನಟುವಾಂಗದಲ್ಲಿ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಗಣೇಶ ಸ್ತುತಿ, ಸೊಲ್ಕಟ್ಟು, ಅಲಾರಿಪು, ನಾಟಕುರಂಜಿ ವರ್ಣ, ಭಜನ್ ಮತ್ತು ತಿಲ್ಲಾನವನ್ನು ಪ್ರಸ್ತುತಪಡಿಸಿದ ನೃತ್ಯದಂಪತಿಗಳ ಅಂಗಶುದ್ಧ ಆಂಗಿಕ ನೃತ್ತನಿರ್ಮಾಣಕ್ಕೆ ಪೂರಕವಾಗಿ ಪರಿಣಮಿಸಿತು. ಸ್ಥಾಯಿಭಾವ ಮರೆಸುವ ಜತಿ ವಿಸ್ತಾರಗಳು, ನಿಯಂತ್ರಣದ ಮುಖಜ ಅಭಿನಯ, ಹಿನ್ನಲೆ ಗಾಯನದ ಅಸ್ಪಷ್ಟ ಉಲಿತಗಳು ಪ್ರೇಕ್ಷಕರ ಸಮೂಹ ಸಂದರ್ಭದಲ್ಲರಳುವ ಚಪ್ಪಾಳೆಯ ಕೊನೆಗೆ ಅಂತ್ಯ ಕಂಡವು.
ನಂತರ ಪ್ರಸ್ತುತಗೊಂಡ ವೈಜಯಂತಿ ಕಾಶಿ ಮತ್ತು ಪ್ರತೀಕ್ಷಾ ಕಾಶಿ ಅವರ ಕೂಚಿಪುಡಿ ನೃತ್ಯ ‘ವಂದೇ ವಂದೇ’ ಎಂಬ ತ್ರಿಪುರಸುಂದರಿದೇವಿಯ ಸ್ತುತಿಯಿಂದ ವಿಕಸಿತವಾಗುತ್ತಾ ಕೃಷ್ಣಲೀಲಾ ತರಂಗಿಣಿ ಮತ್ತು ಇತರ ರಚನೆಗಳ ಮೂಲಕ ಲಾಲಿತ್ಯದ ಸೌಂದರ್ಯ ಸಾದರಗೊಂಡಿತು.