Author: ವಿವಿಧ ಲೇಖಕರು
(ಕಳೆದ ಸಂಚಿಕೆಯಿಂದ ಮುಂದುವರೆದುದು…)
ದೀರ್ಘ ಕಾಯುವಿಕೆಯಿಂದಾಗಿ ಅಥವಾ ಪ್ರಿಯಕರನಿಂದ ಬೇರಾಗಿ ಇಲ್ಲವೇ ಆತನ ಅನೈಚ್ಛಿಕ-ಆಕಸ್ಮಿಕ ಅನಾಗಮನದಿಂದ ವಿರಹವೇದನೆಯಲ್ಲಿ ಇರುವವಳು. ಈಕೆಗೆ ಉತ್ಕಾ, ಉತ್ಕಂಠಿತಾ ಎಂಬ ಹೆಸರುಗಳೂ ಇವೆ. ಮಿತ್ರರ ಮಾತುಗಳು, ವ್ರತದ ದಿನ, ಮನಸ್ತ್ತಾಪ, ಸವತಿಯರ ತಂತ್ರ, ನೆರೆ ಮುಂತಾದ ವಿಕಲ್ಪ, ಕತ್ತಲೆ, ದಾರಿ ತಪ್ಪುವುದು, ಪಾತಿವ್ರತ್ಯದ ಪರೀಕ್ಷೆ, ಮಿತ್ರಾಗಮನ, ಬೇರೆ ಸುಂದರಿಯ ಸಹವಾಸ, ಅನುಮಾನ ಹೀಗೆ ಹತ್ತು ಹಲವು ಕಾರಣಗಳು, ಅವಸ್ಥೆಗಳು ವಿರಹೋತ್ಕಂಠಿತೆಯನ್ನಾಗಿಸುತ್ತವೆ. ಈಕೆ ಸಂತಾಪ, ದೇಹಕ್ಷೀಣ, ನಿಡುಸುಯ್ಲು, ನಿರುತ್ಸಾಹ, ಕಣ್ಣೀರು, ವ್ಯಥೆ, ಚಿಂತೆ, ಬೇಸರ, ನಡುಗುವಿಕೆ, ಚಾಂಚಲ್ಯತೆ, ಮರೆವು, ರೋದನ, ದೂರು ಹೇಳುವುದು, ಅನಾಸಕ್ತಿ, ಭ್ರಾಂತಿ, ಸಂಶಯ, ಮೂರ್ಛೆ, ಮರಣ ಮುಂತಾದ ಸಂಚಾರಿ ಭಾವಗಳನ್ನು ಅನುಭವಿಸುತ್ತಾಳೆ.
ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ ಬೇಧಗಳಿದ್ದು ಅದು ಈಕೆಯ ಅವಸ್ಥೆಗಳನ್ನು ಅವಲಂಬಿಸಿರುತ್ತದೆ. ಸಹಜವಾಗಿ ಉತ್ತಮ ನಾಯಿಕೆಯದ್ದು ಹೆಚ್ಚೇನೂ ಅಭಿನಯಕ್ಕೆ ಅವಕಾಶ ನೀಡದ ಆದರೆ; ಉನ್ನತ ಮಟ್ಟದ, ಗಂಭೀರ, ಮೃದು ವರ್ತನೆಯುಳ್ಳ ಭಾವಪ್ರಕಾಶ. ಮಧ್ಯಮವು ಮನುಷ್ಯ ಸಹಜ ಮಿಶ್ರ ಭಾವನೆಗಳ ಪ್ರತಿರೂಪ. ಅಧಮನಾಯಿಕೆಯು ನೀಚ ಇಲ್ಲವೇ ಭಾವನೆಯನ್ನು ಹಿಡಿತವಿರಿಸದೆ ಯಥಾಸ್ಥಿತಿಯಲ್ಲಿ ಹರಿಬಿಡುವ, ಅಥವಾ ಗೌರವಯುತ ನಡವಳಿಕೆಗಳ ಬದಲಾಗಿ ಎಂದಿನಂತೆಯೇ ಇದ್ದು ; ಅನೌಚಿತ್ಯಕರವಾಗಿ ಕಾಣಿಸಿಕೊಳ್ಳುವವಳು. ಉತ್ತಮ ವಿರಹೋತ್ಕಂಠಿತೆಯು ತನ್ನ ಪ್ರಿಯತಮನ ನಿರ್ಗಮನ ಮಾತ್ರದಿಂದಲೇ ವ್ಯಥೆಗೆ ಬೀಳುತ್ತಾಳೆ. ಮಧ್ಯಮ ಮತ್ತು ಅಧಮ ವಿರಹೋತ್ಕಂಠಿತೆಯರಲ್ಲಿ ವಿರಹ ನಿಧಾನವಾಗಿ ಆವರಿಸಿಕೊಳ್ಳುತ್ತಾ ವಿರಹದ ಸೌಜನ್ಯ ಮೇರೆ ಮೀರುತ್ತದೆ.
ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ. ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು, ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ. ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆ ಅಥವಾ ಮೇಲ್ಕಂಡ ಮೂವರು ಶೃಂಗಾರ ನಾಯಿಕೆಯರು ಮುಗ್ಧಾ, ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ. ಮುಗ್ಧಾ ನಾಯಿಕೆಯು ಮುಗ್ಧೆ, ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು. ಲಜ್ಜೆಯ ವರ್ತನೆ, ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ. ಆಕೆಗೆ ಎಲ್ಲವೂ ಹೊಸತು, ಮೊದಲು. ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು. ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ. ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು, ರತಿಕ್ರೀಡೆಗಳಲ್ಲಿ ಪ್ರವೀಣಳು. ಲಜ್ಜೆ ಅತೀಕಡಿಮೆ. ಇವುಗಳೊಳಗೂ ಧೀರ, ಅಧೀರ, ಧೀರಾಧೀರ ಹಾಗೂ ಜ್ಞಾತ, ಅಜ್ಞಾತ, ಪ್ರೌಢ, ನವೋಢ, ಲಘು, ಗುರುವೆಂಬ ಹಲವಾರು ಬೇಧಗಳಿವೆ.
ಇಲ್ಲಿ ನೀಡಲಾಗಿರುವ ಶತಾವಧಾನಿ ಡಾ. ಗಣೇಶರ ಕಾವ್ಯ ಮತ್ತು ಮಂಟಪರ ಭಾವಾಭಿವ್ಯಕ್ತಿಯಲ್ಲಿ ನೀಡಲಾಗಿರುವ ನಾಯಿಕೆಯು ಉತ್ತಮ-ಮಧ್ಯಮ ಗುಣವುಳ್ಳ; ಸ್ವೀಯಾ, ಮಧ್ಯಾ, ಜ್ಞಾತ, ಪ್ರೌಢ ಸ್ವಭಾವವುಳ್ಳವಳಾಗಿದ್ದು; ನರ್ತನದಲ್ಲಿ ಅಭಿನಯಕ್ಕೆ ಹೆಚ್ಚು ವಿಸ್ತಾರವನ್ನು ಕಲ್ಪಿಸಿಕೊಡುವ ಮತ್ತು ಮಾದರಿಯ ಜೀವನದ ಆಯಾಮವಿರುವುದರಿಂದ; ಈ ಅಷ್ಟನಾಯಿಕಾ ಚಿತ್ತವೃತ್ತಿಯ ಹಾದಿಯಲ್ಲಿ ಮಧ್ಯಮನಾಯಿಕೆಯನ್ನೇ ಪ್ರಧಾನವಾಗಿ ಎಲ್ಲಾ ನಾಯಿಕೆಯರಿಗೂ ಅಳವಡಿಸಿ ಸಾಹಿತ್ಯವನ್ನು ನೀಡಲಾಗಿದೆ. ಧಾರವಾಡ ಆಕಾಶವಾಣಿಯ ಉದ್ಯೋಗಿ, ಕವಿ, ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆಯವರ ಕವಿತ್ವವು ಭೂಮಿ, ಪ್ರಕೃತಿ, ಮಳೆ, ಬಾನು ಇತ್ಯಾದಿ ಪ್ರಾಕೃತಿಕವಾಗಿ ನಿರೂಪಿಸಲ್ಪಟ್ಟ ಸೆಲೆಯನ್ನು ಹೊಂದಿದೆ. ಶರದ್ ಋತುವಿನಿಂದಾರಂಭಿಸಿ ಗ್ರೀಷ್ಮ ಋತುವಿನವರೆಗೆ ಭೂಮಿಯ ಮೇಲ್ಮೈಯಲ್ಲಾಗುವ ಬದಲಾವಣೆಗಳನ್ನೇ ನಾಯಿಕೆಯ ಅವಸ್ಥೆಗಳನ್ನಾಗಿಸಿ ಚಿತ್ರಿಸುವ ಕಾವ್ಯದಲ್ಲಿ ‘ಮೇದಿನಿ’ ಅಷ್ಟನಾಯಿಕಾ ಭಾವದಲ್ಲಿ ಮೇಘನಿಗಾಗಿ ಕಾಯುತ್ತಾಳೆ. ಭಾವಕ್ಕೆ ಒತ್ತಾಸೆಯಾಗಿ ನಿಲ್ಲುವ ಲಯಲಾಲಿತ್ಯ ಕಾವ್ಯಕ್ಕೆ ಹದ ನೀಡುವ ಪದಮೈತ್ರಿ ಇದರ ವಿಶೇಷ.
ಬನ್ನಿ, ನಮ್ಮ ಕಲ್ಪನಾ ಸಾಮರ್ಥ್ಯ, ಅನುಭವ-ಅನುಭಾವ, ವಿಶ್ಲೇಷಣೆ, ನಾಟ್ಯದ ಆಯಾಮ, ಸವಾಲು-ಸಾಧನ, ಅಭಿವ್ಯಕ್ತಿಯ ಕ್ಷಿತಿಜ, ರಸದೃಷ್ಟಿ, ಕಾವ್ಯದೃಷ್ಟಿ ಮತ್ತು ಅರಿವಿನ ಹರಹುವಿನ ವಿಸ್ತಾರದಲ್ಲಿ ಕೈಜೋಡಿಸೋಣ. ನಿಮ್ಮ ಕಲ್ಪನೆ-ಚಿಂತನೆಗಳಿಗೆ ಇದು ಮುಕ್ತ ವೇದಿಕೆಯಾಗಲಿ.
ಭಾಮಿನೀ
– ಶತಾವಧಾನಿ ಡಾ. ಆರ್. ಗಣೇಶ್
ಷಣ್ಮುಖಪ್ರಿಯ ರಾಗ: ಚಂಪಕಮಾಲೆ
ಇನಿಯನ ಜಾಡು ಕಾಣದಿರೆ ಕಳ್ತಲೆ ತುಂಬಿದ ರಾತ್ರಿಯಂತೆ ಹೃ
ನ್ಮನದೆ ವಿಷಾದವೇಧೆ ಕಹಿಯಾಗಿ ವಿಡಂಬಿಸೆ ಮೀನಕೇತನಂ |
ನನೆಗಳ ಕೋಲ್ಗಳಂ ನೆಡಲದಮ್ಯಬಲಂ ಬಿರುಬಿಂದೆ ಬಂದಿರಲ್
ವನಿತೆ ವಿಯೋಗವಹ್ನಿಗೆಡೆಯಾದಳಿದೋ ವಿರಹೋತ್ಕನಾಯಿಕೆ ||
(ನಟ್ಟಿರುಳು ಸಮೀಪಿಸತೊಡಗಿದರೂ ನಲ್ಲನು ಬರಲಿಲ್ಲ. ತಾಳಲಾಗದ ತಳಮಳವು ತೀರಿಸಲಾಗದ ವಿರಹವಾಗಿ ಪರಿಣಮಿಸಿತು. ಸಮಸ್ತಪ್ರಕೃತಿಯೇ ಮುನಿದ ಮಾರನಸೇನೆಯಂತೆ ದಾಳಿಯಿಡುವಾಗ ವಿಯೋಗವಹ್ನಿಯಲ್ಲಿ ತಪಿಸುವ ನಾಯಿಕೆ ವಿರಹೋತ್ಕಂಠಿತೆಯಾಗುವಳು.)
ಬಾಗೇಶ್ರೀ ರಾಗ- ಝಂಪೆ, ಮಟ್ಟೆ ತಾಳಗಳು
ಮರೆತನೇ ಎನ್ನ ಮೆಯ್ಮರೆತು ಪತಿಯು |
ತೊರೆದನೇನಿನ್ನು ಮತ್ತೇನು ಗತಿಯು ? ||ಪ||
ಕೋಳಿಕೂಗುವ ವೇಳೆ- ಬೀಳುವೋದುದು ಮಾಲೆ
ಕೋಳು ಹೋಯಿತು ಬಾಳು ಗೋಳು ಬಲಿತು |
ತಾಳಲಾಗದ ತಾಪ-ಹೇಳಲಾಗದ ಶಾಪ
ಏಳಲಾಗದು ಮನಕೆ ಧೂಳಿ ಮಸಕೆ ||
ಬಿದ್ದನೆನೋ ಬಲೆಗೆ-ಮೆದ್ದನೆನೋ ಒಳಗೆ
ಕದ್ದನಾರದೊ ಹೃದಯ ಜಿದ್ದು ಬಲಿಯೆ |
ಉದ್ದವಾಯಿತು ವಿರಹ-ಕುದ್ದ ಬೊಮ್ಮನ ಬರಹ
ನಿದ್ದೆ ನೀಗಿಸಿತೆನಗೆ ತಿದ್ದಳಲವೇ?||
ಆವ ಬಿಂಕಗಾತಿ ಮಂಕುಬೂದಿ ಚೆಲ್ಲಿ ಸೆಳದಳೋ
ಆವ ಕೊಂಕುಗಾತಿ ಮದ್ದು- ಮಾಟಮಾಡಿ ಮಲೆತಳೋ |
ಗತವಿಲಾಸಕತೆಗಳೆಲ್ಲ ವಿಸ್ಮೃತಿಗತಿಯಾದುವೇ?
ಹಿತವಿನೋದವಿಧಿಗಳೆಲ್ಲ ಹತಚಿತಿಯಲಿ ಬೆಂದುವೇ?||
ಮೇಘಮೇದಿನಿ
– ದಿವಾಕರ ಹೆಗಡೆ, ಧಾರವಾಡ
ಕುಸುಮ ಬಾಣನ ಹೆದೆಗೆ ಎನ್ನೆದೆ |
ಕಸುವು ನೀಡುವುದೇನು ಸೋಜಿಗ |
ಎಸೆವ ಹೊಸ ಚಿಗುರುಗಳ ಶರದಲಿ ಕೊರೆವ ಹೃದಯವನು ||
ಬಸಿವ ಬೆವರಿಗೆ ಬೆಸೆವ ಹದವಿದೆ |
ಉಸಿರ ತಿದಿಯಲಿ ಅವನ ಹೆಸರಿದೆ |
ಅಸುವ ಹೀರುವನೇಕೆ ದೂರದಿ ನಿಂತು ಆಗಸದಿ ||
ಚಾದಗೆ ನೀಬಾರಾತನ ಕರೆತಾ ಮೋದದ ನಲ್ಲನನು |
ಕಾದಿಹೆನೆಂದಾತಗೆ ನೀನೊರೆವುದು ಕಾದಲಗೆಲ್ಲವನು |
ವಾದಿಸು ಸಂವಾದಿಸು ನೀ ಚೋದಿಸು ಎನಗಾಗಿಯೆ ಒಲಿಸು |
ಬೋಧಿಸು ಸಂಬೋಧಿಸು ಎನ್ನರಸನ ನೀ ನೀ ಧರೆಗಿಳಿಸು||
ಸುಲಭದಲಿ ಬಾರನಲ್ಲ | ಆಗಸದಿ | ಅಲೆದು ತಾನಾಡಬಲ್ಲ ||
ಮಲಯ ಮಾರುತನೊಡನೆ ಸಲುಗೆಯಿಂದಿದ್ದರೂ |
ಸೆಳೆಮಿಂಚು ತೋರಿ ಸಿಡಿಲೊಡೆದು ಗರ್ಜಿಸಬಲ್ಲ ||
ಕಪ್ಪುಮೋಡದ ಮೈಯು ಬಿಳಿ ನೀರ ಒಳಮನವು |
ಅಪ್ಪಿದರೆ ತೋಯಿಸುವ ಒಪ್ಪವಿಡುವ ||
ಇಪ್ಪ ತಾಣವ ನೋಡು ತಪ್ಪದೆಯೆ ನೀ ಪೇಳು
ಒಪ್ಪುವಂದವ ಮಾಡು ಬೇಗ ಹೋಗು ||
ಭಾಮಿನಿಯ ಭಾವಾಭಿವ್ಯಕ್ತಿ
-ಮಂಟಪ ಪ್ರಭಾಕರ ಉಪಾಧ್ಯ
…ಹಲವು ದಿನಗಳ ಸಾಮೀಪ್ಯದ ಕೊರತೆಯಿಂದಾದ ವಿರಹದಿಂದಲೋ ಏನೋ ನನ್ನ ಆಕರ್ಷಣೆ ಕಡಿಮೆ ಆಗಿ ನನ್ನನ್ನು ಮರೆತುಬಿಟ್ಟನೋ? ನನ್ನನ್ನು ನೋಡುವಲ್ಲಿ ಆತನ ಅವ್ಯವಹಾರಕ್ಕೆ ತೊಡಕಾಗಬಹುದೆಂದು ನನ್ನನ್ನು ತೊರೆಯುವ ಸಂಕಲ್ಪ ಮಾಡಿದನೋ? ನನಗಾಗುವ ಸಂದೇಹಗಳನ್ನೇ ನನ್ನ ಪಾಲಿಗೆ ತಡೆದುಕೊಳ್ಳಲಾಗುತ್ತಿಲ್ಲ. ಇನ್ನು ಸತ್ಯವಾದರೆ ನನ್ನ ಗತಿ? ಯಾವತ್ತೂ ಇಲ್ಲದ ನಿರಾಸೆ ಇದು. ಬೆಳಗಿನ ಜಾವದವರೆಗೂ ನನ್ನ ಸಮಸ್ಯೆಗಳಿಗೆ ಉತ್ತರವಿಲ್ಲದೆ ನಿದ್ರೆಯಿಲ್ಲದ ರಾತ್ರಿ ಭಯಾನಕವಾಗಿತ್ತು. ಇನ್ನು ಬೆಳಗಾದರೆ? ಸಾರ್ವಜನಿಕವಾಗಿ ನೇಣುಶಿಕ್ಷೆಗೆ ಒಳಪಟ್ಟ ನಿರಪರಾಧಿಯಂತೆ ಅಳುವ ಶಕ್ತಿಯನ್ನು ಕಳಕೊಂಡು ಒಬ್ಬಂಟಿಯಾಗಿ ಸಾವಿಗೆ ಎದುರಾಗಿ ಹೃದಯದ ಒಳಗೇ ಅಳುತ್ತಲೇ ಇದ್ದೆ.
‘ಇನ್ನು ಶಿಕ್ಷೆಗೆ ಸಿದ್ಧಳಾಗು’ ಎನ್ನುವಂತೆ ಕೋಳಿಗಳು ಕೂಗಿದವು. ಆತನಿಗಾಗಿ ಕಟ್ಟಿದ ಹೂಮಾಲೆ ಬಾಡಿ ಸುಗಂಧ ಕಳಕೊಂಡು ಯಾರಿಗೂ ಬೇಡವಾದಂತೆ ನನ್ನಂತೆಯೇ ತೂಗಾಡುತ್ತಿತ್ತು. ಬಾನಲ್ಲಿರುವ ನಕ್ಷತ್ರಗಳು ಚಂದ್ರನಿಲ್ಲದ ನಮಗೇನು ಕೆಲಸ ಎಂದು ಮರೆಯಾಗಿ ನನ್ನ ಶೂನ್ಯತೆಯ ದೃಷ್ಟಿಗೆ ಸಹಕರಿಸಿದ್ದವು. ಅಂತೂ ನನ್ನ ಬಾಳು ಮುಗಿದ ಅಧ್ಯಾಯ ಎಂಬಲ್ಲಿಗೆ ಒತ್ತು ನೀಡಿತ್ತು. ಗೋಳನ್ನು ಹೇಳಿಕೊಳ್ಳಲು ನನಗೆ ನಾನೇ ಇಲ್ಲವೆಂಬ ಪ್ರಜ್ಞೆ ಮೂಡಿ ದೆವ್ವದಂತೆ ನಾನಿರುವ ಭ್ರಮೆ ಉಂಟಾಯಿತು. ನನ್ನ ಶಕ್ತಿಯನ್ನೆಲ್ಲಾ ಬಲವಂತದಿಂದ ಒಟ್ಟುಮಾಡಿ ನಾನಾಗಲು ಪ್ರಯತ್ನಿಸಿದೆ. ಕಳೆದ ಯೋಚನೆಗಳೆಲ್ಲಾ ದುಃಸ್ವಪ್ನದಂತೆ ಕಂಡವು. ನನ್ನ ಮನಸ್ಸಿನ ಯೋಚನೆಗಳೆಲ್ಲಾ ಸುಳ್ಳೆಂದು ಭ್ರಮಿಸಿ ಎಚ್ಚರವಾಗಲು ಪ್ರಯತ್ನಿಸಿದೆ.
ನಾನು ಇದುವರೆಗೆ ಇರುವ ಸ್ಥಳದಲ್ಲಿ ನನ್ನವನನ್ನು ಕಟಕಟೆಗೆ ತಂದಿಟ್ಟ ಹಾಗೆ ನಿಲ್ಲಿಸಿಕೊಂಡೆ. ಅವನು ನಗುತ್ತಲೇ ಇದ್ದ. ತಾನೇ ಗೆದ್ದೆನೆಂಬ ಹಮ್ಮಿನಿಂದ ಗೋಣಾಡಿಸುವುದನ್ನು ಕಂಡೆ. ಅವನ ಕಣ್ಣಿನಲ್ಲಿನ ತೃಪ್ತತೆ ಕಂಡೆ. ಇವನು ಯಾವಳೋ ಬೀಸಿದ ಬಲೆಯಲ್ಲಿ ಬಿದ್ದಿರಬಹುದು. ಅಲ್ಲಿ ನಡೆಸಿದ ರಾಸಲೀಲೆಯಾಟದ ಅಮಲು ಇನ್ನೂ ಇಳಿದಿಲ್ಲದಿರುವ ನೋಟ. ಈತನ ನಗುವಿನ ಅಲೆ ನನ್ನ ಪಾಲಿಗೆ ಕೋಪದ ಜ್ವಾಲೆ. ನನ್ನ ವಿರಹದ ಉರಿಯ ಜ್ವಾಲೆ ವಿಚಿತ್ರವಾಗಿ ನರ್ತಿಸಿತು. ಅವನನ್ನು ನನ್ನತ್ತ ಸೆಳೆಯಲು ನನ್ನ ಹಲವು ಪವಿತ್ರಭಾವನೆಗಳಿಗೆ ಬಣ್ಣ ಹಚ್ಚಿ ನರ್ತಿಸಿದೆ. ಬಾಡಿದ ಹೂಮಾಲೆ ಎಸೆದೆ. ನನ್ನ ವಿಚಿತ್ರವಾದ ನರ್ತನ ಬೇಡಿಕೆ-ಪೂಜೆ- ಯವುದನ್ನೂ ಆತ ಗಮನಿಸಲೇ ಇಲ್ಲ. ಅವನ ಯೋಚನೆ, ದೃಷ್ಟಿ ಬೇರೆಯ ಕಡೆ ಇರುವುದು ವೇದ್ಯವಾಯಿತು. ನನ್ನ ಕೂಗಾಟ- ಚೀರಾಟ-ಬೊಬ್ಬೆ ಮುಗಿಲು ಮುಟ್ಟುತ್ತಿತ್ತು. ಇಲ್ಲಿ ನನ್ನ ಸ್ವರ- ಚಿತ್ರ-ಎಲ್ಲವೂ ಕಾಣುತ್ತಿದ್ದವು. ಆದರೆ ಆತನ ಚಿತ್ರ ಮಾತ್ರ ಕಾಣುತ್ತಿತ್ತು. ನಾನೆಷ್ಟು ಆತನ ಬಳಿಹೋದರೂ ಅಷ್ಟೇ ದೂರದಲ್ಲಿ ಆತ ತೆರಳದೆ ದೂರವಾಗಿರುತ್ತಿದ್ದ. ‘ನಾನು ನಿನಗಾಗಿ ಬಂದಿದ್ದೇನೆ’ ಎಂದು ಶಕ್ತಿಮೀರಿ ಕೂಗುತ್ತಾ ಆತನ ಬಳಿ ಓಡಿದೆ. ನನ್ನ ಬಾಯಿತೆರೆಯಿತು. ಕೂಗಿಗೆ ಸ್ವರ ಇಲ್ಲವಾಗಿತ್ತು. ನನ್ನ ಸ್ವರವೇ ನಿಲ್ಲುವಷ್ಟು ಕೂಗಿದರೂ ಆತ ಮಾತ್ರ ಇದ್ದಲ್ಲೇ ದೂರವಾದ. ನನ್ನ ಕೈಗೆ ಎಟುಕಲೇ ಇಲ್ಲ. ‘ಅಯ್ಯೋ ನನ್ನ ಪ್ರಾರಬ್ಧವೇ’ ಎಂದು ಹಣೆಹಣೆ ಚಚ್ಚಿಕೊಂಡೆ. ಚಚ್ಚಿಕೊಂಡದ್ದು ಮಾತ್ರ, ನನಗೆ ತಿಳಿದಾಗ ಎಚ್ಚರ ಆಗಿತ್ತು. ಬೆಳಗಿನ ಜಾವದ ನಿದ್ರೆಯ ಸ್ವಪ್ನ. ಅಬ್ಬಾ ಎನಿಸಿತು. ಆದರೂ ಸತ್ಯವಾದರೆ?
ಆದರೆ ನನಗೀಗ ನಿಜಕ್ಕೂ ಆತನ ಮೇಲೆ ಕೋಪ ಇಲ್ಲ. ಆದರೆ ಕನಸಿನಲ್ಲಿ ಬಿದ್ದ ಆಕೆಯ ಮೇಲೆ ಮಾತ್ರ ಕೋಪ. ಇನ್ನು ಯಾವ ಬಿಂಕಗಾತಿ ಬೂದಿ ಎರಚಿ ಮರಳುಮಾಡಿದಳೋ ಮಂತ್ರಮಾಟ ಮಾಡಿ ತನ್ನ ಅಟ್ಟಹಾಸದಿಂದ ನನ್ನವನನ್ನು ಒಳಹಾಕಿಕೊಂಡಳೋ ತಿಳಿಯದು. ನನ್ನವನ ಸೌಜನ್ಯದ ದುರುಪಯೋಗ ಮಾಡಿಕೊಂಡು, ನನ್ನವನು ಮುಗ್ಧನಾಗಿ ಬಂಧಿತನಾಗಿ ಒದ್ದಾಡುತ್ತಿದ್ದಾನೋ ಏನೋ? ನನ್ನನ್ನು ತೀವ್ರವಾಗಿ ಪ್ರೀತಿಸುವ ಆತ ನನ್ನನ್ನು ಮರೆತು ತಪ್ಪುಮಾಡುವವನೇ ಅಲ್ಲ. ದಾಂಪತ್ಯದಲ್ಲಿಯ ಸರಸದ ಸಿಹಿ ಘಟನೆಗಳ ಆ ನೆನಪೇ ಇಂದು ವಿರಹದಲ್ಲಿ ಈ ರಾತ್ರಿ ಚಿತ್ರಹಿಂಸೆಗೆ ಒಳಪಡಿಸಿತ್ತು. ಅಷ್ಟು ಗಾಢವಾದ ಪ್ರೀತಿಯ ಬೆಲೆ ನನಗಲ್ಲದೆ ಇನ್ನಾರಿಗೂ ತಿಳಿಯದು. ಈ ಪ್ರೀತಿಯೂ ಇಷ್ಟೊಂದು ಸುಡುತ್ತದೆ ಎಂದು ಇದುವರೆಗೂ ನನಗೆ ತಿಳಿದಿಲ್ಲವಾಗಿತ್ತು. ಪ್ರೀತಿಯ ರೆಕ್ಕೆಗಳೆಲ್ಲಾ ನಿನ್ನೆ ರಾತ್ರಿಯ ನನ್ನ ವಿರಹದ ದುಃಸ್ವಪ್ನದ ಬೆಂಕಿಗೆ ಸುಟ್ಟು ಕೇವಲ ನನ್ನ ಭೌತಿಕ ಶರೀರವೊಂದೇ ಉಳಿದು ಒದ್ದಾಡುತ್ತಿರುವ ಹಕ್ಕಿಯಂತೆ ಪಿಳಿಪಿಳಿ ನೋಡುತ್ತಲೇ ಮುದುಡಿ ಕುಳಿತೆ… ಹಾರಲಾರದೆ-ಓಡಲಾರದೆ-ಮುನ್ನಡೆಯಲಾರದೆ. ಅಂತೂ ನನಗಾಗಿರುವ ಅನುಭವ ಸತ್ಯವೇ ಅಥವಾ ಜೀವನದ ಸತ್ಯದ ಅನುಭವ ನನಗೀಗ ಆಯಿತೇ? ಒಂದೂ ತಿಳಿಯದೆ ಹಾಗೆಯೇ ಮರಕ್ಕೆ ಒರಗಿ ಕುಳಿತೆ…