ಅಂಕಣಗಳು

Subscribe


 

ಶುಕತುಂಡ ಹಸ್ತ

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ಅರಾಳ ಹಸ್ತದಲ್ಲಿನ ಉಂಗುರ ಬೆರಳನ್ನು ಬಾಗಿಸಿದರೆ ಶುಕತುಂಡ ಹಸ್ತ. ಶುಕತುಂಡ-ಗಿಳಿಯ ಮುಖ ಅಥವಾ ಕೊಕ್ಕಿನಂತೆ ತೋರುತ್ತದೆ. ಪಾರ್ವತಿಯು ಶಿವನೊಂದಿಗಿನ ಪ್ರಣಯವೇಳೆಯಲ್ಲಿನ ಜಗಳದಲ್ಲಿ ಈ ಹಸ್ತವನ್ನು ಬಳಸಿದಳೆನ್ನಲಾಗಿದೆ. ಇದರ ಬಣ್ಣ ಕೆಂಪು, ಬ್ರಾಹ್ಮಣ ವರ್ಣ, ದೂರ್ವಾಸ ಋಷಿ, ಮರೀಚಿ ದೇವತೆ.

ವಿನಿಯೋಗ: ಬಾಣ ಪ್ರಯೋಗ ಮಾಡುವುದು, ಈಟಿ, ಹಿಂದಿನ ಹುಟ್ಟು ಬೆಳವಣಿಗೆಯ ನೆನಪು, ಗೋಪ್ಯ ಭಾವ, ಕಠಿಣವಾದ ಮಾತು, ಕೋಪ ಮುಂತಾದ ಭಾವಗಳು, ಶೂಲ, ಅತಿರೇಕ ಸ್ವಭಾವ, ಭಯೋತ್ಪಾದ ಮೈದೋರುವಿಕೆ.

ಇತರೆ ವಿನಿಯೋಗ: ಚಾಳೀಯನಾಟ್ಯ, ಮಾರ್ಮಿಕ ವಚನ, ಗಿಳಿ, ಕೆಂಪು ಬಣ್ಣ, ಊಹೆ, ಕೌಟಿಲ್ಯ, ಲೇಖನ, ಸರ್ಪನೃತ್ಯ, ನಿಷೇಧ, ದಾರಿತೋರುವುದು, ಏಡಿಯನಡಿಗೆ, ದೊಣ್ಣೆಕೇತನು ತಲೆಯಾಡಿಸುವುದು, ಒಣಗಿದ ಎಲೆಯ ನಡುಕ, ಆಮೆ, ಈರ್ಷ್ಯಾ ಪ್ರಣಯ ಕಲಹಗಳಲ್ಲಿ ನಾನಲ್ಲಿ, ನೀನಲ್ಲಿ, ಇದನ್ನು ಮಾಡಕೂಡದು ಮುಂತಾದವನ್ನು ಹೇಳಲು, ತಿರಸ್ಕಾರದಿಂದ ಬಾ, ಹೊರಟು ಹೋಗು ಎನ್ನಲು, ಆವಾಹನೆ, ಬೀಳ್ಕೊಡುಗೆ, ತಿರಸ್ಕಾರದಿಂದ ಛೀ ಎನ್ನುವುದು, ಹೀಗಾಗಬಾರದು ಎನ್ನುವ ಮಾತು, ನಾನಲ್ಲ – ನೀನಲ್ಲ ಎನ್ನುವುದು. ಅವಮಾನ ಮಾಡಿ ಹೋಗು ಎನ್ನುವುದು, ಧಿಕ್ಕಾರ, ದಾಳಬಿಡುವುದು, ಕರೆಯುವುದು ಇವುಗಳನ್ನು ಸಂವಹಿಸುತ್ತದೆ. ನಾನಾರ್ಥ ಹಸ್ತಗಳ ವಿಭಾಗದಲ್ಲಿ ಶುಕತುಂಡವನ್ನು ನಿಶ್ಚಲವಾಗಿ ಹಿಡಿದು ಬರುವ ವರ್ಷ ಎಂದು ಸೂಚಿಸಲು ಬಳಸುತ್ತಾರೆ.

ಸಾರಸಂಗ್ರಹದ ಪ್ರಕಾರ ಉಂಗುರದ ಬೆರಳನ್ನು ಮಾತ್ರ ಮಡಿಸಿದರೆ ಅದು ಶುಕತುಂಡವೆನ್ನಲಾಗಿದ್ದು, ಭಿಂಡಿವಾಳವೆಂಬ ಆಯುಧ, ಭವಿಷ್ಯದ ಸೂಚನೆ, ಭ್ರಮಣ, ಕಪಟ, ಜ್ಞಾನ, ಹೆಚ್ಚು ಭಯ ಮುಂತಾದುವುಗಳನ್ನು ಸಂವಹಿಸಬಹುದು. ಶುಕತುಂಡದ ಮಧ್ಯ ಬೆರಳು ಕೊಂಕಿದ್ದು, ಹೆಬ್ಬೆರಳು ವರ್ತುಲವಾಗಿದ್ದರೆ ಅಂತಹ ಹಸ್ತವನ್ನು ಸ್ಖಲಿತಾ ಎಂದು ನರ್ತನ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಇದರ ಬಳಕೆ ಕಡಿಮೆ. ಗಿಡುಗ (ಶಷಾಡನ) ಪಕ್ಷಿಯನ್ನು ಸೂಚಿಸಲು ಬ್ರಹ್ಮೋಕ್ತ ಶುಕತುಂಡವೆಂಬ ಹಸ್ತವನ್ನು ಬಳಸಲಾಗುತ್ತಿತ್ತಂತೆ!

ವರುಷವನ್ನು, ಪಾಪನಾಶಿನಿ ನದಿಯನ್ನು, ಪಾತಾಳಿವೃಕ್ಷವನ್ನು, ಹರಿಶ್ಚಂದ್ರ ರಾಜನನ್ನು ಮತ್ತು ನಾದಿನಿ ಎಂದು ಸೂಚಿಸುವಾಗ ಶುಕತುಂಡವನ್ನು ಬಳಸಲಾಗುತ್ತಿತ್ತು. ಶುಕತುಂಡ ಹಸ್ತವನ್ನು ಕಂಪಿಸುವುದು ಸಂಗೀತದಲ್ಲಿನ ಮಧ್ಯಮ ಸ್ವರವನ್ನು ಸೂಚಿಸಿದರೆ, ಶುಕತುಂಡದಿಂದ ಹೆಬ್ಬೆರಳು ಮತ್ತು ಕಿರುಬೆರಳನ್ನು ನೀಡಿ, ಕೈಯನ್ನು ಅಲ್ಲಾಡಿಸುವುದು ಭರಣೀ ನಕ್ಷತ್ರದ ಸೂಚಕ. ಶುಕತುಂಡದ ಎಲ್ಲಾ ಬೆರಳುಗಳನ್ನು ಮಡಚುವುದರಿಂದ ಕರ್ಕಟ(ಕಟಕ)ರಾಶಿಯನ್ನೂ, ಶುಕತುಂಡಹಸ್ತಗಳನ್ನು ಸ್ವಸ್ತಿಕಾಕಾರವಾಗಿರಿಸುವುದರಿಂದ ನಿಂಬೆವೃಕ್ಷವನ್ನು, ಹಸ್ತವನ್ನು ಅಲ್ಲಾಡಿಸುವುದರಿಂದ ಗಿಳಿ (ಶುಕ)ಯನ್ನೂ ತೋರಿಸಬಹುದು.

Leave a Reply

*

code