Author: ಮನೋರಮಾ. ಬಿ.ಎನ್
ಲಕ್ಷಣ: ಹೆಬ್ಬೆರಳು ಮತ್ತು ಕಿರುಬೆರಳನ್ನು ಮಡಿಸಿ ಕೂಡಿಸಿ ಮಧ್ಯದ ಮೂರು ಬೆರಳನ್ನು ನೀಡಿದರೆ ತ್ರಿಶೂಲಹಸ್ತ. ತ್ರಿಶೂಲ ಎಂದರೆ ಈಶ್ವರನ ಆಯುಧ. ಈ ಹಸ್ತವನ್ನು ಬಾಲರಾಮ ಭರತವೆಂಬ ಗ್ರಂಥದಲ್ಲಿ ಪುರೋನ್ನತ ಅಥವಾ ಪುರಾಣೋನ್ನತ ಹಸ್ತ ಎಂದು ಕರೆಯಲಾಗಿದೆ. ನಾಟ್ಯಶಾಸ್ತ್ರವನ್ನೂ ಒಳಗೊಂಡಂತೆ ಬೇರೆ ಯಾವ ಲಕ್ಷಣಗ್ರಂಥಗಳಲ್ಲಿ ಈ ಹೆಸರಿನ ಹಸ್ತವಿಲ್ಲ. ಆದ್ದರಿಂದಲೇ ಏನೋ ಈ ಹಸ್ತಕ್ಕೆ ಜನ್ಮ, ವರ್ಣ, ಋಷಿ ಇತ್ಯಾದಿಗಳ ಪ್ರಸ್ತಾಪ ಕಂಡುಬಂದಿಲ್ಲ.
ಯೋಗದ ಚಿಕಿತ್ಸಾ ಮುದ್ರೆಗಳ ಪೈಕಿ ವರುಣ ಮುದ್ರೆ ಅಥವಾ ಭುಧಿಮುದ್ರೆಯು ತ್ರಿಶೂಲ ಹಸ್ತದಂತಿದ್ದು; ಅಂಗೈಮೇಲ್ಮುಖವಾಗಿರಿಸಿ ವರುಣ ತತ್ವವನ್ನು ಪ್ರತಿನಿಧಿಸುವ ಕಿರುಬೆರಳು ಅಗ್ನಿ ತತ್ವದ ಹೆಬ್ಬೆರಳನ್ನು ಸ್ಪರ್ಶಿಸುವುದು ಇದರ ಲಕ್ಷಣ.ಇದರಿಂದ ದೇಹದತೇವಾಂಶ ಕಾಯ್ದುಕೊಳ್ಳುವುದು, ಗ್ಯಾಸ್ಟ್ರೋ ಎಂಟ್ರೈಟಿಸ್, ಕಣ್ಣಿನಶುಷ್ಕತೆ-ಉರಿಯುವಿಕೆಮತ್ತುಒಣಕೆಮ್ಮುನಿವಾರಣೆಗೆ, ರಕ್ತದೊತ್ತಡಕಡಿಮೆಮಾಡಲು,ಮುಪ್ಪುಮುಂದೂಡಲು, ಚರ್ಮರೋಗ ನಿವಾರಣೆಗೆ, ಚರ್ಮವು ಮೆದು ಮತ್ತು ಕಾಂತಿಯುಕ್ತವಾಗಲು, ಬಾಯಾರಿಕೆ-ಆಯಾಸ-ಬಾಯಿ ಒಣಗುವಿಕೆಯಿಂದ ವಿಮೋಚನೆಗೆ, ಪಚನ ಕ್ರಿಯೆ-ರಕ್ತ ಶುದ್ಧೀಕರಣಕ್ಕೆ ಸಹಕಾರಿ. ಅಂತೆಯೇ ಕಾಲುಒಡೆಯುವುದು-ಕಜ್ಜಿ-ಸಂಧಿವಾತ-ನಾಲಿಗೆತೊಂದರೆ-ಮೂರ್ಛೆನಿವಾರಣೆಗೆ,ಸ್ತ್ರೀಯರ ಮಾಸಿಕಸ್ರಾವದಸಂತುಲನೆಗೆಈ ಮುದ್ರೆಯ ಬಳಕೆ ಅನುಕೂಲಕರ.
ನೃತ್ಯ ವಿನಿಯೋಗ : ಬಿಲ್ವಪತ್ರೆ, ಮೂರು ಎಂದು ಹೇಳುವುದು, ತ್ರಿಶೂಲ, ತ್ರಯೋಗುಣ, ತ್ರಿಮೂರ್ತಿಗಳು, ತ್ರಿಲೋಕಗಳು.
ಇತರೇ ವಿನಿಯೋಗ : ಭಸ್ಮಾದಿ ಊರ್ಧ್ವಪುಂಡ್ರ ವಿಧಿಗಳ ಪ್ರಯೋಗ, ಬೇಲದ ಎಲೆಗಳ ಸೂಚನೆಗೆ, ಶಿವ-ದೇವಿಯರು ದುಷ್ಟಸಂಹಾರದ ಸಮಯದಲ್ಲಿ ವೀರ-ಶೌರ್ಯ-ಕ್ರೋಧ- ರೌದ್ರದ ಪ್ರತೀಕವಾಗಿ ಬಳಸಬಹುದು.
ಅಭಿನಯದರ್ಪಣ ತಿಳಿಸುವಂತೆ ಎಡಗೈಯಿಂದ ತ್ರಿಶೂಲಹಸ್ತವನ್ನೂ, ಬಲಗೈಯಿಂದ ಶಿಖರಹಸ್ತವನ್ನು ಮೇಲ್ಮುಖವಾಗಿ ಹಿಡಿಯುವುದು ಷಣ್ಮುಖ ಹಸ್ತವೆನಿಸಿಕೊಳ್ಳುತ್ತದೆ. ಎಡಗೈಯಲ್ಲಿ ಶಿಖರಹಸ್ತವನ್ನೂ, ಬಲಗೈಯಲ್ಲಿ ತ್ರಿಶೂಲವನ್ನು ಹಿಡಿದರೆ ಶನೈಶ್ಚರ ಹಸ್ತ. ಭರತಾರ್ಣವದ ಪ್ರಕಾರಪದ್ಮಕೋಶವನ್ನು ಎಡಕೈಯ್ಯಲ್ಲೂ, ತ್ರಿಶೂಲವನ್ನು ಬಲಕೈಯ್ಯಲ್ಲೂ ಹಿಡಿದು ಶೈವ ಸ್ಥಾನಕದಲ್ಲಿ ನಿಲ್ಲುವುದು ಅರ್ಧನಾರೀಶ್ವರ ಹಸ್ತ. ಶೈವ ಸ್ಥಾನಕದಲ್ಲಿ ನಿಂತು ಶೂಲ ಮುದ್ರೆಯನ್ನು ಬಲಗೈಯಲ್ಲೂ, ಮೃಗಶೀರ್ಷವನ್ನು ಎಡಗೈಯ್ಯಲ್ಲೂ ಹಿಡಿಯುವುದು ಸದಾಶಿವ ಹಸ್ತ. ಶಿವನ ಪಂಚ ಮುಖಗಳಲ್ಲಿ ಒಂದಾದ ಸದ್ಯೋಜಾತ ಮೂರ್ತಿಗೆಹಂಸಾಸ್ಯ ಹಸ್ತಗಳನ್ನು ಕಿವಿಯ ಬಳಿ ಹಿಡಿಯುವುದು ಅಥವಾ ಕಟಕಾಮುಖವನ್ನು ಎಡಕಿವಿಯ ಬಳಿಯೂ, ತ್ರಿಶೂಲವನ್ನೂ ಬಲಗೈಯಲ್ಲೂ ಹಿಡಿಯಬೇಕು.
ನಿತ್ಯ ಜೀವನದಲ್ಲಿ ಈ ಹಸ್ತವನ್ನು ಮೂರು ಎಂಬ ಸೂಚನೆಗೆ, ಚುಚ್ಚುವುದನ್ನು ಬಿಂಬಿಸಲು ಬಳಸಬಹುದು.
ಕಿರು ಬೆರಳು ಮತ್ತು ಹೆಬ್ಬೆರಳ ತುದಿಗಳನ್ನು ಸೇರಿಸಿ ಜೋಡಿಸಿ, ಮಧ್ಯ, ತೋರು, ಉಂಗುರ ಬೆರಳನ್ನು ಜೋಡಿಸಿ, ನೇರ ಚಾಚುವ ಹಸ್ತ ಮತ್ತೊಂದಿದ್ದು ಅದೂ ಕೂಡಾ ತ್ರಿಶೂಲಹಸ್ತವನ್ನು ಹೋಲುತ್ತದೆ. ಅದರ ಹೆಸರು ಕಟಕ ಹಸ್ತ.ಕೆಲವೊಂದು ಪಠ್ಯಗಳಲ್ಲಿ ಈ ಹಸ್ತಕ್ಕೆ ಸಂದಂಶದ ಉಂಗುರ ಮತ್ತು ಮಧ್ಯ ಬೆರಳ ತುದಿಗಳನ್ನು ಸೇರಿಸುವುದು ಲಕ್ಷಣ ಎನ್ನಲಾಗಿದೆ. ವಿನಿಯೋಗ : ಆಹ್ವಾನ, ನಿರ್ದೇಶನ, ಚಲನೆ.
ಇಲ್ಲಿಗೆ ಭರತನಾಟ್ಯ ಶೈಲಿಗೆ ಆಧಾರಗ್ರಂಥವೆನಿಸಿರುವ ನಂದಿಕೇಶ್ವರನ ‘ಅಭಿನಯ ದರ್ಪಣ’ ಗ್ರಂಥ ತಿಳಿಸಿದ ೨೮ ಅಸಂಯುತ ಹಸ್ತ ಅಂದರೆ ಒಂದು ಅಂಗೈಯಿಂದ ಸೂಚಿಸುವ ಸಂವಹನ ಮುದ್ರಿಕೆಗಳ ಅಧ್ಯಾಯ ಸಮಾಪ್ತಿಯಾದುದು.
ಮುಂದಿನ ಸಂಚಿಕೆಯಿಂದ ೨೪ ಬಗೆಯ ಸಂಯುತ ಹಸ್ತ- ಎರಡೂ ಅಂಗೈಗಳಿಂದ ಕೈಗೊಳ್ಳುವ ಹಸ್ತಲಕ್ಷಣಗಳ ಪಾಠ ಪ್ರವೇಶಿಕೆ ಪ್ರಾರಂಭ