Author: ಮನೋರಮಾ. ಬಿ.ಎನ್
ಅಂತರಾಷ್ಟ್ರೀಯ ಪ್ರಖ್ಯಾತಿಯ ನೃತ್ಯ ಗುರು ಡಾ.ಮಾಯಾ ರಾವ್ ಅವರ ಮೂಸೆಯಲ್ಲಿ ಅರಳಿದ ‘ಹೊಯ್ಸಳ ವೈಭವ’ ಹಾಗೂ ‘ಅಮೀರ್ ಖುಸ್ರು’ ರೂಪಕಗಳ ರಂಗ ಪ್ರದರ್ಶನವು ಇತ್ತೀಚೆಗೆ ( ಜುಲೈ ೧೯) ಅವರ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆಂಡ್ ಕೊರಿಯೋಗ್ರಫಿಯ ಬೆಳ್ಳಿಹಬ್ಬದ ಪ್ರಯುಕ್ತ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆಗೊಂಡಿತ್ತು.
ಆಂಗಿಕ, ಆಹಾರ್ಯ( ವೇಷಭೂಷಣಾದಿ ರಂಗ ಸನ್ನಿವೇಶ)ದ ನೆಲೆಯಲ್ಲಿ ಎರಡೂ ರೂಪಕಗಳು ಭವ್ಯವಾಗಿತ್ತಾದರೂ ಸಾತ್ತ್ವಿಕವನ್ನು ಮುಟ್ಟುವಲ್ಲಿ ಇನ್ನೊಂದಷ್ಟು ಶ್ರಮ ನಿರೀಕ್ಷಿತ. ವಾಚಿಕಾಭಿನಯ ಅಥವಾ ಹಿನ್ನಲೆ ಸಾಹಿತ್ಯದ ಉಪಯೋಗವೂ ತಕ್ಕಮಟ್ಟಿಗೆ ಕಡಿಮೆ ಇದ್ದುದರಿಂದ ಹಾಗೂ ಒಂದರ್ಥದಲ್ಲಿ ‘ಹೊಯ್ಸಳ ವೈಭವ’ ರೂಪಕದ ಒಟ್ಟಾರೆ ಸಂಯೋಜನೆಯು ಶೀರ್ಷಿಕೆಯನ್ನುಳಿದು ಯಾವ ಬಗೆಯ ಹೊಯ್ಸಳ ಅಥವಾ ಕರ್ನಾಟಕದ ನೆನಪುಗಳನ್ನೂ ಗಮನಾರ್ಹವಾಗಿ ಬಿಂಬಿಸದೇ ; ಕೇವಲ ವಿಷ್ಣುವರ್ಧನನ ಯುದ್ಧ ವೈಭವದ ಕುರಿತ ಆಂಗಿಕಾಭಿನಯ ಮತ್ತು ನಡೆಗಳು ಪ್ರಧಾನವಾಗಿದ್ದರಿಂದ ಅದು ಯಾವುದೇ ದೇಶದ ರಾಜನ ಯುದ್ಧಾದಿ ಶ್ರಮಗಳ ಕುರಿತ ಒಂದು ಪ್ರತೀಕವೆಂಬಂತೆ ಆಗಿ ಹೋಗುವ ಸಂಭವ ಗಮನಾರ್ಹವಾಗಿಯೇ ಕಂಡಿವೆ. ಅದರೊಂದಿಗೆ ಶಾಂತಲೆಯ ನೃತ್ಯವೈಭವದ ಪ್ರಸ್ತುತಿಗೆ ಯೋಜಿಸಲಾದ ಜತಿಸ್ವರವೂ ನಿರೀಕ್ಷಿತ ಪ್ರಭಾವ ತೋರಲಿಲ್ಲ. ಇದರಂತೆಯೇ ‘ಅಮೀರ್ ಖುಸ್ರು’ ಕೂಡಾ ಬಿಡಿಬಿಡಿಯಾದ ನೃತ್ಯ ಸನ್ನಿವೇಶಗಳ ನಿರೂಪಣೆಯಿಂದ ರಂಗರೂಪ ಸಂವಹನಕಾರಿಯಾಗುವಲ್ಲಿ ತುಸು ತಡವೆನಿಸುತ್ತದೆಯೆಂದು ಕಾಣಿಸುತ್ತದೆ. ಈ ನಿಟ್ಟಿನಲ್ಲಿ ಎರಡೂ ರೂಪಕಗಳೂ ಗಟ್ಟಿಯಾದ ಕಥಾವಸ್ತುವಿನ ಹಿನ್ನಲೆಯನ್ನು ಜೊತೆಗಿರಿಸಿಕೊಂಡು ಪುನರಾವರ್ತನೆಗಳನ್ನು ಕಡಿಮೆ ಮಾಡಿಕೊಂಡರೆ ಅದರೊಳಗಿನ ಚಮತ್ಕಾರೀ ನಡೆಗಳು ಒಟ್ಟಂದವನ್ನು ಶ್ರಮಿಸುತ್ತವೆ. ಇವೆಲ್ಲದರ ಹೊರತು ರಂಗರೂಪಕದ ಒಟ್ಟು ಧನಾತ್ಮಕ ಅಂಶವೆಂದರೆ ಪಾತ್ರಗಳ ವೇಷಭೂಷಣ, ಬೆಳಕು-ನೆರಳಿನ ಸಂಯೋಜನೆಯೇ ಆಗಿರುವುದರಿಂದ ವೈಭವಯುತ ರಂಗನಿರ್ಮಾಣ ಸಫಲವಾಗಿದೆಯೆಂದು ಹೇಳಬಹುದು