ಅಂಕಣಗಳು

Subscribe


 

ಅರ್ಧಚಂದ್ರ ಹಸ್ತ

Posted On: Wednesday, November 5th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ಪತಾಕ ಹಸ್ತದಲ್ಲಿನ ಅಂಗುಷ್ಠವನ್ನು ನೇರವಾಗಿ ಅರ್ಧಚಂದ್ರಾಕೃತಿಯಲ್ಲಿ ಪ್ರಸರಿಸುವುದು. ಪತಾಕ, ತ್ರಿಪತಾಕ, ಅರ್ಧಪತಾಕ ಹಸ್ತಗಳ ನಂತರ ಕಥಕ್ಕಳಿ, ಓಡಿಸ್ಸಿ, ಮಣಿಪುರಿ ನೃತ್ಯ ಪ್ರಕಾರಗಳಲ್ಲಿ ಅರ್ಧಚಂದ್ರ ಹಸ್ತವನ್ನು ಪ್ರಮುಖವಾಗಿ ಉಲ್ಲೇಖಿಸಲಾಗುತ್ತದೆ. ಈ ಹಸ್ತದ ಉಗಮವು ಚಂದ್ರ ಅಥವಾ ಶಿವನ ಆಭರಣ ಎಂದು ತೋರಿಸುವಲ್ಲಿಗೆ ಆಯಿತೆಂದು ಪ್ರತೀತಿ. ಈ ಹಸ್ತದ ಬಣ್ಣ ಬಿಳಿ. ವೈಶ್ಯ ವರ್ಣ, ಅತ್ರಿ ಋಷಿ, ಮಹಾದೇವ ದೇವತೆಯನ್ನು ಹೊಂದಿದೆ.

ಯೋಗ ಶಾಸ್ತ್ರದಲ್ಲಿ ಅರ್ಧಚಂದ್ರ ಹಸ್ತವನ್ನು ಸಹಜ ಧ್ಯಾನಮುದ್ರೆಯ ಸಂದರ್ಭದಲ್ಲಿ ಬಳಸುತ್ತೇವೆ. ಈ ಮುದ್ರಾವಿಜ್ಞಾನದ ಪ್ರಕಾರ ಪದ್ಮಾಸನದಲ್ಲಿ ಅಥವಾ ಸುಖಾಸನದಲ್ಲಿ ಕುಳಿತು ಒಂದು ಹಸ್ತದ ಮೇಲೆ ಒಂದು ಹಸ್ತವನ್ನಿಟ್ಟು ಹೆಬ್ಬೆರಳುಗಳನ್ನು ಒಂದಕ್ಕೊಂದು ತಾಗಿಸಲಾಗುವುದು. ಈ ಮುದ್ರೆಯಿಂದ ಸಾಧಕನ ತೇಜಸ್ಸು ವೃದ್ಧಿಯಾಗಿ, ಆತನ ಪ್ರಭಾವಳಿಯ ಪ್ರಖರತೆ ಆಕರ್ಷಕ ವ್ಯಕ್ತಿತ್ವದ ಮೆರುಗು ಪಡೆಯಬಹುದು. ದಿನನಿತ್ಯ ಕನಿಷ್ಟ ಪಕ್ಷ ೨೦ ನಿಮಿಷಗಳ ವರೆಗೆ ಇದರ ಸಾಧನೆ ಮಾಡುವುದರಿಂದ ಆಕರ್ಷಕ ವ್ಯಕ್ತಿತ್ವ, ಮನ:ಶುದ್ಧಿ, ಏಕಾಗ್ರತೆಯ ಫಲವನ್ನು ಪಡೆಯಬಹುದು.

ವಿನಿಯೋಗ: ಚಂದ್ರ, ಕೃಷ್ಣ ಪಕ್ಷದ ಚಂದ್ರ, ಕತ್ತು ಹಿಡಿದು ನೂಕುವುದು, ಭಲ್ಲಾಯುಧ, ದೇವತೆಗಳಿಗೆ ಅಭಿಷೇಕ, ಊಟದ ತಟ್ಟೆ, ಉದ್ಭವ, ಸೊಂಟ, ಚಿಂತೆ, ಸ್ವಗತದ ಮಾತು, ಧ್ಯಾನ, ಪ್ರಾರ್ಥನೆ, ಅವಯಗಳನ್ನು ಸ್ವರ್ಶಿಸುವುದು, ಸಾಮಾನ್ಯರಿಗೆ ನಮಸ್ಕಾರ, ಕುತೂಹಲ.

ಇತರೆ ವಿನಿಯೋಗ: ಶಂಖ, ಕಲಶ, ಆಯಾಸ, ಪುಷ್ಟಿ, ಡಾಬು, ಹಣೆಯ ಬೆವರನ್ನು ಒರೆಸುವುದು, ಬಾಲವಯಸ್ಸು, ಈಶ್ವರ, ಧನುಸ್ಸು, ಹುಬ್ಬು, ನಿಲ್ಲು ಅಥವಾ ತಡೆ ಎಂಬ ಸೂಚನೆ, ಸ್ನಾನಾನಂತರದ ತಲೆಗೂದಲನ್ನು ಒರೆಸುವುದು, ಬಳೆ, ಹೊರದೂಡುವುದು, ಕುರುಚಲುಗಿಡ, ಖೇದ, ಬಡವಾದ ನಡುವನ್ನು ಹೇಳಲು ಉಪಯೋಗಿಸಬಹುದು, ಆಶ್ಚರ್ಯ, ಉಡುದಾರ, ಗರುಡನ ರೆಕ್ಕೆಗಳು ಕಲಹ, ಚಂದ್ರ-ಸೂರ್ಯರ ಪ್ರತಿಬಿಂಬ, ಚಕ್ರ, ನಾಲಗೆ, ಭಜನೆ ಮಾಡುವುದು, ಮಧುರ ರಸಪಾನ ಮಾಡುವುದು, ನಿತಂಬ, ಮುಖ, ಕುಂಡಲಗಳು, ಚೆಂಡು ಹೊಡೆಯುವುದು, ಕೈಬಳೆ, ಚಿಗುರು ಗಿಡಗಳು, ಆಯಾಸ, ಬಲಾತ್ಕಾರವಾಗಿ ತೆರೆವುದು, ಕೃಶತೆ, ಕುಡಿಯುವುದು, ಉಡುದಾರ, ಮುಖ, ತಾಲಪತ್ರ, ತಲೆನೋವಿಗೆ ಹಣೆ ಹಿಡಿಯುವುದು, ಮೂಗಿನ ತುದಿಗೆ ಕೈಯಿಟ್ಟು ಜ್ವರ ನೋಡುವುದು, ಅಪಶಬ್ಧಕ್ಕೆ ಕಿವಿಮುಚ್ಚುವುದು, ಬಿಲ್ಲಿಗೆ ಗುರಿಯಿಡುವುದು, ಖಡ್ಗ ಬೀಸುವುದು, ಹೆಣ್ಣಿನ ಕತ್ತಿಗೆ ಸುಗಂಧ ಪೂಸುವುದು, ಸೊಂಟದ ಅಳತೆ ನೋಡುವುದು, ಕಾಲಿನ ಕಡಗ, ಬಿಸಿ, ಗಜದಂತಗಳನ್ನು ಈ ಹಸ್ತ ಸಂವಹಿಸುತ್ತದೆ.

ಈ ಹಸ್ತವನ್ನು ಭಗೀರಥ ರಾಜನನ್ನು, ಪಾಲಾಶ ವೃಕ್ಷವನ್ನು ತೋರಿಸಲು ಬಳಸುತ್ತಾರೆ. ಜೊತೆಗೆ ಮಾತೃ ಮತ್ತು ಪಿತೃಹಸ್ತದ ಸಂದರ್ಭದಲ್ಲೂ ಬಳಸಲಾಗುವುದು. ನಾನಾರ್ಥಹಸ್ತಗಳ ಪ್ರಕಾರದಲ್ಲಿ ಅರ್ಧಚಂದ್ರ ಹಸ್ತವನ್ನು ಕೆಳ ಮುಖವಾಗಿ ಹಿಡಿದರೆ ‘ವಹಪ್ರಾಪಣೇ ಮುಂತಾದ ಮೂರು ಧಾತುಗಳನ್ನು ತೋರಿಸಬಹುದು.

ಎಡಗೈಯಿಂದ ಅರ್ಧಚಂದ್ರ ಹಸ್ತವನ್ನು ಮೇಲ್ಮುಖವಾಗಿಯೂ, ಬಲಗೈಯಿಂದ ಅರ್ಧಚಂದ್ರ ಹಸ್ತವನ್ನು ಕೆಳಮುಖವಾಗಿಯೂ ಹಿಡಿಯುವುದರಿಂದ ಅದು ಪಾರ್ವತಿ ಹಸ್ತವೆನಿಸುವುದು. ಅರ್ಧಚಂದ್ರಹಸ್ತವನ್ನು ಕೆಳಮುಖವಾಗಿಸಿದರೆ ಹುಲಿ ಎಂದೂ, ಅರ್ಧಚಂದ್ರಹಸ್ತಗಳನ್ನು ಮಣಿಕಟ್ಟಿನ ಬಳಿ ಸೇರಿಸಿ ಬೆರಳುಗಳನ್ನು ಬಿಡಿಸುತ್ತ ಅಧೋಮುಖವಾಗಿ ಚಲಿಸಿದರೆ ಗಂಡಭೇರುಂಡ ಎಂದೂ ಸಂವಹಿಸಬಹುದು.

ಅರ್ಧಚಂದ್ರಹಸ್ತದ ಉಂಗುರ ಬೆರಳು ಮತ್ತು ಕಿರುಬೆರಳನ್ನು ಒಳಗೆಳೆದುಕೊಂಡು ಬಗ್ಗಿಸುವುದರಿಂದ ಅದು ಉತ್ತರಾಷಾಢಾ ನಕ್ಷತ್ರವನ್ನು ಅರ್ಥೈಸುತ್ತದೆ. ಈ ರೀತಿಯ ಹಸ್ತಪ್ರಕಾರವನ್ನು ಯುಕ್ತಚಂದ್ರ‌ಎನ್ನುತ್ತಾರೆ.

ಅರ್ಧಚಂದ್ರ ಹಸ್ತಗಳನ್ನು ಪರಸ್ಪರ ಅಭಿಮುಖವಾಗಿ ಹಿಡಿಯುವುದರಿಂದ ಕಲಶ ಹಸ್ತ ಎನ್ನುವ ಉಪಹಸ್ತವೊಂದು ಉಂಟಾಗುತ್ತದೆ. ಇದನ್ನು ಪೂರ್ಣವಸ್ತು ಸೂಚನೆಗಾಗಿ, ಸ್ನಾನಕ್ಕಾಗಿ ನೀರಿಗೆ ಇಳಿಯುವುದು, ಬಿಂದಿಗೆ, ಮಡಕೆ ಎಂದು ಸೂಚಿಸಲು ಬಳಸುತ್ತಾರೆ. ಈ ಹಸ್ತವನ್ನು ನಿತ್ಯಜೀವನದಲ್ಲಿ ವಸ್ತು, ಮಗುವನ್ನು ಎತ್ತಿಕೊಳ್ಳುವುದು, ನೀರು ಹಾಕುವುದು ಮುಂತಾದವುಗಳ ಸಂವಹನಕ್ಕೆ ಬಳಸುತ್ತಾರೆ.

ಇದೇ ರೀತಿಯಲ್ಲಿ, ಅರ್ಧಚಂದ್ರ ಹಸ್ತದ ಅಂಗೈಪಕ್ಕಗಳು ಒಂದರೊಡನೊಂದು ಚೆನ್ನಾಗಿ ಕೂಡಿಕೊಳ್ಳುವುದರಿಂದ ದರ್ದುರ ಹಸ್ತ ಎಂಬ ಹಸ್ತವು ಉಂಟಾಗುತ್ತದೆ. ಇದಕ್ಕೆ ಪ್ರತ್ಯೇಕ ವಿನಿಯೋಗಗಳು ಕಂಡುಬಂದಿಲ್ಲವಾದರೂ ಅಗಲವಾದದ್ದು, ನೀರು ಕುಡಿಯುವುದು, ಸ್ವಾಹಾ ಮಾಡುವುದು ಎಂಬರ್ಥದಲ್ಲಿ, ಬೃಹದ್ಗಾತ್ರದವನು ಭೋಜನ ಮಾಡುವ ಕ್ರಮ ಇತ್ಯಾದಿಗಳನ್ನು ಸೂಚಿಸಲಾಗುತ್ತದೆ. ಈ ಹಸ್ತ ನರ್ತನ ನಿರ್ಣಯ ಗ್ರಂಥದಲ್ಲಿ ಉಲ್ಲೇಖಿತ.

ಪತಾಕ ಹಸ್ತವನ್ನು ವಿರಳವಾಗಿ ಹಿಡಿಯುವುದರ ಮೂಲಕ ಪೂರ್ಣಚಂದ್ರ ಹಸ್ತ ಎಂಬುದು ಏರ್ಪಡುತ್ತದೆ. ಇದು ಅರ್ಧಚಂದ್ರ ಹಸ್ತವನ್ನೇ ಹೋಲುತ್ತದೆ. ಈ ಹಸ್ತ ಐದು ಎಂಬ ಸಂಖ್ಯೆ, ಭಯ, ಎಲೆಗಳು ಅಲ್ಲಾಡುವಿಕೆ, ರಾಕ್ಷಸ, ಪಿಶಾಚ ಹೊಡೆತ, ಗೋಮಯ ತಟ್ಟುವುದು, ಎಲ್ಲಾ ಎಂಬ ಅರ್ಥ. ಚಪ್ಪಾಳೆ ತಟ್ಟುವುದು, ಕಾಳನ್ನು ಹರಡುವುದು, ಐದು ಹೆಡೆಯ ಸರ್ಪ, ಚಂದ್ರಸೂರ್ಯ ಮಂಡಲಗಳು, ತನ್ನ ಸುಖ-ದು:ಖ ಪ್ರದರ್ಶನ, ರೋಗಪೀಡೆ, ರಾಜಮಾರ್ಗ, ದಟ್ಟವಾದ ನೆರಳು ಇತ್ಯಾದಿ ವಿಷಯಗಳನ್ನು ತೋರಿಸಲು ಬಳಕೆಯಾಗುತ್ತದೆ.

ಸಾಮಾನ್ಯ ಜೀವನದಲ್ಲಿ ಅರ್ಧಚಂದ್ರ ಹಸ್ತವನ್ನು ವಸ್ತುಗಳನ್ನು ಹಿಡಿದುಕೊಳ್ಳಲು, ಕುತ್ತಿಗೆ ಹಿಡಿಯಲು, ವಸ್ತುಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ, ಆಗಮನ ಅಥವಾ ವಿದಾಯ ಸಂದರ್ಭದಲ್ಲಿ, ಬಾ-ಹೋಗು ಎಂದು ಹೇಳಲು, ಕೊಡು-ತೆಗೆದುಕೋ ಎಂದು ಹೇಳಲು, ಅಳತೆ ಮಾಡಲು, ಚಿಂತೆ, ಯೋಚನೆ… ಇತ್ಯಾದಿ ಸಂದರ್ಭಗಳಲ್ಲಿ ಬಳಕೆ ಮಾಡುವುದನ್ನು ನಾವು ನೋಡುತ್ತೇವೆ.

Leave a Reply

*

code