ಅಂಕಣಗಳು

Subscribe


 

ನೃತ್ಯ ನಾಟಕಗಳಾಗಿ ಕನ್ನಡ ಕಾವ್ಯ : ಒಂದು ಅವಲೋಕನ

Posted On: Wednesday, June 15th, 2011
1 Star2 Stars3 Stars4 Stars5 Stars (1 votes, average: 3.00 out of 5)
Loading...

Author: ಸುಧೀರ್ ಕುಮಾರ್ ಎನ್.ಎ, ಉಪನ್ಯಾಸಕರು, ಬೆಂಗಳೂರು ವಿ.ವಿ, ನೃತ್ಯ ವಿಭಾಗ, ಬೆಂಗಳೂರು


ನೃತ್ಯವನ್ನು ಪ್ರಧಾನವಾಗಿರಿಸಿಕೊಂಡು ಸಂಗೀತ, ನಾಟಕ, ಪರಿಕರಗಳೊಂದಿಗೆ ಒಂದು ಕತೆಯನ್ನು ರಂಗದಮೇಲೆ ಪ್ರಯೋಗಿಸುವ ಕಲಾಪ್ರಕಾರವನ್ನು ನೃತ್ಯನಾಟಕವೆಂದು ಕರೆಯಬಹುದು. ಸಂಗೀತವೇ ಪ್ರಧಾನವಾದಾಗ ಅದನ್ನು ಗೀತನಾಟಕ ಅಥವಾ ಗೇಯನಾಟಕವೆಂದು ಕರೆಯುತ್ತಾರೆ. ಪಾಶ್ಚಿಮಾತ್ಯರು ಈ ಗೀತನಾಟಕಗಳನ್ನು ಒಪೇರಾಗಳೆಂದು ಕರೆಯುತ್ತಾರೆ. ಭಾರತದಲ್ಲಿ ಗೀತನಾಟಕಗಳು ಹಾಗೂ ನೃತ್ಯ ನಾಟಕಗಳಲ್ಲಿನ ವ್ಯತ್ಯಾಸ ತೀರ ಅಲ್ಪವಾಗಿದ್ದು ಒಂದು ಕಲಾರೂಪ ಇನ್ನೊಂದು ಕಲಾರೂಪಕ್ಕೆ ಸುಲಭವಾಗಿ ಹೊರಳಬಹುದಾಗಿದೆ*(೧). ಭಾರತದಲ್ಲಿ ಗೀತನಾಟಕ ಮತ್ತು ಗೇಯನಾಟಕಗಳು ಒಂದೇ ನಾಣ್ಯದ ಎರಡುಮುಖದಂತೆ ಪ್ರಯೋಗಿಸಲ್ಪಡುತ್ತಿದೆ. ಗೇಯನಾಟಕದ ಮೂಲ ಜನಪದ*(೨)ಆಗಿದ್ದು ಇದರ ಪ್ರಾಚೀನತೆಯನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟ.

ಸುಮಾರು ಕ್ರಿ.ಪೂ. ಎರಡನೇ ಶತಮಾನದಿಂದ ಕ್ರಿ.ಶ. ಆರನೇ ಶತಮಾನದ ಕಾಲಾವಧಿಯಲ್ಲಿ ರಚಿತವಾದ ಭರತನ ನಾಟ್ಯಶಾಸ್ತ್ರದಲ್ಲಿನ ನಾಟ್ಯಸಂಪ್ರದಾಯವು ಗೀತ, ವಾದ್ಯ, ನೃತ್ಯ ಹಾಗೂ ನಾಟಕದ ಅಂಶಗಳನ್ನೊಳಗೊಂಡ ರಂಗಪ್ರಯೋಗವಾಗಿದೆ. ಇದನ್ನು ನೃತ್ಯನಾಟಕವೆಂದೇ ಪರಿಗಣಿಸಬಹುದಾಗಿದ್ದು, ತನ್ಮೂಲಕ ಐತಿಹಾಸಿಕವಾಗಿ ಭಾರತದಲ್ಲಿನ ನೃತ್ಯನಾಟಕದ ಪ್ರಾಚೀನತೆಯನ್ನು ನಿರ್ಧರಿಸ ಬಹುದಾಗಿದೆ. ನಾಟ್ಯಶಾಸ್ತ್ರದ ರಚನೆಯ ಕಾಲಘಟ್ಟಕ್ಕೂ ಮೊದಲೇ ಈ ಕಲಾಪ್ರಕಾರವು ಸಾಕಷ್ಟು ಪ್ರೌಢಿಮೆ ಪಡೆದಿರುವುನ್ನು ಖಚಿತವಾಗಿ ಊಹಿಸಬಹುದಾಗಿದೆ.

೧೨ನೇ ಶತಮಾನದಲ್ಲಿ ಜಯದೇವ ಕವಿಯಿಂದ ರಚನೆಗೊಂಡ “ಗೀತಗೋವಿಂದ” ಐತಿಹಾಸಿಕವಾಗಿ ಭಾರತದ ಮೊಟ್ಟಮೊದಲ ಗೀತನಾಟಕವೆಂದು ಗುರುತಿಸಲ್ಪಟ್ಟಿದೆ.*(೩)

೧೭ನೇ ಶತಮಾನದ ತೀರ್ಥನಾರಾಯಣರಿಂದ ರಚಿತವಾದ “ಕೃಷ್ಣಲೀಲಾತರಂಗಿಣಿ”, ಸ್ವಾತಿತಿರುನಾಳ್ ಮಹಾರಾಜರಿಂದ ರಚಿತವಾದ ಕುಚೇಲೊಪಾಖ್ಯಾನ, ಅಜಮಿಳೋಪಾಖ್ಯಾನ, ೧೮ನೇ ಶತಮಾನದ ಶ್ರೀ ತ್ಯಾಗರಾಜರ ಪ್ರಹ್ಲಾದ ಭಕ್ತಿವಿಜಯಂ, ನೌಕಾಚರಿತ್ರಂ, ಸುಮಾರು ಅದೇಕಾಲಕ್ಕೆ ಸೇರಿದ ಗೋಪಾಲ ಕೃಷ್ಣ ಭಾರತಿಯಾರ್‌ರವರ ನಂದನಾರ್ ಚರಿತ್ರಂ, ಅರುಣಾಚಲ ಕವಿಯ ರಾಮನಾಟಕಂ*(೪) ಸೇರಿದಂತೆ ದೇಶದಾದ್ಯಂತ ಗೀತನಾಟಕಗಳ ರಚನೆಗಳು ಹಾಗೂ ಪ್ರಯೋಗಗಳು ನಡೆದುಬಂದಿವೆ.

*ಕನ್ನಡ ಗೀತನಾಟಕಗಳ ಅಧ್ಯಯನ. *೧,ಒಂದನೇ ಅಧ್ಯಾಯ, *೩ ಪುಟ-೬೭. *೪ ಪುಟ-೩೮

*ನೃತ್ಯಕಲೆ. *ಪುಟ-೪೨೫

ಕಥಕಳಿ, ಮಣಿಪುರಿ, ಕೂಚಿಪುಡಿ, ಭಾಗವತಮೇಳ, ಕೊರವಂಜಿ ಸೇರಿದಂತೆ ಅನಾದಿಕಾಲದಿಂದಲೂ ನಮ್ಮದೇಶದಲ್ಲಿ ನೃತ್ಯ ನಾಟಕಗಳು ಪ್ರಮುಖ ಪ್ರದರ್ಶನ ಕಲೆಯಾಗಿ ಬೆಳೆದು ಬಂದಿದೆ. ಕರ್ನಾಟಕದ ಯಕ್ಷಗಾನವನ್ನು ಗೀತನಾಟಕವೆಂದು ಖ್ಯಾತವಿದ್ವಾಂಸರಾದ ಕು.ಶಿ.ಹರಿದಾಸಭಟ್ಟರು*(೫). ಅಭಿಪ್ರಾಯಪಟ್ಟಿದ್ದಾರೆ.

ಕ್ರಿ.ಶ.೧೬೭೩-೧೭೦೪ರ ಅವಧಿಯಲ್ಲಿ ಮೈಸೂರಿನ ಚಿಕ್ಕದೇವರಾಜಒಡೆಯರಿಂದ ರಚಿತವಾದ “ಗೀತಗೋಪಾಲ” ಕನ್ನಡದ ಮೊತ್ತಮೊದಲನೆಯ ಗೀತನಾಟಕ*(೬)ವೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

ಆಧುನಿಕ ಕನ್ನಡ ಕಾವ್ಯ : ಪ್ರಾಚೀನ ಕನ್ನಡ ಕಾವ್ಯವು ಸುಮಾರು ಒಂದು ಸಾವಿರ ವರುಷಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಕ್ರಿ.ಶ. ೧೮೫೦ ರಿಂದ ಸುಮಾರು ಒಂದು ಶತಮಾನಗಳ ಕಲಾವಧಿಯಲ್ಲಿ ರಮ್ಯ ಸಂಪ್ರದಾಯ ಹಾಗೂ ವಾಸ್ತವವಾದಗಳು ರೂಪುಗೊಂಡವು. ಅದಕ್ಕೂ ಮೊದಲು ರೂಢಿಯಲ್ಲಿದ್ದ ಹಳೆಯ ಸಂಪ್ರದಾಯಗಳ ಬಂಧನವನ್ನು ಕಳಚಿ ಹೊಸಕಾವ್ಯ ಯುಗವೊಂದು ಉದಯಿಸುವ ಮೂಲಕ ಆಧುನಿಕ ಕನ್ನಡ ಕಾವ್ಯವೆಂದು ಗುರುತಿಸಲ್ಪಟ್ಟಿತು. ಆಧುನಿಕ ಕನ್ನಡಕಾವ್ಯ ಸ್ವರೂಪವು ರೂಪುಗೊಳ್ಳುವಲ್ಲಿ ಮುಖ್ಯವಾಗಿ ಎರಡು ಪ್ರಮುಖ ಅಂಶಗಳು ಕಾರಣವೆನ್ನಲಾಗಿದೆ.

೧.ಇಂಗ್ಲೀಷ್ ವಿದ್ಯಾಭ್ಯಾಸದ ಮೂಲಕ ಉಂಟಾದ ಪಾಶ್ಚಿಮಾತ್ಯ ಪ್ರಭಾವ.

೨.ಸ್ವಾತಂತ್ರ್ಯ ಹೋರಾಟದ ಮೂಲಕ ಉಂಟಾದ ರಾಷ್ರೀಯತೆಯ ಪ್ರಜ್ಞೆ.

ಇದರೊಂದಿಗೆ ಹೊರಜಗತ್ತಿನ ವಿಜ್ಞಾನ-ಯಂತ್ರನಾಗರೀಕತೆಯ ಆಕರ್ಷಣೆ, ಇಂಥಹ ಸ್ಥಿತಿಯಲ್ಲಿ ೧೯ನೇ ಶತಮಾನದ ಬ್ರಿಟೀಷ್ ರಮ್ಯ ಸಂಪ್ರದಾಯ ಸೂಕ್ತ ಮನೋಭೂಮಿಕೆಯನ್ನು ನಿರ್ಮಿಸುವ ಸಾಧನವಾಗಿ ಒದಗಿಬಂದಿತು.

ಬಿ.ಎಂ.ಶ್ರೀಯವರ ಇಂಗ್ಲೀಷ್ ಗೀತೆಗಳು ಆಧುನಿಕ ಕನ್ನಡ ಕಾವ್ಯದ ಪ್ರಮುಖ ಚಾರಿತ್ರಿಕ ಘಟ್ಟಗಳಲ್ಲೊಂದು. ೧೯೨೧ರಲ್ಲಿ ಪ್ರಕಟವಾದ ೬೩ ಕವನಗಳನ್ನೊಳಗೊಂಡ ಈ ಕವನಸಂಗ್ರಹದೊಂದಿಗೆ “ಕನ್ನಡದ ನವೋದಯ” ವಾಯಿತು. ಈ ಸಂಗ್ರಹದಲ್ಲಿ ಶೆಲ್ಲಿ, ವರ್ಡ್ಸವರ್ತ್, ಷೇಕ್ಸ್‌ಪಿಯರ್ ಮೊದಲಾದ ಪಾಶ್ಚಿಮಾತ್ಯ ಶ್ರೇಷ್ಠಕವಿಗಳ ಕವನಗಳನ್ನು ಆಯ್ದುಕೊಂಡು ಬಿ.ಎಂ.ಶ್ರೀಯವರು ಅನುವಾದಿಸಿದ್ದಾರೆ. (ಇದನ್ನು ಅನುಸೃಷ್ಠಿ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.)*(೭) ನಂತರ ಇವರೊಂದಿಗೆ ಎಮ್. ಗೋವಿಂದ ಪೈ, ಪಂಜೆ ಮಂಗೇಶರಾಯರು, ಡಿ.ವಿ.ಜಿ., ಪು.ತಿ.ನ., ಮಾಸ್ತಿ, ಕುವೆಂಪು, ಬೇಂದ್ರೆ, ಕೆ. ಎಸ್. ನರಸಿಂಹ ಸ್ವಾಮಿ ಮೊದಲಾದವರು ಈ ನವೋದಯದಪ್ರಮುಖ ಕವಿಗಳೆಂದು ಗುರುತಿಸಲ್ಪಟ್ಟಿದ್ದಾರೆ.

*ಕನ್ನಡ ಗೀತನಾಟಕಗಳ ಅಧ್ಯಯನ. *೫ ಒಂದನೇ ಅಧ್ಯಾಯ *೬ ಮೂರನೇ ಅಧ್ಯಾಯ

*ಕನ್ನಡ ಸಾಹಿತ್ಯಚರಿತ್ರೆ *೭.ಪುಟ-೩೧೯

ನವ್ಯ ಕಾವ್ಯ : ನವೋದಯದಂತೆ ನವ್ಯಕಾವ್ಯವೂ ಇಂಗ್ಲೀಷ್‌ನ “ಮಾಡರ್ನ್‌ಪೊಯಟ್ರಿ”ಗೆ ಸಂವಾದಿಯಾಗಿ ಇಂಗ್ಲೀಷ್ ಕಾವ್ಯದ ಪ್ರೇರಣೆಯಿಂದಲೇ ಜನಿಸಿದ ಇನ್ನೊಂದು ಪ್ರಕಾರ. ಎರಡನೇ ಮಹಾಯುದ್ದದ ನಂತರ ಮುಂದೆ ಯುದ್ಧ ಗಳಾಗದಂತೆ ಮಾನವ ಸಂಬಂಧಗಳು ಕಲುಷಿತವಾಗದಂತೆ ಕಾಪಾಡುವ ವಿಚಾರಗಳು ಮುಖ್ಯವಾದ ಹಿನ್ನೆಲೆಯಲ್ಲಿ ರೂಪುಗೊಂಡಿತು. ನವ್ಯಕಾವ್ಯವನ್ನು ಬಿತ್ತಿ ಬೆಳೆದವರು ವಿ.ಕೃ.ಗೋಕಾಕ್ ಹಾಗೂ ಎಮ್. ಗೋಪಾಲಕೃಷ್ಣ ಅಡಿಗರು.*(೮) ನವ್ಯ ಕಾವ್ಯದ ಇತರ ಪ್ರಮುಖರೆಂದರೆ ಗಂಗಾಧರ ಚಿತ್ತಾಲ, ಶಂಕರ ಮೋಕಾಶಿ ಸು.ರಂ.ಎಕ್ಕುಂಡಿ ಮೊದಲಾದವರು.

ಬಂಡಾಯ ಕಾವ್ಯ : ಲೇಖನಿಯನ್ನು ಖಡ್ಗ ವನ್ನಾಗಿಸುವ ಪ್ರಣಾಲಿಕೆಯನ್ನು ಮುಂದಿಟ್ಟುಕೊಂಡು ದಲಿತ ಕವಿ ಸಿದ್ಧಲಿಂಗಯ್ಯನವರ ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು ಕವನ ಸಂಕಲನದೊಂದಿಗೆ ತನ್ನ ವಿಶೇಷತೆಯನ್ನು ಪ್ರಕಟಿಸಿತು. ಬುದ್ಧಣ್ಣ ಹಿಂಗಮೀರೆ, ಚಂದ್ರಶೇಖರ ಪಾಟೀಲ, ಬರಗೂರು ರಾಮಚಂದ್ರಪ್ಪ, ಕೆ.ಬಿ.ಸಿದ್ಧಯ್ಯ, ಕಾಳೇಗೌಡ ನಾಗವಾರ, ರಂಜಾನ್ ದರ್ಗಾ, ಕೆ.ಎಂ. ಮುನಿಕೃಷ್ಣಪ್ಪ ಈ ಮೊದಲಾದವರು ಬಂಡಾಯ ಕಾವ್ಯದ ಇತರ ಪ್ರಮುಖರು. ಪ್ರಾಚೀನ ಕನ್ನಡ ಕಾವ್ಯದಿಂದ ಇಂದಿನವರೆಗೂ ವಿವಿಧ ಕಾವ್ಯಪ್ರಕಾರಗಳ ಅನೇಕ ಜೀವಂತ ವಾಹಿನಿಗಳು ನಿರಂತರವಾಗಿ ಪ್ರವಹಿಸುತ್ತಿವೆ.*(೯)

ಆಧುನಿಕ ನೃತ್ಯನಾಟಕ : ಪದ್ಮಶ್ರೀ ಉದಯಶಂಕರ್ (೧೯೦೦-೧೯೭೭) ರವರವರನ್ನು ಆಧುನಿಕ ನೃತ್ಯನಾಟದ ಪ್ರವರ್ಧಕರೆಂದು ಹೇಳಬಹುದು. ಚಿತ್ರಕಲಾಭ್ಯಾಸಕ್ಕಾಗಿ ಇಂಗ್ಲೇಂಡಿಗೆ ತೆರಳಿ “ಕಾಲೇಜ್ ಆಫ್ ಫೈನ್ ಆರ್ಟ್ಸ”ನಲ್ಲಿ ಅಧ್ಯಯನವನ್ನು ಮಾಡುವಾಗ ಅಧ್ಯಾಪಕ ವಿಲಿಯಂ ರೂಥೆನ್ನ್‌ಸ್ಟೈನ್‌ರವರ ಸಲಹೆಯಂತೆ ಪಾಶ್ಚಿಮಾತ್ಯ ಕಲಾಪ್ರಕಾರಕ್ಕೆ ಮಾರುಹೋಗದೆ ಭಾರತೀಯ ಪ್ರಾಚೀನ ಪರಂಪರೆಯ ಅಧ್ಯಯನವನ್ನು ಮಾಡಿದರಲ್ಲದೆ ರಷ್ಯಾದ ನೃತ್ಯತಾರೆ ಅನ್ನಾಪಾವಲೋವರವರ ಭೇಟಿಯಿಂದಾಗಿ ನೃತ್ಯಕಲೋಪಾಸಕರಾದರು. ನಂತರ ಭಾರತದ ಹಲವು ಶಾಸ್ತ್ರೀಯ ಮತ್ತು ಜಾನಪದ ನೃತ್ಯಗಳನ್ನು ಅಧ್ಯಯನ ಮಾಡಿ, ಸುಸಜ್ಜಿತವಾದ ಉತ್ತಮ ಕಲಾತಂಡದೊಂದಿಗೆ ಹಲವಾರು ನೃತ್ಯ ನಾಟಕಗಳನ್ನು ಸಂಯೋಜಿಸಿ, ಹಲವಾರು ಹೊಸ ಸಂಶೋಧನೆಯನ್ನು, ನೃತ್ಯನಾಟಕದಲ್ಲಿ ಹಲವಾರು ಹೊಸ ಪ್ರಯೋಗಗಳನ್ನು ಮಾಡಿ, ಹಿಮಾಲಯದ ತಪ್ಪಲಿನಲ್ಲಿ “ಆಲ್ಮೊರ” ಎಂಬಲ್ಲಿ ಅತ್ಯಾಧುನಿಕವಾದ ಒಂದು ಕಲಾತರಬೇತಿ ಸಂಸ್ಥೆಯನ್ನು ಸ್ಥಾಪಿಸಿ.*(೧೦) ದೇಶದ ನೃತ್ಯನಾಟಕದ ಇತಿಹಾಸದಲ್ಲಿ ಒಂದು ಕ್ರಾಂತಿಯನ್ನೇ ಮಾಡಿದರು.ಸುಮಾರು ಒಂದು ಶತಮಾನದ ಹಿಂದೆಯೇ ಭಾರತದ ನೃತ್ಯನಾಟಕಗಳಿಗೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟು ವಿದೇಶಗಳಲ್ಲಿಯೂ ಭಾರತದ ನೃತ್ಯನಾಟಕದ ಸೊಬಗನ್ನು ಜನಪ್ರಿಯಗೊಳಿಸಿದರಲ್ಲದೆ ವಿಶ್ವಮಾನ್ಯತೆಯನ್ನು ಗಳಿಸಿಕೊಟ್ಟರು. ಆದರೂಇಂದಿನ ಆಧುನಿಕ ಯುಗದ ದೇಶದಲ್ಲಿ ನೃತ್ಯನಾಟಕದ ಮಟ್ಟ ತೀರ ಕುಸಿಯುತ್ತಿರುವುದುಶೋಚನೀಯ.

*ಕನ್ನಡ ಸಾಹಿತ್ಯಚರಿತ್ರೆ *೮. ಪುಟ-೩೨೭ *೯. ಪುಟ-೩೩೪

*ಪ್ರದರ್ಶನ ಕಲೆಗಳು *೧೦. ಪುಟ_೯

ಉದಯಶಂಕರ್‌ರವರ ನಂತರ ಅವರ ಶಿಷ್ಯರಾದ ಸಚಿನ್‌ಶಂಕರ್, ಶಾಂತಿಬರ್ಧನ್, ಪ್ರಭಾತ್ ಗಂಗೂಲಿಯವರು ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಗುರುಗೋಪಿನಾಥ್, ರುಕ್ಮಿಣಿದೇವಿ ಅರುಂಡೇಲ್, ಮೃಣಾಲಿನಿ ಸಾರಾಬಾಯಿ ಮೊದಲಾದವರು ನೃತ್ಯನಾಟಕ ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ಪ್ರಯೋಗಗಳನ್ನು ಮಾಡಿದ್ದಾರೆ.

ಕರ್ನಾಟಕದಲ್ಲಿ ನೃತ್ಯನಾಟಕಗಳು : ಯಕ್ಷಗಾನವನ್ನು ಹೊರತುಪಡಿಸಿ ನೋಡಿದರೆ ನೃತ್ಯನಾಟಕ ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆ ತೀರ ಅಲ್ಪಪ್ರಮಾಣವೆನ್ನಬಹುದು. ಪ್ರಭಾತ್ ಕಲಾವಿದರು, ಅರುಣ್ ಕಲಾವಿದರು, ಡಾ||ಮಾಯಾರಾವ್‌ರವರ ಕಥಕ್ ಮತ್ತು ಕೋರಿಯೋಗ್ರಫಿ ಸಂಸ್ಥೆಯು ಸ್ವಲ್ಪಮಟ್ಟಿಗೆ ನುರಿತ ಕಲಾವಿದರನ್ನು ಕಲೆಹಾಕಿ ಒಂದು ಕಲಾತಂಡದ ಮೂಲಕ ಹಲವಾರು ಯಶಸ್ವಿಪ್ರಯೋಗಗಳನ್ನು ಮಾಡಿದ್ದಾರೆ.

ದಿ||ಎಚ್.ಆರ್. ಕೇಶವಮೂರ್ತಿಯವರು ಹಳೆಗನ್ನಡ ಕಾವ್ಯ ಮತ್ತು ಆಧುನಿಕ ಕನ್ನಡ ಕಾವ್ಯಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚಿನ ನೃತ್ಯನಾಟಕವನ್ನು ಪ್ರಯೋಗಿಸಿರುವುದು ಒಂದು ದಾಖಲೆ‌ ಎಂದೇ ಹೇಳಬಹುದಾಗಿದೆ. ದಿ|| ಪದ್ಮಿನಿರಾವ್, ಬಿ.ಕೆ.ಶ್ಯಾಂಪ್ರಕಾಶ್, ಲಲಿತಾಶ್ರೀನಿವಾಸನ್, ರಾಧಾಶ್ರೀಧರ್, ವೈಜಯಂತಿಕಾಶಿ, ಪದ್ಮಿನಿರಾಮಚಂದ್ರನ್, ಬಿ.ಕೆ.ವಸಂತಲಕ್ಷ್ಮಿ, ಕಲಾಮಂಡಲಂ ಉಷಾದಾತಾರ್, ಡಾ||ತುಳಸಿರಾಮಚಂದ್ರ ಡಾ||ಶೀಲಾಶ್ರೀಧರ್, ಡಾ||ವಸುಂಧರಾ ದೋರೆಸ್ವಾಮಿ ಮೊದಲಾದವರು ಸೇರಿದಂತೆ ಇನ್ನೂ ಹಲವಾರು ಕಲಾವಿದರು ತಮ್ಮವಿದ್ಯಾರ್ಥಿಗಳಿಂದಲೂ ಹಾಗೂ ಇತರೆ ಕಲಾತಂಡಗಳಿಂದಲೂ ಆಧುನಿಕ ಕನ್ನಡಕಾವ್ಯವನ್ನು ಬಳಸಿಕೊಂಡು ನೃತ್ಯನಾಟಕವನ್ನು ಪ್ರದರ್ಶಿಸಿರುವಸಾಕಷ್ಟುಉದಾಹರಣೆಹಳಿವೆ.

ಈ ಎಲ್ಲಾ ನೃತ್ಯಗುರುಗಳು ತಮ್ಮ ನೃತ್ಯಶಾಲಾ ವಿದ್ಯಾರ್ಥಿಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯಿದೆ. ಹಲವು ನೃತ್ಯನಾಟಕಗಳು ತಮ್ಮ ನೃತ್ಯ ಶಾಲಾ ವಾರ್ಷಿಕೋತ್ಸವಕ್ಕೇ ಸೀಮಿತವಾಗಿ, ಬಹಳಷ್ಟು ಪ್ರಯೋಗಗಳು ಪ್ರಥವು ಪ್ರದರ್ಶನವೇ ಕೊನೆಯ ಪ್ರದರ್ಶನವಾದ ಉದಾಹರಣೆಗಳಿವೆ.

ಬೆರಳೆಣಿಕೆಯಷ್ಟು ಮಾತ್ರ ಆಧುನಿಕ ಕನ್ನಡ ಕಾವ್ಯವನ್ನು ಬಳಸಿಕೊಂಡಿದ್ದಾರೆ. ಉದಾ:-ಕುರ್ತುಕೋಟಿಯವರ “ಸ್ವಪ್ನದರ್ಶಿ”,

ಪು.ತಿ.ನ : ಗೋಕುಲ ನಿರ್ಗಮನ, ಶ್ರೀರಾಮ ಪಟ್ಟಾಭಿಷೇಕ, ಶ್ರೀಕೃಷ್ಣ ಕುಚೇಲ,

ಶಿವರಾಮಕಾರಂತ: ಮುಕ್ತದ್ವಾರ, ಬುದ್ಧೋದಯ, ಲವಕುಶ, ಕೀಚಕ ಸೈರಂದ್ರಿ, ಸೋಮಿಯ ಸೌಭಾಗ್ಯ, ಯಾರೋ ಅಂದರು,

ಕುವೆಂಪು: ಶ್ರೀರಾಮಾಯಣದರ್ಶನ, ಚಿತ್ರಾಂಗದ, ಕರಿಸಿದ್ಧ, ನನ್ನಗೋಪಾಲ, ಬೊಮ್ಮನಹಳ್ಳಿಯ ಕಿಂದರಜೋಗಿ,

ಸಾ.ಶಿ.ಮರುಳಯ್ಯ : ಅಂಬೆ, ಬನವಾಸಿ, ಬಾದಾಮಿ,ಸ್ನೋವೈಟ್, ಚೆನ್ನಿ ಚೆನ್ನಿ ಚೆನ್ನಲೆ, ಶಿವ ಛತ್ರಪತಿ, ಉಲ್ಲಾಳದ ರಾಣಿ,

ಮಾಸ್ತಿಯವರ ಗೌಡರಮಲ್ಲಿ,

ಎ.ಎನ್.ಸುಬ್ಬರಾವ್ ರವರ “ಶಾಂತಿಸಂದೇಶ”, ಈ ಎಲ್ಲಾ ಕಾವ್ಯವನ್ನು ನೃತ್ಯ ನಾಟಕವಾಗಿ ಪ್ರಯೋಗಿಸಲ್ಪಟ್ಟಿರುವ ಒಂದು ಚಿಕ್ಕನಿದರ್ಶನ.

ಇನ್ನೂ ಯತೇಚ್ಛವಾಗಿ ಬಳಸಬಹುದಾದ ಸಾಕಷ್ಟು ವೈವಿಧಮಯವಾದ, ಅಮೂಲ್ಯ ಸಾಹಿತ್ಯವನ್ನು ಹೊಂದಿರುವ ಆಧುನಿಕ ಕನ್ನಡ ಕಾವ್ಯಗಳಲ್ಲಿ ಗೀತನಾಟಕಗಳು, ನೃತ್ಯರೂಪಕಗಳು, ಕಥನಕವನಗಳು ಲಭ್ಯವಿದ್ದು ಆ ಸಾಹಿತ್ಯದ ಬಗೆಗೆ ನೃತ್ಯಗುರುಗಳಿಗೆ ಮತ್ತು ಕಲಾವಿದರಿಗೆ ಸಾಷ್ಟು ಅರಿವನ್ನು ಮೂಡಿಸುವ ಪ್ರಯತ್ನಗಳು ನಡೆಯಬೇಕಾಗಿದೆ.

ಅನುಭವಿ ಕಲಾವಿದರ ಕೊರತೆಯಿಂದಾಗಿ (ಕೆಲವೊಮ್ಮೆ ನುರಿತ ಅನುಭವಿ ಕಲಾವಿದರನ್ನು ಅತಿಥಿಕಲಾವಿದರನ್ನಾಗಿ ಕೆಲವು ಮುಖ್ಯಪಾತ್ರಗಳಿಗೆ ಬಳಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.) ಬಹಳಷ್ಟು ಕಲಾವಿದರು ಯಾವುದಾದರೂ ಒಂದು ಶಾಸ್ತ್ರೀಯ ನೃತ್ಯದ ಮಾರ್ಗಪದ್ದತಿಯಲ್ಲಿ ಪರಿಣತರಾಗಿದ್ದರೂ, ನೃತ್ಯನಾಟಕದಲ್ಲಿ ಅಭಿನಯಿಸುವಾಗ ಪಾತ್ರಪೋಷಣೆಗೆ ಬೇಕಾದ ತರಬೇತಿಯ ಕೊರತೆ ಎದ್ದುಕಾಣುತ್ತಿದೆ. ಡಾ||ಮಾಯಾರಾವ್‌ರವರ ಕಥಕ್ ಮತ್ತು ಕೋರಿಯೋಗ್ರಫಿ ಸಂಸ್ಥೆಯನ್ನು ಹೊರತುಪಡಿಸಿದರೆ ನೃತ್ಯ ನಾಟಕಗಳಿಗಾಗಿ ತರಬೇತಿ ನೀಡುವ ಸಂಸ್ಥೆಗಳ ಕೊರತೆಯಿದೆ; ಪರಿಣತ ಕಲಾವಿದರ ಕೊರತೆಯಿದೆ. ಸುಸಜ್ಜಿತವಾದ ಕಲಾತಂಡಗಳ ಅಗತ್ಯವಿದೆ,ಸೃಜನಶೀಲ ನೃತ್ಯನಾಟಕ ನಿರ್ದೇಶಕರು ಮತ್ತು ನೃತ್ಯನಾಟಕಗಳಿಗೆ ಸೃಜನಶೀಲ ನೃತ್ಯಸಂಯೋಜಕರ ಅಗತ್ಯವಿದೆ.

ಒಂದೊಂದು ನೃತ್ಯನಾಟಕಗಳಿಗೂ ಅಗತ್ಯವಾಗಿ ಬೇಕಾದ ಹಿನ್ನೆಲೆಸಂಗೀತ, ಹಾಡುಗಾರಿಕೆ, ವಿವಿಧ ಸಂಗೀತವಾಧ್ಯಗಳು, ವೇಷಭೂಷಣಗಳು, ಬೆಳಕಿನ ಸಂಯೋಜನೆ, ರಂಗವಿನ್ಯಾಸ (ಸ್ಟುಡಿಯೋ ರೆಕಾರ್ಡಿಂಗ್ ಸಂಗೀತದ ಬಳಸಿಕೊಂಡರೂ) ತಗಲುವ ಆರ್ಥಿಕ ಸಮಸ್ಯೆ, ಮರುಪ್ರದರ್ಶನ ಅವಕಾಶ ದೊರೆಯುವ ಭರವಸೆಗಳು ಇಲ್ಲದೆ ಕರ್ನಾಟಕದಲ್ಲಿ ನೃತ್ಯನಾಟಕಗಳು ಹೆಚ್ಚಿನ ಪ್ರಗತಿಯನ್ನು ಸಾಧಿಸಿಲ್ಲವೆಂದೇ ಹೇಳಬಹುದು.

ಬಹಳಷ್ಟು ಕಲಾವಿದರು ಹವ್ಯಾಸಕ್ಕಾಗಿ ಶಾಸ್ತ್ರೀಯ ನೃತ್ಯವನ್ನು ಕಲಿಯುತ್ತಿದ್ದರೆ, ಇನ್ನು ಹಲವರು ಏಕವ್ಯಕ್ತಿ ಪ್ರದರ್ಶನದ ದೃಷ್ಟಿಯಲ್ಲಿ ಕಲಿಯುತ್ತಾರೆ. ಅದರಲ್ಲಿ ಕೆಲವರು ನೃತ್ಯ ತರಗತಿಯನ್ನು ತೆರೆದು ಸ್ವಯಂ ಉದ್ಯೋವನ್ನಾಗಿಸಿಕೊಳ್ಳುತ್ತಾರೆ. ಸರ್ಕಾರ ನಡೆಸುವ ಉತ್ಸವಗಳಲ್ಲಿ,ಸಾಕಷ್ಟು ಮುಂಚಿತವಾಗಿ ಕಾರ್ಯಕ್ರಮದ ದಿನಾಂಕಗಳು ನಿರ್ಧರಿಸಲ್ಪಡದೆ ಇರುವುದರಿಂದ ಅತ್ಯಗತ್ಯವಾದ ಪೂರ್ವಸಿದ್ಧತೆಯ ಕೊರತೆಯಿಂದಾಗಿ ಪ್ರದರ್ಶನದ ಗುಣಮಟ್ಟಗಳು ಕುಸಿಯುತ್ತಿವೆ.ಕೆಲವೊಂದು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಪರೂಪಕ್ಕೆ ಅವಕಾಶಗಳು ದೊರೆತರೂ ಒಟ್ಟಿನಲ್ಲಿ ನೃತ್ಯನಾಟಕದ ಆರ್ಥಿಕ ಹೊರೆಯನ್ನು ನಿಭಾಯಿಸುವುದು ಬಹಳ ಕಷ್ಟಕರವಾಗಿದೆ.

ಪ್ರತಿ ವರುಷವೂ ರಾಜ್ಯಾದಾದ್ಯಂತ ಸಾಕಷ್ಟು ಸಂಗೀತ, ನ್ಯತ್ಯ, ನಾಟಕ, ಸ್ಪರ್ಧೆಗಳನ್ನು ಹಲವಾರು ಸಂಘ ಸಂಸ್ಥೆಗಳು ಏರ್ಪಡಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಅಂತೆಯೇ ನೃತ್ಯನಾಟಕಗಳಿಗೂ ಪ್ರೋತ್ಸಾಹದ ಅಗತ್ಯವಿದೆ. ತನ್ಮೂಲಕ ಹೊಸ ಹೊಸ ಪ್ರಯೋಗಗಳಿಗೆ ವೇದಿಕೆಯನ್ನು ಒದಗಿಸಿದಂತಾಗುತ್ತದೆ.

ಪಾಶ್ಚಿಮಾತ್ಯ ಒಪೇರಾಗಳಿಗೆ ಇರುವ ನೂರಾರು ವರುಷಗಳ ಇತಿಹಾಸದಲ್ಲಿ ಅವುಗಳಿಗೆ ದೊರೆತ ಪುರಸ್ಕಾರ, ಪ್ರಯೋಗಾವಕಾಶ; ತನ್ಮೂಲಕ ಅದೊಂದು ರಾಷ್ಟ್ರಮಟ್ಟದ ಕಲೆಯಾಗಿ ಪರಿಪೂರ್ಣ ವಿಕಾಸ ಹೊಂದಿರುವುದನ್ನು ಕಾಣಬಹುದು. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಈ ಕಲೆಯನ್ನು ಉಳಿಸಿ ಉದ್ದರಿಸಿ, ಮತ್ತಷ್ಟು ವಿಜೃಂಭಿಸುವಂತೆ ಮಾಡಲು ನಡೆಯುತ್ತಿರುವ ಪ್ರಯತ್ನಗಳು ಸಂಶೋಧನೆ, ಹೊಸಕೃತಿಗಳ ಸೃಷ್ಠಿಗೆ ನೀಡುತ್ತಿರುವ ಪ್ರೋತ್ಸಾಹಗಳನ್ನು ಗಮನಿಸಿದರೆ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ನೃತ್ಯನಾಟಕದ ಪ್ರಗತಿ ತುಂಬಾ ನಿರಾಶಾದಾಯಕವಾಗಿದೆ. *(೧೧)

ನಮ್ಮ ದೇಶದಲ್ಲಿ ವಿಶ್ವಮನ್ನಣೆಯನ್ನು ಗಳಿಸಿರುವ ಏಳು ಶಾಸ್ರೀಯ ನೃತ್ಯ ಪ್ರಕಾರಗಳಿವೆ, ನೂರಾರು ಜಾನಪದ ನೃತ್ಯಗಳಿವೆ. ವೈವಿಧ್ಯಮಯವಾದ ಶ್ರೀಮಂತ ಸಂಗೀತವಿದೆ. ಹಲವು ಬಗೆಯ ಅತ್ಯಾಕರ್ಶಕ ಆಹಾರ್ಯವಿದೆ. ಸಾವಿರಾರು ಬಗೆಯ ಕಥೆಗಳಿವೆ. (ವಿಶ್ವದಲ್ಲಿ ಭಾರತವನ್ನು ಕಥೆಗಳ ತವರೂರು ಎಂದೇಕರೆಯುತ್ತಾರೆ.) ವಿಶ್ವದ ಬೇರಾವ ರಾಷ್ಟ್ರಕ್ಕೂ ಇರದ ಈ ಕಲಾಶ್ರೀಮಂತಿಕೆಯನ್ನು ನೃತ್ಯನಾಟಕಗಳಿಗೆ ಸಮರ್ಪಕವಾಗಿ ಬಳಸಿ ಪ್ರದರ್ಶಿಸಿದಲ್ಲಿ ಇದು ವಿಶ್ವದಾದ್ಯಂತ ಮನ್ನಣೆಯನ್ನು ಗಳಿಸುವುದರಲ್ಲಿ ಸಂಶಯವಿಲ್ಲ.

ಆಧುನಿಕ ಕನ್ನಡದ ಕಾವ್ಯದ ವಿಷಯಸರಳತೆಯಿಂದಾಗಿ ಶ್ರೀಸಾಮಾನ್ಯನನ್ನು ಸುಲಭವಾಗಿ ತಲುಪುವುದರಿಂದ ಇದರ ಹೆಚ್ಚು ಬಳಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಗೀತ ನೃತ್ಯ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ನೃತ್ಯ ಕಲಾ ಪರಿಷತ್ತು, ಸಾಹಿತ್ಯ ಪರಿಷತ್ತು, ಕನ್ನಡಪರ ಸಂಘ-ಸಂಸ್ಥೆಗಳು ಹೆಚ್ಚಿನ ಆಸಕ್ತಿಯನ್ನು ತಳೆಯುವುದು ಮುಖ್ಯ. ತನ್ಮೂಲಕ ಕನ್ನಡದ ನೃತ್ಯ ನಾಟಕಗಳು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ವಿಜೃಂಬಿಸುವಂತಾಗಬೇಕು.

*ಕನ್ನಡ ಗೀತನಾಟಕಗಳ ಆಧ್ಯಯನ :*೧೧. ೬ನೇ ಅಧ್ಯಾಯ

ಗ್ರಂಥ ಋಣ

· ನೃತ್ಯಕಲೆ :ಪ್ರೊ||ಯು.ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ. ಪ್ರಸಾರಾಂಗ ಬೆಂಗಳೂರುವಿಶ್ವವಿದ್ಯಾಲಯ೧೯೮೦

· ಕನ್ನಡ ಗೀತನಾಟಕಗಳ ಆಧ್ಯಯನ : ಡಾ. ವಿಜಯಲಕ್ಷ್ಮಿ ಸುಬ್ಬರಾವ್, ಪಿ‌ಎಚ್,ಡಿ ಮಹಾಪ್ರಬಂಧ,ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು. ೧೯೯೫

· ಆಧುನಿಕ ಕನ್ನಡ ನಾಟಕ: ಡಾ.ಕೆ.ಮರುಳಸಿದ್ಧಪ್ಪ, ಅಂಕಿತ ಪುಸ್ತಕ ಬೆಂಗಳೂರು. ೨೦೦೨

· ಸಾಹಿತ್ಯ ಮತ್ತು ನೃತ್ಯ : ಡಾ.ಚೂಡಾಮಣಿ ನಂದಗೋಪಾಲ್. ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು.೧೯೯೩

· ಆಯ್ದ ಕಥನ ಕವನಗಳು: ಎಚ್.ಎಸ್ ವೆಂಕಟೇಶ ಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ. ೧೯೮೭

· ಕನ್ನಡ ಸಾಹಿತ್ಯ ಚರಿತ್ರೆ:ಡಾ. ತ.ಸು.ಶ್ಯಾಮರಾಯರು, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲ ಮೈಸೂರು೨೦೦೧

· ಆಧುನಿಕ ಕನ್ನಡ ಕಾವ್ಯ:(ಸಮಾಜ : ಸಂಸ್ಕೃತಿ) ಡಾ.ಲೋಕೇಶ ಅಗಸರಗಟ್ಟಿ. ಅಲೋಕ ಪ್ರಕಾಶನ ಚಿತ್ರದುರ್ಗ೨೦೦೩

· ವೃತ್ತಿ ರಂಗ ದರ್ಶನ : ಸಂಪಾದಕರು ಡಾ.ಎಚ್.ಕೆ.ರಂಗನಾಥ್. ಕನ್ನಡ ಸಾಹಿತ್ಯ ಪರಿಷತ್ತ್.೧೯೯೩

· ಕರ್ನಾಟಕ ಸಂಗೀತ ವಾಹಿನಿ : ಡಾ. ರಾ.ಸತ್ಯನಾರಾಯಣ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ೨೦೦೧

· ಪ್ರದರ್ಶನ ಕಲೆಗಳು : ಡಾ. ಕೆ.ಶ್ರೀಕಂಠಯ್ಯ, ಅಳಿಲು ಸೇವಾಸಂಸ್ಥೆ.೨೦೦೩

· ಆಧುನಿಕ ಕನ್ನಡ ಕಾವ್ಯ:ಚನ್ನವೀರ ಕಣವಿ, ಡಾ.ರಾಘವೇಂದ್ರರಾವ್.ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.೧೯೭೬

( ಲೇಖಕರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೃತ್ಯ ವಿಭಾಗದ ಉಪನ್ಯಾಸಕರು ಮತ್ತು ಭರತನಾಟ್ಯಕ್ಕೆ ಪೂರಕವಾಗುವ ಆಧುನಿಕ ಕನ್ನಡ ಕಾವ್ಯ : ಒಂದು ಅಧ್ಯಯನ ಎಂಬ ವಿಷಯದಲ್ಲಿ ಪಿ‌ಎಚ್‌ಡಿ ಅಧ್ಯಯನ ನಿರತರು.)

Leave a Reply

*

code