Author: ಮನೋರಮಾ. ಬಿ.ಎನ್
ಲಕ್ಷಣ : ಹೆಬ್ಬೆರಳನ್ನು ಉಂಗುರ ಬೆರಳಿನೊಡನೆ ಸೇರಿಸಿದರೆ ಮಯೂರ ಹಸ್ತ. ಮಯೂರ ಎಂದರೆ ನವಿಲು ಎಂದರ್ಥ. ಸಾಮಾನ್ಯ ಜೀವನದಲ್ಲಿ ಈ ಹಸ್ತದ ಬಳಕೆ ಅಷ್ಟಾಗಿ ಇಲ್ಲ.
ಯೋಗ ಶಾಸ್ತ್ರದಲ್ಲಿ ಮಯೂರ ಹಸ್ತವು ದಿವ್ಯ ಮುದ್ರೆಯೆಂದು ಕರೆಸಿಕೊಂಡರೆ, ಯೋಗದ ಒಂದು ಭಾಗವಾದ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿರುವ ಮುದ್ರಾ- ಆರೋಗ್ಯ ಶಾಸ್ತ್ರದಲ್ಲಿ ಪೃಥ್ವಿ ಮುದ್ರೆ ಎನ್ನಲಾಗಿದೆ. ಈ ಮುದ್ರೆಯು ಪೃಥ್ವಿ ತತ್ವದ ಸಮತೋಲನಕ್ಕೆ ಸಹಕಾರಿ. ಅಸಾಮಾನ್ಯ ಸಹನಶೀಲತೆ, ಕ್ಷಮಾಶೀಲತೆ, ಹಾಗೂ ಸಮತೋಲನದ ಪ್ರತೀಕ. ಪೃಥ್ವಿ ಮುದ್ರೆಯು ದೈಹಿಕ ದೌರ್ಬಲ್ಯ ವಾರಣೆಗೆ, ಜ್ಞಾನ, ಸಹನೆ, ಕ್ಷಮಾಶೀಲತೆ, ಸ್ಫೂರ್ತಿಗೆ, ದೇಹತೂಕ ಹೆಚ್ಚು ಮಾಡಲು, ಮೈ ಕಾಂತಿ ವೃದ್ಧಿಗೆ ಬಳಸಲ್ಪಡುತ್ತಿದ್ದು, ಸುಮಾರು ೨೦ ಮಿಷಗಳ ವರೆಗೆ ನಮ್ಮ ಸಾಮಾನ್ಯ ಜೀವನದಲ್ಲಿ ಮಾಡುವುದರಿಂದ ಪ್ರಯೋಜನ ಹೊಂದಬಹುದಾಗಿದೆ ಎಂದು ಯೋಗ-ಮುದ್ರಾ ಶಾಸ್ತ್ರ ತಿಳಿಸುತ್ತದೆ.
ಅಭಿನಯ ದರ್ಪಣದ ಪ್ರಕಾರ ವಿನಿಯೋಗ : ನವಿಲಿನ ಮುಖ, ಬಳ್ಳಿ, ಶಕುನದ ಪಕ್ಷಿ, ವಾಂತಿ ಮಾಡುವುದು, ಮುಂಗುರುಳು ತಿದ್ದುವುದು, ಹಣೆಗೆ ತಿಲಕ ಇಡುವುದು, ಕಣ್ಣೀರು ಸುರಿಸುವುದು, ಶಾಸ್ತ್ರದ ಚರ್ಚೆ, ಕೀರ್ತಿ, ಪ್ರಸಿದ್ಧಿ, ಜಡೆಬಿಚ್ಚಿ ಕೂದಲನ್ನು ಬಿಡಿಸುವುದು.
ಇತರೆ ವಿನಿಯೋಗಗಳು: ಹಾರವನ್ನು ಧರಿಸುವುದು, ಅರಿಶಿನ ಹಚ್ಚಿಕೊಳ್ಳುವುದು, ದೇವತಾ ಪ್ರಸಾದವನ್ನು ತಲೆಯಲ್ಲಿ ಧರಿಸುವುದು, ಶಂಖ ಪ್ರೋಕ್ಷಣೆ, ಮಂತ್ರದಿಂದ ಭಸ್ಮದ ಚಿಟಿಕೆ ಹಾಕುವುದು, ಹುಬ್ಬು, ಲತೆಯನ್ನು ತೋರಿಸುವುದು. ಮಯೂರಹಸ್ತವನ್ನು ಮುಂದೆ ಹಿಡಿದಾಗ ಹಿರಿಯಣ್ಣ ಮತ್ತು ಪಾರ್ಶ್ವಮುಖದಲ್ಲಿ ಪಕ್ಕದಲ್ಲಿ ಹಿಡಿದಾಗ ಕಿರಿಯಣ್ಣ ಎಂದು ಸೂಚಿಸುತ್ತದೆ. ಮಯೂರವನ್ನು ಹಗುರವಾಗಿ ಹಿಡಿದಾಗ ಅದು ಶ್ರವಣ ನಕ್ಷತ್ರದ ಸೂಚಕ. ಒಂದಕ್ಕೊಂದು ಬೆಸೆದಾಗ ಅದು ಸಿಂಧೂವರ ವೃಕ್ಷದ ಸೂಚಕ .