Author: ಮನೋರಮಾ. ಬಿ.ಎನ್
ಲಕ್ಷಣ: ಕಿರು ಮತ್ತು ಉಂಗುರ ಬೆರಳನ್ನು ಮಡಿಸಿ, ಉಳಿದೆಲ್ಲಾ ಬೆರಳುಗಳನ್ನು ಜೋಡಿಸಿ ನೇರವಾಗಿ ಚಾಚಿ ಹಿಡಿಯುವುದು.
ವಿನಿಯೋಗ: ಚಿಗುರು ಎಲೆಗಳು, ಹಲಗೆ, ದಡ, ಇಬ್ಬರೆಂದು ಸೂಚಿಸುವುದು, ಗರಗಸ ಕತ್ತಿ, ಧ್ವಜ (ಬಾವುಟ ಲಾಂಛನ), ಶಿಖರ, ಕೋಡುಗಳು, ದೇವಾಲಯದ ಉನ್ನತ ಶಿಖರ, ಎರಡುಯಾಮ, ನಾಸಿಕ, ಉಪನ್ಯಾಸ, ಪೀತವರ್ಣ, ದೀಪ, ಕುಮಾರಸ್ವಾಮಿ, ಶಿವ, ಅಧರ. ನಾಟ್ಯಶಾಸ್ತ್ರ ಮತ್ತು ಹಸ್ತಮುಕ್ತಾವಳಿ ಗ್ರಂಥಗಳಲ್ಲಿ ಈ ಹಸ್ತದ ಪ್ರಸ್ತಾಪವಿಲ್ಲ.
ಸಂಕರ ಹಸ್ತವೆಂಬ ಪ್ರಕಾರದಲ್ಲಿ ಅರ್ಧಪತಾಕ ಹಸ್ತದಿಂದ ಮೊಣಕಾಲನ್ನು ತಾಕಿಸಿದಲ್ಲಿ ಶೂದ್ರವರ್ಣವೆಂಬ ಅರ್ಥ ಬರುತ್ತದೆ. ಪುರೋಭಾಗದಲ್ಲಿ ಈ ಹಸ್ತವನ್ನು ಆಡಿಸಿದರೆ ವರ್ಷಋತುವೆಂಬ ಅರ್ಥ ಬರುತ್ತದೆ.
ನರ್ಮದಾ ನದಿ, ಜಂಬೂ ವೃಕ್ಷ, ರಾಜರಾದ ಮರುತ ಮತ್ತು ಅಜ, ವಾಯುದೇವ, ಕೇತು ಹಸ್ತಗಳ ಸೂಚನೆಗೂ ಅರ್ಧಪತಾಕವನ್ನು ಬಳಸುತ್ತಾರೆ. ಗ್ರೀಷ್ಮಋತು ವನ್ನು ಸೂಚಿಸಲು ಪಾರ್ಶ್ವಗಳಲ್ಲಿ ಅರ್ಧಪತಾಕಗಳನ್ನು ಹಿಡಿದು ಕಂಪಿಸಬೇಕು.
ಎಡಗೈಯನ್ನು ಸೊಂಟದ ಮೇಲಿಟ್ಟು ಬಲಗೈಯಲ್ಲಿ ಅರ್ಧಪತಾಕವನ್ನು ಹಿಡಿಯುವುದು ಪರಶುರಾಮಾವತಾರ ಹಸ್ತವೆನಿಸುತ್ತದೆ. ಮೂಲಾನಕ್ಷತ್ರವನ್ನು ಸೂಚಿಸಲು ಅರ್ಧಪತಾಕ ಹಸ್ತದಿಂದ ತೋರುಬೆರಳು ಮತ್ತು ಮಧ್ಯಬೆರಳ ತುದಿಯನ್ನು ಸ್ವಲ್ಪ ವರ್ತುಲ ಮಾಡಬೇಕು.
ಯಕ್ಷಗಾನದಲ್ಲೂ ಈ ಹಸ್ತ ಪ್ರಚಲಿತದಲ್ಲಿದ್ದು ಪ್ರವೇಶಿಸುವುದು, ಕಣ್ಣು, ಗೆಳೆತನ, ದಾಂಪತ್ಯ, ತುಂಬಿಸುವಿಕೆ ಇತ್ಯಾದಿ ಸಂದರ್ಭಕ್ಕೆ ಬಳಸುತ್ತಾರೆ. ಓಡಿಸ್ಸಿ ನೃತ್ಯ ಪದ್ಧತಿಯಲ್ಲಿ ಅರ್ಧಪತಾಕವನ್ನು ಹೆಬ್ಬೆರಳಿಗೆ ಸೇರಿಸಿ ೨ ಎಂಬ ಅರ್ಥದಲ್ಲಿ ಹಿಡಿದರೆ ಚಂಡ ಅಥವಾ ದಂಡ ಹಸ್ತವೆಂದೂ, ಕಥಕ್ಕಳಿಯಲ್ಲಿ ಶಿಖರವೆಂದೂ ಹೇಳಲಾಗಿದೆ.
ಸಾಮಾನ್ಯಜೀವನದಲ್ಲಿ ಈ ಹಸ್ತದ ಬಳಕೆ ಕಡಿಮೆ.