ಅಂಕಣಗಳು

Subscribe


 

ಪರಕಾಯ ಪ್ರವೇಶ ಈ ಸ್ತ್ರೀವೇಷ…! -6 ಮಂದಿ ಹೆಸರಾಂತ ಯಕ್ಷಗಾನ ಸ್ತ್ರೀ ವೇಷ ಕಲಾವಿದರ ಸಂದರ್ಶನ

Posted On: Tuesday, February 15th, 2011
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಮನೋರಮಾ. ಬಿ.ಎನ್

ಸ್ತ್ರೀ ವೇಷಗಳ ಆಯಾಮ, ದಿಕ್ಕು, ಅವಕಾಶ, ಅನುಕೂಲದ ಸವಿಸ್ತಾರವಾದ ಅನುಭವಗಳನ್ನು ಕಟ್ಟಿಕೊಡುತ್ತಾ ಪ್ರತಿಯೋರ್ವ ಕಲಾವಿದರು ತಮ್ಮದೇ ಆದ ನೋಟಗಳನ್ನು ಚೆಲ್ಲುತ್ತಾ ಈ ಬಾರಿ ನಿಮಗೆ ಯಕ್ಷಗಾನದ ಸ್ತ್ರೀವೇಷಗಳ ಸಮಗ್ರ ದರ್ಶನ ಮಾಡಿಸಲಿದ್ದಾರೆ. ಲೇಖನವೊಂದಕ್ಕೆ ಸೀಮಿತವಾಗಬಹುದಾಗಿದ್ದ ವಿಷಯವನ್ನು ಪ್ರಧಾನವಾಗಿಸಿ ಕಲಾವಿದರ ಸಂದರ್ಶನದಲ್ಲಿ ಹಿಗ್ಗಿಸಿ, ವೈವಿಧ್ಯಮಯ ಮತ್ತು ಪೂರಕವಾದ ಅಭಿಪ್ರಾಯಗಳನ್ನು ದಾಖಲಿಸುವುದರೊಂದಿಗೆ ತಿಟ್ಟುಗಳ ಹೊಂದಾಣಿಕೆಯಲ್ಲ್ಲಿ ಮತ್ತು ಪರಂಪರೆ- ಪ್ರಯೋಗಗಳೆರಡರ ನೆಲೆಯಲ್ಲಿ ಪಾರಮ್ಯ ಮತ್ತು ಸಮನ್ವಯ ಸಾಧಿಸಲು ಸ್ತ್ರೀಪಾತ್ರಧಾರಿಗಳಾಗಿ ದುಡಿದ, ದುಡಿಯುತ್ತಿರುವ ಅನುಭವಿ ಜನಪ್ರಿಯ ಕಲಾವಿದರ ಪೈಕಿ ಕೆಲವರನ್ನು ಆರಿಸಿಕೊಂಡು ಅವರ ಮಾತಿನ ಮುಕುರವನ್ನು ಇಲ್ಲಿ ನಿಮ್ಮೆದುರಿಗೆ ತೆರೆದಿಡಲಾಗಿದೆ. ಈ ಮೂಲಕ ಒಳಿತು-ಕೆಡುಕು-ಭವಿಷ್ಯ-ಸಾಧ್ಯತೆಗಳ ಕುರಿತಂತೆ ಚಿಂತನ-ಮಂಥನ-ಚರ್ಚೆಗಳು, ಅಭಿಪ್ರಾಯಗಳಿಗೆ ಮುಕ್ತ ಅವಕಾಶ ಇದೆ.

ಅನುಸರಣೆ ಸರಿ; ಅನುಕರಣೆ ಸಲ್ಲದು : ಪಾತಾಳ ವೆಂಕಟ್ರಮಣ ಭಟ್

೧೯೫೦ರ ನಂತರದ ೩ ದಶಕಗಳಲ್ಲಿ ಸ್ತ್ರೀವೇಷದಲ್ಲಿ ಸೈ ಎನಿಸಿಕೊಂಡ ಹಿರಿಯ ಕಲಾವಿದ ಪಾತಾಳ ವೆಂಕಟ್ರಮಣ ಭಟ್. ಸ್ತ್ರೀವೇಷಕ್ಕೆ ನಿರ್ದಿಷ್ಟ ವೇಷಭೂಷಣ ಪರಿಕಲ್ಪನೆ ಇಲ್ಲದಿದ್ದ ಕಾಲಕ್ಕೆ ಅಂತಃಪುರ ಗೀತೆಗಳನ್ನು ಗಮನಿಸಿ, ಶಿಲ್ಪಕಲೆಯಿಂದ ಪ್ರೇರಣೆ ಪಡೆದು ವೇಷಭೂಷಣ ಮಾಡಿದವರು. ಬೇಲೂರು-ಹಳೇಬೀಡಿಗೆ ಹೋಗಿ ಅಧ್ಯಯನ ನಡೆಸಿ ವಿವಿಧ ಬಗೆಯ ಆಭರಣ, ವಸ್ತ್ರ ವಿನ್ಯಾಸದ ಪ್ರಯೋಗ ನಡೆಸಿದವರು. ಭಂಗಿಗಳ ಅಧ್ಯಯನಕ್ಕಾಗಿ ಭರತನಾಟ್ಯವನ್ನು ಕಲಿತು ಯಕ್ಷಗಾನೀಯವಾಗಿ ಹೊಂದಿಸಿಕೊಂಡವರು.

ಮೊದಲು ಬಡಗು ತಿಟ್ಟಿನ ವೇಷಧಾರಿಯಾಗಿ ರಂಗಕ್ಕೆ ಕಾಲಿಟ್ಟು; ೧೯೫೬ರ ನಂತರ ತೆಂಕುತಿಟ್ಟಿನ ಅಗ್ರಮಾನ್ಯ ಸ್ತ್ರೀ ವೇಷಧಾರಿಯಾಗಿ ಮೆರೆದ ಪಾತಾಳರ ಹೆಸರಿನಲ್ಲಿ ಈಗಾಗಲೇ ಪ್ರಶಸ್ತಿಯೊಂದನ್ನು ಅನುಭವಿ ಕಲಾವಿದರಿಗೆ ನೀಡುತ್ತಾ ಬರಲಾಗುತ್ತಿದೆ. ಹಲವು ಖ್ಯಾತಿವೆತ್ತ ಸನ್ಮಾನಗಳು, ಬಿರುದು, ಪ್ರಶಸ್ತಿಗಳು ಅವರ ಮನೆಯ ಗೋಡೆಯ ಹೊದಿಕೆಯನ್ನೆಲ್ಲಾ ಅಲಂಕರಿಸಿವೆಯೆಂದರೆ ನೀವೇ ಊಹಿಸಿ. ಯಕ್ಷಗಾನದ ಘಟಾನುಘಟಿಗಳ ಒಡನಾಟ, ಗೆಳೆತನದ ಸವಿಯೂಟ, ಹಲವು ಯಕ್ಷಗಾನ ಮೇಳಗಳೊಂದಿಗೆ ತಿರುಗಾಟದ ಅನುಭವ ಹೊಂದಿರುವ ಭಟ್ಟರು ತಮ್ಮ ಇಳಿವಯಸ್ಸಿನ ಹಾದಿಯಲ್ಲೂ ಹಲವು ಉಪನ್ಯಾಸ, ಪ್ರಾತ್ಯಕ್ಷಿಕೆ, ಶಿಕ್ಷಣ ಸಂಬಂಧೀ ಕಾರ್ಯಕ್ರಮಗಳಲ್ಲಿ ಕಾರ್ಯೋನ್ಮುಖರು. ಆಳವಾದ ಅಧ್ಯಯನ, ಸಮೃದ್ಧ, ಸರಳ ಕಲಾಜೀವನದ ಪ್ರತಿರೂಪವೆಂಬಂತೆ ಪಾತಾಳರ ಆತ್ಮಚರಿತ್ರೆ ಬಿಡುಗಡೆಯಾಗಿದೆ. ಪ್ರಸ್ತುತ ದಕ್ಷಿಣಕನ್ನಡದ ಉಪ್ಪಿನಂಗಡಿ ಬಳಿಯ ಪಾತಾಳ ಮನೆಯಲ್ಲಿ ನೆಲೆಸಿದ್ದಾರೆ ವೆಂಕಟ್ರಮಣ ಭಟ್ಟರು. ಇವರ ಮುಂದಿನ ತಲೆಮಾರಿನ ನೇತಾರನಾಗಿ ಅವರ ಮಗ ಅಂಬಾಪ್ರಸಾದ್ ಯಶಸ್ವಿ ಸ್ತ್ರೀವೇಷಧಾರಿಯೆನಿಸಿದ್ದಾರೆ.

ಪಾತಾಳ ವೆಂಕಟ್ರಮಣ ಭಟ್

  • ಸ್ತ್ರೀ ಪಾತ್ರಕ್ಕೆ ನಿರ್ದಿಷ್ಟ ಪರಿಕಲ್ಪನೆಯಿಲ್ಲ; ಅದನ್ನು ಕಡೆಗಣಿಸಲಾಗಿದೆ ಎಂಬ ಮಾತನ್ನು ಒಪ್ಪುತ್ತೀರಾ?

ಪುರುಷ ಪಾತ್ರಕ್ಕೆ ಸಂವಾದಿಯಾಗಿ ಸ್ತ್ರೀಪಾತ್ರಗಳ ನಿರೂಪಣೆ ಮೊದಲಿನಿಂದಲೂ ತೀರಾ ವಿರಳ. ಯಕ್ಷಗಾನದ ಜನಕನೆನಿಸಿಕೊಂಡ ಪಾರ್ತಿಸುಬ್ಬನೂ ಸ್ತ್ರೀಪಾತ್ರದ ಬಗ್ಗೆ ಹೇಳಿದವನಲ್ಲ. ೮೦ ವರ್ಷದ ಹಿಂದೆ ಹಿಂದೂ ಸಂಪ್ರದಾಯದ ಹೆಣ್ಣುಮಕ್ಕಳು ಯಾವ ಬಗೆಯಲ್ಲಿ ಸೀರೆ ಉಟ್ಟು, ಅಲಂಕರಿಸಿಕೊಳ್ಳುತ್ತಿದ್ದರೋ ಅಂತೆಯೇ ವೇಷ ಮಾಡಬಹುದು ಎನ್ನಲಾಗಿತ್ತು.

ಅಷ್ಟೇ ಏಕೆ, ಯಕ್ಷಗಾನಕ್ಕೆ ಸ್ತ್ರೀವೇಷದ ಪರಿಕಲ್ಪನೆ ಇಲ್ಲ ಎಂದೇ ಕಾರಂತರು ಹೇಳಿದ್ದಾರೆ. ಯಾಕೆಂದರೆ ಅಂದಿನ ಕಾಲಕ್ಕೆ ವೇಷಭೂಷಣಕ್ಕೆಂದು ಪೆಟ್ಟಿಗೆ ಅನ್ನುವ ಪದ್ಧತಿಯೇ ಸ್ತ್ರೀ ವೇಷದವರಿಗೆ ಇರಲಿಲ್ಲ. ಸ್ತ್ರೀವೇಷ ಮಾಡುವವರು ಕೇವಲ ಸಾಮಾನ್ಯ ಸ್ತ್ರೀಯರ ಹಾಗೆ ಸೀರೆ ಉಟ್ಟುಕೊಂಡು ಬರುವವರು. ಚಂದ್ರಮತಿ, ದಮಯಂತಿ, ಸೀತೆ ಮುಂತಾದ ಗರತಿ ಪಾತ್ರಗಳಾದರೆ ಮರಾಠೀ ಕಚ್ಚೆ ಹಾಕಿ ಉಡುತ್ತಿದ್ದರು. ಪುರುಷವೇಷಕ್ಕಿರುವ ನಾಟ್ಯವೇ ಲಾಸ್ಯದ ಬಳಕೆಯಲ್ಲಿ ತುಸು ಹೆಚ್ಚಿದ್ದು ಸ್ತ್ರೀವೇಷಕ್ಕೆ ಅನ್ವಯವಾಗುತ್ತಿತ್ತು. ಸೂಕ್ತ ಅಂಗಭಂಗಿಗಳಿರಲಿಲ್ಲ. ಬೊಂಬೆಯಂತೆ ಕುಣಿಯುವುದೇ ಅಂದಿಗೆ ರೂಢಿ. ಆದರೆ ಕಾರಂತರ ಬಳಿಯಲ್ಲಿ ಕಲಾವಿದರು ಪ್ರಶ್ನಿಸಿ ಕೊನೆಗೆ ಅವರ ಸಲಹೆಯಂತೆ ಕೇದಿಗೆ ಮುಂದಲೆ ಕಟ್ಟುವುದಕ್ಕೆ ಪ್ರಾರಂಭಿಸಿದರು.

೧೯೬೦ರ ದಶಕದ ಕಾಲದಲ್ಲಿ ಸ್ತ್ರೀ ವೇಷ ಮಾಡುವವರ ಪೈಕಿ ಹೆಚ್ಚಿನವರಿಗೆ ಲಂಗ ಧರಿಸುವುದೇ ಚಾಲ್ತಿ. ನಾನೂ ಲಂಗಧರಿಸಿ ಪಾತ್ರ ಮಾಡಿದ್ದೇನಾದರೂ ರಂಗಕ್ಕೆ ಅಂತಹ ವೇಷಗಳು ಹೊಂದುವುದಿಲ್ಲವಾದ್ದರಿಂದ ಲಂಗದ ಬಳಕೆಯ ಕುರಿತು ನನಗೆ ಸಮ್ಮತಿ ಇಲ್ಲ. ಸ್ತ್ರೀಪಾತ್ರ ಮಾಡುವರು ಕಚ್ಚೆ ಹಾಕಿಯೇ ಅಭಿನಯಿಸಬೇಕು ಎನ್ನುವುದು ನನ್ನ ಅಭಿಮತ.

ಮೊದಲು ನಾನು ಘಟವಾಣಿಯಾದ ಪಾತ್ರವೊಂದಕ್ಕೆ ವಸ್ತ್ರವಿನ್ಯಾಸ ಮಾಡಿದೆ. ಅದು ಎಲ್ಲಾ ವೇಷಗಳಿಗೂ ಸೂಕ್ತವಾಗಿರಲಿಲ್ಲ. ಶಿಲ್ಪಗಳ ಅಧ್ಯಯನದಿಂದ ಕಿರೀಟದ ಬಳಕೆ ತಂದೆ. ಆದರೆ ಅದು ತಲೆಗೆ ತೀರಾ ದೊಡ್ಡದೆನ್ನಿಸಿ ಸಭಿಕರ ಮುಂದೆ ಆಭಾಸವಾಗಬಹುದೆಂದು ಕಂಡಿತು. ಕೊನೆಗೆ ದೇವರ ಕಿರೀಟಗಳಲ್ಲಿ ಕಾಣುವ ಹಿಂದಿನ ದಿವ್ಯ ಪ್ರಭಾವಳಿಯನ್ನಷ್ಟೇ ಉಳಿಸಿಕೊಂಡು ಸ್ತ್ರೀಪಾತ್ರಕ್ಕೆ ಕಿರೀಟವನ್ನಾಗಿಸಿದೆ.

ಯಾವುದೇ ಆಗಲಿ ಸೃಷ್ಟಿ ಎಂದರೆ ಅದಕ್ಕೆ ಮುಂದೆ ಪ್ರಶ್ನೆ ಇರದಂತೆ ಸದೃಢವಾಗಿರಬೇಕು. ಆದರೆ ಇಂದಿಗೆ ಪರಂಪರೆಯ ವೇಷ ಎಂದು ಹೇಳಿಕೊಳ್ಳುವುದರಲ್ಲಿ ನನಗೆ ಯಾವ ಅರ್ಥವೂ ಕಾಣುವುದಿಲ್ಲ. ಕಾರಣ ಚಿಂತಕರ ಶ್ರಮ, ಬುದ್ಧಿವಂತಿಕೆಯಿಂದ ವೇಷಭೂಷಣದ ಪರಿಕ್ರಮ ಬಂದಿತು.

· ಸ್ತ್ರೀವೇಷಧಾರಿಗಳು ಇತ್ತೀಚೆಗೆ ತಮ್ಮ ತಿಟ್ಟುಗಳ ನೃತ್ಯಶೈಲಿಯನ್ನು ಬದಲಾಯಿಸಿಕೊಳ್ಳುತ್ತಾ ಸಾಗಿರುವ ಹಿನ್ನಲೆಯಲ್ಲಿ ಯಾವ ಬಗೆಯ ನೃತ್ಯಶೈಲಿ ಯಕ್ಷಗಾನದ ಸ್ತ್ರೀಪಾತ್ರಕ್ಕೆ ಸೂಕ್ತ?

ನನಗೆ ಎರಡೂ ತಿಟ್ಟುಗಳ ಶೈಲಿ ಕರಗತವಾಗಿದೆ. ಆದರೆ ಯಾವತ್ತೂ ಇವೆರಡರ ಬೆರಕೆಪಾಕ ಮಾಡಲು ಹೋಗಲಿಲ್ಲ. ಮಾಡಬಾರದು ಕೂಡಾ. ಎರಡೂ ಪದ್ಧತಿಗಳ ಮಿಶ್ರಣ ಮಾಡಿದರೆ ಮೂಲಪಾಠಕ್ಕೆ ಕುಂದಾಗುತ್ತದೆ. ಅದರಲ್ಲೂ ತೆಂಕುತಿಟ್ಟಿನ ಕಲಾವಿದರಿಗೆ ಕೀಳರಿಮೆ ಭಾವ ಜಾಸ್ತಿ. ಅವರವರ ತಿಟ್ಟುಗಳಲ್ಲೇ ಬೇಕಾದ ಸೌಕರ್ಯ, ಸೌಂದರ್ಯ ಇರುವಾಗ ಇನ್ನೊಬ್ಬರ ಆಶ್ರಯ ಯಾಕೆ? ನಮ್ಮಲ್ಲಿ ಏನೂ ಇಲ್ಲವೆಂದು ಮೂದಲಿಸಿಕೊಳ್ಳಲೋ?

ಭಾಗವತರು ಪದ್ಯಗಳನ್ನು ವಿಳಂಬಗತಿಯಲ್ಲಿ ಹಾಡಿದರೆ, ಮದ್ದಳೆಗೂ ಹೆಚ್ಚಿನ ಅವಕಾಶ ಕೊಟ್ಟರೆ ತೆಂಕಿನಲ್ಲೂ ಅಭಿನಯ ಮಾಡಲು ಅವಕಾಶವಿದೆ. ಭಾಗವತರು ಪದ್ಯವನ್ನು ಎಳೆದಷ್ಟೂ ಮಿಶ್ರಮಾಡಿ ಕುಣಿಯುವವರೇ ಹೆಚ್ಚು. ನಮ್ಮದನ್ನು ಕಡೆಗಣಿಸಿ ಪರಚಿಂತನೆ, ವ್ಯಾಮೋಹ ಯಾಕೆ? ನಮ್ಮ ನಮ್ಮಲ್ಲಿ ನಂಬಿಕೆ ಬೇಕು. ಆಗ ಬೇರಾರದ್ದೂ ಎರವಲು ಬೇಕಾಗುವುದಿಲ್ಲ. ಸಂಶೋಧನೆ ಮಾಡಿ ಉಪಯೋಗಿಸಿದರೆ ಆಯಾಯ ಶೈಲಿಗಳಲ್ಲೇ ಬೇಕಾದಷ್ಟು ನಾಟ್ಯಸಂಗ್ರಹವಿದೆ.

· ಸ್ತ್ರೀ ಪಾತ್ರಕ್ಕೆ ಮಹಿಳೆಯರು ಜೀವ ತುಂಬಬಹುದಲ್ಲವೇ?

ಸ್ತ್ರೀವೇಷಕ್ಕೆ ರೂಪ, ಭಾಷೆ ಎರಡೂ ಮುಖ್ಯವಾದದ್ದು. ಆಗಲೇ ಯಕ್ಷಗಾನದಲ್ಲಿ ಮೇಲೇರಲು ಸಾಧ್ಯ. ಅಂತಹ ರೂಪ ಸ್ತ್ರೀಯರಿಗೆ ಇದ್ದರೂ ಅವರು ಯಕ್ಷಗಾನದಲ್ಲಿ ಸ್ತ್ರೀಪಾತ್ರವೆಂದು ಅಭಿನಯಿಸುವುದು ಅಷ್ಟು ಉಚಿತವಲ್ಲ. ಕಾರಣ, ಬಹುತೇಕ ಗಂಡಸರೇ ತುಂಬಿಕೊಂಡಿರುವ ಪ್ರದರ್ಶನಗಳಲ್ಲಿ ಅವರಿಗೆ ಬದುಕು, ನಿರ್ವಹಣೆ, ಓಡಾಟ, ಆಹಾರ ಕ್ರಮ, ಅಪರಾತ್ರಿಯ ಪ್ರಸಂಗಗಳು ಕಷ್ಟಕರವಾಗಿ ಪರಿಣಮಿಸುತ್ತವೆ. ಇತ್ತೀಚೆಗೆ ಸ್ತ್ರೀಯರದ್ದೇ ಆದ ಮೇಳ, ತಂಡಗಳಿದ್ದರೂ ಅವರಿಗೆ ಯಕ್ಷಗಾನದಲ್ಲಿ ಗಂಡಸರು ಮೇಲೇರಿದಂತೆ ಏರುವುದೂ, ಶ್ರಮ ಹಾಕುವುದು ಅಷ್ಟು ಸುಲಭವಾಗಿಲ್ಲ.

· ಸ್ತ್ರೀ ಪಾತ್ರ ನಿರ್ವಹಿಸುವವರ ಕರ್ತವ್ಯಗಳೇನು?

ಧರ್ಮೋದ್ಧಾರ, ಆತ್ಮೋನ್ನತಿಗಾಗಿ ಯಕ್ಷಗಾನ ಇರುವುದು. ಎದುರಿನಿಂದ ಮನರಂಜನೆ ಎಂದು ಕಂಡರೂ, ಅದರೊಳಗೆ ಧಾರ್ಮಿಕ ಮೌಲ್ಯಗಳು ಸಂಪದ್ಭರಿತವಾಗಿವೆ. ಅದನ್ನು ಅಭಿನಯದಲ್ಲಿ ಕಲಾವಿದನಾದವನು ಆಕರ್ಷಿಸಿ ತಿಳಿಸಬೇಕು. ಪಾತ್ರಗಳು ಜಾಗೃತಿ, ಪ್ರಜ್ಞೆ, ಒಳಿತು ಕೆಡುಕುಗಳನ್ನು ನಿರೂಪಿಸಬೇಕು.

ಹಾಗಾಗಿ ಯಾವುದೇ ಕಲ್ಪನೆಯು ಅಸಹ್ಯವಾಗಿರಬಾರದು. ಸಭೆಯಲ್ಲಿ ಸ್ತ್ರೀವೇಷ ಮಾಡುವವರು ಪುರುಷಪಾತ್ರದ ಜೊತೆಗೆ ಅಪ್ಪುಗೆ, ಮುತ್ತು ಕೊಡುವ ಸನ್ನಿವೇಶಗಳಲ್ಲಿ ಅಭಿನಯಿಸಬಾರದು. ಅದು ಸಭೆಗೆ ಕೆಟ್ಟ ಪರಿಣಾಮ; ಮಾತ್ರವಲ್ಲ ಸಭೆಯಲ್ಲಿರುವ ಹೆಣ್ಣುಮಕ್ಕಳ ಅವರ ಭಾವನೆಗೆ ಘಾಸಿಯನ್ನುಂಟುಮಾಡುತ್ತದೆ.

· ಕಲಾವಿದರಿಗೆ ನಿಮ್ಮ ಕಿವಿಮಾತೇನು?

ಕಲಾವಿದ ಮಾತ್ರವಲ್ಲ ಎಲ್ಲರಿಗೂ ಈ ಮಾತು ಅನ್ವಯ. ಅದರಲ್ಲೂ ಕಲಾವಿದನಿಗಂತೂ ದುಶ್ಚಟಗಳಿರಬಾರದು, ಅಧ್ಯಯನಶೀಲನಾಗಿರಬೇಕು, ಎಲ್ಲಾ ಪುರಾಣ, ಸಾಮಾಜಿಕ ಸಾಹಿತ್ಯದ ಅಭ್ಯಾಸ ಬೇಕು. ನಿತ್ಯ‌ಅಭ್ಯಾಸಿಯಾಗಿರಬೇಕು, ಕಲಿಕೆಯ ಮನಸ್ಸು ನಿರಂತರವಾಗಿರಬೇಕು, ತನ್ನಲ್ಲಿನ ಕಲೆಯನ್ನು ಬೆಳೆಸುವಲ್ಲಿ ಏನು ಉಪಯೋಗವೋ ಅದನ್ನೆಲ್ಲವನ್ನೂ ಅಳವಡಿಸಿಕೊಳ್ಳುವ ಮನಸ್ಸು ಬೇಕು. ಆದರೆ ಅನುಕರಣೆಯಾಗಿ ಅಲ್ಲ; ಸ್ವಂತಿಕೆಗೆ ಸರಿಯಾದ ಅನುಸರಣೆಯಾಗಿ.

ಪೂರ್ವಾರ್ಜಿತ ಇದ್ದರೆ ಮಾತ್ರ ಕಲಾವಿದನಾಗಬಲ್ಲ. ಪಾತ್ರದ ಔಚಿತ್ಯ ನೋಡಿ ಅಭಿನಯಿಸಬೇಕು. ಪಾತ್ರಸ್ವಭಾವಕ್ಕೆ ಅನುಕೂಲವಾಗಿ ಭಾಷೆ ಬಳಸಬೇಕು. ವ್ಯಕ್ತಿಯು ರಂಗದಲ್ಲಿ ಪಾತ್ರವಾಗಬೇಕು. ಮನಸ್ಸು, ಹೃದಯ ಲೀನವಾಗಬೇಕು. ಕೇಳುವ ಪದ್ಯಗಳಿಗೆ ಅಭಿನಯ ಲಯವಾಗಬೇಕು. ವ್ಯಕ್ತಿ ವ್ಯಕ್ತಿಯಾಗಿ ಉಳಿದರೆ ಅದರಿಂದ ಏನೂ ಪ್ರಯೋಜನವಿಲ್ಲ.

—-

ಊಟದಲ್ಲಿನ ಪಾಯಸಕ್ಕೂ, ಯಕ್ಷಗಾನದ ಸ್ತ್ರೀವೇಷಕ್ಕೂ ಬಹಳ ಸಾಮ್ಯ:

ಕೋಳ್ಯೂರು ರಾಮಚಂದ್ರ ರಾವ್


ಮೇಳದ ತಿರುಗಾಟದಿಂದ ನಿವೃತ್ತಿಗೊಂಡರೂ, ತಮ್ಮ ಇಳಿವಯಸ್ಸಿನಲ್ಲೂ ಹವ್ಯಾಸಿಯಾಗಿ ಬಹುಬೇಡಿಕೆಯಲ್ಲಿರುವ ಭಾವಪ್ರಕಾಶಕ್ಕೆ ಪ್ರಸಿದ್ಧಿಯಾದ ಕಲಾವಿದ. ೬೦ ವರ್ಷಗಳ ಕಾಲ ಸಮೃದ್ಧ ಮೇಳ ತಿರುಗಾಟದ ಅನುಭವ, ಯಕ್ಷಗಾನದ ದಿಗ್ಗಜರೊಂದಿಗೆ ಒಡನಾಟ, ಕಿರಿಯರಿಗೆ ಬೋಧನೆ, ನೂರಾರು ಪ್ರಶಸ್ತಿ-ಸನ್ಮಾನಗಳು, ಬಿರುದುಬಾವಲಿಗಳು ಇವರ ಕೀರ್ತಿ ಶಿಖರದ ಕೈಗನ್ನಡಿ. ಇತ್ತೀಚೆಗಿನ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್‌ಗೆ ಭಾಜನರಾದ ಕೋಳ್ಯೂರು ರಾಮಚಂದ್ರ ರಾವ್ ಸ್ತ್ರೀವೇಷಗಳಿಗೆ ಮತ್ತೊಂದು ಹೆಸರೆಂದರೆ ತಪ್ಪಲ್ಲ. ಅವರ ಸಮರ್ಥ ರೂವಾರಿಯಾಗಿ ಮಗಳು ವಿದ್ಯಾ ಕೋಳ್ಯೂರು ಗಂಡುಕಲೆಯೆಂದೇ ಹೆಸರಾದ ಯಕ್ಷಗಾನ ರಂಗದಲ್ಲಿ ಪುರುಷ ಕಲಾವಿದರಿಗಿಂತಲೂ ಒಂದು ಪಟ್ಟು ಮೇಲೆಂಬಂತೆ ಮಿಂಚುತ್ತಿದ್ದು ; ನಾಯಕತ್ವ, ನಿರ್ದೇಶನ, ಪ್ರಾಯೋಜಕತ್ವ ಇತ್ಯಾದಿಯಾಗಿ ಕರ್ನಾಟಕದಲ್ಲಷ್ಟೇ ಅಲ್ಲದೆ ಹೊರನಾಡಿನಲ್ಲೂ ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಯಕ್ಷಗಾನದ ಪ್ರದರ್ಶನಗಳನ್ನು ಆಯೋಜಿಸಿ, ಪ್ರಯೋಗಸಾಧ್ಯತೆಗಳನ್ನು ಹೊರಚೆಲ್ಲಿದವರು.

ಕೋಳ್ಯೂರ್ ರಾಮಚಂದ್ರ ರಾವ್

· ಸ್ತ್ರೀವೇಷದ ಕಲಾವಿದರು ರೂಢಿಸಿಕೊಳ್ಳಬೇಕಾದದ್ದೇನು?

ಯಕ್ಷಗಾನದಲ್ಲಿ ವಾಚಿಕಕ್ಕೆ ಅರ್ಥ ಹೇಳುವುದು ಎನ್ನುವ ಪ್ರತ್ಯೇಕ ಶಬ್ದವಿದೆ. ಅದು ಭಾಷಣ ಮಾಡಿದಂತೆಯೋ, ವರದಿ ವಾಚನದಂತೆಯೋ ಅಲ್ಲ. ಪಾತ್ರವಾಗಿ ಮಾತನಾಡುವುದರಿಂದ ಭಾವನಾತ್ಮಕವಾಗಿ ಮಾತಾಡಬೇಕು. ಅದರಲ್ಲೂ ಸ್ತ್ರೀ ಪಾತ್ರಕ್ಕೆ ಹೆಚ್ಚು ಭಾವನೆ, ತಲ್ಲೀನತೆ, ತನ್ಮಯತೆ ಬೇಕು. ಪಾತ್ರವೇ ತಾನಾಗಬೇಕು, ನವರಸಗಳನ್ನು ಅನುಭವಿಸಬೇಕು.

ಹಾಗೆಂದು ಪುರುಷ ಪಾತ್ರಕ್ಕೆ ನವರಸಗಳೆಲ್ಲವೂ ಎಲ್ಲಾ ಸಮಯಕ್ಕೆ ಒದಗಿ ಬರುವುದಿಲ್ಲ. ಪಾತ್ರದ ಸ್ವಭಾವ, ಔಚಿತ್ಯದ ಮೇಲೆ ನವರಸದ ಲೇಪ ಇರುತ್ತದೆ. ಆದರೆ ಸ್ತ್ರೀ ವೇಷ ಹಾಗಲ್ಲ. ಒಂದೇ ಪಾತ್ರದೊಳಗೆ ಐದಾರು ರಸದ ಅಭಿವ್ಯಕ್ತಿ ನಿಶ್ಚಿತ. ಉದಾ : ದಕ್ಷ ಯಜ್ಞದ ದಾಕ್ಷಾಯಿಣಿ, ದ್ರೌಪದಿ, ದಮಯಂತಿ. ಅದರಲ್ಲೂ ಪಾತ್ರಗಳು ಔಚಿತ್ಯ ಮೀರಿ ಅಭಿನಯಿಸಬಾರದು. ಅಭಿನಯದ ಮಟ್ಟ ಕಡಿಮೆಯಾದರೆ ತಿದ್ದಿಕೊಳ್ಳಬಹುದು. ಅದೇ ಹೆಚ್ಚಾದರೆ ಹೇಸಿಗೆ ಹುಟ್ಟಿಸುತ್ತದೆ.

ಹಾಗಾಗಿ ನವರಸಗಳನ್ನಾಧರಿಸಿ ಪರಿಣಾಮಕಾರಿಯಾಗಿ ಅಭಿನಯ ಮಾಡುವವನು ನಿಜವಾದ ಕಲಾವಿದ. ಅದಕ್ಕೆ ಚಿಂತನ-ಮಂಥನ, ಅಧ್ಯಯನ ಬೇಕು. ಮಹಾಭಾರತ, ರಾಮಾಯಣ, ಭಾಗವತ, ಮಹಾಕಾವ್ಯಗಳಾದಿಯಾಗಿ ಹಿನ್ನಲೆಯ ಗ್ರಂಥಗಳನ್ನು ಓದಬೇಕು.

· ಸ್ತ್ರೀವೇಷವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಊಟಕ್ಕೂ, ಯಕ್ಷಗಾನದ ಆಟಕ್ಕೂ ಬಹಳ ಸಾಮ್ಯ ಇದೆ. ಷಡ್ರಸೋಪೇತ ಊಟದಲ್ಲಿ ಪಾಯಸ, ಸಿಹಿಯುಣಿಸು ಬರುವುದು ಸಾರು, ಪಲ್ಯ, ಚಟ್ನಿ, ಸಾಂಬಾರು, ಮಜ್ಜಿಗೆ ಹುಳಿ ಮುಂತಾದ ಕ್ಷಾರಯುಕ್ತ ಪದಾರ್ಥದ ನಂತರ. ಅಂತೆಯೇ ಒಳ್ಳೆಯ ಯಕ್ಷಗಾನ ಪ್ರಸಂಗದ ಪ್ರಧಾನ ಗರ್ಭದಲ್ಲಿ ಸ್ತ್ರೀಪಾತ್ರವಿರುತ್ತದೆ.

· ವಯಸ್ಸಾದ ಬಳಿಕವೂ ನಿಮ್ಮ ಸ್ತ್ರೀಪಾತ್ರಕ್ಕೆ ಇರುವ ಬೇಡಿಕೆಯ ಹಿಂದಿನ ಗುಟ್ಟೇನು?

ವಯಸ್ಸಾದ ನಂತರವೂ ಸ್ತ್ರೀವೇಷದವರು ಚಾಲ್ತಿಯಲ್ಲಿರಬೇಕು ಎಂದರೆ ಸಾಧನೆ, ಭಾವನಾತ್ಮಕ ಅಭಿನಯ, ಬೇಕು. ನಾನು ಇಂದಿಗೂ ಬೇಡಿಕೆಯಲ್ಲಿರಲು ಬಹುಷಃ ನನ್ನ ಸ್ವರ, ಗಿಡ್ಡ ದೇಹ ಮತ್ತು ಅಭಿನಯದ ಅನುಭವ ಪ್ರಧಾನ ಕಾರಣ.

· ಯಕ್ಷಗಾನಕ್ಕೆ ಇಂದಿನ ಕಾಲಕ್ಕೆ ಯಾವುದು ಔಚಿತ್ಯ? ಯಾವುದು ಅನೌಚಿತ್ಯ?

ಯಕ್ಷಗಾನ ಎಲ್ಲಾ ಕಲೆಗಳ ಅಂಶ ಬೆರೆತ ಸ್ವತಂತ್ರ ಕಲೆ. ಇಂದಿನವರು ಯಕ್ಷಗಾನವನ್ನು ಸರಿಯಾಗಿ ಕಂಡಿಲ್ಲ; ಪೌರಾಣಿಕ ಪಾತ್ರದ ಕುರಿತು ಚಿಂತನೆ ಮಾಡುವುದಿಲ್ಲ ; ಹಿರಿಯರ ಮಾರ್ಗದರ್ಶನದಲ್ಲಿ, ಒಡನಾಟದಲ್ಲಿ ಬೆಳೆಯುವುದಿಲ್ಲ; ಯಕ್ಷಗಾನಕ್ಕೆ ಶಾಸ್ತ್ರಗ್ರಂಥ ಇಲ್ಲವಾದ ಕಾರಣ ಅವರವರ ಸೃಷ್ಟಿಶೀಲತೆಯೇ ಬಂಡವಾಳ ಎಂಬ ವಿತಂಡವಾದ ಮಾಡುತ್ತಾರೆ. ಹಾಗಾಗಿ ಸಿನಿಮಾ ನಾಟಕಗಳ ಅನುಕರಣೆ-ವೇಷಭೂಷಣ, ಕುಣಿತ ಯಕ್ಷಗಾನವನ್ನು ತುಂಬಿಕೊಳ್ಳುತ್ತಲಿದೆ. ಪೌರಾಣಿಕ ಪಾತ್ರದ ಚೆಲುವು ಕೆಡುತ್ತಿದೆ.

ಯಕ್ಷಗಾನವನ್ನು ನೋಡಿ ಅನುಕರಣೆ ಮಾಡುವವರೆಷ್ಟೋ ಮಂದಿ ; ಹಾಗೆಂದು ನಾವು ಅನುಕರಣೆ ಮಾಡುವುದು ಎಷ್ಟು ಸರಿ? ವಿಪರ್ಯಾಸವೆಂದರೆ ಅನುಕರಣೆ ಮಾಡಿದರೂ ಕ್ಷಣಮಾತ್ರದಲ್ಲಿ ಅದು ಗೊತ್ತಾಗುತ್ತದೆ.

· ನಿಮ್ಮ ಸ್ತ್ರೀಪಾತ್ರಗಳು ಎಷ್ಟೋ ಬಾರಿ ನೀವು ಸ್ತ್ರೀ ಎಂಬ ಭ್ರಮೆಯನ್ನೇ ಹುಟ್ಟಿಸಿದೆಯೆಂಬುದು ದಂತಕತೆಗಳ ಪೈಕಿ ಖ್ಯಾತಿ. ಕೆಲವೊಂದನ್ನು ಹಂಚಿಕೊಳ್ಳುವಿರಾ?

ಅಂತಹ ಉದಾಹರಣೆಗಳು ಬಹಳಷ್ಟಿವೆ. ಎರಡು ಘಟನೆಗಳನ್ನು ಉಲ್ಲೇಖಿಸುತ್ತೇನೆ. ನನ್ನ ಯೌವನದ ಕಾಲವದು. ಧರ್ಮಸ್ಥಳ ಮೇಳದಲ್ಲಿದ್ದೆ. ಶಿವಮೊಗ್ಗದಲ್ಲಿ ಒಮ್ಮೆ ಬಯಲಾಟ. ಆಗೆಲ್ಲಾ ಅಲ್ಲಿ ಸರಿಯಾಗಿ ಯಕ್ಷಗಾನದ ಪ್ರವಾಹ ಇದ್ದಿರಲಿಲ್ಲ. ಪ್ರಸಂಗದಲ್ಲಿ ನನ್ನ ಪಾತ್ರವಾದ ಬಳಿಕ ಶೌಚಾಲಯಕ್ಕೆ ತೆರಳಿದೆ. ಈರ್ವರು ಮಹಿಳೆಯರು ಅಲ್ಲೇ ಪಕ್ಕದಲ್ಲಿ ಇದ್ದರು. ಒಬ್ಬಾಕೆಯಂತೂ ಬಹಳ ಕುತೂಹಲದಿಂದ ವಿಚಾರಿಸಿದ್ದೇನು ಗೊತ್ತೇ? ಅಮ್ಮಾ ನಿಮ್ಮ ಊರು ಯಾವುದು?. ಅಷ್ಟಕ್ಕೇ ನಿಲ್ಲಲಿಲ್ಲ. ನಿಮ್ಮ ಯಜಮಾನರಿದ್ದಾರಾ ನಿಮ್ಮ ತಂಡದಲ್ಲಿ? ನಾನೇನನ್ನಲಿ? ಗೊಂದಲಕ್ಕಿಟ್ಟುಕೊಂಡಿತು. ನಾನು ಗಂಡೆಂಬ ಸತ್ಯ ಹೇಳಿದರೆ ಅವರಿಗೆ ಮುಜುಗರದ ಪ್ರಮೇಯ. ಸುಳ್ಳು ಹೇಳಿದರೆ ನನ್ನ ಮನಸ್ಸಿಗೆ ಕಿರಿಕಿರಿ. ಅಂತೂ ಮೇಳದ ಯಜಮಾನರನ್ನು ಗಮನಕ್ಕೆ ತಂದುಕೊಂಡು ಇದ್ದಾರೆ ಎಂದೆ. ಆಭರಣ ನೋಡಿ ಚಿನ್ನದ್ದೆಯಾ ಎಂದು ಪರೀಕ್ಷೆಗೆ ಶುರುವಿಟ್ಟುಕೊಂಡರು. ಆಗೆಲ್ಲಾ ಬೆಳ್ಳಿ ಆಭರಣಗಳ ಬಳಕೆ ಅಲ್ಲಲ್ಲಿ ಇತ್ತಾದ್ದರಿಂದ ಹೌದು ಎಂದೆ.

ತೀರ್ಥಹಳ್ಳಿಯಲ್ಲಿ ಮಂಜಪ್ಪ ಶೆಟ್ಟಿ ಬಹಳ ಶ್ರೀಮಂತ. ನಮ್ಮ ಪ್ರಸಂಗದಲ್ಲಿ ನನ್ನ ಪಾತ್ರ ನೋಡಿ ಆಗಿನ ಕಾಲಕ್ಕೆ ಸಾವಿರ ರೂಪಾಯಿ ಬೆಟ್ಟು ಕಟ್ಟಿದವರು. ಅವರೊಂದಿಗೆ ಇದ್ದವರೆಲ್ಲಾ ನಾನು ಗಂಡೆಂದು ವಾದಿಸಿದರೆ ; ಮಂಜಪ್ಪ ಶೆಟ್ಟಿಯದ್ದು ನಾನು ಹೆಣ್ಣೇ ಹೌದು ಎಂಬ ನಂಬಿಕೆ. ಕೊನೆಗೆ ವೇಷ ಕಳಚುವಾಗ ಪರೀಕ್ಷೆಗೆಂದು ಬಾಗಿಲ ಮರೆಯಲ್ಲಿ ನಿಂತ ಸಂಗಡಿಗರು ; ಗಂಡೆಂದು ತಿಳಿದು ಮಂಜಪ್ಪ ಶೆಟ್ಟಿಯ ವಿರುದ್ಧ ಗೆದ್ದಿದ್ದಕ್ಕೆ ಮುಸಿಮುಸಿ ನಕ್ಕರಂತೆ. ಕೊನೆಗೆ ಶೆಟ್ಟಿ ಮೇಳದ ಮುಖ್ಯಸ್ಥರಾದ ಕುರಿಯ ವಿಠಲ ಶಾಸ್ತ್ರಿಯವರ ಬಳಿ ಹೋಗಿ ಬಯಲಾಟ ಆಡಿಸುವ ಸಂಕಲ್ಪ ಹೇಳಿ, ಒತ್ತಾಯಿಸಿ ಆಟ ಆಡಿಸಿದರು.

· ಇಂದಿನ ಸ್ತ್ರೀಪಾತ್ರ ನಿರ್ವಹಣೆಯ ಸವಾಲೇನು?

ಹಿಂದೆ ಅಕ್ಷರಾಭ್ಯಾಸ ಇದ್ದವರು ಬಹಳ ಕಡಿಮೆ. ಕಲಾವಿದರೂ ಬಹುಪಾಲು ಮಂದಿ ಶಿಕ್ಷಿತರೇನಾಗಿರಲಿಲ್ಲ. ಹಾಗಾಗಿ ರಂಜನೆ, ನೆಗೆತ ಸಾಕಾಗಿತ್ತು. ಪುರುಷ ಪ್ರಧಾನ ಪಾತ್ರಗಳಿಗೆ ಸಿಕ್ಕಿದಷ್ಟು ಮಹತ್ತ್ವ ಸ್ತ್ರೀಪಾತ್ರಗಳಿಗೆ ಸಿಗುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಮೊದಲಿದ್ದಂತೆ ದೀರ್ಘ ಕಾಲಾವಧಿಯ ಯಕ್ಷಗಾನಗಳಿಲ್ಲ. ೩ ಗಂಟೆಗೆ ಇಳಿಸಬೇಕಾದ ಕಾಲಮಿತಿ ಇರುವುದರಿಂದ ಕಲಾವಿದನಿಗೆ ಹೆಚ್ಚು ಸವಾಲು ಇದೆ. ಜೊತೆಗೆ ವಿದ್ಯಾಭ್ಯಾಸ ಕೇವಲ ೫-೬ನೇ ಕ್ಲಾಸಿಗೆ ಸೀಮಿತವಾಗಿಲ್ಲ. ವಿದ್ಯಾವಂತರು ಹೆಚ್ಚು. ಆದ್ದರಿಂದ ಇಂದಿನ ಹೆಣ್ಣುಮಕ್ಕಳ ಕಣ್ಣಲ್ಲೂ ನೀರು ಹರಿಯುವಂತೆ ಅಭಿನಯಿಸುವುದೇ ಸವಾಲು.

· ನೀವು ಕಂಡುಕೊಂಡಂತೆ ಸ್ತ್ರೀಪಾತ್ರ ಅಭಿನಯ ಎಂತಹ ಬದಲಾವಣೆಯನ್ನು ನಿಮ್ಮ ಜೀವನಕ್ಕೆ ಕೊಟ್ಟಿದೆ?

ಎಂತಹ ಘಟನೆ ಬಂದರೂ ಸಹಿಸಿಕೊಳ್ಳುವ ಶಕ್ತಿಯನ್ನು ಕಲೆ ನೀಡುತ್ತದೆ. ಬಹಳ ವರ್ಷಗಳ ಹಿಂದೆ; ಬಯಲಾಟದ ದಿನಗಳು, ಫೋನಿಲ್ಲ, ಹೆಚ್ಚು ವ್ಯವಸ್ಥೆಯಿಲ್ಲ. ಇಂತಹ ಸಮಯದಲ್ಲೇ ಯಾರೋ ಬಂದು ಇನ್ನೇನು ರಂಗಕ್ಕೆ ಕಾಲಿಡಬೇಕು ಎನ್ನುವ ಹೊತ್ತಿಗೆ ಬಂದು ತಿಳಿಸಿದ್ದರು; ನನ್ನ ಅಮ್ಮ ತೀರಿಹೋದ ವಾರ್ತೆ ಬರಸಿಡಿಲಂತೆ ಬಂದೆರಗಿತ್ತು. ವಿಪರ್ಯಾಸವೆಂಬಂತೆ ಅಂದು ನನ್ನದು ಭಸ್ಮಾಸುರ ಮೋಹಿನಿ ಪ್ರಸಂಗದ ಮೋಹಿನಿ ಪಾತ್ರ. ಶೃಂಗಾರ, ಒಯ್ಯಾರ, ನಾಟ್ಯವೇ ಮೇಳೈಸಿದ್ದ ನನ್ನ ಜನಪ್ರಿಯ ಪಾತ್ರವೂ ಹೌದು. ಸಭೆ ನೋಡಿದರೆ ಗಣ್ಯರು, ಸ್ವಾಮೀಜಿಗಳು, ಹಿರಿಯರು, ಹಲವು ಪ್ರೇಕ್ಷಕರು ನೆರೆದಿದ್ದಾರೆ. ಏನು ಮಾಡಲೂ ತೋಚದ ಸಂದಿಗ್ಧತೆ. ಅಭಿನಯಿಸಬೇಕಾದ ಅನಿವಾರ್ಯತೆ. ಅಮ್ಮನಿಲ್ಲದ ವಾರ್ತೆಯನ್ನು ಕೇಳಿಯೂ ಕೇಳದ ಹಾಗೆ ಹೋಗಿ ಅಭಿನಯಿಸಿದೆ. ಪಾತ್ರ ಪೂರೈಸಿ ಬಂದು ಚೌಕಿಯಲ್ಲಿ ಮೂಲೆಯಲ್ಲಿ ಕುಳಿತು ಅತ್ತೆ. ಇಂತಹ ಸಹನೆ, ದುಃಖ ತಡೆವ ಶಕ್ತಿ, ಉತ್ಸಾಹ ಎಲ್ಲಿಂದ ಬಂತು? ಕಲೆಯೆಂಬುದಷ್ಟೇ ನನ್ನ ಉತ್ತರ.

———-

ರಸಾನಂದದ ಕಲ್ಪನೆಯಿದ್ದರೆ ನಿವೃತ್ತಿ ಎಂಬ ಪ್ರಶ್ನೆಯೇ ಇರುವುದಿಲ್ಲ :

ಮಂಟಪ ಪ್ರಭಾಕರ ಉಪಾಧ್ಯ


ಮಂಟಪ- ಯಕ್ಷಗಾನದ ಸ್ತ್ರೀವೇಷಗಳ ಪೈಕಿ ಬಹು ಜನಪ್ರಿಯ ಮತ್ತು ಪ್ರಚಲಿತ ಹೆಸರು. ಸ್ತ್ರೀಪಾತ್ರಧಾರಿಯಾಗಿದ್ದುಕೊಂಡು ದಾಖಲಾರ್ಹವೆನಿಸುವ ಪ್ರಯೋಗಶೀಲ ಆಯಾಮವನ್ನಿತ್ತ ಸಾವಿರದ ಸಾಧಕ. ಶತಾವಧಾನಿ ಡಾ. ಆರ್. ಗಣೇಶ್‌ರ ಯಕ್ಷಗಾನೀಯ ದೃಷ್ಟಿಗೆ ಇಂಬು ಕೊಡುವಲ್ಲಿ ಮಂಟಪ ಉಪಾಧ್ಯರ ಸ್ತ್ರೀಪಾತ್ರ ನಿರ್ವಹಣೆಯು ಯಕ್ಷಗಾನದ ಐತಿಹಾಸಿಕ ದಾಖಲೆ. ಸ್ತ್ರೀಪಾತ್ರಕ್ಕೆ ಹೊಸ ದಿಕ್ಕನ್ನು ನೀಡುವುದಷ್ಟೇ ಅಲ್ಲದೆ; ಸ್ತ್ರೀ ಪಾತ್ರವೊಂದನ್ನೇ ಇಟ್ಟುಕೊಂಡು ಏಕವ್ಯಕ್ತಿ ಯಕ್ಷಗಾನ ವೆಂಬ ಅಭಿದಾನವನ್ನಿಟ್ಟು ಯಕ್ಷಗಾನೀಯವಾಗಿ ಹೊಸಸ್ಪರ್ಶವನ್ನು ನೀಡುವಲ್ಲಿ ಮಂಟಪರ ಸಾಧನೆ ನಿಜಕ್ಕೂ ಶ್ಲಾಘನೀಯ.

ಗಜಾನನ ಹೆಗಡೆಯವರ ಸ್ತ್ರೀವೇಷವನ್ನು ಕಂಡು ಇಷ್ಟಪಟ್ಟು ಯಕ್ಷಗಾನ ಕೇಂದ್ರದಲ್ಲಿ ಕಲಿತವರು. ಸ್ತ್ರೀಪಾತ್ರಕ್ಕೆ ಬೇಡಿಕೆ ಕಡಿಮೆ ಇದ್ದ ಕಾಲಕ್ಕೆ ಮಂಟಪರ ರೂಪ ಚೆಂದ; ಸ್ತ್ರೀವೇಷಕ್ಕೆ ಒಪ್ಪುತ್ತದೆ ಅನ್ನುವ ದೃಷ್ಟಿಯಿಂದ ಹಿರಿಯ ಗುರುಗಳ ಆಣತಿಯ ಮೇರೆಗೆ ಸ್ತ್ರೀಪಾತ್ರವಾಗಿ ಪಾದಾರ್ಪಣೆ. ಸಮಯಮಿತಿ ಮೇಳ, ಇಡಗುಂಜಿ, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿ ; ಮುಖ್ಯ ಸ್ತ್ರೀಪಾತ್ರಧಾರಿಯಾಗುವ ಮಟ್ಟಿಗೆ ಬೆಳೆದರೂ, ವೃತ್ತಿಯಾಗಿ ಯಕ್ಷಗಾನ ಬೇಡ ಎಂದು ತೀರ್ಮಾನಿಸಿ ಬೆಂಗಳೂರಿಗೆ ಬಂದು ಐಸ್ಕ್ರೀಮ್ ತಯಾರಿಕೆಯ ವ್ಯವಹಾರದಲ್ಲಿ ತೊಡಗಿಕೊಂಡವರು. ಚಿಟ್ಟಾಣಿಯವರ ಜೊತೆಗೆ ಹಲವು ಪ್ರಸಂಗಗಳಲ್ಲಿ ಮೋಹಿನಿ, ಮೇನಕೆಯಾಗಿ ಪಾತ್ರ ನಿರ್ವಹಿಸಿ ತಾರಾಮೌಲ್ಯವನ್ನೂ ಪಡೆದವರು. ಮೂರು ವರ್ಷ ಭರತನಾಟ್ಯವನ್ನು ಬೆಂಗಳೂರಿನ ಮಂಜುಳಾ ಪರಮೇಶ್ ಅವರ ಬಳಿ ಅಭ್ಯಸಿಸಿ, ತಮ್ಮ ಅಭಿವ್ಯಕ್ತಿಗೆ ಹೊಂದುವುದಿಲ್ಲವೆಂದು ಕೈಬಿಟ್ಟು; ನಂತರ ನಾಲ್ಕು ವರ್ಷಕಾಲ ಬಣ್ಣ ಹಚ್ಚದೆ ತಟಸ್ಥರಾಗಿದ್ದರು ಮಂಟಪ. ಕಾವ್ಯ ಚಿತ್ರ-ಯಕ್ಷ ನೃತ್ಯದ ವೇಳೆಗೆ ಶತಾವಧಾನಿ ಡಾ. ಗಣೇಶ್‌ರೊಂದಿಗೆ ಆದ ಪರಿಚಯ, ನಂತರದ ನೂತನ ಅಭಿವ್ಯಕ್ತಿಯ ಹುಡುಕಾಟದಲ್ಲಿ ಹೊರಬಂದದ್ದೇ ಏಕವ್ಯಕ್ತಿ ಯಕ್ಷಗಾನ.

ಮಂಟಪ ಪ್ರಭಾಕರ ಉಪಾಧ್ಯ

· ಸ್ತ್ರೀ ಪಾತ್ರಗಳ ಗೆಲ್ಲುವಿಕೆಗೆ ಏನು ಮಾಡಬೇಕು? ಯಾವುದು ಯಶಸ್ಸನ್ನು ನಿರ್ಧರಿಸುತ್ತದೆ?

ಪಾತ್ರಕ್ಕೆ ಸ್ಥಾಯಿ ಭಾವ ಬಹಳ ಮುಖ್ಯ. ಅನೌಚಿತ್ಯವೇ ರಸಕ್ಕೆ ವಿಘ್ನಕಾರಕ ಎಂದು ಪಾಠವಾದದ್ದು ಗಣೇಶರಿಂದ. ಪಾತ್ರದ ಅನೌಚಿತ್ಯಗಳಲ್ಲಿ ನಮ್ಮ ದೌರ್ಬಲ್ಯಗಳೂ ಅಡಗಿರುತ್ತವೆ. ಕೆಲವೊಂದು ಕಸರತ್ತನ್ನಷ್ಟೇ ಕಲಿತು ಅದರೊಳಗಿನ ಅಭಿನಯ, ರಸ ತೀವ್ರತೆಯನ್ನು ಕೈಬಿಟ್ಟರೆ ಒಂದೆರಡು ವರ್ಷ ಚಲಾವಣೆಯಲ್ಲಿರಬಹುದು. ಮೂರನೇ ವರ್ಷಕ್ಕೆ ಅದೂ ಕೂಡಾ ಬಿದ್ದು ಹೋಗುತ್ತದೆ. ಹಾಗೆಂದು ಬದಲಾವಣೆ ಮಾಡಿಕೊಳ್ಳುತ್ತಾ ಸಾಗಿದರೆ ಎಷ್ಟು ದಿನ? ಆದರೆ ಅಭಿನಯವನ್ನೇ ರಸವಾಗಿ ಪರಿವರ್ತಿಸಿಕೊಂಡಾಗ ಬದಲಾವಣೆ ಬೇಕಾಗುವುದಿಲ್ಲ. ಅದೇ ಒಂದು ಬದಲಾವಣೆಯಾಗುತ್ತದೆ.

ಕಲೆಯೊಂದು ಆಧ್ಯಾತ್ಮ. ನಾನಿಲ್ಲ. ನಾನು ಅಲ್ಲ. ಆಗ ನಾವೇ ಎಲ್ಲಾ ಎಂಬುದನ್ನು ದ್ವೈತವಾಗಿ ನೋಡಿಕೊಂಡೂ ಅದ್ವೈತವನ್ನು ಸಾಧಿಸಿಕೊಳ್ಳಲು ಸಾಧ್ಯವಿದೆ. ನೋಡುವವರು ಪಾತ್ರವಾಗಿ, ನರ್ತಿಸುತ್ತೇವೆ ಎಂಬ ಅಹಂಕಾರವನ್ನು ನಾವು ಕಳಚಿಕೊಂಡರೆ ರಸೋತ್ಪತ್ತಿಯಾಗುತ್ತದೆ. ಅದಕ್ಕೆ ಅನುಕೂಲವಾಗಿ ಪರಿಶ್ರಮ, ಚಿಂತನೆ, ಅಧ್ಯಯನ ಇದ್ದರೆ ನಮ್ಮ ಅಭಿವ್ಯಕ್ತಿಯ ವೇಳೆಗೆ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಬಿಟ್ಟರೆ, ನೆನಪು ಮಾಡಿಕೊಳ್ಳುತ್ತಾ ಅಭಿನಯ ಮಾಡಿದರೆ ರಸನಿಷ್ಪತ್ತಿ ಆಗುವುದಿಲ್ಲ. ಆದರೆ ಕಲಿತದ್ದನ್ನು ತೋರಿಸುವ ಪ್ರಯತ್ನವೇ ಈಗ ಹೆಚ್ಚಾಗುತ್ತಿದೆ. ಪಾತ್ರದ ಒಳಗೆ ನಾವಿಳಿದರೆ ವೇಷ ಚೆಂದ ಇತ್ತೇ, ಇಲ್ಲವೇ ಎಂಬುದು ಕೂಡಾ ಗಮನಕ್ಕೆ ಬರುವುದಿಲ್ಲ. ರಸಕ್ಕೆ ಏರದಿದ್ದಾಗ ಮಾತ್ರ ಸೀರೆ, ವೇಷಭೂಷಣದ ಬಗ್ಗೆ ಗಮನ ಹೋಗುವುದು.

ಚೆಂದ, ಸೌಂದರ್ಯವೇ ಸ್ತ್ರೀಪಾತ್ರದ ಮುಖ್ಯ ಅಂಶವಲ್ಲ. ಆದರೆ ಅದೇ ಮುಖ್ಯ ಎಂಬಂತಾಗಿರುವುದು ದೌರ್ಭಾಗ್ಯ. ಕಾಣಿಸಿಕೊಳ್ಳುವುದೇ ಉದ್ದೇಶವಾಗಿದ್ದ ಕಾಲಕ್ಕೆ ಸೀರೆ, ಪೋಷಾಕು, ವೇಷಭೂಷಣವೆಲ್ಲಾ ಚೆಂದವಾಗಿದ್ದರೆ ಮಾತ್ರ ಮಿಂಚಲು ಸಾಧ್ಯ ಎಂಬುದಷ್ಟೇ ನನಗೂ ಗೊತ್ತಿದ್ದರಿಂದ ಕಲೆಗಿಂತ ಹೆಚ್ಚು ಪ್ರದರ್ಶನದ ಬಗ್ಗೆ ಗಮನವಿತ್ತು. ಅದಕ್ಕೆ ಪೂರಕವಾಗಿ ಭರತನಾಟ್ಯ ಕಲಿತೆ. ಆ ಶ್ರಮ ನನ್ನ ಒಟ್ಟು ನೃತ್ಯದಲ್ಲಿ ಹೊಸ ರೇಖೆಗಳನ್ನು ಕಾಣಿಸಿದ ಕಾರಣ ಈವಾಗಲೂ ಭರತನಾಟ್ಯ ಕುಣೀತಿರಿ ಎಂಬ ದೂರುಗಳಿವೆ. ಆದರೆ ಕಲೆಯ ಆನಂದ, ಸ್ವಾದ, ರಸ, ಭಾವ ಮುಂತಾಗಿ ಯಾವ ವಿಚಾರಗಳೂ, ನಾಟ್ಯಶಾಸ್ತ್ರದ ಯಾವ ಕಲ್ಪನೆಯೂ ಆಗ ಇರಲಿಲ್ಲ. ಜನರ ಮುಂದೆ ಹೋಗಿ ನರ್ತಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ತೀವ್ರತೆಯೊಂದೇ ಇತ್ತು.

· ಯಕ್ಷಗಾನದಲ್ಲಿ ಪುರುಷಪಾತ್ರಕ್ಕೆ ಇರುವ ಪ್ರಾತಿನಿಧ್ಯ ಸ್ತ್ರೀಪಾತ್ರಕ್ಕೆ ಇದೆಯೇ?

ಜೀವಂತಿಕೆ ಇರುವುದೇ ಸ್ತ್ರೀಪಾತ್ರದಲ್ಲಿ. ಆದರೆ ಈ ರಂಗದಲ್ಲಿ ಗಂಡುಪಾತ್ರಕ್ಕೆ ಇರುವ ವ್ಯವಸ್ಥಿತ ಅವಕಾಶ ಸ್ತ್ರೀಪಾತ್ರಕ್ಕೆ ಇಲ್ಲ. ಹಾಗಾಗಿ ಸ್ತ್ರೀಪಾತ್ರ ಕೈಬಿಟ್ಟರೂ ಆಗುತ್ತದೆ ಎಂದಾದದ್ದು. ಈಗ ಸಖಿಯರೇ ಇಲ್ಲದ ರಾಜಕುಮಾರಿ ಪ್ರವೇಶ ಆಗುವುದೂ ಇದೇ ಕಾರಣಕ್ಕೆ. ಆದರೆ ಯಾವಾಗ ಸ್ತ್ರೀಪಾತ್ರವನ್ನು ನಿಲ್ಲಿಸುತ್ತಾರೋ ಅಲ್ಲಿಗೆ ಯಕ್ಷಗಾನ ಅಂತ್ಯ.

ಪಾತ್ರದೊಳಗೆ ಒಂದಾಗಿ ಇಳಿಯುವ ಅನುಭೂತಿ ಗಂಡುವೇಷದಲ್ಲಿ ನೂರಕ್ಕೆ ನೂರು ಸಾಧ್ಯವಿಲ್ಲ. ಕಾರಣವಿಷ್ಟೇ, ಗಂಡಿಗೆ ಅವಲಂಬನೆ ಬೇಕು ; ವೈವಿಧ್ಯ ಇಲ್ಲ. ಅದೇ ಹೆಣ್ಣಿಗೆ ವೈವಿಧ್ಯ ಜಾಸ್ತಿ. ಹೆಣ್ಣು ನೂರು ತರಹದಲ್ಲಿ ಸಿಟ್ಟು, ನಗು ಪ್ರಕಟಿಸಿ ತೋರುತ್ತಾಳೆ. ಅದೇ ಗಂಡಿಗೆ ಎರಡರಿಂದ ಮೂರು ಬಗೆಯಲ್ಲಿ ಮಾತ್ರ ಇದು ಸಾಧ್ಯ. ರಸಾನಂದದ ದೃಷ್ಟಿಯಿಂದ ಹೆಣ್ಣಿಗೆ ಸೂಕ್ಷ್ಮತೆ ಹೆಚ್ಚು. ಉದಾ : ಸೀತೆಯ ವಿನಾ ರಾಮನನ್ನು ಅಭಿನಯಿಸುತ್ತಾ ರಾಮಾಯಣ ಕಥೆ ಹೇಳುವುದರಲ್ಲಿ ಅರ್ಥ ಇಲ್ಲ. ಆದರೆ ಸೀತೆಗೆ ಹಾಗಲ್ಲ.

· ಹಾಗಾದರೆ ಸ್ತ್ರೀಪಾತ್ರ ನಿರ್ವಹಣೆಗೆ ಸ್ತ್ರೀ ಸೂಕ್ತಳಾ? ಅಥವಾ ಪುರುಷನೇ?

ರಂಗವೇ ಕಲ್ಪನಾ ಲೋಕ. ಸಹಜ ಜೀವನದಲ್ಲಿರುವುದಕ್ಕಿಂತಲೂ ಅತೀ ಎನಿಸುವಂತದ್ದೆ ಅಭಿನಯ ಎನಿಸಿಕೊಳ್ಳುತ್ತದೆ. ಸಹಜವಾಗಿದ್ದರೆ ಅದು ರಂಗದ ಮೇಲಿನ ಅಭಿನಯ ಆಗುವುದಿಲ್ಲ. ಸಿನಿಮಾ ಅಥವಾ ಕಿರುತೆರೆಯೆನಿಸಿಕೊಳ್ಳುತ್ತದೆ. ರಂಗದಲ್ಲಿ ನಾವಲ್ಲದ್ದನ್ನು ನಾವಾಗುವುದರಲ್ಲೇ ವಿಶೇಷತೆಯಿರುವುದು. ಹಾಗಾಗಿ ಸ್ತ್ರೀಪಾತ್ರವನ್ನು ಸ್ತ್ರೀಯೇ ಮಾಡಿದರೆ ವಿಶೇಷ ಅಲ್ಲ.

ರಂಗಭೂಮಿ ವ್ಯವಸ್ಥೆ ಸಿನಿಮಾದಂತೆ ವಾಸ್ತವದ ಪ್ರತಿರೂಪದ ಚಿತ್ರಣವಲ್ಲ. ಹೆಣ್ಣಾದವಳು ತನ್ನ ಸಹಜತೆಯನ್ನೆ ಪ್ರಕಟಿಸಿದರೆ ಅದು ಅಭಿನಯ ಆಗುವುದಿಲ್ಲ. ಉದಾ : ನಾಚಿಕೆ ಅಭಿವ್ಯಕ್ತಿ ಮಾಡಲು ಹೊರಟಾಗ ಎಷ್ಟು ಮಾಡಬೇಕು ಅನ್ನುವ ಅಳತೆ ತಪ್ಪಿ ಮೀರಿ ಹರಿಯಬಹುದು. ಅತೀ ಎನ್ನಿಸುವ ಸ್ತ್ರೀಪಾತ್ರದ ಅಭಿನಯವನ್ನು ಸ್ತ್ರೀ ಮಾಡಲಾರಳು. ಬೇಕಾದರೆ ಅವಳಿಗೆ ಗಂಡು ವೇಷ ಬಹಳ ಚೆನ್ನಾಗಿ, ಸುಲಭವಾಗಿ ದಕ್ಕುತ್ತದೆ. ಹೆಣ್ಣು ಪುರುಷನು ನಿರ್ವಹಿಸಿದ್ದಕ್ಕಿಂತ ಚೆನ್ನಾಗಿ ಪುರುಷಪಾತ್ರ ಮಾಡಬಲ್ಲಳು.

ಯಕ್ಷಗಾನದಲ್ಲಿ ಪುರುಷರು ಮಾಡುವ ಸ್ತ್ರೀಪಾತ್ರಗಳಂತೆ ಓರ್ವ ಸ್ತ್ರೀ ಸ್ತ್ರೀಪಾತ್ರಗಳನ್ನು ಮಾಡುತ್ತಾ ಅದೇ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಆಕರ್ಷಿತರಾಗುವಂತೆ ಮಾಡುವುದು ಸಾಧ್ಯವೇ ಇಲ್ಲ. ಆಕೆಗೆ ಮಾಮೂಲಿ ಜೀವನಕ್ಕಿಂತ ಭಿನ್ನವಾದ, ಯಕ್ಷಗಾನದ ಮಾಧ್ಯಮಕ್ಕೆ ಸಹಜವಾದ ಒಂದು ಸ್ಪಂದನೆಯನ್ನಿತ್ತು ಕಲಾದೃಷ್ಟಿಯಿಂದ ಸ್ತ್ರೀಪಾತ್ರವನ್ನು ಗೆಲ್ಲಿಸಲು ನೂರಕ್ಕೆ ನೂರು ಸಾಧ್ಯವಿಲ್ಲ. ಬೇಕಾದರೆ ಗಮನಿಸಿ: ಕೂಚಿಪುಡಿ, ಓಡಿಸ್ಸಿಯಲ್ಲಿ ಸ್ತ್ರೀಪಾತ್ರ ಧರಿಸಿ ಪುರುಷರು ಸ್ತ್ರೀಯರಿಗಿಂತಲೂ ಚೆಂದದ ಸ್ತ್ರೀಪಾತ್ರ ಮಾಡಿ ದಕ್ಕಿಸಿಕೊಂಡಿದ್ದಾರೆ. ಗಂಡಾಗಿದ್ದುಕೊಂಡು ಬೇಗ ಹೆಣ್ಣಾಗುವುದು ಒಂದು ಸವಾಲು. ಹಾಗೆ ನೋಡಿದರೆ ಸ್ತ್ರೀಪಾತ್ರದಲ್ಲೇ ನನಗೆ ಹೆಚ್ಚುವರಿ ಆನಂದ ಸಿಕ್ಕುತ್ತದೆ.

ಸ್ತ್ರೀಪಾತ್ರ ನಿರ್ವಹಣೆ ಪುರುಷರ ಸಹಜ ಜೀವನಕ್ಕೆ ಸಮಸ್ಯೆಗಳನ್ನು ಸೃಷ್ಟಿಸುವ ಸಂಭವ ಇರುತ್ತದೆಯೇ?

ನನಗಾಗಿ ಯಾರೋ ಓಡಿಬಂದು ಹೆಣ್ಣೆಂದು ಗ್ರಹಿಸಿ ಈವರೆಗೆ ಮಾತನಾಡಿಲ್ಲ. ನಾವೂ ಬಿಗಿ ಇದ್ದಾಗ, ಅಭಿನಯವನ್ನು ಅಗ್ಗವಾಗಿ ಕಾಣದೆ ಇದ್ದರೆ ನಮಗೆ ಆ ಬಗೆಯ ಅನುಭವಗಳಾಗುವುದಿಲ್ಲ. ಸೆಳೆಯಬೇಕು ಅಂತಲೇ ವೇಷ ಮಾಡಿ, ನಿತ್ಯಜೀವನದಲ್ಲೂ ಹಗಲುವೇಷ ಮಾಡಿದರೆ ಎಂತವರೇ ಆದರೂ ಛೇಡಿಸುತ್ತಾರೆ. ಹಾಗಾಗಿ ಸ್ತ್ರೀಪಾತ್ರ ನಿರ್ವಹಿಸುವವರು ಹಗಲಿಗೂ ಸ್ತ್ರೀಪಾತ್ರ ಮಾಡುವರೆಂಬ ಭಾವನೆ, ಭ್ರಮೆ ತರಬಾರದು. ಅದು ರಂಗ ಮತ್ತು ಜೀವನದಲ್ಲಿ ಕೆಟ್ಟ ಪ್ರಭಾವ ಬೀರುತ್ತದೆ. ಹಗಲಿನಲ್ಲಿಯೂ ಸ್ತ್ರೀಪಾತ್ರದ ಅನುಭವವನ್ನೇ ತರುತ್ತಿದ್ದರೆ ರಂಗದಲ್ಲಿ ಆ ಅನುಭವ ಬರುವುದೇ ಇಲ್ಲ. ರಂಗದಲ್ಲಿ ಒಯ್ಯಾರದ ನಡಿಗೆ ಮಾಡಿ, ಜೀವನದಲ್ಲೂ ಅದೇ ರೀತಿ ಮಾಡಿದರೆ ಹೇಗೆ?

ನಾವು ಹೇಗೆ ಸ್ವಭಾವವನ್ನು ರೂಪಿಸಿಕೊಳ್ಳುತ್ತೇವೆಯೋ ಅಂತೆಯೇ ನಾವು ವ್ಯಕ್ತಿತ್ವದಲ್ಲಿ ರೂಪು ಪಡೆಯುತ್ತೇವೆ. ಭಾವವನ್ನು ಕೆರಳಿಸಿದರೆ ಹಾಗೆಯೇ ಬೆಳೆದುಬಿಡಬಹುದು. ಪದೇ ಪದೆ ಸೀರೆ ಉಡಿಸಿದರೆ ಗಂಡಿಗೂ ಹೆಣ್ಣಿನ ಮನೋಧರ್ಮವೇ ಬರುತ್ತದೆಯಲ್ಲವೆ? ಅದು ಅಸಹ್ಯ. ಆದ್ದರಿಂದ ಅಂತಹ ಅಪಸವ್ಯಗಳನ್ನು ಕಲಾವಿದ ಮೀರಬೇಕು. ಹೊಸ ಜೀವವಾಗಬೇಕು. ಭಾವದ ತೀವ್ರತೆ ಇರಬೇಕು. ದೈವಿಕತೆ ಮೂಡುವುದೇ ಆಗ. ಪ್ರಜ್ಞಾಪೂರ್ಣ ಗಮನಕ್ಕಿಂತಲೂ ನಡವಳಿಕೆಗಳನ್ನು ಗಮನಿಸುವ ಶಕ್ತಿಯಿರಬೇಕು. ಭಾವಕೋಶದಲ್ಲಿ ಗಮನಿಸಿದ್ದು ಸುಪ್ತವಾಗಿದ್ದರೆ ಅಭಿನಯದ ವೇಳೆಗೆ ರಂಗದಲ್ಲಿ ಹೊರಬರುತ್ತದೆ.

ಹಗಲಿನಲ್ಲಿ ಸ್ತ್ರೀಪಾತ್ರ ನಿರ್ವಹಿಸುವವನ್ನು ಗುರುತಿಸಲಿಕ್ಕೇ ಕಷ್ಟವಾಗುತ್ತದೆ ಎನ್ನುವುದಾದರೆ ಅದು ಆತನ ಹೆಗ್ಗಳಿಕೆ, ಸತ್ತ್ವ. ಘನತೆ, ಗಾಂಭೀರ್ಯ ಕೂಡಾ ಅದರಿಂದಲೇ ಬರುತ್ತದೆ. ಎರಡೂ ಕಡೆ ಒಂದೇ ಭಾವ ಇದ್ದರೆ ಅದರಲ್ಲಿ ಸಹಜ ಮತ್ತು ಅಭಿನಯ ಅಂತ ಹೇಳಲು ಏನೂ ಇರುವುದಿಲ್ಲ.

· ಸ್ತ್ರೀ ವೇಷ ನಿರ್ವಹಣೆಗೆ ಆಯುಷ್ಯ ಕಡಿಮೆ ಎಂದಿರುವಾಗ ಬೇಗನೆ ನಿವೃತ್ತಿಯಾಗುವುದು ಅಗತ್ಯವೇ?

ಜನರಿಗೇ ವೇಷ ಕಾಣಿಸುವುದೇ ಉದ್ದೇಶವೆಂಬಂತೆ ಪಾತ್ರ ಮಾಡ ಹೊರಟರೆ ನಿವೃತ್ತಿಯಾಗಬೇಕಾದೀತು. ಏಕೆಂದರೆ ತಾರಾಮೌಲ್ಯವೂ ಬೆಳವಣಿಗೆಯಲ್ಲ. ಕುಣಿತದ ಪ್ರಯೋಗಗಳು, ಜನಪ್ರಿಯತೆಗೆ ಇರಬೇಕಾದ ಕಸರತ್ತುಗಳನ್ನೇ ಮಾಡುತ್ತಾ ಇದ್ದರೆ ವಯಸ್ಸಾದಲ್ಲಿಗೆ ನಿವೃತ್ತಿಯಾಗಬೇಕಾಗುತ್ತದೆ.

ಈ ಅರಿವು ನನ್ನಲ್ಲಿ ಬಂದದ್ದು ಶತಾವಧಾನಿ ಗಣೇಶರಿಂದ. ವಯಸ್ಸು ೫೦ ವರ್ಷದ ನಂತರ ಸ್ತ್ರೀಪಾತ್ರವನ್ನು ಜನ ಸ್ವೀಕರಿಸುವುದಿಲ್ಲ ಎಂಬ ಸತ್ಯ ಗೊತ್ತಿದ್ದೂ ; ನನಗೆ ನನ್ನೊಳಗಿನ ಹುಡುಕಾಟಕ್ಕೆ ಉತ್ತರವನ್ನು ಕಂಡುಕೊಳ್ಳ್ಳುವ ಹಪಹಪಿಕೆಯಿತ್ತು. ಕಾವ್ಯಚಿತ್ರ-ಯಕ್ಷನೃತ್ಯದ ನಂತರದ ಮಾತುಕತೆಯಲ್ಲಿ ನನ್ನಲ್ಲ್ಲಿದ್ದ ಪ್ರಶ್ನೆಗೆ ಶತಾವಧಾನಿ ಗಣೇಶರಲ್ಲಿ ಪರಿಹಾರ ದೊರಕಿತ್ತು. ರಸದ ಮಟ್ಟಕ್ಕೆ ಕಲಾವಿದ ಏರಿದನೆಂದರೆ, ವಯಸ್ಸು ಎಂಭತ್ತಾದರೂ ದೇಹದಲ್ಲಿ ಕಸುವಿದ್ದರೆ ವೇಷ ಮಾಡಬಹುದು. ಪ್ರೇಕ್ಷಕ ರಸಾನಂದದಲ್ಲಿ ಮುಳುಗಿದಾಗ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ. ನೋಡುವವನಿಗೆ ತಾನು ನೋಡುತ್ತೀನಿ ಎಂಬ ಭಾವವೂ, ಕುಣಿಯುವವನಿಗೆ ತಾನು ಕುಣಿಯುತ್ತೀನಿ ಎಂಬ ಭಾವವೂ ಮರೆತು ರಸ ಉತ್ಪನ್ನವಾದರೆ ಎಲ್ಲವೂ ಸಾಧ್ಯ. ಆಗಿನ ಹೊತ್ತಿಗೆ ಅವರಂದಿದ್ದು ಅರ್ಥವಾಗಿರಲಿಲ್ಲ. ಆದರೂ ಈ ರಂಗ ಇಷ್ಟವಾಗಿದ್ದ ಕಾರಣ, ನನ್ನ ಅನ್ವೇಷಣೆಗೆ ದಾರಿ ದೊರೆತಿತ್ತು.

ಅಂತಹ ಸಮಯದಲ್ಲಿ ಏಕವ್ಯಕ್ತಿ ಯಕ್ಷಗಾನ ಮಾಡುವ ಯೋಚನೆಯನ್ನಿತ್ತು, ಭಾಮಿನಿಯನ್ನು ೧೯೯೯ರಲ್ಲಿ ನನ್ನ ಕೈಗಿತ್ತರು. ಪ್ರಸಂಗದಲ್ಲಿ ಸ್ತ್ರೀವೇಷ ಬಂದರೆ ಚಹಾ ಕುಡಿಯಲೋ, ಚೌಕಿಯಲ್ಲಿ ವೇಷಧಾರಿಗಳನ್ನು ಮಾತನಾಡಿಸಿಕೊಂಡು ಬರಲೋ ಹೋಗುತ್ತಿದ್ದ ಮನಸ್ಥಿತಿಯೇ ಜಾಸ್ತಿಯಾಗಿರುವಾಗ ನಾಯಿಕೆಯರ ಕಲ್ಪನೆಯುಳ್ಳ ವಸ್ತುವಿನ ಅಭಿವ್ಯಕ್ತಿ ಸುಲಭವಲ್ಲ ಎಂದೇ ಹಿಂಜರಿದಿದ್ದೆ. ಪುರುಷ ವೇಷದ ಸಹಕಾರವಿಲ್ಲದೆ ಇದು ಸಾಧ್ಯವಿಲ್ಲ ಎಂದೇ ಆಲೋಚನೆಯ ಕ್ಷಿತಿಜವನ್ನು ಸಣ್ಣ ಮಾಡಿಕೊಂಡಿದ್ದೆ.

ಜನರಿಗಾಗಿ ಕುಣಿಯುವುದನ್ನು ಬಿಡಬಹುದು. ಆದರೆ ತಮಗೇ ಎಂದು ಕುಣಿಯುವುದನ್ನೂ ಬಿಟ್ಟು ನಿವೃತ್ತಿ ಎಂದು ಪ್ರತಿಬಂಧಿಸಿಕೊಳ್ಳುವುದು ಯಾಕೆ? ಇಂತಿಷ್ಟೇ ಕಾರ್ಯಕ್ರಮ ಮಾಡಬೇಕೆಂಬ ಹಠ ಬಿಡುವುದು ಒಳಿತು. ಆದರೆ ವೇಷ ಮಾಡುವುದನ್ನೇ ಬಿಡುವುದಲ್ಲ. ನಮಗೆ ಬೇಕಾದ ಕಡೆ, ನಮಗಿಷ್ಟವಾದಲ್ಲಿ, ಒಬ್ಬಿಬ್ಬ ರಸಿಕರು ಇರುವೆಡೆಯೂ ಅಭಿನಯ ಮಾಡಬಹುದಲ್ಲ ! ಆಗ ವೇಷದ ಆಯುಷ್ಯದ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ಕಲೆ ಏನು ಅಂತ ತೋರಿಸಿಕೊಡುವಷ್ಟು ಸರಕು ನಮ್ಮಲ್ಲಿದ್ದರೆ ಮಾತ್ರ ಇದು ಸಾಧ್ಯ. ಬಣ್ಣ ಹಚ್ಚದೆಯೂ ಅಭಿನಯಿಸಿ ಕಣ್ಣೀರು ಹಾಕಿಸುವಂತಹ ತಾಕತ್ತು ಇರಬೇಕು. ಕುಣಿತ ಇರಲಿಕ್ಕಿಲ್ಲದಿರಬಹುದು. ಆದರೆ ಸಾತ್ತ್ವಿಕ ಅಭಿನಯ ಇದ್ದರೆ ಕುಣಿತವೊಂದು ಲೆಕ್ಕವೇ ಅಲ್ಲ. ೨೫ ವರ್ಷದ ಪ್ರಾಯವುಳ್ಳ್ಳವನು ಬಂದು ಚೆಂದಗೆ ನೃತ್ಯ ಮಾಡಿದರೆ ಒಪ್ಪಿಕೊಳ್ಳೋಣ. ಹಾಗಂತ ವಯಸ್ಸಾಯಿತು ಎಂಬ ಕಾರಣವೊಂದಕ್ಕೆ ನಮ್ಮ ಪಾತ್ರಕ್ಕೆ ಆಯುಷ್ಯ ಮುಗಿಯಿತು ಎನ್ನುವ ಮನೋಸ್ಥಿತಿಗೆ ಬೀಳಬಾರದು.

———-

ಯಕ್ಷಗಾನ ಕೇವಲ ಸಿನಿಮೀಯವೆಂಬ ಕಲ್ಪನೆ ಬರುವ ಸಾಧ್ಯತೆ ಗೋಚರ :

ಅಂಬಾಪ್ರಸಾದ್ ಪಾತಾಳ

ಸಮರ್ಥ ತಂದೆಗೆ ಅನುರೂಪನಾದ ಯಶಸ್ವೀ ಪುತ್ರ., ಪಾತಾಳ ವೆಂಕಟ್ರಮಣ ಭಟ್ಟರ ಸಮರ್ಥ ಉತ್ತರಾಧಿಕಾರಿ ಅಂಬಾಪ್ರಸಾದ್ ಪಾತಾಳ. ಇಂದಿಗೂ ತೆಂಕುತಿಟ್ಟಿನ ಅಗ್ರಮಾನ್ಯ ಸ್ತ್ರೀ ವೇಷ ಕಲಾವಿದರಲ್ಲಿ ಅಂಬಾಪ್ರಸಾದರದ್ದು ಮೇಲ್ಪಂಕ್ತಿ. ಒಂದಾನೊಂದು ಕಾಲಕ್ಕೆ ಸ್ತ್ರೀವೇಷದಲ್ಲಿಯೂ ಮಿಂಚಿದ್ದ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್‌ರಲ್ಲಿ ಕಲಿಕೆ, ತಂದೆಯವರ ಪ್ರೋತ್ಸಾಹದ ಫಲವಾಗಿ ಮತ್ತು ಅಪ್ಪ ವೇಷ ಮಾಡುತ್ತಾರೆಂಬ ಕಾರಣದಿಂದಲೂ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಯಕ್ಷಗಾನ ವಿದ್ಯಾಭ್ಯಾಸ ಮತ್ತು ಶಾಲೆಯ ರಜೆಯಲ್ಲಿ ಮೇಳದ ಬಯಲಾಟಗಳಲ್ಲಿ ಭಾಗವಹಿಸುವಿಕೆ ಇವರ ಯಕ್ಷಗಾನ ಕಲಿಕೆಯ ಮೊದಲ ಹೆಜ್ಜೆಗಳು. ನಂತರದ ದಿನಗಳಲ್ಲಿ ಧರ್ಮಸ್ಥಳ ಮೇಳದ ಮುಖಾಂತರ ಧನಂಜಯ ವಿಜಯ ಪ್ರಸಂಗದ ದ್ರೌಪದಿಯಾಗಿ ಮೊದಲು ಅಡಿಯಿಟ್ಟು , ನಿಡ್ಲೆ ನರಸಿಂಹ ಭಟ್ ಅವರ ಬಳಿ ಅಂಬಾಪ್ರಸಾದ್ ಶ್ರುತಿ ಬದ್ಧವಾಗಿ ಮಾತನಾಡಲು ಕಲಿತರು.

ಮಂಗಳೂರಿನ ಹಿರಿಯ ಗುರು ಮಾಸ್ಟರ್ ವಿಠಲ್ ಅವರ ಬಳಿ ಭರತನಾಟ್ಯದ ಪಟ್ಟು ಅಳವಡಿಸಿಕೊಂಡು ಅದನ್ನು ಯಕ್ಷಗಾನೀಯವಾಗಿ ಅಳವಡಿಸಿದ ಅಂಬಾಪ್ರಸಾದ್ ತೆಂಕುತಿಟ್ಟಿನ ಕಟೀಲು ಮೇಳವೊಂದನ್ನು ಹೊರತುಪಡಿಸಿ ಬಡಗುತಿಟ್ಟಿನ ಶಿರಸಿ ಮೇಳವನ್ನೂ ಒಳಗೊಂಡಂತೆ ಸುಂಕದಕಟ್ಟೆ, ಕದ್ರಿ, ಸುರತ್ಕಲ್, ಮಧೂರು, ಕರ್ನಾಟಕ, ಮಂಗಳಾದೇವಿ, ಎಡನೀರು, ಪುತ್ತೂರು,..ಹೀಗೆ ಎಲ್ಲಾ ತೆಂಕಿನ ಮೇಳಗಳಲ್ಲೂ ಸಂಚಾರಗೈದು ಪ್ರಸ್ತುತ ಹೊಸನಗರ ಶ್ರೀ ರಾಮಚಂದ್ರಾಪುರ ಮೇಳದ ಪ್ರಧಾನ ಸ್ತ್ರೀ ಪಾತ್ರಧಾರಿಯಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ. ಪೌರಾಣಿಕವಷ್ಟೇ ಅಲ್ಲದೆ ತುಳುಯಕ್ಷಗಾನಗಳಲ್ಲಿಯೂ ಹೆಸರು ಮಾಡಿದ ಅಂಬಾಪ್ರಸಾದ್ ಅಭಿನಯದ ಹಲವು ಯಕ್ಷಗಾನ ಪ್ರಸಂಗಗಳ ಸಿಡಿ, ಡಿವಿಡಿಗಳು ಬಿಡುಗಡೆಯಾಗಿವೆ.

ದಾಕ್ಷಾಯಿಣಿ, ದೇವಿ, ದಮಯಂತಿ, ಪ್ರಮೀಳೆ, ಚಂದ್ರಮತಿ, ಸೀತೆ ಮುಂತಾದ ಪಾತ್ರಗಳೆಡೆಗೆ ಆಸಕ್ತಿ, ಮೆಚ್ಚುಗೆ ಇರುವ ಜೂನಿಯರ್ ಪಾತಾಳ ಗರತಿ ಪಾತ್ರಗಳಿಗೆ ಸೈ ಅನ್ನಿಸಿಕೊಂಡವರು. ತುಳುಯಕ್ಷಗಾನದಲ್ಲಿ ಗೆಜ್ಜೆದ ಪೂಜೆಯ ಇವರ ಸ್ತ್ರೀ ಪಾತ್ರ ಹೆಸರುವಾಸಿ. ಸಮ್ಮಾನ- ಬಿರುದಾವಳಿಗಳು ಬಗಲಿಗಿದ್ದರೂ, ಅಂಬಾಪ್ರಸಾದ್ ಜೀವನಾನುಭವ ಮತ್ತು ಸರಳತೆಯೇ ಮೂರ್ತಿವೆತ್ತಂತಿರುವ ಸಭ್ಯ ನಡೆನುಡಿಯ ನಿಗರ್ವಿ.

ಅಂಬಾ ಪ್ರಸಾದ್ ಪಾತಾಳ

· ಸ್ತ್ರೀ ಪಾತ್ರಕ್ಕೆ ಪುರುಷ ಪಾತ್ರದಷ್ಟು ಪ್ರಾಧಾನ್ಯತೆ ಇಲ್ಲ, ಮನ್ನಣೆ ಕಡಿಮೆ, ತೊಂದರೆ ಹೆಚ್ಚು ಎಂದೆನಿಸಿದೆಯೇ?

ಸ್ತ್ರೀ ಪಾತ್ರ ನಿರ್ವಹಣೆ ನನಗೆ ಒಳ್ಳೆಯ ಹೆಸರು, ಘನತೆ, ಮನ್ನಣೆ ತಂದಿದ್ದಂತೂ ಸತ್ಯ. ಆದರೆ ಮೊದಲಿನ ಕಾಲಕ್ಕೆ ಸ್ತ್ರೀಪಾತ್ರವೆಂಬುದು ತೀರಾ ಸಾಮಾನ್ಯ ಮನೆಗೆಲಸದ ಹೆಣ್ಣಿನ ಹಾಗಿದ್ದದ್ದು ಹೌದು. ಅಲಂಕಾರ, ಆಭರಣ, ವೇಷಭೂಷಣಗಳ ಬಳಕೆ ಹೆಚ್ಚಿಗಿರಲಿಲ್ಲ. ಆದರೆ ಈಗ ಹಾಗಲ್ಲ.

ಸ್ತ್ರೀಪಾತ್ರವನ್ನು ನಿರ್ಲಕ್ಷ್ಯ ಮಾಡಿದ್ದಾರೆಂದು ಅನ್ನಿಸುವುದಿಲ್ಲ. ಪಾತ್ರದ ಪ್ರಾಮುಖ್ಯತೆ ಪ್ರಸಂಗಗಳನ್ನಾಧರಿಸಿರುತ್ತದೆ. ಉದಾ : ದಕ್ಷಾಧ್ವರದ ದಾಕ್ಷಾಯಿಣಿ, ಪ್ರಮೀಳಾರ್ಜುನದ ಪ್ರಮೀಳೆ, ಕೃಷ್ಣಾರ್ಜುನ ಕಾಳಗದ ಸುಭದ್ರೆ, ದಮಯಂತಿ, ಅಂಬೆ…ಹೀಗೆ. ಆದರೆ ಕೆಲವು ಪ್ರಸಂಗಗಳಲ್ಲಿ ಸ್ತ್ರೀಪಾತ್ರಕ್ಕೆ ಅಷ್ಟು ಅವಕಾಶವಿರುವುದಿಲ್ಲ. ಉದಾ : ಅತಿಕಾಯ ಕಾಳಗ, ರಾವಣ ವಧೆ, ಇಂದ್ರಜಿತು ಕಾಳಗಗಳಲ್ಲಿ ಪುರುಷ ಪಾತ್ರ ಮೆರೆದು, ಸ್ತ್ರೀ ಪಾತ್ರ ಗೌಣವಾಗುತ್ತದೆ. ಅದು ಸಹಜ.

ಜೊತೆಗೆ ಹುಡುಗಿಯರನ್ನು ಛೇಡಿಸಿದಂತೆ ಸ್ತ್ರೀಪಾತ್ರದವರನ್ನೂ ಪಡ್ಡೆ ಹುಡುಗರು ಕೀಟಲೆ ಮಾಡುವ ಸಂದರ್ಭ ಮೊದಲಿನ ಟೆಂಟಿನ ಮೇಳದ ಕಾಲದಲ್ಲಿತ್ತು. ಆದರೆ ಈಗ ಕಾಲ ಬದಲಾಗಿದೆ, ಅಂತಹ ಸಂದರ್ಭ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ ಆಗಿದೆ. ಕಲಾವಿದರ ಕುರಿತು ಅರಿವು ಕೂಡಾ ಜನಸಾಮಾನ್ಯರಿಗಿದೆ.

· ಎಂತಹ ಅಭಿವ್ಯಕ್ತಿ ಸ್ತ್ರೀಪಾತ್ರ ನಿರ್ವಹಣೆಗೆ ಬೇಕು?

ಕೇವಲ ವೇಷ ಕಟ್ಟಿದರೆ ಸಾಕಾಗುವುದಿಲ್ಲ. ವೇಷ ಮತ್ತು ಪಾತ್ರಕ್ಕೆ ತಕ್ಕಂತೆ ಹಾವ-ಭಾವ-ಭಾಷೆ- ಅಭಿನಯ-ಬೆಡುಗು- ಬಿನ್ನಾಣ- ಧ್ವನಿ- ನೃತ್ಯ ಸ್ತ್ರೀವೇಷಧಾರಿಗೆ ಬೇಕೇ ಬೇಕು. ಅದರಲ್ಲೂ ಪರಂಪರೆಯ ಶುದ್ಧ ನಾಟ್ಯವನ್ನು ಬಳಸಿ ಮಾಡುವುದು ಒಳ್ಳೆಯದು. ಒಮ್ಮೊಮ್ಮೆ ಜನರ ಒತ್ತಡದಿಂದ ಸಾಂದರ್ಭಿಕವಾಗಿ ನಾನೂ ವಿಭಿನ್ನ ತಿಟ್ಟುಗಳ ನೃತ್ಯಪದ್ಧತಿ ಮಿಶ್ರ ಮಾಡಬೇಕಾಗಿ ಬಂದು ಹೊಸ ಬಗೆಯ ಹೆಜ್ಜೆಗಳನ್ನು ಬಳಸಿದರೆ ಜನಪ್ರಿಯತೆ ಸಿಕ್ಕುತ್ತದೆ ನಿಜ, ಆದರೆ ಸಂತೃಪ್ತಿ, ಸಮಾಧಾನವಾಗುವುದಿಲ್ಲ.

ನಾನೂ ಒಮ್ಮೊಮ್ಮೆ ತಂದೆಯವರ ಆವಿಷ್ಕಾರಗಳನ್ನು, ಮಾರ್ಪಾಟುಗಳಿಂದಾದ ವಸ್ತ್ರವಿನ್ಯಾಸ, ಆಭರಣಗಳನ್ನು ಸಂದರ್ಭಾನುಸಾರ ಉಪಯೋಗಿಸುತ್ತೇನೆ. ನಾವು ಸ್ತ್ರೀವೇಷ ಮಾಡಿದರೆ ಅದರಿಂದ ಸಭೆಯಲ್ಲಿರುವ ಮಹಿಳೆಯರು ಭಾವಪೂರಿತವಾಗಿ ಕಣ್ತುಂಬಿಕೊಳ್ಳುವಂತೆಯೋ, ಏನಾದರೂ ಕಲಿತುಕೊಳ್ಳ್ಳುವಂತೆಯೋ ಇರಬೇಕು.

· ಸ್ತ್ರೀ ಪಾತ್ರದ ಆಯುಷ್ಯ ಕಡಿಮೆ ಎಂಬ ಮಾತನ್ನು ಒಪ್ಪುತ್ತೀರಾ?

ಹ್ಞುಂ..ವಾಸ್ತವ ಸತ್ಯ. ಸಾಮಾನ್ಯವಾಗಿ ಕಲಾವಿದನಿಗೆ ವೃತ್ತಿ ರಂಗಭೂಮಿಯಲ್ಲಿ ೨೫ವಯಸ್ಸು ಬರುವವರೆಗೆ ಮುಖ್ಯ ಸ್ತ್ರೀವೇಷದ ಸ್ಥಾನಮಾನ ಸಿಗುವುದಿಲ್ಲ. ಅಷ್ಟರವರೆಗೂ ಆತ ಪಳಗಲೇಬೇಕು. ನಂತರದ ೨೫ ರಿಂದ ೩೫ನೇ ವರ್ಷದ ವಯಸ್ಸು ಸ್ತ್ರೀ ಪಾತ್ರಧಾರಿಗೆ ಮೆರೆವ ಕಾಲ. ನಂತರ ನಿಧಾನವಾಗಿ ಬೇಡಿಕೆ ಕುಗ್ಗುತ್ತಾ ಬರುತ್ತದೆ. ಇದಕ್ಕೆ ಶರೀರಸ್ಥೂಲವಾಗುವುದು, ದೇಹಕ್ಕೆ ಕಸುವಿಲ್ಲದಿರುವುದು, ಮುಖದಲ್ಲಿ ನೆರಿಗೆ ಬೀಳುವುದು, ಆಂಗಿಕ ಅಭಿನಯ ಕಡಿಮೆಯಾಗುತ್ತಾ ಬರುವುದೂ ಕಾರಣ. ನಂತರ ಆತ ಗರತಿ ಪಾತ್ರಕ್ಕೆ ಸೀಮಿತವಾಗುತ್ತಾ ಬರುತ್ತಾನೆ. ೫೦ನೇ ವಯಸ್ಸಿಗಾಗುವಾಗ ಗರತಿ ಪಾತ್ರವೂ ಕುಸಿಯುತ್ತದೆ.

ಹಾಗಾಗಿ ಹೆಸರು ಉತ್ತುಂಗದಲ್ಲಿರುವಾಗಲೇ ಸ್ತ್ರೀಪಾತ್ರ ನಿರ್ವಹಣೆಯಿಂದ ವಿಮುಖರಾದರೆ ಕಲಾವಿದನ ಹೆಸರು ಮತ್ತು ಪಾತ್ರಗಳು ಚಿರಸ್ಥಾಯಿಯಾಗಿ ನಿಲ್ಲುತ್ತವೆ. ಇಲ್ಲವಾದರೆ ಯಾಕಾದರೂ ಇನ್ನೂ ಮಾಡ್ತಾರೋ ಅಂತ ಹೇಳಿಸಿಕೊಳ್ಳುವುದು ಉಚಿತವಲ್ಲ. ಕಲಾವಿದನೊಬ್ಬನ ಸ್ತ್ರೀಪಾತ್ರದ ಅಭಿಮಾನಿಗಳು ೭೫ ಶೇಕಡಾ ಇದ್ದರೆ, ಆತ ವಯಸ್ಸಾದ ನಂತರವೂ ಮಾಡಹೊರಟಾಗ ಮೊದಲು ಮಾಡಿಕೊಂಡಿದ್ದ ಅನುಭವ ಮೆಚ್ಚಿ ಒಪ್ಪಿಕೊಳ್ಳುತ್ತಾರೆಯೇ ವಿನಾ ಹೊಸ ಪೀಳಿಗೆಯ ಜನರಿಗೆ ಆಕರ್ಷಕವಾಗಿರುವುದಿಲ್ಲ.

· ಯಕ್ಷಗಾನಕ್ಕೆ ಎಂತಹ ಬೆಳವಣಿಗೆಗಳು ಬೇಕು?

ನನ್ನ ತಂದೆಯವರು ಮಾಡಿದಂತೆ ಪಾತ್ರನಿರ್ವಹಣೆ ಈಗ ಕಷ್ಟ. ಹೊಸಬರಲ್ಲಂತೂ ತೀರಾ ವಿರಳವೆನ್ನುವ ಹಾಗೆ ಸ್ತ್ರೀ ಪಾತ್ರ ಒಪ್ಪುತ್ತಾರೆ. ಮಾಡಿದರೂ ಸಿನಿಮೀಯವೇ ಜಾಸ್ತಿ. ಇದರಿಂದಾಗಿ ಮುಂದಿನ ಜನಾಂಗಕ್ಕೆ ಯಕ್ಷಗಾನವು ಕೇವಲ ಸಿನಿಮೀಯವೆಂಬ ಕಲ್ಪನೆ ಬರುವ ಸಾಧ್ಯತೆಯಿದೆ. ಧರ್ಮಸ್ಥಳದ ಲಲಿತಕಲಾ ಕೇಂದ್ರ, ಉಡುಪಿಯ ಯಕ್ಷಗಾನ ಕೇಂದ್ರಗಳಲ್ಲಷ್ಟೇ ಅಲ್ಲದೆ ಯಕ್ಷಗಾನ ಕಲಿಕಾ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು. ಸರ್ಕಾರವೂ ಈ ನಿಟ್ಟಿನಲ್ಲಿ ಮನಸ್ಸುಮಾಡಿದರೆ ಒಳ್ಳೆಯದು.

—————-

ಸ್ತ್ರೀ ಪಾತ್ರವು ಕೇವಲ ಕುಣಿತದ ವೇಷವಾಗದೆ ನರ್ತಿಸುವ ವೇಷವಾಗಬೇಕು :

ಬೇಗಾರ್ ಶಿವಕುಮಾರ್

೧೯೮೨ರಲ್ಲಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ನಡೆದ ಆಯ್ಕೆಯಲ್ಲಿ ಕೋಟ ಶಿವರಾಮ ಕಾರಂತರಿಂದ ಆಯ್ಕೆಯಾದ ೧೦ ಜನ ವಿದ್ಯಾರ್ಥಿಗಳಲ್ಲಿ ಆಗತಾನೇ ಏಳನೆ ತರಗತಿಯ ಶಿಕ್ಷಣ ಮುಗಿಸಿ ಸೇರಿದ ಪುಟ್ಟ ಹುಡುಗ ಬೇಗಾರ್ ಶಿವಕುಮಾರ್ ಕೂಡ ಒಬ್ಬರು. ೧೦ ತಿಂಗಳ ಕೋರ್ಸ್‌ನಲ್ಲಿ ನೀಲಾವರ ರಾಮಕೃಷ್ಣಯ್ಯ, ಹೆರಂಜಾಲು ವೆಂಕ್ರಟ್ರಮಣ, ಕೋಟ ಮಹಾಬಲ ಕಾರಂತರನ್ನು ಗುರುವಾಗಿ ಪಡೆದವರು. ಮೊದಲು ಬಣ್ಣ ಹಚ್ಚಿದ್ದು ಬಾಲಗೋಪಾಲ ನೃತ್ಯವೇಷಕ್ಕೆ. ಮೊದಲು ಸೇರಿದ್ದು ಮೂಲ್ಕಿ ಮೇಳ. ಆದರೆ ಸಣ್ಣ ಪ್ರಾಯಕ್ಕೆ ಯಕ್ಷಗಾನ ವಾತಾವರಣಕ್ಕೆ ಒಗ್ಗಿಕೊಳ್ಳಲು ಕಷ್ಟವಾಗಿ ಹಣ್ಣಿನ ಅಂಗಡಿಯಲ್ಲಿ ವೃತ್ತಿ. ಸ್ವಲ್ಪ ತಿಂಗಳ ನಂತರ ಬಿಟ್ಟೂ ಬಿಡದ ಮಾಯೆಗೆ ಸಿಲುಕಿ ಕಮಲಶಿಲೆ ಬಯಲಾಟ ಮೇಳಕ್ಕೆ ಆಯ್ಕೆಯಾಗಿ ಎರಡನೇ ದಿನವೇ ಸ್ತ್ರೀವೇಷದ ನಿರ್ವಹಣೆ. ಸ್ತ್ರೀವೇಷದ ಬಗ್ಗೆ ಇಷ್ಟವಿಲ್ಲದಿದ್ದರೂ, ನಂತರ ಪ್ರಶಂಸೆ ಒತ್ತಾಯಗಳ ಸುರಿಮಳೆ. ೪ವರ್ಷ ಸತತವಾಗಿ ಸ್ತ್ರೀವೇಷ, ಒಮ್ಮೆ ಬಾಲಗೋಪಾಲ. ಅದರಲ್ಲೂ ಹಿರಿಯ ಕಲಾವಿದರಿದ್ದರೂ ದೇವಿ ಪಾತ್ರಗಳನ್ನು ಮಾಡಿಸಲು ಮುಗಿಬೀಳುವ ಕಾಲ. ಮತ್ತೆಂದೂ ಪುರುಷ ಪಾತ್ರಗಳ ಕಡೆಗೆ ತಿರುಗಿ ನೋಡದಂತೆ ಜನಪ್ರಿಯರಾದದ್ದು ನಂತರದ ಇತಿಹಾಸ.

ನಂತರ ೨ ವರ್ಷ ಅಮೃತೇಶ್ವರಿ ಮೇಳ, ಸಾಲಿಗ್ರಾಮಕ್ಕೆ ಆಯ್ಕೆಯದರೂ, ಅಭಿಮಾನದ ಕಾಳಿಂಗ ನಾವುಡರ ಆಕಸ್ಮಿಕ ನಿಧನದಿಂದಾಗಿ ಚೌಕೂರು ಮೇಳದಲ್ಲಿ ಸೇವೆ. ಧರ್ಮಸ್ಥಳ ಮೇಳದ ಆಹ್ವಾನವಿದ್ದರೂ, ಕಲಿತದ್ದು ಬಡಗುತಿಟ್ಟಿನಲ್ಲಾದರೂ, ತೆಂಕುತಿಟ್ಟಿನ ನೃತ್ಯದಲ್ಲೂ ಒಗ್ಗಿಕೊಳ್ಳುವ ಹಠ, ವಿಶ್ವಾಸ. ವೇಷಕ್ಕಾಗಿ ಕಾದು ಕುಳಿತ ಬೇಗಾರರಿಗೆ ಸಿಕ್ಕಿದ್ದು ಕುಂತಿಯ ಪಾತ್ರ ; ಅದೂ ೨ವರ್ಷದ ನಂತರ. ಅದಾದ ಮೇಲೆ ಗಟ್ಟಿ ಪಾತ್ರಗಳು ಒದಗಿ ೧೨ ವರ್ಷಕಾಲ ಧರ್ಮಸ್ಥಳ ಮೇಳದಲ್ಲಿ ಪಾತ್ರ ನಿರ್ವಹಣೆ. ಆದರೆ ಅದೂ ಒಂದು ಮಿತಿ ಎನ್ನಿಸಿದಾಗ, ಬೆಂಗಳೂರಿಗೆ ತೆರಳಿ ಕಲಿಕಾಕೇಂದ್ರ ಪ್ರಾರಂಭಿಸಿ ಕಳೆದ ೮ ವರ್ಷದಿಂದ ಗಾನಸೌರಭ ಯಕ್ಷಗಾನ ಶಾಲೆಯನ್ನು ನಿರ್ವಹಿಸುತ್ತಿದ್ದಾರೆ. ಮೈಸೂರು-ಕರಾವಳಿ ಮಿತ್ರ ಯಕ್ಷಗಾನ ಕಲಾಕೇಂದ್ರದಲ್ಲಿ ೨ ವರ್ಷ ಗುರುವಾಗಿ ಪಾಠ ಕಲಿಸಿದ್ದಾರೆ. ತೆಂಕು-ಬಡಗಿನ ನೃತ್ಯದೊಂದಿಗೆ ಚೆಂಡೆ, ಮದ್ದಳೆ, ಭಾಗವತಿಕೆಯ ಪಾಠಗಳನ್ನು ಕಲಿಸುವಲ್ಲಿ ನಿರತರಾಗಿರುವ ಶಿವಕುಮಾರ್ ಗರಡಿಯಲ್ಲಿ ಮಕ್ಕಳು, ವಕೀಲರು, ಐಪಿ‌ಎಸ್, ಇಂಜಿನಿಯರ್ಸ್ ಮುಂತಾದ ಎಲ್ಲ ಬಗೆಯ ವರ್ಗದ ವಿದ್ಯಾರ್ಥಿಗಳಿದ್ದಾರೆ. ಹೋಟೆಲ್ ಉದ್ಯಮದವರ ಗುಂಪಿನ ಯಕ್ಷಗಾನ, ಹೈಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ವಕೀಲರನ್ನೇ ಆಯ್ದು ಯಕ್ಷಗಾನ…ಹೀಗೆ ಸಂಪ್ರದಾಯ, ಪ್ರಯೋಗ ಮತ್ತು ನಾವೀನ್ಯತೆಯ ನೆಲೆಯಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ಕಳೆದ ೨೮ ವರ್ಷಗಳಲ್ಲಿ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬೇಗಾರ್ ಶಿವಕುಮಾರ್

· ಸ್ತ್ರೀ ಪಾತ್ರಧಾರಿಗೆ ಇರಬೇಕಾದ ಮನೋಭಾವ ಏನು?

ಕಲಾವಿದನಾದವನಿಗೆ ತಾಳ್ಮೆ, ಅಧ್ಯಯನಶೀಲತೆ ಬೇಕು. ಅಧ್ಯಯನ ಇಲ್ಲದಿದ್ದರೆ ಏನೂ ಪ್ರಯೋಜನವಾಗುವುದಿಲ್ಲ. ಈಗೇನಾಗಿದೆ ಅಂದರೆ; ಪ್ರಸಂಗದಲ್ಲಿ ತನಗೆ ಇರುವುದು ಒಂದೇ ಪದ್ಯ. ಅದರಲ್ಲೇನಿದೆ ಮಹಾ? ಎಂಬ ಯೋಚನೆ. ಅದು ಪದ್ಯ ಅಥವಾ ಸಮಯದ ಪ್ರಶ್ನೆ ಅಲ್ಲ. ಒಂದು ಸಲ ರಂಗಕ್ಕೆ ಹೋಗುವುದು ಎಂದರೂ ಅದು ಯೋಗ್ಯತೆಯೇ ಹೌದು ! ಹಾಗಾಗಿ ಪಾತ್ರ ಮತ್ತು ರಂಗದ ಬಗ್ಗೆ ಗೌರವ ಇರಬೇಕು. ಹಿರಿ-ಕಿರಿಯ ಕಲಾವಿದರು ಪಾತ್ರ ಮಾಡುವುದನ್ನು ನೋಡುವುದಕ್ಕೆ ಅಭ್ಯಾಸ ಮಾಡಬೇಕು. ಬೇರೆ ಬೇರೆ ಪ್ರದರ್ಶನ ಮತ್ತು ವ್ಯಕ್ತಿಗಳ ಒಳ್ಳೆಯ ಅಂಶಗಳನ್ನು ಗ್ರಹಿಸಿ, ನಮ್ಮ ಮಟ್ಟದಲ್ಲಿ ತೆಗೆದುಕೊಂಡು ಬಂದು ಪಾತ್ರ ಮಾಡಲು ಪ್ರಯತ್ನಿಸಬೇಕು. ಹಾಗಂತ ಅನುಕರಣೆ ಸಲ್ಲದು.

ಒಂದೇ ಬಗೆಯ ಅರ್ಥಗಳನ್ನು ಹೇಳಿದರೆ ಯಾರಿಗೂ ಇಷ್ಟವಾಗುವುದಿಲ್ಲ. ಆದ್ದರಿಂದ ಸಂದರ್ಭಕ್ಕೆ ಸರಿಯಾಗಿ ವೈವಿಧ್ಯಮಯವಾಗಿ ಅರ್ಥ ಹೇಳಲು ಕಲಿಯಬೇಕು. ಸಭೆಯಿಂದ ನಮ್ಮ ಪಾತ್ರವನ್ನು ನೋಡುವಾಗ ಸಭಿಕನಿಗೆ ಹೆಣ್ಣುವೇಷವಷ್ಟೇ ಅದು ಎನಿಸಬಾರದು. ಬದಲಾಗಿ ಆ ಪಾತ್ರವೊಂದು ಅವರವರ ಕುಟುಂಬದ ಹೆಣ್ಣಾಗಿರುವ ಕಲ್ಪನೆ ಕೊಡಬೇಕು. ಉದಾ: ಅಮ್ಮ, ಅಕ್ಕ, ಪ್ರೇಯಸಿ ಇತ್ಯಾದಿ.

· ಸ್ತ್ರೀಯರು ಸ್ತ್ರೀಪಾತ್ರಕ್ಕೆ ಒಗ್ಗುವುದಿಲ್ಲವೇ?

ಸ್ತ್ರೀಯರು ಸ್ತ್ರೀಪಾತ್ರ ಮಾಡಿದರೆ ಆಗದು ಎಂದಿಲ್ಲ. ಆದರೆ ಯಕ್ಷಗಾನ ಮನೋಧರ್ಮ ಮತ್ತು ಪ್ರೇಕ್ಷಕರಿಗೆ ಇರುವ ಕಲ್ಪನೆ ಈ ಪಾತ್ರ ಹೀಗೆಯೇ ಇರುತ್ತದೆ ಎಂದು ಅಭ್ಯಾಸ ಆಗಿ ಆಗಿ ಸ್ತ್ರೀಯೇ ಬಂದು ಪಾತ್ರ ಮಾಡಿದರೂ ಅದು ರುಚಿಸದೆ ಹೋಗಬಹುದು. ಮಹಿಳೆಯರು ತಮ್ಮದೇ ಎನಿಸುವ ಸ್ತ್ರೀಪಾತ್ರವನ್ನು ಮಾಡಿದಾಗ ಚೆಂದ ಕಾಣದಿರುವ ಸಂದರ್ಭವೇ ಜಾಸ್ತಿ. ಪ್ರೇಕ್ಷಕರೂ, ಕಲಾವಿದರು ಮತ್ತು ಸ್ತ್ರೀಯರೂ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

· ಸ್ತ್ರೀ ಪಾತ್ರಧಾರಿಗೆ ವ್ಯಕ್ತಿತ್ವದಲ್ಲಿ ಇರಬೇಕಾದ ಔಚಿತ್ಯ, ಅನೌಚಿತ್ಯಗಳೇನು?

ವ್ಯಕ್ತಿಯ ನಡವಳಿಕೆ ಮೇಲೆ ಸ್ತ್ರೀ ಪಾತ್ರಧಾರಿಯ ಗೌರವ ನಿಂತಿರುತ್ತದೆ. ನನ್ನ ಜೀವನದಲ್ಲಿ ಈವರೆಗೂ ನನ್ನನ್ನು ಯಾರೋ ಕೀಳಾಗಿ ಕಂಡ ಪ್ರಸಂಗವಿಲ್ಲ. ನಿತ್ಯಜೀವನದಲ್ಲಿಯೂ ಹೆಣ್ತನವೇ ರೂಢಿಸಿಕೊಂಡರೆ ಮಾತ್ರ ಗಂಡು ಹೆಣ್ಣಾಗುತ್ತಾನೆ. ವರ್ತನೆ, ನಡವಳಿಕೆಯೇ ಇಲ್ಲಿ ಪ್ರಮುಖ. ಸಾಮಾನ್ಯ ಜೀವನದಲ್ಲಿಯೂ ಸ್ತ್ರೀಪಾತ್ರಧಾರಿ ಗಂಡು ಗಂಡೇ ಆಗಿ ಇರಬಹುದು. ಹೆಣ್ತನವನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವ ಅನಿವಾರ್ಯತೆ, ಅವಶ್ಯಕತೆ ಎರಡೂ ಇಲ್ಲ. ಒಂದುವೇಳೆ ಹೆಣ್ಣಿನಂತೆಯೇ ರಂಗದ ಹೊರಗೂ ನಡೆದುಕೊಳ್ಳುತ್ತಾರೆಂದರೆ ಅದು ಕಲಾವಿದನ ದೌರ್ಬಲ್ಯ.

ಪ್ರಸಂಗಗಳಲ್ಲಿ ಮಾಡುವಾಗ ಮೌಲ್ಯಗಳನ್ನು ತಿಳಿದುಕೊಳ್ಳುವ ಅಂಶಗಳು ಬಹಳ ಇರುತ್ತದೆ. ಒಂದುವೇಳೆ ನಮ್ಮ ಜೀವನದಲ್ಲೂ ಸಂದಿಗ್ಧ ಸಂದರ್ಭಗಳು ಎದುರಾದಾಗ ದಮಯಂತಿ, ಸಾವಿತ್ರಿ ಪಾತ್ರ ಮಾಡುವವರು ಅನ್ಯಾಯ ಮಾಡಬಾರದಲ್ಲವೇ ಎಂಬ ಪ್ರಜ್ಞೆ ಎಚ್ಚರಿಕೆ ಜಾಗೃತವಾಗುತ್ತದೆ.

· ಈಗಿನ ಒಟ್ಟು ಸ್ತ್ರೀಪಾತ್ರಗಳ ಅಭಿವ್ಯಕ್ತಿ ತೃಪ್ತಿಕರವಾಗಿದೆಯೇ?

ಸ್ತ್ರೀವೇಷದಲ್ಲಿ ಬದಲಾವಣೆ ಅತಿಯಾಗಿದೆ. ಈವಾಗೆಲ್ಲಾ ಕೇವಲ ಪಾತ್ರಪ್ರವೇಶಕ್ಕೇ ತುಂಬಾ ಹೊತ್ತು ಕುಣಿಸುತ್ತಾರೆ. ಅದು ನಿಜವಾಗಿಯೂ ಅನೌಚಿತ್ಯ. ಯಕ್ಷಗಾನಕ್ಕೆ ವ್ಯಕ್ತಿಯಲ್ಲ ಬೇಕಾಗಿರುವುದು. ಆದರೆ ಪಾತ್ರಕ್ಕಿಂತಲೂ ಕಲಾವಿದನನ್ನು ನೋಡಿ ಪ್ರಸಂಗವನ್ನು ಹೈಲೈಟ್ ಮಾಡುವುದು ಹೆಚ್ಚಾಗುತ್ತಿದೆ. ಯಾವ ಕಲಾವಿದನೇ ಆಗಲಿ, ವೈಯಕ್ತಿಕವಾದ ಪ್ರತಿಷ್ಠೆಯನ್ನು ಪ್ರಯೋಗ ಮಾಡಲಿಕ್ಕೆ ರಂಗದ ಮೇಲೆ ಹೋಗಬಾರದು. ಪಾತ್ರದ ಚೌಕಟ್ಟು, ಗೌರವದ ಮಿತಿಯಲ್ಲೇ ಕಲಾವಿದ ವರ್ತಿಸಿದನೆಂದರೆ ಅದು ಎಲ್ಲಾ ದೃಷ್ಟಿಯಲ್ಲೂ ಸಮಂಜಸವಾಗುತ್ತದೆ.

· ಸ್ತ್ರೀ ವೇಷಧಾರಿಯ ಪಾತ್ರ ನಿರ್ವಹಿಸುವ ಆಯಸ್ಸು ಹೆಚ್ಚಾಗಲು ಏನು ಮಾಡಬಹುದು?

ವಯಸ್ಸು ಮುಂದುವರಿಯುತ್ತಿದ್ದಂತೆ ಸ್ತ್ರೀವೇಷ ಮಾಡುವವನು ಜಾಗೃತನಾಗಬೇಕು. ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ವ್ಯಸನಗಳಿಂದಂತೂ ಕಲಾವಿದ ಬಹಳಷ್ಟು ದೂರವಿರಬೇಕು. ಪ್ರಾಯದ ಸೌಂದರ್ಯವನ್ನು ನಾವೆಲ್ಲಿಯ ತನಕ ಉಳಿಸಿಕೊಳ್ಳುತ್ತೇವೆಯೋ ಅದು ಅಷ್ಟು ಅನುಕೂಲಕರ. ಕಾರಣ, ಸ್ತ್ರೀವೇಷದಲ್ಲಿ ಮೊದಲು ಗಮನಿಸುವುದು ಸೌಂದರ್ಯ. ಚೆಂದ ಇಲ್ಲ ಎಂತಾದರೆ ಎಷ್ಟೇ ವಿದ್ವತ್ತಿದ್ದರೂ ಮುಖ ನೋಡಲಿಕ್ಕಾಗದಷ್ಟು ಪೇಲವವಾಗುತ್ತದೆ. ಇನ್ನು ಈ ಕಲಾವಿದ ಅಭಿನಯಿಸಬಾರದು ಎಂದು ಜನರಿಂದ ಹೇಳಿಸಿಕೊಳ್ಳುವಂತಾಗುತ್ತದೆ. ಹಾಗಾಗಿ ಸ್ತ್ರೀಪಾತ್ರಧಾರಿಗಳು ಬೇಗ ನಿವೃತ್ತರಾಗುವುದು ಒಳ್ಳೆಯದು. ಆ ಹೊತ್ತಿಗೆ ಪುರುಷ ಪಾತ್ರದ ಬಗ್ಗೆ ಒಲವು ತೋರಿಸುವುದೋ ಅಥವಾ ಶಿಕ್ಷಣದ ಕುರಿತಾಗಿ ಕಾರ್ಯೋನ್ಮುಖರಾಗುವುದೋ ಒಳ್ಳೆಯದು. ೩೦-೩೫ ವರ್ಷದ ತನಕ ಮೋಹಿನಿ, ಮಾಯಾ ಶೂರ್ಪಣಖಿ, ಮೇನಕೆಯನ್ನೋ ಮಾಡಬಹುದು. ಆದರೆ ೫೦-೬೦ ವರ್ಷದ ನಂತರವೂ ಮೋಹಿನಿಯಂತಹ ಪಾತ್ರವೇ ಮಾಡಬೇಕು ಎಂದರೆ ಅದು ಸೂಕ್ತವೇ?

· ಆದರ್ಶ ಸ್ತ್ರೀಪಾತ್ರದ ಕಲ್ಪನೆ ನಿಮ್ಮ ದೃಷ್ಟಿಯಲ್ಲಿ?

ಒಂದು ಸಮಯದಲ್ಲಿ ಸ್ತ್ರೀವೇಷಕ್ಕೆ ಪ್ರಾಮುಖ್ಯತೆ ಕೊಡದಿರುವ ಸಂದರ್ಭಗಳಿತ್ತು. ಆದರೆ ಕೆಲವು ಪಾತ್ರಧಾರಿಗಳು ಸಂದರ್ಭವನ್ನು ಉತ್ತಮವಾಗಿ ಬಳಸಿಕೊಂಡರೆ ; ಕೆಲವರು ಅವಕಾಶವನ್ನು ದುರ್ಬಳಕೆ ಮಾಡುತ್ತಾರೆ. ಆದರೆ ಸ್ತ್ರೀವೇಷಧಾರಿ ಯಾವತ್ತಿಗೂ ಕುಣಿತದ ಹೆಣ್ಣು ಅನ್ನುವಂತಾಗಬಾರದು. ನರ್ತಿಸುವ ವೇಷವಾಗಬೇಕು. ಆ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿಯೂ ಆತ್ಮೀಯವಾಗಿ ನರ್ತಿಸಬೇಕು. ಆಗಲೇ ಪಾತ್ರ ಮತ್ತು ವ್ಯಕ್ತಿ ಇಬ್ಬರೂ ಉಳಿಯಲು ಸಾಧ್ಯ. ಅಭಿನಯವನ್ನು ಮನಸ್ಸಿನಲ್ಲಿ ಅನುಭವಿಸದೆ, ದುಃಖದ ಪಾತ್ರದಲ್ಲಿ ಅಳದೆ ಇದ್ದರೆ ಭಾವನೆ ತುಂಬಿ ಬರುವುದಿಲ್ಲ. ಸಹಜತೆಯೂ ಬೇಕಾಗುತ್ತದೆ.

ಒಂದು ಸಂಸಾರದಲ್ಲಿ ಹೇಗೆ ಸ್ತ್ರೀ ತಾಳ್ಮೆಯಿಂದ ಜೀವನ ಸಾಗಿಸುತ್ತಾಳೋ ಹಾಗೆ ತಾಳ್ಮೆಯಿಂದ ಪ್ರಸಂಗವನ್ನು ನಡೆಸಿಕೊಂಡು ಹೋಗುವ ಸಾಮರ್ಥ್ಯ, ಜವಾಬ್ದಾರಿಯುತ ಸ್ಥಾನ ಸ್ತ್ರೀವೇಷಕ್ಕಿರುತ್ತದೆ. ಯಾವ ಪ್ರಸಂಗದಲ್ಲಿ ಸ್ತ್ರೀವೇಷವಿಲ್ಲವೋ ಅದು ನೀರಸ. ಹಾಗೆಂದು ಜನಮನ್ನಣೆ ಗಳಿಸಿದಂತೆ ಅಹಂಕಾರ ಬೇಗ ಬೆಳೆದು ಬರುವುದು ಮಾಮೂಲಿ. ಅಂತಹ ಅಹಂಕಾರ ಬಂದರೆ ಪಾತ್ರ, ವ್ಯಕ್ತಿ ಎರಡೂ ಮುಳುಗುತ್ತದೆ.

ಸವಾಲಿನ ಪಾತ್ರವೇ ಸ್ತ್ರೀವೇಷ. ಸ್ತ್ರೀಪಾತ್ರದಲ್ಲಿ ಯಾರೂ ಪುರುಷನನ್ನು ಪುರುಷನೆಂದೇ ಕಾಣುವುದಿಲ್ಲ. ಹೆಣ್ಣಾಗಿಯೇ ಗುರುತಿಸುತ್ತಾರೆ. ಹಾಗಾಗಿ ನಾವು ಮಾಡುವ ಪಾತ್ರ ಹೆಣ್ಣೇ ಎಂದೆನಿಸಬೇಕು. ಎಲ್ಲಿಯವರೆಗೆ ಮೋಹಕತೆ, ಮಾದಕತೆ, ಅಭಿನಯ, ಪಾತ್ರವ್ಯಕ್ತಿತ್ವದಲ್ಲಿ ಹೆಣ್ತನ ಇರುತ್ತದೋ ಅಲ್ಲಿಯವರೆಗೆ ಪಾತ್ರಗಳನ್ನು ಉತ್ತಮವಾಗಿ ಮಾಡಲು ಸಾಧ್ಯ.

————–

ಜನಾಕರ್ಷಣೆಯ ಪ್ರಯೋಗಗಳು ಕಲಾವಿದನ ಜೀವನದ ದೃಷ್ಟಿಯಿಂದ ಅನಿವಾರ್ಯ :

ಸುಬ್ರಹ್ಮಣ್ಯ ಯಲಗುಪ್ಪ

 

ಪಿಯುಸಿ ಶಿಕ್ಷಣ ಮುಗಿಸಿ, ಹಠಾತ್ ಆಗಿ ಜೀವನೋಪಾಯಕ್ಕೆ ಸಂಪಾದನೆಗೈಯಬೇಕಾದಾಗ ಆದಾಗಲೇ ಆಕರ್ಷಣೆಯಿದ್ದ ಕ್ಷೇತ್ರ ಯಕ್ಷಗಾನವೇ ಆದ್ದರಿಂದ ; ಪಿಯುಸಿ ರಿಸಲ್ಟ್ ಬರುವ ಮುಂಚೆಯೇ ಉಡುಪಿಯ ಕೇಂದ್ರಕ್ಕೆ ಹೋಗಿ ಕಲಿಕೆಗೆ ಆರಂಭಿಸಿದವರು ಸುಬ್ರಹ್ಮಣ್ಯ ಯಲಗುಪ್ಪ.. ಪದ್ಯ ಹೇಳಲು ಹೋದ ಯಲಗುಪ್ಪರಿಗೆ, ಹೆರಂಜಾಲು ಗುರುವಾಗಿ ದೊರೆತು ಪಾಲಿಷ್ ಆದ ಹೆಜ್ಜೆಗಳನ್ನು ಕಲಿತರು. ಗುರು ಸ್ತ್ರೀಪಾತ್ರವನ್ನೇ ನಿರ್ವಹಿಸುತ್ತಿದ್ದುದರಿಂದ ಅದಕ್ಕೇ ಶಿಷ್ಯನನ್ನು ತಿದ್ದಿ ಮೇಳಕ್ಕೆ ಅಡಿಯಿಡುವಂತೆ ಮಾಡಿದರು. ಅಂದಿಗೆ ಕಪ್ಪೆಕಡಿ ಸುಬ್ರಾಯ ಭಾಗವತರ ಒಡನಾಟ, ಮದ್ದಳೆಗಾರ ಪರಮೇಶ್ವರರ ಸ್ನೇಹ ಅಭಿನಯಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತ್ತು. ನಂತರ ಪೆರ್ಡೂರು ಮೇಳದಲ್ಲಿ ಧಾರೇಶ್ವರ ಮತ್ತು ಗುಡಿಗಾರರ ಸಂಗ. ಬಹುತೇಕ ಹೊಸಬರಿದ್ದ ಆ ಮೇಳದಲ್ಲಿ ಪ್ರಮುಖ ಪಾತ್ರಧಾರಿಯಾಗಿ ಶಿವರಂಜಿನಿ ಯಕ್ಷಗಾನದ ಮೂಲಕ ಸ್ಟಾರ್ ವ್ಯಾಲ್ಯು ಪಡೆದರು. ಆನಂತರ ಸಾಲಿಗ್ರಾಮ, ಕೆರೆಮನೆ ಮೇಳ. ನಂತರ ಪುನಾ ಹೊಸನಗರ, ಪೆರ್ಡೂರು ಮುಂತಾದ ವೃತ್ತಿಮೇಳಕ್ಕೆ ವಾಪಾಸ್ ಆದರು,

ಮೊದಲು ಸ್ವರ ಒಗ್ಗಿಸಿಕೊಳ್ಳುವುದು, ಬಾಗುಬಳುಕುವಿಕೆ ಹಿಡಿಸುತ್ತಿರಲಿಲ್ಲವಾದರೂ ನಂತರದ ದಿನಗಳಲ್ಲಿ ಬಹುಜನಪ್ರಿಯ ಸ್ತ್ರೀಪಾತ್ರಧಾರಿಯಾಗಿ ತಟ್ಟೆಕುಣಿತ, ಕುಂಭ ಕುಣಿತ ಇತ್ಯಾದಿಯಾಗಿ ಹಲವು ಬಗೆಯ ವಿನೂತನ ಪ್ರಯೋಗಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಹಿರಿಯ ಕಲಾವಿದರೊಂದಿಗಿನ ಅನುಭವ, ಕೆರೆಮನೆ ಮೇಳದಲ್ಲಿದ್ದಾಗ ಅಮೆರಿಕಾ ಪ್ರವಾಸದಿಂದ ಜಗತ್ತಿನ ಹಲವು ಕಲೆಗಳ ವೈವಿಧ್ಯ ಗಮನಿಸಲಿಕ್ಕೆ ಅನುವು ಅವರ ಅಭಿನಯಕ್ಕೆ ಒಂದೊಂದು ಆಯಾಮಗಳಾಗಿ ಸೇರಿಕೊಂಡಿದೆ.

ಸುಬ್ರಹ್ಮಣ್ಯ ಯಲಗುಪ್ಪ

· ಸ್ತ್ರೀವೇಷದ ಅಭಿವ್ಯಕ್ತಿಯಲ್ಲಿ ಜನಾಕರ್ಷಣೆ ಎಷ್ಟರಮಟ್ಟಿಗೆ ಮುಖ್ಯ?

ಇಂದಿಗೆ ಒಬ್ಬ ಪಾತ್ರಧಾರಿ ಎಷ್ಟರಮಟ್ಟಿಗೆ ಜನಾಕರ್ಷಣೆ ಮಾಡಿದ್ದಾನೆ ಎಂಬುದು ಮುಖ್ಯವಾಗುತ್ತದೆಯೇ ವಿನಾ ಹಿರಿಯ, ಅನುಭವಿ ಎಂಬ ಪಟ್ಟಗಳಲ್ಲ. ಕೆಲವೊಮ್ಮೆ ಕಲಾವಿದನ ಸತ್ತ್ವವನ್ನನುಸರಿಸಿ ಸಾಧ್ಯವಾಗಬಹುದೇನೋ. ಆದರೆ ನನಗೆ ಅಂತವರ ಒಡನಾಟ ಯಕ್ಷಗಾನೀಯವಾದ ಅನುಭವಗಳನ್ನು ಕೊಟ್ಟಿವೆ.

ಸಾಲಿಗ್ರಾಮ ಮೇಳದಲ್ಲಿ ಜನಾಕರ್ಷಣೆಗಾಗಿ, ಕ್ರೇಜ್‌ಗಾಗಿ ನೃತ್ಯದಲ್ಲಿ ಹಲವು ಸರ್ಕಸ್‌ಗಳನ್ನು ಮಾಡಿದೆ. ಯಕ್ಷಗಾನಕ್ಕೆ ಅಪಚಾರವೋ ಅಲ್ಲವೋ ಅದು ನನಗೆ ತಿಳಿಯದು. ಆದರೆ ಜೀವನ ರೂಪಿಸಿಕೊಳ್ಳುವ ದೃಷ್ಟಿಯಿಂದ ಒಳ್ಳೆಯದಾಗಿದೆ. ತೆಂಕು, ಬಡಗು, ಬಡಾಬಡಗಿನ ಕುಣಿತ ಶೈಲಿಗಳನ್ನು ಆಯಾಯ ಪಾತ್ರಕ್ಕನುಕೂಲವಾಗಿ ಬಳಸಿಕೊಳ್ಳುತ್ತೇನೆ. ಅದು ಈಗಿನ ಕಾಲಕ್ಕೆ ಬೇಕು ಕೂಡಾ ; ಜನ ಅದನ್ನು ಸ್ವೀಕರಿಸುತ್ತಾರೆ. ಶಿವರಂಜಿನಿಯ ನಂತರ ಮೇಳದಲ್ಲಿ ಸ್ತ್ರೀವೇಷದವರು ಯಾರು ಅಂತ ಕೇಳುವ ಮಟ್ಟಿಗೆ ಬಂತು. ಆಮೇಲೆ ಈ ಬಗೆಯ ಪಾತ್ರಗಳು ಹೆಚ್ಚಾಗುತ್ತಾ ಹೋಯಿತು. ಸ್ತ್ರೀವೇಷಕ್ಕೂ ಸಂಬಳ ಅಂತ ಮಾಡಿದ್ದು ಆಮೇಲೆಯೇ!

· ಯಕ್ಷಗಾನದಲ್ಲಿ ಸ್ತ್ರೀಪಾತ್ರ ಗೌಣವಾಗಲು ಕಾರಣವೇನಿರಬಹುದು?

ಯಕ್ಷಗಾನದಲ್ಲಿ ಪುರುಷಪಾತ್ರಕ್ಕಿರುವಷ್ಟು ಪ್ರಾಮುಖ್ಯತೆ ಸ್ತ್ರೀಪಾತ್ರಕ್ಕೆ ಮೊದಲಿನಿಂದಲೂ ಇಲ್ಲ. ಬಹುಷಃ ಪುರುಷವೇಷ ಪೌರಾಣಿಕ ಕಲ್ಪನೆ ಕೊಡುತ್ತಾ ಸಾಗಿ ಸ್ತ್ರೀವೇಷ ಗೌಣವಾಗುತ್ತಾ ಆಧುನಿಕತೆ ಬಿಂಬಿಸುತ್ತಿದ್ದುದೇ ಕಾರಣವಾಗಿರಬಹುದು. ಇದಕ್ಕೆ ಆಯಾಯ ಕಾಲದ ಸ್ತ್ರೀಪಾತ್ರಧಾರಿಗಳ ಸಾಮರ್ಥ್ಯದ ಕೊರತೆಯೂ ಇರಬಹುದು.

· ಸ್ತ್ರೀಪಾತ್ರದ ನಿರ್ವಹಣೆಗೆ ಯಾವ ಕ್ರಮಗಳು ಅಗತ್ಯ?

ಸಿಟ್ಟು, ಸೆಡವು, ಸಂತೋಷ, ದುಃಖ ಎಲ್ಲದರ ಪ್ರಕಟದಲ್ಲೂ ಹೆಣ್ಣು ಮತ್ತು ಗಂಡಿನ ಅಭಿವ್ಯಕ್ತಿ ಬೇರೆ ಬೇರೆ. ಹಾಗೆಂದು ಕೆಲವೊಂದು ದುಡುಕಿನ ಸ್ತ್ರೀವೇಷಗಳನ್ನು ಮಾಡಿದರೂ ಅದು ಹೆಣ್ತನದಲ್ಲಿಯೇ ಇರಬೇಕು. ಗಂಡುಕಲೆ ಎಂದು ಆಡುವುದಲ್ಲ. ಹೆಣ್ಣಿನ ಸಹಜತೆ-ಸೂಕ್ಷ್ಮತೆಗಳನ್ನು ಅರ್ಥೈಸಿ ಸರಿಯಾಗಿ ಅಭಿವ್ಯಕ್ತಿಸಬೇಕು. ಕೆಲವೊಂದು ಪಾತ್ರಗಳು ಕರುಣಾ ರಸದ್ದೇ ಆದರೂ ಅದರ ಅಭಿವ್ಯಕ್ತಿಯ ವಿಧಾನ, ಕೊಡಲ್ಪಡುವ ರೀತಿ ಬೇರೆ ಬೇರೆಯಾಗಿರುತ್ತದೆ. ಉದಾ : ಸೀತೆ, ದಮಯಂತಿ.

ಪಾತ್ರವನ್ನು ಚೆಂದಗೆ ಕಾಣಿಸಿಕೊಡುವುದು ಇಡೀ ಪಾತ್ರದ ಯಾವುದೋ ಒಂದು ಮೂಲೆಯಲ್ಲಿರುತ್ತದೆ. ಅದನ್ನು ಹುಡುಕಿ ತೋರಿಸುವ ಪ್ರಯತ್ನ ಆಗಬೇಕು. ಅಧ್ಯಯನಶೀಲವಾದರೆ ಮಾತ್ರ ಇವೆಲ್ಲದರ ಅಭಿವ್ಯಕ್ತಿ ಸಾಧ್ಯ.

· ಸ್ತ್ರೀವೇಷಧಾರಿಯ ಅಭಿವ್ಯಕ್ತಿಗೆ ಆಯುಷ್ಯವಿಲ್ಲ ಎಂಬ ಮಾತನ್ನು ಒಪ್ಪುವುದಾದರೆ ಅದನ್ನು ಮೀರುವ ಪ್ರಯತ್ನಗಳೇನಾದರೂ ಇವೆಯೇ?

ಹೌದು. ಸ್ತ್ರೀಪಾತ್ರಕ್ಕೆ ಹೆಚ್ಚು ಬಾಳಿಕೆ ಇಲ್ಲ. ಸಾಧಾರಣವಾಗಿ ಯಕ್ಷಗಾನಕ್ಕೆ ಬರುವಾಗಲೇ ೧೮-೨೦ ಕಳೆದಿರುತ್ತದೆ. ಬುದ್ಧಿಯೂ ಗ್ರಹಿಸುವಷ್ಟು ಪ್ರೌಢವಾಗಿರುವುದಿಲ್ಲ. ಇನ್ನೇನು ಪ್ರಬುದ್ಧ ವೇಷಧಾರಿಯಾಗುತ್ತಾನೆ ಅನ್ನುವಾಗ ಮುಖದ ಹೊಳಪು ಇಳಿಯುತ್ತಾ ಹೋಗುತ್ತದೆ. ಚೆಲುವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಶರೀರ-ಶಾರೀರ ಸರಿಯಾಗಿಟ್ಟುಕೊಳ್ಳುವ ಪ್ರಯತ್ನ ಪಾತ್ರಧಾರಿ ಮಾಡಬೇಕು. ವಯಸ್ಸು ಬದಲಾದಂತೆ ವೇಷದ ಔಚಿತ್ಯವನ್ನು ಗಮನಿಸಿ ಅಂತಂತಹ ವೇಷಗಳನ್ನು ನಿರ್ವಹಿಸುವುದು ಉತ್ತಮ.

· ಸ್ತ್ರೀಪಾತ್ರಧಾರಿಗಳ ಕುರಿತ ಅಭಿಪ್ರಾಯ ಜನರಲ್ಲಿ ಹೇಗಿದೆ?

ಈಗಿನ ಕಾಲಕ್ಕೆ ಚೆನ್ನಾಗಿಯೇ ಇದೆ. ಅಷ್ಟೇಕೆ, ಅಮೇರಿಕಾಗೆ ಹೋಗಿದ್ದಾಗ ೪೦ ಜನ ಕಲಾವಿದರಿಗೆ ಹೋಟೆಲ್ ಒಂದನ್ನು ಕಾದಿರಿಸಲಾಗಿತ್ತು. ಅದೇ ಹೋಟೆಲ್‌ನಲ್ಲಿ ಬಿಹು ನೃತ್ಯದ ಹೆಣ್ಣುಮಕ್ಕಳು ತಂಗಿದ್ದರು. ಅವರ ಗ್ರೀನ್ ರೂಂ ಬೇರೆಯಿತ್ತು. ಅವರಿಗೆಲ್ಲಾ ಒಂದೇ ಸಮನೆ ಕುತೂಹಲ. ಹೆಂಗಸರ್ಯಾರು ಬಂದಿದ್ದು ಕಂಡಿಲ್ಲ. ಹಾಗೆಂದು ಸ್ತ್ರೀ ಪಾತ್ರವೂ ಇತ್ತು. ಕೊನೆಗೆ ಅವರು ಪ್ರದರ್ಶನದ ತರುವಾಯ ನಮ್ಮ ಬಳಿಗೆ ಬಂದು ಸ್ತ್ರೀಪಾತ್ರ ಮಾಡಿದವರನ್ನು ಹುಡುಕಿ ತೆಗೆಯುವಾಗ ಆದ ಅವರ ಸಂತೋಷ, ಅಚ್ಚರಿ, ಅಭಿಮಾನ ನಿಜಕ್ಕೂ ಖುಷಿ ತಂದಿತ್ತು. ಹೀಗೆ, ಅಭಿಮಾನದ ದೃಷ್ಟಿಯೇ ಹೆಚ್ಚಿರುವಾಗ ಸ್ತ್ರೀಪಾತ್ರಧಾರಿಗಳನ್ನು ವಿಚಿತ್ರವಾಗಿ ನೋಡಿದರೆ ಅಂಥವರ ಮನಸ್ಸೇ ವಿಕೃತ ಎನ್ನಬೇಕಷ್ಟೇ !

· ಸ್ತ್ರೀಪಾತ್ರಗಳಲ್ಲಿ ಸ್ತ್ರೀಯರ ಪಾಲ್ಗೊಳ್ಳುವಿಕೆ ಎಷ್ಟು ಸರಿ? ತಪ್ಪು?

ಸ್ತ್ರೀಯರಿಗಿಂತಲೂ ಗಂಡಸರೇ ಸ್ತ್ರೀಪಾತ್ರ ಮಾಡಿದರೆ ಪರಿಣಾಮಕಾರಿ. ರಂಗಭೂಮಿಯಲ್ಲಿ ಮೊದಲಿನಿಂದಲೂ ಸ್ತ್ರೀವೇಷ ಮಾಡಿದ್ದೆಲ್ಲಾ ಗಂಡಸರೇ. ಹಾಗೆ ನೋಡಿದರೆ ಹೆಣ್ಣಿನ ಭಾವನೆ ಹೆಣ್ಣಿಗೆ ಅರ್ಥವಾಗುತ್ತದೆ ಎಂಬ ಮಾತು ಪೂರ್ಣ ಸತ್ಯವಲ್ಲ. ಹೆಣ್ಣಿನ ಮನಸ್ಸು ಗಂಡಸರಿಗೂ ಅರ್ಥವಾಗುತ್ತದೆ. ಸಾಮಾಜಿಕವಾಗಿಯೂ ಇದು ದಿಟ. ಉದಾ : ರಂಗಕ್ಕೆ ನಾಚಿಕೆ ಎಷ್ಟು ಬೇಕು ಅನ್ನುವುದು ಹೆಣ್ಣಿಗೆ ಅರ್ಥೈಸಿಕೊಂಡು ಅಭಿನಯಿಸಲು ಕಷ್ಟ ಆದೀತು. ಅದೇ ಗಂಡಸಿಗೆ ರಂಗಕ್ಕೆ ಹೇಗೆ ಶೃಂಗಾರವನ್ನು ಅರ್ಥ ಮಾಡಿಕೊಂಡು ಮಾಡಬೇಕು ಅನ್ನುವುದು ಗೊತ್ತಿರುತ್ತದೆ.

· ಸ್ತ್ರೀಪಾತ್ರಗಳ ಭವಿಷ್ಯದ ಬಗ್ಗೆ ಏನಾದರೂ ಕಲ್ಪನೆಯಿದೆಯೇ?

ಭವಿಷ್ಯದಲ್ಲಿ ಯಕ್ಷಗಾನದ ಸ್ತ್ರೀಪಾತ್ರಗಳು ಹೀಗೆಯೇ ಇರಬೇಕು ಅಥವಾ ಇರುತ್ತದೆ ಎಂದು ಹೇಳುವುದು ಕಷ್ಟ. ಆದರೆ ಸ್ತ್ರೀಪಾತ್ರದ ಪ್ರಭಾವ ಗೌಣವಾಗದ ಹಾಗೆ ಪ್ರಯತ್ನವನ್ನು ಸ್ತ್ರೀವೇಷದವರು ಮಾಡಬೇಕು.

———————

Leave a Reply

*

code