ಅಂಕಣಗಳು

Subscribe


 

ವಿದೇಶಗಳಲ್ಲಿ ಭರತನಾಟ್ಯ

Posted On: Tuesday, February 15th, 2011
1 Star2 Stars3 Stars4 Stars5 Stars (No Ratings Yet)
Loading...

Author: ವಿವಿಧ ಲೇಖಕರು

ಇಂದಿಗೆಹಲವು ದೇಶಗಳಲ್ಲಿಸಂಸ್ಥೆ-ಸಮಾರಂಭ- ಆಚರಣೆಗಳಲ್ಲಿಭರತನಾಟ್ಯದಘಲಿರುಸದಾಕೇಳುತ್ತಲಿದೆ.ಹಿರಿಯ ನಾಟ್ಯಗುರುಗಳಿಂದ ಮತ್ತು ಅವರ ವಲಸೆ ಹೋದ ಶಿಷ್ಯವರ್ಗದಿಂದ ವಿದೇಶಗಳಲ್ಲಿ ಭರತನಾಟ್ಯದ ಪ್ರಸಾರ ಅನೂಚಾನವಾಗಿ ನಡೆದು ಬಂದಿದೆ. ಭಾರತದ ಅದೆಷ್ಟೋ ಸುಪ್ರಸಿದ್ಧ ಕಲಾವಿದರ ಪ್ರದರ್ಶನಗಳು, ಕಾರ್ಯಾಗಾರಗಳು, ಉಪನ್ಯಾಸಗಳು, ತರಗತಿಗಳು, ವಿಸ್ತರಣಾ ಶಾಲೆಗಳು ಮತ್ತಷ್ಟು ರಸಿಕರನ್ನು, ವಿದ್ಯಾರ್ಥಿಗಳನ್ನು ಹೆಚ್ಚಿಸುತ್ತಲಿದೆ. ವಲಸೆ ಹೋದ ಹಲವು ಭಾರತೀಯರು ಭರತನಾಟ್ಯದ ಕಂಪನ್ನು ಪಸರಿಸಿದ್ದಾರೆ. ಇದರೊಂದಿಗೆ ಅದೆಷ್ಟೋ ಕಲಾವಿದರು ಭಾರತೀಯ ಸಂಸ್ಕೃತಿ, ಭರತನಾಟ್ಯದೆಡೆಗೆ ಆಸಕ್ತಿ ಮೂಡಿಸಿಕೊಂಡಅಲ್ಲಲ್ಲಿನ ಜನಾಂಗದವರನ್ನು ವಿವಾಹವಾಗಿ ನೃತ್ಯಕ್ಕೆ ಹೊಸ ತಲೆಮಾರನ್ನು ಕಾಣಿಕೆಯಿತ್ತಿದ್ದಾರೆ.

ಭರತನಾಟ್ಯ, ಭಾರತೀಯ ಸಂಸ್ಕೃತಿಯೆಡೆಗೆ ಪ್ರೇರಿತರಾದ ಅದೆಷ್ಟೋ ವಿದೇಶಿಯರು ತಮ್ಮ ನಡೆ ನುಡಿ, ನಾಮಧೇಯವನ್ನು ಭಾರತೀಯ ಸಂಸ್ಕೃತಿ-ಸಂದರ್ಭಕ್ಕನುಗುಣವಾಗಿ ಬದಲಾಯಿಸಿಕೊಳ್ಳುತ್ತಾ ಬಂದಿರುವುದು ನಮ್ಮ ಹಿರಿಮೆ ಮತ್ತು ವೈಶಿಷ್ಟ್ಯತೆಗೆ ಸಾಕ್ಷಿ. ಉದಾ : ಫ್ರಾನ್ಸ್‌ನ ಕಾಟಿಯಾ ನಾಟ್ಯಾಚಾರ್ಯ ಮುರಳೀಧರ್‌ರಾಯರ ಶಿಷ್ಯೆಯಾಗಿ ಮನೋಛ್ಛಾಯಾವೆಂದು ಹೆಸರು ಬದಲಿಸಿದ್ದು, ಅಥೆನ್ಸ್‌ನ ಲಿಡಾ ಸೈಟಾನಿಡಿಸ್ ಶಾಂತಲಾ ಆದದ್ದು, ಕೆನಡಾದ ಸಂಶೋಧಕಿ ಅನ್ನೇ ಮಾರಿ ಗ್ಯಾಸ್ಟನ್ ಅಂಜಲಿಯೆನಿಸಿದ್ದು, ಜಪಾನ್‌ನ ಮಾಚಿಕೋ (ಲಕ್ಷ್ಮೀ), ಸ್ವಿಟ್ಜರ್ ಲ್ಯಾಂಡಿನ ಬಾರ್ಬರಾ ದೇಜುಂಗ್ ( ಭೈರವಿ).., ಹೀಗೆ ಹಲವು ಉದಾಹರಣೆಗಳು.

ಹಾಗಾದರೆ ಬನ್ನಿ, ವಿಶ್ವದಲ್ಲಿ ಆರ್ಥಿಕ ಅನುಕೂಲದ ದೃಷ್ಟಿಯಿಂದ ಮುಂಚೂಣಿಯಲ್ಲಿರುವ ಎರಡು ರಾಷ್ಟ್ರಗಳ ನೃತ್ಯಸಂಸ್ಕೃತಿಯ ಕುರಿತು ಮಾತನಾಡೋಣ, ಈ ಕುರಿತಂತೆ ಈರ್ವರು ಕಲಾವಿದೆಯರು ಅಲ್ಲಿನ ಭರತನಾಟ್ಯದ ಸಂಸ್ಕೃತಿಯ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದು; ಅದರ ಒಂದು ಇಣುಕುನೋಟ ನಿಮ್ಮ ರಂಗಭ್ರಮರಿಯಲ್ಲಿ..

ಯು‌ಎಸ್‌ಎಯಲ್ಲಿ ಕಲಾವಿದೆಯಾಗಿ ಗುರುವಾಗಿಯೂ ಪ್ರಸಿದ್ಧಿ ಹೊಂದಿರುವ ಮೂಲತಃ ಉಡುಪಿಯವರಾದ ಶ್ರೀಮತಿ ಭ್ರಮರಿ ಶಿವಪ್ರಕಾಶ್…

 

ಭರತನಾಟ್ಯದ ಕಂಪು ವ್ಯಾಪಕವಾಗಿ ಹಬ್ಬಿರುವ ದೇಶಗಳ ಪೈಕಿ ಯು‌ಎಸ್‌ಎ ಪ್ರಥಮಸ್ಥಾನದಲ್ಲಿದೆಯೆಂದೇ ಹೇಳಬಹುದು. ಬಾಲಸರಸ್ವತಿ, ರುಕ್ಮಿಣೀ ದೇವಿ ಅರುಂಡೇಲ್, ಇಂದ್ರಾಣಿ ರಹಮಾನ್, ಪದ್ಮಿನಿ, ರಾಗಿಣಿ, ಲಲಿತಾ, ಕಮಲಾ ನಾರಾಯಣ್ ಮುಂತಾದವರು ಭರತನಾಟ್ಯದ ಕಂಪನು ಪಸರಿಸಿದವರಲ್ಲಿ ಅಗ್ರಗಣ್ಯರು. ಇವರ ನಂತರದ ದಶಕಗಳಲ್ಲಿ ವಿಜಿ ಪ್ರಕಾಶ್, ರೇವತಿ ಸತ್ಯು, ರಮ್ಯಾ ರಾಮ್ ನಾರಾಯಣ್, ಬಾಲದೇವಿ ಚಂದ್ರಶೇಖರ್, ವಿಜಿ ರಾವ್, ಡಾ. ಶ್ರೀಧರ್, ದಿವ್ಯಾ ನಾಯರ್, ಸೋನಾಲಿ ಸ್ಕಂದನ್, ನಳಿನೀ ರಾವ್, ಸುಧಾ ರಘುರಾಂ, ಆಶಾ ಗೋಪಾಲ್, ಮಾಲತೀ ಅಯ್ಯಂಗಾರ್, ಶ್ರೀದೇವೀ ಅಜಯ್ ಮುಂತಾದವರು ಮಿಂಚಿದ್ದಾರೆ. ಮೂರನೇ ತಲೆಮಾರಿನ ಕಲಾವಿದರ ಪೈಕಿ ಮಾಲತೀ ಪ್ರಕಾಶ್, ಲಕ್ಷ್ಮೀ ಅಯ್ಯಂಗಾರ್, ಜಾನ್ ಆರ್. ಪ್ರೀಮನ್, ಅಂಜನಾ ರಂಜನ್ ಪ್ರಮುಖರು. ಆದರೂ ಗುಣಾತ್ಮಕ ಸಂಖ್ಯಾತ್ಮಕವಾಗಿ ಅವಲೋಖಿಸಿದಾಗ ಈ ಪಟ್ಟಿ ಅಪೂರ್ಣವೇ ಸರಿ. ಇಂದಿಗೆ ಹಲವು ನೃತ್ಯ ಶಾಲೆಗಳು, ಗುರುಗಳು, ಏಕವ್ಯಕ್ತಿ ಕಲಾವಿದರು ಯು‌ಎಸ್‌ಎಯ ೩೦ ವಿವಿಧ ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ.

ಭಾರತದಲ್ಲಿರುವಷ್ಟೇ ಯು‌ಎಸ್‌ನಲ್ಲಿಯೂ ಸಾಕಷ್ಟು ಭರತನಾಟ್ಯ ಶಾಲೆಗಳು, ತರಗತಿಗಳೂ ಇವೆ. ಅದರಲ್ಲೂ ಭಾರತೀಯರೇ ಹೆಚ್ಚಿರುವ ಪ್ರದೇಶಗಳಲ್ಲಿ ಈ ಹಂಚಿಕೆ ಹೆಚ್ಚು. ಅಲ್ಲಿನ ಮೂಲನಿವಾಸಿಗಳಂತೆಯೇ ಭಾರತೀಯರೂ ನೋಂದಾಯಿತ ಶಾಲೆ, ತರಗತಿಗಳನ್ನು ನಡೆಸುತ್ತಿದ್ದು ದೇಶಾದ್ಯಂತ ನೃತ್ಯ ಪ್ರವಾಸಗಳನ್ನು, ಕಾರ್ಯಕ್ರಮಗಳನ್ನು ಕೈಗೊಳ್ಳುವವರಿದ್ದಾರೆ. ಇವುಗಳ ಪೈಕಿ ಶೇ.೬೦ರಷ್ಟು ಗುಣಾತ್ಮಕವಾಗಿಯೇ ಎಲ್ಲವೂ ಇವೆ. ವರ್ಷದಲ್ಲಿ ಕನಿಷ್ಟ ಪಕ್ಷ ಐವತ್ತಾದರೂ ರಂಗಪ್ರವೇಶಗಳು ಜರುಗುತ್ತವೆ. ಪ್ರತಿಯೊಂದು ರಂಗಪ್ರವೇಶಗಳೂ ಭಾರತದಲ್ಲಿ ಹೇಗೆ ಜರುಗುತ್ತವೋ ಹಾಗೆಯೇ ಏರ್ಪಾಡುಗೊಂಡಿರುತ್ತವೆ. ನಮ್ಮ ಅನಾದಿ ಕಾಲದ ಶ್ರುತಿ, ಸ್ಮೃತಿ ವಿದ್ಯಾಭಾಸದ ಕ್ರಮದಿಂದಾಗಿ ಭಾರತದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಇಲ್ಲಿನ ಶಾಸ್ತ್ರೀಯ ಸಂಸ್ಕೃತಿಗಳನ್ನು ಅರಗಿಸಿಕೊಳ್ಳುವುದು ಸುಲಭ ಮತ್ತು ಪರಿಣಾಮಕಾರಿ. ಇದರಿಂದಾಗಿಯೋ ಏನೋ ಎಂಬಂತೆ ಭಾರತದ ಹಲವು ರಂಗಪ್ರವೇಶಗಳು ಮಕ್ಕಳು ಕಾಲೇಜಿಗೆ ಬರುವುದಕ್ಕಿಂತಲೂ ಮುಂಚೆ ಜರುಗಿ ಅಂತ್ಯ ಕಾಣುತ್ತವೆ. ಕೆಲವು ಮಂದಿ ಮಾತ್ರ ರಂಗಪ್ರವೇಶದ ನಂತರ ನೃತ್ಯ ಶಿಕ್ಷಣವನ್ನು ಮುಂದುವರೆಸುತ್ತಾರೆ. ಇದಕ್ಕೆ ಅಮೆರಿಕಾ ಹೊರತೇನೂ ಅಲ್ಲ.

ಹಲವು ಬಾರಿ ಸಮಾಜ-ಸಮುದಾಯದ ಒಳಿತಿಗಾಗಿ ವಂತಿಗೆ ಸಂಗ್ರಹಿಸಿ ಉಚಿತ ಕಾರ್ಯಕ್ರಮಗಳನ್ನೇ ನಡೆಸಲಾಗುತ್ತದೆ. ಸರ್ಕಾರವೂ ಉತ್ತಮ ಕಾರ್ಯಕ್ರಮಗಳಿಗೆ ಅನುದಾನ, ಸಹಾಯ ನೀಡುತ್ತದೆ. ಅಮೆರಿಕಾದ ದೇವಸ್ಥಾನಗಳು, ಸ್ಥಳೀಯ ಭಾರತೀಯ ಸಂಘಟನೆಗಳು, ಒಕ್ಕೂಟಗಳು ( ಕನ್ನಡ ಸಂಘ, ತಮಿಳು ಸಂಘ, ತೆಲುಗು ಸಂಘ, ಮಲಯಾಳಂ ಸಂಘ) ಭಾರತೀಯ ಶಾಸ್ತ್ರೀಯ ಕಲೆಗಳಿಗೆ ಉತ್ತಮ ಪ್ರೋತ್ಸಾಹ ಮತ್ತು ಅವಕಾಶ ಕಲ್ಪಿಸುತ್ತಿವೆ. ಅದರಲ್ಲೂ ಪುರಂದರದಾಸರ-ತ್ಯಾಗರಾಜರ ಆರಾಧನೆಗಳು ಕಳೆದ ೨೫ ವರುಷಗಳಿಂದಲೂ ರಾಷ್ಟ್ರೀಯವಾಗಿಯೂ, ಸ್ಥಳೀಯ ಸಮುದಾಯಗಳ ನೆಲೆಯಲ್ಲಿಯೂ ಆಚರಿಸಿಕೊಂಡು ಬರಲಾಗುತ್ತಿದೆ. ಕೆಲವು ಬೃಹತ್ ಕಾರ್ಯಕ್ರಮಗಳಿಗೆ ಭಾರತದ ದಾನಿಗಳ ಪ್ರಾಯೋಜಕತ್ವವೂ ಇರುತ್ತದೆ. ಹೀಗೆ ಅಮೆರಿಕಾದ ರಂಗಭೂಮಿ, ಮತ್ತು ಬಹು ಸಾಂಸ್ಕೃತಿಕ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಿದೆ ; ಮತ್ತು ಬದಲಾದ ದೇಶ-ಕಾಲ- ಸಂದರ್ಭಗಳಿಗೆ ಅನುಗುಣವಾಗಿ ಸೂಕ್ತವಾದ ಸಂವಹನ ಸಾಧಿಸಲು ವಿಷಯ-ವಸ್ತುಗಳಲ್ಲಿ ತಕ್ಕಮಟ್ಟಿನ ಮಾರ್ಪಾಡು ಸಹಜವೆನಿಸಿದೆ.

ಭಾರತೀಯ ಕಲೆಗಳ ಕುರಿತ ಸಣ್ಣ ಮಟ್ಟಿಗಿನ ಅರಿವು ಇರುವ ಪೋಷಕರೂ ಕೂಡಾ ತಮ್ಮ ಮಕ್ಕಳನ್ನು ಎಳೆವಯಸ್ಸಿನಲ್ಲಿಯೇ ಕಲೆಗಳ ಕಲಿಕೆಗೆ ಅವಕಾಶ ಕಲ್ಪಿಸುತ್ತಾರೆ. ಭಾರತದಲ್ಲಿನ ಐದು ವಯಸ್ಸಿನ ಮಗುವಿಗೆ ಕಲಿಸುವ ರೀತಿಗೂ, ಯು‌ಎಸ್‌ಎಯ ಅದೇ ವಯಸ್ಸಿನ ಮಗುವಿಗೂ ಕಲಿಸುವ ರೀತಿ, ಪ್ರಕ್ರಿಯೆ ವಿಭಿನ್ನವಾಗಿರುತ್ತದೆ. ಅಮೆರಿಕಾದಲ್ಲಿ ಹುಟ್ಟಿದ ಭಾರತೀಯ ಮಕ್ಕಳು ಸಮಾಜದಲ್ಲಿ ನೋಡುವ ಪಾಶ್ಚಾತ್ಯ ಸಂಸ್ಕೃತಿ ಮತ್ತು ಮನೆಯೊಳಗಿನ ಭಾರತೀಯ ನೆಲೆಗಟ್ಟಿನ ಸಂಸ್ಕೃತಿಗೂ ಕಾಣುವ ವ್ಯತ್ಯಾಸವೇ ಇದಕ್ಕೆ ಕಾರಣ. ಹಾಗಾಗಿ ಅಲ್ಲಿನ ವಿದ್ಯಾಭ್ಯಾಸ ಪದ್ಧತಿಯೂ ವಿಭಿನ್ನ.

ಅಲ್ಲಿನ ಜನರು ಪ್ರಾರಂಭಿಕ ಶಿಕ್ಷಣದಲ್ಲೇ ಪ್ರತಿಯೊಂದೂ ವಿಷಯ ಪಾಠಗಳನ್ನು ಸೃಷ್ಟಿಶೀಲವಾದ ರೀತಿಯಲ್ಲಿ ಅಳವಡಿಸಿ ಸಣ್ಣ ವಯಸ್ಸಿನಿಂದಲೇ ಕ್ರಮಬದ್ಧವಾಗಿ ಕಲಿಸುತ್ತಾರೆ. ಅಂಕ ಅಥವಾ ಫಲಿತಾಂಶ ಕೇಂದ್ರಿತ ವ್ಯವಸ್ಥೆ ಅಲ್ಲಿನದ್ದಲ್ಲ ; ಬದಲಾಗಿ ಥಿಯರಿಗಿಂತಲೂ ಹೆಚ್ಚು ಪ್ರಾಯೋಗಿಕ ಶಿಕ್ಷಣಕ್ಕೇ ಒತ್ತು ನೀಡಲಾಗುತ್ತದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ೩ನೇ ತರಗತಿಯಿಂದಲೇ ಮಕ್ಕಳು ಕಡ್ಡಾಯವಾಗಿ ಒಂದೋ ಹಾಡುಗಾರಿಕೆ ಅಥವಾ ವಾದ್ಯಸಂಗೀತ ಕಲಿಯಬೇಕು.ಇದರಿಂದಾಗಿ ಅವರು ಕಾಲೇಜು ತಲುಪುವ ವಯಸ್ಸಿಗೆ ಯಾವುದೇ ಕ್ಷೇತ್ರದ ಕುರಿತಾದರೂ ಅವರ ಭವಿಷ್ಯದ ಕುರಿತಂತೆ ಸ್ಪಷ್ಟ ಅರಿವು ಅವರಿಗಿರುತ್ತದೆ.

ಹಾಗಾಗಿ ಪಠ್ಯಕ್ರಮಗಳು ಮತ್ತು ವಿಧಾನ, ಕಲೆಯ ತಂತ್ರಗಳು ಅವರಿಗೆ ತಿಳಿವು ಮೂಡಿಸುವಂತೆ ಇರಬೇಕಾಗುತ್ತದೆ. ನಮ್ಮ ಕಲೆಗಳನ್ನು ಕಲಿಯುವವರಿಗೆ ಹಿಂದೂ ಪುರಾಣ, ಪೌರಾಣಿಕ ಕಥೆಗಳನ್ನೂ ಜೊತೆಯಲ್ಲಿ ಹೇಳಬೇಕಾಗುತ್ತದೆ. ಇದರೊಂದಿಗೆ ಸಂಸ್ಕೃತಿ ಕುರಿತಾದ ತರಗತಿಗಳು, ಭಾಷಾ ತರಗತಿಗಳು ಲಭ್ಯವಿದ್ದು ; ನಮ್ಮ ವಸ್ತು- ನಿರೂಪಣೆ-ಧರ್ಮಗಳನ್ನು ಅರ್ಥ ಮಾಡಿಕೊಳ್ಳಲು ಸುಲಭವೆನಿಸುತ್ತವೆ.

ಹಾಗೆಂದು ನೇತ್ಯಾತ್ಮಕ ಪರಿಣಾಮಗಳಿಲ್ಲವೆಂದಲ್ಲ. ಅಲ್ಲಿನ ಸೃಷ್ಟಿಶೀಲ ಮನಸ್ಥಿತಿ ಮತ್ತು ಶೋಧಕ ಗುಣದಿಂದಾಗಿ ಕೆಲವೊಮ್ಮೆ ವಿಪರೀತವಾಗುವುದೂ ಇದೆ. ಎಷ್ಟೆಂದರೆ ಸರಿಯಾಗಿ ಕಲಿಯುವ ಮುಂಚೆಯೇ ಹೊಸ ಅಡವು, ಹೆಜ್ಜೆಗಳನ್ನು ಕಂಡು ಹಿಡಿದು ಅದು ತಮ್ಮ ಸೃಷ್ಟಿ ಎಂದು ಹೇಳುವ ಮಟ್ಟಿಗೆ ! ಅಷ್ಟೇ ಅಲ್ಲದೆ ಅಲ್ಲಿನ ಸಾರಿಗೆ ವ್ಯವಸ್ಥೆಯ ತುಂಬಾ ಕಾರುಗಳೇ ತುಂಬಿಕೊಂಡಿದ್ದು; ಹವಾಮಾನ ವೈಪರೀತ್ಯಗಳಿಂದಾಗಿ ಮನೆ-ಆಫೀಸು-ಶಾಲೆ ಇತ್ಯಾದಿಯಾಗಿ ಎಲ್ಲೆಲ್ಲೂ ಕಂಡೀಷನ್ಡ್ ಹವೆಯೇ ಇರುವುದರಿಂದ ದೈಹಿಕ ಶ್ರಮದ ಕೆಲಸಗಳ ಸಾಧ್ಯತೆಗಳು ತೀರಾ ಕಡಿಮೆ. ನಡೆದು ಶಾಲೆಗೆ ಬರುವುದೋ ಅಥವಾ ಬಸ್ಸುಗಳಲ್ಲಿ ಬರುವುದೋ ಇಲ್ಲವೇ ಇಲ್ಲವೆಂಬಷ್ಟು ವಿರಳ. ಇದರಿಂದಾಗಿ ನೃತ್ಯದ ಸಂದರ್ಭಗಳಲ್ಲಿ ಬೆವರು ತರಿಸುವಂತೆ ಶ್ರಮವಹಿಸಿ ಕುಣಿಯುವುದೆಂದರೆ ಇಲ್ಲಿನವರಿಗೆ ಸ್ವಲ್ಪ ಅಸಾಧ್ಯವೇ ಆಗಿದೆ !

ಕಳೆದ ೩೨ ವರ್ಷಗಳಿಂದ ಇಂಗ್ಲೆಂಡ್ ಬರ್ಮಿಂಗ್‌ಹ್ಯಾಮ್‌ನಲ್ಲಿ ನೃತ್ಯಾಸಕ್ತರಿಗೆ ಗುರುವಾಗಿ ಮುಂಚೂಣಿಯಲ್ಲಿರುವ ೧೯೯೦ರಲ್ಲಿ ಚಿತ್ರಲೇಖಾ ಡ್ಯಾನ್ಸ್ ಕಂಪೆನಿಯ ನಿರ್ದೇಶಕಿಯಾದ ಮೂಲತಃ ಕಾಸರಗೋಡಿನ ಚಿತ್ರಲೇಖಾ ಬೋಳಾರ್..

ಬ್ರಿಟನ್‌ನಲ್ಲಿ ಗುರುಶಿಷ್ಯ ಪರಂಪರೆ ಭಾರತದಂತೆ ಇಲ್ಲ. ಅಲ್ಲಿನ ವಾತಾವರಣವೇ ವಿಭಿನ್ನ. ಅಲ್ಲಿನ ಮಕ್ಕಳಿಗೆ ಹಿರಿ-ಕಿರಿಯ ಭಾವ, ನಮಸ್ಕಾರ ಮಾಡುವುದು, ಆಶೀರ್ವಾದ ಮುಂತಾದ ಕ್ರಮಗಳು ಗೊತ್ತಿಲ್ಲ. ಗುರುಗಳನ್ನು ತಮ್ಮ ಸಹಪಾಠಿಗಳಂತೆಯೇ ಏಕವಚನದಲ್ಲಿ ಹೆಸರು ಹಿಡಿದು ಸಂಬೋಧಿಸುವುದಿದೆ. ಹಾಗಂತ ಎಲ್ಲಾ ವಿಷಯವನ್ನು ಹೇಳಿಕೊಟ್ಟು ಮಾಡಿಸಲಿಕ್ಕಾಗದು. ಅದು ಮನಸ್ಸಿನಿಂದ ಮೂಡಬೇಕಾದಂತದ್ದು.

ಈಗೀಗ ನಮ್ಮ ದೇಶದ ಪ್ರವಾಸ, ಕಾರ್ಯಕ್ರಮ, ಸಂಸ್ಕೃತಿಯನ್ನು ನೋಡಿ ಮತ್ತು ಹಿರಿಯ ವಿದ್ಯಾರ್ಥಿಗಳ ಪ್ರಭಾವದಿಂದಾಗಿ ನಿರೀಕ್ಷಿತ ಬದಲಾವಣೆಗಳಾಗಿವೆ. ಅದರಲ್ಲೂ ಇತ್ತೀಚೆಗೆ ಭರತನಾಟ್ಯದಲ್ಲಿ ಆಂಗಿಕ ಅಭಿನಯಕ್ಕೆ ಸಂಬಂಧಿಸಿದಂತೆ ಹಲವು ಅವಕಾಶಗಳನ್ನು, ವಸ್ತು ವಿಷಯಗಳನ್ನು ಬಳಸಿಕೊಂಡು ಪ್ರಯೋಗ ಮಾಡುವ ಅವಕಾಶ ಹೆಚ್ಚಾಗಿದೆ. ಭಾರತದ ಅದೆಷ್ಟೋ ಕಲಾವಿದರು ನಮ್ಮೊಂದಿಗೆ ನೃತ್ಯ ಸಂಬಂಧೀ ಕಾರ್ಯಗಳಿಗೆ ಜೊತೆಯಾಗಿದ್ದಾರೆ.

ಅಲ್ಲಿ ರಂಜನೆಗಿಂತಲೂ ಹೆಚ್ಚಾಗಿ ನೃತ್ಯವನ್ನು ಶೈಕ್ಷಣಿಕವಾಗಿ ನೋಡಲಾಗುತ್ತದೆ. ನೃತ್ಯದ ಶೈಕ್ಷಣಿಕ ಸಂವಹನ ಮೌಲ್ಯಗಳ ಬಗ್ಗೆ ಇಲ್ಲಿಗಿಂತಲೂ ಅಲ್ಲಿ ಹೆಚ್ಚಿನ ಆಸಕ್ತಿ ಇದೆ. ನಮ್ಮಲ್ಲಿ ಓದಿಗೆ ಇರುವಂತದ್ದಕ್ಕೆಲ್ಲಾ ಅಲ್ಲಿ ಪ್ರಾಯೋಗಿಕವಾಗಿ ಕಾಣಲು, ವಿಷದವಾಗಿ ನೋಡಲು ಇಷ್ಟಪಡುತ್ತಾರೆ ಮತ್ತು ಬಳಸುತ್ತಾರೆ ಕೂಡಾ ! ಅಲ್ಲಿ ಸಂಗೀತ-ನೃತ್ಯ ಶಿಕ್ಷಕರಿಗೂ ಕಲಿಕೆಯನ್ನು ಅಪ್‌ಡೇಟ್ ಮಾಡುತ್ತಲಿರಬೇಕಾದ ಕೋರ್ಸ್‌ಗಳಿರುತ್ತವೆ.

ಅಲ್ಲಿನ ಮಕ್ಕಳಿಗೆ ಯಾವುದೇ ಪುರಾಣದ ಮುಖ್ಯ ವಸ್ತುವನ್ನು ಮಾತ್ರ ವಿವರಿಸಬೇಕು. ಹೆಚ್ಚು ಉಪಕಥೆಗಳನ್ನೋ ಅಥವಾ ಕಥಾ ವಿಸ್ತರಣೆಯನ್ನೋ ಮಾಡಿದರೆ ಅವರಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಹಾಗಾಗಿ ಬಹುಪ್ರಚಲಿತವಿರುವ ನಂಬಿಕೆ, ಕಥೆಗಳನ್ನು ನೃತ್ಯಕ್ಕೆ ಬಳಸಿಕೊಳ್ಳುವುದು ಹೆಚ್ಚು. ಇಂಗ್ಲೆಂಡ್ ಮುಂತಾದ ಕಡೆಗಳಲ್ಲಿ ಸಾಹಿತ್ಯಕ್ಕೆ ಅಷ್ಟು ಮಹತ್ತ್ವ ಕೊಡಲಾಗುವುದಿಲ್ಲ. ಕಾರಣ ಭಾಷೆಯ ತೊಡಕು. ಹಾಗಾಗಿ ಸಾಹಿತ್ಯ ಬಳಸಿದ್ದೇ ಆದರೆ ಪ್ರತೀ ಶಬ್ದವನ್ನು ಅರ್ಥ ಮಾಡಿಸಲು ಪುನಃ ನಿರೂಪಣೆಯ ಮೂಲಕ ಹೆಣಗಬೇಕು. ಇದರಿಂದ ಕಲಾವಿದರು ವಾದ್ಯ ಸಂಗೀತಕ್ಕೆ ನೃತ್ಯದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ.

ಅಂತೆಯೇ ನೃತ್ಯದ ಎಲ್ಲಾ ಬಗೆಯ ಅಡವು ಕಲಿಯುವ ಮಟ್ಟಿಗೆ ತಾಳ್ಮೆಯೂ ಅಲ್ಲಿನ ಮಕ್ಕಳಿಗೆ ಇರುವುದಿಲ್ಲ. ಹಾಗಾಗಿ ನನ್ನ ಕಲಿಕಾ ಕ್ರಮದಲ್ಲಿ ಕೆಲವೊಂದು ಹೆಜ್ಜೆಗಳು, ಅಡವುಗಳು, ಭಾವನೆಗಳು, ಹಸ್ತಗಳನ್ನು ಮಾತ್ರ ಪ್ರಾಥಮಿಕವಾಗಿ ಹೇಳಿಕೊಡುತ್ತೇನೆ. ನೃತ್ಯದ ವಿಷಯಗಳು ಸರಳವಾಗಿ, ಸುಲಭವಾಗಿರುವಂತೆ ನೋಡಿಕೊಳ್ಳುವುದು ತುಂಬಾ ಅಗತ್ಯ. ಇದರಿಂದ ಪ್ರೇಕ್ಷಕರನ್ನು ಸೆಳೆಯುವುದೂ ಸುಲಭ ಸಾಧ್ಯ

Leave a Reply

*

code