Author: ಮನೋರಮಾ. ಬಿ.ಎನ್
ನಾಟ್ಯಶಾಸ್ತ್ರವು ಪ್ರತಿಯೊಂದು ಹಸ್ತಗಳಿಗೂ ಅದರ ಮೂಲ ಕಲ್ಪನೆ ಹೇಗೆ ಬಂತೆಂಬುದನ್ನು ತಿಳಿಸಿಕೊಡುತ್ತದೆ. ಕಳೆದ ಬಾರಿ ಚರ್ಚಿಸಲಾದ ಪತಾಕ ಹಸ್ತವು ಬ್ರಹ್ಮನು ಪರಬ್ರಹ್ಮನ ಬಳಿ ಜಯದ ಸಂಕೇತ ಎಂದು ಕೈಯನ್ನು ಧ್ವಜದಂತೆ ಕೊಂಡೊಯ್ಯುವಾಗ ಬಳಸಿದ್ದಾಗಿದೆ ಎನ್ನಲಾಗಿದೆ. ಪತಾಕ ಹಸ್ತದ ಬಣ್ಣ ಬಳಿ, ಬ್ರಾಹ್ಮಣ ವರ್ಣ, ಪರಬ್ರಹ್ಮ ದೇವತೆ, ಶಿವ ಋಷಿ. ಅಂತೆಯೇ ಈ ಬಾರಿ ಚರ್ಚಿಸಲಾಗುವ ಹಸ್ತ ತ್ರಿಪತಾಕ. ಇಂದ್ರನು ವಜ್ರಾಯುಧವನ್ನು ಎತ್ತಲು ಈ ಹಸ್ತದ ಉದ್ಭವವಾಯಿತೆನ್ನಲಾಗಿದೆ. ಇದರ ಬಣ್ಣ ಕೆಂಪು, ಕ್ಷತ್ರಿಯ ವರ್ಣ, ಗುಹ ಋಷಿ ಪರಬ್ರಹ್ಮ ದೇವತೆ.
ಲಕ್ಷಣ: ಅಭಿನಯ ದರ್ಪಣದಂತೆ ಉಂಗುರ ಬೆರಳನ್ನು ಮಡಿಸಿ, ಉಳಿದೆಲ್ಲಾ ಬೆರಳುಗಳನ್ನು ಜೋಡಿಸಿ ನೇರವಾಗಿ ಚಾಚಿ ಹಿಡಿಯುವುದು. ಇದೊಂದು ಪುರುಷಹಸ್ತ.ಕಥಕ್ಕಳಿಯಲ್ಲಿ ಪತಾಕವೆಂದು ಹೆಸರು.
ಅಭಿನಯದರ್ಪಣ ತಿಳಿಸುವ ವಿನಿಯೋಗಗಳು: ಕಿರೀಟ, ವಜ್ರಾಯುಧ, ಇಂದ್ರ, ಕೇತಕೀ ಪುಷ್ಪ, ದೀಪ, ಅಗ್ನಿಜ್ವಾಲೆಯ ವಿಜೃಂಭಣೆ, ಕೆನ್ನೆಗಳು, ಪತ್ರಬರೆಯುವುದು, ಬಾಣ, ಪರಿವರ್ತನೆ (ತಿರುಗುವುದು), ಸ್ತ್ರೀ ಪುರುಷರ ಸಮಾಯೋಗ, ಹಿಂದಿರುಗಿ ಬರುವುದು.
ಇತರೆ ವಿನಿಯೋಗ (ನಾಟ್ಯಶಾಸ್ತ್ರ, ಲಾಸ್ಯರಂಜನ, ಸಾರಸಂಗ್ರಹ): ಮರ, ಮುಖವನ್ನು ಮೇಲೆತ್ತುವುದು, ಕಣ್ಣೀರು ತೆಗೆಯುವುದು, ಮತ್ಸ್ಯ ಶ್ರೇಷ್ಟ, ಮುಂಗುರಳನ್ನು ನೇವರಿಸುವುದು, ವಾಹನ, ಅರಣ್ಯ, ಕಲಶ, ಕೋಪ, ಕನ್ನಡಿ, ತಿಲಕ, ದಂತಮಾರ್ಜನ, ತಾಳಪತ್ರ, ವಿಷ್ಣು, ವಿಸರ್ಜನೆ, ಅಧರ, ರಕ್ತವರ್ಣ, ಶುಭವಸ್ತು ಸ್ಪರ್ಶನ, ಯಾರನ್ನಾದರೂ ಹತ್ತಿರ ಕರೆಯಲು, ದೂರಸರಿ, ಹೋಗಿ ಎಂದು ಸೂಚಿಸಲು, ಮಾಡಬೇಡ ಎನ್ನಲು, ಇದೋ ಪ್ರವೇಶಿಸುತ್ತೇನೆ ಎಂಬುದನ್ನು ಸೂಚಿಸಲು, ಗದ್ದವನ್ನು ಎತ್ತಿ ಹಿಡಿಯಲು, ಪಕ್ಕದಲ್ಲಿದ್ದವನಿಗೆ ತಲೆ ಬಾಗಿಸುವಾಗ, ಎರಡು ವಸ್ತುಗಳ ಸಂಬಂಧ ಸೂಚಿಸಲು, ಮಂಗಲದ್ರವ್ಯಗಳನ್ನು ಸ್ಪರ್ಶಿಸಲು, ಉಷ್ಣೀಷ-ಮಕುಟಧಾರಣಗಳನ್ನು ಸೂಚಿಸಲು, ಅಸಹ್ಯ, ಗಂಧ, ಮಾತು, ರೋಗ-ರುಜಿನಗಳನ್ನು ಮೂಗು-ಕಿವಿ-ಬಾಯಿಗಳನ್ನು ಮುಚ್ಚಿ ಸೂಚಿಸಲು ಇದರ ವಿನಿಯೋಗವಿದೆ. ಇದೇ ಹಸ್ತದಲ್ಲಿ ಎರಡು ಬೆರಳುಗಳನ್ನು ಕೆಳಗೆ-ಮೇಲೆ- ಚಲಿಸುವಂತೆ ಮುಂತಾಗಿ ಮಾಡಿದರೆ ಪಕ್ಷಿಗಳ ಹಾರಾಟ, ಪ್ರವಾಹ ಹರಿಯುವುದು, ಹಾವು-ಭ್ರಮರಗಳನ್ನು ಸೂಚಿಸಲು ಬಳಸಲಾಗುವುದು.
ಮೊಸರು ಮೊದಲಾದ ಮಂಗಲದ್ರವ್ಯಗಳನ್ನು ಮುಟ್ಟುವುದು, ಅನಾದರದಿಂದ ನಿರಾಕರಣೆ, ನಮಸ್ಕಾರ, ಮುಖವನ್ನು ಮೇಲಕ್ಕೆತ್ತುವುದು, ಸಂಶಯ, ರುಮಾಲು ಧರಿಸುವುದು, ಕಿರೀಟಧಾರಣೆ, ದುರ್ಗಂಧ, ದುರ್ಭಾಷೆ, ಕರ್ಕಶಧ್ವನಿ, ಚಿಕ್ಕ ಹಕ್ಕಿ ಹಾರುವುದು, ಪ್ರವಾಹ, ಮಂದ ಮಾರುತ, ಕಣ್ಣೀರು ಸುರಿಸುವುದು ಮತ್ತು ಒರೆಸುವುದು, ತಿಲಕಧಾರಣೆಗಳಲ್ಲಿ, ವೀರರಸ, ಸಂತಾಪ, ದೇವತೆಗಳು, ವಾಸನೆ ನೋಡುವುದು, ಆಶ್ಚರ್ಯಕರ ಮಾತುಗಳು, ನಾನಾವಿಧ ಅಂಜನ ಧರಿಸುವುದು, ಜ್ನಾನ, ಹಡಗು, ಕಿವಿ, ವೇಶ್ಯಾಸ್ತ್ರೀ, ಪರಸ್ತ್ರೀ, ಕಿವಿಯ ಆಭರಣ, ದೊಡ್ಡಮರ, ಪರ್ವತ, ಯಜ್ನೋಪವೀತ ಧಾರಣೆ, ಬಾಣ ತಗಲುವುದು, ರಸಾಲಮರ ಎನ್ನಲು ಬಳಸಲ್ಪಡುತ್ತದೆ.
ವಸಂತ ಋತು: ಎತ್ತರದಲ್ಲಿ ತ್ರಿಪತಾಕವನ್ನು ಹಿಡಿದು ಕಂಪಿಸುವುದು
ಕೃತ್ತಿಕಾ ನಕ್ಷತ್ರ: ತ್ರಿಪತಾಕವನ್ನು ಅಲ್ಲಾಡಿಸುವುದು.
ದಧಿ (ಮೊಸರಿನ ಸಾಗರ): ತ್ರಿಪತಾಕ ಹಸ್ತಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಎತ್ತಿ ಕೆಳಗಿಳಿಸುವುದು.
ಅರ್ಜುನ : ಎರಡೂ ಕೈಗಳಲ್ಲಿ ತ್ರಿಪತಾಕಹಸ್ತವನ್ನು ಅಲುಗಾಡಿಸುವುದು.
ಸಂಕರ ಹಸ್ತಗಳ ವಿಭಾಗದಲ್ಲಿ ತ್ರಿಪತಾಕವನ್ನು ಊರ್ಧ್ವಭಾಗದಲ್ಲಿ ಆಡಿಸಿದರೆ ವಸಂತಋತುವೆಂಬ ಅರ್ಥವೂ, ಮೇಲೆ ಮತ್ತು ಎರಡು ಪಾರ್ಶ್ವಗಳಲ್ಲಿ ಆಡಿಸಿದರೆ ವರ್ಷಋತುವೆಂದೂ ಅರ್ಥವಾಗುತ್ತದೆ. ಪುರೋಭಾಗದಲ್ಲಿ ಚಾಲಿಸಿದರೆ ಯುದ್ಧ, ಜಗಳವೆಂಬ ವಿನಿಯೋಗವಾಗುವುದು..
ದೇವತಾ ಹಸ್ತಗಳ ಪ್ರಕಾರದ ವಿಷ್ಣು ಹಸ್ತದಲ್ಲಿ ತ್ರಿಪತಾಕ ಹಸ್ತಗಳನ್ನು ಎರಡೂ ಕೈಗಳಲ್ಲಿ ಎದೆಯ ಮುಂದೆ ಇರಿಸಿ ಪ್ರದರ್ಶಿಸುಲಾಗುವುದು.
ದಿಕ್ಪಾಲಕ ಹಸ್ತಗಳಲ್ಲಿ ಕಂಡುಬರುವ ಇಂದ್ರಹಸ್ತದಲ್ಲಿ ತ್ರಿಪತಾಕಗಳನ್ನು ಸ್ವಸ್ತಿಕವಾಗಿರಿಸಿ ತಲೆಯ ಮೇಲೆ ಹಿಡಿದು, ಏಕಪಾದ ಸ್ಥಾನಕದಲ್ಲಿ ನಿಲ್ಲುವುದು. ಅಗ್ನಿಯನ್ನು ಸೂಚಿಸುವ ಅಗ್ನಿಹಸ್ತದಲ್ಲಿ ಬಲಗೈಯಲ್ಲಿ ತ್ರಿಪತಾಕ ಹಸ್ತ ಹಿಡಿದು, ಎಡಗೈಯ ಕಾಂಗೂಲ ಹಸ್ತವನ್ನೂ ಜೊತೆಗೆ ಎದೆ ಮುಂದಿರಿಸಿ ಪೂರ್ತಿ ಮಂಡಿಯಲ್ಲಿ ಕುಳಿತುಕೊಳ್ಳುವುದು. ಈಶಾನ ಹಸ್ತವು ತ್ರಿಪತಾಕವನ್ನು ಬಲಗೈಯಲ್ಲಿ ಎಡಗೈಯಲ್ಲಿ ಸಿಂಹಮುಖ ಹಸ್ತವನ್ನು ನಾಟ್ಯಾರಂಭದ ಕ್ರಮದಂತೆ ನಿಂತು ಹಿಡಿಯುವುದನ್ನು ಸೂಚಿಸುತ್ತದೆ.
ದಶಾವತಾರ ಹಸ್ತ ಪ್ರಕಾರದ ನರಸಿಂಹಾವತಾರ ಹಸ್ತದಲ್ಲಿ ಎಡಗೈಯಲ್ಲಿ ಸಿಂಹಮುಖವನ್ನೂ, ಬಲಗೈಯಲ್ಲಿ ತ್ರಿಪತಾಕ ಹಸ್ತವನ್ನು ನಾಟ್ಯಾರಂಭದಲ್ಲಿ ಹಿಡಿದರೆ, ಕಲ್ಕ್ಯಾವತಾರ ಹಸ್ತದಲ್ಲಿ ಬಲಗೈಯಲ್ಲಿ ಪತಾಕಹಸ್ತವನ್ನೂ ತಲೆಯಮೇಲೂ, ಎಡಗೈಯಲ್ಲಿ ತ್ರಿಪತಾಕವನ್ನು ಎದೆಯ ಮುಂದೆ ಹಿಡಿಯಲಾಗುತ್ತದೆ.
ನಾಟ್ಯಶಾಸ್ತ್ರ ಪ್ರಸ್ತಾಪಿಸುವ ನೃತ್ತಹಸ್ತಗಳ ಪೈಕಿಯ ಉತ್ಥಾನವಚಿಚಿತ ಹಸ್ತದಲ್ಲಿ ತ್ರಿಪತಾಕ ಹಸ್ತಗಳನ್ನು ೨ ಭುಜಗಳ ಬಳಿ ಬೇರೆ-ಬೇರೆಯಾಗಿ ಹಿಡಿಯಲಾಗುವುದು. ಇದು ವಿಷ್ಣು, ಸ್ತಬ್ಧವಾಗಿರುವುದು, ಸಾಕ್ಷಾತ್ಕಾರವನ್ನು ಸೂಚಿಸುತ್ತದೆ.
ಉಪ ಹಸ್ತ ವಿಭಾಗದಲ್ಲಿ ಬರುವ ತಿಲಕ ಹಸ್ತವು ತ್ರಿಪತಾಕಹಸ್ತಗಳಲ್ಲಿ ಎಡಗೈಯನ್ನು ಅಭಿಮುಖವಾಗಿ ಹೃದಯದ ಬಳಿಯೂ, ಬಲ ಹಸ್ತವನ್ನು ಹಣೆಯ ಬಳಿಯೂ ಎನ್ನುತ್ತದೆ. ತಿಲಕ ಹಸ್ತ ಎಂದರೆ ಹಣೆಗೆ ಹಚ್ಚಿಕೊಳ್ಳುವುದು. ದೇವತೆಗಳಿಗೆ ಅರ್ಪಿಸುವ ಪುಷ್ಪಾಂಜಲಿ ಗಂಧಲೇಪನ, ತಿಲಕವನ್ನಿಟ್ಟು ಕೊಳ್ಳುವುದರಲ್ಲಿ ಇದರ ವಿನಿಯೋಗವಿದೆ. ನಿತ್ಯಜೀವನದಲ್ಲಿ ಬೊಟ್ಟನ್ನು ಕನ್ನಡಿಯನ್ನು ಕೈಯ್ಯಲ್ಲಿ ಹಿಡಿದು ಹಣೆಗೆ ಇಟ್ಟುಕೊಳ್ಳುವುದಕ್ಕೆ ಸಂವಹಿಸುತ್ತಾರೆ.