ಅಂಕಣಗಳು

Subscribe


 

ನೃತ್ಯ- ಅಂದು, ಇಂದು, ಮುಂದು ( ಭಾಗ ೮)

Posted On: Wednesday, December 15th, 2010
1 Star2 Stars3 Stars4 Stars5 Stars (No Ratings Yet)
Loading...

Author: ನಾಟ್ಯಾಚಾರ್ಯ ಕೆ. ಮುರಲೀಧರ ರಾವ್, ಹಿರಿಯ ನೃತ್ಯಗುರುಗಳು, ಮಂಗಳೂರು

ರತನಾಟ್ಯವನ್ನು ಕಾಣುವ ಜನಸ್ತೋಮ ಹೆಚ್ಚಿದೆ. ಅದಕ್ಕೆ ತಕ್ಕಂತೆ ಕಲೆ ಇಂದು ಕುಲಗೆಟ್ಟು ನಡೆಯುತ್ತಿದೆ. ನಾಟ್ಯದ ರೂಪು ವಿನ್ಯಾಸಗಳೆಲ್ಲಾ ಜನರಲ್ಲಿ ನಾನಾ ಭಾವನೆಗಳನ್ನು ಕೆರಳಿಸಿದೆ. ಇದಕ್ಕೆ ಕಾರಣರು ಯಾರು? ಹಣವಂತರೇ? ನರ್ತಿಸುವ ಬಾಲಕಿಯರೇ? ದುಡ್ಡಿನ ಮದವೇ? ಗುರುಗಳೆನಿಸಿಕೊಂಡವರ ಲೋಭವೇ? ಹೊಸ ಸೋಗಿನಲ್ಲಿ ನಮ್ಮೆದುರು ಅತಿ ಬುದ್ಧಿವಂತರಾಗಿ ನಿಂತು ಅಪಾರ, ಸಮೃದ್ಧ ಅರಿವು ಪಡೆದುಕೊಂಡಂತಿರುವ ಮಂದಿಯೇ? ಅಥವಾ ವಿಮರ್ಶಿಸುವವರ ಧೈರ್ಯ ಸಾಲದ ಅವಸ್ಥೆಯೇ? ಕಲಿಯಲು ಬಂದ ಒಬ್ಬ ವಿದ್ಯಾರ್ಥಿಗೆ ಪ್ರಥಮವಾಗಿ ಹೇಳಿಕೊಡುವ ವಿದ್ಯೆ ಎಂದರೆ ನಿನ್ನ ಅರಂಗೇಟ್ರಂ ಮಾಡಿಸುವುದು ನನ್ನ ಉದ್ದೇಶ ! ನೀರಿನಂತೆ ವೆಚ್ಚ ಮಾಡಲು ಹಣ ಕೈಯ್ಯಲ್ಲಿರುವಾಗ ಪೋಷಕರದ್ದೂ ಅದೇ ಆಶೆ. ಹೇಳಿಕೇಳಿದ ಫೀಸು ಕೊಟ್ಟು ಮಕ್ಕಳನ್ನು ಕಳುಹಿಸಿಕೊಟ್ಟರೆ ಯಾರದೇನು ಗಂಟು ಹೋಯಿತು ಎಂಬ ಚಪಲ ಮಾತು ಹೆತ್ತವರದು. ಅಮೂಲ್ಯ ಮಕ್ಕಳನ್ನು ಪಡೆದಿದ್ದೇನೆ ಮತ್ತು ತನ್ನ ಅಂತಸ್ತನ್ನು ತೋರಿಸುವ ಛಲ ಅವರಿಗೆ. ಹೀಗಿದ್ದಾಗ ಅವರ ದೃಷ್ಟಿಗೆ ಬೀಳುವ ವ್ಯಕ್ತಿಗಳು ಮತ್ತು ಅಂತಹುದೇ ಸಂದರ್ಭವನ್ನು ಕಾಯುವವರು ನರ್ತಕಶಿಕ್ಷಕರು. ತಯಾರು ಮಾಡುವವನಿಗೆ ಒಂದು ಅನಿರೀಕ್ಷಿತ ದುಡ್ಡಿನ ಹುತ್ತವಾದರೆ ; ತಮ್ಮ ಚಿಕ್ಕಮಕ್ಕಳು ಕುಣಿಯುವಾಗ ಹತ್ತು ಜನ ಯೋಗ್ಯರು (?) ಕುಳಿತು ನೊಡುವುದೇ ಪೋಷಕರ ಹಬ್ಬ. ಕೊನೆಗೆ ಅರಂಗೇಟ್ರಂನ ನರ್ತಕಿ ಕಲಿತದ್ದು ಕೇವಲ ಹುಡುಗಾಟವನ್ನು ಮಾತ್ರ ಎಂಬಂತಾಗುತ್ತದೆ. ಅರಂಗೇಟ್ರಂ ಆದಿಯಾಗಿ ಇಂದಿನ ಕಾರ್ಯಕ್ರಮಗಳು ದೃಶ್ಯದಲ್ಲಿ ನಡೆವ ಕಲಾ ಸಂಪತ್ತು. ಅದೂ ಅಲ್ಲದೆ ಭರತನಾಟ್ಯದ ಜೊತೆಗೆ ಕಾಣಲು ಅಸಾಧ್ಯವಾದ ಕೂಚಿಪುಡಿ, ಕಥಕ್, ಮೋಹಿಯಾಟ್ಟಂ… ಹೀಗೆ ಇನ್ನೂ ಅನೇಕ ಬೇರೆ ಬೇರೆ ಶೈಲಿಗಳು. (ಅವು ಯಾವುದೆನ್ನಲು ನಮಗೆ ಸಾಧ್ಯವಿಲ್ಲ.) ಇದಕ್ಕೆ ಸಲುವ ಯೋಗ್ಯ(?) ಸಂಗೀತಗಾರರು. ನೃತ್ಯದ ಒಂದೇ ಒಂದು ಬಗೆಯೂ ಅಸಮ್ಮತ, ಅಸಮರ್ಥವಾದರೂ; ಕೊನೆಯಲ್ಲಿ ಅವರೆಲ್ಲರ ಮುಗುಳುನಗೆ ಒಂದೇ ನಮಗೆ ಕಾಣಿಸುವುದು. ಬಹುಷಃ ದುಡ್ಡು ಕೈಗೆ ಬಂತಲ್ಲ ಎಂಬ ಭಾವವೇ ಇರಬೇಕು ! ಇನ್ನು ಮುಂದಾದರೂ ಅರಂಗೇಟ್ರಂ ಎಂಬ ಶಬ್ದಕ್ಕೆ ಜಾಗರೂಕರಾಗಿರಬೇಕು. ಅಲ್ಲಿ ರಂಗಸ್ಥಳದಲ್ಲಿ ಇದ್ದಾರೆ ದುಡ್ಡು ಬಾಚುವ ಮಹಾಮಹಿಮರು ! ಒಟ್ಟಿನಲ್ಲಿ ಕಲೆಯನ್ನೇ ಮಾರಾಟಕ್ಕಿಡುವ ಸನ್ನಿವೇಶದಲ್ಲಿ ನಿಜವಾಗಿ ಕಲಿಯಲು ಬಂದ ಬಾಲಕಿಯರು ಈ ಮಾರ್ಕೆಟ್ಟಿನಲ್ಲಿ ಏನನ್ನು ತಾನೇ ಕಲಿಯುತ್ತಾರೆ? ಫ್ಯಾಕ್ಟರಿಯಲ್ಲಿ ಹುಟ್ಟಿಕೊಂಡಂತೆ ಗುರುಗಳು (?) ಹುಟ್ಟಿಕೊಳ್ಳುವಾಗ ಅವರಿಗೆ ತಕ್ಕಂತೆ ಕಾರ್ಯಕ್ರಮ ನಡೆಯುವುದು ಅನೂಚಾನ ಪದ್ಧತಿ. ಇಂತಹ ದೃಶ್ಯಗಳನ್ನು ಹಲವು ಬಾರಿ ಹಲವು ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ಜೊತೆಗೆ ಈ ಸಮಾರಂಭಗಳನ್ನು ಹಿಂಬಾಲಿಸಿ ಬರುವವರು ನರ್ತಕರೆಂಬ ಹಣೆಪಟ್ಟಿಗೆ ಸೇರಿಸಿಕೊಳ್ಳದೆ ಪಂಡಿತ (?) ರೆನಿಸಿಕೊಳ್ಳುತ್ತಾರೆ. ಅವರ ಹಿಂದಿನಿಂದ ಕಾಣಿಸುವವರು ಸಾಮಾನ್ಯ ಜನರು. ಮುಂದಿರುವುದು ಯಂತ್ರದಂತೆ ಸಾಗುವ ನಾಟ್ಯಾಂಗ ಮತ್ತು ಮನಸ್ಸಿಗೆ ಎಟುಕದ ಭಾವಾವೇಗ. ಕಲೆ ಎಂತಹ ಪ್ರಕಾರದ್ದು ಎಂಬ ಉದ್ದೇಶವಿರದೆ ಅದನ್ನು ಸಿಕ್ಕಾಪಟ್ಟೆ ಹೊಗಳುವ ಮತ್ತು ಹೊಗಳಿಸಿಕೊಳ್ಳುವ ಅತಿರೇಕದ ಅವಿವೇಕ ಬುದ್ಧಿ. ಆದರೆ ಎದುರು ನಿಲ್ಲುವವರು ಯಾರೂ ಇಲ್ಲ. ಬಹುಷಃ ಆತ್ಮರಕ್ಷಣೆಗೋ ಏನೋ ! ಪರಿಣಾಮ ; ಯೋಗ್ಯ ಸಭಾಸದರು ತಾವಾಗಿ ಕಡಿಮೆಯಾಗುತ್ತಾರೆ. ಅಲ್ಲದೆ ಈ ಲೋಪಗಳೇ ಕಲೆಗೆ ಆಪತ್ತನ್ನು ತರುತ್ತದೆ.

Leave a Reply

*

code