ಅಂಕಣಗಳು

Subscribe


 

ಹಂಸಪಕ್ಷ ಹಸ್ತ

Posted On: Tuesday, December 14th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

 

Copyrights reserved. No use Without prior permission.

ಕ್ಷಣ: ಮಧ್ಯದ ಮೂರು ಬೆರಳುಗಳನ್ನು ಸಮನಾಗಿ ನೀಡಿ ಕಿರುಬೆರಳನ್ನು ದೂರ ಚಾಚಬೇಕು. ಹೆಬ್ಬೆರಳನ್ನು ಸ್ವಲ್ಪ ಬಗ್ಗಿಸಿ ಹಿಡಿಯಬೇಕು. ಹಂಸಪಕ್ಷ ಎಂದರೆ ಹಂಸದ ರೆಕ್ಕೆ ಎಂದರ್ಥ. ಇದು ಸ್ತ್ರೀ ಹಸ್ತ ಪ್ರಕಾರಕ್ಕೆ ಸೇರಿದ್ದು.

ತಂಡು ಮಹರ್ಷಿ ತಾಂಡವವನ್ನು ಕಲಿಯುವಾಗ ಪ್ರಯೋಗಿಸಿದ ಹಸ್ತವಿದು. ಅಪ್ಸರ ವರ್ಣ, ಶ್ಯಾಮಲ ಬಣ್ಣ, ಋಷಿ : ಭಾರತಿ, ಅಧಿದೇವತೆ : ಪಂಚಸಾಯಕ ( ಮನ್ಮಥ).

ವಿನಿಯೋಗ: ಆರು ಎಂಬ ಸಂಖ್ಯಾ ಸೂಚನೆ, ಸೇತುವೆ ಕಟ್ಟುವುದು, ಉಗುರಿನಿಂದಾದ ಗುರುತು, ಬೊಕ್ಕಸ, ಸಂಪತ್ತು, ಕಾಯ್ದು ಇರುವುದು.

ಇತರೇ ವಿನಿಯೋಗ : ನೀರು ಹೊಯ್ಯುವುದು, ಗಂಧಲೇಪನ, ಪ್ರತಿಗ್ರಹ, ಆಚಮನ, ಆಲಿಂಗನ, ಬಹುಮೌಢ್ಯ, ಸ್ತಂಭವೆಂಬ ಸಾತ್ವಿಕಭಾವ, ರೋಮಾಂಚ, ಸ್ಪರ್ಶ, ಮೈ ತಿಕ್ಕುವುದು, ಸ್ತ್ರೀಯರ ಶೃಂಗಾರ ನಟನೆ, ಮುಚ್ಚುವುದು, ಕರೆಯುವುದು, ಹಕ್ಕಿಯ ರೆಕ್ಕೆ, ಕುಳ್ಳ, ಮೇಘ, ನಾಯಕಿಯ ಸಂತಾಪ, ಕುಶಲ ಪ್ರಶ್ನೆ, ಸತ್ಯ, ಸಂತೋಷ, ದುಃಖ, ಹೋಗಿ ಬಾ ಎಂಬ ಮಾತು, ದುಃಖ, ಗಲ್ಲ ಹಿಡಿಯುವುದು, ಪ್ರತ್ಯಕ್ಷಾಲಿಂಗನ, ಪರೋಕ್ಷಾಲಿಂಗನ, ಕಟಾಕ್ಷ ವೀಕ್ಷಣೆ, ಭಯ ಚಿಂತೆಯಿಂದ ಗಂಡಸ್ಥಲವನ್ನು ಹಿಡಿದುಕೊಳ್ಳುವುದಕ್ಕೆ, ಏನನ್ನಾದರೂ ಸ್ವೀಕರಿಸುವುದಕ್ಕೆ, ರೋಮಾಂಚನದ ಹರ್ಷ, ವಾಸನಾಸಂಬಂಧ, ಉಡುಗೊರೆ ಸ್ವೀಕಾರ, ಬ್ರಾಹ್ಮಣ ಭೋಜನ, ಸ್ಪರ್ಶ, ಸಮ್ಮೋಹನ ಚೂರ್ಣ, ವೀಣಾವಾದನ, ಬೇರ್ಪಡುವಿಕೆ, ಸೂರ್ಯಶಾಖ, ಶ್ಯಾಮ ಬಣ್ಣ, ಅಪ್ಸರೆ ಜಾತಿ, ಬೈತಲೆಬೊಟ್ಟು, ಮರ್ಯಾದಾಭಾವ, ಶುದ್ಧನೃತ್ಯ ಶೈಲಿ, ದೂರಕ್ಕೆ ಕರೆದುಕೊಂಡು ಹೋಗುವುದು, ಒಟ್ಟು ಸೇರಿಸುವುದು, ಪ್ರತಿಬಂಧಿಸುವುದು, ಕಾರ್ಯ ಸಂಪೂರ್ಣಗೊಳ್ಳುವುದು, ವ್ಯಕ್ತಿ ಚಿತ್ರ ಬರೆಯುವುದು ಇತ್ಯಾದಿ.

ಯುವತಿ, ಭೋಜನ, ಕೊಟ್ಟ ವಸ್ತುಗಳನ್ನು ಅಂಗೀಕರಿಸುವುದು, ಗುರಾಣಿ, ಸನ್ನಾಹ, ಆಲಿಂಗನ, ಆಚಮನ, ಸ್ಪರ್ಶ, ಹೋಗುವುದು-ಬರುವುದು, ಸ್ತನಗಳನ್ನು ತಿಕ್ಕುವುದು, ದೊಡ್ಡ ಸ್ತಂಭ, ಆಕಾಶ, ದೇಶ, ವಿಭ್ರಮ, ರೋಮಾಂಚ, ಲಕ್ಷಣ, ತುಪ್ಪ, ಅಮೃತ, ಪಶ್ಚಾತ್ತಾಪ, ರಸ, ತಾವರೆ, ಮಾವು, ರಸಾಯನ, ಖೇದ, ವಿಷಾದ, ಸಮ್ವಾದ, ಹೂಗಲನ್ನು ಕೊಯ್ಯುವುದು, ನಿಕಟವಾಗಿರುವುದು, ಕಪಟ, ದಾನ, ಕಾಲ, ವೇದ, ಚಿಂತನೆ, ಮದ್ಗುರವೆಂಬ ಮೀನು, ಆನೆಯ ತಲೆ, ತಿಮಿಂಗಿಲ, ಗಂಟಲು, ಕುತ್ತಿಗೆ, ಹೃದಯ, ನಾಲಗೆ, ಪಾದ, ಸ್ಥಿತಗೊಳ್ಳುವುದು, ಕೈಯ್ಯ ತುಂಬಾ ಇರುವ ನೀರು, ಹೊದಿಕೆ ಇತ್ಯಾದಿಗಳನ್ನು ಸಂವಹಿಸುತ್ತದೆ.

ಸಂಕರ ಹಸ್ತ ವಿಭಾಗದಲ್ಲಿ, ಹಂಸಪಕ್ಷ ಹಸ್ತವನ್ನು ಎಡಗಿವಿಯಿಂದ ಬಲಗಿವಿಯವರೆಗೂ ಪ್ರಸರಿಸಿದರೆ ಮುಂಗುರುಳು, ಅಥವಾ ಕಿರೀಟಬಂಧಿ ಎಂದರ್ಥ. ಎರಡೂ ಹಂಸಪಕ್ಷಗಳನ್ನು ನಿತಂಬ ಅಥವಾ ತೊಡೆಯಲ್ಲಿಟ್ಟರೆ ವಸ್ತ್ರ ಧರಿಸಿದ ಸಂಕೇತ. ಹಣೆಯಿಂದ ಹಿಂಬದಿ ಕೂದಲು ವರೆಗೆ ಪ್ರಸರಿಸಿದರೆ ಆಭರಣಗಳ ಧರಿಸುವಿಕೆಯ ಸಂಕೇತ. ಹಂಸಪಕ್ಷವನ್ನು ಎಡಭುಜದ ಮೇಲಿಟ್ಟು ಕೆಳ ಕಿಬ್ಬೊಟ್ಟೆಯ ವರೆಗೂ ವಿರುದ್ಧ ದಿಕ್ಕಿಗೆ ತಂದರೆ ಅದರರ್ಥ ಜನಿವಾರ ಧರಿಸುವಿಕೆ. ಎರಡೂ ಹಂಸಪಕ್ಷಗಳನ್ನು ತೋಳುಗಳಲ್ಲಿ ವಿರುದ್ಧದಿಕ್ಕಿಗೆ ಹಿಡಿದರೆ ಸಂಬಂಧಗಳ ಕಡಿಯುವಿಕೆ ಎಂದರ್ಥ.

ನಾನಾರ್ಥ ಹಸ್ತ ವಿಭಾಗದಲ್ಲಿ ಹಂಸಪಕ್ಷವನ್ನು ಅಡ್ಡಲಾಗಿ, ಮೇಲ್ಮುಖ-ಕೆಳಮುಖವಾಗಿ ಹಿಡಿದರೆ ; ರೇಖೆ ಮತ್ತು ದ್ರವಪದಾರ್ಥವನ್ನು ಸೂಚಿಸುತ್ತದೆ.

ಭಗಿನೀ ಹಸ್ತ (ಸಹೋದರಿ)ಸೂಚನೆಗೆ ಬಲಗೈಯಿಂದ ಹಂಸಪಕ್ಷವನ್ನೂ, ಎಡಗೈಯಿಂದ ಕಾಂಗೂಲವನ್ನೂ ಹಿಡಿಯಬೇಕು. ಭರತಾರ್ಣವ ಹೇಳುವ ಸಮಯಸೂಚೀ ಮುದ್ರೆಗಳ ಪೈಕಿ ನಿಮೇಷ -ಸೆಕೆಂಡಿನ ೨/೧೩೫ ಭಾಗ ಎನ್ನಲು ಹಂಸಪಕ್ಷದ ವಿನಿಯೋಗವಿದೆ. ಅಭಿನಯ ದರ್ಪಣ ಪ್ರಸ್ತಾಪಿಸುವ ನಾಯಿಕೆಯರ ಪೈಕಿ ಶಂಕಿನೀ ಸ್ತ್ರೀಗೆ ಹಂಸಪಕ್ಷಹಸ್ತ ಅಥವಾ ಮೃಗಶೀರ್ಷವನ್ನು ಎದೆಯ ಮುಂದೆ ನಿಲ್ಲಿಸಬೇಕು.

ನಿತ್ಯ ಜೀವದಲ್ಲಿ ಬಾಎಂದು ಕರೆಯಲು, ಹಚ್ಚುವುದು, ಇತ್ಯಾದಿಗಳ ಉಪಯೋಗಕ್ಕೆ ಬಳಸುತ್ತಾರೆ.

ಸಂಯುತ ಹಸ್ತಗಳ ಪೈಕಿ ನಾಟ್ಯಶಾಸ್ತ್ರ ಉಲ್ಲೇಖಿಸುವ ವರ್ಧಮಾನ ಹಸ್ತದ ಲಕ್ಷಣ ಎರಡು ಹಂಸಪಕ್ಷಗಳನ್ನು ಪರಾಙ್ಮುಖವಾಗಿ ಅಂದರೆ ಅಂಗೈಗಳನ್ನು ತನಗೆ ಹಿಮ್ಮುಖವಾಗಿರುವಂತೆ ಮುಂಗೈಗಳಲ್ಲಿ ಕೂಡಿಸಿ ಹಿಡಿಯುವುದೇ ಆಗಿದೆ.

ವಿನಿಯೋಗ : ಕಿಟಕಿ, ಬಾಗಿಲು ಮೊದಲಾದುವುಗಳನ್ನು ತೆರೆಯುವುದು, ಪರದೆ ಹಾಕಿದ ಕಿಟಕಿ, ಶತ್ರುಗಳ ಎದೆಯನ್ನು ಸೀಳುವುದು, ನಾನಾ ಪ್ರಕಾರ ಎನ್ನುವುದು, ಕೊಟ್ಟೆವು,ಒಂದಾನೊಂದು ಕಾಲದಲ್ಲಿ ಎಂಬ ಭಾವ, ಏನು ಏನು ಎನ್ನುವುದು, ದರ್ಭೆ ಹಿಡಿಯುವುದು, ಅತಿಪ್ರಯಾಸ ಎನ್ನುವುದು, ಏನೋ ಒಂದು ಎಂಬ ಭಾವ, ದೊಡ್ಡ ದೊಡ್ಡ ಕಟ್ಟಡಗಳ ನಗರ, ಪಟ್ಟಣ, ವಸ್ತ್ರಗಳನ್ನು ಹರಿಯುವುದು, ಬಟ್ಟೆಗಳನ್ನು ಶುಚಿಗೊಳಿಸುವುದು, ತೆಗೆದುಕೊಳ್ಳುವುದು, ಒಗ್ಗಟ್ಟು, ಸಂಕುಚನ, ಕಟ್ಟಳೆ, ಸತ್ಯ, ರಾಕ್ಷಸನ ಹೊಟ್ಟೆ ಬಗೆಯುವುದು, ನರಸಿಂಹ, ಮಹತ್ವ.

ನಿತ್ಯಜೀವದಲ್ಲಿ ಈಜುವಾಗ ನೀರನ್ನು ಸೀಳುವುದು, ಬೇರೆ ಬೇರೆ ಮಾಡುವುದು ಎಂಬರ್ಥದಲ್ಲೂ, ತೆರೆಯುವುದು, ಸೀಳುವುದು ಎಂದು ಸಂವಹಿಸಲು ಬಳಸುತ್ತಾರೆ.

ನೃತ್ತ ಹಸ್ತಗಳ ಪೈಕಿ ಉದ್ವೃತ್ತ ಹಸ್ತಕ್ಕೆ ಹಂಸಪಕ್ಷದ ಸಹಕಾರ ಬೇಕು. ಇಲ್ಲಿ ಕಟಕಾಮುಖವನ್ನು ಉಪಯೋಗಿಸಿ ಚತುರಶ್ರದಲ್ಲಿ ಇದ್ದ ಹಸ್ತಗಳನ್ನು ತಿರುಗಿಸಿ ಹಂಸಪಕ್ಷದಲ್ಲಿ ಹಿಡಿದು ಒಂದನ್ನು ಬೀಸಣಿಗೆಯಂತೆ ತಿರುಗಿಸಬೇಕು. ಇನ್ನೊಂದು ಕೈಯ ಅಂಗೈ ಅಧೋಮುಖವಾಗಿರುವಂತೆ ಎದೆಯ ಬಳಿಗೆ ತರುವುದು. ಈ ಹಸ್ತಕ್ಕೆ ತಲವೃಂತ, ಉಧ್ಹ್ರುತ್ತ ಎಂಬ ಹೆಸರುಗಳೂ ಇವೆ.

ವಿನಿಯೋಗ : ನಾಚಿಕೆ, ಸಂತಾಪ, ಮುಳ್ಳು, ಉಪಮೆ, ಕೊಂಬು, ಭಯ, ಗಣನೆ, ವ್ಯತ್ಯಾಸ, ಹಂಸದಂಪತಿ, ಮನೆ, ಉಯ್ಯಾಲೆಯಾಡುವ ಚಲನೆ, ಶಾಂತತೆ, ಜಲಶಕ್ತಿ, ಯೋಚಿಸುವುದು, ದೊಡ್ಡ ವಸ್ತು, ಮನೆ, ನಿಲ್ಲು, ಈಗ, ಬೇಡ ಎನ್ನಲು ಬಳಕೆಯಾಗುತ್ತದೆ.

ಇನ್ನೊಂದು ನೃತ್ತ ಹಸ್ತ ತಲಮುಖಕ್ಕೆ ಚತುರಶ್ರ ಹಸ್ತಗಳನ್ನು ಹಂಸಪಕ್ಷದಲ್ಲಿರಿಸಿ ಅಂಗೈಗಳನ್ನು ಕೆಳಗೆ ಓರೆಯಾಗಿ ಇದಿರು-ಬದಿರಾಗಿ ಹಿಡಿಯುವುದು ಅಥವಾ ಎರಡು ಹಂಸಪಕ್ಷಗಳನ್ನು ಉದ್ವೃತ್ತ ಮಾಡಿ ಅಂಗೈಗಳು ಇದಿರುಬದಿರಾಗುವಂತೆ ಹಿಡಿಯುವುದು ಅಥವಾ ಭುಜದ ಬಳಿ ಹಿಡಿಯುವುದು. ತಲವಕ್ತ್ರ ಎನ್ನುವುದು ಈ ಹಸ್ತದ ಮತ್ತೊಂದು ಹೆಸರು. ಭರತಾರ್ಣವದಲ್ಲಿ ಉಲ್ಲೇಖಿತ.

ವಿನಿಯೋಗ : ಆಲಂಗಿಸುವುದು, ದೊಡ್ಡವಸ್ತು, ಮನೋಹರವಾಗಿ ಧ್ವನಿಸುವ ಮದ್ದಳೆ, ಮಂಡಿ ನೃತ್ಯ, ಮುಖನಾಟ್ಯ, ಅಲ್ಲಿ-ಇಲ್ಲಿ ಎನ್ನಲು, ಭುಜಂಗಾಸೂಕ್ಷ್ಮ ನಾಟ್ಯ, ಒಗ್ಗಟ್ಟು, ಅಧೀನ ಎಂಬುದನ್ನು ಅರ್ಥೈಸಿಕೊಳ್ಳುವುದು, ವಿಷಯಾಸಕ್ತ.

ಮತ್ತೊಂದು ನೃತ್ತ ಹಸ್ತ ಸ್ವಸ್ತಿಕಾಮುಖ ಅಥವಾ ಸ್ವಸ್ತಿಕದ ಲಕ್ಷಣ ಹಂಸಪಕ್ಷ ಹಸ್ತಗಳನ್ನು ಮುಂಗೈಯಲ್ಲಿ ಸ್ವಸ್ತಿಕವಾಗಿಸಿ ಇಡುವುದು. ಸ್ವಸ್ತಿಕ ಹಸ್ತಕ್ಕೆ ಸಮೀಪದ ಹಸ್ತವಿದು. ವಿನಿಯೋಗ :ಕಲ್ಪವೃಕ್ಷ, ಪರ್ವತ.

ನೃತ್ತ ಹಸ್ತವಾದ ರೇಚಿತಕ್ಕೆ ಹಂಸಪಕ್ಷದ ಹಸ್ತಗಳನ್ನು ತಿರುಗಿಸಿ ರೇಚಿತ (ಮೇಲೆ) ಮಾಡಿ ಭರದಿಂದ ಅಂಗೈಗಳನ್ನು ಮೇಲೆ ಚಾಚಬೇಕು. ಭರತಾರ್ಣವದಲ್ಲಿ ಅಲಪದ್ಮದ ಬಳಕೆಯಿದೆ.

ವಿನಿಯೋಗ : ಮಕ್ಕಳನ್ನು ಎತ್ತಿಕೊಳ್ಳುವುದು. ಚಿತ್ರಫಲಕವನ್ನು ತೋರಿಸುವುದು, ಪರಶಿವನ ಚಾಲೀಯ ನಟನ, ತೆಂಗಿನಕಾಯಿ, ಆರ್ತನಾದ, ಪಾರ್ಶ್ವನಟನ, ಕಲ್ಪವೃಕ್ಷ, ಯಂತ್ರದ ಕಿರಿಕಿರಿಗಳು, ನೃತ್ಯದ ಅಂತಿಮ ಘಟ್ಟದ ಹೊತ್ತು ಎಂಬಲ್ಲಿ ಬಳಕೆಯಾಗುತ್ತದೆ.

ಕಥಕಳಿಯಲ್ಲಿ ಹಂಸಪಕ್ಷಕ್ಕೆ ಕರ್ತರೀಮುಖವೆಂದು ಕರೆಯುತ್ತಾರೆ. ಕಿರುಬೆರಳನ್ನು ಮೇಲೆತ್ತಿ, ಉಳಿದ ಮೂರು ಬೆರಳನ್ನು ಒಟ್ಟಿಗೆ ಮುಂದಕ್ಕೆ ತಂದು ಹೆಬ್ಬೆರಳು ತೋರುಬೆರಳ ಮಧ್ಯಗೆರೆಗೆ ಸೇರುವಂತೆ ಮಾಡುವುದು ಅದರ ಲಕ್ಷಣ.

ವಿನಿಯೋಗ : ಪಾಪ, ಆಯಾಸ, ಹಸಿವು, ಬ್ರಾಹ್ಮಣ, ಯಶಸ್ಸು, ಮನೆ, ಗಜಕುಂಭ, ವ್ರತ, ಶುದ್ಧಿ, ಗರ್ಭ ಧರಿಸುವುದು, ಮುಕ್ತಾಯ, ಬೇಟೆ, ಏಕವಚನ ಸಂಬೋಧನೆ, ಪದ, ಆಲಿಸುವುದು, ಮಾತನಾಡುವುದು, ನದಿದಂಡೆ ಅಥವಾ ತೀರ, ವಂಶ, ಮುಖ, ಪುರುಷ, ನಾವು ಎನ್ನಲು, ವಿರೋಧ, ಹುಡುಗ, ಆದಿ, ಮುಂಗುಸಿ, ಕಾಲ ಸರಿದುಹೋಗುವುದು. ಉಳಿದಂತೆ ಕಥಕಳಿಯ ಮಿಶ್ರ ಹಸ್ತಗಳಲ್ಲೂ ಹಂಸಪಕ್ಷವೆಂಬ ಕರ್ತರೀಮುಖ ಹಸ್ತ ವ್ಯಾಪಕ ಬಳಕೆಯಾಗುತ್ತದೆ. ಕಥಕಳಿಯಲ್ಲಿ ಹಂಸಪಕ್ಷವೆಂದು ಕರೆಸಿಕೊಳ್ಳುವುದು ಅಭಿನಯದರ್ಪಣದ ಅರ್ಧಚಂದ್ರ ಹಸ್ತ.

ಒಡಿಸ್ಸಿಯ ಹಂಸಪಕ್ಷವು ಮೃಗಶೀರ್ಷ ಹಸ್ತವಾಗಿದೆ. ಅಂತೆಯೇ ಹಂಸಪಕ್ಷಕ್ಕೆ ಮೃಗಶೀರ್ಷವೆಂಬ ಹೆಸರಿದೆ. ಅಲ್ಲಿನ ಕರಣಪ್ರಕಾರಗಳ ಪೈಕಿ ಬರುವ ಗೋಪನ ಎಂಬ ಚಲನೆಯಲ್ಲಿ ಧ್ವಜ ಮತ್ತು ಹಂಸಪಕ್ಷ್ಯವೆಂಬ ಮೃಗಶೀರ್ಷದ ಬಳಕೆಯಿದೆ.

Leave a Reply

*

code