Author: ಡಾ.ಪ್ರಭಾಕರ ಜೋಷಿ, ಯಕ್ಷಗಾನ ವಿದ್ವಾಂಸರು, ಅರ್ಥಧಾರಿಗಳು, ಮಂಗಳೂರು
ನೂಪುರ ಭ್ರಮರಿಯ ೪/೪ರಲ್ಲಿರುವ ದಿ. ಭಾಗವತ ಕಾಳಿಂಗ ನಾವಡರ ಕುರಿತ ಲೇಖನದ ಬಗೆಗೆ ಒಂದು ಚಿಕ್ಕ ಅಭಿಪ್ರಾಯ. ದಿ. ನಾವಡರು ಶ್ರೇಷ್ಟ ಕಲಾವಿದ, ‘ಸ್ಟಾರ್’ ಎರಡೂ ಹೌದು. ಆದರೆ-
1. ‘ಏರುಪದ’ಗಳು ನಾವಡರ ‘strong area’ ಅಲ್ಲ.
೨. ಮುಂಬಯಿಯಲ್ಲಿ ಚಿಟ್ಟಾಣಿ-ನಾವಡರು ಪ್ರವೇಶಿಸಿದ ಕಾಲಕ್ಕೆ ಅದು ಯಕ್ಷಗಾನದ ಗಂಧಗಾಳಿ ಇಲ್ಲದಿದ್ದ ಪ್ರವೇಶ ಆಗಿತ್ತೇ? ಸುಮಾರು ೧೮೨೫ರಿಂದಲೇ ಅಲ್ಲಿ ಯಕ್ಷಗಾನವಿತ್ತು. ೧೯೪೦ರ ಬಳಿಕ ಹಲವು ಮೇಳಗಳು, ತಂಡಗಳು ಅಲ್ಲಿ ಪ್ರದರ್ಶನ ನೀಡಿವೆ. ಇರಾ-ಕರ್ನಾಟಕ ತಂಡಗಳ ಮುಂಬೈ ಆಟಗಳು (೧೯೬೦-೧೯೮೦) ದಾಖಲೆ ನಿರ್ಮಿಸಿದವು. ಅನೇಕ ಸ್ಥಳೀಯ ಸಂಘಟನೆಗಳು ಹವ್ಯಾಸಿ-ವ್ಯವಸಾಯಿಗಳನ್ನು ಕಲೆಹಾಕಿ ದಶಕಗಳಿಂದ ಯಕ್ಷಗಾನ ಪ್ರದರ್ಶನ ನೀಡುತ್ತಾ ಬಂದಿವೆ. ಹಾಗಾಗಿ ಅಲ್ಲಿ ಯಕ್ಷಗಾನದ ನೆಲೆ ಬಹಳ ಮೊದಲಿನಿಂದಲೇ ಇತ್ತು. -ಕಲಾಪತ್ರಿಕೆಗಳಲ್ಲಿ ಮಾಹಿತಿ ಆದಷ್ಟೂ ಖಚಿತವಾಗಿ ಸೌಮ್ಯ ಶೈಲಿಯಲ್ಲಿ ಇದ್ದರೆ ಸೂಕ್ತ. ಓರ್ವರ ಕೊಡುಗೆಯನ್ನು ಪ್ರಶಂಸಿಸುವ ಭರದಲ್ಲಿ ತಪ್ಪು ಮಾಹಿತಿ ವಿತರಣೆ ಆಗಬಾರದು ಎಂದು ನನ್ನ ಸೂಚನೆ.
-ಡಾ. ಪ್ರಭಾಕರ ಜೋಷಿ, ಯಕ್ಷಗಾನದ ಹಿರಿಯ ವಿದ್ವಾಂಸರು, ಮಂಗಳೂರು.
ಪಿಯ ಓದುಗರೇ,
ಕಳೆದ ಬಾರಿ ನಾನು ಬರೆದ ಅಂಕಣದ ಬಗೆಗೆ ಮಾನ್ಯ ಡಾ.ಪ್ರಭಾಕರ ಜೋಷಿಯವರು ಪ್ರತಿಕ್ರಿಯಿಸಿದ್ದಾರೆ ಹಾಗೂ ಮುಂಬಯಿಯ ಯಕ್ಷಗಾನ ಇತಿಹಾಸದ ಬಗೆಗೆ ಮಾಹಿತಿ ನೀಡಿದ್ದಾರೆ. ನನ್ನಿಂದ ನೀಡಲಾಗಿದ್ದ ತಪ್ಪು ಮಾಹಿತಿಯನ್ನು ಸರಿಪಡಿಸಿದ್ದಕ್ಕೆ ಅವರಿಗೆ ನಾನು ಆಭಾರಿಯಾಗಿದ್ದೇನೆ. ಆದರೆ ನಾನು ನೋಡದ, ಹಿಂದೆ ಆಗಿಹೋದ ಕಲಾವಿದರ ಬಗೆಗೆ ಇನ್ಯಾರಲ್ಲೋ ಕೇಳಿ ಬರೆಯುವ ಸಂದರ್ಭದಲ್ಲಿ ಎಲ್ಲೋ ಮಾಹಿತಿಯ ಕೊರತೆ ಅಥವ ತಪ್ಪು ಮಾಹಿತಿಯಿಂದ ಆ ರೀತಿ ಬರೆಯುವ ಹಾಗಾಯಿತೆಂದು ತಿಳಿಸಬಯಸುತ್ತೇನೆ.
ಹಾಗೆಯೇ ಡಾ.ಜೋಷಿಯವರು ಅಂಕಣಕ್ಕೆ ಪ್ರತಿಕ್ರಿಯಿಸುತ್ತಾ, ‘ಏರುಪದಗಳು ನಾವಡರ ಸ್ಟ್ರಾಂಗ್ ಏರಿಯಾ ಅಲ್ಲ’ ಎಂದೂ ಸೇರಿಸಿದ್ದಾರೆ. ಆದರೆ ನಾನು ಹೇಳಿರುವುದು ‘ಕರ್ಣಕಠೋರವಾದ ಏರುಪದ್ಯಕ್ಕೂ ಒಂದು ಇಂಪನ್ನು ಕೊಟ್ಟವರು ನಾವಡರು’ ಎಂದು ಮಾತ್ರ. ಅದು ಅವರ ಸ್ಟ್ರಾಂಗ್ ಅಥವ ವೀಕ್ ಏರಿಯ ಆಗಿತ್ತೇ ಎಂಬುದರ ಬಗೆಗೆ ನಾನು ಉಲ್ಲೇಖಿಸಿಲ್ಲ. ಒಂದೊಮ್ಮೆ ನನ್ನ ಆ ವಾಕ್ಯಕ್ಕೂ ಹಿರಿಯರಾದ ಜೋಷಿಯವರು ಆಕ್ಷೇಪಿಸುವುದಾದರೆ ‘ಸರ್, ಅದು ನಿಮ್ಮ ಅಭಿಪ್ರಾಯ’ ಎಂದಷ್ಟೇ ವಿನಯಪೂರ್ವಕವಾಗಿ ಹೇಳಬಲ್ಲೆ. ಯಾಕೆಂದರೆ ಕ್ಯಾಸೆಟ್‌ನಲ್ಲಾದರೂ ನಾವಡರನ್ನು ಸಾಕಷ್ಟು ಕೇಳಿದ ನನಗೆ ಅವರ ಏರುಪದಗಳು ವಿಶೇಷವಾಗೇನೂ ಇರಲಿಲ್ಲ ಅನ್ನುವುದನ್ನು ಒಪ್ಪುವುದಕ್ಕೆ ಕಷ್ಟವಾಗುತ್ತಿದೆ.
ಏನೇ ಇರಲಿ. ಯಕ್ಷಗಾನದಲ್ಲಿ ಸಾಕಷ್ಟು ಮಾಗಿದ, ನಾನೂ ಸೇರಿದಂತೆ ಅಸಂಖ್ಯ ಮಂದಿ ಅಭಿಮಾನಪಡುವ ಡಾ.ಜೋಷಿಯವರು ನನ್ನ ಬರಹಕ್ಕೆ ಪ್ರತಿಕ್ರಿಯಿಸಿದ್ದು ನನಗಂತೂ ಬರೋಬ್ಬರಿ ಖುಷಿಕೊಟ್ಟಿದೆ. ಹಾಗೆಯೇ ನನ್ನ ಜವಾಬ್ದಾರಿಯನ್ನೂ ಹೆಚ್ಚಿಸಿದೆ ಎಂದು ಪ್ರಾಮಾಣಿಕವಾಗಿ ಹೇಳಬಯಸುತ್ತೇನೆ.
– ರಾಕೇಶ್ ಕುಮಾರ್ ಕಮ್ಮಜೆ, ಪುತ್ತೂರು.
December 5th, 2010 at 5:46 pm
article by rakesh was good.