Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ
ಕ್ರಿಕೆಟ್ ಬಗೆಗೆ ಆಸಕ್ತಿಯಿದ್ದವರ ಮುಂದೆ ನೀವೊಮ್ಮೆ ತೆಂಡೂಲ್ಕರ್ ಹೆಸರೆತ್ತಿ ನೋಡಿ. ಮತ್ತೆ ಅನಾಮತ್ತು ಒಂದು-ಒಂದೂವರೆ ಗಂಟೆ ಅವರೇ ಮಾತನಾಡುತ್ತಾರೆ! ಮೊನ್ನೆ ಮುರಳಿಗೆ ಎಂಟುನೂರು ವಿಕೆಟ್ ಸಿಕ್ತಂತೆ ಅನ್ನಿ, ನಿಮ್ಮ ಕಥೆ ಗೋವಿಂದ! ಅವ ಹೇಗೆ ವಿಕೆಟ್ ಪಡೆದ, ಅವನ ತಾಕತ್ತೇನು?, ಅವನಿಗೆ ಇದೆಲ್ಲಾ ಹೇಗೆ ಸಾಧ್ಯವಾಯಿತು?, ಅವನ ಎಂಟುನೂರನ್ನು ತಪ್ಪಿಸಲು ಭಾರತಕ್ಕೆ ಸಾಧ್ಯವಿತ್ತೇ?… ಹೀಗೆ ಅವರ ವಿಷಯ ಮುಗಿಯುವುದೇ ಇಲ್ಲ. ಬೆಳ್ಳಂಬೆಳಗ್ಗೇ ಎದ್ದು ಉದಯ ಮೂವೀಸ್ ಹಾಕಿ ಕೂರುವವರ ಮಂದೆ ರಾಜ್ ಕುಮಾರ್ ಅನ್ನಿ. ಹುಟ್ಟಿನಿಂದ ಸಾವಿನವರೆಗಿನ ಅಷ್ಟೂ ಸಂಗತಿಗಳು ನಿಮ್ಮ ಮುಂದೆ ಹಾಜರ್. ಮಾತ್ರವಲ್ಲ, ವೀರಪ್ಪನ್ ಹೊತ್ತೊಯ್ದ ವಿಚಾರ ಹೇಳುವಾಗ ದುಃಖ ಬೇರೆ!! ಒಟ್ಟಿನಲ್ಲಿ ಈ ತೆಂಡೂಲ್ಕರ್, ಅಮಿತಾಬ್ ಬಚ್ಚನ್, ಭೀಮಸೇನ ಜೋಷಿ, ಲತಾ ಮಂಗೇಶ್ಕರ್… ಇವರೆಲ್ಲಾ ಇರುವುದೇ ಹೀಗೆ, ಎಲ್ಲರಿಗೂ ಹುಚ್ಚು ಹಿಡಿಸುವ ಹಾಗೆ. ಅದರಲ್ಲೂ ಕೆಲವರಂತೂ ಈ ‘ಸ್ಟಾರ್’ಗಳನ್ನೇ ಹಗಲಿರುಳು ಧೇನಿಸುತ್ತಿರುತ್ತಾರೆ.
ಇವುಗಳನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ‘ಯಕ್ಷಗಾನದ ಹುಚ್ಚ’ರ ಪಾಲಿಗೆ ದಿ|ಗುಂಡ್ಮಿ ಕಾಳಿಂಗ ನಾವಡ ಅಂದರೆ ಸಾಕು ಮತ್ತೇನೂ ಬೇಕಿಲ್ಲ. ಇಡೀ ದಿವಸ ಅವರ ಬಗೆಗೇ ಹೇಳುತ್ತಾರೆ. ಮೊಗೆದಷ್ಟೂ ಮುಗಿಯದ ಸಂಗತಿಗಳು. ಅಂದರೆ, ಕರ್ನಾಟಕದ ಯಕ್ಷಲೋಕಕ್ಕೆ ಬಂದರೆ ನಾವಡರೊಬ್ಬ ಅತ್ಯಪೂರ್ವ ಸ್ಟಾರ್, ತೆಂಡೂಲ್ಕರ್ನಂತೆ!! ಬರೀ ಮೂವತ್ತೆರಡು ವಯಸ್ಸಿನಲ್ಲಿ ನಾವಡರು ಏರಿದ ಎತ್ತರ ಒಂದು ಸಾರ್ವಕಾಲಿಕ ದಾಖಲೆಯೇ ಸರಿ.
ಅದ್ಹೇಗೆ ನಾವಡರಿಗೆ ಆ ಕಂಠ ಪ್ರಾಪ್ತವಾಯಿತೋ ಗೊತ್ತಿಲ್ಲ. ಹಿಂದೆಂದೂ ಯಕ್ಷಕಲಾಭಿಮಾನಿಗಳು ಕಂಡು ಕೇಳರಿಯದ ಧ್ವನಿ ಅವರನ್ನು ಇಡೀ ಯಕ್ಷಲೋಕದಲ್ಲೇ ಅಪೂರ್ವರನ್ನಾಗಿಸಿತು. ಕರ್ಣಕಠೋರವಾಗಿರುವ ಏರು ಪದ್ಯಕ್ಕೂ ಒಂದು ಇಂಪನ್ನು ಕೊಟ್ಟವರವರು. ನಾವಡರ ಯಾವುದೇ ಭಾಗವತಿಕೆಯನ್ನು ಕೇಳಿ ನೋಡಿ, ಯಾವತ್ತೂ ಅವರು ಬೋರ್ ಆಗುವುದಿಲ್ಲ. ಕಾರಣ ಅವರ ಕಂಠ!
ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬಗೆಗೆ ನಿಮಗೆ ಗೊತ್ತಿದೆ. ಅಂಥ ಚಿಟ್ಟಾಣಿಗೆ ಕಾಳಿಂಗ ನಾವಡರು ಅತ್ಯುತ್ತಮ ಜೋಡಿಯಾಗಿದ್ದರು. ‘ನಾವಡ ಹಾಗೂ ಚಿಟ್ಟಾಣಿ ಜೊತೆಗಿದ್ದರೆ ಆ ಸೊಬಗೇ ಬೇರೆ. ಇವರಿಗೆ ಅವರು ಸ್ಪೂರ್ತಿ, ಅವರಿಗೆ ಇವರು. ಅದರಲ್ಲೂ ನಾವಡರು ನೀಲಗಗನದೊಳು ಮೇಘಗಳ…, ಎಲ್ಲೆಲ್ಲು ಸೊಬಗಿದೆ..ಎಲ್ಲೆಲ್ಲೂ ಸೊಗಸಿದೆ… ಹಾಡು ಹಾಡಬೇಕು, ಚಿಟ್ಟಾಣಿ ಕುಣಿಯಬೇಕು. ಅದಕ್ಕಿಂತ ದೊಡ್ಡ ಮನರಂಜನೆಯೇನಿದೆ ಸ್ವಾಮಿ ಬದುಕಿನಲ್ಲಿ?’ ಅನ್ನುತ್ತಾರೆ ಯಕ್ಷಾಭಿಮಾನಿಗಳು.
ತಮಾಷೆಯ ಸಂಗತಿಯೆಂದರೆ ಈ ನಾವಡ ಹಾಗೂ ಚಿಟ್ಟಾಣಿ ನಮ್ಮವರನ್ನು ಮಾತ್ರ ಮೋಡಿ ಮಾಡಿದ್ದಲ್ಲ. ಆ ಕಾಲದಲ್ಲೇ ಮುಂಬಯಿಗೆ ಹೋಗಿ, ವರ್ಷವೊಂದರಲ್ಲಿ ಭಸ್ಮಾಸುರ ಮೋಹಿನಿ ಪ್ರಸಂಗವೊಂದನ್ನೇ ನಲವತ್ತಕ್ಕೂ ಹೆಚ್ಚು ಬಾರಿ ಆಡಿದ್ದರೆಂದರೆ ಅಲ್ಲಿನ ಜನ ಅದೆಷ್ಟು ಮರುಳಾಗಿದ್ದಿರಬಹುದು ನೀವೇ ಯೋಚಿಸಿ. ಯಕ್ಷಗಾನದ ಗಂಧಗಾಳಿಯಿಲ್ಲದಿದ್ದ ಮುಂಬಯಿಯಲ್ಲೂ ಯಕ್ಷಗಾನಕ್ಕೊಂದು ಸ್ಪಷ್ಟ ನೆಲೆ ಕಲ್ಪಿಸಿದ ಕೀರ್ತಿ ನಾವಡ ಹಾಗೂ ಚಿಟ್ಟಾಣಿಯದ್ದು. ‘ಇವತ್ತಿಗೂ ರಂಗಕ್ಕೆ ಬಂದಾಗ ನಾವಡರ ನೆನಪು ನನ್ನನ್ನು ಗಾಢವಾಗಿ ಕಾಡುತ್ತದೆ’ ಅನ್ನುವ ಚಿಟ್ಟಾಣಿ ಮಾತಿನಲ್ಲಿ ನಾವಡರ ನೆನಪು ಮಡುಗಟ್ಟುತ್ತದೆ. ಬರಿದೆ ಕೇಳುವ ನಮ್ಮನ್ನೇ ನಾವಡರು ಈ ಪರಿ ತಟ್ಟುತ್ತಿರುವಾಗ ಅವರದೇ ಹಾಡಿಗೆ ಕುಣಿದ ಕಲಾವಿದರಿಗೆ ಅವರ ಸಾವನ್ನು ಸಹಿಸುವುದು ಹೇಗೆ ತಾನೇ ಸಾಧ್ಯವಾದೀತು ಹೇಳಿ.
ಏನೇ ಹೇಳಿ, ನಾವಡರು ತಮ್ಮ ಎಳೆಯ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋಗಿ ತುಂಬಾ ಅನ್ಯಾಯ ಮಾಡಿದರು. ಅವರು ಈಗಲೂ ಇದ್ದಿದ್ದರೆ ಯುವ ಪೀಳಿಗೆಯ ಅದೆಷ್ಟೋ ಮಂದಿ ಆ ಕಂಠಸಿರಿಯನ್ನು ಪ್ರತ್ಯಕ್ಷವಾಗಿ ಕಂಡು-ಕೇಳಿ ಧನ್ಯರಾಗುತ್ತಿದ್ದರು. ಛೆ, ನಾವೆಲ್ಲಾ ಅಷ್ಟು ಪುಣ್ಯ ಮಾಡಿಲ್ಲ ಬಿಡಿ…