Author: ಕಪಿಲಾ ಶ್ರೀಧರ್, ಮನಃಶಾಸ್ತ್ರಜ್ಞರು, ಬೆಂಗಳೂರು
ಭಾವದ ಬದುಕಿದು ಭಾವನೆ ತಪ್ಪದು
ಭಕುತಿಯಿರದಿರೆ ಪಾಶ ಸೆಳೆವುದು
ಕಿಂಕಿಣಿ ಘಲಿರೊಂದೂ ಕೇಳದ
ಮಿಡಿತವಿರದ ಯಂತ್ರವಾದೊಡೆ
ಸಿಗುವ ಸುಖವೇನು ನಿರತದಿ?
ಹೆಜ್ಜೆಗೆಜ್ಜೆಯ ಲಾಸ್ಯ ಮೆರೆಯಲಿ
ಎನಿತೊ ಸಂಭ್ರಮ ನಾಟ್ಯವಾಡಲಿ
ಢಮರು ನಾದಕೆ ನರ್ತಿಸಲಿ ಮನ ತಾಂಡವವಾಡಲಿ
ಪ್ರಳಯವಾಗಲಿ, ಕೊಚ್ಚಿಹೋಗಲಿ ಕಿಲ್ಬಿಷದ ಕೊಳೆ
ಮತ್ತೆ ಹುಟ್ಟಲಿ ಕ್ಷೀರಸಾಗರದಲ್ಲಿ ಅಮೃತವು
ಜಗದ ಮುಪ್ಪಿದು ಕವಿತೆ ಹುಟ್ಟಲಿ
ಕಾಲ ಬೆಳೆವನು ಭ್ರಮೆಯ ಕಳೆವನು
ಬದುಕ ಅರಳಿಸೊ ಶಕ್ತಿ ಅಕ್ಷರವೆಂಬ ಕುಸುಮ
ನಿವೇದನೆಯ ಜೊತೆ ಪುಷ್ಪಜಾತ್ರೆಗೆ ಸಿದ್ಧರಾಗೋಣ
ಮನಸು ಮಜ್ಜನ
ಮಾಡಿ ಪುಳಕಿತ
ಭಾಷೆಯಮ್ಮನ
ಒಲವನೂಟದಿ
ಹೊಸತು ಬೆಳಗಿದು
ಹಸಿರೋ ಹಸಿರು.
( ಕವಯತ್ರಿ ಮನಃಶಾಸ್ತ್ರಜ್ಞೆ)