Author: 'ಮನೂ' ಬನ
ಗರುಡನು ಅಮೃತವನ್ನು ಕದಿಯುವಾಗ ಕಶ್ಯಪನು ದಾರಿ ತೋರಿಸಿದ್ದು ಇದೇ ಹಸ್ತದಿಂದ. ಮಿಶ್ರ ವರ್ಣ, ನಾನಾ ಬಣ್ಣ, ಋಷಿ : ವಾಲಖಿಲ್ಯ, ಅಧಿದೇವತೆ : ವೈನತೇಯ. ಇದು ಪುರುಷ ಹಸ್ತ ಪ್ರಕಾರಕ್ಕೆ ಸೇರಿದುದಾಗಿದೆ. ವಿಕ್ಷಿಪ್ತಾಕ್ಷಿಪ್ತ ಮುಂತಾದ ಕರಣಗಳಲ್ಲಿ ಈ ಹಸ್ತದ ಬಳಕೆಯಿದೆ.
ಕಥಕ್ನಲ್ಲಿ ಈ ಹಸ್ತ ಸ್ವಾಭಾವಿಕ ಹಸ್ತ ಪ್ರಕಾರಕ್ಕೆ ಸೇರಿದ್ದು. ಮಣಿಪುರಿ ನೃತ್ಯದಲ್ಲೂ ಈ ಹಸ್ತದ ಬಳಕೆ ಇದ್ದು ; ಕಥಕಳಿಯಲ್ಲಿ ಪಲ್ಲವ ಎಂಬ ಹೆಸರಿನಿಂದ ಚಾಲ್ತಿಯಲ್ಲಿದೆ.
‘ಆವಾಹಿತೋಭವ’ – ಪೂಜಾ ವಿಧಿಗಳಲ್ಲಿ ಪ್ರಸ್ತಾಪವಾಗುವ `ಆವಾಹನಾಮುದ್ರಾ’ ಚತುರ ಹಸ್ತವೇ ಆಗಿದೆ. ಈ ಮುದ್ರೆಯು ಎರಡು ಅಂಗೈಗಳ ಕಿರುಬೆರಳ, ಪಾರ್ಶ್ವಗಳೆರಡರ ಕೂಡುವಿಕೆಯಿಂದಾದ ಸಂಯುತ ಮುದ್ರೆ. ಇದು ಚತುರ ಹಸ್ತಗಳೆರಡರ ಸೇರುವಿಕೆಯಿಂದಾಗಿದ್ದು, ಇಲ್ಲಿ ಈ ಎರಡೂ ಚತುರಶ್ರಗಳ ಅಂಗೈ ಮೇಲ್ಮುಖವಾಗಿ ಹಿಡಿಯಲ್ಪಡುತ್ತದೆ.
ಯೋಗಚಿಕಿತ್ಸಾ ಮುದ್ರೆಗಳಲ್ಲಿ ಕಂಡುಬರುವ ಆದಿತಿ ಮುದ್ರೆ ಚತುರ ಹಸ್ತವೇ ಅಗಿದೆ. ಆದರೆ ಉಳಿದ ಬೆರಳುಗಳನ್ನು ನೇರವಾಗಿಡಬೇಕು. ಇದನ್ನು ಪತಾಕ ಚತುರವೆಂದು ಕರೆಯುವ ಕ್ರಮವಿದೆ. ಈ ಮುದ್ರೆಯ ಉಪಯೋಗ ಬೆಳಗ್ಗಿನ ಸೀನು ನಿವಾರಣೆಗೆ, ದೇಹದ ಉಷ್ಣತೆಗೆ, ಆಕಳಿಕೆ ನಿವಾರಣೆಯಾಗಿ ಶಕ್ತಿ ಸಂಚಯಕ್ಕೆ ಸಹಕಾರಿ.
ವಿನಿಯೋಗ : ಕಸ್ತೂರಿ, ಸ್ವಲ್ಪ ಎಂಬ ಅರ್ಥ, ಚಿನ್ನ, ತಾಮ್ರ ಮುಂತಾದ ಲೋಹಗಳು, ಕಣ್ಣು ಒದ್ದೆಯಾಗಿರುವುದು, ದು:ಖ, ಖೇದ, ರಸಸ್ವಾದನೆ, ಕಣ್ಣು, ಜಾತಿಭೇದಗಳು, ಪ್ರಮಾಣ ಮಾಡುವುದು, ಸಂತೋಷವಾಗಿರುವುದು, ಸರಸ, ನಿಧಾನ ನಡಿಗೆ, ತುಂಡರಿಸುವುದು, ಆಸನ, ತುಪ್ಪ ಮತ್ತು ಎಣ್ಣೆಯನ್ನು ತೋರಿಸುವುದು, ಚಿಕ್ಕತುಂಡುಗಳನ್ನು ಮಾಡುವುದು, ಮುಖ.
ಇತರೇ ವಿನಿಯೋಗ : ವಿನಯ, ನಿಯಮ, ಚಾತುರ್ಯ, ಬಾಲಕ, ರೋಗಿ, ಸತ್ವ, ವಂಚನೆ ಮಾಡುವುದು, ಯೋಗ್ಯ, ಏಕಾಗ್ರತೆ, ಹಿತಕರ, ಸತ್ಯ, ಪಥ್ಯ, ಧೂಳು, ಗೋರೋಚನ, ಏಕಾಗ್ರತೆ, ಕರ್ಪೂರ, ಗಲ್ಲ, ಮುಖ, ಹಣೆ, ಪಕ್ಕಕ್ಕೆ ದೀರ್ಘ ನೋಟ, ಪ್ರೇಮಿ, ನಯ, ನೀತಿ, ಕನ್ನಡಿ, ಕೆನ್ನೆ, ಕರ್ಣಪತ್ರ, ವಜ್ರ, ಪಚ್ಚೆರತ್ನ, ‘ಸಾಕು, ಇಷ್ಟೇ’ ಎನ್ನಲು, ಸಮತೋಲಿತ ಭಾವ, ಮಿಶ್ರ ಜಾತಿ, ಕಸ್ತೂರಿ, ಲೇಪನ, ಪೀಠ, ಚೂರು, ಕಟಾಕ್ಷ, ಚಾಟೂಕ್ತಿ, ಬುದ್ಧಿ ಹೇಳುವುದು, ಮೃದುಮಾತು, ತಲೆಗೆ ಎಣ್ಣೆ ಹಚ್ಚುವುದು, ನೆಕ್ಕುವುದು, ವಿಚಾರ, ಲಜ್ಜೆ, ಊಹಾಪೋಹ, ದಾಳ ಬಿಡುವುದು, ಮಾರ್ದವ, ಸಕ್ಕರೆ, ತಿಳಿವಳಿಕೆ, ಕರ್ಣಕುಂಡಲ, ತಪಸ್ಸು, ಕ್ರಮ, ಉಚಿತ ವಾಕ್ಕು, ಅವಮಾನ, ಚಲನೆ, ನಂಬಿಕೆದ್ರೋಹ, ನಾಭಿ, ಆಟಗಳು, ಪ್ರೀತಿ, ಪ್ರತಿಭೆ, ತೀರ್ಪು, ಕೋಪ, ಚಿಂತೆ, ಕ್ಷಮೆ, ಬುದ್ಧಿವಂತಿಕೆ, ಸೋಲು, ಮೈಥುನ, ಮನೆ, ಪತ್ನಿ, ಬಣ್ಣ- ಕೆಂಪು, ಹಳದಿ, ಬಿಳುಪು, ನೀಲಿ, ನೀಲ-ಶ್ವೇತ, ಹುಲ್ಲುಗಾವಲು, ಖಡ್ಗ, ಗುಣ-ಅಗುಣ, ಯುಕ್ತಿ, ವೇಷ, ವಾರ್ತೆ, ಪ್ರಶ್ನೆ, ಸುಖ, ಶೀಲ, ಪ್ರಣಯದ ಸಂಜ್ಞೆ, ದಾಕ್ಷಿಣ್ಯ, ಆಟ, ಪ್ರೇಮ, ಶುದ್ಧತೆ, ಜಾಣತನ, ಮಾಧುರ್ಯ, ಸಂದೇಹ, ಅನುಕೂಲ, ಮೆತ್ತಗೆ, ವಿಚಾರ, ವಾತ್ಸಲ್ಯ, ಆಶೆ, ಸ್ಮೃತಿ, ಸಂತೋಷ, ಉತ್ತಮ ನಡತೆ, ಪ್ರಶ್ನೆ, ಇಲ್ಲದಿರುವುದು, ಜೀವನ/ಉದ್ಯೋಗ, ಯೋಗ್ಯತೆ, ಉಡುಪು, ಹುಲ್ಲು, ಚಿಕ್ಕ ಪಾಲು, ಏಳ್ಗೆ-ಬೀಳ್ಗೆ, ಯೌವನ, ಶ್ರೀಮಂತಿಕೆ, ಮನೆಗಳು, ಹೆಂಡತಿಯರು, ಹಲವು ಬಣ್ಣಗಳು, ಸೋಲು ಇತ್ಯಾದಿಗಳ ಸಂವಹನ ಕಾರ್ಯಕ್ಕೆ ಬಳಸಲ್ಪಡುತ್ತದೆ.
ಸುರತ, ಸತ್ಯ, ಅನೃತ, ನಮಸ್ಕಾರ, ಯಶಸ್ಸು, ಆಭರಣ, ತೀರ್ಪು, ವಿಚಾರ, ಸ್ಮರಣೆ, ಕ್ಷಮೆ, ವಿಹಾರೋದ್ಯಾನ, ಸಿಂಧೂರ, ವಿಧಾರಣೆ, ಕೀರ್ತಿ, ಕಣ್ಣು, ಗುಣ, ಮೇಲ್ದುಟಿ, ಕೆಳತುಟಿ, ಕಿವಿ, ಚಾರಿತ್ರ್ಯ, ಲಲಿತ, ವಿವಾದ, ಗುಣ, ದಾಕ್ಷಿಣ್ಯ, ನಿಯಮ, ವಾರ್ತೆ, ಸಂಪತ್ತಿಲ್ಲದಿರುವಿಕೆ, ಬೆಳವಣಿಗೆ, ಭಕ್ಷಣೆ, ಲಜ್ಜೆ, ಪೌಷ್ಟಿಕತೆ, ದೋಷ, ತೆಂಗಿನ ಗರಿ, ಅರಣ್ಯ, ನಂಬಿಕೆ, ಸಂದೇಹ, ಸಣ್ಣ ವಸ್ತು, ವೇದಶ್ರೋತ್ರಿ, ಚಾತುರ್ಯತೆ, ಅಡಕೆ, ಸವಿಯಾದದ್ದು, ಮೃದುತ್ವ, ಶುದ್ಧತೆ, ಉಪ್ಪು, ಮೀನು, ಬಕಪಕ್ಷಿ ಮತ್ತು ಇನ್ನಿತರ ಪಕ್ಷಿ, ಬಸವನ ಹುಳು, ತ್ರೇತಾಯುಗ, ಅಗ್ರಹಾಯಣ ಮಾಸ, ಉಡುಗೊರೆ, ಸಪ್ತ ಸಮುದ್ರ, ಕಪ್ಪೆಚಿಪ್ಪು, ಈಜುಕೊಳ, ಬಾವಿ, ಕೂಪ, ಬಿಲ್ಲು, ಇಂದ್ರ, ಜಿಂಕೆಯ ಮುಖ, ಬೇಟೆ, ಧ್ಯಾನ, ಲಯ, ವಿನಯ, ಯುಕ್ತಿ, ನಿಪುಣತ್ವ, ಆತುರ, ಪಥ್ಯ, ಮಧ್ಯೆ, ಅಶುಚಿ, ರುಚಿಯಾದದ್ದು, ಉತ್ಸವ, ಅಳು, ಆಲಿಸು, ವ್ಯಾಖ್ಯೆ, ಹೆಸರು, ಹೊದಿಕೆ, ಉಪಾಯ, ವಿವಿಧತೆ, ಸುಲಭ, ಅಪೂರ್ವ, ಅಪರೂಪ, ಗಾಯಗೊಂಡಿರುವುದು, ಶೇಖರಿಸುವುದು, ಮಕ್ಕಳಿಗೆ ಹೊಡೆಯುವುದು, ಉಗ್ರಾಣ, ಮನಸ್ಸು, ಪ್ರಣಯ, ದುರ್ಲಭ, ಆಶಯ, ಪ್ರಶ್ನೆ, ಸಂಘಟನೆ, ನಿದ್ರೆ, ಮೃದು, ನೀಲ-ಹಲದಿ-ಬಿಳಿ-ಕೆಂಪು ವರ್ಣಗಳು, ಮೆಲ್ಲಗೆ ಉಜ್ಜುವುದು, ಕುಡಿಯುವಂತಹ ತಿನ್ನುವಂತಹ ವಸ್ತು, ‘ಏನು ಮಾಡುವುದು’ ಎನ್ನಲು, ತಾವರೆಯ ದಳ, ಸ್ಮಶಾನ, ಟೊಂಗೆ, ಬಿಲ್ವ ಮರ, ಸಣ್ಣ ಮರಗಳು, ಛತ್ರಿ, ವಸ್ತ್ರ, ತಾಳ್ಮೆ, ವಸ್ತು, ಕೊಳ, ಸಿಂಹ, ವಿಮಾನ, ಸರಸ್ವತಿ, ಮರ್ತ್ಯ ಮಹೋತ್ಸವ, ಕುದುರೆ, ವಿಶೇಷವಾದ ನೀರು, ಹಕ್ಕಿಗಳ ಹಾರಾಟದ ವೇಗ, ತಪಸ್ಸು, ಸಪ್ತ ಸಮುದ್ರದ ತೀರ, ವಿರಹ, ಬೇರ್ಪಡುವುದು, ವಿಧಾತ, ಯೌವನ, ಮನೆ, ಒಲವು ಇತ್ಯಾದಿಗಳನ್ನು ಸಂವಹಿಸಲು ಉಪಯೋಗವಾಗುತ್ತದೆ.
ಸಂಕರ ಹಸ್ತ ವಿಭಾಗದಲ್ಲಿ ಚತುರವನ್ನು ಅಭಿಮುಖವಾಗಿ ಹಿಡಿದರೆ ಬ್ರಾಹ್ಮಣವೆಂದೂ, ನಾನಾರ್ಥ ಹಸ್ತವಿಭಾಗದಲ್ಲಿ ಅಡ್ಡಲಾಗಿ ಹಿಡಿದರೆ ಅರ್ಧಯಾಮವೆಂದೂ ಬಳಸುತ್ತಾರೆ.
ಎರಡೂ ಕೈಯ್ಯಲ್ಲಿ ಚತುರ ಹಸ್ತ ಹಿಡಿದರೆ ಹೂವು ಅಥವಾ ಮಾಲೆಗಳನ್ನು ಸಿಂಗರಿಸಿಕೊಳ್ಳುವುದೆಂದೂ, ಕಣ್ಣಿನ ಬಳಿ ಹಿಡಿದರೆ ಕಾಡಿಗೆ ಹಾಕಿಕೊಳ್ಳುವುದೆಂದೂ, ಕೆಳಮುಖವಾಗಿ ಎದೆಯ ಬಳಿ ಹಿಡಿದರೆ ನಂಬಿಕೆ, ಗಿಳಿ ಅಥವಾ ಸುಲಭ ಸಾಧ್ಯತೆಯನ್ನು, ಅದೇ ಚಲನೆಯನ್ನು ವಿರುದ್ಧವಾಗಿ ಹಿಡಿದರೆ ವಿರುದ್ಧ ವರ್ತನೆಯೆಂದೂ ಅರ್ಥ. ಸರ್ಪಿ (ತುಪ್ಪದ) ಸಾಗರ ಎನ್ನಲು ಚತುರ ಹಸ್ತಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಎತ್ತಿ ಕೆಳಗಿಳಿಸುವುದು. ಪ್ರದೇಶಸೂಚೀ ಹಸ್ತವಾದ ಮಹಾಮೇರುವನ್ನು ಸೂಚಿಸಲು ಚತುರ ಹಸ್ತಗಳನ್ನು ಮೇಲ್ಮುಖವಾಗಿರಿಸಿ ಮುಂಗೈ ಬಳಿ ಸ್ವಸ್ತಿಕಾಕಾರ ಮಾಡಬೇಕು. ಪನಸ , ಬಿಲ, ಪುನ್ನಾಗ, ಕೇತಕಿ, ಜಪಾಕುಸುಮ ವೃಕ್ಷ ಸೂಚನೆಗೂ ಚತುರದ ಬಳಕೆಯಿದೆ.
ಈ ಹಸ್ತವನ್ನು ನಟರಾಜನ ವಿಭಿನ್ನ ಮುದ್ರೆಗಳಲ್ಲಿಯೂ, ಅರ್ಧ ಯಾಮ ಅಂದರೆ ೧ ೧/೨ಗಂಟೆ ಎಂದು ಸೂಚಿಸಲಾಗಿದೆ. ಎಡಗೈಯಲ್ಲಿ ಚತುರಹಸ್ತವನ್ನು ಬಲಗೈಯಲ್ಲಿ ಹಂಸಾಸ್ಯ ಹಸ್ತವನ್ನು ಎದೆಯ ಮುಂದೆ ಇರಿಸಿದರೆ ಬ್ರಹ್ಮಹಸ್ತವೆನಿಸಿಕೊಳ್ಳುತ್ತದೆ. ಚತುರ ಹಸ್ತವನ್ನು ತನ್ನೆಡೆಗೆ ಇದಿರಾಗಿರಿಸಿಕೊಳ್ಳುವುದು ಬ್ರಾಹ್ಮಣಹಸ್ತವೆಂದು ಭರತಾರ್ಣವ ಪ್ರಸ್ತಾಪಿಸಿದೆ. ಭಗಿನೀ ಹಸ್ತದಲ್ಲೂ ಬಳಕೆಯಿದೆ. ಭರತಾರ್ಣವ ಪ್ರಸ್ತಾಪಿಸಿದ ವಿಶೇಷ ಹಸ್ತಗಳ ಪೈಕಿ ಬಲಕೈಯ್ಯಲ್ಲಿ ಚತುರ ಹಸ್ತವನ್ನು ಹಿಡಿದು ಮುಂದಕ್ಕೆ ತಂದು, ಎಡಕೈಯ್ಯಲ್ಲಿ ಮೇಲ್ಮುಖ ಮಾಡುವುದು ಧರ್ಮಯುತವಾದ ಕಾರ್ಯ ಅಥವಾ ಹಿರಿಯರು ಎನಿಸಿಕೊಳ್ಳುತ್ತದೆ. ಬೆಂಕಿ ಎಂದು ಸೂಚಿಸುವಲ್ಲೂ ಇದರ ಪ್ರಸ್ತಾಪವಿದೆ.
ಯಕ್ಷಗಾನದಲ್ಲಿ ಕುಂಕುಮ ಇಡುವಿಕೆಯ ಸಂವಹನಕ್ಕಾಗಿ ಬಳಸುತ್ತಾರೆ. ನಿತ್ಯಜೀವನದಲ್ಲಿ ಈ ಹಸ್ತವನ್ನು ‘ಸ್ವಲ್ಪ’ ಎನ್ನಲು, ತುಪ್ಪ, ಎಣ್ಣೆಯನ್ನು ಕೈಯಲ್ಲಿ ಹಿಡಿದು ನೋಡಲು, ‘ಬಾ’ ಎನ್ನಲು ಬಳಸುತ್ತಾರೆ.
ಚತುರ ಹಸ್ತದಲ್ಲಿನ ತೋರು ಬೆರಳನ್ನು ದೂರ ಸರಿಸಿ, ಕಿರುಬೆರಳನ್ನು ಗುಂಪಿಗೆ ಸೇರಿಸುವುದು ಖಂಡಚತುರ ಹಸ್ತ ವೆನಿಸಿಕೊಳ್ಳುತ್ತದೆ. ಭರತಾರ್ಣವದಲ್ಲಿ ಉಲ್ಲೇಖಿತ. ವಿನಿಯೋಗ : ಗೋರೋಚನ, ಧೂಳು, ರಕ್ತದಂತಹ ದ್ರವ, ಕರ್ಣಾಮೃತವಾದ ವಿಷಯ, ಯಂತ್ರ, ಆರ್ತನಾದ, ಛೇದ, ಮಂದಾರವೃಕ್ಷ. ಖಂಡ ಚತುರದ ಕಿರುಬೆರಳನ್ನು ಹೊರತೆಗೆದರೆ ಅದು ಅರ್ಧ ಚತುರ ಹಸ್ತವೆನಿಸಿಕೊಳ್ಳುತ್ತದೆ. ವಿನಿಯೋಗ : ಮಧುರ ರಸವಸ್ತುಗಳ ಆಸ್ವಾದನೆ, ಕೃ ಧಾತು ಅಥವಾ ಮಾಡುವುದು, ಸುವರ್ಣಮುಖೀ ನದಿ. ಎಡಗೈಯ್ಯಲ್ಲಿ ಚತುರವನ್ನು ಅಭಿಮುಖವಾಗಿ ಹಿಡಿದು, ಬಲಗೈಯಲ್ಲಿ ಅರ್ಧಚಂದ್ರವನ್ನು ಚತುರದ ಮೇಲೆ ಇಡುವುದು ಆನಂದ ಪರ್ವತ ಎಂಬ ಪರ್ವತ ಪ್ರಕಾರವನ್ನು ಸೂಚಿಸುತ್ತದೆ.
**********