ಅಂಕಣಗಳು

Subscribe


 

ನೃತ್ಯ ರಿಯಾಲಿಟಿ ಶೋ ಎಂಬ ಯುದ್ಧಗಳು !!

Posted On: Wednesday, June 16th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಸಂಗೀತ ನೃತ್ಯಗಳೆಂದರೆ ಯುದ್ಧವೇ ? ಎಂತೆಂತ ಕಲ್ಲು ಮನಸ್ಸುಗಳನ್ನು ಕರಗಿಸಿದ ಸಂಗೀತ ನೃತ್ಯಸಂಸ್ಕಾರಗಳು ಇಂದಿಗೆ ಅಕ್ಷರಶಃ ಸಮರಾಂಗಣವೇ? ಖಂಡಿತಾ ಹೌದು ಎನ್ನದೆ ಬೇರೆ ನಿರ್ವಾಹವಿಲ್ಲ. ಆಗ ತಾನೇ ಹುಟ್ಟಿದ ಎಳೆಕಂದಮ್ಮಗಳೂ ಈ ಸಮರಾಂಗಣಕ್ಕೆ ಸಜ್ಜಾಗುವ ಕಾಲ ಬಹುಶಃ ದೂರವಿಲ್ಲವೇನೋ ಅನ್ನಿಸುತ್ತಿದೆ. ಕಾರಣ ಕೇಳುತ್ತೀರಾ? ಮಾಧ್ಯಮ.

ಅಂದೊಂದು ಕಾಲದಿಂದಲೂ ದೂರದರ್ಶನ ಪ್ರಸಾರ ಮಾಡುತ್ತಾ ಬಂದಿರುವ ಸದಭಿರುಚಿಯ ಶಾಸ್ತ್ರೀಯ, ಲಘು ಸಂಗೀತ ನೃತ್ಯಗಳು ಇಂದಿಗೂ ಬಹುಷಃ ಅದೊಂದೇ ವಾಹಿನಿಗೆ ಸೀಮಿತವಿರಬೇಕೆನ್ನಿಸುವಷ್ಟರ ಮಟ್ಟಿಗೆ ಸಂಗೀತ- ನೃತ್ಯಗಳ ಅಪಭ್ರಂಶಗಳು ‘ರಿಯಾಲಿಟಿ’ ಎನ್ನುವ ಹೆಸರಲ್ಲಿ ತಯಾರಾಗಿವೆ. ಆ ಮೂಲಕ ಅಕ್ಷರಶಃ ಸಂಸ್ಕೃತಿಯ ‘ಶವಸಂಸ್ಕಾರ’ವನ್ನೇ ಮಾಡುತ್ತಲಿವೆ. ಸಂಗೀತ-ನರ್ತನ ಕ್ಷೇತ್ರಕ್ಕೆ ಎಂತಹ ಪ್ರೋತ್ಸಾಹ ನೋಡಿ !

ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಅಜ್ಜಂದಿರ ವರೆಗೂ ಹಾಡಿಸುವುದಕ್ಕೆ, ಕುಣಿಸುವುದಕ್ಕೆ ಶುರು ಮಾಡಿ ವರುಷಗಳೇ ಕಳೆದಿವೆ. ಪರಿಣಾಮ, ಎಷ್ಟು ದಿನದಲ್ಲಿ ನನ್ನ ಮಗ/ಮಗಳು ಸಂಗೀತ ಕಲಿತು ಟಿ.ವಿ.ಯಲ್ಲಿ ಹಾಡಬಹುದು?”ಎಂಬ ಪೋಷಕರ ನಿರೀಕ್ಷೆ ; ಜೊತೆಗೆ ಒಂದು-ಎರಡು ಹಾಡಿಗೆ ಪ್ರಸಿದ್ಧಿ ಮಾಡಿಸಿ ಪ್ರೈಜ್ ಗಿಟ್ಟಿಸಿಕೊಳ್ಳಬೇಕೆಂಬ ದುರಾಸೆಗೆ ಶಿಕ್ಷಕರೇ ಒತ್ತಾಸೆ ! ಹಾಗಾಗಿಯೇ ಬೀದಿ ಬೀದಿಗಳಲಿ ತರಗತಿಗಳು ತಲೆಯೆತ್ತಿವೆ ನೋಡಿ !

ಪ್ರಸಿದ್ಧಿ, ಪ್ರತಿಷ್ಠೆಯ ಆಸೆ ಯಾರಿಗಿರುವುದಿಲ್ಲ ಹೇಳಿ? ಹೊಟ್ಟೆ, ಬಟ್ಟೆ, ಮನೆಯ ನಂತರ ಐಶ್ವರ್ಯದ ಆಸೆಯೊಂದಿಗೆ ಹಿಂಬಾಲಿಸುವುದಿದ್ದರೆ ಅದು ಈ ಪ್ರಸಿದ್ಧಿಯ ಭೂತ ! ಇಂದು ಗಲ್ಲಿಗಳಲ್ಲಿ ರದ್ದಿ ಆಯ್ವ ಹುಡುಗನಿಂದ ಹಿಡಿದು ಕೋಟ್ಯಾಧಿಪತಿಗಳ ವರೆಗೂ ಹಣಿಕಿ ಹಾಕಿ ನಿಂತಿದೆ. ಸಿದ್ಧಿಯೇ ಬೇಡ-ಪ್ರಸಿದ್ಧಿ ಮಾತ್ರ ಜೊತೆಗಿರಬೇಕು ಎಂದರೆ ಏನು ತಾನೇ ಮಾಡಲು ಸಾಧ್ಯ ? ! ತೇಜೋವಧೆ ಮಾಡಿಕೊಂಡರೂ ಸರಿ, ತನ್ನ ಹೆಸರು ಮಾಧ್ಯಮಗಳಲ್ಲಿ ರಾಚಬೇಕು, ಯಶಸ್ಸು ಕಾಣಬೇಕು, ಅದೂ ತಕ್ಕುದಾದ ಅರ್ಹತೆಗಳನ್ನು ಸಂಪಾದಿಸಿಕೊಳ್ಳುವ ಮೊದಲೇ, ದಿನ ಬೆಳಗಾಗುವುದರೊಳಗೆ ‘ಫೇಮಸ್’ ಕೈಯ್ಯಲ್ಲಿರಬೇಕು. ಹೊಸ ಅವಕಾಶಗಳನ್ನು ಬಾಚಿಕೊಳ್ಳುವುದರೊಂದಿಗೆ ಸರ್ವೋತ್ತಮನಾಗಿಬಿಡಬೇಕು. ಅಲ್ಪ ಅವಧಿಯಲ್ಲೇ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಅವಕಾಶ, ಅಪಾರ ಹಣ ಸಂಪಾದಿಸಬೇಕು ; ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಳ್ಳಬೇಕು ; ಅವಕಾಶವೂ ದಂಡಿಯಾಗಿ ಮನೆ ಬಾಗಿಲಿಗೆ ಬಂದು ಬೀಳಬೇಕು ! ಫಲ; ಅದನ್ನೇ ಮಾರ್ಕೆಟ್ಟಾಗಿಸಿಕೊಂಡ ಮಾಧ್ಯಮಗಳು ಹೊಸ ಹೊಸ ಮಾರುಕಟ್ಟೆಗಳನ್ನು ಹುಟ್ಟುಹಾಕುತ್ತವೆ! ಟಿ‌ಆರ್‌ಪಿ ಹೆಚ್ಚಸಿಕೊಳ್ಳುವತ್ತ ಕಣ್ಣು ನೆಡುತ್ತವೆ !

ಹಾಡೂ, ನೃತ್ಯಗಳಿಗಿಂತಲೂ ಸ್ಪರ್ಧಿಗಳ ವಸ್ತ್ರಾಲಂಕಾರ, ಮನೆಯ ಆರ್ಥಿಕ ಸ್ಥಿತಿ, ಅವರ ವೈಯಕ್ತಿಕ ಜೀವನ, ಹೆತ್ತವರ ಆತಂಕ, ಹಾರೈಕೆ, ಸ್ಪರ್ಧಿಗಳ ತುಮುಲ, ಸಂಗೀತಕ್ಕೆ-ಬೆಳಕಿನ ಅಬ್ಬರಕ್ಕೆ ತಕ್ಕಂತೆ ಕುಣಿಯುವುದು, ತೀರ್ಪುಗಾರ-ಸ್ಪರ್ಧಿಗಳ ವಾಗ್ವಿವಾದ, ಪರದೆಯ ಹಿಂದಿನ ಅರಚಾಟ, ಭಾವೋತ್ಕರ್ಷ, ಆಕಳಿಸಿ ತೂಕಡಿಸುವುದರ ಮೇಲೆ ಇದೆ ಇಂದಿನ ಕ್ಯಾಮೆರಾ ಕಣ್ಣು ! ನೇರವಾಗಿ ರಿಕಾರ್ಡಿಂಗ್ ಆದಂತೆ ನೇರ ಸಂಕಲನ ಆಗಿರಬೇಕು ಎಂದು ಭಾವಿಸಿದ್ದಲ್ಲಿ ಅದು ತಪ್ಪು. ಕ್ಯಾಮೆರಾಗಳ ಮುಂದೆ ನಿಂತಾಗ ಅವರ ವ್ಯಕ್ತಿತ್ವವನ್ನೇ ನಿರ್ವಹಿಸುವ ಸೂತ್ರಧಾರನಿರುತ್ತಾನೆ ; ಅಂತೆಯೇ ತಮಗೆ ಬೇಕಾದಂತೆ ಕತ್ತರಿ ಪ್ರಯೋಗ ಮಾಡುವ ಸಂಪಾದಕನೂ ಇರುತ್ತಾನೆ. ಇದರೊಂದಿಗೆ ತೀರ್ಪುಗಾರರ ಪಕ್ಷಪಾತ ಧೋರಣೆ ಮತ್ತು ವೈಯಕ್ತಿಕ ಇಷ್ಟಾನಿಷ್ಟಗಳೂ ಸೇರಿದರಂತೂ ಪ್ರತಿಭಾವಂತರು ಮಂಕಾಗುವುದರೊಂದಿಗೆ ಮರ್ಯಾದೆ ಕಳೆದುಕೊಳ್ಳದೆ ವಿಧಿಯಿಲ್ಲ.

ಆಶಾಭಾವನೆಯೇ ಕೊನೆಗೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತಿದೆ ಎಂಬುದಕ್ಕೆ ರಿಯಾಲಿಟಿ ಶೋ ಒಳ್ಳೆಯ ಉದಾಹರಣೆಯಾಗಿ ನಿಂತಿದೆ. ಒಂದು ಸುತ್ತಿನಲ್ಲಿ ಸೋತ ಸ್ಪರ್ಧಿಗಳನ್ನು ಎಲಿಮಿನೇಷನ್ ರೌಂಡ್ ಮೂಲಕ ಉಚ್ಚಾಟಿಸುವ ಪ್ರಕ್ರಿಯೆ ನಾಟಕೀಯ ಮಾತ್ರವಲ್ಲ ಶೋಷಣೆಯೂ ಹೌದು. ಪೋಷಕರು ಅಳುವುದು, ತೀರ್ಪುಗಾರರು ಸಂತೈಸುವುದು, ಅಪ್ಪಿ ಮುದ್ದಾಡುವುದು, ಅವರೊಂದಿಗೆ ತಾವೂ ಅಳುವುದು, ಸೋತಿದ್ದಕ್ಕೆ ಸಹಜವಾಗಿ ಅಳು ಬಂದು ಮತ್ತೆ ಸಮಾಧಾನವಾದರೂ, ಅದನ್ನೆ ತಿರುಗಿಸಿ ಮುರುಗಿಸಿ ಮತ್ತೆ ಮತ್ತೆ ಅಳಿಸಿ ರಿವೈಂಡ್ ಆಗುವ ವಿಷಾದಗೀತೆ.., ಒಟ್ಟಿನಲ್ಲಿ ಸೋಲಿನ ಭಾವನೆಗಳನ್ನು ವೈಭವೀಕರಿಸಿ, ನೋಡುಗರನ್ನು ರಂಜಿಸುವುದು, ಗೆಲುವನ್ನು ಅತಿರಂಜಿತವನ್ನಾಗಿಸುವುದು. ಭಾವನೆಗಳನ್ನು ಬಿಕರಿ ಮಾಡುವ ಮೂಲ ಪಾಠ. ಅನೇಕ ಬಾರಿ ಸ್ಪರ್ಧಿಗಳು ವೇದಿಕೆಯ ಮೇಲೆ ತಲೆ ಸುತ್ತಿ ಬಿದ್ದಿರುವ, ಮಾನಸಿಕವಾಗಿ ನೊಂದು ಹೋದ, ವೈಕಲ್ಯಕ್ಕೆ ತುತ್ತಾದ ಪ್ರಕರಣಗಳೂ ನಡೆದಿವೆ. ಮಕ್ಕಳ ಬಾಲ್ಯವನ್ನೇ ಬೇಟೆಯಾಡಿ ಭವಿಷ್ಯವನ್ನೇ ಬಲಿ ತೆಗೆದುಕೊಂಡಿವೆ !

ಇನ್ನೂ ಇದೆ ತಂತ್ರ ! : ಸಿನೆಮಾ, ಧಾರಾವಾಹಿ ಜಗತ್ತಿನ ನಟ/ನಟಿ/ನಿರ್ದೇಶಕ ಮಹಾಶಯರ ಅತಿಥಿ ಗಣ್ಯರಾಗಿ ಆಗಮನ (ಸಂಗೀತ-ನೃತ್ಯದ ತಲೆಬುಡ, ಮಟ್ಟ ಗೊತ್ತಿಲ್ಲದಿದ್ದರೂ !) ಅಥವಾ ಈಗಾಗಲೇ ಇಮೇಜ್ ಕಡಿಮೆಯಿರುವ, ಔಟ್‌ಡೇಟೆಡ್ ಸೆಲೆಬ್ರೆಟಿಗಳ ಮುಖದರ್ಶನ ! ಒಟ್ಟಿನಲ್ಲಿ ಚಿತ್ರತಾರೆಯರಿಗೂ, ಚಿತ್ರಗಳಿಗೂ ಸುಲಭದ ಪ್ರಸಿದ್ಧಿ ಬೇಕು ! ಅದಕ್ಕೆ ಮಾಧ್ಯಮಗಳು ಈ ಬಗೆಯ ಜಾಹೀರಾತು ತಂತ್ರಗಳನ್ನು ಮಾರಾಟ ಮಾಡಬೇಕು ! ‘ಶ್ರೋತೃಗಳ ವೋಟುಗಳು ಬಹಳ ಮುಖ್ಯ, ಕಾಪಾಡಿ, ಕಾಪಾಡಿ’ ಎನ್ನುತ್ತಾ ಅಂಗಾಲಾಚಿ ಎಂದು ಸ್ಪರ್ಧಿಗಳು ಭಿಕ್ಷೆ ಬೇಡಬೇಕು ! ಇದರಲ್ಲಿ ಪ್ರತಿಭೆಯ ಪಾತ್ರ ಎಷ್ಟಿದೆ, ದುಡ್ಡು ಮಾಡುವ ಉಪಾಯ ಎಷ್ಟಿದೆ ಎಂಬುದು ಬುದ್ಧಿಯಿರುವ ಯಾವ ವ್ಯಕ್ತಿಗಾದರೂ ಅರ್ಥವಾಗುತ್ತದೆ !

ಸ್ವಾರ್ಥ ತಪ್ಪಲ್ಲ. ಅಸ್ತಿತ್ವದ ಸಮಸ್ಯೆ ಬಂದಾಗ ಚೂರುಪಾರು ಸ್ವಾರ್ಥ ಶಿಕ್ಷಾರ್ಹವೇನೂ ಅಲ್ಲ. ಆದರೆ ತಮ್ಮ ಜೊತೆಗೆ ನಂಬಿಕೊಂಡ ಕಲೆಗಳನ್ನು ಮಾರಿಕೊಳ್ಳುವ ಮಟ್ಟಿಗಿನ ಸ್ವಾರ್ಥವೆಂದರೆ..? ಅದು ದ್ರೋಹವೆನ್ನದೆ ವಿಧಿಯಿಲ್ಲ! ಇಂತಹ ಅರೆಕ್ಷಣದ ಸುಖೋಪಭೋಗಕ್ಕೆ ನಾವು ತೆರಬೇಕಾದದ್ದು ದಶಕಗಳ ತರುವಾಯವೂ ಸುಧಾರಿಸಿಕೊಳ್ಳಲಾಗದ ಹೊಡೆತವಿರಬಹುದೇ ಮುಂದೆ ! ಕಾಲವೇ ಉತ್ತರಿಸಬೇಕು.

ಅಂದಹಾಗೆ ಹೊಸ ನಿರೀಕ್ಷೆ, ಹೊಸ ಭಾವ, ಹೊಸ ಪರಿಸರ, ಹೊಸ ಬಗೆಯ ನೋಟ- ನೂಪುರ ಹೊಂದಿಕೊಳ್ಳುತ್ತಲಿದೆ. ಚಲನೆಯೇ ಜಗದ ವಾಸ್ತವ ನಿಯಮ ಅನ್ನುವುದು ನೂಪುರ ಹುಟ್ಟಿಕೊಂಡಾಗಿನಿಂದ ಅದರೊಂದಿಗಿನ ನಿರಂತರ ಒಡನಾಟದಲ್ಲಿ, ಹುಡುಕಾಟದಲ್ಲಿ ಕಂಡುಕೊಂಡ ನಿತ್ಯ ಸತ್ಯ. ಒಂದೊಂದು ಬಗೆಯ ಅನುಭವವವನ್ನು ವರುಷ ವರುಷವೂ ಕಟ್ಟಿಕೊಡುವ ಉತ್ಸಾಹದಲ್ಲಿದೆ ನೂಪುರ. ಈ ಪಯಣದಲ್ಲಿ ಶ್ರದ್ಧೆಯಿಂದ ಜೊತೆಯಾದ, ಜೊತೆಯಿರುವ, ಜೊತೆಯಾಗಲಿರುವ ಸಮಸ್ತ ಸಹೃದಯ ಬಾಂಧವರಿಗೂ ಹೃತ್ಪೂರ್ವಕ ಅಭಿವಂದನೆಗಳು.

ಪ್ರೀತಿಯಿಂದ

ಸಂಪಾದಕರು

Leave a Reply

*

code