Author: ಸಾವಿತ್ರಿ ಭಟ್ ಬಿ.ಎನ್, ಟ್ರಸ್ತ್ಟಿ, ’ನೂಪುರ ಭ್ರಮರಿ’ ಪ್ರತಿಷ್ಠಾನ, ಮಡಿಕೇರಿ
ರಾಕೇಶ್ ಕುಮಾರ್ ಕಮ್ಮಜೆ ಅವರ ಬರೆಹ ಚೆನ್ನಾಗಿತ್ತು. ಕುರಿಯ ವಿಠಲ ಶಾಸ್ತ್ರಿಗಳ ಕುರಿತ ಬರೆಹ ಓದಿದಾಗ ಅವರ ಪಾತ್ರಗಳು ಕಣ್ಣ ಮುಂದೆ ಬಂದು ಕುಣಿದಂತಾಯಿತು. ನಾನು ಎಳವೆಯಲ್ಲಿದ್ದಾಗ (ಸುಮಾರು ೧೨-೧೩ ವರ್ಷ ವಯಸ್ಸು) ಅವರನ್ನು ಹಲವು ಬಾರಿ ಹತ್ತಿರದಿಂದ ನೋಡಿ, (ಸಂಬಂಧದಲ್ಲಿ ಅಜ್ಜನಾಗಬೇಕಾದುದರಿಂದ) ಮಾತನಾಡಿಸಿದ್ದಲ್ಲದೇ ಅವರ ಎಷ್ಟೋ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳುವಂತಾದ್ದಕ್ಕೆ ಧನ್ಯತೆಯಿದೆ. ನಾಟಕೀಯ ವೇಷಗಳಲ್ಲಂತೂ ಅವರ ಹಾವ-ಭಾವ ಗಾಂಭೀರ್ಯ, ನಡೆ-ನುಡಿ-ಕುಣಿತವಂತೂ ವರ್ಣಿಸಲಸದಳ. ಅವರ ಮನೆಯಲ್ಲಿ ಯಕ್ಷಗಾನದ ತರಗತಿಗಳಾಗುತ್ತಿತ್ತು. ಇಂದಿನ ಬಹುತೇಕ ಶ್ರೇಷ್ಟರೆನಿಸಿದ ಕಲಾವಿದರು ಅವರ ಗರಡಿಯಲ್ಲಿ ಪಳಗಿದವರೇ !
ಅವರು ಧರ್ಮಸ್ಥಳ ಮೇಳದಲ್ಲಿದ್ದಾಗ ಮೇಳವನ್ನು ಮುಂದೆ ತಂದಿದ್ದಲ್ಲದೆ, ತೆಂಕುತಿಟ್ಟಿನ ಯಕ್ಷಗಾನದ ಬಗ್ಗೆ ಬಡಗು, ಬಡಾಬಡಗು ಮಾತ್ರ ಅಲ್ಲದೆ; ಹೊರ ರಾಜ್ಯಗಳಲ್ಲೂ ರುಚಿ ಹತ್ತಿಸಿದವರು. ‘ಯಕ್ಷಗಾನದ ಪಾತ್ರವೆಂದರೆ ಹೀಗೆ’ ಎಂದು ತೋರಿಸಿಕೊಟ್ಟವರು ವಿಠಲ ಶಾಸ್ತ್ರಿಗಳು. ಅಂದಿನ ಕಾಲದಲ್ಲೇ ಅವರ ಆಟ ನೋಡಲು ತಂಡೋಪತಂಡವಾಗಿ ಬುತ್ತಿ, ದೀವಟಿಗೆ ಕಟ್ಟಿಕೊಂಡು ಗುಂಪುಗಳಲ್ಲಿ ಜನ ದೂರದೂರಿನಿಂದ ಬಂದು ಸೇರುತ್ತಿದ್ದರು. ಅವರು ಹೋದೆಡೆಯಲ್ಲೆಲ್ಲಾ ದುಪ್ಪಟ್ಟು ಎನಿಸುವಷ್ಟು ಪ್ರದರ್ಶನಗಳು ಕ್ಷಣಾರ್ಧದಲ್ಲಿ ಬುಕ್ ಆಗುತ್ತಿದ್ದವೆಂದರೆ ಎಂತಹ ನಟನಿರಬೇಕು ಎಂದು ಒಮ್ಮೆ ಆಲೋಚಿಸಿ !
ಬ್ರಹ್ಮಕಪಾಲ ಪ್ರಸಂಗದ ಅವರ ಶಿವ, ಚೂಡಾಮಣಿ ಪ್ರಸಂಗದ ಹನುಮಂತನನ್ನಂತೂ ಮರೆಯಲಸಾಧ್ಯ. ರಂಗಸ್ಥಳದ ಪಕ್ಕಕ್ಕೆ ನೆಟ್ಟ ಮರದಲ್ಲಿ ಥೇಟ್ ಹನುಮಂತನಂತೆ ಚೇಷ್ಟೆ ಮಾಡಿ ಕೊಂಬೆಯಿಂದ ಕೊಂಬೆಗೆ ನೆಗೆಯುತ್ತಿದ್ದುದು, ಶಿವನಾದಾಗ ಅವರ ತಾಂಡವ ನೃತ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅವರು ಕಪಾಲವನ್ನಿಡಿದು ಸಭೆಯಲ್ಲಿ ನಡೆದು ಬಂದರೆ ನೋಡುಗರ ಕಣ್ಣು ಕಣ್ಗರೆಯುತ್ತಿದ್ದವು ; ಸ್ತಬ್ಧವಾಗುತ್ತಿದ್ದವು; ಅವರ ಅಭಿನಯಕ್ಕೆ ರೋಮಾಂಚನಗೊಳ್ಳುತ್ತಿದ್ದವು. ಎಷ್ಟರ ಮಟ್ಟಿಗೆ ಎಂದರೆ, ಕಪಾಲದ ತುಂಬೆಲ್ಲಾ ಕಾಂಚಾಣ ! ಯಕ್ಷಗಾನವನ್ನು ಪ್ರಾಯೋಜಿಸಿದವನಿಗೆ ಬರುವ ಟಿಕೇಟ್ ಮೊತ್ತಕ್ಕಿಂತಲೂ ಅವರು ಕಪಾಲ ಹಿಡಿದಾಗ ಭಾವುಕರಾದ ಜನತೆ ಸಲ್ಲಿಸುತ್ತಿದ್ದ ಕಾಣಿಕೆ, ಅರ್ಪಣೆ ದುಪ್ಪಟ್ಟು ಜಾಸ್ತಿ ! ಕೊನೆಗೆ ಶಿವನ ಪಾತ್ರ ಮಾಡುತ್ತಲೇ ರಂಗದಲ್ಲೇ ಹೃದಯಾಘಾತದಿಂದ ಕುಸಿದು ಶಿವನ ಪಾದವೇ ಸೇರಿದರು ಎನ್ನಬಹುದು. ಕಲಾವಿದನಿಗೆ ಇದಕ್ಕಿಂತ ದೊಡ್ಡ ಸಾರ್ಥಕತೆ ಇನ್ನಾವುದಿದೆ? ಇಂದಿನ ಯಕ್ಷಗಾನದ ಯಾವ ಕಲಾವಿದರೂ ಅವರಿಗೆ ಸರಿಸಾಟಿಯಾಗಲಾರರು. ಕಲಾವಿದ ಎಂದರೆ ಹಾಗಿರಬೇಕು. ಇದು ನನ್ನೊಬ್ಬಳ ಮಾತಲ್ಲ. ಅವರ ಪಾತ್ರವನ್ನು ನೋಡಿದ ಅಷ್ಟೂ ಜನರ ಅಭಿಪ್ರಾಯ.