ಅಂಕಣಗಳು

Subscribe


 

ಕನ್ನಡತಿಯಾಗಿ ಕರಾವಳಿಯಲ್ಲಿ ನೆಲೆಸಿದ ನೃತ್ಯಸರಸ್ವತಿ : ಶ್ರೀಮತಿ ಜಯಲಕ್ಷ್ಮಿ ಆಳ್ವ

Posted On: Sunday, February 28th, 2010
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಸ್ವತಃ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಂದಲೇ ‘ನೃತ್ಯ ಸರಸ್ವತಿ’ ಎಂದು ಹೊಗಳಿಸಿಕೊಂಡು ಗೌರವಕ್ಕೆ ಪಾತ್ರರಾದವರು ಶ್ರೀಮತಿ ಜಯಲಕ್ಷ್ಮಿ ಆಳ್ವ.. ಅವರಿಗೀಗ ೭೭ರ ಹರೆಯ. ತವರೂರು ಕುಂಭಕೋಣಂ. ೧೯೩೩ರಲ್ಲಿ ಜನನ. ಭರತನಾಟ್ಯದ ಪಂದನಲ್ಲೂರು ಪದ್ಧತಿಯ ಮೇರು ಗುರುಗಳಾದ ಕಲಾಕ್ಷೇತ್ರದಲ್ಲಿ ಅರುಂಡೇಲ್ ಅವರೊಂದಿಗೆ ಸೇವೆ ಸಲ್ಲಿಸಿದ ಗುರು ಕೆ.ಎನ್. ದಂಡಾಯುಧ ಪಾಣಿ ಪಿಳ್ಳೈ ಅವರ ಪಟ್ಟ ಶಿಷ್ಯೆ. ಹಿರಿಯ ನೃತ್ಯದಿಗ್ಗಜರಾದ ಸ್ವರ್ಣಂ ಸರಸ್ವತಿ, ಗೌರಿ ಅಮ್ಮಾಳ್, ಕರುಣಾಕರ್ ಪಣಿಕ್ಕರ್ ಅವರಲ್ಲಿ ಅಭಿನಯ ಮತ್ತು ಕಥಕಳಿಯನ್ನು ಅಭ್ಯಾಸ ಮಾಡಿದವರು.

ಶಿವರಾಮ ಕಾರಂತರ ಸಂಬಂಧಿ ರಾಮಕೃಷ್ಣ ಆಳ್ವ ಅವರ ಸತಿಯಾಗಿ ಕರ್ನಾಟಕಕ್ಕೆ ಬಂದ ಮೇಲೆ, ಕನ್ನಡ ಕಲಿತು ಕನ್ನಡತಿಯಾಗಿ ಬೆಳೆದು, ಹಲವು ಕಲಾವಿದರಿಗೆ ದಿಕ್ಸೂಚಿಯಾದರು. ೧೯೫೯ರಲ್ಲಿ ಮುಂಬೈನಲ್ಲಿ ಇವರು ಪ್ರಾರಂಭಿಸಿದ ಚಿತ್ರಾಂಬಲಂ ನೃತ್ಯ ಕೇಂದ್ರವನ್ನು ಪತಿಯ ಆಶಯದಂತೆ ಕರ್ನಾಟಕಕ್ಕೆ ೧೯೭೪ರಲ್ಲಿ ವಿಸ್ತರಿಸಿ, ತದನಂತರ ಮಂಗಳೂರಿನಲ್ಲಿ ಶ್ರೀದೇವಿ ನೃತ್ಯ ಕೇಂದ್ರವೆಂಬ ಹೆಸರಿನಿಂದ ಉದ್ದೀಪನಗೊಳಿಸಿದರು. ೧೯೯೩ರಿಂದ ನೃತ್ಯೋತ್ಸವವನ್ನು ಆಚರಿಸುತ್ತಾ ಬಂದಿದ್ದು ; ೪೭ ವರ್ಷಗಳನ್ನು ಪೂರೈಸಿದ ಸಂದರ್ಭ, ಇತ್ತೀಚೆಗಷ್ಟೇ ಖ್ಯಾತ ಚಲನಚಿತ್ರ ನಟಿ, ನೃತ್ಯ ಕಲಾವಿದೆ ವೈಜಯಂತಿ ಮಾಲಾಬಾಲಿ ಅವರಿಗೆ ‘ನಾಟ್ಯಕಲಾ ತಪಸ್ವಿನೀ’ ಬಿರುದು ಪ್ರದಾನ ಮಾಡಿ ಗೌರವಿಸಿದ್ದಾರೆ.

ಸೋನಾಲ್ ಮಾನ್‌ಸಿಂಗ್, ವಹೀದಾ ರೆಹಮಾನ್, ಜಯಾ, ಶ್ರೀಲೇಖಾಮೆಹ್ತಾ, ಅದಿತಿ ಮೆಹ್ತಾ, ಮಾಯಾ ಕುಲಕರ್ಣಿ, ಪ್ರಭಾವತಿ ಶಾಸ್ತ್ರಿ ಮುಂತಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಪ್ರತಿಭಾವಂತ ಕಲಾವಿದರು ಇವರ ಗರಡಿಯಲ್ಲಿ ಪಳಗಿದವರೇ ! ತಮ್ಮ ವಜ್ರಮಹೋತ್ಸವ ಸಮಾರಂಭದಲ್ಲಿ ಖ್ಯಾತಿವೆತ್ತ ಶಿಷ್ಯೆಯರೊಂದಿಗೆ, ಓರಗೆಯ ಹಿರಿಯ ಕಲಾವಿದರೊಂದಿಗೆ ‘ಪಂಚಕನ್ಯಾ’ ನೃತ್ಯರೂಪಕದಲ್ಲಿ ಅಭಿನಯಿಸಿ ೭೫ರಲ್ಲೂ ೨೫ರ ಹುರುಪು ತೋರಿದ್ದಾರೆ. ಆಶೀಷ್ ಖೋಕರ್ ಅವರ ಹೆಸರಾಂತ ನೃತ್ಯ ವಾರ್ಷಿಕ ಪತ್ರಿಕೆ ‘ಅಟೆಂಡೆನ್ಸ್’ನ ೨೦೦೮-೦೯ರ ಸಂಚಿಕೆ ಜಯಲಕ್ಷ್ಮಿ ಆಳ್ವ ಅವರಿಗೆ ಅರ್ಪಣೆಗೊಂಡಿದೆ.

ಚಿತ್ರಾಂಬಲ ಕೊರವಂಜಿ, ಸ್ವಾತಿ ತಿರುನಾಳ ರಾಮಾಯಣ, ಕೃಷ್ಣ ಕೀರ್ತನ, ಕೃಷ್ಣ ತುಲಾಭಾರ, ವಸಂತಾವಳಿ, ಬಾಲರಾಮಾಯಣ, ನವಗ್ರಹ, ನವಸಂಧಿ, ನೃತ್ಯ ಗೋವಿಂದ, ಕರಾವಳಿಗಾಥಾ, ಪಂಚಕನ್ಯಾ ಮುಂತಾದುವುಗಳು ಇವರು ಸಂಯೋಜಿಸಿದ ನೃತ್ಯ ಬ್ಯಾಲೆಗಳು. ಕೇವಲ ರಂಗಪ್ರವೇಶಗಳನ್ನು ಮಾಡಿಸಿ ಸುಮ್ಮನಾಗುವ ಇಂದಿನ ಗುರುಗಳ ಮಧ್ಯೆಯೂ ರಂಗಪ್ರವೇಶದ ಬಗ್ಗೆ ಪ್ರಗತಿಪರ ಧೋರಣೆಗಳನ್ನಿಟ್ಟುಕೊಂಡು ಡಾ. ಪದ್ಮಾಸುಬ್ರಹ್ಮಣ್ಯಂ, ಎನ್.ಎಸ್. ಜಯಲಕ್ಷ್ಮಿ, ಪಾರ್ವತಿ ಕುಮಾರ್ ಅವರಂತಹ ನೃತ್ಯ ದಿಗ್ಗಜರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಮಾಡಿ ಅರ್ಹತಾ ಪತ್ರಗಳನ್ನು ಕೊಟ್ಟು ಕಡಿಮೆ ಖರ್ಚಿನಲ್ಲಿ ರಂಗಪ್ರವೇಶ ಮಾಡಿಸುವುದು ವೈಶಿಷ್ಟ್ಯ.

ಈವರೆಗೆ ನಾಟ್ಯರಾಣಿ ಶಾಂತಲಾ (೧೯೯೫), ರಾಮವಿಠ್ಠಲ ಪ್ರಶಸ್ತಿ(೨೦೦೫), ನೃತ್ಯಕಲಾಶಿರೋಮಣಿ(೨೦೦೪), ಕನ್ನಡಶ್ರೀ(೨೦೦೩), ಕರ್ನಾಟಕಶ್ರೀ(೨೦೦೩), ನಾಟ್ಯಕಲಾರತ್ನ(೨೦೦೧), ನೃತ್ಯಕಲಾಸಿಂಧು(೨೦೦೦), ಚೆನ್ನೈಯ ಸ್ತ್ರೀರತ್ನ(೧೯೯೮), ಕರ್ನಾಟಕ ನೃತ್ಯಕಲಾ ಪರಿಷತ್ ಪ್ರಶಸ್ತಿ(೧೯೯೬), ಸುರಭಿ(೧೯೯೫), ದಕ್ಷಿಣ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೭), ಕರ್ನಾಟಕ ಕಲಾ ತಿಲಕ(೧೯೮೬), ನಾಟ್ಯ ಕಲಾಸರಸ್ವತಿ(೧೯೪೯), ರಾಜ್ಯೋತ್ಸವ ಪ್ರಶಸ್ತಿ, ತುಳು ಕೂಟ, ರೋಟರಿ ಕ್ಲಬ್, ದಕ್ಷಿಣ ಕನ್ನಡ ಜಿಲ್ಲಾ ಪುರಸ್ಕಾರ- ಸನ್ಮಾನಗಳು ಇವರಿಗೆ ಪಾತ್ರವಾಗಿವೆ.

ಜಯಲಕ್ಷ್ಮಿ ಆಳ್ವ ಅವರ ಮಗಳು ಡಾ. ಆರತಿ ಶೆಟ್ಟಿ ಸಂದೇಶ ಲಲಿತಕಲಾ ಕಾಲೇಜಿನ ಪ್ರಾಂಶುಪಾಲರಾಗಿದ್ದವರು. ಪ್ರಸ್ತುತ ಸರಸ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ. ಹೊರ ಜಗತ್ತಿನ ವೈಭವೀಕರಣಗಳಿಗೆ ಅಷ್ಟಾಗಿ ತೆರೆದುಕೊಳ್ಳದಿದ್ದರೂ, ನೃತ್ಯವಲಯದಲ್ಲಿ ಸಾಕಷ್ಟು ಮನ್ನಣೆ, ಹಿರಿಮೆ ಪಡೆದಿರುವ ಸರಳ ವ್ಯಕ್ತಿತ್ವದ ಜಯಲಕ್ಷ್ಮಿ ಆಳ್ವ ಅವರ ಮಾತುಗಳಿಗೆ ವರ್ಷದ ಸಂಚಿಕೆಯ ದರ್ಶನ ಭ್ರಮರಿಯಲ್ಲಿ ಕಿವಿಯಾಗೋಣವೇ?

ನೀವು ಕಂಡುಕೊಂಡಂತೆ ನಿಮ್ಮ ಕಾಲದಲ್ಲಿದ್ದ ಕಲೆಯ ಕುರಿತ ಮನೋಭಾವಕ್ಕೂ, ಇಂದಿನ ಸ್ಥಿತಿಗೂ ವ್ಯತ್ಯಾಸ ಏನು?

ಮೊದಲೆಲ್ಲಾ ನೃತ್ಯ ಕಲಿಯುವವರು, ಮಾಡುವವರು ಒಳ್ಳೆ ಕುಟುಂಬದಿಂದ ಬಂದವ್ರು ಎಂದೇನೂ ಆಗಿರಲಿಲ್ಲ. ಅಂತಹ ಸಂದರ್ಭದಲ್ಲಿ ರುಕ್ಮಿಣೀದೇವಿ ಅವರಂತಹ ಹಲವು ಮಹನೀಯರು ನೃತ್ಯ ಶಿಸ್ತಿನ ಆಚರಣೆಗೆ ನಡೆಸಿದ ಹೋರಾಟ, ಜಾಗೃತಿಯಿಂದಾಗಿ ಕ್ರಮೇಣ ಒಳ್ಳೆಯ ಮನೆತನದವರು ನೃತ್ಯಕ್ಷೇತ್ರಕ್ಕೆ ಕಾಲಿಡುವಂತಾಯಿತು. ಆಗ ತುಂಬಾ ಗುರುಗಳು ಇರಲಿಲ್ಲ. ಆದರೆ ಸಾಂಪ್ರದಾಯಿಕವಾಗಿ ಶಿಸ್ತಾಗಿ ಕಲಿಸ್ತಾ ಇದ್ದರು. ಕಲಿಸುವವರಲ್ಲೂ ಹೆಚ್ಚಿನ ಶ್ರದ್ಧೆಯಿತ್ತು. ಆಗಿನ ಕಾಲದ ನಾಟಕ ಕ್ಷೇತ್ರದಲ್ಲೂ ಕೂಡಾ ಶಿಸ್ತು ಇತ್ತು. ಆಗಿನ ಕಾಲದಲ್ಲಿ ಕಾರ್ಯಕ್ರಮಗಳಿಗೆ ಟಿಕೇಟ್ ತೆಗೊಂಡು ಕಾರ್ಯಕ್ರಮ ನೋಡ್ತಿದ್ರು. ಆದ್ರೆ ಇಂದಿಗೆ ಟಿಕೇಟ್ ಇಲ್ದಿದ್ರೂ ನೃತ್ಯ-ಸಂಗೀತ ನೋಡೋವ್ರು ಕಡಿಮೆ ಆಗಿದ್ದಾರೆ.

ಭರತನಾಟ್ಯ ಕ್ಷೇತ್ರಕ್ಕೆ ನಿಮ್ಮ ಪ್ರವೇಶ ಹೇಗೆ?

ನನ್ನ ಅಜ್ಜನಿಗೆ ಯಕ್ಷಗಾನದಂತಹ ಕಲೆಗಳಲ್ಲಿ ಪರಿಶ್ರಮ ಇತ್ತು. ಅಕ್ಕ ಜಾನಕಿ ಕೂಡಾ ಸಂಗೀತ ಕಲಾವಿದೆ. ಹಾಗಾಗಿ ಸಣ್ಣದರಿಂದಲೇ ಹಾಡ್ತಿದ್ದೆ. ಡ್ಯಾನ್ಸ್ ಕಲೀಬೇಕೂ ಅಂತ ಆಸೆ. ಆದರೆ ಹೇಳಿಕೊಡುವವರು ಯಾರು, ಮನೇಲಿ ಒಪ್ಪುವರೇ ಅನ್ನುವ ಅಂಜಿಕೆ. ಆದರೆ ನನ್ನ ಪೂರ್ವಜನ್ಮದ ಪುಣ್ಯ. ಭರತನಾಟ್ಯದ ಕಡೆಗೆ ಮನಸ್ಸು ಒಲಿದು ಗುರು ದಂಡಾಯುಧ ಪಾಣಿ ಪಿಳ್ಳೈ ಅವರಲ್ಲಿ ಕಲಿಯುವ ಯೋಗ ಕೂಡಿಬಂದದ್ದು. ಅವರ ಸ್ನೇಹಿತರೊಬ್ಬರ ಮನೆಗೆ ಆಗಾಗ ನೃತ್ಯ ಕಲಿಸಲು ಬರುತ್ತಿದ್ದರು. ಒಮ್ಮೆ ಅಲ್ಲಿಗೆ ನಾನು ಹೋಗಿದ್ದೆ. ಪರಿಚಯವಾಗಿ ಕಲಿಸಲು ಒಪ್ಪಿದರು. ಆ ಸಂದರ್ಭ ಕಲಾಕ್ಷೇತ್ರದಲ್ಲಿ ಗುರುಗಳಾಗಿದ್ದರು. ಅವರು ಕಲಾಕ್ಷೇತ್ರ ಬಿಟ್ಟು ಬಂದ ಮೇಲೆನಾನು ಅವರ ಮೊದಲ ಶಿಷ್ಯೆ ಎಂಬುದೇ ನನ್ನ ದೊಡ್ಡ ಹೆಮ್ಮೆ. ೧೯೪೮ರಲ್ಲಿ ನನ್ನ ಅರಂಗೇಟ್ರಂ ಆಗಿ ನೃತ್ಯ ಕ್ಷೇತ್ರಕ್ಕೆ ಕಾಲಿಟ್ಟೆ.

ಮೂಲತಃ ತಮಿಳ್ನಾಡಿನವರಾದ ನೀವು ಕರ್ನಾಟಕಕ್ಕೆ ಬಂದು ನೃತ್ಯಶಾಲೆ ಕಟ್ಟಲು ಕಾರಣ?

ಮುಂಬೈಯ್ಯಲ್ಲಿ ೧೫ ವರ್ಷ ಇದ್ವಿ. ಅಲ್ಲಿ ಚಿತ್ರಾಂಬಲಂ ಪ್ರಾರಂಭಿಸಿದೆ. ಆದರೆ ನನ್ನ ಪತಿಗೆ ಕರ್ನಾಟಕದಲ್ಲಿ ಕಲಾಕ್ಷೇತ್ರದ್ದೇ ಮಾದರಿಯ ಪ್ರಗತಿಪರ ಸಂಸ್ಥೆಯನ್ನು ಕಟ್ಟಬೇಕು ಅಂತ ಇತ್ತು. ಹಾಗಾಗಿ ಮಂಗಳೂರಿಗೆ ಬಂದೆವು.

ರಂಗಪ್ರವೇಶ ಪದ್ಧತಿಯ ಬಗ್ಗೆ ನಿಮ್ಮ ಅಭಿಪ್ರಾಯ ?

ರಂಗಪ್ರವೇಶ- ಕಲಿತದ್ದನ್ನು ಹಿರಿಯರ ಆಶೀರ್ವಾದ ಪಡೆದು ಮಾಡಿ ತೋರಿಸುವುದೇ ವಿನಾ ನೆರೆದವರ ಮುಂದೆ ಹೆಚ್ಚುಗಾರಿಕೆ ತೋರಿಸಿಕೊಳ್ಳುವ ಪ್ರದರ್ಶನವಲ್ಲ. ಅದೊಂದು ಬಗೆಯ ಸತ್ತ್ವ ಪರೀಕ್ಷೆ. ಆದರೆ ಈಗೀಗ ರಂಗಪ್ರವೇಶವೆಂದರೆ ಆಡಂಬರ ಅಲ್ಲದೆ ಬೇರೇನಲ್ಲ. ಇಂದಿನ ಹಲವು ರಂಗಪ್ರವೇಶಗಳ ಅರ್ಧ ಖರ್ಚು ಆಮಂತ್ರಣ ಪತ್ರಿಕೆ, ಜಾಹೀರಾತು, ಗುರುದಕ್ಷಿಣೆ, ವಿವಿಧ ಬಗೆಯ ಪೋಸ್ ಕೊಟ್ಟ ಛಾಯಾಚಿತ್ರಗಳನ್ನೊಳಗೊಂಡ ಅವರ ಸಾಧನೆಯ ವಿವರ ಹೊತ್ತಿರುವ ಬಣ್ಣ ಬಣ್ಣದ ಬ್ರೋಷರ್ಸ್‌ಗಳಲ್ಲೇ ಇದೆ ! ಇನ್ನು ಪ್ರದರ್ಶನವೋ ಬಹಳಷ್ಟು ಬಾರಿ ದೇವರಿಗೇ ಪ್ರೀತಿ ಅಂತಾಗುತ್ತದೆ ! ಹೀಗೆ ಖರ್ಚಿನ ಬಾಬ್ತು.

ಹೆಜ್ಜೆಯಿಡುವ ಮೊದಲ ಮೆಟ್ಟಿಲಲ್ಲೇ, ಕಲಾವಿದೆಯಾಗುವ ಮೊದಲೇ ಸಾಧನೆಯ

ವಿವರ-ಚಿತ್ರಗಳನ್ನು ತೋರಿಸುವುದಾದರೆ ರಂಗಪ್ರವೇಶಕ್ಕೆ ಏನಿದೆ ಅರ್ಥ? ಇಂತಹ ತೋರಿಕೆಗಳು ಬೇಕೆ? ಹಾಗಾದರೆ ಯಾವ ಪುರುಷಾರ್ಥಕ್ಕೆ? ಪ್ರತಿಭಾವಂತ ಬಡ-ಮಧ್ಯಮ ವರ್ಗದ ಮಕ್ಕಳಿಗೆ, ಪೋಷಕರಿಗೆ ತಪ್ಪು ಮಾಹಿತಿ ಕೊಟ್ಟು ಶಾಸ್ತ್ರೀಯ ನೃತ್ಯವೆಂದರೆ ದುಬಾರಿ ಎಂದು ಮೂಡಿಸಿದರೆ ಒಂದಾನೊಂದು ಕಾಲದಲ್ಲಿದ್ದಂತೆ ನೃತ್ಯವನ್ನು ನಾವೇ ಕೆಳಮಟ್ಟಕ್ಕೆ ದೂಡಿದಂತೆಯೇ ಆಗುವುದರಲ್ಲಿ ಸಂಶಯವಿಲ್ಲ.

ಆದರೆ ಇಂದಿನ ದುಬಾರಿ ಕಾಲದಲ್ಲಿ, ಅದೂ ದುಬಾರಿ ಅನ್ನಿಸಿಕೊಂಡ ಕಲೆಯ ಪ್ರವೇಶ ಕಾರ್ಯಕ್ರಮದ ಖರ್ಚುವೆಚ್ಚಗಳನ್ನು ಹೇಗೆ ಸರಿತೂಗಿಸಿಕೊಳ್ಳುವುದು?

ವಿದ್ಯಾಭಾಸದಲ್ಲಿ ಖರ್ಚು ಸಹಜ. ಹಾಗಂತ ಅದಕ್ಕೂ ಒಂದು ಮಿತಿ ಇದೆ. ಉದಾ: ರಂಗಪ್ರವೇಶದ ಒಟ್ಟಾರೆ ಖರ್ಚು ಒಂದು ಲಕ್ಷ ರೂಪಾಯಿಯೇ ಆಗುತ್ತದೆ ಅಂದಿಟ್ಟುಕೊಳ್ಳೋಣ. ಆಗ ಕಲಿತ ನಾಲ್ಕೈದು ವಿದ್ಯಾರ್ಥಿಗಳು ತಮ್ಮಲ್ಲೇ ಹಂಚಿಕೊಳ್ಳುವ ಹಾಗೆ ಮಾಡಬೇಕು. ಈಗ ನಮ್ಮಲ್ಲಿ ಇದೇ ನಿಯಮವಿದೆ. ಒಬ್ಬರದ್ದೇ ಪ್ರದರ್ಶನ ಆದರಲ್ಲವೇ ಮೇಲಾಟಗಳು ಕಾಣಿಸಿಕೊಳ್ಳುವುದು !

ಹಾಗಾಗಿ ನಾನು ರೂಪಿಸಿಕೊಂಡ ಕ್ರಮದಂತೆ ರಂಗಪ್ರವೇಶಕ್ಕಿಂತ ಮುಂಚೆ ಹಿರಿಯ ವಿದ್ವತ್ಪೂರ್ಣ ಕಲಾವಿದರ ಸಮ್ಮುಖದಲ್ಲಿ ಪರೀಕ್ಷೆಗಳನ್ನು ನಡೆಸಿ ಅರ್ಹತಾ ಪತ್ರಗಳನ್ನು ಪ್ರದಾನ ಮಾಡಿ ಖರ್ಚುಗಳನ್ನು ಹಂಚಿಕೊಳ್ಳಲು ಗುರುಗಳಾದ ನಾವೇ ತಿಳಿ ಹೇಳುತ್ತೇವೆ. ಸರಳವಾದ ಕಾಟನ್ ಸೀರೆಗಳನ್ನು ಬಳಸಲು ಹೇಳುತ್ತೇವೆ. ಸರಳವಾದ ಆಮಂತ್ರಣ ಪತ್ರಿಕೆಗಳನ್ನು ಮಾಡಿಸುತ್ತೇವೆ.

ಗುರುದಕ್ಷಿಣೆ ಒಬ್ಬೊಬ್ಬರೇ ಕೊಟ್ಟರೆ ಬೇಧಭಾವ ಬರುತ್ತದೆ ; ಬಡ-ಮಧ್ಯಮ ವರ್ಗದವರಿಗೆ ಕಷ್ಟ ಆಗುತ್ತದೆಯಾದ್ದರಿಂದ ಎಲ್ಲರೂ ಒಟ್ಟಾಗಿ ಸಮನಾದ ಖರ್ಚಿನಲ್ಲಿ ಕೊಡುವಂತೆ ಮಾಡುತ್ತೇವೆ.

ನೃತ್ಯಪರೀಕ್ಷೆಗಳ ಪದ್ಧತಿಯ ಬಗ್ಗೆ ಸಾಕಷ್ಟು ಅಪಸವ್ಯಗಳು ಕೇಳಿಬರುತ್ತಿವೆ, ಕಾಣುತ್ತಿವೆ. ಇದರ ಬಗ್ಗೆ ಏನು ಹೇಳುತ್ತೀರಿ?

ನೃತ್ಯ ಪರೀಕ್ಷೆಗಳ ಅಗತ್ಯ ಖಂಡಿತವಾಗಿಯೂ ಇದೆ. ಅರ್ಹತೆಗೇ ಆಧಾರವಲ್ಲವೇ? ಆದರೆ ಪರೀಕ್ಷೆಯ ಸ್ವರೂಪದಲ್ಲಿ ಸುಧಾರಣೆ ಆಗಲೇಬೇಕು. ನಮ್ಮ ಸಮಯದಲ್ಲಿ ಪರೀಕ್ಷೆ ಎಂಬುದು ಇರಲಿಲ್ಲ. ಬಡ ಹುಡುಗಿಯರಿಗೆ ಆಗಲೂ ಅಷ್ಟಾಗಿ ಮಿಂಚಲು ಆಗ್ತಿರ್ಲಿಲ್ಲ. ಆಗ ಅದು ಒಂದು ಶಾಪದಂತೆ. ಆದರೆ ಈಗ ಪರೀಕ್ಷೆಗಳು ಗೊತ್ತು ಗುರಿಯಿಲ್ಲದಂತೆ ನಡೆಯುವುದು ; ಪರೀಕ್ಷೆಯ ಹೆಸರಲ್ಲಿ ಗುರುಗಳೆನಿಸಿಕೊಂಡವರು ಹಣ ಮಾಡುವುದು ಗಮನಿಸಿದರೆ ಇದೂ ಒಂದು ಶಾಪವೇ ಸರಿ !

ಕಷ್ಟ ಯಾರಿಗಿಲ್ಲ? ಎಲ್ಲರಿಗೂ ಇದೆ ಎಂಬ ಕರುಣೆ ಬೇಕು. ಹಾಗೆ ನೋಡಿದರೆ ಗುರುಗಳಾದ ನಾವು ಕಲಿಸುವುದರ ಮೂಲಕ ಮತ್ತಷ್ಟು ಕಲಿಯುತ್ತೇವೆ.

ಕೊಡುವ ವಿದ್ಯೆ ಶಾಶ್ವತ ಆಗಿರಬೇಕೇ ವಿನಾ ಆಡಂಬರದ ಖರ್ಚು ಅಲ್ಲ, ವೆಚ್ಚವೂ ಅಲ್ಲ.

ಇಂತಹ ಅವಾಂತರಗಳಿಗೆ ಮುಖ್ಯ ಯಾರು ಕಾರಣ ಅಂತನ್ನಿಸುತ್ತದೆ?

ತಪ್ಪು ಪೋಷಕರದ್ದಲ್ಲ ; ಗುರುಗಳದ್ದು, ನೃತ್ಯ ಶಿಕ್ಷಕರದ್ದು. ಕೆಲವೊಮ್ಮೆ ತಂದೆತಾಯಿಗಳಿಗೇ ಹಣ ಕೊಡ್ಲಿಕ್ಕೆ ಸಾಧ್ಯವಾಗುವುದಿಲ್ಲ. ಆದರೂ ಗುರುಗಳು ಬಿಡುವುದಿಲ್ಲ ಎಂಬಂತಾಗಿದೆ. ಕಮರ್ಷಿಯಲ್ ಸರಿ. ಆದರೆ ಅದಕ್ಕೂ ಮಿತಿ ಇದೆಯಲ್ವಾ?

ನೃತ್ಯ ಇರುವುದು ಸ್ಕೂಲ್ ಪ್ರಾರಂಭ ಮಾಡಿ ಫ್ಯಾಕ್ಟರಿ ಮಾಡೋದಕ್ಕಲ್ಲ.. ಈಗಂತೂ ಗಲ್ಲಿಗಲ್ಲಿಗಳಿಗೇ ಗುರುಗಳು ಸಿಗ್ತಾರೆ, ಬಿಡಿ.

ಹಾಗಾದರೆ ಇಂತಹ ಪಡಿಪಾಟಲುಗಳಲ್ಲಿ ಪೋಷಕರ ಪಾತ್ರ ಏನೂ ಇಲ್ಲವೇ?

ನಾನು ಬಾಂಬೆಯಲ್ಲಿದ್ದಾಗಲೂ, ಕರ್ನಾಟಕಕ್ಕೆ ಬಂದ ನಂತರವೂ ಬಹಳಷ್ಟು ಮಂದಿ ಗುರುಗಳು ಪೋಷಕರನ್ನು ದೂರುತ್ತಿದ್ದರು ; ‘ಒತ್ತಡ ಹೇರ್ತಾರೆ. ಆ ಹಾಡಿಗೆ ಡ್ಯಾನ್ಸ್ ಕಲಿಸಿ, ಬೇಗ ರಂಗಪ್ರವೇಶ ಮಾಡಿಸಿ, ಸ್ಟೇಜ್ ಹತ್ತಿಸಿ, ಪರೀಕ್ಷೆಗೆ ಕೂರಿಸಿ ಪಾಸು ಮಾಡಿಸಿ..’ ಅಂತೆಲ್ಲಾ.. ಆಗೆಲ್ಲಾ ನನ್ನದು ಒಂದೇ ಉತ್ತರ. ತಂದೆತಾಯಿಯಾದವರಿಗೆ ತಮ್ಮ ಮಕ್ಕಳು ಬೇಗ ಸ್ಟೇಜ್ ಮೇಲೆ ಬರಬೇಕು. ಅವರು ನೃತ್ಯ ಮಾಡುವುದನ್ನು ನೋಡ್ಬೇಕು ಅಂತೆಲ್ಲಾ ಆಸೆ ಇರುತ್ತದೆ. ಅದು ಸಹಜ. ಆದರೆ ಅವರಿಗೆ ನೃತ್ಯದ ತಾಂತ್ರಿಕ, ಶೈಕ್ಷಣಿಕ ಒಳನೋಟಗಳು ಗೊತ್ತಾಗಿರೋಲ್ಲ. ಅದನ್ನು ಅವರಿಗೆ ಅರ್ಥ ಮಾಡಿಸಬೇಕೇ ವಿನಾ, ಫೀಸು ತಪ್ಪಿ ಹೋಗುತ್ತದೋ ಎಂಬ ಭಯದಲ್ಲಿ ಅವರ ತಾಳಕ್ಕೆ ತಕ್ಕಂತೆ ಕುಣಿಯಬಾರದು.

ಉದಾ : ಮಕ್ಕಳು ಕಲೀವಾಗ ಪೋಷಕರು ಬಂದು ಕೂತುಕೊಳ್ಳಬಾರದು. ಯಾಕೆಂದರೆ ಅವರವರ ಮಕ್ಕಳದ್ದೇ ಅವರಿಗೆ ತಲೇಲಿ ಇರುತ್ತದೆ. ಹಾಗಾಗಿ ಪಾರುಪತ್ಯ ಸುರುವಾಗುತ್ತದೆ. ಹಾಗಂತ ಅದು ತಪ್ಪಲ್ಲ. ಉದಾಹರಣೆಗೆ ಎಲ್ಲಾ ಮಕ್ಕಳು ಒಂದೇ ತರಹ ಕಲೀಯೋದಿಲ್ಲವಲ್ಲ ! ಅಷ್ಟೇನೂ ಕಲೀಲಿಕ್ಕೆ ಚುರುಕಿಲ್ಲದ ಹುಡುಗಿ ಮೇಲೆ ಗುರುಗಳು ಹೆಚ್ಚು ಏಕಾಗ್ರತೆ ಇಟ್ಟು ಕಲಿಸಬೇಕಾದರೆ ಪೋಷಕರಿಗೆ ತಮ್ಮ ಮಕ್ಕಳನ್ನು ಗಮನಿಸ್ತಾ ಇಲ್ಲ ಎಂದೆಲ್ಲಾ ಅನ್ನಿಸುತ್ತದೆ. ಆಗ ತಮ್ಮ ಮಕ್ಕಳಿಗೆ ‘ನೀನು ಚೆಂದ ಮಾಡ್ಬೇಕು. ಅವಳಿಗೆ ಜಾಸ್ತಿ ಹೇಳಿ ಕೊಡ್ತಾರೆ.’ ಅಂತೆಲ್ಲಾ ಒತ್ತಡ, ಗುರುಗಳ ಬಳಿ ಕಿರಿಕಿರಿ ಶುರುವಾಗುತ್ತದೆ. ಹಾಗಾಗಿ ಶಿಸ್ತು ಗುರುಗಳಲ್ಲಿದ್ದರೆ ಒಳ್ಳೆಯದು.

ಹಾಗಿದ್ದರೆ ಕಲಿಕೆಯ ಮಾದರಿ ಹೇಗಿದ್ದರೆ ಚೆನ್ನ?

ಮಕ್ಕಳಲ್ಲಿ ಕಲಿಯುವುದರಲ್ಲಿ ಸ್ಪರ್ಧೆ ಬೇಕೇ ವಿನಾ ವೇದಿಕೆ ಹತ್ತುವುದೇ ಉದ್ದೇಶ ಆಗಬಾರದು. ಕೆಲವೇ ಕೆಲವು ಆದರೆ ಶ್ರದ್ಧೆಯುಳ್ಳ ವಿದ್ಯಾರ್ಥಿಗಳು ಸಿಕ್ಕಿದರೆ ಸಾಕಲ್ಲವೇ ಕಲೆಯ ಗುಣಾತ್ಮಕ ಪರಿಣಾಮಗಳನ್ನು ಕಂಡುಕೊಳ್ಳಲಿಕ್ಕೆ ? ಬೇಗ ಸ್ಟೇಜ್ ಮೇಲೆ ಹೋಗ್ಬೇಕು ಅನ್ನೋವ್ರಿಗೆ ಕಲಿಸೋಲ್ಲ, ವಿದ್ಯಾಭ್ಯಾಸವಾಗಿ ತೆಗೊಳ್ಳೋವ್ರಿಗೆ ಮಾತ್ರ ಕಲಿಸೋದು ಅಂತ ಗುರುಗಳೆನಿಸಿಕೊಂಡವರು ಮೊದಲು ಶಪಥ ಮಾಡಬೇಕು. ೫೦-೬೦ ಜನ ಶಿಷ್ಯರು- ವಾರಕ್ಕೆ ೧ ಅಥವಾ ೨ ಕ್ಲಾಸ್ ಅಂದರೆ ಎಷ್ಟು ಒಳ್ಳೆಯ ಪ್ರತಿಭಾವಂತರು, ನೃತ್ಯಾಸಕ್ತರು ಬೆಳೀಲಿಕ್ಕೆ ಸಾಧ್ಯ ? ೧೦ ಜನ ಶಿಷ್ಯರು ಇದ್ರೂ ಸಾಕು ; ಸರಿಯಾದ ಕಲಾವಿದರಾಗಿ ಹೊರಹೊಮ್ಮಲು !

ಮಕ್ಕಳಾದರೆ ೬-೭ ವರ್ಷಕ್ಕಿಂತ ಮೊದಲು ಕಲಿಸೋದಕ್ಕೆ ಮುಂದಾಗಬಾರದು. ಶಾಸ್ತ್ರೀಯ ನೃತ್ಯವಾದ್ದರಿಂದ ಎಳೆ ಮನಸ್ಸುಗಳು ನೃತ್ಯದ ಒಳಗಿನ ಭಾವವನ್ನು ಅರ್ಥ ಮಾಡಿಕೊಳ್ಳಲು ಬಹಳ ಕಷ್ಟ ಪಡುತ್ತವೆ. ಹಾಗಾಗಿ ನೃತ್ಯದೆಡೆಗೆ ತಾಳ್ಮೆ, ಪ್ರೀತಿ ಎರಡೂ ಹುಟ್ಟುವಂತೆ ಮನಸ್ಸುಗಳನ್ನು ಬೆಳೆಸಬೇಕು. ಉದಾ : ಎಸ್ಸೆಸೆಲ್ಸಿ ಕಲಿಯೋದು ೧ನೇ ಕ್ಲಾಸಿಂದಲೇ ಸಾಧ್ಯವಾ? ಒಂದನೇ ಕ್ಲಾಸಿನಿಂದ ಹಿಡಿದು ಹತ್ತು ವರ್ಷವಾದರೂ ಬೇಡವೇ? ಕಾಯುವಿಕೆಯೇ ಇಲ್ಲದಿದ್ದರೆ ಕಲಿಯೋದು ಯಾಕೆ?

ಕಲಿಕೆಯಲ್ಲಿ ಶೈಲಿಯ ಪಾತ್ರ ಎಷ್ಟು ?

ಶೈಲಿ ಅಂದರೆ ನಾವು ಕಲಿತಿದ್ದನ್ನು ಯಾವ ತರಹ ಬಳಸಿಕೊಳ್ಳುತ್ತೇವೆಯೋ ಅದು. ಸಂಯೋಜನೆ ಮಾಡುವುದು ಶೈಲಿಯೇ ಹೊರತು ಕಲಿಯುವಾಗಲೇ ಮಾಡಿಕೊಳ್ಳುವುದಲ್ಲ. ಆದರೆ ಶೈಲಿಯ ಬಗ್ಗೆ ಇರುವಂತಹ ವಿರೋಧಾಭಾಸಗಳಿಂದಾಗಿ ಕಲಿಯುವವರು ಸಮಸ್ಯೆಗೆ ಒಳಗಾಗುತ್ತಾರೆ. ಎಲ್ಲಾ ಗುರುಗಳು ಒಂದೇ ತರಹ ಕಲಿಸ್ಬೇಕು. ಹೇಗೆ ಸಂಗೀತಕ್ಕೆ ಸ್ವರಸ್ಥಾನ, ಲಯ ಇದೆಯೋ- ಹಾಗೆ ನಾಟ್ಯಕ್ಕೆ ಅಂಗಶುದ್ಧ, ಲಯ, ಏಕಕ್ರಮವಾದ ನೃತ್ಯಪದ್ಧತಿ, ಅಡವುಗಳು ಅನ್ನುವುದನ್ನು ರೂಢಿಸಿಕೊಳ್ಳಬೇಕು. ಹಾಗಿದ್ದಾಗ ಎಲ್ಲಿ ಹೋದರೂ ಶೈಲಿ ಎಂಬುದು ಸಮಸ್ಯೆ ಆಗೋದಿಲ್ಲ. ತಾವು ಕಲಿತ ಕ್ರಮ ಮಾತ್ರ ಸರಿ, ಮತ್ತೊಬ್ಬರದ್ದಲ್ಲ ಎಂಬ ಮಾತು ಬರುವುದಿಲ್ಲ.

ನೃತ್ಯದಲ್ಲಿ ಹೇಳಲ್ಪಟ್ಟ ನಿಶ್ಚಿತ ಕ್ರಮದ ಮಾರ್ಗಪದ್ಧತಿಯ ಅನುಸರಣೆ ಕಾಲಾನುಕ್ರಮಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕೇ?

‘ಮಾರ್ಗಪದ್ಧತಿ’ ಎಂದ ಮೇಲೆ ಅದು ಮಾಡುವ ಸಮಯದಲ್ಲಿ ಅದರ ಪ್ರಕಾರವೇ ಮಾಡಬೇಕಲ್ಲವೇ?

ಉದಾ : ಅಲರಿಪುವಿನ ಚಾಕಚಕ್ಯತೆಯನ್ನು ನೋಡಿಯೇ ಕಲಾವಿದೆಯ ಲಯ, ತಾಳ, ಅಂಗಶುದ್ಧ ಎಲ್ಲವನ್ನೂ ಕಂಡುಹಿಡಿಯಬಹುದು. ಆದರೆ ಅಲರಿಪು ಅಂದ್ರೆನೇ ಬಹಳಷ್ಟು ಜನ ನಿರ್ಲಕ್ಷ್ಯ ಮಾಡುತ್ತಾರೆ. ಅರಂಗೇಟ್ರಂಗಳಲ್ಲಿ ಅಲರಿಪು ಇಲ್ಲದಂತಾಗಿದೆ. ಒಂದುವೇಳೆ ಮಾಡಿದರೂ ಅದೊಂದು ಕಾಟಾಚಾರದ, ಮಾಡಬೇಕಾದ ಸಂಕಟಕ್ಕೆ ಮಾಡುವುದು ಎಂದೇ ನೋಡ್ತಾರೆ. ಕೆಲವೊಮ್ಮೆ ಆಕರ್ಷಕ ಮಾಡಬೇಕು ಅನ್ನುತ್ತಾ ಇಲ್ಲದ ಕಸರತ್ತುಗಳನ್ನು ಮಾಡುತ್ತಾರೆ, ಅನಗತ್ಯವಾಗಿ ಅಡವುಗಳನ್ನು ತುರುಕುತ್ತಾರೆ. ಅಷ್ಟಕ್ಕೂ ಅದು ‘ಬೋರ್’ ಅನ್ನುವವರು ಭರತನಾಟ್ಯ ನೋಡ್ಲಿಕ್ಕೆ ಯಾಕೆ ಬರ್ಬೇಕು? ಯಾಕೆ ಕಲೀಬೇಕು? ಅದರ ಸಹಜತೆಯಲ್ಲೇ ಅಲ್ಲವೇ ಇರುವುದು ಆನಂದ !

ಆದರೆ, ವರ್ಣದಂತಹ ಸಮಗ್ರ ನೃತ್ಯಬಂಧಗಳಲ್ಲಿ ನಿರ್ಭಾವುಕವಾಗಿ ಮಾಡುವ ನೃತ್ತ, ಜತಿಗಳ ಸಂಯೋಜನೆ ರಸಭಂಗವನ್ನುಂಟು ಮಾಡುತ್ತದೆ ಎಂಬ ಮಾತಿಗೆ ಏನನ್ನುತ್ತೀರಿ?

ಹೀಗನ್ನುವುದಕ್ಕೆ ಕಾರಣವಿದೆ ; ಈಗಿನ ಜತಿಗಳ ಸಂಯೋಜನೆ ಹೇಗಿದೆಯೆಂದರೆ ಊಟ ಮಾಡಿ ಮಲಗಿ ಎದ್ದು ಬರುವಷ್ಟರ ಮಟ್ಟಿಗೆ ! ವರ್ಣದಲ್ಲಿ ಸ್ಥಾಯಿ ಭಾವಕ್ಕೆ ಅನುಕೂಲವಾಗಿ ಜತಿಗಳನ್ನು ಮಾಡಿದರೆ ರಸಭಂಗವಾಗುವುದಿಲ್ಲ. ಉದ್ದುದ್ದದ ಜತಿಗಳನ್ನು ಹೆಣೆದರೆ ಭಾವಾಭಿನಯದ ವ್ಯಾಪ್ತಿ, ನಾಯಿಕೆಯ ಮಹತ್ವ ಕಡಿಮೆಯಾಗುತ್ತದೆ. ಕಲಾವಿದೆಯ ಪ್ರತಿಭೆ ಪಕ್ವವಾಗಿದ್ದರೆ ಯಾವುದೂ ರಸಭಂಗವನ್ನುಂಟುಮಾಡುವುದಿಲ್ಲ. ಹಿಂದಿನ ಹಿರಿಯರು ಚೆನ್ನಾಗಿಯೇ ಮಾಡುತ್ತಿದ್ದರಲ್ಲಾ ! ಜತಿಗಳ ಸಂಯೋಜನೆ ಇರುವ ಹಾಗೆ ಇದ್ದರೆ ರಸಭಂಗವಾಗುವುದಾದರೂ ಹೇಗೆ?

ಪದ್ಮಾ ಸುಬ್ರಹ್ಮಣ್ಯಂ ಅವರು ಕರಣಗಳನ್ನು ಉಪಯೋಗಿಸಿ ಮಾಡುತ್ತಾರೆ. ಅದು ಅವರ ಶೈಲಿ. ಎಲ್ಲರೂ ಅವರಂತಾಗುವುದು ಸಾಧ್ಯವೇ? ಅವರ ಶ್ರಮ ಎಲ್ಲರಲ್ಲಿದೆಯೇ?

ಇಂದಿನ ಅಭಿನಯ ಕ್ರಮ ಯಾವ ಮಟ್ಟದಲ್ಲಿದೆಯೆನಿಸುತ್ತದೆ?

ಭರತನಾಟ್ಯದ ಅಭಿನಯವೆಂದರೆ ಏಕಪಾತ್ರಾಭಿನಯ ಅಲ್ಲ. ಆದರೆ ಅಭಿನಯದಲ್ಲಿ ಅದೇ ಜಾಸ್ತಿಯಾಗಿದೆ. ಬೇರೆ ಬೇರೆ ಪಾತ್ರಗಳನ್ನು ಒಬ್ಬಳೇ ಒಂದೇ ಬಾರಿಗೆ ಮಾಡುತ್ತಾ ಹೋಗುವುದು ಇಂದಿನ ಭರತನಾಟ್ಯದ ದುರಂತ.

ಜೊತೆಗೆ ಕೆಲವೊಂದು ಎಡವಟ್ಟುಗಳಿವೆ. ಈಗಿನ ಎಲ್ಲ ನೃತ್ಯಗಳಲ್ಲೂ ತಟ್ಟುಮೆಟ್ಟು ಅಡವನ್ನೇ ಮಾಡ್ತಾ ಇರ್ತಾರೆ. ಯಾಕೆ ಎಂದು ಪ್ರಶ್ನಿಸಿದರೆ ಮಾಡುವವರಿಗೂ, ಮಾಡಿಸುವವರಿಗೂ ಗೊತ್ತಿಲ್ಲ ! ವರ್ಣಗಳಲ್ಲಿ ಬುಡದಿಂದ ತುದಿವರೆಗೂ ತಟ್ಟುಮೆಟ್ಟೇ ಎಲ್ಲವೂ ಆಗಿದೆ. ಕೊನೆಕೊನೆಗೆ ಪದಂ, ಅಷ್ಟಪದಿಯ ಅಭಿನಯದಲ್ಲೂ ತಟ್ಟುಮೆಟ್ಟು ಯಾಕೆ ಮಾಡ್ತಾರೋ ಗೊತ್ತಾಗುವುದಿಲ್ಲ !

ನೃತ್ಯದ ಕುರಿತಂತೆ ಸಂಶೋಧನೆಗಳು ಇತ್ತೀಚೆಗೆ ವಿರಳವಾಗುತ್ತಿದೆ ಎಂಬ ಮಾತಿದೆ. ಇದಕ್ಕೇನು ಹೇಳ್ತೀರಿ?

ಸಂಶೋಧನೆಯ ಆಸಕ್ತಿ ಸಣ್ಣದರಿಂದಲೇ ಆರಂಭಿಸಬೇಕು. ಅಷ್ಟಕ್ಕೂ ನೃತ್ಯದ ಮೇಲೆ ಆಸಕ್ತಿ ಇದ್ದ ಮಾತ್ರಕ್ಕೆ ಅವರು ಕಲಾವಿದರೇ ಆಗಬೇಕೆಂದೇನೂ ಇಲ್ಲ. ಕೆಲವರಿಗೆ ಕಲಾವಿದರಾಗಿ ಬೆಳೆಯುವ ಯೋಗವಿರುತ್ತದೆ. ಮತ್ತೂ ಕೆಲವರಿಗೆ ಅದನ್ನು ಕಲಿಸುವ ಕಲೆಯಿರುತ್ತದೆ; ಮತ್ತೊಂದಷ್ಟು ಮಂದಿಗೆ ಅದನ್ನು ಉತ್ತಮವಾಗಿ ಬರೆವಣಿಗೆಯಲ್ಲಿ ಕಟ್ಟಿಕೊಡುವ ಸಾಮರ್ಥ್ಯವಿರುತ್ತದೆ. ಕೆಲವರಿಗೆ ಅದರೊಳಗೆ ಹುಡುಕಿ ಹೊಸತನ್ನು, ಮರೆಯಾಗಿದ್ದನ್ನು ತೆಗೆಯುವ ತಾಕತ್ತು ಇರುತ್ತದೆ, ವಿಮರ್ಶೆ ಮಾಡುವ ಶಕ್ತಿ ಇರುತ್ತದೆ. ಹಾಗಾಗಿ ಯಾವುದರಲ್ಲಿ ಯಾರಿಗೆ ಹೆಚ್ಚು ಶ್ರಮ, ಪ್ರತಿಭೆ ಇದೆಯೋ ಅದನ್ನು ಮಾಡಬೇಕು. ಕಲೆಗೆ ಎಲ್ಲವೂ ಬೇಕು.

ಈಗಿನ ನೃತ್ಯ ವಿಮರ್ಶೆಗಳ ಧಾಟಿ ಹೇಗಿದೆಯೆನಿಸುತ್ತದೆ?

ಈಗ ಒಳ್ಳೆಯ ವಿಮರ್ಶೆ ಬರೆಯುವವರು ಕಡಿಮೆ ಆಗಿದ್ದಾರೆ. ಮೊದಲು ಕಲೆಯನ್ನು ಅನುಭವಿಸಬೇಕು. ಅದರ ಒಳ ಹೂರಣ ಗೊತ್ತಿದ್ದರೆ ಮಾತ್ರ ಏನನ್ನೇ ಆದರೂ ಬರೆಯುವುದಕ್ಕೆ ಸಾಧ್ಯ. ಅದರೆ ಈಗ ಕೇವಲ ಪ್ರಸಿದ್ಧಿಗಾಗಿ ಬರೆಯುವುದು, ಬರೆಸುವುದೇ ಆಗಿಹೋಗಿದೆ. ತಾವು ಮಾಡಿ ತಿಳಿದರಲ್ಲವೇ ಒಳ್ಳೆಯ ವಿಮರ್ಶೆ ಹೇಗೆ ಅಂತ ಅರಿವಾಗುವುದು?

ಶಾಸ್ತ್ರೀಯ ನೃತ್ಯಗಳ ಕಲಾವಿದರ ದಾರಿ ಎತ್ತ ಸಾಗಬೇಕು?

ನೃತ್ಯವಿರುವುದು ಹಣ ಮಾಡುವುದಕ್ಕೆ ಅಲ್ಲ. ಇಂದಿನ ಕಾಲದಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಆಯಾಯ ಪ್ರದೇಶದ ಆಡಳಿತ ಭಾಷೆಯನ್ನುಪಯೋಗಿಸಿ ಜನರಿಗೆ ತಿಳಿವಳಿಕೆ ಕೊಡುವ ಕೆಲಸ ಆಗಬೇಕು. ನೃತ್ಯದ ಪ್ರಯೋಜನ, ವಿಷಯಗಳನ್ನು ತಿಳಿಸಿಕೊಟ್ಟರೆ, ಅರಿವು ಬೆಳೆದರೆ ಅದರ ಪ್ರಯೋಜನ ಕಲೆಗೇ ಆಗಿದೆ. ಅದೇ ನಾವು ಕಲಿತ ಕಲೆಗೆ ಮಾಡುವ ಉಪಕಾರ.

Leave a Reply

*

code