Author: ಮನೋರಮಾ. ಬಿ.ಎನ್
ಆಲದ ಮರ ಬೆಳೆಯಲು ನಿಧಾನಗತಿ ಅನುಸರಿಸಿದರೂ ತಳವೂರಿ ಅಗಾಧವಾಗಿ ಹರಡುತ್ತದೆ. ಅಂತೆಯೇ ಗುರುಕುಲ ಪದ್ಧತಿಯ ಬೇರುಗಳೂ ಕೂಡಾ ! ಅದಕ್ಕೆ ರೂಪಕವೋ ಎಂಬಂತೆ ಹೆಚ್ಚಿನ ಪಾಠಗಳು ಅಡ್ಯಾರ್ನ ದೈತ್ಯ ಆಲದ ಮರಗಳ ನೆರಳಿನಲ್ಲಿಯೆ ನಡೆಯುತ್ತಿದ್ದವು. ರುಕ್ಮಿಣೀದೇವಿ ಸ್ವತಃ ತಾವೇ ನೃತ್ಯ ಪಾಠ ಮಾಡುತ್ತಿದ್ದರು. ಅದೇ ಆವರಣದಲ್ಲಿ ವಿದ್ಯಾರ್ಥಿಗಳ ಪ್ರೌಢ ಶಿಕ್ಷಣಕ್ಕೆ ಅನುಕೂಲವಾಗಲು ಬೆಸೆಂಟ್ ಥಿಯೋಸೋಫಿಕಲ್ ಹೈಸ್ಕೂಲ್ ಕೂಡಾ ಇತ್ತು. ಇದರ ಮುಖ್ಯೋಪಾಧ್ಯಾಯರಾದ ಶಂಕರ ಮೆನನ್ ಹಿಂದೂ ತತ್ವಜ್ಞಾನದ ಪಾಠಗಳನ್ನು ಮಾಡುತ್ತಿದ್ದರು. ನೃತ್ಯ ವಿಭಾಗಕ್ಕೆ ರುಕ್ಮಿಣೀದೇವಿಯವರ ಸೊಸೆ ರಾಧಾ, ಆನಂದಿ, ಶಾರದಾ ; ಸಂಗೀತ ವಿಭಾಗಕ್ಕೆ ರಾಮನ್, ಡಿ.ಪಶುಪತಿ, ಲಕ್ಷ್ಮಣನ್ ಮೊದಲಾದವರು ಕಲಾಕ್ಷೇತ್ರದ ಆರಂಭಿಕ ವಿದ್ಯಾರ್ಥಿಗಳು. ಮೊದಮೊದಲು ರುಕ್ಮಿಣೀದೇವಿಯರನ್ನು, ಕಲಾಕ್ಷೇತ್ರವನ್ನು ‘ದೇವದಾಸಿ ಆಶ್ರಯದಲ್ಲಿದ್ದ ಸಾದಿರ್’ ಎಂಬ ಕಾರಣವೊಡ್ಡಿ ಸಮಾಜ ಸುಧಾರಕಿಯಾಗಿದ್ದರೂ ಪ್ರಬಲವಾಗಿ ವಿರೋಧಿಸಿದ್ದ ಮುತ್ತುಲಕ್ಷ್ಮಿ ರೆಡ್ಡಿಯವರು ಕೂಡಾ ತಾವು ನಡೆಸುತ್ತಿದ್ದ ‘ಅವ್ವೈ’ ಆಶ್ರಮದಿಂದಲೂ ಹೆಣ್ಣು ಮಕ್ಕಳನ್ನು ನೃತ್ಯಾಭ್ಯಾಸಕ್ಕೆ ಕಳುಹಿಸಿದರು.
ಇವರೆಲ್ಲರೊಂದಿಗೆ ಧನಂಜಯನ್, ಚಂದು ಪಣಿಕ್ಕರ್ ಅವರ ಮಗ ಜನಾರ್ಧನ್, ಬಾಲಗೋಪಾಲನ್, ಕುಂಞರಾಮನ್, ಶಾರದಾ ಹಾಪ್ಮನ್, ಲೀಲಾವತಿ, ಕಮಲಾ ರಾಣಿ, ಕಮಲಾದೇವಿ ಚಟ್ಟೋಪಾಧ್ಯಾಯ, ಸಂಜುಕ್ತ ಪಾಣಿಗ್ರಾಹಿ, ಸಿ.ವಿ.ಚಂದ್ರಶೇಖರ್, ಯಾಮಿನಿ ಕೃಷ್ಣಮೂರ್ತಿ, ಲೀಲಾ ಸಾಮ್ಸನ್ ಮುಂತಾದವರು ಕಲಾಕ್ಷೇತ್ರದ ಗರಡಿಯಲ್ಲಿನ ಮೊದಲ ಶಿಷ್ಯರು. ಕ್ರಮೇಣ ನಂತರದ ವರ್ಷಗಳಲ್ಲಿ ಡಾ. ಪದ್ಮಾಸಿನಿ, ಎಂ.ಡಿ.ಮಣಿ, ಗಾಯತ್ರಿದೇವಿ, ವಳ್ಳಿ, ರಾಮರಾವ್, ಸತ್ಯಲಿಂಗಂ, ವಸಂತವೇದಂ, ರಮಾರವಿ, ಉಮಾಸುಂದರಂ, ಶಾಂತಾ ಧನಂಜಯನ್, ಅಮಲಾ ಅಕ್ಕಿನೇನಿ, ಸುಮಿತ್ರಾ ಗೌತಂ, ಸಾವಿತ್ರಿ ನಾಯರ್, ಪುಷ್ಪಾ ಶಿಂಧೆ, ಬೆಂಗಳೂರಿನಲ್ಲಿ ನೆಲೆಸಿರುವ ಪ್ರೊ. ಎಂ.ಆರ್. ಕೃಷ್ಣಮೂರ್ತಿ, ಪ್ರೊ.ವಸಂತಲಕ್ಷ್ಮಿ ಮುಂತಾದ ಖ್ಯಾತನಾಮರೆಲ್ಲಾ ಕಲಾಕ್ಷೇತ್ರದ ಕನಸುಗಳನ್ನು ಭವಿತವ್ಯದ ಜೀವಿತಾವಧಿಯಲ್ಲಿ ನನಸು ಮಾಡಿ ಹೆಸರಾದವರು.
ಕಲಾಕ್ಷೇತ್ರ ಇಂದಿಗೂ ದೇಶ ವಿದೇಶಗಳಲ್ಲಿ ಪ್ರಸಿದ್ಧಿಗೊಂಡಿರುವುದು ತನ್ನ ವೈಭವಯುತವೆನಿಸುವ ನೃತ್ಯ ರೂಪಕಗಳಿಂದ. ಕಲಾಕ್ಷೇತ್ರದ ದಿಗ್ಗಜರೆನಿಸಿದ ಸಂಗೀತ ವಿದ್ವಾಂಸರ ಹಿನ್ನೆಲೆ ಸಂಗೀತ-ಸಾಹಿತ್ಯ ಮತ್ತು ರುಕ್ಮಿಣೀ ಅವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ನೃತ್ಯರೂಪಕಗಳು ಸುಮಾರು ಇಪ್ಪತ್ತೆರಡು. ರುಕ್ಮಿಣೀದೇವಿಯವರ ಮೊದಲ ನೃತ್ಯರೂಪಕ -ಕುಟ್ರಾಲ ಕೊರವಂಜಿ. ಜಾನಪದದ ಸೊಗಡಿನ, ಹದಿನೆಂಟನೆಯ ಶತಮಾನದ ತಮಿಳು ಗದ್ಯವೊಂದರ ಮೇಲೇ ಆಧರಿತವಾದ ಈ ನೃತ್ಯರೂಪಕ ೧೯೪೪ರಲ್ಲಿ ಮೊದಲು ಪ್ರದರ್ಶಿತವಾಯಿತು. ವೀಣಾ ಕೃಷ್ಣಮಾಚಾರ್ಯರ ಸಂಗೀತದಲ್ಲಿ ಅಮೋಘ ಯಶಸ್ಸು ಗಳಿಸಿದ ಈ ನೃತ್ಯರೂಪಕ ಅನೇಕ ರೂಪಕಗಳಿಗೆ ರುಕ್ಮಿಣೀ ಮನಸ್ಸು ಮಾಡುವಂತೆ ಮಾಡಿತ್ತು !
ಅವರ ಅಮೋಘವೆನಿಸುವ ನೃತ್ಯರೂಪಕಗಳಲ್ಲಿ ಒಂದೆನಿಸಿದ ‘ವಾಲ್ಮೀಕೀ ರಾಮಾಯಣಂ’ ತನ್ನ ಪೂರ್ಣಾವತಾರ ಪ್ರದರ್ಶಿಸುವ ವೇಳೆಗೆ ರಾಮನ ವನವಾಸದಂತೆಯೇ ಆಗಿತ್ತು ! ಕಾರಣ, ನೃತ್ಯರೂಪಕದ ಸಮಗ್ರ ಸಂಯೋಜನೆಗೆ ರುಕ್ಮಿಣೀ ಅವರ ಅನುಭವದ ಕುಲುಮೆಯಲ್ಲಿ ಸಮೃದ್ಧವಾಗಿ ಪಾಕ ಹದಗೊಳ್ಳಲು ತೆಗೆದುಕೊಂಡಿದ್ದು ಬರೋಬ್ಬರಿ ಪೂರ್ತಿ ೧೪ ವರ್ಷಗಳು ! ಅದು ಅದೃಷ್ಟವೋ? ಕಾಕತಾಳೀಯವೋ? ಅಪೂರ್ವ ಸಂಯೋಜನೆಯ ಶ್ರಮದ ಗುರುತುಗಳೋ.. ಒಟ್ಟಿನಲ್ಲಿ ಎಲ್ಲವೂ ಹೌದು..!
(ಸಶೇಷ..)