Author: ನಾಟ್ಯಾಚಾರ್ಯ ಕೆ. ಮುರಲೀಧರ ರಾವ್, ಹಿರಿಯ ನೃತ್ಯಗುರುಗಳು, ಮಂಗಳೂರು
ನಾಟ್ಯಾಚಾರ್ಯ ಕೆ. ಮುರಲೀಧರರಾಯರ ‘ನೃತ್ಯಲೋಕ’ ಗ್ರಂಥವನ್ನು ಅರಿಯದ ನೃತ್ಯಾಸಕ್ತರು ಬಹಳ ಕಡಿಮೆ. ಹಾಗೆ ನೋಡಿದರೆ, ಜ್ಞಾನವೃದ್ಧರೂ, ವಯೋವೃದ್ಧರೂ ಆದ ರಾಯರು ನಮ್ಮ ನಡುವಿನ ನಡೆದಾಡುವ ಗ್ರಂಥವೇ ಹೌದು. ಎಂಭತ್ತನಾಲ್ಕನೇಯ ವಯಸ್ಸಿನಲ್ಲೂ ಅವರ ಉತ್ಸಾಹ ಇಪ್ಪತ್ತರ ತರುಣರನ್ನೂ ನಾಚಿಸುವಂತಹುದು. ನಿಸರ್ಗ, ಸಂಗೀತ, ಸಾಹಿತ್ಯ, ಚಿತ್ರಕಲೆ, ಛಾಯಾಚಿತ್ರ ಕಲೆ, ನರ್ತನ.., ಹೀಗೆ ಶ್ರೀಯುತರ ಬಹುಮುಖವೆನಿಸುವ ವಿದ್ವತ್ತು, ಅಗಾಧ ಪಾಂಡಿತ್ಯ, ಬೋಧನಾನುಭವ, ಜೀವನದರ್ಶನ.., ಎಂಥಹ ಸಾಧಕರಿಗೂ ಭವಿಷ್ಯ ಸಾಧ್ಯತೆಗಳ ಚಿಂತನಕ್ಕೆ ಒಂದು ಉತ್ತಮ ಆಕರ. ಅವರ ಚಿಂತನ-ಮಂಥನಗಳ ಸೌಹಾರ್ದ ಸಂಧಿಸುವಿಕೆ ನಮ್ಮೆಲ್ಲರ ಜ್ಞಾನ ಪರಿವ್ರಾಜನೆಗೆ ಸೂಕ್ತ ಸಮಯವನ್ನೀಯುತ್ತದೆ. ನಮ್ಮ ಓದಿನೊಂದಿಗೆ, ಈ ಸಿಂಹಾವಲೋಕನ, ಭವಿಷ್ಯದ ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ಅವರು ಜೊತೆಗಿರುತ್ತಾರೆ. ಆದ್ದರಿಂದ ಅವರ ಲೇಖನಿಯಿಂದ ಚಿಮ್ಮಿದ ಸಾಲುಗಳ ಅಂಕಣ ಲೇಖನ :
‘ನೃತ್ಯ- ಅಂದು, ಇಂದು, ಮುಂದು’- ಈ ಸಂಚಿಕೆಯಿಂದ ನಿಮಗಾಗಿ !
ಯಾವ ಕಲೆಯೂ ಅಥವಾ ಕಲಾಭಿವ್ಯಕ್ತಿಯೂ ಶೂನ್ಯದಲ್ಲಿ ಹುಟ್ಟುವುದಿಲ್ಲ. ಅಥವಾ ವಿರಳವಾಗಿ ಹುಟ್ಟಿಕೊಂಡರೂ ಜಗತ್ತಿನಲ್ಲಿ ದೀರ್ಘಕಾಲ ಮುಂದುವರಿಯುವುದಿಲ್ಲ ; ಪರಂಪರೆಯನ್ನಂತೂ ಉಂಟುಮಾಡುವುದಿಲ್ಲ. ಉದಾ : ಕ್ರೌಂಚವಧೆಯ ದಾರುಣ ಸನ್ನಿವೇಶ. ಅದು ಒಬ್ಬ ವ್ಯಾಧ ತಪಸ್ವಿಯನ್ನು ಆದಿಕವಿ ವಾಲ್ಮೀಕಿಯನ್ನಾಗಿ ಉತ್ಥಾನಗೊಳಿಸಿತು. ಫಲವಾಗಿ ರಾಮಾಯಣವೆಂಬ ಫಲ. ಅಂತೆಯೇ ಭಾರತೀಯ ಸಂಸ್ಕೃತಿಯ ಅಖಂಡಧಾರೆ ಅಥವಾ ಎಳೆಯಾಗಿ ಮಹಾಭಾರತದಂತಹ ಮಹಾಕಾವ್ಯಗಳೂ, ವೇದ-ಉಪನಿಷತ್ತು, ಧಾರ್ಮಿಕ-ಬೌದ್ಧಿಕ ಕೃತಿಗಳೂ ಪರಂಪರೆಯನ್ನು ಸೃಷ್ಟಿಸಿವೆ.
ಇಂದಿನ ಭೋಗಜೀವನದಲ್ಲಿ ಭಾರತೀಯತೆ ಉಳಿದು, ಬೆಳಗಿ, ನಳನಳಿಸುತ್ತಾ ಇರುವುದು ಈ ಪರಂಪರೆಗಳ ಭವ್ಯತೆಗೆ ಸಾಕ್ಷಿ. ಆರ್ಷೇಯ ಭರತನಾಟ್ಯ ಇದೇ ಪರಂಪರೆಗಳ ಒಂದು ಶಾಖೆ. ಇದರಲ್ಲಿ ವೇದಸಾರವಿದೆ. ಉಪನಿಷತ್ ಬೋಧನೆಯಿದೆ. ರಾಮಾಯಣ-ಮಹಾಭಾರತ-ಭಾಗವತ-ಪುರಾಣಗಳಂತೂ ಇದರ ಜೀವಂತ ದೇಹವೆ ಆಗಿದೆ. ಸಂಗೀತ- ಸಾಹಿತ್ಯ- ನರ್ತನ- ಅಭಿನಯ ಮತ್ತು ಭಾವೋನ್ಮೇಷ ಎಂಬ ಪಂಚ ಸೃಜನಶೀಲ ಸ್ಫೂರ್ತಿಗಳ ಸಂಗಮವಿದು.
‘ಈಗೇನೋ ನಮ್ಮ ದೃಷ್ಟಿಯಲ್ಲಿ ನಾಟ್ಯ-ನೃತ್ಯ ತುಂಬಾ ಸುಧಾರಿಸಿದೆ’ ಎಂಬ ಹೊರನೋಟ ಕಂಡರೂ, ಸಮಾಜದಲ್ಲಿ ಕಲಾವಿದರು ನಾಟ್ಯದ ಉತ್ತಮ ಅಂಶ ಬಿಟ್ಟು ಪ್ರಾಪಂಚಿಕ ಮನೋಭಾವ ಬೆಳೆಸುವುದನ್ನು ನೋಡುತ್ತಿದ್ದೇವೆ. ಅಂತಾರಾಷ್ಟ್ರೀಯ ಮಾದರಿಯಲ್ಲಿ ನಾಟ್ಯದ ಬದಲು ‘ಕುಣಿತ’ ಕಾಣುತ್ತಿದ್ದೇವೆ. ಇಲ್ಲಿ ನಮಗೆ ಬೇಕಾದುದು ‘ಶಾಸ್ತ್ರೀಯ ವಿಮೋಚನೆ’ !
ಕಲೆ ವಿಲಾಸಕ್ಕಾಗಿ ನಡೆಯಬೇಕಾಗಿಲ್ಲ. ಜೀವನದ ವಿಕಾಸವೇ ಅದರ ಗುರಿ ! ಆದರೆ ಸಂಸ್ಕೃತಿ ನಷ್ಟವಾದರೆ ರಾಷ್ಟ್ರವೇ ಅಧಃಪತನಕ್ಕೆ ಜಾರುತ್ತದೆ !
*****
ಆ ಕಾಲ ಹಿಂದಿನದು …..!
ಭಾರತೀಯ ಸಂಸ್ಕೃತಿಯಲ್ಲಿ ನಾಟ್ಯ ಅತ್ಯಂತ ಪ್ರಿಯವಾದ ಕಲೆ ಎನಿಸಿತ್ತು. ಭಾವನಿರೂಪಣೆಯನ್ನು ತೋರಿಸುವ ಉಚ್ಛ ಸಂಪ್ರದಾಯವನ್ನು ಹೊಂದಿತ್ತು. ಆದರೆ ಅದೇ ಆ ಪ್ರವೃತ್ತಿ ಇಂದಿನವರಿಂದ ಅವಹೇಳನಕ್ಕೆ ಗುರಿಯಾಗುವ ಸಂದರ್ಭದಲ್ಲಿ ‘ಅದು ಪ್ರಾಚೀನ’- ಎಂದರೆ, ಬಳಕೆಯಲ್ಲಿ ಮುಂದುವರಿಯದದ್ದು ಎಂದೋ ಅಥವಾ ‘ಇಂದಿನ ಪ್ರಕೃತ ದೃಷ್ಟಿಯಲ್ಲಿ ಅಪ್ರಸಕ್ತ’ ಎಂದೋ ಅಭಿಪ್ರಾಯ ಕೇಳಿಸುತ್ತಿದೆ. ಹಾಗಾಗಿ ನೃತ್ಯದ ಅಧೋಗತಿಯನ್ನು ಕಂಡವರು ಕೇಳುವ ಪ್ರಶ್ನೆಯಿದು : ‘ ಈ ನಾಟ್ಯಕಲೆಯಲ್ಲಿ ಪ್ರದರ್ಶನವೀಯುವ ಹಾಗೂ ಅದರಲ್ಲಿ ಅಭಿನಯಿಸುವ ಕಲಾಗಾರರಲ್ಲಿ ನಾವು ಹಿಂದೆ ಕಂಡ ಲಕ್ಷಣವಂತರು ಇದ್ದಾರೆಯೋ?’
ಆ ಪ್ರಶ್ನೆಗೆ ಉತ್ತರ ಹೇಳಲು ಹೊರಟರೆ ಕೆಲವು ಉದಾಹರಣೆಗಳನ್ನು ಕೊಡಲೇಬೇಕು. ನಮ್ಮ ಸಮಾಜದಲ್ಲಿ ಕಾಣಿಸುವವರಲ್ಲಿ:-
ಮೊದಲನೇಯದು – ಗುರುಗಳಿಂದ ನೃತ್ಯಕಲೆ ಕಲಿತು ಮುಂದಕ್ಕೆ ತಮ್ಮಲ್ಲಿ ವ್ಯಾಸಂಗಕ್ಕೆ ಬಂದಿರುವವರಿಗೆ ವಿದ್ಯೆ ಹೇಳಿ ಕೊಡುವವರು ; ತಾವು ಕಲಿತದ್ದರಲ್ಲಿ ಕಿಂಚಿತ್ತೂ ಮಾರ್ಪಾಟು ಮಾಡದೆ, ‘ಗುರುಗಳು ಹೇಳಿಕೊಟ್ಟದ್ದೇ ದೊಡ್ಡದು, ಅವರ ಪ್ರಪಂಚವೇ ದೊಡ್ಡದು’ ಎಂಬ ಒಣಭ್ರಾಂತಿ ಹೊಂದಿರುವವರು,
ಸಾಂಪ್ರದಾಯಿಕ ಕ್ರಮದಲ್ಲಿ ಹೊಸಜಗತ್ತನ್ನೇ ತಾವು ಕಂಡು ಅದನ್ನು ಧಾರೆಯೆರೆಯುತ್ತಾ ಇರುವವರೇ ಎರಡನೇಯವರು. ಇವರು ಪ್ರಪಂಚವನ್ನು ಸ್ವಲ್ಪ್ಪ ಕಂಡಿದ್ದಾರೆ ನಿಜ ; ಆದರೆ ಅಲ್ಲಿಯೂ ಒಂದಿಷ್ಟು ಬೇರು ಕಾಣದ ಸ್ಥಿತಿಯಲ್ಲಿದ್ದಾರೆ ; ಯಾವ ರೀತಿಯಲ್ಲಿ ಹೇಳಿದರೆ ಒಳ್ಳೆಯದು ಎಂಬ ಭಾವನೆ ಇರದೆ ಹೆಸರಿಗೆ ಮಾತ್ರ ಗುರುತಿಸಿಕೊಂಡವರು,
ತಮ್ಮ ಪ್ರದರ್ಶನಗಳಲ್ಲಿ ನಾಯಕ- ನಾಯಿಕಾ ಭಾವಗಳ ವಿಚಾರ ಬಿಟ್ಟು, ಭಕ್ತನಾದವನೂ ದೇವನಿಗೆ ಅರ್ಪಿಸುವ ಭಕ್ತಿಯೇ ನಿಜವಾದ ಶೃಂಗಾರವೆಂದು ಹೇಳಿಕೊಡುವವರು ಮೂರನೇ ವರ್ಗದವರು ; ಅಂದರೆ ಶೃಂಗಾರವನ್ನು ಸೇರಿಸುವ ಬದಲು ಭಕ್ತರ ಆರಾಧನೆ ಮಾತ್ರ ಎನ್ನುವವರು,
ನಾಲ್ಕನೆಯವರು ಬುದ್ಧಿವಂತರು. ಅಭಿನಯ ಭಾಗದಲ್ಲಿ ಪಳಗಿ ಅದನ್ನು ಪ್ರದರ್ಶಿಸುವವರು. ಒಂದು ವಿಶೇಷೋದ್ದೇಶಕಾಗಿ ಬಾಹ್ಯ ವಸ್ತುಗಳ ಪ್ರತಿಮೆಗಳನ್ನು ಕಲ್ಪಿಸಿ, ಅದನ್ನು ತಮ್ಮ ವಿದ್ಯೆಯಲ್ಲಿ ಸೇರಿಸುವ ಮನಃಶ್ಯಕ್ತಿಯನ್ನು ಹೊಂದಿದವರು. ಸಂಪ್ರದಾಯದಲ್ಲಿ ಹೊಸ ಆಯಾಮವನ್ನು ಕಂಡುಹಿಡಿವವರು ಇವರು. ಶೃಂಗಾರದಲ್ಲಿ ಹೊಸಹಾದಿ, ಸಾಹಿತ್ಯಾಭಿರುಚಿಯಲ್ಲಿ ದಿನದಿನವೂ ಹೊಸ ಮಾರ್ಪಾಟುಗಳನ್ನು ಕಲ್ಪಿಸಿ ತಾವು ಕಲಿತ ವಿದ್ಯೆಯಲ್ಲಿ ಅದನ್ನು ಕಾಣಿಸುವ ರೀತಿಯಲ್ಲಿ ಹೇಳುತ್ತಿರುವವರು.
ಜೊತೆಗೆ, ಸಂಪ್ರದಾಯದಲ್ಲಿ ಆಂಗಿಕ ವಿಧಿಯನ್ನು ಮಾತ್ರ ಹೇಳಿಕೊಟ್ಟು ಉಳಿದವು ಪ್ರಧಾನವಲ್ಲವೆಂದು ತಿಳಿಸಿ, ಅದರಲ್ಲಿ ಚಪ್ಪಾಳೆ ಗಿಟ್ಟಿಸುವ ಭೂಪರು ಬೇರಿದ್ದಾರೆ.
ಕಂಪ್ಯೂಟರ್ಗಳನ್ನು ನಂಬಿ, ಮುಂದಕ್ಕೆ ತಮಗೆ ಗುರುವೇ ಬೇಡವೆನ್ನುವವರ ಸ್ಥಿತಿ ಹೇರಳವಾಗಿ ಇದೆ.
ಏಕವ್ಯಕ್ತಿ ಪ್ರದರ್ಶನಕ್ಕಿಂತ ನಾಟ್ಯವಾಡುವವರ ಗುಂಪನ್ನೇ ನಿರ್ಮಿಸುವವರೂ ಇದ್ದಾರೆ.
ಹೊಸದಾರಿ ತಮ್ಮದು. ರಾಜಕೀಯ ಅಥವಾ ಧಾರ್ಮಿಕ ಸಭೆಯಲ್ಲಿ ಪ್ರದಶನವನ್ನು ಮಾಡಿಸುತ್ತಾ, ಒಟ್ಟಿನಲ್ಲಿ ಹಾಡಿಗೂ, ನಾಟ್ಯಕ್ಕೂ ಉದ್ದೇಶಕ್ಕೂ ತಾಳೆಯಿರದೆ ಸಾಹಿತ್ಯಿಕ ಗೀತೆಗಳಿಗೆ ಪ್ರಚಾರಕ್ಕಾಗಿ ಹೆಜ್ಜೆ ಹಾಕಿಸುವವರು ನಮ್ಮ ನಡುವೆ ಇದ್ದಾರೆ.
‘ತಾವು ನಾಟ್ಯವನ್ನು ಬಲ್ಲವರು’ ಎನ್ನುತ್ತಾ ಶೈಲಿಯ ಕುರಿತು ಮಾತನಾಡುವ ಯಾವ ಹೊಂದಿಕೆಯೂ ಇಲ್ಲದ ಜನರು ನಮ್ಮಲ್ಲಿದ್ದಾರೆ.
ದೂರದಿಂದ ನರ್ತಿಸಬಂದ ಹಲಕೆಲವು ಉತ್ತಮ ಅಥವಾ ಮಧ್ಯಮ ಕಲಾವಿದರ ನರ್ತನ ಶೈಲಿ ಕಂಡು ಅಂತಹುದನ್ನೇ ತಮ್ಮ ರೀತಿಯಲ್ಲಿ ನಕಲು ಮಾಡಿ ಪ್ರದರ್ಶಿಸುವ ಸೋಮಾರಿಗಳು ಇದ್ದಾರೆ.
ಪ್ರದರ್ಶನ ಏರ್ಪಡಿಸುವಾಗ ಕಲೆಯ ನೆವದಲ್ಲಿ ಹಣಸಂಪಾದನೆ, ಕೀರ್ತಿ ಕಾಮನೆಗಳಿಂದ ದಿನದೂಡುವವರೂ ನಮ್ಮ ನಡುವಿನ ಸ್ನೇಹಿತರೇ !
ಪ್ರದರ್ಶನ ಕೊಡಿಸುವಾಗ ಕೈಯ್ಯಲ್ಲಿ ಕೊಳೆತ ಹಣವನ್ನು ನೀರಿನಂತೆ ಖರ್ಚು ಮಾಡುವವರೂ, ತಮ್ಮ ಮಕ್ಕಳ ಪ್ರದರ್ಶನಕ್ಕಾಗಿ ವಿಮರ್ಶೆ ಕೊಡುವವರೂ- ಕೊಡಿಸುವವರೂ, ರಂಗಸ್ಥಳದಿಂದ ‘ ದಯವಿಟ್ಟು ಚಪ್ಪಾಳೆಯಿಕ್ಕಿ’ ಎಂದು ಬೇಡುವವರೂ ಇದ್ದಾರೆ. ಚಪ್ಪಾಳೆ ತಟ್ಟಿದ್ದಾರೆ ನಮ್ಮ ಜನ. ಆದರೆ ‘ಯಾಕೆ ಈ ಚಪ್ಪಾಳೆ’ ಎಂದು ಕೇಳಿದರೆ ಅವರಲ್ಲಿ ಉತ್ತರವಿಲ್ಲ.