Author: ರಾಕೇಶ್ ಕುಮಾರ್ ಕಮ್ಮಜೆ, ಪತ್ರಿಕೋದ್ಯಮ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ದ.ಕ
ಯಾವುದಾದರೂ ಒಂದು ಕ್ಷೇತ್ರದಲ್ಲಿ ಅಗಾಧವಾದದ್ದನ್ನು ಸಾಧಿಸಿದವನು ತನ್ನ ಬಾಲ್ಯದಲ್ಲೇ ಆ ಕುರಿತಾದ ಕುರುಹುಗಳನ್ನು ನೀಡಿರುತ್ತಾನೆ. ಬೇರೆ ಮಕ್ಕಳಿಗೆ ಕ್ರಿಕೆಟ್ ಎಂದರೇನೆಂದೇ ಅರ್ಥವಾಗದ ತೀರಾ ಎಳೆ ವಯಸ್ಸಿನಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟ್ ಹಿಡಿದು ನಿಂತಿರುವ ಫೋಟೋವನ್ನು ನೀವು ಪತ್ರಿಕೆಗಳಲ್ಲಿ ನೋಡಿರಬಹುದು. ಪ್ರಾಯಶಃ ಭವಿಷ್ಯದ ಇತಿಹಾಸಕ್ಕೆ ಅದು ಮುನ್ನುಡಿಯಿರಬೇಕು! ಕಳೆದ ಬಾರಿ ಇದೇ ‘ರಂಗಸ್ಥಳ’ದಲ್ಲಿ ಕಾಣಿಸಿಕೊಂಡ ಚಿಟ್ಟಾಣಿ ರಾಮಚಂದ್ರ ಹೆಗಡೆಯೂ ಹಾಗೆಯೇ, ತಾನು ಒಂದನೇ ತರಗತಿಗೆ ಹೋಗುತ್ತಿದ್ದಾಗಲೇ ಯಕ್ಷಗಾನದ ಕುರಿತಾಗಿ ಕುತೂಹಲ ಇಟ್ಟುಕೊಂಡವರು! ಮಾತ್ರವಲ್ಲ, ಮನೆಯಲ್ಲಿ ಶಾಲೆಗೆಂದು ಕಳುಹಿಸಿದರೆ ಗುಡ್ಡದಲ್ಲಿ ಯಕ್ಷಗಾನ ಕುಣಿಯುತ್ತಾ ಕಾಲ ಕಳೆಯುತ್ತಿದ್ದವರು!!
ಹಾಗೆ ಮೊದಮೊದಲು ಗುಡ್ಡದಲ್ಲೇ ಯಕ್ಷಾಭ್ಯಾಸ ಮಾಡಿದ ಚಿಟ್ಟಾಣಿ ಮತ್ತೆ ಬೆಳೆದದ್ದೇ ಹೊರತು ಇಳಿದದ್ದಿಲ್ಲ. ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್ ಕುಮಾರ್ ಚಿಟ್ಟಾಣಿಯವರ ಕೆಲವು ಪಾತ್ರಗಳನ್ನು ನೋಡಿ ಚಿಟ್ಟಾಣಿ ಒಬ್ಬ ಅದ್ಭುತ ಕಲಾವಿದ. ನಾನು ಇವರ ವೇಷಗಳನ್ನು ಮೊದಲೇ ನೋಡಿದ್ದಿದ್ದರೆ ನನ್ನ ‘ಬಬ್ರುವಾಹನ’ ಸಿನಿಮಾದ ಅರ್ಜುನ ಹಾಗೂ ಬಬ್ರುವಾಹನ ಪಾತ್ರಗಳನ್ನು ಇನ್ನೂ ಚೆನ್ನಾಗಿ ಅಭಿನಯಿಸುತ್ತಿದ್ದೆ ಎಂದು ಉಸುರಿದ್ದು ಚಿಟ್ಟಾಣಿಯವರ ಕಲಾ ಸಾಮರ್ಥ್ಯಕ್ಕೆ ಸಿಕ್ಕ ಮಹತ್ತರವಾದ ಪ್ರಮಾಣಪತ್ರ!
ಯಕ್ಷಗಾನದ ಗಂಧಗಾಳಿಯಿಲ್ಲದ ಮುಂಬಯಿಯಂಥ ಪ್ರದೇಶದಲ್ಲೂ ಗೆಜ್ಜೆಕಟ್ಟಿ ಜನಮನ ಸೆಳೆದವರು ಚಿಟ್ಟಾಣಿ. ಯಕ್ಷರಂಗದ ಅಪೂರ್ವ ಜೋಡಿಯಾಗಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತು ಭಾಗವತ ದಿ.ಗುಂಡ್ಮಿ ಕಾಳಿಂಗ ನಾವಡರ ತಂಡ ಮುಂಬಯಿಯಲ್ಲಿ ‘ಭಸ್ಮಾಸುರ ಮೋಹಿನಿ’ ಪ್ರಸಂಗವನ್ನು ಸುಮಾರು ನಲವತ್ತಕ್ಕೂ ಅಧಿಕ ಭಾರಿ ಆಡಿತೋರಿಸಿತ್ತೆಂದರೆ ಈರ್ವರ ಚಮತ್ಕಾರ ಎಂಥದ್ದಿರಬೇಡ?
ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬಗೆಗೆ ಹೇಳುವಾಗ ಅವರ ವಿನಯದ ಬಗೆಗೆ ಹೇಳದಿದ್ದರೆ ಅದು ಅಪರಾಧವೇ. ತಾನೊಬ್ಬ ಮಹಾನ್ ಕಲಾವಿದನಾಗಿದ್ದರೂ ಆ ಹಮ್ಮಿಲ್ಲದೆ ತನಗಿಂತ ಎಷ್ಟೋ ಕಿರಿಯರೊಂದಿಗೂ ಸಹಜವಾಗಿ ಬೆರೆಯುವುದು ಅವರ ದೊಡ್ಡತನ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಅದು ಅವರ ತಾಳ್ಮೆ. ತನ್ನನ್ನು ಯಾರೇ ಟೀಕಿಸಲಿ ಅವರು ಸಿಟ್ಟಿಗೇಳುವುದಿಲ್ಲ, ತಿರುಗಿ ಬಯ್ಯುವುದಿಲ್ಲ. ಬದಲಾಗಿ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ. ಇದು ಚಿಟ್ಟಾಣಿಯಂಥ ಮಾಗಿದ ಕಲಾವಿದನಿಗಷ್ಟೇ ಸಾಧ್ಯ.
ಇಂಥ ಚಿಟ್ಟಾಣಿಗೆ ಈಗ ಎಪ್ಪತ್ತಾರು ವರ್ಷ ವಯಸ್ಸು. ಆದರೆ ಉತ್ಸಾಹ ಕುಂದಿಲ್ಲ. ದೇಹ ಸಹಕರಿಸದಿದ್ದರೂ ಮನಸ್ಸು ಕೇಳುತ್ತಿಲ್ಲ. ಆದ್ದರಿಂದಲೇ ಈಗಲೂ ಅವರು ಬಣ್ಣ ಹಚ್ಚಿ ಗೆಜ್ಜೆ ಕಟ್ಟುತ್ತಿದ್ದಾರೆ. ‘ಸಾಕಪ್ಪ ಇನ್ಯಾಕೆ?’ ಎಂದು ರಂಗದಿಂದ ವಿರಮಿಸಿದ್ದಿದ್ದರೆ ಈಗಿನ ತಲೆಮಾರಿನ ಅನೇಕರು ಚಿಟ್ಟಾಣಿಯವರ ಹಾವಭಾವ, ಮಾತು-ಮೌನಗಳನ್ನು ಬರೀ ಸಿ.ಡಿ.ಯಲ್ಲಷ್ಟೇ ನೋಡಬಹುದಿತ್ತು. ಅಷ್ಟರಮಟ್ಟಿಗೆ ನಾವು ಪುಣ್ಯಮಾಡಿದ್ದೇವೆ.
ಅಪ್ಪನಿಗೆ ಈಗಲೂ ಹಿಂದಿನ ಉತ್ಸಾಹವೇ ಇದೆ. ಆದರೆ ನಾನೇ ಈಗ ಅವರನ್ನು ಪ್ರಸಂಗದ ಅರ್ಧದಷ್ಟು ಹೊತ್ತು ಮಾತ್ರ ಕುಣಿಯುವಂತೆ ನೋಡಿಕೊಳ್ಳುತ್ತಿದ್ದೇನೆ. ಆದ್ದರಿಂದಲೇ ಈಗ ‘ಭಸ್ಮಾಸುರ ಮೋಹಿನಿ’ ಯಲ್ಲಿ ಎರಡನೇ ಭಸ್ಮಾಸುರನಾಗಿ, ‘ಗದಾಯುದ್ಧ’ದ ಎರಡನೇ ಕೌರವನಾಗಿ, ‘ಕಾರ್ತವೀರ್ಯಾರ್ಜುನ’ದ ಮೊದಲನೇ ಕಾರ್ತವೀರ್ಯನಾಗಿ ಮಾತ್ರ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಬಹುತೇಕ ಎಲ್ಲಾ ಪ್ರಸಂಗಗಳಲ್ಲೂ ಅವರು ಅರ್ಧ ಭಾಗವಷ್ಟೇ ರಂಗದಲ್ಲಿರುತ್ತಾರೆ. ಇದರಿಂದಾಗಿ ಅವರಿಗೆ ಹೆಚ್ಚು ಸುಸ್ತಾಗುವುದಿಲ್ಲ. ಹಾಗಾಗಿ ಇನ್ನೂ ಅನೇಕ ವರ್ಷಗಳ ಕಾಲ ಅವರು ವೇಷ ಹಾಕಬಹುದು ಎಂಬುದು ನನ್ನ ಆಶಯ ಎನ್ನುತ್ತಾರೆ ಮಗ ಸುಬ್ರಹ್ಮಣ್ಯ ಚಿಟ್ಟಾಣಿ.